ತುಳುನಾಡಿನ “ಆಟಿ ಅಮಾವಾಸ್ಯೆ”ಯ ವೈಜ್ಞಾನಿಕ ಮಹತ್ವ



ಭೀಮನ ಅಮಾವಾಸ್ಯೆ ಮಹತ್ವದ ಕುರಿತು ಡಾ. ಪ್ರಕಾಶ ಬಾರ್ಕಿ ಅವರು ಸುಂದರವಾಗಿ ವಿವರಿಸಿದ್ದಾರೆ. ಲೇಖನ ತಡವಾದರು ಉಪಯುಕ್ತವಾದ ಲೇಖನ. ಮುಂದೆ ಓದಿ…

ತುಳುನಾಡಿನಲ್ಲಿ ಆಷಾಢವನ್ನ ‘ಆಟಿ’ ಎಂದು ಕರೆಯುತ್ತಾರೆ.ಆಷಾಢ ಮಾಸದ ಅಮಾವಾಸ್ಯೆಯನ್ನ “ಆಟಿ ಅಮಾವಾಸ್ಯೆ” ಎಂದೇ ವಿಶೇಷವಾಗಿ ಆಚರಿಸಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ಆಷಾಢ ಮಾಸದಲ್ಲಿ ಬರುವ ಈ ಅಮಾವಾಸ್ಯೆಯನ್ನ “ಭೀಮನ ಅಮಾವಾಸ್ಯೆ” ಎಂದು ಪವಿವೃತೆಯರು “ಗಂಡನ ಪಾದ ತೊಳೆದು” ಪೂಜಿಸಿ, ಗಂಡನ ಆಯುಷ್ಯ, ಆರೋಗ್ಯ ವೃದ್ಧಿಯಾಗಲೆಂದು ಬೇಡುವರು.

ಆಷಾಢ ಮಾಸದಲ್ಲಿ ತುಳುನಾಡಿನ ಜನರು ಸೇವಿಸುವ ಆಹಾರ, ಬೇರೆಲ್ಲರಿಗಿಂತ ಭಿನ್ನ. ಈ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನ ಆಟಿ ಅಮಾವಾಸ್ಯೆ ಎನ್ನುವರು, ಆಟಿ ಎಂದರೆ ಮೊದಲು ನೆನಪಾಗುವುದು #ಪಾಲೆಮರದಕಷಾಯ. ಸಾವಿರದೊಂದು ಬಗೆಯ ಔಷಧೀಯ ಗುಣಗಳಿವೆ ಎಂದು ನಂಬಿರುವ ಈ ಕಷಾಯವನ್ನು ತುಳುನಾಡಿನ ಜನರು ಆಟಿ ಅಮಾವಾಸ್ಯೆಯಂದು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುತ್ತಾರೆ. ಇದರಿಂದ ಮುಂದಿನ ವರ್ಷದ ಆಷಾಢ ಮಾಸದವರೆಗೂ ಯಾವುದೇ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ ಎಂಬ ದೃಢವಾದ ನಂಬಿಕೆ ಇಲ್ಲಿನ ಜನರದ್ದು.

ಫೋಟೋ ಕೃಪೆ : mohanji.org

ಪ್ರಾಯಶಃ ಕರಾವಳಿಯಲ್ಲಿ ಮಳೆ ಹೆಚ್ಚಿಗೆ ಬರುವ ಕಾರಣ ಈ ಸಂಪ್ರದಾಯ ಕರಾವಳಿಯಲ್ಲಿ ಮಾತ್ರ ಚಾಲ್ತಿಯಲ್ಲಿದೆ. ಹಿಂದಿನ ಕಾಲದಲ್ಲಿ ಆಟಿತಿಂಗಳಿನಲ್ಲಿ ವಿಪರೀತ ಮಳೆ. ಮಳೆಗಾಲದ ಈ ತಿಂಗಳು ಒಂದು ಹೊತ್ತಿನ ಊಟಕ್ಕೂ ಕಷ್ಟವಿತ್ತಂತೆ. ಮಳೆಯಿಂದಾಗಿ ಶರೀರದಲ್ಲಿ ಕಫ ವೃದ್ಧಿಯಾಗಿ ಅಗ್ನಿ ಕುಂಠಿತವಾಗಿರುತ್ತದೆ. ಅಪೌಷ್ಟಿಕತೆಯಿಂದ ರೋಗಗಳೂ ಹೆಚ್ಚು. ರೋಗ ನಿರೋಧಕ ಶಕ್ತಿ ಕುಂದುವುದರಿಂದ, ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚು. ಮಲೇರಿಯಾ, ಟೈಫಾಯಿಡ್, ಡೆಂಗ್ಯೂ ಕಾಯಿಲೆಗಳು ಹೆಚ್ಚು ಭಾದಿಸುವ ದಿನಗಳಿವು. ಕಳೆದೆರಡು ವರುಷಗಳಿಂದ ಕರೋನಾ ಹೆಮ್ಮಾರಿ ಸಹ ನರಳಿಸುತ್ತಿದೆ.

ಆದ್ದರಿಂದ ಈ ಮಾಸದಲ್ಲಿ ಆಟಿ ಕಳಂಜ ದೈವವು ಅಮಾವಾಸ್ಯೆಯಂದು ಅನೇಕ ಬಗೆಯ ಔಷಧೀಯ ಗುಣಗಳನ್ನು ತಂದು ಮರದಲ್ಲಿರಿಸುತ್ತದೆ ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸುತ್ತಾರೆಯೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಆಳವಾಗಿದೆ.

ಫೋಟೋ ಕೃಪೆ : commons.wikimedia

ಪಾಲೆ ಮರವನ್ನ ಕನ್ನಡದಲ್ಲಿ ಮದ್ದಾಳೆ ಮರ, ಪಾಳೆ ಮರ ಎನ್ನುವರು. ಆಂಗ್ಲಭಾಷೆಯಲ್ಲಿ Milkwood Pine, White cheesewood, Blackboard tree, Indian devil tree ಎಂದು ಕರೆಯುವರು.

ಪಾಲೆಮರದಕಷಾಯ ಭೀಮನ ಅಮಾವಾಸ್ಯೆ ದಿನದ ವಿಶೇಷತೆ :

ಪಾಲೆ ಮರದ ತೊಗಟೆಯಿಂದ ಕಷಾಯವನ್ನು ತಯಾರಿಸಲಾಗುತ್ತದೆ. ಪಾಲೆ ಮರ ದೈವಿಕ ಸ್ಥಾನಮಾನವನ್ನೂ ಹೊಂದಿದ್ದು, ವೃಷಭ ರಾಶಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಇದರ ವೈಜ್ಞಾನಿಕ ಹೆಸರು Alstonia scholaris. ಆಯುರ್ವೇದ ಗ್ರಂಥಗಳಲ್ಲಿ ಪಾಲೆ ಮರವನ್ನು #ಸಪ್ತಪರ್ಣಿ_ಮರ ಎಂದು ಹೆಸರಿಸಿದ್ದಾರೆ.

ಸಾಮಾನ್ಯವಾಗಿ ಮರದ ಪ್ರತಿಯೊಂದು ಗೊಂಚಲಲ್ಲೂ ಏಳು ಎಲೆಗಳನ್ನು ಹೊಂದಿರುವುದರಿಂದ ಇದನ್ನು “#ಸಪ್ತಪರ್ಣಿ_ಮರ ಎಂದೂ ಕರೆಯುತ್ತಾರೆ. ಈ ಮರದಿಂದ ಮಾಡಿದ ಬೋರ್ಡ್‌ಗಳನ್ನು ಹಿಂದಿನ ಕಾಲದಲ್ಲಿ ಬರೆಯಲು ಬಳಸಲಾಗುತ್ತಿತ್ತು ಆದ್ದರಿಂದ ಕಪ್ಪು ಹಲಗೆಯ ಮರ (Black board tree) ಎನ್ನುವ ಹೆಸರೂ ಇದೆ.

ಬ್ರಾಹ್ಮಿ ಮುಹೂರ್ತದಲ್ಲಿ ಮರಗಳಲ್ಲಿ ಉದ್ದೇಶಿತ ಗುಣಗಳು ಹೆಚ್ಚಿಗೆ ಇರುವುದರಿಂದ ಮುಂಜಾವವೇ ಅಂದರೆ ಸೂರ್ಯೋದಯದ ಮುನ್ನವೆ ತೊಗಟೆ ಸಂಗ್ರಹಿಸುವ ಕ್ರಮ ಚಾಲ್ತಿಗೆ ಬಂದಿರಬಹುದು. ಪಾಲೆ ಮರದ ತೊಗಟೆ ಜಜ್ಜಿ ರಸ ತೆಗೆದು ಜೊತೆಗೆ ಕಾಳು ಮೆಣಸು, ಬೆಳ್ಳುಳ್ಳಿ, ಓಂ ಕಾಳು ಸೇರಿಸಿ ಕುದಿಸಿ ಕಷಾಯ ತಯಾರಿಸಿ ಸೇವಿಸುವರು.

ಫೋಟೋ ಕೃಪೆ : shutterstock

ಮಲೇರಿಯಾ, ಅತಿಸಾರ, ಚರ್ಮದ ಸಮಸ್ಯೆಗಳು ಮತ್ತು ಅಸ್ತಮಾವನ್ನು ದೂರವಿಡಲು ಇದನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಆಯುರ್ವೇದದಲ್ಲಿ ಇದನ್ನು ಹೃದ್ಯ (Cardiac Tonic), ಕೊಲೆಸ್ಟ್ರಾಲ್ ನಿಯಂತ್ರಿಸಲು, ಚರ್ಮದ ಕಾಯಿಲೆಗಳು, ಜೀರ್ಣ ಕ್ರೀಯೆ ಹೆಚ್ಚಿಸಲು, ಹೊಟ್ಟೆ ನೋವು, ಮಲಬದ್ಧತೆ, ಅಸ್ತಮಾ, ವಿಷಮಜ್ವರ, ಮಲೇರಿಯಾ ಜ್ವರ, ದೀರ್ಘಕಾಲದ ಭೇದಿ, ಹಾವು ಕಡಿತದ ಇತ್ಯಾದಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ.

#ವೈಜ್ಞಾನಿಕ_ವಿಶ್ಲೇಷಣೆಗೆ ಒಳಪಡಿಸಿ ನೋಡಿದಾಗ ಪಾಲೆ ಮರದ ತೊಗಟೆಯಲ್ಲಿ ಹಲವು ರಾಸಾಯನಿಕಗಳ ಭಂಡಾರವೇ ಇದೆ.



ಅತೀ ಹೆಚ್ಚು alkaloids ಮತ್ತು flavonoids ಗಳಿವೆ. Quinine ಪ್ರಸಿದ್ಧ ಔಷಧಕ್ಕೆ ಪರ್ಯಾಯವಾಗಿ Ditamine, echitenine ಎಂಬ ರಾಸಾಯನಿಕಗಳಿವೆ.
ಈ ಕೆಳಗಿನ ರಾಸಾಯನಿಕಗಳು ಸಹ ಪತ್ತೆಯಾಗಿವೆ….

Akuammidine (rhazine); picrinine; strictamine, tetrahydroalstonine; angustilobine B, 6,7-seco-6-norangustilobine B (losbanine, alschomine, isolschomine, alstonamine; echitamine, tubotaiwine, alstonamine scholaricine ಮುಂತಾದವುಗಳು.
#Reference: Illustrated Dravyaguna vijnana,
Vol. II, by Dr JLN Shastry]

ಫೋಟೋ ಕೃಪೆ : public Tv

ಪಾಲೆ ಮರದ ಕಷಾಯ/ ಆಟಿ ಕಷಾಯ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಬೆಳೆಯುತ್ತದೆ ಎಂದು ಹೇಳಲಾಗಿದೆ. ವಿಶೇಷವೆಂದರೆ ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಈ ವಿಚಾರವನ್ನು ಆಯುರ್ವೇದ ತಿಳಿವಳಿಕೆ ಇಲ್ಲದ ಸಾಮಾನ್ಯ ವ್ಯಕ್ತಿಗಳೂ ಆಚರಣೆಯಾಗಿ ಪಾಲಿಸುವ ಸಂಸ್ಕೃತಿಯನ್ನು ವಿಶೇಷವಾಗಿ ಕಾಣಬಹುದಾಗಿದೆ.


  • ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading