‘ಗಗನ ಚುಂಬಿ ಮರಗಳು ಕಟ್ಟಡಗಳಾಗಿ ಪರಿವರ್ತಿತವಾಗುತ್ತಿರುವ ಈ ಪ್ರಗತಿ ಇಂದು ಸಂವೇದನೆಗಳ ಮಾರ್ದವಗಳನ್ನೆಲ್ಲ ಹೀರಿದೆ’… – ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಕವನವನ್ನು ತಪ್ಪದೆ ಮುಂದೆ ಓದಿ…
ಹನಿಯಿಲ್ಲದ ಕೊಡಗಿನಲ್ಲಿ ಬರೀ
ಸುಡು ಬಿಸಿಲ ಪ್ರತಾಪ
ತಾಪ ಬರಿ ಮೈಗಲ್ಲ ಮನಸ್ಸಿಗೆ
ಭರವಸೆಯ ವಿಕೋಪಕೆ
ತನ್ನದೆಂದು ಹೆಮ್ಮೆಯೊಂದು
ಇದ್ದರಾಯಿತೆ
ಬೇಡವೆ ನಂಬಿದವರಿಗೆ ಇಂಬಾಗುವ ಮಾರ್ದವತೆ
ಬಡಿಬಡಿದು ಬಿಸಿಲು ಮಳೆಯ
ಸೂಚನೆಯಿಲ್ಲದೆ
ಕೊಡಗಿನ ಸಮೃದ್ಧ ಮೋಡವೂ ಬಂಜೆ
ಎಲ್ಲಿದೆ ಆ ತಟತಟಿಸುವ
ಹನಿ ಕಾಲ್ಗೆಜ್ಜೆ
ಜೀವದೊರತೆಯೂ ಇಲ್ಲ ಭಾವ
ಸಾಹಚರ್ಯವೂ ಇಲ್ಲ
ಉಬ್ಬುಬ್ಬಿ ಪ್ರಶಂಸೆಯ
ಗಾಳಿ ಬುರುಡೆ
ಹೀಗೆ ಒಡೆಯುವುದೆ…
ಕಾಫಿ ತೋಟಗಳಲ್ಲಿ ಕ್ರಾಪು
ಮಾಡಿದ ಮರಗಳು
ಮೆದುಳೇ ಇಲ್ಲದಂತೆ ಖಾರದ ಕರಿಮೆಣಸನ್ನು ತಬ್ಬಿ
ರೋದಿಸುತಿವೆ.
ಅವಕ್ಕೂ ಏನೇನೋ ರುಜಿನ…
ಕಾಮಾಲೆಯಂತೆ..
ಹಳದಿಕಣ್ಣು, ಸೊರಗಿದೆ..ಖುಷಿ ತಾರದ..ಸ್ವರ್ಣವರ್ಣ
ಬಹುಶಃ…
ನೈಸರ್ಗಿಕವಲ್ಲದ ಕಾಟಾಚಾರಕ್ಕೆ
ಬೆಚ್ಚಿ..ಮೇದೋಜ್ಜೀರಕವೋ
ಯಕೃತ್ತೊ…ರೋಗ ಪೀಡಿತವಾಗಿರವಾಗಿರಬಹುದು
ಮನುಷ್ಯರಿಗೆ ಈಗ ಸಾಮಾನ್ಯವಾಗಿರುವ ಪೀಡೆಯಂತೆ…
ಆಗ…ಏಲಕ್ಕಿ ಮಲೆಗಳಲ್ಲಿ
ಬಿಸಿಲಿಗೂ ಪ್ರವೇಶ ನೀಡದಿದ್ದ ಕಾನುಗಳ
ಸಹಜ ಸಂಪತ್ತು,ಮಾನವ ನೈಸರ್ಗಿಕ ಸಂಗಾತಿ,ಎಲೆ ಬೇರು ಹೂ ತೊಗಟೆ
ರೋಗಗಳಿಗೆ ಮನೆಮದ್ದಾಗಿತ್ತು
ಮನೆಮನೆಗಳಲೂ ಗೊತ್ತಿತ್ತು ಇದರ ಮಹತ್ತು!
ಶುದ್ಧ ಜೇನಿನ ತಾಕತ್ತು!
ಎಲ್ಲೋ ಒಸರಿ ಬೆಟ್ಟ ಬಂಡೆಗಳ
ಎದೆಯಲ್ಲಿ ನೆಗೆನೆಗೆದು
ಕಣ್ಸೆಳೆಯುತ್ತಿದ್ದ..ಅಚ್ಚ ಬಿಳಿಯ
ಸ್ವಚ್ಛ ಧಾರೆ…
ಸಹಜ ನರ್ತಕಿ…ಆಮೋದಕಿ
ಜಲಪೂರಕಿ….
ಕಲ್ಪನಾ ಜನಕಿ….ಜೀವಸೆಲೆಯ ನೆಲೆ
ಕಾನೊಡಲ ಮಕ್ಕಳು ಕುಡಿಯರು ಅಡಿಯರು..ಜೇನು ಕುರುಬರು…
ಕಾಡು ಪ್ರಾಣಿಗಳ ಜಾಡು ಹಿಡಿದು…ತಾವೂ ಬದುಕಿ
ಅವುಗಳ ನಾಡಿ ಮಿಡಿದು….
ಬದುಕಿದ…ನಿರುಪದ್ರವಿಗಳು..
ಬಿದ್ದಿದ್ದಾರೆ..ಈಗ..ಊರಕೇರಿ
ಗಳ ಆಶ್ರಯಧಾಮದಲ್ಲಿ…
ದಿಕ್ಕೇಡಿಗಳಂತೆ..
ಅವರ ಸಹಜ ಸಾಂಸ್ಕೃತಿಕ ಕಸುವು…ಈಗ..ಕೃತಕ ಉಸಿರಾಟದ…ನೆರವಿನಲ್ಲಿದೆ..
ಅರಣ್ಯದ ಹೃದಯಭಾಷೆಗೆ
ಕಿವಿಯಾಗಿದ್ದ…
ಈ ಜನ ಪ್ರಗತಿಯ ಹೆಸರಲ್ಲಿ
ಕಿವುಡರಾಗಿದ್ದಾರೆ…
ಆನೆ ದಾಳಿಮಾಡುವಾಗ ಬೊಬ್ಬಿರಿಯುವ ನಾವು…
ದಾಳಿ ಮಾಡಲಾರದ ಇವರ ಸಾಂಸ್ಕೃತಿಕ ಸಂಪತ್ತಿಗೂ ಎರವಾಗಿದ್ದೇವೆ. ಅವರ ಬೇಡಿಕೆಗಳ ಬಗ್ಗೆ ಜಾಣಕುರುಡರಾಗಿದ್ದೇವೆ..
ಬದುಕು ಈಗ ವರ್ಷವಿಡೀ ಬೇಸಗೆಯೇ….
ಗಗನ ಚುಂಬಿ ಮರಗಳು ಕಟ್ಟಡಗಳಾಗಿ ಪರಿವರ್ತಿತವಾಗುತ್ತಿರುವ
ಈ ಪ್ರಗತಿ ಇಂದು ಸಂವೇದನೆಗಳ ಮಾರ್ದವಗಳನ್ನೆಲ್ಲ ಹೀರಿದೆ..
ಆಗಸದ ಕಡೆ ಕಣ್ಣ ನೋಟವೆಸೆದು..ನಿಟ್ಟುಸಿರು ಬಿಡುವ ಪಡಿಪಾಟಲು ಇಂದು ಕೊಡಗಿನ ರೈತರಲ್ಲಿ ಸರ್ವೇ ಸಾಮಾನ್ಯವಾಗಿದೆ.
ಹಸಿರ ಕನಸಿನಲಿ ನೆಟ್ಟ ಭತ್ತದ ಸಸಿಗಳು
ನಗೆಗೇಡಿಗಳಾಗಿ…ನೋಟದಲ್ಲೇ
ವಿಷಾದ ಚೆಲ್ಲುತ್ತಿವೆ..
ಅದರೊಳಗೊಂದು ಅಪರೂಪದ ನೋಟ….ಈಗ ಸೆರೆಸಿಕ್ಕಿ
ದೈವಿಕವಾಗಿದೆ..
ನಿನ್ನೆ ಸ್ವಲ್ಪ ಹೊತ್ತು ತಾನಿದ್ದೇನೆಂದು ಭರವಸೆಯಾಗಿ
ಹನಿಹಾಕಿದ ಮೇಘರಾಜ ಕಂಗೆಟ್ಟು ನಿಂತಿದ್ದ
ತೊರೆಗಳಿಗೆ ಮತ್ತೆ ಜೀವ ತುಂಬಿದ್ದಾನೆ…
ಈಗ…ಮತ್ತೆ ಮರೆತೇ ಹೋಗಿದೆ ನೇಸರನ ಮೇಲಿನ ಕೋಪ… ಪದಗಳೆಲ್ಲ..ಹೊನಲು ತುಟಿಗಳಲಿ..ಹಾಡಾಗಿ…
ಹೊಮ್ಮುತ್ತಿವೆ…
ಕೃಷ್ಣ ಧರೆಗಳಿಯುವ ಮುನ್ನ
ತನ್ನ ರಾಧೆಗಾಗಿಯಾದರೂ
ಇಳಿಸಬಹುದೇ ನಂದನವ ಇಳೆಯ ಮಡಿಲಿಗೆ…!
ಅಥವಾ ಇಳಿದಾನೇ ತನ್ನ
ಸುದರ್ಶನದೊಂದಿಗೆ ಅರಿತರೂ ಮಾಡುತ್ತಿರುವ ಪಾಪಗಳ ಲೆಕ್ಕ ತೀರಿಸಲಿಕ್ಕೆ….!
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಕವಿಯತ್ರಿ, ಕೊಡಗು.