ಅವಧಿಪೂರ್ವವಾಗಿ ಹುಟ್ಟಿದ ಮಕ್ಕಳು -ಸುದರ್ಶನ್ ಪ್ರಸಾದ್

ಅವಧಿಪೂರ್ವವಾಗಿ ಹುಟ್ಟಿದ ಮಕ್ಕಳು ಅತ್ಯಂತ ಸೂಕ್ಷ್ಮವಾಗಿದ್ದು ತುರ್ತು ನಿಗಾ ಘಟಕದಿಂದ ಹೊರಬಂದ ನಂತರವೂ ಅಷ್ಟೇ ಪ್ರಮಾಣದ ಆರೈಕೆ ಅವಶ್ಯವಾಗಿರುತ್ತದೆ. ನಿಯಮಿತವಾಗಿ ಮಕ್ಕಳ ತಜ್ಞರಿಂದ ತಪಾಸಣೆ ಹಾಗೂ ಅಗತ್ಯವಿರುವ ಚುಚ್ಚು ಮದ್ದುಗಳನ್ನು ಸರಿಯಾದ ಸಮಯಕ್ಕೆ ನೀಡುವುದು ಅತೀ ಅವಶ್ಯಕ – ಸುದರ್ಶನ್ ಪ್ರಸಾದ್, ತಪ್ಪದೆ ಮುಂದೆ ಓದಿ…

‘ನವಮಾಸ ಬೇಕು ಹುಟ್ಟಿ ಬರುವುದಕ್ಕೆ, ಕ್ಷಣ ಮಾತ್ರ ಸಾಕು ಬಿಟ್ಟು ಹೋಗುವುದಕ್ಕೆ’ ಎಂಬುದು ಕವಿವಾಣಿ. ಅದರಂತೆಯೇ ತಾಯಿಯ ದೇಹದಲ್ಲಿ ಜೀವವೊಂದು ರೂಪ ತಳೆಯಲು ಒಂಬತ್ತು ತಿಂಗಳ ಕಾಲಾವಕಾಶ ಬೇಕು. ಆ ನಲವತ್ತು ವಾರಗಳಲ್ಲಿ ಪ್ರತಿ ಕ್ಷಣವೂ ಮಹತ್ವದ್ದಾಗಿದ್ದು ಮಗುವಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಆದರೆ ಕೆಲವೊಂದು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಅವಧಿ ಮುಗಿಯುವ ಮುನ್ನವೇ ಮಗು ತಾಯಿಯ ಗರ್ಭದಿಂದ ಹೊರಬರಬೇಕಾಗುತ್ತದೆ. ಅವಧಿಪೂರ್ವವಾಗಿ ಜನಿಸಿದ ಮಗು ನಿಗಾ ವಹಿಸಿದರೆ ಆರೋಗ್ಯವಾಗಿರುತ್ತದೆ, ಇಲ್ಲವಾದರೆ ಊನವಾಗಬಹುದು ಅಥವಾ ಬಿಟ್ಟು ಹೋಗಬಹುದು. ಆದ್ದರಿಂದ ಇದೊಂದು ಸೂಕ್ಷ್ಮ ವಿಚಾರವೇ ಸರಿ.

ಫೋಟೋ ಕೃಪೆ : google

ಸಂಭವನೀಯ ಕಾರಣಗಳು:

*ಗರ್ಭಾವಸ್ಥೆಯಲ್ಲಿ ಉಂಟಾಗುವ ಯೋನಿ/ಗರ್ಭಕಂಠದ ಸೋಂಕು.

*ಗರ್ಭದಲ್ಲಿ ನೀರೊಡೆಯುವುದು.

*ಕಡಿಮೆ ಸಾಮರ್ಥ್ಯದ ಗರ್ಭಕಂಠ.

*ಮಾಸುಚೀಲದ ಬೆಳವಣಿಗೆಯ ತೊಂದರೆಗಳು.

*ಈ ಮೊದಲು ಅವಧಿಪೂರ್ವ ಮಗುವಿನ ಜನನ.

*ಅವಳಿ ಅಥವಾ ತ್ರಿವಳಿ ಮಕ್ಕಳೊಂದಿಗಿನ ಗರ್ಭ.

*ಗರ್ಭಿಣಿಯರಲ್ಲಿ ಪೋಷಕಾಂಶಗಳ ಕೊರತೆ.

*ಎರಡು ಗರ್ಭಧಾರಣೆ ನಡುವೆ ಕಡಿಮೆ ಅಂತರ.

*ಮದ್ಯಪಾನ ಅಥವಾ ಧೂಮಪಾನದಂತಹಾ ಅಭ್ಯಾಸಗಳು.

*ರಕ್ತಹೀನತೆ.

*ಅತೀ ಕಡಿಮೆ ಅಥವಾ ಅತೀ ಹೆಚ್ಚಿರುವ ದೇಹದ ತೂಕ.

*ಅಧಿಕ ರಕ್ತದೊತ್ತಡ, ಕಡಿಮೆ ರಕ್ತದೊತ್ತಡ, ಮಧುಮೇಹ.. ಮುಂತಾದವು ಅವಧಿಪೂರ್ವ ಜನನಕ್ಕೆ ಕಾರಣವಾಗಬಲ್ಲವು.

ಫೋಟೋ ಕೃಪೆ : google

ಅವಧಿಪೂರ್ವ ಜನನದ ಆಗುಹೋಗುಗಳು:

ಮಗುಜನಿಸಿದ ತಕ್ಷಣವೇ ರಕ್ತಪರೀಕ್ಷೆ, ಕ್ಷ-ಕಿರಣ, ಎಕೋಕಾರ್ಡಿಯೋಗ್ರಾಂ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮುಖಾಂತರ ಹೃದಯ, ಮೆದುಳು ಶ್ವಾಸಕೋಶ, ಜಠರ, ಕರುಳು, ಕಣ್ಣು ಮುಂತಾದವುಗಳ ಪರೀಕ್ಷೆ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಯಾವುದಾದರೂ ತೊಂದರೆಗಳು ಕಂಡುಬಂದರೆ ಅವುಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಕಾಡುವ ತೊಂದರೆಗಳು ಮುಖ್ಯವಾಗಿ..

ಉಸಿರಾಟದ ತೊಂದರೆ:

ಅವಧಿಪೂರ್ವವಾಗಿ ಜನಿಸಿದ ಮಕ್ಕಳಲ್ಲಿ ಶ್ವಾಸಕೋಶದ ಕುಂಠಿತ ಬೆಳವಣಿಗೆಯ ಕಾರಣದಿಂದ ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ. ಈ ಸಂದರ್ಭದಲ್ಲಿ ಎನ್ಐಸಿಯು ಘಟಕದಲ್ಲಿಟ್ಟು ಕೃತಕ ಉಸಿರಾಟದ ವ್ಯವಸ್ಥೆ ಮಾಡುವುದು ಅತ್ಯವಶ್ಯಕ. ಇದರೊಂದಿಗೆ ಗಾಳಿಯ ವಿನಿಮಯಕ್ಕೆ ಅಗತ್ಯವಾದ ‘ಸರ್ಫ್ಯಾಕ್ಟಂಟ್’ ಅಂಶವನ್ನು ಒದಗಿಸುವುದು ಸಹಾ ಮುಖ್ಯ.

ದೇಹದ ಉಷ್ಣಾಂಶದಲ್ಲಿ ಏರುಪೇರು:

ಕೊಬ್ಬಿನ ಅಂಶ ಕಡಿಮೆ ಇರುವ ಕಾರಣ ಅವಧಿಪೂರ್ವ ಶಿಶುಗಳ ದೈಹಿಕ ಉಷ್ಣಾಂಶ ಸ್ಥಿಮಿತದಲ್ಲಿರುವುದಿಲ್ಲ. ಗರ್ಭದಲ್ಲಿ ಬೆಚ್ಚಗಿದ್ದ ಭ್ರೂಣವು ಹೊರಬಂದ ಬಳಿಕ ತಂಪಾದ ವಾತಾವರಣದಿಂದ ತೊಂದರೆ ಅನುಭವಿಸುವಂತಾಗುತ್ತದೆ. ಆದ್ದರಿಂದ ಉಷ್ಣತೆಯನ್ನು ಕಾಪಾಡಲು ಇನ್ಕ್ಯುಬೇಟರ್ ಮತ್ತು ಕಾಂಗರೂ ಕೇರ್ ವಿಧಾನವನ್ನು
ಬಳಸಬೇಕಾಗುತ್ತದೆ.

ಪೌಷ್ಟಿಕಾಂಶಗಳ ಕೊರತೆ:

ಮಗುವಿಗೆ ಹಾಲನ್ನು ಚೀಪುವ ಹಾಗೂ ನುಂಗುವ ಸಾಮರ್ಥ್ಯ ಇಲ್ಲದೇ ಇರುವುದು ಮತ್ತು ಕರುಳಿನ ಬೆಳವಣಿಗೆ ಅಸಮರ್ಪಕವಾಗಿರುವ ಕಾರಣ ಪೌಷ್ಟಿಕಾಂಶಗಳ ಕೊರತೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಎದೆಹಾಲನ್ನು ಹಿಂಡಿ ನಳಿಕೆಯ ಮೂಲಕ ನೀಡುವುದು, ರಕ್ತದ ಮುಖಾಂತರ ಗ್ಲೂಕೋಸ್, ಸೋಡಿಯಂ, ಪೊಟ್ಯಾಷಿಯಂ ಇತ್ಯಾದಿ ಪೋಷಕಾಂಶಗಳನ್ನು ಒದಗಿಸುವುದು ಅಗತ್ಯ. ಮೆದುಳಿನ ಬೆಳವಣಿಗೆಗೆ ದೇಹದಲ್ಲಿ ಸಕ್ಕರೆ ಅಂಶ ಸರಿಯಾದ ಪ್ರಮಾಣದಲ್ಲಿರುವುದು ಮುಖ್ಯವಾಗುತ್ತದೆ.

ಪಿತ್ತಕಾಮಾಲೆ:

ಯಕೃತ್ ಬೆಳವಣಿಗೆ ಅಸಮರ್ಪಕವಾಗಿರುವುದರಿಂದ ಹಾಗೂ ರಕ್ತಕಣಗಳ ಜೀವಾವಧಿ ಕಡಿಮೆಯಿರುವುದರಿಂದ ರಕ್ತದಲ್ಲಿ ಪಿತ್ತಕಾಮಾಲೆಯ ಅಂಶವು ಹೆಚ್ಚುತ್ತದೆ. ಇದು ಮಿತಿ ಮೀರಿದರೆ ಫೋಟೋಥೆರಪಿ ಮಾಡಬೇಕಾಗುತ್ತದೆ. ಅನೇಕ ಅವಧಿಪೂರ್ವ ಶಿಶುಗಳಿಗೆ ರಕ್ತದ ಕೊರತೆ ಕಾಡಲಿದ್ದು ದಾನಿಗಳಿಂದ ರಕ್ತವನ್ನು ಪಡೆದು ನೀಡಲಾಗುತ್ತದೆ.

ಮೆದುಳಿನಲ್ಲಿ ರಕ್ತಸ್ರಾವ:

ಅವಧಿಗೂ ಮುನ್ನ ಜನಿಸಿದ ಮಕ್ಕಳ ಮೆದುಳು ತುಂಬಾ ಸೂಕ್ಷ್ಮವಾಗಿದ್ದು ರಕ್ತಸ್ರಾವವಾಗುವ ಸಂಭಾವ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಇಂತಹಾ ಶಿಶುಗಳ ಆರೈಕೆ ಮಾಡುವಾಗ, ಮಗ್ಗುಲು ತಿರುಗಿಸುವಾಗ ಅಥವಾ ಹಾಲುಣಿಸುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ.

ದೃಷ್ಟಿದೋಷ:

ಕಣ್ಣಿನ ಒಳಭಾಗವು ತುಂಬಾ ಸೂಕ್ಷ್ಮವಾಗಿದ್ದು ಇಂತಹಾ ಮಗುವಿಗೆ ಆಮ್ಲಜನಕ ನೀಡುವಾಗ ಜಾಗರೂಕತೆ ಮುಖ್ಯ. ಅಲ್ಲದೇ ಪ್ರಖರವಾದ ಬೆಳಕು ಮಗುವಿನ ಕಣ್ಣಿಗೆ ಬೀಳದಂತೆ ಎಚ್ಚರಿಕೆ ವಹಿಸುವುದು ಪೋಷಕರ ಕರ್ತವ್ಯ. ಇಂತಹಾ ಮಕ್ಕಳು ಬೆಳೆಯುವ ಸಂಧರ್ಭದಲ್ಲಿ ಅಗತ್ಯವಾದ ವಿಟಮಿನ್ ಎ ಪ್ರಮಾಣ ಲಭ್ಯವಾಗುವಂತೆ ಮಾಡುವುದು ಸಹಾ ಅತ್ಯವಶ್ಯಕ.

ಸೋಂಕುಗಳು:

ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಕಾರಣ ಈ ಮಕ್ಕಳಲ್ಲಿ ಸೋಂಕುಗಳು ತಗಲುವ ಸಾಧ್ಯತೆ ಹೆಚ್ಚು. ಹೆರಿಗೆ ಕೋಣೆ, ಶಿಶು ಘಟಕ ಹಾಗೂ ಶಿಶುವನ್ನು ಆರೈಕೆ ನೀಡುವ ಎಲ್ಲಾ
ಜಾಗದಲ್ಲಿಯೂ ಸ್ವಚ್ಛತೆಯನ್ನು ಕಾಪಾಡುವುದು ಬಹಳ ಮುಖ್ಯ.

ಫೋಟೋ ಕೃಪೆ : google

ಇವುಗಳ ಕುರಿತು ಎಚ್ಚರವಿರಲಿ:

*ಮಗುವಿನ ದೇಹ ತೀರಾ ತಣ್ಣಗಾಗಿರುವುದು ಅಥವಾ ಬಿಸಿಯೇರುವುದು.

*ಲವಲವಿಕೆಯಿಲ್ಲದೇ ಮಲಗಿರುವುದು ಅಥವಾ ಚೀರುವುದು.

*ಪ್ರತಿ ನಿಮಿಷಕ್ಕೆ ಅರವತ್ತಕ್ಕಿಂತ ಹೆಚ್ಚು ಬಾರಿ ಉಸಿರಾಡುವುದು ಅಥವಾ ಹದಿನೈದು ಸೆಕೆಂಡುಗಳಿಗೂ ಹೆಚ್ಚು ಸಮಯ ಉಸಿರಾಟ ಸ್ಥಬ್ದವಾಗುವುದು.

*ಎರಡ್ಮೂರು ತಾಸಿನ ನಂತರವೂ ಹಾಲು ಕುಡಿಯುವುದನ್ನು ನಿರಾಕರಿಸುವುದು.

*ಹೊಟ್ಟೆ ಉಬ್ಬರ, ವಾಂತಿ, ಭೇದಿ.

*ಹೊಕ್ಕಳಿನ ಸುತ್ತ ಕೆಂಪಾಗುವುದು.

*ಮುಖ, ಕೈ ಹಾಗೂ ಕಾಲಿನ ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು.

*ಕೈ ಅಥವಾ ಕಾಲನ್ನು ಮುಟ್ಟಿದಾಗ ನೋವಿನಿಂದ ಕಿರುಚುವುದು.

ಇತ್ಯಾದಿ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅತೀ ಅವಶ್ಯಕ.

ಫೋಟೋ ಕೃಪೆ : google

ಅವಧಿ ಪೂರ್ವ ಜನನ ತಪ್ಪಿಸಬಹುದೇ?

ಈ ಪ್ರಶ್ನೆಗೆ ಸಂಪೂರ್ಣವಾಗಿ ಹೌದು ಎಂದು ಉತ್ತರಿಸಲು ಆಗದಿದ್ದರೂ ಗರ್ಭಧಾರಣೆಗೂ ಮುನ್ನ ಒಂದಿಷ್ಟು ಶಿಸ್ತು ಕ್ರಮಗಳನ್ನು ಅನುಸರಿಸುವುದರಿಂದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಮುಖ್ಯವಾಗಿ

*ದೇಹದ ತೂಕವನ್ನು ಆರೋಗ್ಯಕರವಾಗಿ ನಿಯಂತ್ರಿಸುವುದು.

*ಮಾನಸಿಕ ಮತ್ತು ದೈಹಿಕ ಒತ್ತಡಗಳಿಂದ ಮುಕ್ತರಾಗುವುದು.

*ವ್ಯಾಯಾಮ, ಯೋಗ, ಧ್ಯಾನ, ಪ್ರಾಣಾಯಾಮದಂತಹಾ ಚಟುವಟಿಕೆಗಳನ್ನು ಅಭ್ಯಸಿಸುವುದು.

*ಪತಿ-ಪತ್ನಿಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು.

*ವೈದ್ಯರ ಸಲಹೆಯ ವಿನಃ ಔಷಧ ಸೇವನೆಗಳನ್ನು ಮಾಡದೇ ಇರುವುದು.

*ಫಾಸ್ಟ್ ಫುಡ್, ಜಂಕ್ ಫುಡ್ ಇತ್ಯಾದಿಗಳನ್ನು ತ್ಯಜಿಸಿ ಆರೋಗ್ಯಕರ ಆಹಾರಗಳನ್ನು ಸೇವಿಸುವುದು..

ಮುಂತಾದ ಕ್ರಮಗಳು ಉಪಯುಕ್ತ.

ಫೋಟೋ ಕೃಪೆ : google

ಮಗು ಮನೆಗೆ ಬಂದಮೇಲೆ :

ಅವಧಿಪೂರ್ವವಾಗಿ ಹುಟ್ಟಿದ ಮಕ್ಕಳು ಅತ್ಯಂತ ಸೂಕ್ಷ್ಮವಾಗಿದ್ದು ತುರ್ತು ನಿಗಾ ಘಟಕದಿಂದ ಹೊರಬಂದ ನಂತರವೂ ಅಷ್ಟೇ ಪ್ರಮಾಣದ ಆರೈಕೆ ಅವಶ್ಯವಾಗಿರುತ್ತದೆ. ಮಗುವನ್ನು ಮಲಗಿಸುವ ಕೋಣೆಯು ಸ್ವಚ್ಛವಾಗಿ, ನಿಶ್ಯಬ್ಧವಾಗಿ, ಹಿತ-ಮಿತವಾದ ಬೆಳಕಿನೊಂದಿಗೆ ಸುರಕ್ಷಿತವಾಗಿರುವುದು, ಮಗುವು ಎಚ್ಚರವಿದ್ದಾಗ ಸಾಧ್ಯವಾದಷ್ಟು ಮುದ್ದಿಸಿ, ಚಲನ-ವಲನಗಳನ್ನು ಗಮನಿಸಿ ಮಗುವಿನ ಕಣ್ಣಿಗೆ ಹಾಗೂ ಮನಸ್ಸಿಗೆ ಹಿತವಾಗುವಂತೆ ನೋಡಿಕೊಳ್ಳುವುದು ಅತೀ ಮುಖ್ಯ. ಬಣ್ಣದ ಆಟಿಕೆಗಳನ್ನು ಮಗುವಿನ ತೊಟ್ಟಿಲಿಗೆ ಪೋಣಿಸುವುದು, ಲಘು ಸಂಗೀತವನ್ನು ಆಲಿಸುವಂತೆ ಮಾಡುವುದು ಮಗುವಿನ ಗ್ರಹಿಕೆಯ ಸಾಮರ್ಥ್ಯ, ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅನುಕೂಲ. ನಿಯಮಿತವಾಗಿ ಮಕ್ಕಳ ತಜ್ಞರಿಂದ ತಪಾಸಣೆ ಹಾಗೂ ಅಗತ್ಯವಿರುವ ಚುಚ್ಚು ಮದ್ದುಗಳನ್ನು ಸರಿಯಾದ ಸಮಯಕ್ಕೆ ನೀಡುವುದು ಅತೀ ಅವಶ್ಯಕ. ಒಟ್ಟಿನಲ್ಲಿ ಹೇಳುವುದಾದರೆ ಈ ಸಂದರ್ಭದಲ್ಲಿ ಧೈರ್ಯಗೆಡದೇ ಆತ್ಮವಿಶ್ವಾಸದಿಂದ, ಕುಟುಂಬದವರ ಬೆಂಬಲದೊಂದಿಗೆ ಮಗುವಿಗೆ ಅತ್ಯುತ್ತಮ ಆರೈಕೆ ನೀಡಿದ್ದಲ್ಲಿ ಉತ್ತಮ ಪ್ರಜೆಯೊಬ್ಬ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.


  • ಸುದರ್ಶನ್ ಪ್ರಸಾದ್ ಕೊಪ್ಪ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW