‘ಅನಂತನಾಗ್ ಉತ್ಸವ’ಕ್ಕೆ ತಪ್ಪದೆ ಎಲ್ಲರೂ ಬನ್ನಿ…

ಕನ್ನಡದ ಹೆಮ್ಮೆಯ ನಟ ಅನಂತ ನಾಗ್ ಅವರಿಗೆ ೭೫ ವರ್ಷಗಳು ಪೂರೈಸುತ್ತಿರುವುದರ ಜೊತೆಗೆ ಬೆಳ್ಳಿತೆರೆಗೆ ಬಂದು ೫೦ ವರ್ಷಗಳಾಗಿವೆ. ಈ ಸುಸಂದರ್ಭದಲ್ಲಿ ಭಾರತೀಯ ವಿದ್ಯಾ ಭವನ ಸುಚಿತ್ರ ಫಿಲಂ ಸೊಸೈಟಿ ಸಹಕಾರದೊಂದಿಗೆ ‘ಅನಂತನಾಗ್ ಉತ್ಸವ’ವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರಿಗೂ ಸ್ವಾಗತವಿದೆ….

ಕಾರ್ಯಕ್ರಮದ ವಿವರ :

ಅನಂತ ನಾಗ್ -75 : ಬೆಳ್ಳಿ ತೆರೆ-50ʼ , ಸಂಭ್ರಮ, ಸನ್ಮಾನ, ಚಿತ್ರೋತ್ಸವ
ದಿನಾಂಕ : ಸೆಪ್ಟಂಬರ್ ೧೩, ೧೪ ಮತ್ತು ೧೫, ೨೦೨೩
ಸ್ಥಳ : ಭಾರತೀಯ ವಿದ್ಯಾಭವನದ ಕೆ.ಆರ್.ಜೆ ಸಭಾಂಗಣದ ಮತ್ತು ಸುಚಿತ್ರ ಫಿಲಂ ಸೊಸೈಟಿ

ಬೆಂಗಳೂರು : ಕನ್ನಡದ ವಿಸ್ಮಯ ಎಂದೇ ವರ್ಣಿತರಾಗಿರುವ ಹೆಮ್ಮೆಯ ನಟ ಅನಂತ ನಾಗ್ ಅವರು 75 ವರ್ಷಗಳನ್ನು ಪೂರೈಸುತ್ತಿದ್ದು ಬೆಳ್ಳಿತೆರೆಗೆ ಬಂದು ಐವತ್ತು ವರ್ಷಗಳಾಗಿವೆ. ಇದೇ ಸಂದರ್ಭದಲ್ಲಿ ಕಳೆದಿರುವುದು ಕಾಕತಾಳೀಯವಾದರೂ ಅರ್ಥಪೂರ್ಣವಾಗಿದೆ. ಇಂದಿಗೂ ಬಹು ಬೇಡಿಕೆಯ ನಟರಾಗಿರುವ ಸನ್ಮಾನ್ಯ ಅನಂತ್ ನಾಗ್ ಸದಾ ಸುದ್ದಿಯಿಂದ ದೂರವಿದ್ದು ತಮ್ಮಷ್ಟಕ್ಕೆ ತಾವು ಕರ್ತವ್ಯದಲ್ಲಿ ನಿರತರಾಗಿರುವವರು. ಇವರ ಕುರಿತ ಚಲನಚಿತ್ರೋತ್ಸವ, ವಿಚಾರ ಸಂಕಿರಣ ಮತ್ತು ಅಭಿನಂದಾನಾ ಕಾರ್ಯಕ್ರಮವನ್ನು ಭಾರತೀಯ ವಿದ್ಯಾ ಭವನವು ಸುಚಿತ್ರಾ ಫಿಲಂ ಸೊಸೈಟಿಯ ಸಹಕಾರದೊಂದಿಗೆ ಅಯೋಜಿಸಿದೆ. ಭಾರತೀಯ ವಿದ್ಯಾ ಭವನದ ಹಳೆಯ ವಿದ್ಯಾರ್ಥಿಯಾಗಿರುವ ಡಾ. ಅನಂತ ನಾಗ್ ತಾವು ಓದಿದ ಸಂಸ್ಥೆಯ ಮೇಲಿನ ಗೌರವದಿಂದ ಈ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದಾರೆ.

ಸೆಪ್ಟಂಬರ್ 13, 14 ಮತ್ತು 15ರ ಬುಧವಾರ, ಗುರುವಾರ ಮತ್ತು ಶುಕ್ರವಾರದಂದು ಈ ಕಾರ್ಯಕ್ರಮವು ನಡೆಯಲಿದೆ. ಸೆಪ್ಟಂಬರ್ 13ರಂದು ಭಾರತೀಯ ವಿದ್ಯಾಭವನದ ಕೆ.ಆರ್.ಜೆ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮವು ನೆರವೇರಲಿದ್ದು, ಸುಚಿತ್ರ ಫಿಲಂ ಅಂಡ್ ಕಲ್ಚರಲ್ ಅಕಾಡಮಿಯ ಅಧ್ಯಕ್ಷರಾದ ಶ್ರೀ ಪ್ರಕಾಶ ಬೆಳವಾಡಿ ಮತ್ತು ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಶ್ರೀ ಎಚ್.ಎನ್.ಸುರೇಶ್ ಮೂರು ದಿನಗಳ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಅಂದು ಬೆಳಗಿನ ಹನ್ನೊಂದು ಗಂಟೆಗೆ ಸನ್ಮಾನ್ಯ ಅನಂತ ನಾಗ್ ಅವರ ಕುರಿತ ವಿಚಾರ ಸಂಕಿರಣವು ನಡೆಯಲಿದೆ. ಕರ್ನಾಟಕ ಮಾಧ್ಯಮ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸದಾಶಿವ ಶೆಣ್ಯೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಸುಂದರ ರಾಜ್, ಖ್ಯಾತ ನಟರಾದ ಶ್ರೀ ರಮೇಶ್ ಭಟ್ ಅವರು ಅನಂತ ನಾಗ್ ಅವರ ಕೊಡುಗೆಗಳ ಕುರಿತ ತಮ್ಮ ಚಿಂತನೆಗಳನ್ನು ಹಂಚಿ ಕೊಳ್ಳಲಿದ್ದಾರೆ. ಸುಚಿತ್ರಾ ಫಿಲಂ ಸೊಸೈಟಿಯ ಅಧ್ಯಕ್ಷರಾದ ಶ್ರೀ ಎನ್. ನರಹರಿ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಸೆಪ್ಟಂಬರ್ 13, 14 ಮತ್ತು 15ರಂದು ಮೂರೂ ದಿನವೂ ಭಾರತೀಯ ವಿದ್ಯಾ ಭವನ ಮತ್ತು ಸುಚಿತ್ರ ಫಿಲಂ ಸೊಸೈಟಿ ಎರಡೂ ಕಡೆಯಲ್ಲಿ ಅನಂತ್ ನಾಗ್ ಅವರು ಅಭಿನಯಿಸಿದ ಚಿತ್ರಗಳ ಉತ್ಸವ ನಡೆಯಲಿದೆ.

ಸೆಪ್ಟಂಬರ್ 15ರ ಗುರುವಾರ ಸಂಜೆ 4 ಗಂಟೆಗೆ ಭಾರತೀಯ ವಿದ್ಯಾ ಭವನದ ಇ.ಎಸ್.ವಿ ಹಾಲ್ನಲ್ಲಿ ಶ್ರೀಮತಿ ಸ್ಮಿತಾ ಕಾರ್ತಿಕ್ ಮತ್ತು ತಂಡದವರಿಂದ ಡಾ. ಅನಂತ್ ನಾಗ್ ಅಭಿನಯಿಸದ ಆಯ್ದ ಚಿತ್ರಗೀತೆಗಳ ಕಾರ್ಯಕ್ರಮವಿದ್ದು ಅದರ ನಂತರ ಡಾ. ಅನಂತ್ ನಾಗ್ ಅವರ ಅಭಿನಂದನಾ ಕಾರ್ಯಕ್ರಮವು ನೆರವೇರಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಶ್ರೀ ಭಾ.ಮ.ಹರೀಶ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದು ಪ್ರಜಾವಾಣಿ ದಿನ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾದ ಶ್ರೀ ರವೀಂದ್ರ ಭಟ್ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಭಾರತೀಯ ವಿದ್ಯಾ ಭವನದ ಉಪಾಧ್ಯಕ್ಷರು ಮತ್ತು ಯುನೆಸ್ಕೋ ಮಾಜಿ ರಾಯಭಾರಿಗಳೂ ಆದ ಶ್ರೀ ಚಿರಂಜೀವಿ ಸಿಂಘ ಅವರು ಈ ಸನ್ಮಾನ ಕಾರ್ಯಕ್ರಮವನ್ನು ನಡೆಸಿ ಕೊಡಲಿದ್ದು ಭಾರತೀಯ ವಿದ್ಯಾ ಭವನದ ಮಾಧ್ಯಮ ಭಾರತಿ ನಿರ್ದೇಶಕರಾದ ಪ್ರೊ.ಎನ್.ಎಸ್. ಶ್ರೀಧರ ಮೂರ್ತಿಯವರು ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ. ಬಹು ನಿರೀಕ್ಷಿತ ಸನ್ಮಾನ್ಯ ಅನಂತ ನಾಗ್ ಅವರ ಮಾತುಗಳೂ ಇರುತ್ತವೆ.

ತಾವು ಈ ಮಹತ್ವದ ಕಾರ್ಯಕ್ರಮಕ್ಕೆ ಪ್ರಚಾರ ನೀಡಿ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ನೆರವಾಗ ಬೇಕಾಗಿ ಕೋರಿಕೆ.

ವಂದನೆಗಳೊಂದಿಗೆ

  • ಎನ್.ಎಸ್.ಶ್ರೀಧರ ಮೂರ್ತಿ 


  • ಆಕೃತಿ ಕನ್ನಡ ನ್ಯೂಸ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW