ಪ್ರಾಣಿ, ಕೀಟವಲ್ಲದೆ, ಕೆಲ ವಸ್ತುಗಳೂ ಸಹ ಮನುಷ್ಯರನ್ನು ಕಚ್ಚಿ ಗಾಯಗೊಳಿಸುವುದಿದೆ. ಮುಖ್ಯವಾಗಿ ಚಪ್ಪಲಿಗಳು. ಮನುಷ್ಯನ ಪಾದಸೇವೆಗೂ ಮುನ್ನ, ಪಾದಸಂಗ ಬೆಳೆಸಲು, ಕಚ್ಚಿ ಪರೀಕ್ಷಿಸಿಯೇ ಪಾದಸ್ನೇಹಿಯಾಗುವುದಿದೆ. ನಳಿನಿ ಟಿ. ಭೀಮಪ್ಪ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಕಚ್ಚುವುದು ಪ್ರಾಣಿಗಳ, ಕೀಟಗಳ ಸ್ವಾಭಾವಿಕ ಗುಣ. ಮನುಷ್ಯ ತನ್ನ ಪ್ರಯೋಗಗಳಿಗೆಲ್ಲ ಇಲಿ, ಹಂದಿ ಮುಂತಾದ ಪ್ರಾಣಿಗಳನ್ನು ಬಳಸಿಕೊಳ್ಳುತ್ತಾನಂತೆ. ಆದರೆ ಈ ಪ್ರಾಣಿ, ಕೀಟಗಳು ಮನುಷ್ಯನಿಗೆ ಕಚ್ಚುವುದನ್ನು ಆತ ಜನ್ಮ ಎತ್ತಿದ ದಿನದಿಂದಲೇ ಹಕ್ಕುಪತ್ರ ಪಡೆದಿರುವ ಹಾಗೆ ಕಾಣುತ್ತವೆ.
ಹಂದಿ, ಕೋತಿ, ಹಾವುಗಳಂತವು ಅತಿಥಿಗಳ ಹಾಗೆ ಆಗಾಗ ಮನುಷ್ಯರನ್ನು ಕಚ್ಚುವ ಸುದ್ದಿ, ಕಚ್ಚಿದಷ್ಟೇ ವೇಗದಲ್ಲಿ ಮಾಯವಾಗುತ್ತದೆ. ಆದರೆ ಶ್ವಾನಗಳ ಬಗ್ಗೆ ಹಾಗೆ ಹೇಳಲಾಗದು. ಕಚ್ಚುವುದರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದೇ ಈ ಬೀದಿನಾಯಿಗಳು. ‘ಬೊಗಳುವ ನಾಯಿ ಕಚ್ಚುವುದಿಲ್ಲ’ ಎನ್ನುವ ಮಾತನ್ನು ಅದ್ಯಾರೋ ನಾಯಿಯಿಂದ ಒಮ್ಮೆಯೂ ಕಚ್ಚಿಸಿಕೊಳ್ಳದ ಅನನುಭವಿಗಳ ಹೇಳಿಕೆ ಇರಬಹುದೆಂಬ ಗುಮಾನಿ. ದಿನಂಪ್ರತಿ ಅದೆಷ್ಟೋ ಕಡೆಗಳಲ್ಲಿ ಇವುಗಳು ಕಚ್ಚಿ, ದಾಳಿಮಾಡಿ, ನ್ಯೂಸ್ ಚಾನೆಲ್‌ಗಳ ಟಿಆರ್‌ಪಿ ಯನ್ನು ಟಾಪ್‌ಗೇರ್ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೊನ್ನೆ ಸ್ನೇಹಿತೆಯ ಜೊತೆ ವಾಕಿಂಗ್ ಹೋಗುವಾಗ, ರಸ್ತೆಯ ಬದಿಯಲ್ಲಿ ಚಕ್ಕುಲಿಯಂತೆ ಸಿಂಬೆ ಸುತ್ತಿ ಮಲಗಿದ್ದ ಬೀದಿನಾಯಿಯೊಂದು, ನಾವು ಪಕ್ಕ ಹಾಯುವಾಗ, ದಡಕ್ಕನೆ ಎದ್ದಿದ್ದೇ ಸ್ನೇಹಿತೆಯ ಕಾಲಿನ ಮೀನಖಂಡಕ್ಕೆ ಗಬಕ್ಕನೆ ಬಾಯಿಹಾಕಿತು. ಆಕೆ ಧರಿಸಿದ್ದ ಸಡಿಲ ಪ್ಯಾಂಟು ಮಂಡಿಯ ಕೆಳಗೆ ಓಪೆನ್ ಆಗಿ ಗಾಳಿಗೆ, ಫ್ಯಾಷನ್ ಪೆರೇಡ್‌ನಲ್ಲಿ ಹಾಕುವ ವಿಚಿತ್ರ ಉಡುಗೆಯಂತೆ, ಮೊಣಕಾಲಿನ ತನಕ ಪ್ರದರ್ಶನ ಮಾಡುವಂತೆ ಗಾಳಿಗೆ ಹಾರಾಡತೊಡಗಿತು. ನಾನು ಅಲ್ಲಿಯೇ ಎದುರುಮನೆಗೆ ಹೋಗಿ ಒಂದೆರಡು ಸೇಫ್ಟೀ ಪಿನ್ನುಗಳನ್ನು ಕೇಳಿ ತಂದು ಹರಿದ ಭಾಗವನ್ನು ಬಂಧಿಸಿ ವಾಪಸ್ಸಾಗಿದ್ದಾಯ್ತು. ಉತ್ತರ ಕರ್ನಾಟಕದ ಕಡೆ ಮಕ್ಕಳು ಜಗಳವಾಡುವಾಗ ‘ಹಚ್… ನಾಯಿ ಬಾಲ ಕಚ್’ ಎಂದು ಬೈಯ್ದಾಡುವುದಿದೆ. ನಮ್ಮ ಪಾಡಿಗೆ ನಾವು ಇರುವಾಗಲೇ ಅಟ್ಟಾಡಿಸಿಕೊಂಡು ಬಂದು ಕಚ್ಚುವ ಈ ನಾಯಿಗಳ ಬಾಲವನ್ನು ಮನುಷ್ಯ ಕಚ್ಚುವುದಕ್ಕಾದರೂ ಸಾಧ್ಯವೇ ಎಂದು ತಲೆಕೆರೆದುಕೊಳ್ಳುವುದಾಗುತ್ತದೆ.
ಸೊಳ್ಳೆ, ತಿಗಣೆ ಇವುಗಳ ಬೈಟ್ ಅಂತೂ ಹೇಳುವ ಹಾಗಿಲ್ಲ. ಮನುಷ್ಯರು ಸುಖಾಸನಕ್ಕೆ ಕೂರುತ್ತಿದ್ದಂತೆ ಅಥವಾ ಶವಾಸನಕ್ಕೆ ವಾಲುತ್ತಿದ್ದಂತೆ, ಇವುಗಳ ಬೈಟ್ ಚಾಲೂ. ಕೈಕಾಲುಗಳನ್ನು ಮೈಕೆಲ್ ಜಾಕ್ಸನ್ ತರಹ ಶೇಕ್ ಮಾಡುತ್ತಿದ್ದರೆ, ಅವೂ ಸ್ವಲ್ಪ ದೂರ ಹಾರಿ ಹೋದಂತೆ ನಟಿಸಿ ಮತ್ತೆ ವಾಪಸಾಗುತ್ತಿರುತ್ತವೆ. ಯಾರ ಭಾಷಣಕ್ಕೆ ಚಪ್ಪಾಳೆ ಬೀಳದಿದ್ದರೂ, ಕಾಡುವ ಸೊಳ್ಳೆಗಳಿಗೆ ಮಾತ್ರ ಪ್ರತಿಯೊಬ್ಬರೂ ಕೈನೋಯುವಷ್ಟು ಚಪ್ಪಾಳೆ ತಟ್ಟುವುದಿದೆ. ಕಚುವಾ ಛಾಪ್ ಎನ್ನುವ ಹೊಗೆಬತ್ತಿಗೂ ಬಗ್ಗದೆ, ಕಚ್ಚಿಯೇ ತೀರುವ ಗುಣ ಹೊಂದಿವೆ. ನೊಣಗಳು ಹಾಗೆಲ್ಲ ಕಚ್ಚುವ ತೊಂದರೆ ತೆಗೆದುಕೊಳ್ಳದೆ, ಹೆಚ್ಚಾಗಿ ಮನುಷ್ಯರ ಫೇಸ್ ಅನ್ನೇ ಟಾರ್ಗೆಟ್ ಮಾಡಿಕೊಂಡು, ಹಾರುತ್ತ, ಹಾಡುತ್ತ ಎಲ್ಲೆಂದರಲ್ಲಿ ಕೂತು ವಿಚಿತ್ರ ಕಚಗುಳಿ ಇಡುತ್ತ ಹಿಂಸಿಸುತ್ತವೆ. ಅದೆಷ್ಟೇ ಪರ್ಫೆಫ್ಟ್ ಸೊಳ್ಳೆಬ್ಯಾಟ್ಸ್ಮನ್ ಇದ್ದರೂ ಇವುಗಳನ್ನು ಹಿಡಿಯಲಾಗದೆ, ಹೊಡೆಯಲಾಗದೆ, ಬಡಿಯಲಾಗದೆ ಅಸಹಾಯಕರಾಗುವುದಿದೆ. ತಿಗಣೆಗಳು ಹಾಗಲ್ಲ, ತುಂಬ ಸಾವಧಾನ. ಮನುಷ್ಯ ಮಲಗುವುದನ್ನೇ ತಾಳ್ಮೆಯಿಂದ ಕಾದು, ನಿದ್ರಾದೇವಿಯ ವಶವಾಗುತ್ತಿದ್ದಂತೆ, ಪರಿವಾರ ಸಮೇತ ಆಕ್ರಮಣ ನಡೆಸುತ್ತವೆ. ಸಂದುಗೊಂದುಗಳಲ್ಲಿ ಕಚ್ಚಿ, ಹೊಟ್ಟೆಯನ್ನು ರಕ್ತದ ಗುಡಾಣ ಮಾಡಿಕೊಂಡು ತೆವಳುತ್ತಾ ಪೆವಿಲಿಯನ್‌ಗೆ ತೆರಳುವಷ್ಟರಲ್ಲಿ ಕೆಲವೊಮ್ಮೆ ಕಚ್ಚಿಸಿಕೊಂಡವರ ಆಕ್ರೋಶಕ್ಕೆ ಗುರಿಯಾಗಿ, ಅವರ ಕಪಿಮುಷ್ಠಿಗೆ ಸಿಲುಕಿ ಉಸಿರು ಚೆಲ್ಲುವುದಿದೆ. ತಲೆಯಲ್ಲಿ ಹೇನು, ಇರುವೆ, ಗೊದ್ದಗಳಂತಹ ಚೋಟಾ ಮೋಟಾ ಕೀಟಗಳ ಬೈಟನ್ನು ಸ್ವೀಟ್‌ಬೈಟ್ ಎಂದು ಅವಗಣನೆ ಮಾಡಿದರೂ, ಅವುಗಳಿಗೆ ಆನ್‌ಸ್ಪಾಟ್ ಸದ್ಗತಿ ಪ್ರಾಪ್ತಿಯಾಗುವುದೇ ಹೆಚ್ಚು. ಆದರೆ ಸ್ವೀಟ್ ಹನಿ ಕೊಡುವ ಹನಿ ಬೀ ಏನಾದರೂ ಕಚ್ಚಿದರೆ, ಹಾನಿ ಖಂಡಿತ. ಮಹಾಭಾರತದಲ್ಲಿ ಕರ್ಣನ ತೊಡೆಗೆ ಕಚ್ಚಿ ಕೊರೆದ ಕೀಟವೊಂದು, ಅವನ ಅವನತಿಗೇ ಕಾರಣವಾಯಿತೆನ್ನಬಹುದು. ನೀರಿನಲ್ಲಿನ ಪುಟ್ಟ ಪುಟ್ಟ ಮೀನುಗಳ ನಡುವೆ ಪಾದವೊಡ್ಡಿ, ಅವುಗಳ ಕಚ್ಚಿದಾನಂದ ಅನುಭವಿಸುವವರೂ ಇರುವರು.
ಆದರೆ ಇಲಿ, ಹೆಗ್ಗಣಗಳು ಮನುಷ್ಯರಿಗೆ ಕಚ್ಚಿ ತೊಂದರೆ ಕೊಡುವುದಕ್ಕಿಂತ, ಮನುಷ್ಯ ಉಪಯೋಗಿಸುವ ವಸ್ತುಗಳನ್ನು ಹಾಳುಗೆಡುವುದರಲ್ಲಿ ತುಂಬ ಪ್ರೀತಿ. ಬಟ್ಟೆ, ಬರೆ, ಕಾಗದ, ತರಕಾರಿ ಎಲ್ಲವನ್ನೂ ಕಚ್ಚಿ ಪುಡಿಗಟ್ಟುವುದರಲ್ಲಿ ತಡೆಗಟ್ಟುವವರಿಲ್ಲ. ಫ್ರಿಜ್‌ಗೂ ಸುರಂಗ ಮಾರ್ಗ ಕೊರೆದು, ಪ್ರವೇಶಿಸಬಲ್ಲವಷ್ಟು ಚಾಣಾಕ್ಷತನ ಹೊಂದಿವೆ. ಇತ್ತೀಚೆಗೆ ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನಗಳ ಎಂಜಿನಿನೊಳಗೆ ಸೇರಿಕೊಂಡು, ಅಲ್ಲಿನ ವಯರ್‌ಗಳನ್ನು ಕತ್ತರಿಸುವಷ್ಟು ಬಲಶಾಲಿಗಳಾಗಿವೆ. ವಾಹನ ಮಾಲೀಕರು, ಇಂಧನದ ರೇಟ್‌ಗಿಂತ ಹೆಚ್ಚು ಇಲಿಕಟ್‌ಗಾಗಿ ವಿನಿಯೋಗಿಸುವ ಪರಿಸ್ಥಿತಿ. ಇಲಿಗಳ ಹಲ್ಲಿನ ಗಟ್ಟಿತನವನ್ನು ಇನ್ನೂ ಯಾವ ವಿಜ್ಞಾನಿಗಳು ಪ್ರಯೋಗಕ್ಕೆ ಒಳಪಡಿಸಿದ್ದಾರೋ ಇಲ್ಲವೋ ತಿಳಿಯದು. ಅದೆಂತೆಂತಹ ಬೆಲೆಬಾಳುವ ಟೂಥ್‌ಪೇಸ್ಟ್, ಬ್ರಶ್ ಉಪಯೋಗಿಸಿದರೂ, ಮನುಷ್ಯರ ಹಲ್ಲುಗಳು ಕಚ್ಚಾ ತಿನಿಸುಗಳನ್ನು ಕಚ್ಚುವುದಕ್ಕೆ ಲಾಯಕ್ಕೇ ಇಲ್ಲದೆ, ಕೇವಲ ಮೆತ್ತಗೆ ನುಂಗುವ ನುಂಗಣ್ಣಗಳೇ ಹೆಚ್ಚು. ಹೇಗಿದ್ದರೂ ಭೂಮಿ, ಕೆರೆ, ಚರಂಡಿ, ಆಸ್ತಿಪಾಸ್ತಿ, ಮೇವು ಎಲ್ಲವನ್ನೂ ನುಂಗಿ ನೀರು ಕುಡಿದಷ್ಟೇ ಸಲೀಸು ಎಂದುಕೊಂಡಿರುವ ನುಂಗಣ್ಣಗಳೇ ಹೆಚ್ಚಿರುವುದರಿಂದ, ಈ ವಿಷಯದಲ್ಲಿ ಕಚ್ಚುವುದಕ್ಕಿಂತ ಹೆಚ್ಚು ಕೊಚ್ಚುವುದಕ್ಕೇ ಪ್ರಾಮುಖ್ಯತೆ. ದಂತಪಂಕ್ತಿಗಳು ಶೋಪೀಸ್ ತರಹ ಕೇವಲ ನಗುವುದಕ್ಕೆ ಸೀಮಿತವಾಗಿವೆ. ಹಲ್ಲುಗಾವಲು ಪ್ರದೇಶವೆಲ್ಲ ಮಧ್ಯವಯಸ್ಸಿಗೆ ಬರುವ ಹೊತ್ತಿಗೆ ಬಟಾಟಬಯಲಾಗಿ, ಕೃತಕ ದಂತಗಳ ನೆಲೆಯಾಗುತ್ತಿದೆ. ರಾಮಾಯಣದಲ್ಲಿ ವೃದ್ಧೆ ಶಬರಿ, ರಾಮ ಆಗಮಿಸುತ್ತಿದ್ದಂತೆ, ತಾನು ಕಚ್ಚಿ ಕಚ್ಚಿ ರುಚಿ ನೋಡಿದ ಹಣ್ಣುಗಳನ್ನು ತಿನ್ನಲು ಕೊಟ್ಟಿದ್ದನ್ನು ರಾಮ ಪ್ರೀತಿಯಿಂದಲೇ ಸ್ವೀಕರಿಸಿದನೆಂದು ಓದುವಾಗ, ಆಕೆಯ ವಜ್ರದಂತಗಳ ಗುಟ್ಟೇನಿರಬಹುದು ಎನ್ನುವ ವಿಷಯ ಕಾಡುತ್ತದೆ.
ಕೇವಲ ಪ್ರಾಣಿ, ಕೀಟವಲ್ಲದೆ, ಕೆಲ ವಸ್ತುಗಳೂ ಸಹ ಮನುಷ್ಯರನ್ನು ಕಚ್ಚಿ ಗಾಯಗೊಳಿಸುವುದಿದೆ. ಮುಖ್ಯವಾಗಿ ಚಪ್ಪಲಿಗಳು. ಮನುಷ್ಯನ ಪಾದಸೇವೆಗೂ ಮುನ್ನ, ಪಾದಸಂಗ ಬೆಳೆಸಲು, ಕಚ್ಚಿ ಪರೀಕ್ಷಿಸಿಯೇ ಪಾದಸ್ನೇಹಿಯಾಗುವುದಿದೆ. ಹಿಮ್ಮಡಿ, ಉಂಗುಷ್ಟ, ಹೀಗೆ ಪಾದದ ಯಾವ ಭಾಗವನ್ನು ‘ಶೂ ಬೈಟ್’ಗಾಗಿ ಆಯ್ಕೆ ಮಾಡಿಕೊಳ್ಳುತ್ತವೆಯೋ, ಅದು ಆಯಾ ಪಾದುಕೆಗಳ ವಿವೇಚನೆಗೆ ಬಿಟ್ಟಿದ್ದು. ಮನುಷ್ಯನ ‘ನೆಕ್ ರೀಜನ್’ ದೆವ್ವ, ಭೂತಗಳಂತವುಗಳಿಗೆ ಕಚ್ಚುವ ‘ಹಾಟ್ ಸ್ಪಾಟ್’ ಎನ್ನಬಹುದು.
‘ಬಾಯಿಯಲ್ಲಿ ಬೆರಳಿಟ್ಟರೆ ಕಚ್ಚೋಕೆ ಬಾರದು’ ಎನ್ನುವ ವ್ಯಂಗ್ಯೋಕ್ತಿ ಉಂಟು. ಇದನ್ನು ಹಲ್ಲುಮೂಡುತ್ತಿರುವ ಕಂದಮ್ಮಗಳ ವಿಷಯದಲ್ಲಿ ಒಪ್ಪುವಂತೆಯೇ ಇಲ್ಲ. ಗರಗಸಕ್ಕಿಂತ ಚೂಪಾದ ಹಲ್ಲುಗಳ ಮಧ್ಯೆ ಸಿಲುಕಿದ ವಸ್ತುಗಳೆಲ್ಲವೂ ಪೀಸ್ ಪೀಸ್. ನಂತರವೂ ಕೆಲ ವರ್ಷಗಳವರೆಗೆ ಮಕ್ಕಳು ಕೋಪದಲ್ಲಿ ಕಚ್ಚಾಡುತ್ತಲೇ ಒಬ್ಬರಿಗೊಬ್ಬರು ಹಲ್ಲಿನ ಗುರುತು ಮೂಡುವಂತೆ ಕಚ್ಚುವುದಿದೆ. ಬೆಳೆದು ದೊಡ್ಡವರಾದ ನಂತರ, ಕೋಪದಲ್ಲಿ ಅವುಡುಗಚ್ಚುವುದು, ಟೆನ್ಷನ್‌ನಲ್ಲಿ ಉಗುರು ಕಚ್ಚುವುದು, ಆಹಾರ ಸೇವಿಸುವಾಗ ನಾಲಿಗೆ ಕಚ್ಚಿಕೊಳ್ಳುವುದು ಮುಂದುವರೆಯುತ್ತದೆ.
ಪ್ರಸಿದ್ಧ ವಿಜ್ಞಾನಿ ನ್ಯೂಟನ್ ಮರದ ಕೆಳಗೆ ಮಲಗಿರುವಾಗ ಸೇಬೊಂದು ತಲೆಯ ಮೇಲೆ ಸೇಬಿನ ಹಣ್ಣು ಬಿದ್ದು, ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಕಂಡುಹಿಡಿಯಲು ಸಾಧ್ಯವಾಯಿತಂತೆ. ಬಿದ್ದ ಸೇಬನ್ನು ಸುಮ್ಮನೆ ಕಚ್ಚಿ ತಿಂದಿದ್ದರೆ ಇಷ್ಟೆಲ್ಲ ‘ನ್ಯೂ’ ‘ಟನ್’ ಗಟ್ಟಲೆ ಸಿಲೆಬಸ್ ಪುಸ್ತಕಕ್ಕೆ ಸೇರಿ, ನಮ್ಮಂತಹ ಹೆಡ್ಡರ ಹೆಡ್ಡಿಗೆ ಸರಾಗವಾಗಿ ಇಳಿಯದೆ ಪೇಚಾಡುವ ದರ್ದು ಇರುತ್ತಿರಲಿಲ್ಲ. ಇನ್ನು ಭೂಮಿಯ ಮೇಲಿನ ಮೊದಲ ಮನುಷ್ಯ ಆಡಮ್ ಕಚ್ಚಿ ತಿಂದ ಸೇಬು, ಮುಂದಿನ ಪೀಳಿಗೆ ಬೆಳೆಯಲು ನಾಂದಿಯಾಯಿತಂತೆ. ತಿಂದವರದೊಂದು ಕತೆ, ತಿನ್ನದಿದ್ದವರದೊಂದು ಕತೆ ಬಿಡಿ. ಈಗ ಗಿಳಿ ಕಚ್ಚಿದ ಸೀಬೆಯ ಹಾಗೆ, ಕಚ್ಚು ಸೇಬು ಗುರುತಿನ ಆಪಲ್ ಐಫೋನ್ ಎಲ್ಲರ ಕಣ್ಮಣಿ ಎನ್ನಬಹುದು. ‘ಆಪಲ್’ ಬೈಟ್ ಎಷ್ಟೆಲ್ಲಾ ಇತಿಹಾಸ ಸೃಷ್ಟಿಸಿದೆ ನೋಡಿ.
- ನಳಿನಿ ಟಿ. ಭೀಮಪ್ಪ – ಧಾರವಾಡ.
