ಅಮಾವಾಸ್ಯೆಯ ಮಧ್ಯರಾತ್ರಿ ಅಂದು ಆ ರಸ್ತೆಯಲ್ಲಿ ಶ್ವೇತ ವಸ್ತ್ರಧಾರಿಯೊಬ್ಬಳು ನೀಳ ಕೇಶವನ್ನು ಬಿಟ್ಟುಕೊಂಡು ರಸ್ತೆಯ ಮಧ್ಯೆದಲ್ಲಿ ದಾಟಿ ಹೋಗುತ್ತಿದ್ದಳು. ಅವಳ ಮೂಗಿನ ನತ್ತು ಪಳಪಳಿಸುತ್ತಿತ್ತು. 28 ವರ್ಷದಿಂದ ಆ ಶ್ವೇತ ವಸ್ತ್ರಧಾರಿ ಯಾರೆಂದು ಈಗಲೂ ಕಾಡುತ್ತಿದೆ. ಅವಳು ಯಾರಿರಬಹುದು ಎನ್ನುವುದನ್ನು ಅರುಣ್ ಪ್ರಸಾದ್ ಅವರು ಬರೆದ ಒಂದು ರೋಚಕ ಲೇಖನವನ್ನು ತಪ್ಪದೆ ಓದಿ…
ಇದು ನಡೆದದ್ದು 1993ರಲ್ಲಿ ಅವತ್ತು ಅಮಾವಾಸ್ಯೆ, ಅವತ್ತು ಬೆಳಿಗ್ಗೆನೇ ತಾಳಗುಪ್ಪದ ಕೃಷ್ಣಮೂರ್ತಿ (ಅಂಬೇಡ್ಕರ್ ಸಂಘ ಇದ್ದಿದ್ದರಿಂದ ಇವರಿಗೆ ಅಂಬೇಡ್ಕರ ಕೃಷ್ಣಮೂರ್ತಿ ಅಂತ ಹೆಸರು) ಶಿವಮೊಗ್ಗದಿಂದ ಅಂಬಾಸಡರ್ ಟ್ಯಾಕ್ಸಿಯಲ್ಲಿ ಬಂದು ನನ್ನ ಕೊಪ್ಪಕ್ಕೆ ಕರೆದೊಯ್ದರು ಅಲ್ಲಿ ಪ್ರಖ್ಯಾತ ಜೋತಿಷಿ ಬಾಲಗೋಪಾಲ ಜೋಯಿಸರನ್ನು ಕರೆದುಕೊಂಡು ಕುಂದಾಪುರದ ಹಟ್ಟಿಯಂಗಡಿ ವಿನಾಯಕ ದೇವಸ್ಥಾನದಲ್ಲಿ ನಡೆಯುವ ವಿಶೇಷ ಗಣಹೋಮಕ್ಕೆ ಭಾಗವಹಿಸಲು ಹೋಗಿದ್ದೆವು.
ಹಟ್ಟಿಯಂಗಡಿಯಲ್ಲಿ ಹೋಮ ಹವನ ಮುಗಿಸಿ ಪುನಃ ಜೋತಿಷಿ ಬಾಲ ಗೋಪಾಲ ಜೋಯಿಸರನ್ನು ಕೊಪ್ಪದ ಅವರ ಮನೆಗೆ ತಲುಪಿಸುವಾಗ ಮಧ್ಯರಾತ್ರಿ ಒ0ದು ಗಂಟೆ ದಾಟಿತ್ತು.
ಅವರನ್ನು ಮನೆಗೆ ತಲುಪಿಸಿ ನನ್ನ ಮನೆಗೆ ತಲುಪಿಸಲು ಅಂಬಾಸಡರ್ ಟ್ಯಾಕ್ಸಿ ಕೊಪ್ಪದಿಂದ ತೀಥ೯ಹಳ್ಳಿ ಮಾರ್ಗವಾಗಿ ಹೊರಟಿತು. ಟ್ಯಾಕ್ಸಿ ಡ್ರೈವರ್ ನಿದ್ದೆ ಮಾಡಬಾರದೆಂದು ನಾನು ಮುಂದಿನ ಸೀಟಲ್ಲಿ ರಸ್ತೆ ಸವೆಸಲು ಡ್ರೈವರ್ ಗೆ ಒಂದೊಂದು ಪ್ರಶ್ನೆ ಉರಳಿಸುವುದು ಮಾಡುತ್ತಿದ್ದೆ, ಹಿರಿಯ ಗೆಳೆಯರು ಹಿಂದಿನ ಸೀಟಲ್ಲಿ ಕುಳಿತಲ್ಲೇ ಅರೆ ಬರೆ ನಿದ್ದೆ ಮಾಡುತ್ತಿದ್ದರು.
ಕೊಪ್ಪ ದಾಟಿ ಕೆಲವು ಕಿಲೋ ಮೀಟರ್ ದಾಟಿರಬೇಕು ಕಾರಿನ ಬೆಳಕಿಗೆ ಕಣ್ಣು ಕುಕ್ಕುವಂತೆ ನೀಳಕಾಯದ ಸುಂದರ ಯುವತಿ ಬಿಳಿ ವಸ್ತ್ರ ದಾರಿಣಿ ಆಗಿ ಆಗಷ್ಟೇ ನೀರಲ್ಲಿ ಮುಳುಗಿ ಎದ್ದಂತೆ ತಲೆ ಕೂದಲಿನಿಂದ ನೀರಿಳಿಯುತ್ತಾ ಬೀಸು ನಡಿಗೆಯಲ್ಲಿ ನಮ್ಮ ಕಾರಿನ ಎದುರಿನಿಂದ (ಬಲ ಬಾಗದಲ್ಲಿ) ಸಾಗಿ ಹೋದಳು… ಅವಳ ದೊಡ್ಡ ಮೂಗುತಿಯು ಕಾರಿನ ಪ್ರಖರ ಬೆಳಕಲ್ಲಿ ಮಿಂಚಿತ್ತು.
ಇದೆಲ್ಲ ಕೆಲ ಸೆಕೆಂಡಿನಲ್ಲಿ ನಡೆದು ಹೋದ ವೇಗದ ಘಟನೆ, ಅದು ಮಾಗಿಯ ಕಾಲದ ತೀವ್ರ ಚಳಿ, ಮೈ ಜಮ್ಮೆಂದಿತು ತಕ್ಷಣ ಪ್ರಯಾಣದ ಆಯಾಸದಲ್ಲಿ ನಿದ್ದೆಯ ಅರೆ ಬರೆ ಕ್ಷಣದ ಹುಸಿಗನಸು ಅನ್ನಿಸಿತು ಆಗ ಕೇಳಿತು ಡ್ರೈವರ್ ರ ಭಯ ಮಿಶ್ರಿತ ಆಳದಿಂದ ಬಂದಂತ ದ್ವನಿ “ನೀವು ನೋಡಿದರಾ ಸಾರ್” ಅಂತ ಹೌದು ಇದೆ೦ತಾರೀ ? ಈ ಚಳಿಯಲ್ಲಿ ಒಬ್ಬಳೇ ಯುವತಿ ಆಗಷ್ಟೇ ತಲೆ ಮೇಲೆ ನೀರು ಸುರಿದುಕೊಂಡು ದಟ್ಟ ಕಾಡಿನಲ್ಲಿ ಮಧ್ಯರಾತ್ರಿ ಹೋದದ್ದೆಲ್ಲಿಗೆ ? ಅಂದೆ, ಹಿಂದಿನ ಸೀಟಿನಿಂದ ಗೆಳೆಯ ಕೃಷ್ಣಮೂರ್ತಿಯವರು ಹಿಂದಕ್ಕೆ ನೋಡದೆ ಜಾಗೃತೆಯಿಂದ ಗಾಡಿ ಓಡಿಸು ಅಂದಾಗಲೇ ಗೊತ್ತಾಯಿತು ಕಾರಲ್ಲಿದ್ದ ಮೂರು ಜನರೂ ಇದನ್ನು ನೋಡಿದ್ದೇವ೦ತ ಹಾಗಾಗಿ ಇದು ಕನಸಾಗಿರಲಿಲ್ಲ.
ಊರು ಮುಟ್ಟುವ ತನಕ ಇದೇ ವಿಮರ್ಶೆಯ ಭಯ ಮತ್ತು ಥ್ರಿಲ್ ನ ಅನುಭವ ದಾರಿ ಸವದದ್ದೇ ಗೊತ್ತಾಗಲಿಲ್ಲ, ನನಗೆ ಇಂತಹ ನಾಕಾರು ವಿಸ್ಮಯದ ಘಟನೆ ನೋಡಿದ್ದರಿಂದ ಅಂತಹ ಭಯ ಆಗಿರಲಿಲ್ಲ.
ನಂತರ ಕೆಲ ದಿನದ ನಂತರ ಕೃಷ್ಣಮೂರ್ತಿಯವರು ಸಿಕ್ಕಿದಾಗ ತಿಳಿಸಿದ್ದು ಜೋತಿಷಿ ಬಾಲಗೋಪಾಲ ಜೋಯಿಸರ ಪ್ರಕಾರ ಅದು ಬೂತವಲ್ಲ ಅಲ್ಲಿನ ದೇವತೆಯ ದರ್ಶನ ನಿಮಗೆ ಆಯಿತು ಒಳ್ಳೆಯದು ಅಂದರಂತೆ ಆದರೆ ಈ ದೃಶ್ಯ ನೋಡಿದ ಡ್ರೈವರ್ ಬೂತ ಭಯಕ್ಕೆ ಒಳಪಟ್ಟು ಒಂದೆರೆಡು ದಿನ ತೀವ್ರ ಜ್ವರದಲ್ಲಿದ್ದರಂತೆ.
ಜೋತಿಷಿ ಬಾಲಗೋಪಾಲ ಜೋಯಿಸರು ಈಗಿಲ್ಲ ಒಂದು ಕಾಲದಲ್ಲಿ ಸಾಗರ ಸೊರಬದ ಅಡಿಕೆ ತೋಟದ ಮಾಲಿಕರುಗಳಾದ ಹವ್ಯಕ ಹೆಗ್ಗಡೆಗಳಿಗೆ ಅವರು ಚಿರಪರಿಚಿತರು, ದೇವೇಗೌಡರು ಪ್ರಧಾನಿ ಆಗಿದ್ದಾಗ ಅವರಿಗಾಗಿ ಇವರು ನಡೆಸಿದ ಬೃಹತ್ ಯಾಗ ಆಗ ಪ್ರಸಿದ್ಧಿ ಆಗಿತ್ತು, ನಿರಂತರವಾಗಿ ಪಿಲ್ಟರ್ ಇಲ್ಲದ ಬರ್ಕಲಿ ಸಿಗರೇಟು ಸೇದಿ ಹೋಗೆ ಬಿಡುತ್ತಿದ್ದ ಚೈನ್ ಸ್ಮೋಕರ್ ಆಗಿದ್ದರು, ಅವರಿಗೆ ದೂಮ ದೇವತೆ ವಶ ಆಗಿದ್ದಾಳೆ ಈ ಹೊಗೆಯಲ್ಲೇ ಅವರಿಗೆ ಭೂತ – ವರ್ತಮಾನ – ಭವಿಷ್ಯ ಗೊತ್ತಾಗುತ್ತದೆ ಎಂದು ಸುದ್ದಿ ಆಗಿತ್ತು.
ನಾನು ಸ್ವತಃ ನಾಸ್ತಿಕ ಅಲ್ಲ ದೇವರನ್ನು ನಂಬುವ ಆಸ್ತಿಕ, ಜೋತಿಷ ಶಾಸ್ತ್ರ ನಂಬಿದ್ದೇನೆ. ಆದರೆ ಈ ಅಮಾವಾಸ್ಯೆಯ ಮಧ್ಯರಾತ್ರಿಯ ಶ್ವೇತ ವಸ್ತ್ರಧಾರಿ ಯಾರು ಅಂತ 28 ವರ್ಷದಿಂದ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ !.
- ಅರುಣ್ ಪ್ರಸಾದ್