ಒಲವನ್ನು ಅನುಭವಿಸಿದಾಗ ಹುಟ್ಟುವ ಪದಗಳ ಗುಚ್ಛವೇ ಈ ಕವನ. ಈ ಕವನವನ್ನು ಮಧುಮಿತಾ ಗೌಡ ಅವರು ಬರೆದಿದ್ದಾರೆ. ಮುಂದೆ ಓದಿ…
ಅದೆಲ್ಲೋ ಎದೆಯಾಳದಲ್ಲಿ ಅಡಿಗಿಸಿಟ್ಟ ಕನಸೊಂದು ಇಂದು ಕಾಡುತಿದೆ
ಮನಸಿನ ದುಗುಡವೆಲ್ಲ ನೆಮ್ಮದಿಯಾಗಿ
ಆ ಕನಸು ಹಿಂಬಾಲಿಸುತಿದೆ
ಪರಿವೇ ಇಲ್ಲ ಹಗಲಿರುಳುಗಳು
ಉರುಳುತಿರಲು ಎಲ್ಲ ಮರೆತಂತಿದೆ
ಆ ತಂಗಾಳಿಯ ಸ್ಪರ್ಶವೊಂದೇ ಹಾಯಾಗಿರಲು
ಏಕಾಂಗಿತನವೊಂದೇ ಹಿತವೆನಿಸುತಿದೆ
ಅದಾವುದೋ ಬಯಕೆಯು ಎಡಬಿಡದೆ
ಬಳಿ ಬರುತಿರಲು ಮನಮೂಕವಾಗಿದೆ
ನೆನಪಿನ ಬಳ್ಳಿಯಲೊಂದು ಕುಸುಮವರಳಿ
ಮನದ ಮೂಲೆಯಲ್ಲೆಲ್ಲ ಘಮಿಸುತಿವೆ
ಕಂಡು ಕಾಣದಂತೆ ಕಂಗಳು ಮೌನವಾಗಿರೆ
ಜಾರುವ ಬಿಂದುವೊಂದನ್ನು ಹಿಡಿದಿಟ್ಟಿದಂತಿದೆ
ಜಾರದ ಆ ಹನಿಯು ಇಂಗದೆ ಕಂಗಳ
ಕೊಳ ತುಂಬಿರಲು ಮೊಗ ನಟಿಸುತಿದೆ
ಇದಾವ ಮಾಯೆಯೋ ಹೇಳಲಾಗದು
ಎನಗೆ ಅರಿವಾಗದಂತಿದೆ
ನೋವೋ ನಲಿವೋ ತಿಳಿಯದ
ಹೃದಯವೀಗ ಕಂಪಿಸುತಿದೆ
- ಮಧುಮಿತಾ ಗೌಡ (ಯುವ ಕವಿಯತ್ರಿ) ಬೆಂಗಳೂರು
“ನೆನಪಿನ ಬಳ್ಳಿಯಲೊಂದು ಕುಸುಮವರಳಿ
ಮನದ ಮೂಲೆಯಲ್ಲೆಲ್ಲ ಘಮಿಸುತಿವೆ”
ತುಂಬ ಚೆನ್ನಾಗಿದೆ.