‘ಖಗಗಳ ಹಿಂಡಿದೆ… ಮೃಗಗಳ ದಂಡಿದೆ… ಮೇಘವು ಮಳೆಯನು ಹಡೆಯುತಿದೆ…’ ಮುಂದೆ ಓದಿ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಸುಂದರ ಕವನ ಓದುಗರಿಗಾಗಿ,
ಶರಧಿಯ ಬೆರೆಯಲು
ಹರಿಯುವ ಸುರನದಿ
ತಿರುಗುವ ಭೂರಮೆ ಸ್ವರ್ಗವಿದು
ತೆರೆದಿಹ ತೊರೆಗಳು
ತರತರ ತರುಗಳು
ಸೂರೆಯ ಮಾಡಿಹ ನಿಸರ್ಗವಿದು
ತರುವಲಿ ಹಸಿರಿದೆ
ದರಿಯಲಿ ನೀರಿದೆ
ಕೊರೆಯುವ ಛಳಿಯ ಕಾಲವಿದೆ
ಗಿರಿಗಳ ಸೊಬಗಿದೆ
ಝರಿಗಳ ಕಲರವ
ಬಿರಿದಿಹ ಹೂಗಳ ಬಂಧವಿದೆ
ಗಂಧದ ಮರಗಳು
ಚೆಂದದ ತುರುಗಳು
ನಂದದ ಪರ್ಯಾಯ ದ್ವೀಪವಿದು
ಅಂದದ ಬಾನಿನ
ಸುಂದರ ಕಾನಿನ
ಬಂಧಿಯ ಮಾಡುವ ಭೂಮಿಯಿದು
ಖಗಗಳ ಹಿಂಡಿದೆ
ಮೃಗಗಳ ದಂಡಿದೆ
ಮೇಘವು ಮಳೆಯನು ಹಡೆಯುತಿದೆ
ಯುಗಗಳ ಹೆಸರಿದೆ
ಜಗದೊಳು ನಡೆಯಿದೆ
ಧಗಧಗ ಅಗ್ನಿಯ ಜ್ವಾಲೆಯಿದೆ
ಅರಳುವ ಚಂದಿರ
ಇರುಳಿಗೆ ಸುಂದರ
ಬೀರುತ ಭುವಿಯಲಿ ಮೂಡುವನು
ಉರಿಯುವ ದಿನಕರ
ತೆರಳುತ ಮರಳುತ
ಧರೆಯಲಿ ಬೆಳಕನು ನೀಡುವನು.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು.
