ನೀ ಜರಿಯದಿರು ಜನನಿಯ

ಒಂದು ಪೂರ್ವಿಕ ಆಸ್ತಿಯು ಪುರುಷ ವಂಶಾವಳಿಯ ನಾಲ್ಕು ತಲೆಮಾರುಗಳವರೆಗೆ ಅನುವಂಶಿಕವಾಗಿ ಪಡೆಯಲಾಗಿದೆ. ಪೂರ್ವಜರ ಆಸ್ತಿಯಲ್ಲಿ ಪಾಲು ಮಾಡುವಿಕೆಯು ಹುಟ್ಟಿನಿಂದಲೇ ಉಂಟಾಗುತ್ತದೆ. ಮೂರು ತಲೆಮಾರಿನಿಂದ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿಯಾಗಿದ್ದು, ಈ ಆಸ್ತಿಯಲ್ಲಿ ಮಗಳಿಗೆ ಸಮಾನ ಪಾಲು ಇರುತ್ತದೆ. ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿ ಸ್ವಯಾರ್ಜಿತ ಆಸ್ತಿ ಎನ್ನುತ್ತಾರೆ. ವಕೀಲೆ ಹೆಚ್. ಆರ್ . ಪವಿತ್ರ ಧರ್ಮಪ್ಪ ಅವರು ಆಕೃತಿಕನ್ನಡದಲ್ಲಿ ಬರೆಯುತ್ತಿರುವ ‘ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕಥೆಗಳು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ಮಹಿಳಾ ದಿನಾಚರಣೆ ಅಂಗವಾಗಿ ಚಂದದ ವೇದಿಕೆಯೊಂದು ನಿರ್ಮಾಣವಾಗಿತ್ತು. ಅಂದು ಅಂಗನವಾಡಿ, ಸ್ತ್ರೀ ಶಕ್ತಿ ಸಂಘ, ಸ್ವಸಹಾಯ ಸಂಘಗಳು ಹಾಗೂ ಆಶಾ ಕಾರ್ಯಕರ್ತರು. ಹೀಗೆ ಎಲ್ಲಾ ಮಹಿಳಾಮಣಿಗಳನ್ನು ಒಟ್ಟು ಸೇರಿಸಿ ನಾರಿಶಕ್ತಿಯನ್ನು ಬಲಪಡಿಸಿ ಅವರಲ್ಲಿ ಇನ್ನಷ್ಟು ಆತ್ಮವಿಶ್ವಾಸ ತುಂಬೋ ನಿಟ್ಟಿನಲ್ಲಿ ಬೃಹತ್ ಸಮಾರಂಭವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಆಯೋಜಿಸಿದ್ದರು. ಅಂದು ಅಲ್ಲಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ಭಾಷಣಾಕಾರಳಾಗಿ ನನಗೆ ಆಹ್ವಾನವಿತ್ತು. ಎಂದಿನಂತೆ ಬೇಗ ಎದ್ದು ನನ್ನೆಲ್ಲಾ ನಿತ್ಯ ಕೆಲಸ ಕಾರ್ಯಗಳನ್ನು ಮುಗಿಸಿ ಉಪನ್ಯಾಸ ಕಾರ್ಯಕ್ರಮಕ್ಕೆ ಹೊರಟೆ. ನಾನು ಹೋಗುವಷ್ಟರಲ್ಲಿ ಸಂಭಾಗಣ ತುಂಬಿ ತುಳುಕುತ್ತಿತ್ತು. ವಿವಿಧ ಇಲಾಖೆಯ ಅಧಿಕಾರಿಗಳು ಅಲ್ಲಿ ಆಸೀನರಾಗಿದ್ದರೂ… ನನ್ನನ್ನು ಅಷ್ಟೆ ಆದರದಿಂದ ಬರಮಾಡಿಕೊಂಡರು, ಉದ್ಘಾಟನಾ ಕಾರ್ಯಕ್ರಮ ಮುಗಿಸಿ ನನ್ನ ಉಪನ್ಯಾಸ ಕಾರ್ಯಕ್ರಮ ಶುರುವಾಗಿತ್ತು. ಹಾಗಾಗಿ ಅಂದು ನಾನು ಮಾತಾಡಿದ್ದು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಮತ್ತು ಆಸ್ತಿ ಹಕ್ಕಿನ ಬಗ್ಗೆ , ಹೆಚ್ಚು ಕಡಿಮೆ ಒಂದೂವರೆ ಗಂಟೆಗೂ ಅಧಿಕ ಹೊತ್ತು ಮಾತನಾಡಿರಬಹುದು.ಹೆಣ್ಣುಮಕ್ಕಳಿಗಿರುವ ಆಸ್ತಿ ಹಕ್ಕುಗಳ ಬಗ್ಗೆ ಸಾಕಷ್ಟು ವಿಚಾರವನ್ನು ಬಹಳ ಸೂಕ್ಷ್ಮವಾಗಿ ಹೇಳಿದ್ದೆ.

ಇದರಿಂದ ಪ್ರೇರಿತರಾಗಿ ಅನೇಕ ಮಹಿಳೆಯರು ತಮ್ಮಲ್ಲಿರುವ ಅನೇಕ ಗೊಂದಲಗಳಿಗೆ ನನ್ನಿಂದ ಉತ್ತರ ಬಯಸಿದ್ದರು. ನಾನು ನನಗೆ ತಿಳಿದಿದ್ದ ಹತ್ತು ಹಲವಾರು ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಹಿಂದೂ ಮಹಿಳೆ ಆಸ್ತಿ ಮೇಲೆ ಹೊಂದಿರುವ ಹಕ್ಕು ಮತ್ತು ಬಾಧ್ಯತೆಗಳ ಮೂಲಕ ಅವರ ಜವಾಬ್ದಾರಿಯನ್ನು ಸಹ ವಿವರಿಸಿದ್ದೆ.

ಪಿತ್ರಾರ್ಜಿತ ಆಸ್ತಿ ಎಂದರೆ ಕಾನೂನಿನ ಪ್ರಕಾರ ಹೇಳುವುದಾದರೆ, ಒಂದು ಪೂರ್ವಿಕ ಆಸ್ತಿಯು ಪುರುಷ ವಂಶಾವಳಿಯ ನಾಲ್ಕು ತಲೆಮಾರುಗಳವರೆಗೆ ಆನುವಂಶಿಯವಾಗಿ ಪಡೆಯಲಾಗಿದೆ. ಪೂರ್ವಜರ ಆಸ್ತಿಯಲ್ಲಿ ಪಾಲು ಮಾಡುವಿಕೆಯು ಹುಟ್ಟಿನಿಂದಲೇ ಉಂಟಾಗುತ್ತದೆ. ಮೂರು ತಲೆಮಾರಿನಿಂದ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿಯಾಗಿದ್ದು, ಈ ಆಸ್ತಿಯಲ್ಲಿ ಮಗಳಿಗೆ ಸಮಾನ ಪಾಲು ಇರುತ್ತದೆ. ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿ ಸ್ವಯಾರ್ಜಿತ ಆಸ್ತಿ ಎನ್ನುತ್ತಾರೆ.

ಫೋಟೋ ಕೃಪೆ : google

ಪಿತ್ರಾಜಿತ ಆಸ್ತಿಯಲ್ಲಿ ಮಗಳು ಒಬ್ಬಳೇ ಇದ್ದರೆ ಆ ಪಿತ್ರಾರ್ಜಿತ ಆಸ್ತಿಯ ಸಂಪೂರ್ಣ ಭಾಗವೂ ಮಗಳಿಗೆ ಬರುತ್ತದೆ ಎಂಬುದನ್ನು ಸುಪ್ರೀಂಕೋರ್ಟ್ ಈ ನಿಯಮವನ್ನು ಹೊರಡಿಸಿದೆ. ಗಂಡು ಮಕ್ಕಳು ಇಲ್ಲದೆ ಇದ್ದರೆ ಹೆಣ್ಣುಮಕ್ಕಳಿಗೆ ಆಸ್ತಿಯನ್ನು ಹಂಚಿಕೆ ಮಾಡಲೇಬೇಕು.

ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಕೂಡ ಸಮಾನವಾದ ಭಾಗ ಇರುತ್ತದೆ. ಇಬ್ಬರು ಹೆಣ್ಣುಮಕ್ಕಳು ಒಂದು ಗಂಡು ಮಗ ಇದ್ದರೂ ಅವರು ಕೂಡ ಆಸ್ತಿಯ ವಿಚಾರದಲ್ಲಿ ಪಾಲುಗಳನ್ನು ಕೇಳುವ ಅವಕಾಶಗಳು ಇರುತ್ತವೆ.

ಆ ಹೆಣ್ಣುಮಗಳು ಆಸ್ತಿಯನ್ನು ಏನಾದರೂ ನಿರಾಕರಣೆ ಮಾಡಿದರೆ ಕುಟುಂಬದ ಯಾವುದಾದರೂ ಸದ್ಯಸರಿಗೆ ಆಸ್ತಿಯ ಭಾಗ ಹೋಗುತ್ತದೆ. 2005 ರಲ್ಲಿ ಹೆಣ್ಣುಮಕ್ಕಳಿಗೂ ಕೂಡ ಆಸ್ತಿಯ ವಿಚಾರದಲ್ಲಿ ಒಂದು ಪಾಲು ಇದೆ ಎನ್ನುವ ನಿಯಮವನ್ನು ಜಾರಿಗೆ ತಂದಿದ್ದಾರೆ. ಇತ್ತೀಚೆಗೆ ಬಂದ ಕಾನೂನಿನ ಅಡಿಯಲ್ಲಿ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಎರಡು ಆಸ್ತಿಯಲ್ಲಿ ಸಮಪಾಲು ಪಡೆಯುವ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ಪಿತ್ರಾರ್ಜಿತ ಆಸ್ತಿಗಳಲ್ಲಿ ಗಂಡು ಮಕ್ಕಳಿಗೆ ಹೇಗೆ ನಾವು ಸಮಾನಾಗಿ ಪಾಲುಗಳನ್ನು ಹಂಚುತ್ತೇವೆ ಹಾಗೆ ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯ ವಿಚಾರದಲ್ಲಿ ಅದೇ ರೀತಿಯ ನಿಯಮಗಳನ್ನು ಪಾಲಿಸಲಾಗುತ್ತದೆ.

ಹೀಗೆ ಸಾಕಷ್ಟು ವಿಚಾರಗಳು ವಿನಿಮಯ ಆದ್ಮೇಲೆ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಏರ್ಪಡಿಸಿದ್ದ ಸನ್ಮಾನ ಮತ್ತಿತರ ಕಾರ್ಯಕ್ರಮಗಳನ್ನು ಮುಗಿಸಿ ಊಟ ಮಾಡಿ ಇನ್ನೇನು ಹೊರಡಬೇಕು ಅನ್ನುವಾಗ ಒಬ್ಬ ಮಧ್ಯವಯಸ್ಸಿನ ಮಹಿಳೆ ಬಂದ್ರು. ನಾನು ಅಂಗನವಾಡಿ ಕಾರ್ಯಕರ್ತೆ, ನಿಮ್ಮೊಂದಿಗೆ ಪರ್ಸನಲ್ ಆಗಿ ಮಾತಾಡ್ಬೇಕು ಎಂದು ನಂಬರ್ ಕೇಳಿ ಪಡೆದು ಒಂದು ವಾರದ ಬಳಿಕ ನನ್ನ ಕಛೇರಿಗೆ ಬಂದಿದ್ದರು.

ಅವರನ್ನು ವಿಚಾರಿಸಲಾಗಿ ಅವರದೊಂದು ತುಂಬಿದ ಚಂದದ ಕುಟುಂಬ ತಂದೆ ತಾಯಿ ನಾಲ್ಕು ಹೆಣ್ಣು, ಒಬ್ಬ ಗಂಡು ಮಗ ಇದ್ದು ಎಲ್ಲರೂ ಸಾಕಷ್ಟು ಅನ್ಯೋನ್ಯತೆಯಿಂದ ಇದ್ದರೂ ಸುಂಟಿಕೊಪ್ಪದ ಭಾಗದವರು…ಒಳ್ಳೆ ಕಾಫಿ ತೋಟ, ನೀರಾವರಿ ಸೌಲಭ್ಯ ಹೊಂದಿರುವ ಗದ್ದೆ ಬಯಲು ಸಾಕಷ್ಟು ಇತ್ತು. ಒಂದರ್ಥದಲ್ಲಿ ಮಧ್ಯಮ ವರ್ಗದ ಶ್ರೀಮಂತರು ಎನ್ನಬಹುದು.

ಮೂರು ಹೆಣ್ಣುಮಕ್ಕಳಿಗೆ ಒಳ್ಳೆಯ ಕಡೆಯ ಸಂಬಂಧ ನೋಡಿ ಮದುವೆ ಮಾಡಿಕೊಟ್ಟಿದ್ದರು. ನಾಲ್ಕನೇ ಮಗಳು ನರ್ಸಿಂಗ್ ಕಲಿಯುವಾಗ ಯಾವುದೋ ಹುಡಗನನ್ನು ಪ್ರೀತಿಸಿ ಮದುವೆ ಆದ್ಲು ಅನ್ನುವ ಕಾರಣಕ್ಕಾಗಿ ಮನೆಯಿಂದ ಹೊರಗೆ ಇಟ್ಟಿದ್ದರು..ಇದ್ದೊಬ್ಬ ಮಗನಿಗೆ ಸಾಕಷ್ಟು ಆನುಕೂಲಸ್ಥರಾಗಿದ್ದ ಮನೆಯಿಂದ ಕನ್ಯೆ ತಂದು ವಿವಾಹ ಮಾಡಿದ್ಜರು…ಎಲ್ಲವೂ ಸರಿಯಾದ ರೀತಿಯಲ್ಲೆ ಇದ್ದರಿಂದ ತಂದೆತಾಯಿ , ಮಕ್ಕಳು ಒಬ್ಬರಿಗೊಬ್ಬರು ಅನ್ಯೋನ್ಯತೆಯಿಂದ ಕೊಡಿ ಬಾಳ್ವೆಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಇರುವ ವಾಸದ ಮನೆ ಹಳೆಯದಾಯ್ತು ಎಂಬ ಕಾರಣಕ್ಕೆ ಹೊಸದೊಂದು ಆರ್ ಸಿ.ಸಿ ಹಾಕಿ ದೊಡ್ಡದಾಗಿ ಮನೆ ಕಟ್ಟುವುದೆಂದು ತಿರ್ಮಾನಿಸಿ ಪಕ್ಕದ ಜಾಗದಲ್ಲಿ ದೊಡ್ಡದಾದ ಹೊಸ ಮನೆ ನಿರ್ಮಾಣವಾಯ್ತು. ಅದ್ದೂರಿಯಾಗಿ ಗೃಹಪ್ರವೇಶವೂ ನಡೆಯಿತು ಇಲ್ಲಿವರೆಗೂ. ಅತ್ತೆ-ಸೊಸೆ ಮತ್ತಿತರ ಸಂಬಂಧಗಳಲ್ಲಿ ಯಾವುದೇ ಬಿರುಕುಗಳಿಲ್ಲದೆ ಹೊಂದಿಕೊಂಡು ಹೋಗುತ್ತಿದ್ದ ಕುಟುಂಬಕ್ಕೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಸೊಸೆ ತನ್ನ ಅಸಲಿ ವರೆಸೆ ತೋರಿಸೋಕೆ ಶುರುಮಾಡಿದ್ಲು. ಅತ್ತೆ ಕೂತರೆ ತಪ್ಪು, ನಿಂತರೆ ತಪ್ಪು ಅನ್ನುವ ಹಾಗೆ ಮಾಡುತ್ತಿದ್ದಳು. ಅತ್ತೆ ಅಡುಗೆ ಮಾಡಿದರೆ ಅದಕ್ಕೆ ಉಪ್ಪು ಸುರಿಯುವುದು, ಏನಾದರೂ ಗಾಜಿನ ಪಾತ್ರೆಗಳನ್ನು ಒಡೆದುಹಾಕಿ ಅದನ್ನು ಅತ್ತೆಯ ಕಡೆಗೆ ಬೆಟ್ಟು ಮಾಡಿ.. ಮಗನ ದೃಷ್ಟಿಯಲ್ಲಿ ತಾಯಿಯನ್ನು ಅಪರಾಧಿಯಾಗಿಸುವ ಯತ್ನದ ಜೊತೆಗೆ ಹೊಸ ಅಡುಗೆ ಮನೆಗೆ, ಫ್ರಿಡ್ಜ್, ಹೀಗೆ ಎಲ್ಲಾ ಕಡೆಗೂ ಬೀಗ ಹಾಕೋಕೆ ಶುರುಮಾಡಿದ್ಲು… ಇದನ್ನು ಕೇಳಲು ಹೋದ ತಾಯಿ ಮಗನ ದೃಷ್ಟಿಯಲ್ಲಿ ಕೆಟ್ಟವಳಾದ್ಲು.. ಸರಿ ತಪ್ಪುಗಳನ್ನು ವಿವೇಚಿಸುವ ಬುದ್ಧಿ ಇಲ್ಲದವ ಹೆಂಡತಿ ಮಾತಿಗೆ ತಾಳ ಹಾಕಿ ಹೆತ್ತಮ್ಮನ ಜೊತೆಗೆ ಮಾತು ಬಿಟ್ಟ!!

ಫೋಟೋ ಕೃಪೆ : google

ಒಂದೇ ಮನೆಯಲ್ಲಿ ಎಲ್ಲರ ವಾಸ, ಕಷ್ಟಪಟ್ಟು ಕಟ್ಟಿದ ಮನೆ, ಇರುವ ಒಬ್ಬ ಮಗನಿಗಾಗಿ ಹೊಟ್ಟೆ ಬಟ್ಟೆ ಕಟ್ಟಿ ಮಾಡಿದ ಕಾಫಿ ತೋಟ, ಅಡಿಕೆ ಜೊತೆಗೆ ಸಾಕಷ್ಟು ಗದ್ದೆ ಜಮೀನು… ದನಕರುಗಳು, ಬೆಳ್ಳಿ-ಬಂಗಾರ ಎಲ್ಲವನ್ನೂ ಸೊಸೆ ತನ್ನ ಸುಪರ್ದಿಗೆ ಪಡೆದಂತೆ ವರ್ತಿಸ ತೊಡಗಿದಳು..ಇದರಿಂದ ನೊಂದ ಜೀವ ತನ್ನ ಗಂಡನ ಬಳಿ ಹೇಳಿದರು ಪ್ರಯೋಜವಾಗಲಿಲ್ಲ, ಹೆಣ್ಣು ಮಕ್ಕಳು ಮಾಡಿದ ರಾಜಿ ಸಂಧಾನ ಸಹ ವಿಫಲವಾಗಿತ್ತು. ಆಗ ಎಲ್ಲರೂ ಸೇರಿ ತಂದೆ-ತಾಯಿ ತಮ್ಮ ಹಳೆಯ ಮನೆಗೆ ವಾಪಸ್ಸ್ ಬಂದರು. ಮಗನಿಗೆ ಒಂದು ಚಂದದ ಮನೆಬೇಕು ಅಂತ ಕಟ್ಟಿ ಆ ಮನೆಯಲ್ಲಿ ಮೂರು ತಿಂಗಳು ಬಾಳಲು ಆಗದೆ ಸೊಸೆಯ ಕೃಪೆಯಿಂದ ಹಳೆಯ ಮನೆಗೆ ಬರುವಂತಾಗಿದ್ದು ಮಾತ್ರವಲ್ಲ, ಜನ್ಮ ಕೊಟ್ಟ ತಾಯಿಯನ್ನು ಯಾವುದೇ ತಪ್ಪು ಇಲ್ಲದಿದ್ದರೂ ಹೆಂಡತಿ ಮಾತು ಕೇಳಿಕೊಂಡು ಸಂಬಂಧಿಕರ ಮುಂದೆ ಜರಿಯೋದು ಅಲ್ಲದೆ ಮಾತಾಡಿಸುವುದನ್ನು ಸಹ ಬಿಟ್ಟಿದ್ದ. ಅದೆಷ್ಟರ ಮಟ್ಟಿಗೆ ಅಂದ್ರೆ ಸಂಬಂಧಿಕರ ಮನೆ ಸಾವಿಗೆ ಜೋರು ಮಳೆಯಲ್ಲಿ ಹೋಗ ಬೇಕಾಗಿ ಬಂದಾಗ ಅಕ್ಕ ಪಕ್ಕದ ಮನೆಯ ಹೆಂಗಸರನ್ನು ಕಾರಿನಲ್ಲಿ ಕೂರಿಸಿ ಕೊಂಡು ತಾಯಿಯನ್ನು ಕಾರಿಗೆ ಹತ್ತಿಸದೆ ಹೋಗಿದ್ದು…ಇಡಿ ಸಾವಿನ ಮನೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಲ್ಲದೆ ಆ ವಯಸ್ಸಾದ ಜೀವಕ್ಕೆ ತುಂಬಾ ನೋವಾಗಿತ್ತು. ಅದೆ ಸಾವಿಗೆ ಹೋಗಿದ್ದ ಹೆಣ್ಣು ಮಕ್ಕಳ ಕಣ್ಣಲ್ಲಿ ನೀರು ತರಿಸಿತ್ತು. ಇದರಿಂದ ನೊಂದ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಆ ಮನೆಯ ಹಿರಿಯ ಮಗಳು ನನ್ನ ಬಳಿ ಬಂದಿದ್ದರು. ಅವರ ಮನಸಿನಲ್ಲಿ ಇದ್ದಿದ್ದು ಒಂದೆ ಮಾತು …’ಮೇಡಂ ನಾನು ಮತ್ತು ತಂಗಿಯದು ತವರಿನ ಆಸ್ತಿಯಲ್ಲಿ ಪಾಲುಕೇಳಬಹುದಾ..? ನಮಗೆ ಪಾಲು ಸಿಗುತ್ತಾ..?? ಈ ಪಾಲು ಕೇಳುವ ವಿಚಾರ ನನ್ನ ತಮ್ಮನಿಗೆ ಬುದ್ಧಿ ಕಲಿಸಲು. ಅವನು ನಮ್ಮನ್ನನ್ನು ಮಾತಾಡಿಸಿದ್ರೆ ಮತ್ತು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಂಡರೆ ಆಸ್ತಿಯಲ್ಲಿ ಯಾವುದೇ ಭಾಗ ಬೇಡಾ, ಅವನಿಗೆ ಬಿಟ್ಟು ಬಿಡುತ್ತಿವಿ.. ದಯವಿಟ್ಟು ಈ ಕೇಸ್ ತೆಗೆದುಕೊಳ್ಳಿ’ ಅಂದಾಗ ಅವರಿಗೆ ಇರುವ ಆಸ್ತಿ ಹಕ್ಕು ಮತ್ತು ಕರ್ತವ್ಯ ಬಗ್ಗೆ ಮತ್ತೊಮ್ಮೆ ವಿವರಿಸಿದ್ದೆ. ಆದರೆ ಅವರ ನಿರ್ಧಾರ ಧೃಡವಾಗಿದ್ದ ಕಾರಣ ನಾನು ಆ ಕೇಸ್ ತೆಗೆದುಕೊಂಡೆ. ನಮ್ಮಲ್ಲಿ ಆಗ ಹಿರಿಯ ಶ್ರೇಣಿಯ ಕೋರ್ಟ್ ಇಲ್ಲದ ಕಾರಣ ಮತ್ತು ದಾವೆ ಆಸ್ತಿ ಸರಹದ್ದು ಮಡಿಕೇರಿಯ ವ್ಯಾಪ್ತಿಗೆ ಬರುತ್ತಿದ್ದರಿಂದ ಅಲ್ಲಿ ಕೇಸ್ ಫೈಲ್ ಮಾಡಿದೆ .

ನನ್ನ ಮೊದಲ ವಿಭಾಗದ ದಾವೆ ಮೊಕದ್ದಮೆ ಇದಾಗಿದ್ದು, ಬಹಳ ಮುತುವರ್ಜಿ ಕೇಸ್ ನಡೆಸಿದ್ದೆ. ಒಮ್ಮೆ ವಿಚಾರಣೆ ಸಮಯದಲ್ಲಿ ಆಕೆಯ ತಮ್ಮನ್ನು ನ್ಯಾಯಾಧೀಶರು ರಾಜಿಸಂಧಾನ ಮಾಡಿಸುವ ಸಲುವಾಗಿ ಕೇಳಿದ್ರು. ಆಗಲೂ ಆತನದು ತಂದೆ -ತಾಯಿಯನ್ನು ನೋಡಿಕೊಳ್ಳುವೆ ಎಂದು ಹೇಳೋದು ಬಿಟ್ಟು.. ಅಕ್ಕಂದಿರಿಗೆ ಸಾಕಷ್ಟು ವರದಕ್ಷಿಣೆ, ವರೋಪಚಾರ ಕೊಟ್ಟು ಮದುವೆ ಮಾಡಿದ್ದಿವೀ ,ಅಲ್ಲದೆ ದಾವೆಯನ್ನು ಹೂಡಿರುವ ಅಕ್ಕನ ಮಗನನ್ನು ಹತ್ತನೆಯ ತರಗತಿಯವರೆಗೆ ನಾನೇ ಓದಿಸಿರುವೆ ಅಂದಾಗ ನ್ಯಾಯಾಧೀಶರು ಅದು ನಿನ್ನ ಕರ್ತವ್ಯ ಮಾಡಿರುವೆ. ಮಾಡಲೆಬೇಕಿತ್ತು..ಆದರೆ ಕರ್ತವ್ಯ ಮಾಡಿದವ ಜವಾಬ್ದಾರಿ ನಿಭಾಯಿಸುವುದನ್ನು ಮರೆತೆ.. ಅಕ್ಕ ತಂಗಿಯೊಂದಿಗೆ ತವರಿಗೆ ಬಂದಾಗ ಪ್ರೀತಿಯಿಂದ ನಾಲ್ಕು ಮಾತು, ತಂದೆ-ತಾಯಿಯನ್ನು ಜೊತೆಯಲ್ಲಿಟ್ಟುಕೊಂಡು ಜತನದಿಂದ ನೋಡಿಕೊಂಡಿದ್ದರೆ ಈ ಆಸ್ತಿ ನಿನ್ನಲ್ಲೆ ಉಳಿಯುತ್ತಿತ್ತು ಅಲ್ವಾ ?… ಎಂದಾಗ ತಲೆ ತಗ್ಗಿಸಿ ನಿಂತವ ಮರು ಮಾತಾಡಿರಲಿಲ್ಲಾ , ಆದರೂ ಆತನ ಮನಸ್ಸು ಬದಲಾಗಲಿಲ್ಲ. ರಾಜಿ ಸಂಧಾನಕ್ಕೂ ಒಪ್ಪಲಿಲ್ಲ. ಕೇಸ್ ನಡೆದು ವಿಚಾರಣೆ ಮುಗಿದು ಕೋರ್ಟ್ ಸಂಪೂರ್ಣ ಆಸ್ತಿಯನ್ನು ಆರು ಭಾಗ ಮಾಡಿ ತೀರ್ಪನ್ನು ನಮ್ಮ ಪರವಾಗಿ ಕೊಟ್ಟಿತ್ತು.

ಇದು ಖುಷಿ ವಿಚಾರವಾದರೂ ಕೋರ್ಟ್ ಸೂಚಿಸಿದ ಆಸ್ತಿಯನ್ನು ತಮ್ಮ ಸುಪರ್ದಿಗೆ ಪಡೆಯಲು ಹೆಣ್ಣು ಮಕ್ಕಳು ಯೋಚಿಸಿದ್ರು ತಂದೆ-ತಾಯಿಗೆ ಒಂದು ಭಾಗ, ಮೂರು ಹೆಣ್ಣು ಮಕ್ಕಳಿಗೆ ಒಂದೊಂದು ಭಾಗ, ತಮ್ಮನಿಗೆ ಸೇರಿದ್ದು ಒಂದು ಭಾಗ, ಹಾಗೆ ಪ್ರೀತಿಸಿ ಮದುವೆ ಆಗಿ ಹೋಗಿದ್ದವಳ ಭಾಗದ ಆಸ್ತಿಯನ್ನು ಕಾಯ್ದಿರಿಸಿದರು.. ಪ್ರೀತಿಸಿ ಮದುವೆ ಆದ ತಂಗಿ.. ಅಣ್ಣನ ಪರವಾಗಿ ನಿಂತಳು. ಉಳಿದ ಮೂರು ಹೆಣ್ಣುಮಕ್ಕಳು ತಂದೆ ತಾಯಿ ಪರವಾಗಿ ನಿಂತರು.

ಮತ್ತೆ ಕೋರ್ಟ್ ಆರ್ಡರ್ ಮೇಲೆ ಪೈನಲ್ ಡಿಕ್ರೀಪಿಟಿಷನ್ ಹಾಕಿ ದಾವೆಸ್ವತನ್ನು ಅವರವರಿಗೆ ದಕ್ಕುವಂತೆ ಮಾಡುವಾಗ ನ್ಯಾಯಾಲಯ ಸರ್ವೇಗೆ ಕೋರ್ಟ್ ಕಮೀಷನರ್ ನೇಮಿಸಿತ್ತು. ಸರ್ವೇ ದಿನ ನಾನು ಸಹ ದಾವೆಸ್ವತಿನ ಜಾಗಕ್ಕೆ ಹೋದಾಗ ಅವರ ಮನೆಯೊಳಗೆ ಹೋಗಿದ್ದೆ, ಆ ತಾಯಿಯ ಕಣ್ಣಲ್ಲಿ ನೀರು ತುಂಬಿತ್ತು. ಅದು ಕೇಸ್ ಗೆದ್ದಿದಕ್ಕೆ ಆನಂದ ಭಾಷ್ಪವ ಅಥವಾ
ಅಂತಹ ಮಗನಿಗೆ ಜನ್ಮ ಕೊಟ್ಟಿದ್ದಕೆ ನೋವಿನ ಕಣ್ಣೀರ. ನನಗೆ ತಿಳಿಯಲಿಲ್ಲ. ಮಗನೊಬ್ಬ ತನ್ನ ತಾಯಿಯನ್ನು ಸರಿಯಾಗಿ ನೋಡಿಕೊಂಡು ಅವರೊಂದಿಗೆ ಪ್ರೀತಿಯಿಂದ ಎರಡು ಮಾತಾಡುತ್ತಾ ಹೆಂಡತಿಗೆ ಬುದ್ಧಿ ಹೇಳಿ ತಿದ್ದಿ ಅವಳನ್ನು ದಾರಿಗೆ ತಂದಿದ್ದರೆ ಎಲ್ಲರೂ ಒಂದೇ ಮನೆಯಲ್ಲಿ ನಗು ನಗುತ್ತಾ ಇರಬಹುದಿತ್ತು. ಆಸ್ತಿಯಾಗಲಿ, ಮನೆಯಾಗಲೀ ಭಾಗವಾಗುತ್ತಿರಲಿಲ್ಲಾ.  ಹಿರಿ ಜೀವಗಳನ್ನು ಕಡೆಗಣಿಸದಿರಿ. ಅವರಲ್ಲೂ ಭಾವನೆಗಳಿವೆ. ಅವುಗಳಿಗೆ ನಾವು ಮಕ್ಕಳಾಗಿ ಬಣ್ಣ ತುಂಬೋಣ. ಇಳಿವಯಸ್ಸಿನ ಬದುಕನ್ನು ಮತ್ತಷ್ಟೂ ಸುಂದರವಾಗಿಸೋಣ.

‘ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕಥೆಗಳು’ ಹಿಂದಿನ ಅಂಕಣವನ್ನು ಓದಲು ಕೆಳಗಿನ ಲಿಂಕ್ ಬಳಸಿ :


  • ಹೆಚ್. ಆರ್ . ಪವಿತ್ರ ಧರ್ಮಪ್ಪ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW