ನಂಗೆ ಗಂಡ ಬೇಡವೇ ಬೇಡ….ಅವನಿಂದ ಮುಕ್ತಿ ಕೊಡಿಸಿ…ಅವನೊಂದಿಗೆ ಇದ್ದರೇ ನನ್ನನ್ನು ಹೊಡೆದೆ ಸಾಯಿಸುತ್ತಾನೆ. ಅವನೊಂದಿಗೆ ಸಂಸಾರ ಮಾಡಲು ಸಾಧ್ಯವೇ ಇಲ್ಲ.. ಎಂದು ಹಠ ಹಿಡಿದು ಕೂತಿದ್ದ ನಯನಾಳಿಗೆ ವಕೀಲೆ ಹೆಚ್.ಆರ್.ಪವಿತ್ರ ಧರ್ಮಪ್ಪ ಅವರು ಏನು ಪರಿಹಾರ ನೀಡಿದರು ತಪ್ಪದೆ ಓದಿ ‘ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕತೆಗಳು’ ಅಂಕಣ…
ಎಂದಿನಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನನ್ನ ಸಿಟಿಂಗ್ ಇತ್ತು. ಅಂದು ಬೆಳಿಗ್ಗೆ ದಂಪತಿಗಳಿಬ್ಬರು ತುಂಬಾ ಚಿಕ್ಕ ಪ್ರಾಯದವರು ಅಸುಪಾಸು 28 ರೊಳಗೆ ಇರುವವರು. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ನಾಲ್ಕು ವರ್ಷದ ಗಂಡು ಮಗು ಇತ್ತು. ಹಾಗಿರುವಾಗ ಅದ್ರಲ್ಲಿ ಹೆಂಡತಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ದೂರು ಕೊಟ್ಟಿದ್ದಳು. ನನಗೆ ಗಂಡ ಬೇಡ. ತುಂಬಾ ಹಿಂಸೆ ನೀಡುತ್ತಾನೆ. ನನ್ನ ಮತ್ತು ಮಗುವನ್ನು ಸರಿಯಾಗಿ ನೋಡಿಕೊಳ್ಳಲ್ಲ. ನಮ್ಮನ್ನು ಒಂದಲ್ಲ ಒಂದು ದಿನ ಸಾಯುಸುತ್ತಾನೆ ಎಂಬುದಾಗಿತ್ತು. ಅದರ ಸಾರಾಂಶ ಆ ದೂರು ನನ್ನ ಕೈಗೆ ಬಂತು ಇಬ್ಬರಿಗೂ ನೋಟಿಸ್ ಮಾಡಿ ಬರಲು ಸಮಯ ನಿಗದಿಪಡಿಸಿದೆ. ಆದರಂತೆ ಗಂಡ ಹೆಂಡತಿ ಇಬ್ಬರು ಅಂದು ಒಟ್ಟಿಗೆ ಬಂದಿದ್ದರು. ಅವರ ವಿಚಾರಣೆಯ ಅವಧಿ ಬಂದಾಗ ಇಬ್ಬರನ್ನು ಒಟ್ಟಿಗೆ ಮತ್ತು ಬೇರೆ ಬೇರೆಯಾಗಿ ವಿಚಾರಿಸಿದ್ದೆ. ಯಾಕೋ ಆ ಹುಡುಗಿ ಸ್ವಲ್ಪ ಗಾಬರಿಯಾದ ಹಾಗೆ ಕಾಣಿಸೋದೂ, ನಾನು ಕೇಳುವ ಪ್ರಶ್ನೆಗಳಿಗೆ ಪ್ರತಿಯಾಗಿ ನೀರು ಕುಡಿಯುತ್ತಲೇ ಉತ್ತರಿಸುತ್ತಿದ್ದಳು. ಯಾಕೊ ಎಲ್ಲೊ ತಪ್ಪಾಗಿದೆ ಎಂದು ನನಗೆ ತಿಳಿಯಿತು. ಅವತ್ತು ಬೇರೆ ಸಾಕಷ್ಟು ಕೇಸ್ ಇದ್ದರಿಂದ ಅವರಿಬ್ಬರಿಗೂ ಮುಂದಿನ ದಿನಾಂಕ ನೀಡಿ ಬರಲು ತಿಳಿಸಿದೆ.
ಅವರಿಬ್ಬರೂ ನಾನು ಹೇಳಿದ ದಿನಾಂಕದಂದು ಪುನಃ ಬಂದರು. ಅವಳ ನಡುವಳಿಕೆಯಲ್ಲಿ ವ್ಯತಾಸವೇನು ಇಲ್ಲ, ಗಂಡ ಮಾತ್ರ ಬಹಳ ಆತ್ಮವಿಶ್ವಾಸದಿಂದಲೇ ನನ್ನ ಪ್ರಶ್ನೆಗಳಿಗೆ ಉತ್ತರಿಸಿದ. ಅಷ್ಟ್ರಲೀ ಆಫೀಸ್ ಹುಡುಗಿ ನನ್ನ ಟೇಬಲ್ ಮೇಲೆ ಟೀ ಮತ್ತು ಬಿಸ್ಕತ್ ಇಟ್ಟು ಹೋದ್ಲು. ನನಗೆ ಮಾತ್ರ, ನಾನು ಆಕೆ ಹತ್ತಿರ ಮಾತು ಮುಂದುವರಿಸಿದೆ. ಆದ್ರೆ ಅವಳ ಗಮನ ಟೀ, ಬಿಸ್ಕತ್ ಕಡೆಗೆ ಹೋಗೋವುದು ಗಮನಿಸಿ, ನೀನು ಟೀ ಕುಡಿತ್ತಿಯಾ ಕುಡಿ ತಗೊ ಅಂತ ಕೊಟ್ಟೆ. ಆಕೆ ನನಗೆ ಬೇಡ ಅಂದ್ಲು…ಪರವಾಗಿಲ್ಲ ಕುಡಿ ಅಂದೆ ಅಷ್ಟೇ, ಗಟ ಗಟ ಅಂತ ಟೀ ಕುಡಿದು ನಾಲ್ಕು ಬಿಸ್ಕತ್ ತಿಂದ್ಲು!! ಅದೆ ಸಮಯಕ್ಕೆ ಕಾದಿದ ನಾನು ಅವಳ ಗಂಡನನ್ನು ಆಚೆ ಕಳುಹಿಸಿ ಇವಳಿಗೆ ಧೈರ್ಯ ತುಂಬಿ ವಿಷಯಗಳನ್ನು ತಿಳಿಯಲು ಪ್ರಯತ್ನಿಸಿದೆ. ಅಬ್ಬಾ ಅವಳು ಹೇಳುವ ವಿಷಯಗಳು ಅಷ್ಟೇ ಕಠೋರವಾಗಿದ್ದವು ( ಇಲ್ಲಿ ನಾನು ಅವುಗಳನ್ನು ಹೇಳಲಾರೆ) ಯಾಕೊ ಅವಳ ಕಥೆ ಕೇಳಿ ಕಣ್ಣಂಚಿನಲ್ಲಿ ನೀರು ತುಂಬಿತ್ತು, ಅವಳ ಗಂಡನನ್ನು ಒಳಗೆ ಕರೆದು ಕೆಲವು ಬುದ್ಧಿ ಮಾತು ಹೇಳಿ ಮತ್ತೆ ಬರಲು ದಿನಾಂಕ ಕೊಟ್ಟು ಕಳುಹಿಸಿದೆ.
ಮನೆಗೆ ಬಂದು ನಾನು ಆಕೆ ಹೇಳಿದ ಕೆಲವು ವಿಷಯ ಮತ್ತು ಟೀ ಕಥೆಯನ್ನು ನನ್ನವರ ಬಳಿ ಚರ್ಚಿಸಿದೆ.ಅದಕ್ಕೆ ಇವರು ಯಾವ ಊರು ಅವರದ್ದು ಅಂತ ಕೇಳಿದ್ರು ನಾನು ಹೇಳಿದೆ, ಹಾ ಆ ಕಡೆ ಬೆಳಗಿನ ಬಸ್ ಬೇಗ ಬರುತ್ತದೆ ಅವರು ಸರಿಯಾಗಿ ತಿಂಡಿಮಾಡಿ ಬಂದಿರಲ್ಲ. ನೀನೇ ಒಂದು ಬಾಕ್ಸ್ ಗೆ ತಿಂಡಿ ಹಾಕಿಕೊಂಡು ಹೋಗಿ ಕೊಡು…ಮತ್ತೆ ಎಲ್ಲ ಸರಿಹೋಗುತ್ತೆ ಅಂದ್ರು.

ನನ್ನವರು ತಿಳಿಸಿದಂತೆ ಆ ದಂಪತಿಗಳ ಕೇಸ್ ಇದ್ದ ದಿನ ತಿಂಡಿ ಬಾಕ್ಸ್ ಗೆ ಹಾಕಿ ಆಕೆಗೆ ತೊಗೊಂಡು ಹೋಗ್ತೀದ್ದೆ. ಆಫೀಸ್ ಹುಡುಗಿ ಅವಳಿಗೆ ಆ ತಿಂಡಿ ಕೊಡುತ್ತಿದ್ದಳು….ಅವಳು ತಿಂದ ನಂತರವೇ ನಾನು ಕೆಸ್ ಬಗ್ಗೆ ವಿಚಾರಿಸುತ್ತದೆ, ಅಂತದ್ರಲ್ಲೂ ಆಕೆ ಸುಸ್ತಾಗಿದ್ದಳು..ಅವಳ ತೀರಾ ವೈಯಕ್ತಿಕ ಮಾಹಿತಿಯನ್ನು ಕಲೆಹಾಕಿದ್ದರಿಂದ ಅವಳ ಗಂಡನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿಕೊಂಡು ಬರಲು ಹೇಳಿದೆ. ಹಣವಿಲ್ಲಾವೆಂದಾಗ ನನ್ನ ಗೆಳತಿ ಡಾ.ಶರ್ಮಿಳಾಗೆ ಪೋನ್ ಮಾಡಿ ಆಕೆಯನ್ನು ಪರೀಕ್ಷಿಸಿ ರಿಪೋರ್ಟ್ ತಿಳಿಸುವಂತೆ ಹೇಳಿದೆ.
ಫಲಿತಾಂಶ ಒಳ್ಳೆಯದು ಇತ್ತು, ಆಕೆ ಪುನಃ ಗರ್ಭಿಣಿ ಆಗಿದ್ದಳು. ಅವಳ ಗಂಡನಿಗೆ ತಿಳಿ ಹೇಳಿದೆ. ಇಲ್ಲ… ಮೇಡಂ, ಈ ಮಗು ನನಗೆ ಬೇಕು. ಅದು ಹೆಣ್ಣು ಮಗು ಬೇಕು ಅಂತ ನನಗೆ ಆಸೆ ಇದೆ ಅಂದ. ಸರಿ ಹಾಗಿದ್ರೆ ಅವಳನ್ನು ಚೆನ್ನಾಗಿ ನೋಡ್ಕೊ …ಇನ್ನೊಂದು ಎರಡು ಕೌನ್ಸೆಲಿಂಗ್ ನೋಡಿ ಮತ್ತೆ ಕೇಸು ಮುಗಿಸುವ ಅಂತೇಳಿ ಕಳುಹಿಸಿದೆ.
ಅದೇ ದಿನ ರಾತ್ರಿ ಸುಮಾರು ಹನ್ನೊಂದು ಗಂಟೆಗೆ ನನಗೆ ಒಂದು ಪೋನ್ ಬಂತು. ಆ ಕಡೆಯಿಂದ ಆ ನಯನಾ ಒಂದೆ ಸಮನೆ ಅಳುತ್ತಲಿದ್ಲು. ಸಮಾಧಾನ ಮಾಡಿದ ಮೇಲೆ ಗಂಡ ಒಲೆಗೆ ಹಾಕುವ ಚಕ್ಕೆ ಸೌದೆಯಿಂದ ಅವಳನ್ನು ಬಹಳವಾಗಿ ಹೋಡೆದ್ದಿದ್ದು, ಅಲ್ಲದೆ ನಿನ್ನ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ, ಅಲ್ಲದೆ ನಿನ್ನನ್ನು ಪುನಃ ನನ್ನೊಟ್ಟಿಗೆ ಸೇರಿಸುತ್ತಾಳೆ ಆ ಲಾಯರು. ನಿನ್ನನ್ನು ಸಾಯಿಸಿ ಆ ಲಾಯರನ್ನು ಕೊಚ್ಚಿ ಹಾಕುತ್ತೇನೆ ಎಂದೆಲ್ಲಾ ಗಲಾಟೆ ಮಾಡಿದ್ದಾನೆ. ಇದನ್ನು ಕೇಳಿದ ಹುಡುಗಿ ಮೇಡಂ… ನಾನು ಸತ್ರೂ ಪರವಾಗಿಲ್ಲ. ನಿಮಗೆ ಮಾತ್ರ ಏನು ಆಗಬಾರದು. ಅದಕ್ಕೆ ಪೋನ್ ಮಾಡಿದೆ ಅಂದ್ಲು… ನಾನು ನೀನು ನಾಳೆ ಆಫೀಸ್ಗೆ ಬಾ, ನಿಮ್ಮ ಕೇಸ್ ಪುನಃ ತೆಗೆದುಕೊಳ್ಳುತ್ತೇನೆ. ಅವನಿಗೂ ನಾಳೆ ಬರಲು ತಿಳಿಸುತ್ತೇನೆ. ಹುಷಾರಾಗಿರು… ಅಂತೇಳಿ ಪೋನ್ ಇಟ್ಟೆ.
ಯಾಕೊ ರಾತ್ರಿ ಪೂರ ನಿದ್ದೆ ಹತ್ತಲಿಲ್ಲ. ಅವಳ ಆಕ್ರಂದನವೇ ಕೇಳುತ್ತಿತ್ತು, ಇವರು S I ಗೆ ಪೋನ್ ಮಾಡು ಅಂದ್ರು. ಅದು ನನಗಿಷ್ಟವಿರಲಿಲ್ಲ. ಕಾರಣ ಪೋಲಿಸ್ ಎಂಟ್ರಿ ಆದ್ರೆ ಆ ಸಂಸಾರ ಸರಿಹೋಗಲ್ಲ. ಬದಲು ಇಬ್ಬರೂ ಬೇರೆ ಬೇರೆ ಆಗ ಬೇಕಾಗುತ್ತದೆ, ಹಂಗಾಂದ್ರೇ ಹುಟ್ಟಿರುವ, ಹುಟ್ಟು ತಲಿರುವ ಮಗುವಿನ ಕಥೆ ಏನು?. ಯೋಚನೆ ಮಾಡಿ ನನಗೆ ಗೊತ್ತಿರುವ ಒಬ್ಬ ಕಾನ್ಸ್ಟೆಬ್ಬಲ್ ಗೆ ಪೋನ್ ಮಾಡಿ ಅವನಿಗೆ ಸ್ವಲ್ಪ ಹೆದರಿಸುವಂತೆ ಹೇಳಿ ಹಾಗೆ ಆತ ನನ್ನನ್ನು ನೋಡಲು ಹೆಂಡತಿಯನ್ನು ಕರಕೊಂಡು ಬೆಳಿಗ್ಗೆ ಕಛೇರಿಗೆ ಬರಲು ಹೇಳಿಸಿದೆ.
ಅದರಂತೆ ಬೆಳಿಗ್ಗೆ ಇಬ್ಬರು ನನ್ನ ಆಫೀಸ್ ಗೆ ಬಂದ್ರು, ಅವನನ್ನು ಕೇಳಿದೆ ನನ್ನ ಕೊಚ್ಚಿ ಹಾಕ್ತೀಯಾ… ಅಂತೇ, ‘ಇಲ್ಲ ಮೇಡಂ, ನಾನು ಹಾಗೆ ಹೇಳೆ ಇಲ್ಲ’ ಅಂತ ವಾದಿಸಿದ. ಆ ನಯನಾಳನ್ನು ಮಾತ್ರ ನೋಡುವ ಹಾಗಿರಲಿಲ್ಲ. ಮೈತುಂಬಾ ಕಂದಿದ ಗಾಯಗಳು, ಊದಿಕೊಂಡ ಕಣ್ಣು, ನೋಡಿ ಬಹಳ ಬೇಸರವಾಯಿತು. ಅವನಿಗೆ ಅವಳಿಗೆ ಮೇಡಿಕಲ್ ಟೆಸ್ಟ್ ಮಾಡಿಸಿ ಪೋಲಿಸ್ ಕಂಪ್ಲೇಂಟ್ ಮಾಡತ್ತೀನಿ. ಕಂಬಿ ಎಣಿಸುವಂತೆ ಇರು ಅಂತ ಜೋರಾಗಿ ಮಾತಾಡಿದೆ. ಆತ ಹೆದರಿಕೊಂಡ ಇನ್ನೂ ಯಾವತ್ತೂ ಹೀಗೆ ಮಾಡಲ್ಲ ಅಂತನೂ ತಪ್ಪೊಪ್ಪಿಗೆ ಬರೆದು ಕೊಟ್ಟ, ಅವನಿಗೆ ಅರಿವು ಆಗುವ ಹಾಗೆ ಕೆಲವು ಬುದ್ಧಿ ಮಾತು ಹೇಳಿ, ಆ ಹುಡುಗಿಗೆ ಡಾ.ಶರ್ಮಿಳಾಗೆ ಹೇಳಿ ಟ್ರೀಟ್ ಮಾಡಿಸಿದೆ.

ಅದರ ನಂತರ ಪ್ರತಿ ದಿನದ ಅವರಿಬ್ಬರ ನಡುವಳಿಕೆಯನ್ನು ರಿಪೋರ್ಟ್ ಮಾಡುವಂತೆ ತಿಳಿಸಿ ಕಳಿಸಿದೆ, ಆದಾದ ನಂತರ ನಾಲ್ಕು ಸಿಟಿಂಗ್ ಕೌನ್ಸಿಲ್ ಮಾಡಿದೆ….ಅಂದ್ರೆ ನಾಲ್ಕು ತಿಂಗಳು, ಕೊನೆಯ ಸಿಟಿಂಗ್ಗೆ ಬಂದಾಗ ನಯನಾ ತುಂಬಾ ಗೆಲುವಾಗಿದ್ದಳು. ಅವನು ಸರಿಯಾಗಿದ್ದ. ಪಶ್ಚಾತ್ತಾಪ ಪಟ್ಟಿದ. ಅದರ ಪರಿಣಾಮ ನನ್ನ ಮುಖ ನೋಡಿ ಮಾತಾಡಲು ಹಿಂಜರಿಯುತ್ತಿದ್ದ. ಆಕೆಯನ್ನು ಕೇಳಿದಾಗ ‘ಇಲ್ಲ ಮೇಡಂ, ಈಗ ತುಂಬಾ ಚೆನ್ನಾಗಿ ನೋಡಿಕೊಳ್ತಿದ್ದಿದ್ದಾರೆ. ನೀರಿನ ಬಿಂದಿಗೆ ಸಹ ಎತ್ತಲು ಬಿಟ್ಟಿಲ್ಲ, ಅವರೆ ನೀರು ತುಂಬಿಸುತ್ತಾರೆ, ನನಗೆ ಅಡುಗೆ ಮಾಡಲು ಕಷ್ಟವಾದಗ ಅವರೆ ಅಡುಗೆ ಮಾಡ್ತಾರೆ, ಮಗನನ್ನು ಚೆನ್ನಾಗಿ ನೋಡಿಕೊಳ್ತಿದ್ದಾರೆ’… ಅಂತ ,
ಅವನನ್ನು ಕೇಳಿದಾಗ ಹೌದು ಮೇಡಂ ತಪ್ಪಾಗಿದೆ. ನಿಮ್ಮ ಬಗ್ಗೆಯು ತಪ್ಪಾಗಿ ಮಾತಾಡಿದ್ದೇನೆ. ಇನ್ನು ಯಾವುತ್ತೊ ಈ ತಪ್ಪು ಮಾಡಲ್ಲ, ಆಶ್ರಯ ಯೋಜನೆ ಅಡಿಯಲ್ಲಿ ಮನೆಗೆ ಅರ್ಜಿ ಸಲ್ಲಿಸಿದ್ದಿನಿ. ಅದು ಬಂದ ಕೊಡಲೆ ಮನೆ ಮಾಡುತ್ತೇನೆ. ನಾನು ಬಿ.ಎಸ್.ಎನ್.ಎಲ್ ಟವರ್ ಕಾಯುವ ಕೆಲಸದಿಂದ ನನಗೆ ಬರುವ ಸಂಬಳ ಸಾಕಗುವುದಿಲ್ಲಾ ಅಂತಾ ಧರ್ಮಸ್ಥಳ ಸಂಘದಲ್ಲಿ ಹಾಗೂ ಇನ್ನೊಂದೆರಡು ಕಡೆ ಪಾರ್ಟ ಟೈಮ್ ಕೆಲಸ ಮಾಡುತ್ತೇನೆ ಮೇಡಂ, ಅಂದಾಗ ಒಂದು ನೆಮ್ಮದಿ ಉಸಿರು ನನ್ನಿಂದ ಬಂತು.
ಇಬ್ಬರಿಂದಲೂ ಕೆಲವು ಷರತ್ತುಗಳಿಗೆ ಸಹಿ ಹಾಕಿಸಿ ಆ ಕೆಸ್ ನ್ನು ಮುಕ್ತಾಯ ಮಾಡಿ ಹೋಗಿ ಬನ್ನಿ ಎಂದೆ. ಗಂಡ ಹೆಂಡತಿ ಇಬ್ಬರು ಎದ್ದು ಛೆಂಬರನಿಂದ ಹೊರಗೆ ಹೋದ್ರು. ನಾನು ಬೇರೆ ಕೇಸ್ ನೋಡುವುದ್ರಲ್ಲಿದ್ದೆ. ಅಷ್ಟ್ರಲೀ ಆ ಹುಡುಗಿ ಬಂದು ‘ಮೇಡಂ… ನೀವು ಮಾಡಿರುವ ಸಹಾಯವನ್ನು ನಾನು ಯಾವತ್ತೂ ಮರೆಯಲ್ಲ…ಗಂಡ ನನಗೆ ಬೇಡ್ವೆ ಬೇಡ ಅಂತ ಬಂದವಳಿಗೆ ಸಂಸಾರ ಉಳಿಸಿಕೊಟ್ಟಿದ್ದಿರಾ…ಅಲ್ಲದೆ ನನ್ನ ಮಕ್ಕಳಿಗೆ ಅಪ್ಪನ ಪ್ರೀತಿ ಸಿಗುವಂತೆ ಮಾಡಿದ್ದೀರಾ…ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ, ನನಗೆ ಹೆಣ್ಣು ಮಗು ಹುಟ್ಟಿದ್ರೆ ನಿಮ್ಮ ಹೆಸರು ಇಡುತ್ತೇನೆ. ನಿಮ್ಮಷ್ಟೇ ಧೈರ್ಯವಂತೆ ಆಗ್ಲಿ’… ಅಂತ ನನ್ನ ಕಾಲು ಮುಟ್ಟಿ ನಮಸ್ಕರಿಸಲು ಬಂದಾಗ ಅವಳ ಭುಜ ಹಿಡಿದು ಇದೆಲ್ಲಾ ಏನು ಬೇಡ ಧೈರ್ಯವಾಗಿ ಜೀವನ ಎದುರಿಸು ಅಂದು ಅವಳಿಗೆ ಗಂಡನ ಬಿಟ್ಟು ಹೋಗುವ, ಸಾಯುವ ಯೋಚನೆ ಮಾಡಬೇಡ ಯಾವತ್ತಿಗೂ ಎಂದೆ. ಏನೇ ತೊಂದರೆ ಆದ್ರೂ ನನಗೆ ಪೋನ್ ಮಾಡು ನಾನಿದ್ದೇನೆ ಎನ್ನುವ ಭರವಸೆಯೊಂದಿಗೆ ಹೆಜ್ಜೆ ಹಾಕುತ್ತಾ ನಯನ ಮಿನುಗುತ್ತಿದ್ದ ಅವಳ ಕಣ್ಣೋರಿಸಿಕೊಂಡು ಹೊರಟು ಹೋದ್ಲು ನಾನು ನಿಜ ಗದ್ಗದಿತವಾದೆ…ಕಣ್ಣಂಚಿನಲ್ಲಿ ಸಂತೋಷಕ್ಕೆ ನೀರು ತುಂಬಿ ಬಂದಿತ್ತು.
ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕತೆಗಳು…ಹಿಂದಿನ ಸಂಚಿಕೆಗಳು :
- ನಿರ್ಮಲಾ ಮತ್ತು ರಾಜೇಶ್ ಡೈವೋರ್ಸ್ ಕತೆ – (ಭಾಗ೧)
- ನಿರ್ಮಲಾ ಮತ್ತು ರಾಜೇಶ್ ಡೈವೋರ್ಸ್ ಕತೆ – (ಭಾಗ ೨)
- ಮತ್ತೆ ಬೆಸೆದ ಬೆಸುಗೆ ಕತೆ
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ೧)
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ೨)
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ೩)
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ ೪)
- ಹೇಳೋದು ವೇದಾಂತ ತಿನ್ನೋದು ಬದನೆಕಾಯಿ
- ಹೆಚ್.ಆರ್.ಪವಿತ್ರ ಧರ್ಮಪ್ಪ