ಕೃಷ್ಣ ಕೇವಲ ದೇವಾಲಯದ ಮೂರ್ತಿಯಲ್ಲ, ಬದುಕಿನ ಮಾರ್ಗದರ್ಶಿ. ಕೃಷ್ಣನಿಂದ ನಿತ್ಯಜೀವನಕ್ಕೆ ಸಿಗುವ ಸಂದೇಶವೇನು?ಕೃಷ್ಣ ಸಂಬಂಧಗಳ ಸೌಂದರ್ಯ. ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಕೊಡಗಿನ ಲೇಖಕರಾದ ಗೀತಾಂಜಲಿ ಎನ್ ಎಂ ಅವರು ಬರೆದಿರುವ ವಿಶೇಷ ಲೇಖನವನ್ನು ತಪ್ಪದೆ ಪೂರ್ತಿಯಾಗಿ ಓದಿ…
ಭಾರತೀಯ ಸಂಸ್ಕೃತಿಯ ಉತ್ತುಂಗದಲ್ಲಿ ಅನೇಕ ಮಹಾನ್ ವ್ಯಕ್ತಿತ್ವಗಳು, ದಾರ್ಶನಿಕ ಚಿಂತನೆಗಳು ಮತ್ತು ಆದರ್ಶಗಳು ಶತ ಶತಮಾನಗಳನ್ನು ದಾಟಿ ಇಂದಿಗೂ ಜೀವಂತವಾಗಿವೆ. ಆದರೆ ಅವುಗಳಲ್ಲಿ ಕೃಷ್ಣ ಎಂಬ ಹೆಸರು ಮಾತ್ರ ದೇವತ್ವದ ಗಡಿಯನ್ನು ದಾಟಿ ಭಾರತೀಯರ ದಿನನಿತ್ಯದ ಬದುಕಿನೊಂದಿಗೆ ಅತ್ಯಂತ ಸರಳ ಹಾಗೂ ಸಹಜವಾಗಿ ಬೆರೆತುಹೋಗಿದೆ.
ದ್ವಾಪುರ ಯುಗದ ಭಗವಾನ್ ಶ್ರೀ ಕೃಷ್ಣನು ಕೇವಲ ಪೌರಾಣಿಕ ದೇವನಾಗಿ ಅಲ್ಲದೆ ಚಿಂತನೆ, ನಡವಳಿಕೆ, ಕರ್ತವ್ಯ, ಪ್ರೀತಿ, ನೀತಿ, ತ್ಯಾಗ ಮತ್ತು ಆತ್ಮವಿಶ್ವಾಸದೊಂದಿಗೆ ಬೆಸೆದುಕೊಂಡಿರುವ ಶಾಶ್ವತ ಚೇತನನಾಗಿದ್ದಾನೆ. ಹಾಗಾಗಿ ಕೃಷ್ಣ ಭಾರತೀಯ ಜನರ ಜೀವನದ ಅವಿಭಾಜ್ಯ ಅಂಗವಾಗಿ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿ, ಪ್ರತಿಕ್ಷಣವೂ ಜೀವಿಸುತಿದ್ದಾನೆ.
ಮನೆಯಲ್ಲೊಂದು ಮಗುವಿನ ತುಂಟ ನಗುವಿನಲ್ಲಿ ಕೃಷ್ಣನನ್ನು ಕಾಣುತ್ತೇವೆ. ತಾಯಿಯ ಮಮತೆಯಲ್ಲಿ ಯಶೋದೆಯ ಕೃಷ್ಣನನ್ನು ಕಾಣುತ್ತೇವೆ. ಸ್ನೇಹದಲ್ಲಿ ಸಖನಾಗಿ, ಪ್ರೀತಿಯಲ್ಲಿ ಮಧುರತೆಯಾಗಿ, ಸಂಕಷ್ಟದಲ್ಲಿ ಮಾರ್ಗದರ್ಶಿಯಾಗಿ, ಧರ್ಮದ ಪ್ರಶ್ನೆಯಲ್ಲಿ ಚಿಂತನೆಯಾಗಿ ಕೃಷ್ಣ ನಮ್ಮೊಂದಿಗೆ ಇಂದೂ ನಿಂತಿದ್ದಾನೆ. ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಎಂದರೆ ಬದುಕನ್ನು ಅರ್ಥಮಾಡಿಕೊಳ್ಳುವುದು ಎಂದರ್ಥ.

ಕೃಷ್ಣನ ಬದುಕನ್ನು ಗಮನಿಸಿದರೆ ಅದರಲ್ಲಿ ಜೀವನದ ಬಹುತೇಕ ಎಲ್ಲ ಮುಖಗಳೂ ಕಾಣಿಸುತ್ತವೆ. ಬಾಲ್ಯದ ಮುಗ್ಧತೆ, ಯೌವನದ ಉತ್ಸಾಹ, ಸ್ನೇಹದ ನಿಷ್ಠೆ, ಪ್ರೀತಿಯ ಪಾವಿತ್ರ್ಯತೆ, ರಾಜಕೀಯದ ಚಾತುರ್ಯ, ಸಂಕಷ್ಟ ಎದುರಿಸುವ ಧೈರ್ಯ, ಧರ್ಮದ ಪರ ನಿಲ್ಲುವ ದೃಢತೆ ಮತ್ತು ಮನುಷ್ಯನ ಕರ್ತವ್ಯವನ್ನು ನೆನಪಿಸುವ ತತ್ವಜ್ಞಾನ ಇವೆಲ್ಲವೂ ಕೃಷ್ಣನ ವ್ಯಕ್ತಿತ್ವದಲ್ಲಿ ಒಟ್ಟಾಗಿ ಕಾಣುತ್ತವೆ. ಅದಕ್ಕಾಗಿಯೇ ಕೃಷ್ಣ ಕೇವಲ ಒಂದು ಪೌರಾಣಿಕ ಪಾತ್ರವಲ್ಲ. ಅವನು ಭಾರತೀಯ ಜೀವನ ದರ್ಶನದ ಜೀವಂತ ಪ್ರತೀಕ. ಕೃಷ್ಣ ಕೇವಲ ಉಪದೇಶ ನೀಡಿದವನಲ್ಲ ಜೀವನದ ಸಂಕೀರ್ಣತೆಗಳ ನಡುವೆ ಹೇಗೆ ಬದುಕಬೇಕು ಎಂಬುದನ್ನು ತನ್ನ ಬದುಕಿನ ಮೂಲಕವೇ ಜಗಕ್ಕೆ ತೋರಿಸಿದನು.
ಕೃಷ್ಣನಿಗೆ ಈ ಮಣ್ಣಿನ ಜನಗಳೊಂದಿಗೆ ಇರುವ ಸಂಬಂಧ ಕೇವಲ ಧಾರ್ಮಿಕ ಆಚರಣೆಗಳ ಮಟ್ಟಿಗೆ ಸೀಮಿತವಾಗಿಲ್ಲ. ನಮ್ಮ ಭಾಷೆ, ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಜನಪದ, ಹಬ್ಬ-ಹರಿದಿನಗಳು, ಕುಟುಂಬ ಸಂಬಂಧಗಳು ಮತ್ತು ಜೀವನದ ಮೌಲ್ಯಗಳಲ್ಲಿಯೂ ಕೃಷ್ಣ ಹಾಸುಹೊಕ್ಕಾಗಿದ್ದಾನೆ. ಮನೆಯ ಮಗುವನ್ನು ಮುದ್ದಾಗಿ “ಕೃಷ್ಣ” ಎಂದು ಕರೆಯುವುದರಿಂದ ಹಿಡಿದು, ಕಷ್ಟದ ಸಂದರ್ಭದಲ್ಲಿ “ಕೃಷ್ಣನೇ ದಾರಿ ತೋರಿಸಬೇಕು” ಎನ್ನುವ ನಂಬಿಕೆಯವರೆಗೆ ಅವನು ಭಾರತೀಯ ಮನಸ್ಸಿನ ಭಾಗವಾಗಿದ್ದಾನೆ. ಕೃಷ್ಣನ ಬಾಲಲೀಲೆಗಳು ಮಕ್ಕಳಿಗೆ ಆನಂದ ನೀಡಿದರೆ, ರಾಧಾ-ಕೃಷ್ಣರ ಪ್ರೇಮ ತ್ಯಾಗ, ಮಾನವೀಯ ಭಾವನೆಗಳ ಸೂಕ್ಷ್ಮತೆಯನ್ನು ಪರಿಚಯಿಸುತ್ತದೆ. ಇನ್ನೊಂದೆಡೆ, ಕುರುಕ್ಷೇತ್ರದ ರಣಾಂಗಣದಲ್ಲಿ ಅರ್ಜುನನಿಗೆ ನೀಡಿದ ಭಗವದ್ಗೀತೆಯ ಸಂದೇಶ ಮನುಷ್ಯನ ಅಂತರಂಗದ ಗೊಂದಲಗಳಿಗೆ ತಾತ್ವಿಕ ಉತ್ತರವಾಗಿ ನಿಂತಿದೆ. ಹೀಗಾಗಿ ಕೃಷ್ಣನು ನಮ್ಮ ಭಕ್ತಿಯಲ್ಲೂ ಇದ್ದಾನೆ,ಭಾವನೆಯಲ್ಲೂ ಇದ್ದಾನೆ, ಚಿಂತನೆಯಲ್ಲೂ ಇದ್ದಾನೆ, ಕರ್ತವ್ಯದಲ್ಲೂ ಇದ್ದಾನೆ.
ಬದುಕನ್ನು ಅರ್ಥಮಾಡಿಕೊಳ್ಳಲು
ಭಗವದ್ಗೀತೆ ಎಂಬ ಜೀವನಪಾಠ.

ನಮ್ಮ ದೇಶದ ಪವಿತ್ರ ಗ್ರಂಥಗಳಲ್ಲಿ ಒಂದಾದ ಭಗವದ್ಗೀತೆಯ 18 ಅಧ್ಯಾಯಗಳು ಹಾಗೂ 700 ಶ್ಲೋಕಗಳ ಮೂಲಕ ಕೃಷ್ಣ ಒಂದು ಯುದ್ಧಭೂಮಿಯ ಕಥೆಯನ್ನು ಮಾತ್ರ ಹೇಳಲಿಲ್ಲ, ಅದರೊಳಗೆ ಇಡೀ ಮಾನವ ಜೀವನದ ಚಿತ್ರಣವನ್ನೇ ಕಣ್ಣಮುಂದೆ ಕಟ್ಟಿಕೊಟ್ಟಿದ್ದಾನೆ, ಕರ್ತವ್ಯದಿಂದ ಕರ್ಮದವರೆಗೆ, ಗೊಂದಲದಿಂದ ಜ್ಞಾನದೆಡೆಗೆ, ಸೋಲಿನಿಂದ ಸಮತ್ವದವರೆಗೆ, ಬದುಕಿನ ಪ್ರತಿಯೊಂದು ಹೆಜ್ಜೆಗೂ ದಾರಿದೀಪವಾಗುವ ಶಾಶ್ವತ ಜೀವನದರ್ಶನವನ್ನು ನೀಡಿದನು.ಕುರುಕ್ಷೇತ್ರದ ರಣರಂಗದಲ್ಲಿ ಅರ್ಜುನನ ಮನಸ್ಸಿನ ಗೊಂದಲಕ್ಕೆ ಕೃಷ್ಣ ನೀಡಿದ ಉತ್ತರಗಳ ರೂಪದಲ್ಲಿ ಹೊರಹೊಮ್ಮಿದ ಗೀತಸಾರದ ಗೀತೆಯು, ವಾಸ್ತವದಲ್ಲಿ ಕೇವಲ ಯುದ್ಧದ ಸಂದರ್ಭದಲ್ಲಿ ನೀಡಿದ ಉಪದೇಶವಲ್ಲ, ಮನುಷ್ಯನ ಇಡೀ ಬದುಕನ್ನೇ ಕಣ್ಣಮುಂದೆ ಕಟ್ಟಿಕೊಡುವ ಸಮಗ್ರ ಜೀವನದರ್ಶನ. ಕರ್ಮ, ಜ್ಞಾನ, ಭಕ್ತಿ, ಧರ್ಮ, ಆತ್ಮಸಂಯಮ, ಸಮತ್ವ, ಕರ್ತವ್ಯ ಮತ್ತು ಮಾನವೀಯ ಮೌಲ್ಯಗಳ ಕುರಿತು ಕೃಷ್ಣ ನೀಡಿದ ಸಂದೇಶಗಳು ಸಾವಿರಾರು ವರ್ಷಗಳ ನಂತರವೂ ನಮ್ಮ ನಿತ್ಯಜೀವನಕ್ಕೆ ದಾರಿದೀಪವಾಗಿವೆ.
“ನ ಹಿ ಜ್ಞಾನೇನ ಸದೃಶಂ”
ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ|
ಅರ್ಥ: ಈ ಲೋಕದಲ್ಲಿ ಜ್ಞಾನಕ್ಕಿಂತ ಪವಿತ್ರವಾದುದು ಮತ್ತೊಂದಿಲ್ಲ. ಇದು ಶಿಕ್ಷಣದ ನಿಜವಾದ ಉದ್ದೇಶವನ್ನು ನೆನಪಿಸುತ್ತದೆ. ಜ್ಞಾನವೆಂದರೆ ಕೇವಲ ಅಂಕಗಳನ್ನು ಗಳಿಸುವುದಲ್ಲ, ಸರಿ–ತಪ್ಪನ್ನು ಗುರುತಿಸುವ ವಿವೇಕವನ್ನು ಬೆಳೆಸಿಕೊಳ್ಳುವುದು. ಭಗವದ್ಗೀತೆಯ ಗೀತೆಯ ಶ್ಲೋಕಗಳು ಅಂದು, ಇಂದು, ಮುಂದು, ಮತ್ತೆಂದೂ ಬದುಕಿನ ಸೂತ್ರಗಳು, ಅಂದು ಕುರುಕ್ಷೇತ್ರದಲ್ಲಿ ಅರ್ಜುನನ ಗೊಂದಲಕ್ಕೆ ಕೃಷ್ಣ ನೀಡಿದ ಉತ್ತರಗಳು ಸಾವಿರಾರು ವರ್ಷಗಳ ನಂತರವೂ ಇಂದೂ ನಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಿವೆ.
“ಸೋಲಿನ ಭಯ ಬಂದಾಗ ಕರ್ಮವನ್ನು ನೆನಪಿಸುತ್ತದೆ,ಗೊಂದಲ ಬಂದಾಗ ವಿವೇಕವನ್ನು ಕಲಿಸುತ್ತದೆ, ಅಹಂಕಾರ ಬಂದಾಗ ಸಮತ್ವವನ್ನು ನೆನಪಿಸುತ್ತದೆ, ನಿರಾಸೆ ಬಂದಾಗ ಆತ್ಮವಿಶ್ವಾಸವನ್ನು ತುಂಬುತ್ತದೆ, ಅನ್ಯಾಯ ಕಂಡಾಗ ಧರ್ಮದ ಪರ ನಿಲ್ಲಲು ಪ್ರೇರೇಪಿಸುತ್ತದೆ, ಭೇದಭಾವ ಬಂದಾಗ ಸಮದೃಷ್ಟಿಯನ್ನು ಕಲಿಸುತ್ತದೆ.”
ಹೀಗಾಗಿ ಭಗವದ್ಗೀತೆ ಕೇವಲ ಓದಿ ಮುಗಿಸುವ ಗ್ರಂಥವಲ್ಲ, ಪ್ರತಿದಿನ ಬದುಕಿನಲ್ಲಿ ತೆರೆದು ನೋಡಬೇಕಾದ ಅಂತರಂಗದ ಕನ್ನಡಿ. ಕೃಷ್ಣನ ಸಂದೇಶದ ನಿಜವಾದ ಅರ್ಥವನ್ನು ಅರಿಯುವುದು ಎಂದರೆ ಶ್ಲೋಕಗಳನ್ನು ಕಂಠಪಾಠ ಮಾಡುವುದು ಮಾತ್ರವಲ್ಲ, ಅವುಗಳ ಮೌಲ್ಯಗಳನ್ನು ನಮ್ಮ ನಡೆ–ನುಡಿಯಲ್ಲಿ ಅಳವಡಿಸಿಕೊಳ್ಳುವುದು.
ಗೀತೆಯನ್ನು ಕೈಯಲ್ಲಿ ಹಿಡಿದಿರುವುದಕ್ಕಿಂತ, ಗೀತೆಯ ಒಂದು ಸಂದೇಶವನ್ನಾದರೂ ಬದುಕಿನಲ್ಲಿ ಹಿಡಿದಿರುವುದು ಶ್ರೇಷ್ಠ. ಕೃಷ್ಣನ ಜೀವನವನ್ನು ಇಂದಿನ ಕಾಲಕ್ಕೆ ಅನ್ವಯಿಸಿಕೊಂಡು ನೋಡಿದಾಗ ಅದರ ಪ್ರಸ್ತುತತೆ ಇನ್ನಷ್ಟು ಸ್ಪಷ್ಟವಾಗುತ್ತದೆ. ಭಗವದ್ಗೀತೆಯ ಅತ್ಯಂತ ಪ್ರಸಿದ್ಧ ಸಂದೇಶಗಳಲ್ಲಿ ಒಂದಾದ ಕರ್ತವ್ಯದಿಂದ ಹಿಂದೆ ಸರಿಯಬಾರದು ಎಂಬುದು ಇಂದಿನ ಯುವ ಪೀಳಿಗೆಗೆ ಮಾರ್ಗಧರ್ಶಕ.

ಕೃಷ್ಣನಿಂದ ನಿತ್ಯಜೀವನಕ್ಕೆ ಸಿಗುವ ಸಂದೇಶವೇನು
ಇಂದಿನ ಯುವಜನತೆ ಸ್ಪರ್ಧೆ, ಸೋಲು, ನಿರೀಕ್ಷೆ ಮತ್ತು ಒತ್ತಡಗಳ ನಡುವೆ ಬದುಕುತ್ತಿದೆ. ಸಣ್ಣ ಪುಟ್ಟ ವಿಷಯಕ್ಕೂ ಕಂಗೆಡುತ್ತಾರೆ, ಫಲಿತಾಂಶದ ಬಗ್ಗೆ ಅತಿಯಾದ ಚಿಂತೆಯಲ್ಲಿ ಓದುವ ಪ್ರಯತ್ನವನ್ನೇ ಕೈಬಿಡುವ ಮನಸ್ಥಿತಿಯೂ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷ್ಣನ ಸಂದೇಶ ನಮಗೆ ನೆನಪಿಸುವುದು ನಮ್ಮ ಕೈಯಲ್ಲಿರುವುದು ಪ್ರಾಮಾಣಿಕ ಪ್ರಯತ್ನ, ಪ್ರತಿಯೊಂದು ಫಲಿತಾಂಶವೂ ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಇದು ಸೋಲನ್ನು ಒಪ್ಪಿಕೊಳ್ಳುವ ಸಂದೇಶವಲ್ಲ, ಸೋಲಿನ ಭಯದಿಂದ ಪ್ರಯತ್ನವನ್ನೇ ಬಿಟ್ಟುಕೊಡಬೇಡಿ ಎಂಬ ಸಂದೇಶ, ಸಂಕಷ್ಟದಲ್ಲಿ ಮನಸ್ಸನ್ನು ಕಳೆದುಕೊಳ್ಳಬಾರದು, ಕುರುಕ್ಷೇತ್ರದಲ್ಲಿ ಅರ್ಜುನನ ಕೈಯಲ್ಲಿ ಗಾಂಡೀವವಿದ್ದರೂ ಮನಸ್ಸಿನಲ್ಲಿ ಗೊಂದಲವಿತ್ತು. ಕೃಷ್ಣ ಮೊದಲು ಅವನ ಭಯವನ್ನು ಅರ್ಥಮಾಡಿಕೊಂಡು, ನಂತರ ಅವನಿಗೆ ಜ್ಞಾನವನ್ನು ನೀಡಿದ. ಇದು ಇಂದಿನ ಮನುಷ್ಯನಿಗೂ ಬಹಳ ದೊಡ್ಡ ಪಾಠ. ಸಂಕಷ್ಟ ಬಂದಾಗ ನಮ್ಮ ಬಳಿ ಸಾಮರ್ಥ್ಯವಿಲ್ಲವೆಂದಲ್ಲ, ಆ ಕ್ಷಣದಲ್ಲಿ ನಮ್ಮ ಮನಸ್ಸು ಗೊಂದಲಕ್ಕೊಳಗಾಗಿರುತ್ತದೆ. ಆ ಗೊಂದಲವನ್ನು ದೂರಮಾಡಿ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯೇ ಕೃಷ್ಣನ ಚಿಂತನೆಯ ಮಹತ್ವ.
ಧರ್ಮ ಎಂದರೆ ಕೇವಲ ಆಚರಣೆ ಅಲ್ಲ
ಕೃಷ್ಣನ ದೃಷ್ಟಿಯಲ್ಲಿ ಧರ್ಮವೆಂದರೆ ಕೇವಲ ಪೂಜೆ, ಆಚರಣೆ ಅಥವಾ ಸಂಪ್ರದಾಯವಲ್ಲ. ಅದು ನ್ಯಾಯ, ಕರ್ತವ್ಯ, ಸತ್ಯ ಮತ್ತು ಸಮತೆಯ ಪರ ನಿಲ್ಲುವ ನೈತಿಕ ಹೊಣೆಗಾರಿಕೆ. ಅದಕ್ಕಾಗಿಯೇ ಕೃಷ್ಣನ ಜೀವನವನ್ನು ಅಧ್ಯಯನ ಮಾಡಿದಾಗ ಧರ್ಮವನ್ನು ಕೇವಲ ಧಾರ್ಮಿಕ ಅರ್ಥದಲ್ಲಿ ನೋಡದೆ, ಸಾಮಾಜಿಕ ಮತ್ತು ನೈತಿಕ ಅರ್ಥದಲ್ಲಿಯೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ, ಜೀವನದಲ್ಲಿ ವಿವೇಕ ಎಷ್ಟು ಅಗತ್ಯವೆಂಬುದು ಕೃಷ್ಣನ ವ್ಯಕ್ತಿತ್ವದ ಮತ್ತೊಂದು ವಿಶಿಷ್ಟ ಆಯಾಮ ಅವನ ವಿವೇಕ ಮತ್ತು ಸಂದರ್ಭೋಚಿತ ನಿರ್ಧಾರ ಶಕ್ತಿಯು ಅದ್ಬುತವಾದದ್ದು. ಜೀವನ ಯಾವಾಗಲೂ ಸರಳವಾಗಿರುವುದಿಲ್ಲ ಕೆಲವೊಮ್ಮೆ ಸತ್ಯವನ್ನು ಉಳಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.ಕೆಲವೊಮ್ಮೆ ಬಲಕ್ಕಿಂತ ಬುದ್ಧಿ ಮುಖ್ಯವಾಗುತ್ತದೆ ಎಂಬುದನ್ನು ಕೃಷ್ಣ ತನ್ನ ಚಾತುರ್ಯದ ಮೂಲಕ ತೋರಿಸಿದ್ದಾನೆ.

ಕೃಷ್ಣ ಸಂಬಂಧಗಳ ಸೌಂದರ್ಯ
ಕೃಷ್ಣ ಎಂದಾಕ್ಷಣ ಮನಸ್ಸಿಗೆ ಮೊದಲು ಬರುವ ಚಿತ್ರಗಳಲ್ಲಿ ಒಂದು ರಾಧಾ–ಕೃಷ್ಣರ ಪ್ರೀತಿ. ಆದರೆ ಆ ಪ್ರೀತಿಯನ್ನು ಕೇವಲ ಪ್ರೇಮದ ಕಥೆಯಾಗಿ ನೋಡುವುದಕ್ಕಿಂತ, ಅದರೊಳಗಿರುವ ತ್ಯಾಗ, ನಿಸ್ವಾರ್ಥತೆ, ಆತ್ಮೀಯತೆ ಮತ್ತು ನಿರೀಕ್ಷೆ ರಹಿತವಾದ ನಿಸ್ವಾರ್ಥವಾದ ಪ್ರೀತಿಯ ಸಂಕೇತವಾಗಿ ಇಂದಿಗೂ ಮಾದರಿಯಾಗಿದೆ. ತ್ಯಾಗ, ನಿರೀಕ್ಷೆಗಳಾಚೆಗಿನ ಪ್ರೀತಿ ಆತ್ಮೀಯತೆ ಮತ್ತು ವಿರಹದ ಮೂಲಕವೂ ಪ್ರೀತಿಯ ಉನ್ನತ ಅರ್ಥವನ್ನು ತೋರಿಸಿದ್ದು ಕೃಷ್ಣ, ಆದರೆ ಇಂದು ಪ್ರೀತಿ ಸಿಗಲಿಲ್ಲ ವೆಂಬ ಕಾರಣಕ್ಕೆ ದ್ವೇಷ, ಕೊಲೆ,ಜಿದ್ದು ಸೇಡಿನಲ್ಲಿ ಮುಕ್ತಾಯವಾಗುತ್ತಿದೆ.
ಕೃಷ್ಣನು ತನ್ನ ಪ್ರೀತಿಯನ್ನು ಪಡೆಯುವುದಕ್ಕಿಂತ ತನ್ನ ಜನ್ಮದ ಉದ್ದೇಶ ಮತ್ತು ತನ್ನ ಜವಾಬ್ದಾರಿಯನ್ನು ಅರಿತು ತ್ಯಾಗದ ಮೂಲಕ ಪ್ರೀತಿಯ ಪರಿಮಳವನ್ನು ಪಸರಿಸಿದನು, ಪ್ರೀತಿಸುವವರನ್ನು ತನ್ನ ಕರ್ತವ್ಯದೊಂದಿಗೆ ಕಟ್ಟಿಹಾಕಿಕೊಳ್ಳುವುದಕ್ಕಿಂತ, ಅವರ ಬದುಕಿನ ಒಳಿತನ್ನು ಬಯಸುವ ಮನಸ್ಸು ಅವನ ಪ್ರೀತಿಯ ವಿಶೇಷತೆ. ಅದಕ್ಕಾಗಿಯೇ ಕೃಷ್ಣನ ಪ್ರೀತಿ ಪಡೆಯುವುದಕ್ಕಿಂತ ಕೊಡುವುದರ, ಹತ್ತಿರ ಇರುವುದಕ್ಕಿಂತ ಹೃದಯದಲ್ಲಿ ಉಳಿಯುವುದರ, ಹಕ್ಕು ಸಾಧಿಸುವುದಕ್ಕಿಂತ ತ್ಯಾಗ ಮಾಡುವುದರ ಸಂಕೇತವಾಗಿದೆ. ಹಾಗಾಗಿಯೆ ರಾಧಾ–ಕೃಷ್ಣರ ಸಂಬಂಧವನ್ನು ಭಾರತೀಯ ಭಾವಜಗತ್ತು ಶತ ಶತಮಾನಗಳಿಂದ ಇಷ್ಟು ಆಳವಾಗಿ ನೆನಪಿಸಿಕೊಂಡಿರುವುದು ಇದೇ ಕಾರಣಕ್ಕಾಗಿಯೇ, ಅವರ ಪ್ರೀತಿಯಲ್ಲಿ ಒಂದಾಗುವಿಕೆಯಷ್ಟೇ ಇಲ್ಲ, ವಿರಹದಲ್ಲಿಯೂ ಪ್ರೀತಿಯನ್ನು ಉಳಿಸಿಕೊಳ್ಳುವ ಶಕ್ತಿ ಇದೆ.
ದೇಹದ ಅಂತರ ಪ್ರೀತಿಯನ್ನು ದೂರ ಮಾಡಲಾರದು, ನಿಜವಾದ ಪ್ರೀತಿ ಮನಸ್ಸಿನಲ್ಲಿ ನೆಲೆಸಿದಾಗ ಅದು ಕಾಲವನ್ನೂ, ದೂರವನ್ನೂ ಮೀರಿ ಬದುಕುತ್ತದೆ ಎಂಬ ಸಂದೇಶ ಅದರಲ್ಲಿ ಅಡಗಿದೆ. ಕೃಷ್ಣನ ಜೀವನದಲ್ಲಿ ರಾಧೆಯ ಸ್ಥಾನವನ್ನು ಕೇವಲ ಒಂದು ಸಂಬಂಧದ ಹೆಸರಿನಲ್ಲಿ ಅಳೆಯಲು ಸಾಧ್ಯವಿಲ್ಲ. ಅದು ನಿರೀಕ್ಷೆಯಿಲ್ಲದ ಪ್ರೀತಿಯ, ಆತ್ಮಗಳ ಆತ್ಮೀಯತೆಯ ಮತ್ತು ತ್ಯಾಗದ ಶಾಶ್ವತ ರೂಪಕ. ಅದಕ್ಕಾಗಿಯೇ ರಾಧಾ–ಕೃಷ್ಣರ ಪ್ರೀತಿ ಭಾರತೀಯ ಸಾಹಿತ್ಯ, ಸಂಗೀತ, ನೃತ್ಯ ಮತ್ತು ಕಲೆಯಲ್ಲಿ ಇಂದಿಗೂ ಜೀವಂತವಾಗಿದೆ. ಇಂದಿನ ಕಾಲದಲ್ಲಿ ಪ್ರೀತಿಯ ಅರ್ಥವೇ ಬಹಳಷ್ಟು ಬದಲಾಗುತ್ತಿರುವಾಗ ಕೃಷ್ಣನ ಪ್ರೀತಿ ನಮಗೆ ಒಂದು ಸೂಕ್ಷ್ಮವಾದ ಪಾಠವನ್ನು ನೀಡುತ್ತದೆ, ಪ್ರೀತಿ ಎಂದರೆ ಒಬ್ಬರನ್ನು ನಮ್ಮದಾಗಿಸಿಕೊಳ್ಳುವುದು ಮಾತ್ರವಲ್ಲ; ಅವರು ನಮ್ಮೊಂದಿಗೆ ಇರದಿದ್ದರೂ ಅವರ ಒಳಿತನ್ನು ಬಯಸುವುದು ಪ್ರೀತಿ! ಪ್ರೀತಿ ಎಂದರೆ ಹಕ್ಕು ಸಾಧಿಸುವುದಲ್ಲ, ಅಗತ್ಯವಿದ್ದಾಗ ಹಿಂದೆ ಸರಿಯುವ ತ್ಯಾಗವೂ ಪ್ರೀತಿಯೇ. ಪ್ರೀತಿ ಎಂದರೆ ಸದಾ ಜೊತೆಯಲ್ಲಿರುವುದಲ್ಲ, ದೂರದಲ್ಲಿದ್ದರೂ ಹೃದಯದಲ್ಲಿ ಉಳಿಯುವುದೂ ಪ್ರೀತಿಯೇ. ಹೀಗಾಗಿ ಕೃಷ್ಣನ ಪ್ರೀತಿ ನಮಗೆ ಹೇಳುವುದು ಒಂದೇ “ಪ್ರೀತಿ ಸ್ವಾರ್ಥದಿಂದ ತುಂಬಿದಾಗ ಬಂಧನವಾಗುತ್ತದೆ, ತ್ಯಾಗದಿಂದ ತುಂಬಿದಾಗ ಅದು ಆರಾಧನೆಯಾಗುತ್ತದೆ. ಅದಕ್ಕಾಗಿಯೇ ಕೃಷ್ಣನ ಪ್ರೀತಿ ಒಂದು ವೈಯಕ್ತಿಕ ಕಥೆಯಲ್ಲ, ಮನುಷ್ಯ ಪ್ರೀತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಕಲಿಸುವ ಭಾರತೀಯ ಭಾವಸಂಸ್ಕೃತಿಯ ಅಮೂಲ್ಯ ಸಂಕೇತ.
ಹಾಗೆಯೇ ಕೃಷ್ಣ ನಮಗೆ ಕಲಿಸುವುದು
ಬುದ್ಧಿವಂತಿಕೆ ಎಂದರೆ ಮೋಸವಲ್ಲ, ಸಂದರ್ಭವನ್ನು ಅರ್ಥಮಾಡಿಕೊಂಡು ಧರ್ಮದ ಪರವಾಗಿ ಸರಿಯಾದ ಮಾರ್ಗವನ್ನು ಹುಡುಕುವ ಸಾಮರ್ಥ್ಯ. ಇಂದಿನ ಆಡಳಿತ, ರಾಜಕೀಯ, ಶಿಕ್ಷಣ, ಕುಟುಂಬ ಮತ್ತು ಸಾಮಾಜಿಕ ಬದುಕಿನಲ್ಲಿಯೂ ಈ ವಿವೇಕ ಅತ್ಯಗತ್ಯ. ಕೃಷ್ಣನನ್ನು ಕೇವಲ ಗೀತೋಪದೇಶಕನಾಗಿ ನೋಡಿದರೆ ಅವನ ವ್ಯಕ್ತಿತ್ವದ ಅರ್ಧ ಭಾಗವನ್ನಷ್ಟೇ ಅರ್ಥಮಾಡಿಕೊಂಡಂತಾಗುತ್ತದೆ. ಅವನು ಯಶೋದೆಗೆ ಮಗ, ನಂದನಿಗೆ ಕಂದ, ಗೋಪಾಲಕರಿಗೆ ಗೆಳೆಯ, ಅರ್ಜುನನಿಗೆ ಗುರು, ದ್ರೌಪದಿಗೆ ಆಪ್ತ ರಕ್ಷಕ, ರಾಧೆಗೆ ಪ್ರೀತಿಯ ಪ್ರತೀಕ. ಅವನ ಬದುಕು ನಮಗೆ ಹೇಳುವುದು—ಮನುಷ್ಯನ ಸಂಪತ್ತು ಅವನ ಬಳಿ ಇರುವ ವಸ್ತುಗಳಲ್ಲಿ ಅಲ್ಲ, ಅವನೊಂದಿಗೆ ಬೆಸೆದುಕೊಂಡಿರುವ ಸಂಬಂಧಗಳಲ್ಲಿದೆ ಎಂದು, ಇಂದಿನ ಡಿಜಿಟಲ್ ಯುಗದಲ್ಲಿ ಸಂಪರ್ಕಗಳು ಹೆಚ್ಚಾದರೂ ಸಂಬಂಧಗಳ ಆಳ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕೃಷ್ಣನ ಈ ಜೀವನ ನಮಗೆ ಬಹಳ ಅಗತ್ಯ.
ಯುದ್ಧಭೂಮಿಯಿಂದ ವಿಶ್ವಮಾನವತೆಗೆ, ಕೃಷ್ಣನ ಅತ್ಯಂತ ಶಾಶ್ವತ ಕೊಡುಗೆ ಎಂದರೆ ಭಗವದ್ಗೀತೆ. ಎನ್ನಬಹುದು. ಒಂದು ಯುದ್ಧಭೂಮಿಯಲ್ಲಿ, ಒಬ್ಬ ವ್ಯಕ್ತಿಯ ಮನಸ್ಸಿನ ಗೊಂದಲಕ್ಕೆ ನೀಡಿದ ಉತ್ತರವು ಸಾವಿರಾರು ವರ್ಷಗಳ ನಂತರವೂ ಕೋಟ್ಯಂತರ ಜನರ ಜೀವನಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂಬುದೇ ಅದರ ಮಹತ್ವ.ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ; ಅದು ಕರ್ತವ್ಯ, ಆತ್ಮಸಂಯಮ, ಜ್ಞಾನ, ಕರ್ಮ, ಭಕ್ತಿ, ಸಮತ್ವ ಮತ್ತು ಆತ್ಮವಿಶ್ವಾಸದ ಕುರಿತು ಚಿಂತಿಸುವ ಜೀವನದರ್ಶನ.
“ಕರ್ಮ ಮಾಡು” ಎಂಬ ಸಂದೇಶದಿಂದ ಹಿಡಿದು, ಸುಖ-ದುಃಖಗಳಲ್ಲಿ ಸಮಚಿತ್ತದಿಂದ ಇರುವ ಚಿಂತನೆಯವರೆಗೆ ಗೀತೆಯ ತತ್ವಗಳು ಇಂದಿನ ಮನುಷ್ಯನ ಮಾನಸಿಕ ಮತ್ತು ನೈತಿಕ ಬದುಕಿಗೂ ಅನ್ವಯಿಸುತ್ತವೆ.ಆದ್ದರಿಂದ ಕೃಷ್ಣನನ್ನು ಕೇವಲ ದೇವಾಲಯದಲ್ಲಿ ಹುಡುಕುವುದಕ್ಕಿಂತ ನಮ್ಮ ನಿರ್ಧಾರಗಳಲ್ಲಿ, ನಮ್ಮ ಕರ್ತವ್ಯದಲ್ಲಿ, ನಮ್ಮ ನೈತಿಕತೆಯಲ್ಲಿ ಮತ್ತು ನಮ್ಮ ಮನಸ್ಸಿನ ಸಮತೋಲನದಲ್ಲಿ ಹುಡುಕುವುದು ಹೆಚ್ಚು ಅರ್ಥಪೂರ್ಣ.
ಜನ್ಮಾಷ್ಟಮಿ ಕೃಷ್ಣನ ಜನ್ಮವನ್ನು ಆಚರಿಸುವುದಕ್ಕಿಂತ ಕೃಷ್ಣನ ಸಂದೇಶದಲ್ಲಿ ಬದುಕುವ ಹಬ್ಬವಾಗಬೇಕು, ಕೃಷ್ಣ ಜನ್ಮಾಷ್ಟಮಿ ಎಂದರೆ ಕೇವಲ ಪೂಜೆ, ಅಲಂಕಾರ, ಭಜನೆ, ಉತ್ಸವ ಮತ್ತು ಸಂಭ್ರಮವಲ್ಲ. ಅದು ನಮ್ಮೊಳಗಿನ ಕೃಷ್ಣತತ್ತ್ವವನ್ನು ಜಾಗೃತಗೊಳಿಸಿಕೊಳ್ಳುವ ಅವಕಾಶ.
ಎಲ್ಲರನ್ನು ಗೌರವಿಸುವುದು, ಪ್ರೀತಿಯನ್ನು ಗೌರವಿಸುವುದು, ಸ್ನೇಹದಲ್ಲಿ ಪ್ರಾಮಾಣಿಕವಾಗಿರುವುದು, ಸಂಕಷ್ಟದಲ್ಲಿ ಧೈರ್ಯ ಕಳೆದುಕೊಳ್ಳದಿರುವುದು, ಕರ್ತವ್ಯದಿಂದ ಹಿಂದೆ ಸರಿಯದಿರುವುದು, ಅನ್ಯಾಯದ ವಿರುದ್ಧ ನಿಲ್ಲುವುದು, ಸಂಬಂಧಗಳನ್ನು ಕಾಪಾಡುವುದು, ಮತ್ತು ಫಲದ ಅತಿಯಾದ ಚಿಂತೆಯನ್ನು ಬಿಟ್ಟು ಶ್ರದ್ಧೆಯಿಂದ ಕೆಲಸ ಮಾಡುವುದು ಇವೆಲ್ಲವೂ ಕೃಷ್ಣನ ಸಂದೇಶವನ್ನು ಬದುಕುವ ಮಾರ್ಗಗಳೇ ಆಗಿವೆ.
ಕೃಷ್ಣನ ಜನ್ಮವನ್ನು ವರ್ಷಕ್ಕೊಮ್ಮೆ ಆಚರಿಸುವುದಕ್ಕಿಂತ, ಕೃಷ್ಣನ ಮೌಲ್ಯಗಳಿಗೆ ಪ್ರತಿದಿನವೂ ನಮ್ಮ ಬದುಕಿನಲ್ಲಿ ಜನ್ಮ ನೀಡುವುದು ಮುಖ್ಯ. ಕೃಷ್ಣನನ್ನು ಒಂದು ಕಾಲಘಟ್ಟಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಯುಗ ಬದಲಾದಂತೆ ಅವನನ್ನು ಅರ್ಥೈಸುವ ವಿಧಾನ ಬದಲಾಗಬಹುದು, ಆದರೆ ಅವನ ಸಂದೇಶದ ಪ್ರಸ್ತುತತೆ ಕಡಿಮೆಯಾಗುವುದಿಲ್ಲ. ಮಗು ಆಗಿದ್ದಾಗ ಕೃಷ್ಣ ನಮಗೆ ತುಂಟತನದ ಸೌಂದರ್ಯ ಕಲಿಸುತ್ತಾನೆ. ಸ್ನೇಹಿತನಾಗಿ ನಿಷ್ಠೆಯನ್ನು ಕಲಿಸುತ್ತಾನೆ, ಬದುಕಿನ ಮಾರ್ಗದರ್ಶಿಯಾಗಿ ವಿವೇಕವನ್ನು ಕಲಿಸುತ್ತಾನೆ, ಗೀತಾಚಾರ್ಯನಾಗಿ ಕರ್ತವ್ಯವನ್ನು ಕಲಿಸುತ್ತಾನೆ, ಧರ್ಮದ ರಕ್ಷಕನಾಗಿ ನ್ಯಾಯದ ಪರ ನಿಲ್ಲುವುದನ್ನು ಕಲಿಸುತ್ತಾನೆ. ಹೀಗಾಗಿ ಕೃಷ್ಣನನ್ನು ಕೇವಲ ಪೂಜಿಸುವುದಲ್ಲ, ಅವನ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಕೃಷ್ಣಾರಾಧನೆ, ಜನ್ಮಾಷ್ಟಮಿಯಂದು ಕೃಷ್ಣನ ಮೂರ್ತಿಗೆ ಹೂವು ಅರ್ಪಿಸುವ ಕೈಗಳ ಜೊತೆಗೆ, ಅವನು ತೋರಿದ ಮೌಲ್ಯಗಳಿಗೆ ನಮ್ಮ ಬದುಕನ್ನೂ ಅರ್ಪಿಸೋಣ, ಏಕೆಂದರೆ ಕೃಷ್ಣನ ಜನ್ಮ ಒಂದು ದಿನದ ಘಟನೆ, ಆದರೆ ಕೃಷ್ಣನ ಸಂದೇಶ ಪ್ರತಿದಿನದ ಬದುಕಿನ ದಾರಿದೀಪ.
“ಕೃಷ್ಣನನ್ನು ದೇವಾಲಯದಲ್ಲಿ ಹುಡುಕುವುದಕ್ಕಿಂತ, ನಮ್ಮ ಕರ್ತವ್ಯದಲ್ಲಿ ಕಂಡುಕೊಂಡಾಗಲೇ ಗೀತೆಯ ಅರ್ಥವಾಗುತ್ತದೆ.”
“ಕೃಷ್ಣನ ಜನ್ಮವನ್ನು ಆಚರಿಸುವುದು ಹಬ್ಬ,
ಕೃಷ್ಣನ ಮೌಲ್ಯಗಳನ್ನು ಬದುಕುವುದು ಸಂಸ್ಕಾರ”
”ಯುಗಗಳು ಬದಲಾಗುತ್ತವೆ… ಕಾಲ ಬದಲಾಗುತ್ತದೆ…ಆದರೆ ಮನುಷ್ಯನ ಗೊಂದಲಕ್ಕೆ ದಾರಿ ತೋರಿಸುವ ಕೃಷ್ಣನ ಗೀತೆ ಎಂದಿಗೂ ಹಳೆಯದಾಗುವುದಿಲ್ಲ.”
- ಗೀತಾಂಜಲಿ ಎನ್ ಎಂ – ಕೊಡಗು
