ಸಿನಿಮಾ ಸೈಕ್… ಸೈಕ್… ಆಗಿ ಯಾಕೋ ಇಷ್ಟಾ ಆಯ್ತು. ಯಾಕೆ ಅಂದ್ರೆ ದುನಿಯಾ ವಿಜಯ ನೈಜ್ಯ ಕಲಾವಿದ. ಬಣ್ಣ ಹಚ್ಚಿದ ಮಾತ್ರಕ್ಕೆ ಸಿನಿಮಾದಲ್ಲಿ ಬಣ್ಣ ಬಣ್ಣದ ಮಾತುಗಳಿಲ್ಲ. ವಿಲನ್ ಬ್ಲಾಕ್ ಡ್ರ್ಯಾಗನ್ ಮಂಜು ಹಾಗೂ ಲೇಡಿ ಪೊಲೀಸ್ ಪಾತ್ರ ಮನಸ್ಸಿಗೆ ಟಚ್ ಆಯ್ತು. ಭೀಮ ಕುರಿತು ನನ್ನ ಅನಸಿಕೆಯನ್ನು ತಪ್ಪದೆ ಮುಂದೆ ಓದಿ …
ನನ್ನ ಅಣ್ಣನ ಸಿನಿಮಾ , ನನ್ನ ತಮ್ಮನ ಸಿನಿಮಾ ಅಥವಾ ಮಡಿವಂತಿಕೆ ಇರೋರು ಈ ಸಿನಿಮಾ ನೋಡಲೇಬಾರದು. ಯಾಕೆ ಹೀಗೆ ಹೇಳ್ತಿದ್ದೀನಿ ಅಂದ್ರೆ ತಲೆಯಲ್ಲಿ ನೂರಾಯೆಂಟು ಹುಳುಗಳನ್ನೆಬ್ಬಿಸಿಕೊಂಡು ಸಿನಿಮಾ ನೋಡ್ತೀನಿ ಅಂದ್ರೆ ಈ ಸಿನಿಮಾ ಅಂತವರಿಗಲ್ಲ. ತಲೆಯನ್ನ ಖಾಲಿ ಇಡ್ಕೊಂಡು ಹೋಗ್ಬೇಕು ಆಗ ಈ ಸಿನಿಮಾ ಇಷ್ಟಾಗುತ್ತೋ…ಕಷ್ಟ ಆಗುತ್ತೋ…ಗೊತ್ತಾಗುತ್ತೆ. ಅಂದ ಹಾಗೆ ಯಾವ ಸಿನಿಮಾ ಬಗ್ಗೆ ಮಾತಾಡ್ತಿದ್ದೀನಿ ಅಂದ್ರೆ ದುನಿಯಾ ವಿಜಯ ಅಭಿನಯದ “ಭೀಮ” ಸಿನಿಮಾ ಬಗ್ಗೆ.
“ಭೀಮ” ಸಿನಿಮಾ ನೋಡ್ಬೇಕು ಬರತೀರಾ…ಅಂತ ಸ್ನೇಹಿತೆಯರನ್ನೆಲ್ಲ ಕೇಳಿದೆ. “ಆ ಸಿನಿಮಾನಾ! ನಾನಂತೂ ಬರೋಲ್ಲ. ಮೊದಲೇ ಕೆಟ್ಟ ಭಾಷೆಯೆಲ್ಲ ಜಾಸ್ತಿ ಇದೆಯಂತೆ. ನನಗೆ ಅಂತ ಸಿನಿಮಾ ಇಷ್ಟಾಗೋಲ್ಲ”… ಅಂತ ಒಬ್ಬೊಬ್ಬರು ಒಂದೊಂದು ಮಾತು ಹೇಳಿ ತಪ್ಪಿಸಿಕೊಂಡ್ರು. ಆದರೆ ನಾನು ಬಿಡ್ಲಿಲ್ಲ, ಅಂತದ್ದು ಏನಿದೆ ಅನ್ನೋ ಕುತೂಹಲಕ್ಕೆ ಮುದ್ದಾಮ ಹೋಗ್ಲೇಬೇಕು ಅಂತ ನಿರ್ಧಾರ ಮಾಡಿ ಪದ್ದಣ್ಣನಿಗೆ ರಜೆ ಹಾಕಿಸಿ ಸಿನಿಮಾಕ್ಕೆ ಕರಕೊಂಡು ಹೋದೆ. ಸಿನಿಮಾ ಹೋಗೋ ಮುಂಚೆ ಸ್ವಲ್ಪ ಭಯನೂ ಇತ್ತು. ಒಂದು ವೇಳೆ ಸ್ನೇಹಿತರು ಹೇಳಿದಂತೆ ಸಿನಿಮಾ ನೋಡೋಕೆ ಆಗದೆ ಹೋದ್ರೆ ಏನ್ ಮಾಡೋದು ಅಂತ. ಆಗ ಸಿನಿಮಾ ಚೆನ್ನಾಗಿದ್ರೆ ಕಣ್ಣು ತೆರೆದುಕೊಂಡು ಕೂಡೋದು, ಒಂದು ವೇಳೆ ಚನ್ನಾಗಿಲ್ಲ ಅಂದ್ರೆ ಹಾಗೆ ಒಂದು ಜಂಪ್ ನಿದ್ದೆ ಹೊಡೆಯೋದು ಅನ್ಕೊಂಡು ಚಿತ್ರಮಂದಿರದ ಒಳಗೆ ಹೋದೆ.

ಚಿತ್ರಮಂದಿರದಲ್ಲಿ 10 ಜನ ಬಿಟ್ರೆ ಯಾರೂ ಇರಲಿಲ್ಲ. ಸೀಟು ಫುಲ್ ಆಗ್ಲಿ ಬಿಡ್ಲಿ ಸಿನಿಮಾ ಅಂತೂ ತೋರಸ್ತಾರಲ್ಲ ಅನ್ಕೊಂಡು ಗಟ್ಟಿಯಾಗಿ ಕೂತೆ. ಸಿನಿಮಾ ಶುರು ಆಯ್ತು, ದೊಡ್ಡ ದೊಡ್ಡ ಮಸಲ್ ಇರೋ ಅಜಾನುಭಾವನ ದೇಹ ತೋರಿಸೋ ಮೂಲಕ ಸಿನಿಮಾ ಶುರುವಾಯ್ತು. ಧಡುತಿ ದೇಹ, ಸಿನಿಮಾಕ್ಕೆ ಹೇಳಿ ಮಾಡಿಸಿದ ಭಯಾನಕ ಕನ್ನಡದ ಡಬ್ಲೂ ಡಬ್ಲೂ ಎಫ್ ದೇಹ ಅದು. ಗ್ಯಾರೇಜ್ ಲ್ಲಿ ಕೆಲಸ ಮಾಡ್ಕೊಂಡಿದ್ದವ ದುಡ್ಡು ಮಾಡೋ ಹುಚ್ಚಿಗೆ ಗಾಂಜಾ ಮಾರುವ ಕೆಲಸಕ್ಕೆ ಕೈ ಹಾಕುತ್ತಾನೆ. ತನ್ನ ದಾರಿಗೆ ಅಡ್ಡ ಬಂದವರನ್ನೆಲ್ಲ ಪೀಸ್ ಪೀಸ್ ಮಾಡುತ್ತಾ ಹೋಗುತ್ತಾನೆ. ಗ್ಯಾರೇಜ್ ಮಾಲೀಕನ ಮಗನನ್ನೇ ಗಾಂಜಾ ದಾಸನಾಗುವಂತೆ ಮಾಡಿ ಅನ್ನ ಹಾಕಿದ ಮನೆಗೆ ದ್ರೋಹ ಬಗೆಯುತ್ತಾನೆ ಆ ಧಡುತಿ ದೇಹ. ಗಾಂಜಾ ಮಾರುತ್ತಾ ಮಾರುತ್ತಾ ಆ ಧಡುತಿ ದೇಹ ಮುಂದೆ ಕಾರ್ಪೋರೇಟರ್ ಆಗ್ತಾನೆ. ಅವನಿಗೆ ದೊಡ್ಡ ದೊಡ್ಡ ರಾಜಕಾರಣಿ ಅಭಯಹಸ್ತ, ಗಾಂಜಾ ಹೇಗೆ ದೊಡ್ಡ ಉದ್ಯಮವಾಗುತ್ತೆ, ಅಲ್ಲಿಂದ ಡ್ರಗ್ಸ್ ಹೇಗೆ ಶುರುವಾಗುತ್ತೆ, ಗಾಂಜಾ ಸೇವನೆ ಅಮಲು, ಸೇವನೆಗಾಗಿ ಯುವ ಪೀಳಿಗೆ ದಾರಿ ತಪ್ಪುವ ರೀತಿ, ಕೊನೆಗೆ ಅದನ್ನು ತಡೆಯೋಕೆ ಅಂತಲೇ ಬರುವ ಭೀಮನ ಪಾತ್ರದಾರಿ ದುನಿಯಾ ವಿಜಯ ಎಲ್ಲವನ್ನು ಕಣ್ಣು ಮಿಟ್ಟುಕಿಸದೆ ನೋಡಿದೆ. ಕತೆಯನ್ನು ವಿವರವಾಗಿ ಇಲ್ಲಿ ನಾನು ಹೇಳೋದಿಲ್ಲ.

ಆದರೆ ಚಿತ್ರತಂಡ ಕತೆಗಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡದ್ದು ಸಿನಿಮಾದಲ್ಲಿ ಕಾಣುತ್ತದೆ. ಸಿನಿಮಾದಲ್ಲಿ ಬಳಸಿದ ಭಾಷೆ ಮಧ್ಯಮ ವರ್ಗದ ಜನರಿಗೆ ಕುರ್ಚಿಯಿಂದ ತುದಿಗೆ ಬಂದು ಕೂಡುವಂತೆ ಕಿರಿ ಕಿರಿ ಆಗಬಹುದು. ಆದರೆ ಸಿನಿಮಾದಲ್ಲಿ ನೈಜ್ಯತೆ ತರುವ ಉದ್ದೇಶದಿಂದ ಎಲ್ಲಿಯೂ ಬೆಣ್ಣೆ ಹಚ್ಚುವ ಕೆಲಸ ಚಿತ್ರತಂಡ ಮಾಡಿಲ್ಲ. ಕೊಳಗೇರಿ ಅಂದರೆ ಸ್ಲಂ ಅಂತ ಏನ್ ಹೇಳ್ತಿವೋ ಅವರ ಭಾಷೆ, ಅವರು ಬದುಕುವ ರೀತಿ, ಅವರ ಸಂಸಾರದ ಕಿತ್ತಾಟ ಎಲ್ಲವನ್ನು ಎತ್ತವತ್ತಾಗಿ ತೋರಿಸಿದ್ದಾರೆ. ಹಾಗಾಗಿ ಪ್ರೇಕ್ಷಕನಿಗೆ ಅದನ್ನು ಅರಗಿಸಿಕೊಳ್ಳೋದು ಕಷ್ಟವಾಗಬಹುದು.
ಗಾಂಜಾ, ಡ್ರಗ್ಸ್ ಇಂದು ಹೆಮ್ಮರವಾಗಿ ಬೆಳೆದು ಇಂದಿನ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದೆ. ಇತ್ತೀಚಿಗೆ ಬಾಲಿವುಡ್ ಗಾಯಕ ಯೊ ಯೊ ಹನಿಸಿಂಗ್ ಗಾಂಜಾ, ಡ್ರಗ್ಸ್ ದಾಸನಾಗಿ 18 ವರ್ಷ ಒದ್ದಾಡಿ ಹೊರ ಬಂದು, ‘ದಯವಿಟ್ಟು ಗಾಂಜಾ, ಡ್ರಗ್ಸ್ ಗೆ ದಾಸರಾಗಬೇಡಿ’… ಎಂದು ಸಂದೇಶ ನೀಡಿದ ಸಂದರ್ಶನವೊಂದು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಮಾದಕವಸ್ತುಗಳು ಯಾರನ್ನು ಬಿಡೋಲ್ಲ . ಕೊಳಗೇರಿ ಜನರಿಂದ ಹಿಡಿದು ದೊಡ್ಡ ದೊಡ್ಡ ಶ್ರೀಮಂತರವರೆಗೂ ಬಲೆ ಹಾಕಿದ್ದು ಈ ಸಿನಿಮಾದಲ್ಲಿ ಕಾಣಬಹುದು. ಆ ಬಲೆಯಿಂದ ಹೊರಗೆ ಬರಲಾಗದೆ ಎಷ್ಟೋ ಜೀವಗಳು ಜೀವ ಬಿಟ್ಟಿವೆ. ಪ್ರತಿಯೊಬ್ಬನ ಜೀವ ಅಮೂಲ್ಯ, ಆ ಬಲೆಯಲ್ಲಿ ಸಿಲುಕದೆ ಕಾಪಾಡಿಕೊಳ್ಳಿ.
ಈ ಮಾದಕ ವಸ್ತುಗಳು ಕಾಲೇಜ ಮಕ್ಕಳಿಗೆ ಸುಲಭವಾಗಿ ಸಿಗ್ತಿದೆ ಅಂದ್ರೆ ಎಂತ ದುರಂತ. ನಾಲ್ಕುಗೋಡೆಯ ಮಧ್ಯೆ ಇರುವ ನನ್ನಂತಹವಳಿಂದ ಹಿಡಿದು ಬಹುತೇಕ ಜನರಿಗೆ ಇದು ಎಲ್ಲಿ ಸಿಗುತ್ತೆ ಎನ್ನುವುದು ಗೊತ್ತೇ ಇರಲಿಲ್ಲ. ಭೀಮ ಸಿನಿಮಾದಲ್ಲಿ ಗಾಂಜಾ ಹೇಗೆ ಸಿದ್ಧವಾಗುತ್ತೆ, ಎಲ್ಲಿ ಸಿಗುತ್ತೆ, ಅದರಿಂದ ಯುವ ಜನ ಒದ್ದಾಡುವ ಪರಿ, ಅದಕ್ಕೆ ಶ್ರೀರಕ್ಷೆ ನೀಡುತ್ತಿರುವ ದೊಡ್ಡ ದೊಡ್ಡ ವ್ಯಕ್ತಿಗಳು ಕೈವಾಡ ಎಲ್ಲವನ್ನು ತೋರಿಸಿದ್ದಾರೆ. ಅಚ್ಚರಿಯ ವಿಷಯವೆಂದರೆ ಗಾಂಜಾ, ಡ್ರಗ್ಸ್ ಗಳು ಮೆಡಿಕಲ್ ಶಾಪ್ ಗಳಲ್ಲಿಯೂ ಸಿಗುತ್ತೆ ಅಂತ ಗೊತ್ತಾದಾಗ ಭಯವೇ ಆಯಿತು. ಯಾವುದೋ ಮಾತ್ರೆ ಹೆಸರಿನಲ್ಲಿ ಮೆಡಿಕಲ್ ಶಾಪ್ ನಲ್ಲಿ ಸಿಗುತ್ತೆ ಅಂತೆ.

ಸಿನಿಮಾ ನೋಡುವಾಗ ವಾಸ್ತವಕ್ಕೆ ತುಂಬಾ ಹತ್ತಿರವಾಗುತ್ತದೆ. ಪರಭಾಷಾ ಸಿನಿಮಾದಲ್ಲಿನ ಹೊಸ ಪ್ರಯೋಗ, ಮಚ್ಚು, ಲಾಂಗ್ ಎಲ್ಲವನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಕನ್ನಡದಲ್ಲಿ ಸಂದೇಶ ಇರುವ ಚಿತ್ರ ಬಂದಾಗ ಜಾಸ್ತಿ ಯೋಚ್ನೆ ಮಾಡದೇ ಒಳ್ಳೇದು ತಗೆದುಕೊಂಡು, ಕೆಟ್ಟದನ್ನ ಚಿತ್ರಮಂದಿರದಲ್ಲೇ ಬಿಟ್ಟು, ಹೋಗಿ ನೋಡಿ.
ದುನಿಯಾ ವಿಜಯ ಅವರು ಪ್ರೇಕ್ಷಕರಿಗೆ ಒಂದು ಒಳ್ಳೆ ಸಂದೇಶವನ್ನು ಸಿನಿಮಾ ಮೂಲಕ ನೀಡಿದ್ದಾರೆ. ಬ್ಲಾಕ್ ಡ್ರ್ಯಾಗನ್ ಮಂಜು ಪಾತ್ರ ಮಾತ್ರ ಅಚ್ಚಳಿಯದೆ ಮನಸ್ಸಲ್ಲಿ ಕೂತಿದೆ. ಅದೇ ತರ ಲೇಡಿ ಪೊಲೀಸ್ ಪಾತ್ರಧಾರಿ ಪ್ರಿಯಾ ಶತಮಾರ್ಷನ್ ಖಡಕ್ ಮಾತು, ಗತ್ತು ಕೂಡ ಮನಸ್ಸಲ್ಲಿ ಹಾಗೆ ಕೂತಿದೆ. ನಾಯಕಿ ಅಶ್ವಿನಿ ಹೊಸ ಮುಖವಾದರೂ ಅಭಿನಯದಲ್ಲಿ ಗೆದ್ದಿದ್ದಾರೆ. ಅಚ್ಯುತ್ ಕುಮಾರ್, ರಂಗಾಯಣ ರಘು ಹಿರಿಯ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ನಾನು ಗಮನಿಸಿದಂತೆ ಈ ಸಿನಿಮಾ ನಾಯಕ ಪ್ರಧಾನ ಸಿನಿಮಾ ಅನ್ನಿಸದೇ, ಎಲ್ಲ ಪಾತ್ರಕ್ಕೂ ಸಮ ತೂಕ ನೀಡಿದ್ದಾರೆ. ಕಲಾವಿದರಿಗೆ ತಮ್ಮ ಪ್ರತಿಭೆ ತೋರಿಸಲು ಅವಕಾಶ ಈ ಸಿನಿಮಾದಲ್ಲಿ ಸಿಕ್ಕಿದೆ. ಹಾಗಾಗಿ ದುನಿಯಾ ವಿಜಯ ನಿರ್ದೇಶನ, ನಾಯಕತ್ವ,ಕತೆ ಯಶಸ್ವಿಯಾಗಿದೆ.

“ಭೀಮ” ಸಿನಿಮಾವನ್ನು ಯುವಜನತೆ ಜೊತೆಗೆ ಪಾಲಕರು ತಪ್ಪದೆ ನೋಡಲೇಬೇಕು. ಸಮಾಜಕ್ಕೆ ಒಳ್ಳೆ ಸಂದೇಶವನ್ನು ಸಿನಿಮಾ ನೀಡುವಲ್ಲಿ ಯಶಸ್ವಿಯಾಗಿದೆ. ಚಿತ್ರಮಂದಿರದಲ್ಲಿ ನೋಡಲು ಆಗದಿದ್ದರೂ ಅಮೆಜಾನ್ ಪ್ರೈಮ್ ನಲ್ಲಿ ಬಂದಿದೆ. ತಪ್ಪದೆ ನೋಡಿ…
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ
