ನವಕರ್ನಾಟಕ ಪ್ರಕಾಶನದ ಮೂಲಕ ಪ್ರಕಟವಾಗಿರುವ, ಶ್ವಾನ ಪುರಾಣದ ಕುರಿತಾದ ಡಾ. ಎನ್.ಬಿ. ಶ್ರೀಧರ್ ಮತ್ತು ಡಾ. ಸಿ.ಎಸ್. ಅರುಣ್ ರಚಿಸಿರುವ ‘ಸಾಕು ನಾಯಿ’ ಕೃತಿಯನ್ನು ತಪ್ಪದೆ ಓದಿ ಮತ್ತು ತಪ್ಪದೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ….
ಸಾಕು ನಾಯಿ: ಸಚಿತ್ರ ಕೈಪಿಡಿ ಪುಸ್ತಕದ ಪರಿಚಯ ವಿಮರ್ಶೆ
ಲೇಖಕರು : ಡಾ. ಎನ್.ಬಿ. ಶ್ರೀಧರ್ ಮತ್ತು ಡಾ. ಸಿ.ಎಸ್. ಅರುಣ್
ಪರಿಚಯ ಲೇಖನ : ಬೇದ್ರೆ ಮಂಜುನಾಥ, ಮೈಸೂರು
ಬೆಸ್ಟ್ ಫ್ರೆಂಡ್: ‘ಸಾಕು ನಾಯಿ’ ಎಂಬ ಸಾರ್ವಕಾಲಿಕ ಗೆಳೆಯ
ಕೃತಿ : ಸಾಕು ನಾಯಿ – ಸಚಿತ್ರ ಕೈಪಿಡಿ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ : 2020
ಪುಟಗಳು : 96
ಬೆಲೆ : ರೂ.110/-
For Online Booking visit: http://www.navakarnatakaonline.com
Phone: 080 – 22161913 / 22161914
ಬೇದ್ರೆ ಮಂಜುನಾಥ, ಮೈಸೂರು
ಸಂಪರ್ಕ ವಿಳಾಸ : ಕಾರ್ಯಕ್ರಮ ನಿರ್ವಾಹಕರು, ಆಕಾಶವಾಣಿ ಕೇಂದ್ರ, ಯಾದವಗಿರಿ, ಕೆ.ಆರ್.ಎಸ್. ರಸ್ತೆ, ಮೈಸೂರು – 570 020.
ಫೋನ್: 94485-89089 e-mail : bedre.manjunath@gmail.com
ಪದವಿ ಕಾಲೇಜೊಂದರ ಪ್ರಾಂಶುಪಾಲರ ಜವಾಬ್ದಾರಿಯಿಂದ ನಿವೃತ್ತಿ ಹೊಂದಿದ ಪ್ರೊಫೆಸರ್ ದಿನವೂ ಬೆಳಗ್ಗೆ ಮತ್ತು ಸಂಜೆ ‘ರಾಜು’ವಿನ ಜೊತೆ ವಾಕಿಂಗ್ ಹೋಗುತ್ತಾರೆ. ಒಬ್ಬರನ್ನೊಬ್ಬರು ಅದೆಷ್ಟು ಹಚ್ಚಿಕೊಂಡಿದ್ದಾರೆಂದರೆ ಪ್ರೊಫೆಸರರ ಮಕ್ಕಳಿಗೂ ‘ರಾಜು’ವನ್ನು ಕಂಡರೆ ಅಸೂಯೆಯಾಗುವಷ್ಟು! ಹೌದು, ವಿಶ್ವಾಸದ ಪ್ರತೀಕ ‘ನಾಯಿ’ ಈಗ ಇಳಿವಯಸ್ಸಿನವರ ಆಪ್ತ ಗೆಳೆಯನಾಗಿಬಿಟ್ಟಿದೆ. ಮಕ್ಕಳು ಮೊಮ್ಮಕ್ಕಳು ಕೊಡುವ ಪ್ರೀತಿ ವಿಶ್ವಾಸವನ್ನೆಲ್ಲಾ ಈ ಸಾಕು ನಾಯಿ ಕೊಡುತ್ತಿದೆ. ದುಃಖ ಹಂಚಿಕೊಳ್ಳಲು ಕಿವಿಯಾಗಿದೆ. ಅಕ್ಕರೆ ತೋರುವ ದಣಿಯಾಗಿದೆ. ವಾಕಿಂಗ್ ಮಾಡಿಸುವ ಮಾರ್ಗದರ್ಶಿಯಾಗಿದೆ. ಕುಣಿದು ಕುಪ್ಪಳಿಸುತ್ತಾ ಸಂತಸ ಪ್ರದರ್ಶಿಸುವ ವಿದೂಷಕನಾಗಿದೆ. ನೀಯತ್ತಿಗೆ ಇನ್ನೊಂದು ಹೆಸರಾಗಿದೆ. ಈ ಶ್ವಾನ ಪುರಾಣವನ್ನು ಪಶುವೈದ್ಯರಾದ ಡಾ. ಎನ್.ಬಿ. ಶ್ರೀಧರ್ ಮತ್ತು ಡಾ. ಸಿ.ಎಸ್. ಅರುಣ್ ರಚಿಸಿದ್ದಾರೆ. ನವಕರ್ನಾಟಕ ಪ್ರಕಾಶನದ ಮೂಲಕ ಪ್ರಕಟವಾಗಿರುವ ಈ ಕೃತಿ ಶ್ವಾನಪ್ರಿಯರ ಆಪ್ತ ಕೈಪಿಡಿಯಾಗಿದೆ.
ಸಾಕು ನಾಯಿಗಳ ಚರಿತ್ರೆ, ತಳಿಗಳೂ, ಜೀವನ ಕ್ರಮ, ವಂಶಾಭಿವೃದ್ಧಿ, ಪಾಲನೆ-ಪೋಷಣೆ, ತರಬೇತಿ, ಸಾಮಾನ್ಯ ಕಾಯಿಲೆಗಳು ಮತ್ತು ಅವುಗಳ ಚಿಕಿತ್ಸೆ, ಮುನ್ನೆಚ್ಚರಿಕಾ ಕ್ರಮಗಳು ಮತ್ತು ನಿಯಂತ್ರಣ ಮುಂತಾದ ವಿಷಯಗಳನ್ನು ‘ಸಾಕು ನಾಯಿ’ ಕೃತಿಯ ಹನ್ನೆರಡು ಅಧ್ಯಾಯಗಳಲ್ಲಿ ಚಿತ್ರಸಮೇತ ವಿವರಿಸಲಾಗಿದೆ. ಮೊದಲ ಅಧ್ಯಾಯ ‘ಉಗಮ, ಚರಿತ್ರೆ ಮತ್ತು ಉಪಯುಕ್ತತೆ’ ಕುತೂಹಲ ಕೆರಳಿಸುವಂತಿದೆ. ‘ಮಯಾಸಿಸ್’ ಎಂಬ ಪ್ರಾಣಿಯಿಂದ ಲಕ್ಷಾಂತರ ವರ್ಷಗಳ ವಿಕಸನದ ನಂತರ ಉದಿಸಿದ ನಾಯಿಯ ವಂಶವೃಕ್ಷ ಯಾವ ರಾಜರ ವಂಶವೃಕ್ಷಕ್ಕೂ ಕಡಿಮೆ ಇಲ್ಲ. ಮನುಷ್ಯ ಪಳಗಿಸಿ ಸಾಕಿದ ಮೊಟ್ಟ ಮೊದಲನೆಯ ಪ್ರಾಣಿ ನಾಯಿ. ಮಧ್ಯಶಿಲಾಯುಗದ ಮಾನವನ ಜೊತೆಯಿಂದ ಹಿಡಿದು ವಿವಿಧ ನಾಗರೀಕತೆಗಳಲ್ಲಿ, ಹಲವು ಚಕ್ರಾಧಿಪತ್ಯಗಳ ಕಾಲದಲ್ಲಿ ಮೆರೆದು, ಇಂದಿನ ಮುದ್ದಿನ ಪ್ರಾಣಿಯಾಗುವವರೆಗೆ ದೊಡ್ಡ ಇತಿಹಾಸವೇ ಇದೆ ಈ ಶ್ವಾನಕ್ಕೆ.

ಋಗ್ವೇದದಲ್ಲಿನ ‘ಸರಮೆ’ ಮತ್ತು ಅವಳ ಮಕ್ಕಳಾದ ಶ್ಯಾಮ ಮತ್ತು ಶಬಲ, ದತ್ತಾತ್ರೇಯನ ಸಹಚರ, ಕಾಲಭೈರವನ ಅನುಯಾಯಿ ಎಲ್ಲವೂ ನಾಯಿಗಳೇ. ಇತಿಹಾಸ ಮತ್ತು ಸಾಹಿತ್ಯ ಕೃತಿಗಳಲ್ಲಿಯೂ ನಾಯಿಯ ಚಿತ್ರಣವಿದೆ. ಛತ್ರಪತಿ ಶಿವಾಜಿ ಮಹಾರಾಜರಿಗೆ ಪ್ರೀತಿಪಾತ್ರವಾಗಿದ್ದ ನಾಯಿಯ ಸಮಾಧಿ ರಾಜಘಡದಲ್ಲಿನ ಶಿವಾಜಿಯ ಸಮಾಧಿಯ ಬಳಿಯೇ ಇದೆ. ಸಮಕಾಲೀನ ಸಾಹಿತ್ಯದಲ್ಲಿಯೂ ಶ್ವಾನ ಪುರಾಣ ಮುಮದುವರೆದಿದೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿನ ಗುತ್ತಿಯ ಜೊತೆಗಾರ ನಾಯಿ ‘ಹುಲಿಯಾ’ ಪರಿಚಯ ಎಲ್ಲರಿಗೂ ಇದೆ. ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳಲ್ಲಿ ಬರುವ ‘ಕಿವಿ’ ನಾಯಿ ಕೂಡ ಚಿರಪರಿಚಿತವೇ. ರಾಜರತ್ನಂ ಅವರ ‘ನಾಯಿ ಮರಿ, ನಾಯಿ ಮರಿ ತಿಂಡಿಬೇಕೆ?’ ಪದ್ಯವನ್ನು ಕೇಳದವರು ಯಾರು?
ಇನ್ನು ಉಪಯುಕ್ತತೆಯ ದೃಷ್ಟಿಯಿಂದ ನೋಡುವುದಾದರೆ, ಬೇಟೆಯಾಡಲು, ಕಾವಲು ಕಾಯಲು, ಯುದ್ಧಗಳಲ್ಲಿ, ಅಪರಾಧಿಗಳ ಪತ್ತೆಯಲ್ಲಿ, ಪ್ರಾಕೃತಿಕ ವಿಕೋಪಗಳ ಮುನ್ಸೂಚನೆಗಾಗಿ, ಹಿಮಪ್ರದೇಶಗಳಲ್ಲಿ ಜಾರು ಬಂಡಿಗಳನ್ನು ಎಳೆಯಲು, ನೀರಿನಲ್ಲಿ ಮುಳುಗುತ್ತಿರುವವರನ್ನು ರಕ್ಷಿಸಲು, ಕುರುಡರಿಗೆ ಕಣ್ಣಾಗಿ ದಾರಿ ತೋರಲು, ವೈದ್ಯಕೀಯ ಸಂಶೋಧನೆಗಳಲ್ಲಿ ರೋಗಗಳಿಗೆ ಚಿಕಿತ್ಸಾ ಕ್ರಮ ಪ್ರಯೋಗಿಸಲು, ಸಿನಿಮಾ, ಸರ್ಕಸ್, ಬಾಹ್ಯಾಕಾಶಯಾನಕ್ಕೆ, ಒಬ್ಬಂಟಿತನ ದೂರಮಾಡುವ ಸಂಗಾತಿಯಾಗಲು, ಹೀಗೆ ಎಲ್ಲದಕ್ಕೂ ನಾಯಿಗಳನ್ನು ಬಳಸಲಾಗುತ್ತದೆ.
‘ನಾಯಿ ತಳಿಗಳು’ ಅಧ್ಯಾಯದಲ್ಲಿ, ಕೆಲಸಗಾರ ನಾಯಿಗಳು (ರಾಟ್‌ವೀಲರ್, ಪುಲಿ, ಅಲ್ಸೇಷಿಯನ್/ಜರ್ಮನ್ ಶೆಪರ್ಡ್, ಡೋಬರ್‌ಮನ್, ಬಾಕ್ಸರ್, ಬುಲ್‌ಡಾಗ್, ಗ್ರೇಟ್‌ಡೇನ್, ಡಾಲ್‌ಮೇಷಿಯನ್, ಕಾಲಿ, ಬುಲ್‌ಮಾಸ್ಟಿಫ್, ಸೇಂಟ್ ಬರ್ನಾರ್ಡ್), ಬೇಟೆ ನಾಯಿಗಳು (ಲ್ಯಾಬ್ರಡಾರ್ ರಿಟ್ರೆoವರ್, ಗೋಲ್ಡನ್ ರಿಟ್ರೆoವರ್, ಐರಿಷ್ ಸೆಟ್ಟರ್, ಬೀಗಲ್, ಸಲೂಕಿ, ಬ್ಲಡ್‌ಹೌಂಡ್, ಪಾಯಿಂಟರ್, ಮೈಮರಾನರ್, ಮುದ್ಹೋಳ ಹೌಂಡ್) ಮತ್ತು ಮುದ್ದುನಾಯಿಗಳು (ಪೊಮರೇನಿಯನ್, ಸ್ಪಿಟ್ಜ್, ಲ್ಹಾಸಾಫ್ಸೋ, ಪಗ್, ಪೆಕಿಂಗೀಸ್, ಪೂಡಲ್, ಚಿಹುವಾಹುವಾ) ಎಂಬ ಮೂರು ಭಾಗಗಳನ್ನು ಗುರುತಿಸಿ ಅವುಗಳ ಕಿರು ವಿವರ ಕೊಡಲಾಗಿದೆ. ಪ್ರತಿಯೊಂದು ನಾಯಿಯ ಎತ್ತರ, ತೂಕ, ಮೂಲಸ್ಥಾನ, ಬಣ್ಣ, ಆಹಾರ, ಆರೈಕೆ, ವಿಶೇಷತೆ, ವಹಿಸಬೇಕಾದ ಎಚ್ಚರಿಕೆ ಎಲ್ಲವನ್ನೂ ಚಿತ್ರಸಹಿತ ವಿವರಿಸಲಾಗಿದೆ. ಜೊತೆಗೆ ಯಾವ ಜಾತಿಗೂ ಸೇರದ ಬೆರಕೆ ನಾಯಿಗಳ ಬಗ್ಗೆ ತಿಳಿಸುತ್ತಾ, ‘ಗಡಸು ಸ್ವಾಭಾವದ ಇವುಗಳಿಗೆ ಸಹಿಷ್ಣುತೆ ಹೆಚ್ಚು, ಸಾಕುವುದು ಸುಲಭ, ಒಳ್ಳೆಯ ಕಾವಲುಗಾರ ನಾಯಿಗಳು ಆದ್ದರಿಂದ ನಾಯಿಪ್ರಿಯರು ಇವುಗಳನ್ನು ಸಾಕುವುದು ಹೆಚ್ಚು. ಇದರಿಂದ ಸಾಮಾಜಿಕ ಪಿಡುಗಾಗಿರುವ ಬೀದಿನಾಯಿಗಳ ಉಪಟಳವನ್ನು ತಪ್ಪಿಸಿದಂತಾಗುತ್ತದೆ,’ ಎಂದಿದ್ದಾರೆ ಲೇಖಕರು.

‘ಸಾಕು ನಾಯಿ’ ಲೇಖಕರು ಡಾ. ಸಿ.ಎಸ್. ಅರುಣ್ ಮತ್ತು ಡಾ. ಎನ್.ಬಿ. ಶ್ರೀಧರ್
ಮನೆಗೊಂದು ನಾಯಿ ತರಬೇಕೆಂದು ನಿರ್ಧರಿಸುವ ಮುನ್ನ ಗಮನದಲ್ಲಿರಿಸಬೇಕಾದ ಹಲವು ಸಂಗತಿಗಳನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸಿದ್ದಾರೆ. ‘ನಾಯಿ ಮರಿಯ ಆಯ್ಕೆ’ ಹೇಗೆ ಮಾಡಬೇಕು, ಗಂಡು ಅಥವಾ ಹೆಣ್ಣು, ಜಾತಿ ನಾಯಿಯೋ ಅಥವಾ ದೇಶಿ ನಾಯಿಯೋ, ಮರಿಯನ್ನು ಎಲ್ಲಿಂದ ತರುವುದು, ಬೆಲೆ ಎಷ್ಟು, ಮನೆಯಲ್ಲಿ ಅದಕ್ಕೆ ಸ್ಥಳಾವಕಾಶ ಎಲ್ಲಿ ಕಲ್ಪಿಸಬೇಕು ಇತ್ಯಾದಿ ಅಂಶಗಳನ್ನು ಚರ್ಚಿಸಿದ್ದಾರೆ. ನಾಯಿಗಳ ‘ಪಾಲನೆ ಪೋಷಣೆ’ ಬಹುದೊಡ್ಡ ಜವಾಬ್ದಾರಿ. ಮರಿಗಳ ವಸತಿ, ಶುಚಿತ್ವ, ಕೂದಲ ಬ್ರಷ್ ಮಾಡುವಿಕೆ, ಸ್ನಾನ, ಅಂಗಾಂಗಗಳ ಶುಭ್ರತೆ, ಆಹಾರ, ದೈನಂದಿನ ಪಾಲನೆ, ಶೌಚಾಭ್ಯಾಸ, ಜಂತುಹುಳು ನಿವಾರಣೆ ಮತ್ತು ಲಸಿಕೆಗಳನ್ನು ಕಾಲಕಾಲಕ್ಕೆ ನೀಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
‘ನಾಯಿಗಳಿಗೆ ವಿಧೇಯಕ ತರಬೇತಿ’ ಅಧ್ಯಾಯದಲ್ಲಿ ವೈವಿಧ್ಯಮಯ ಕಸರತ್ತುಗಳಿಂದ ಹಿಡಿದು ನಿತ್ಯವೂ ಮಾಡುವ ವ್ಯಾಯಾಮ ಮತ್ತು ಪಾಲಿಸಬೇಕಾದ ಆಜ್ಞೆಗಳನ್ನು ಕಲಿಸಿಕೊಡುವುದರ ಅಗತ್ಯ ಹಾಗು ವಿಧಾನಗಳನ್ನು ತಿಳಿಸಿದ್ದಾರೆ. ‘ನಾಯಿಗಳ ವಂಶಾಭಿವೃದ್ಧಿ’ ಅಧ್ಯಾಯದಲ್ಲಿ 8 ರಿಂದ 12 ತಿಂಗಳಲ್ಲಿ ಪ್ರೌಢಾವಸ್ಥೆ ತಲುಪುವ ಹೆಣ್ಣು ನಾಯಿಗಳನ್ನು ನೋಡಿಕೊಳ್ಳುವುದು ಹೇಗೆ, ಗರ್ಭಧಾರಣೆ, ಆರೈಕೆ, ಪ್ರಸವ, ನವಜಾತ ಮರಿಗಳ ಪೋಷಣೆ, ವಹಿಸಬೇಕಾದ ಎಚ್ಚರಿಕೆಗಳನ್ನು ಕುರಿತು ವಿವರಗಳನ್ನು ನೀಡಿದ್ದಾರೆ.
‘ನಾಯಿಗಳಿಗೆ ಬರಬಹುದಾದ ಪ್ರಮುಖ ಕಾಯಿಲೆಗಳು ಮತ್ತು ಅವುಗಳ ನಿಯಂತ್ರಣ’ ಅಧ್ಯಾಯದಲ್ಲಿ ವೈರಾಣು ಮೂಲದ ರೋಗಗಳು (ಕೆನೈನ್ ಡಿಸ್ಟೆಂಪರ್, ರೇಬಿಸ್), ಬ್ಯಾಕ್ಟೀರಿಯಾ ಮೂಲದ ರೋಗಗಳು (ಕಾಮಾಲೆ, ಪಾರ್ವೋ, ಕರೋನಾ, ಆಡಿನೋ, ಲೆಪ್ಟೋಸ್ಪೆöÊರೋಸಿಸ್), ಪರೋಪಜೀವಿ ಮೂಲದ ರೋಗಗಳು ಮತ್ತು ಇತರೆ ರೋಗಗಳ ವಿವರಗಳ ಜೊತೆ ಚಿಕಿತ್ಸೆ ಮತ್ತು ಶುಶ್ರೂಷೆಯ ಕ್ರಮವನ್ನು ತಿಳಿಸಿದ್ದಾರೆ. ‘ನಾಯಿ ರೋಗಗಳ ಬಗ್ಗೆ ಎಚ್ಚರವಿರಲಿ’ ಅಧ್ಯಾಯದಲ್ಲಿ ರೋಗ ಬರದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ ಮತ್ತು ಚಿಕಿತ್ಸೆಯ ಅಗತ್ಯವನ್ನು ವಿವರಿಸಿದ್ದಾರೆ. ‘ನಾಯಿಗಳಲ್ಲಿ ಚರ್ಮ ರೋಗಗಳು’ ಅಧ್ಯಾಯ ರೋಗಕ್ಕೆ ಕಾರಣ ಪತ್ತೆ ಮತ್ತು ಚಿಕಿತ್ಸೆಯನ್ನು ತಿಳಿಸುತ್ತದೆ. ‘ನಾಯಿಗಳಿಗೆ ಪ್ರಥಮ ಚಿಕಿತ್ಸೆ’ ಹೇಗೆ ಮಾಡಬೇಕು ಎಂಬ ವಿವರಗಳೂ ಇಲ್ಲಿವೆ. ನಾಯಿಗಳ ಕೆಟ್ಟ ನಡತೆಗಳು ಮತ್ತು ಅವುಗಳ ನಿವಾರಣೋಪಾಯಗಳನ್ನು ಉದಾಹರಣೆ ಸಹಿತ ವಿವರಿಸಲಾಗಿದೆ. ಕೊನೆಯಲ್ಲಿ ಶ್ವಾನ ಪ್ರದರ್ಶನ ಏಕೆ, ಹೇಗೆ, ಎಲ್ಲಿ, ಎಷ್ಟು ವಿಧ, ಭಾಗವಹಿಸುವುದು ಹೇಗೆ, ಪಶುವೈದ್ಯರೊಂದಿಗೆ ಸಹಕರಿಸುವುದರ ಅಗತ್ಯ ಮತ್ತು ಲಸಿಕೆಗಳ ಅಗತ್ಯವನ್ನು ತಿಳಿಸಲಾಗಿದೆ.
‘ನಾಯಿ ಸಾಕುವುದು ಜವಾಬ್ದಾರಿಯುತ ಕೆಲಸ. ಸಾಕು ನಾಯಿಗಳ ಬಗ್ಗೆ ಚಿತ್ರಸಹಿತ ಮಾಹಿತಿ ಇರುವ ಈ ಕೃತಿಯನ್ನು ಶ್ವಾನಪ್ರಿಯರೆಲ್ಲರೂ ಓದಬೇಕು. ನಾಯಿ ಮರಿಯನ್ನು ವ್ಯಾಪಾರಕ್ಕಾಗಿ ಬಳಸುವುದು, ಹುಟ್ಟಿದ ವಾರದೊಳಗೇ ತಾಯಿಯಿಂದ ಬೇರ್ಪಡಿಸುವುದು ಅಕ್ಷಮ್ಯ. ಕನಿಷ್ಟ ಆರರಿಂದ ಎಂಟು ವಾರಗಳಷ್ಟಾದರೂ ತಾಯಿಯ ಹಾಲನ್ನು ಕುಡಿದು, ತಾಯಿಯೊಂದಿಗೆ ಆಟವಾಡಿ, ಮಮತೆ ಅನುಭವಿಸಿದ ಮರಿಗಳನ್ನಷ್ಟೇ ಸಾಕುವವರಿಗೆ ನಿಡುವುದು ಒಳ್ಳೆಯದು. ಅಂತಹ ಮರಿಗಳಿಗೆ ರೋಗನಿರೋಧಕ ಶಕ್ತಿ ಚೆನ್ನಾಗಿದ್ದು, ಸುತ್ತಲಿನ ಪರಿಸರದೊಂದಿಗೆ ಹೊಂದಿಕೊಳ್ಳುವುದು ಸುಲಭವಾಗುತ್ತದೆ. ಮರಿಗಳಿಗೆ ಪ್ರತ್ಯೇಕ ಪೌಷ್ಟಿಕಾಂಶಯುಕ್ತ ಆಹಾರ ಕೊಡಬೇಕು. ನಾವು ತಿಂದು ಉಳಿದದ್ದನ್ನು ಅವುಗಳಿಗೆ ಹಾಕುವುದು ಸಲ್ಲದು,’ ಎನ್ನುತ್ತಾರೆ ಊಟಿಯಲ್ಲಿರುವ ವರ್ಲ್ಡ್ವೈಡ್ ವೆಟರಿನರಿ ಸರ್ವೀಸಸ್ ಸಂಸ್ಥೆಯಲ್ಲಿ ಹಿರಿಯ ಕನ್ಸಲ್ಟಂಟ್ ವೆಟರಿನರಿ ಸರ್ಜನ್ ಆಗಿರುವ ಡಾ. ಸುಮಂತ್.