ಡಾ. ಆಗುಂಬೆ ಗಣೇಶ್ ಹೆಗ್ಗಡೆ ಅವರ ‘ಸೌಭಾಗ್ಯ ವಂಚಿತೆ’ ಪುಸ್ತಕದ ಕುರಿತು ಹೇಮಂತ್ ಪಾರೇರಾ ಅವರು ಓದುಗರ ಮುಂದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಪುಸ್ತಕ : ಸೌಭಾಗ್ಯ ವಂಚಿತೆ
ಲೇಖಕರು : ಡಾ. ಆಗುಂಬೆ ಗಣೇಶ್ ಹೆಗ್ಗಡೆ
ಪ್ರಕಾಶನ : ಹೆಗ್ಗಡೆ ಪ್ರಕಾಶನ, ಶೃಂಗೇರಿ
ಪ್ರಕಾರ : ಕಾದಂಬರಿ
ಡಾ.ಆಗುಂಬೆ ಗಣೇಶ್ ಹೆಗ್ಗಡೆಯವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ಬೆಳಂದೂರು ನೆರಳ ಕೋಡಿಗೆಯವರು. ಮೂಲತಃ ಕೃಷಿಕರಾಗಿರುವ ಲೇಖಕರು ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ.
ಸಾಹಿತ್ಯ ವಲಯದ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವು ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿ ಕಾರ್ಯನಿರ್ವಹಿಸಿದ ಅನುಭವಗಳನ್ನು ಹೊಂದಿದ್ದಾರೆ. ಯುವ ಬರಹಗಾರರಾಗಿರುವ ಲೇಖಕರು ಎಳಕ್ಕೂ ಹೆಚ್ಚಿನ ಸಂಕಲನಗಳನ್ನು ಹೊರ ತಂದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಿತರಾದ ಡಾ. ಆಗುಂಬೆ ಗಣೇಶ್ ಹೆಗ್ಗಡೆಯವರು ನಮ್ಮ ಪರಿಚಯದ ಸವಿನೆನಪಿಗಾಗಿ “ಸೌಭಾಗ್ಯ ವಂಚಿತೆ “ಕಾದಂಬರಿಯನ್ನು ಉಡುಗೊರೆಯಾಗಿ ನೀಡಿರುವರು, ಅವರ ಪ್ರೀತಿಗೆ ಧನ್ಯವಾದಗಳು.

ಚಿಕ್ಕಮಗಳೂರು ಜಿಲ್ಲೆ ಎಂದಾಕ್ಷಣ ನಮ್ಮೆಲ್ಲರಿಗೆ ಸಹ್ಯಾದ್ರಿ ಪರ್ವತ ಶ್ರೇಣಿಯ ಹಚ್ಚಹಸುರಿನ ಗಿರಿ ಪರ್ವತಗಳ ಸಾಲು ನಮ್ಮ ಕಣ್ಣ ಮುಂದೆ ಬಂದು ಕ್ಷಣಕಾಲ ಪ್ರಕೃತಿ ಸೌಂದರ್ಯದ ಆಹ್ಲಾದತೆ ಮನಸ್ಸಿಗೆ ಹಿತ ನೀಡುತ್ತದೆ. ಹಳ್ಳಿ ಸೊಗಡಿನ ಮಧ್ಯೆ ಬೆಳೆದಿರುವ ಲೇಖಕರು ಸ್ವಾಭಾವಿಕವಾಗಿ ತಮ್ಮ ಕೃತಿಯಲ್ಲಿ ಯಥಾವತ್ತಾಗಿ ಹಳ್ಳಿ ಜೀವನದ ಸೊಗಡನ್ನು ಸುಂದರವಾಗಿ ಕೃತಿಗೆ ಇಳಿಸಿದ್ದಾರೆ.
ಸೌಭಾಗ್ಯ ವಂಚಿತೆ ಕಾದಂಬರಿಯೂ ಹದಿನೇಳು ಅಧ್ಯಾಯಗಳಿಂದ ಕೂಡಿದ್ದು, ಅವರು ಬಳಸಿರುವ ಭಾಷಾಶೈಲಿಯೂ ಸುಂದರವಾಗಿ ಹೊಸದಾಗಿದೆ. ಭೂಸುಧಾರಣೆ ಕಾಯ್ದೆ ಅದೆಷ್ಟೋ ಕುಟುಂಬಗಳಿಗೆ ವರದಾನವಾಗಿದೆ.ಆದರೆ ಭೂಮಿ ಕಳೆದುಕೊಂಡು ಅನಾಥರಾದ ಕುಟುಂಬಗಳು ಇನ್ನೂ ಆ ನೋವಿನಿಂದ ಹೊರಬಂದಿಲ್ಲ ಎಂಬುದು ಈ ಕೃತಿಯಿಂದ ತಿಳಿಯಿತು.
ಕೇವಲ ಕಾದಂಬರಿ ಎಂದುಕೊಂಡಿದ್ದ ನನಗೆ ಬಹಳ ನೋವು ಕೊಟ್ಟ ಸಂಗತಿ ಎಂದರೆ ಇದೊಂದು ಸತ್ಯ ಕಥೆಯ ಪ್ರೇರೆಪ್ರಣೆಯಿಂದ ಬರೆಯಲ್ಪಟ್ಟ ಕಥೆ ಎನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ತಿಮ್ಮಶೆಟ್ಟಿ ಮತ್ತು ಕೂಸ ಪೂಜಾರಿ ಪಾತ್ರಗಳು ಬಹಳ ಇಷ್ಟವಾಯಿತು.

ಸೌಭಾಗ್ಯ ವಂಚಿತೆ ಪುಸ್ತಕ ಲೇಖಕರು ಡಾ. ಆಗುಂಬೆ ಗಣೇಶ್ ಹೆಗ್ಗಡೆ
ಪ್ರೇಮಾಳ ಮದುವೆ ಭಾಗದಲ್ಲಿ, ಮಗಳ ಮದುವೆ ಮಾಡಿ ಮಕ್ಕಳಿಗೆ ಆಸ್ತಿ ಪಾಲು ಮಾಡಿ ನಿರಾಳರಾದ ಪಟೇಲರಿಗೆ ಪತ್ನಿಯ ಸಾವು ಬದುಕಿಗೆ ವಿದಾಯ ಹೇಳಿದಂತೆ ಆಗಿತ್ತು.ತಿಥಿ ದಿನ ಕಿಂದರಿ ಜೋಗಿ ಪದ ಹೇಳಿಸಿ ಹೊಗಳಿಕೆ ಹಾಕಿಸಿ ಅಂದೆ ಪ್ರಾಣ ಕಳೆದುಕೊಂಡ ರೀತಿ ಬಹಳ ಮನಸಿಗೆ ನೋವು ಕಾಡಿತು. ಸಂತೃಪ್ತ ದಾಂಪತ್ಯಎಂದರೆ ಇದೆ ಅಲ್ಲವೇ. ಪ್ರೇಮಾಳ ಮಾಂಗಲ್ಯ ಸರ ಕಳ್ಳತನವಾದಾಗ ,ಕಳ್ಳನೇ ಬಾಗಿಲ ಬಳಿ ನಿಂತಿದ್ದನೆಂದು ಬೆಚ್ಚು ಗೊಂಬೆಗೆ ಗುಂಡು ಹೊಡೆದು ಬಿಗಿದ ತಿಮ್ಮಶೆಟ್ಟಿಯ ಗುರಿ ತಪ್ಪಿರಲಿಲ್ಲ. ಮಾಂಗಲ್ಯ ಸರ ಹೆಣ್ಣಿಗೆ ಏಷ್ಟು ಮುಖ್ಯ ಎಂಬುದು ಆಕೆಯ ಚಡಪಡಿಕೆಯ ನೋವನ್ನು ಲೇಖಕರು ಸ್ವಾಭಾವಿಕವಾಗಿ ಚಿತ್ರಿಸಿದ್ದಾರೆ.
ಶಿರಸಿ ಭಾಗದಲ್ಲಿ ಮಾತನಾಡುವ ಚಂದದ ಬಾಷೆಯನ್ನು ತಮ್ಮ ಕೃತಿಯಲ್ಲಿ ಪಾತ್ರಗಳ ಭಾವಕ್ಕೆ ಅಚ್ಚುಕಟ್ಟಾಗಿ ಲೇಪಿಸಿದ ರೀತಿಯೇ ಚಂದ ಏನಿಸುತದೆ.ಕಥೆಯ ಒಳಗೆ ನವಿರಾದ ಹಳ್ಳಿ ಸೊಗಡನ್ನು ಕಾದಂಬರಿಯ ಕೊನೆಯವರೆಗೂ ಲೇಪಿಸಿದ್ದಾರೆ. ಮಳೆಗಾಲದಲ್ಲಿ ನೀರು ಹೋಗಿ ,ಹೋಗಿ ಮಣ್ಣು ಕೊಚ್ಚಿ ಹೋದ ನಂತರ ಬಿಳಿಕಲ್ಲುಗಳೆಲ್ಲ ತಿಕ್ಕಿ ತಿಡಿದ ಚೂರಿ ಹೊಳೆದಂತೆ ಬ್ಯಾಟರಿ ಬೆಳಕಿಗೆ ಹೊಳೆಯುತ್ತಿದ್ದವು , ಎಂತ ಚಂದದ ಸಾಲುಗಳು.ಅದ್ಭುತ ಪರಿಕಲ್ಪನೆ ಅಲ್ಲವೇ. ಕಾದಂಬರಿಯುದ್ದಕ್ಕೂ ಅಚ್ಚುಕಟ್ಟಾದ ಬಾಷೆಯ ಹಿಡಿತ ಆಸ್ವಾದಿಸಬಹುದು.
ನಿಮ್ಮಿಂದ ಇನ್ನಷ್ಟು ಉತ್ತಮ ಕೃತಿಗಳು ಹೊರಬಂದು ಸಾಹಿತ್ಯ ಲೋಕದ ಪುಟ ಸೇರಲಿ. ಸೌಭಾಗ್ಯ ವಂಚಿತೆ ಕೃತಿಗಾಗಿ ಲೇಖಕರಾದ A Ganesh Hegde ಅವರಿಗೆ ಧನ್ಯವಾದಗಳು
- ಹೇಮಂತ್ ಪಾರೇರಾ – ಯಡವನಾಡು, ಕೊಡಗು
