ಮನುಷ್ಯ ಈ ಜನ್ಮದಲ್ಲಿ ಮಾಡಿದ ಕರ್ಮದ ಫಲಗಳನ್ನು ಮುಂದಿನ ಜನ್ಮದಲ್ಲಿ ಅನುಭವಿಸುತ್ತಾನೆ ಎನ್ನುವ ಸಿದ್ಧಾಂತ ತಪ್ಪು. ಇಲ್ಲಿಯೇ ಲಾಟರಿ, ಇಲ್ಲಿಯೇ ಬಹುಮಾನ.. ತಿಳಿ ಹಾಸ್ಯದೊಂದಿಗೆ ಗುರು ಕುಲಕರ್ಣಿ ಅವರು ಬರೆದಿರುವ ಒಂದು ಸುಂದರ ಕತೆಯನ್ನು ತಪ್ಪದೆ ಓದಿ…
“ಆ ಹರಕಬಾಯಿಯ ತಿರಕನ್ನ ನೋಡಿ ನೀನು ಹಲ್ಲು ಕಿಸದರ ನಿನ್ನ ಹಲ್ ಉದರಸ್ತೇನಿ ಮಗನ “ ಎಂದು ನಮ್ಮಪ್ಪ ಆಗ ಐದಾರು ವರ್ಷದವನಾಗಿದ್ದ ನನಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದರು. ನಮ್ಮಪ್ಪನ ವಾರ್ನಿಂಗ್ ವಾಕ್ಯದಲ್ಲಿದ್ದ ಕರ್ಮ ಪದ ‘ತಿರಕ’ ಸೂಚಿಸುತ್ತಿದ್ದದ್ದು ‘ತಿರಕಪ್ಪ’ ಉರ್ಫ್ ‘ತ್ರಿಯಂಬಕಪ್ಪ’ ಅಲಿಯಾಸ್ ‘ತ್ರಿಯಂಬಕರಾವ್ ಪಾಟೀಲ್’ ಎಂಬ ವ್ಯಕ್ತಿಯನ್ನು- ಆತ ನನ್ನ ತಾಯಿಯ ತವರಿನವರಿಗೆ ಸಂಬಂಧಿಕ. ನನ್ನ ತಾಯಿಯ ತವರುಮನೆಯಲ್ಲಿ ಆಗ ಅವನದೇ ಹಿರಿತನವಿರುತ್ತಿತ್ತು. ಆ ತಿರಕಪ್ಪನಿಗೆ ಒಂದು ಆಂಗಿಕ ವಿಕಾರವಿತ್ತು- ನಿಮಿಷಕ್ಕೋ – ಅರ್ಧ ನಿಮಿಷಕ್ಕೋ ಅನೈಚ್ಛಿಕವಾಗಿ ಅವನ ಬಾಯಿ ಸೊಟ್ಟಾಗಿ, ಮತ್ತೆ ಹತ್ತು –ಹದಿನೈದು ಸೆಕೆಂಡುಗಳಲ್ಲಿ ಸರಿಯಾಗುತ್ತಿತ್ತು. ತಿರಕಪ್ಪನ ಚಾರಿತ್ರ್ಯವೂ ಸರಿ ಇಲ್ಲವೆಂಬ ಮಾತುಗಳಿದ್ದುದರಿಂದ ನಮ್ಮಪ್ಪನಿಗೆ ಅವನ ಬಗ್ಗೆ ಅಂಥ ಸದಭಿಪ್ರಾಯವಿರಲಿಲ್ಲ. ಹೀಗಾಗಿ ಯಾವಾಗಲಾದರೂ ನಮ್ಮ ಮನೆಯಲ್ಲಿ ಅವನ ವಿಷಯ ಬಂದರೆ, ಅವನನ್ನು ‘ಹರಕಬಾಯಿಯ ತಿರಕ’ ಎಂದು ಹೆಸರಿಸುವುದು ನಮ್ಮ ತಂದೆಯ ರೂಢಿಯಾಗಿತ್ತು.
ನಮ್ಮ ತಾಯಿಯ ತವರುಮನೆಯಲ್ಲಿ ಅದ್ಯಾವುದೋ ಕಾರ್ಯಕ್ರಮಕ್ಕೆ ಹೋಗಬೇಕಾಗಿ ಬಂದಿತ್ತು. ಆವರೆಗೆ ನಾನಿನ್ನೂ ತಿರಕಪ್ಪನವರ ದರ್ಶನ ಭಾಗ್ಯ ಪಡೆದಿರಲಿಲ್ಲ. ಈ ಕಾರ್ಯಕ್ರಮದಲ್ಲಿ ತಿರಕಪ್ಪನ – ನನ್ನ ಮುಖಾಮುಖಿಯಾಗುವುದು ಖಚಿತ, ಕಿಡಿಗೇಡಿಯಾದ ನಾನು ಅವನನ್ನು ನೋಡಿ ನಕ್ಕು, ಅಭಾಸದ ಸಂದರ್ಭ ಬರುವುದು ಬೇಡ ಎಂದು ಯೋಚಿಸಿ ನಮ್ಮ ತಂದೆ ನನಗೆ ಮೊದಲೆ ಅಡ್ವಾನ್ಸ್ ನೋಟೀಸು ಕೊಟ್ಟಿದ್ದರು ಅನಿಸುತ್ತೆ. ಹಾಗೆ ನಿಮಗೆ ಗೊತ್ತಿರಲಿ ಅಂತ – ನಮ್ಮ ಮನೆಯಲ್ಲಿ ನನ್ನನ್ನು ಕಿಡಿಗೇಡಿ ಎಂದು ಭಾವಿಸುತ್ತಿದ್ದರಾದರೂ, ನಾನೇನು ಅಷ್ಟು ಖತರನಾಕ್ ಹುಡುಗನಾಗಿರಲಿಲ್ಲ, ನನಗಿಂತ ಮೊದಲು ಹುಟ್ಟಿದ ನನ್ನ ಅಕ್ಕ-ಅಣ್ಣಂದಿರು ಜಗತ್ತಿಗಿಂತ ಸಂಭಾವಿತರಾದದ್ದರಿಂದ, ಎವರೇಜ್ ತುಂಟನಾಗಿದ್ದ ನನ್ನನ್ನು ನಮ್ಮ ಮನೆಯಲ್ಲಿ ರೌಡಿ ಪಟ್ಟಿಗೆ ಸೇರಿಸಿದ್ದರು, ಇರಲಿ..
ನಿಗದಿತ ದಿನದಂದು ನಾವು ನಮ್ಮ ತಾಯಿಯ ತವರುಮನೆಗೆ ಹೋದೆವು. ಅಲ್ಲಿ ಅದಾಗಲೇ ಹಲವಾರು ಜನ ಸಂಬಂಧಿಕರು ಬಂದು ಸೇರಿಕೊಂಡು, ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಬಹಳ ದಿನಗಳ ನಂತರ ಭೇಟಿಯಾದ ಹಲವಾರು ಸಂಬಂಧಿಕರು ಒಬ್ಬರನ್ನೊಬ್ಬರು ಕ್ಷೇಮ ಸಮಾಚಾರ ವಿಚಾರಿಸುತ್ತಿದ್ದರೆ, ನಾನು ತಿರುಕಪ್ಪನ ಮುಖಾರವಿಂದವನ್ನು ಹುಡುಕುತ್ತಿದ್ದೆ. ಅವನ ಬಾಯಿ ಅದ್ಹ್ಯಾಗೆ ಸೊಟ್ಟಗಾಗುತ್ತದೆ ಎಂದು ನನಗೆ ಕುತೂಹಲ.. ಅಷ್ಟರಲ್ಲಿ ಯಾರೋ “ ಬ್ಯಾಳ್ಯಾಗ ಬೆಲ್ಲ ಬಿತ್ತು ಅನ್ನೋದರಾಗ ತಿರುಕಪ್ಪ ಹಾಜರಾಗುವವ, ಇಂತಹ ದೊಡ್ಡ ಕಾರ್ಯಕ್ರಮಕ್ಕ ಇನ್ನು ಬಂದು ಹಿರಿತನಕ್ಕೆ ನಿಂತಿಲ್ಲ ನೋಡು” ಎಂದರು. ʼಹೂವು ಹೊರಳುವವು ಸೂರ್ಯನ ಕಡೆಗೆʼ ಎನ್ನುವಂತೆ ನನ್ನ ಕಣ್ಣುಗಳು ತಿರಕಪ್ಪನ ಹೆಸರು ಬಂದ ಕಡೆಗೆ ಹೊರಳಿದವು. ಅವರು ಮುಂದುವರಿಸಿ, ತಿರುಕಪ್ಪ ಏನೋ ಕೆಲಸಕ್ಕಾಗಿ ಊರಿಗೆ ಹೋಗಿದ್ದಾನೆ ಎಂದೂ, ಇನ್ನೆರಡು ದಿನದಲ್ಲಿ ಬರುತ್ತಾನೆ ಎಂದೂ ಹೇಳಿದರು.ಎರಡು ದಿನಗಳು ನನಗೆ ಯುಗಗಳಂತೆ ಕಳೆದವು.
ಫೋಟೋ ಕೃಪೆ : google
ನಾನು ಮತ್ತು ನನ್ನ ಸಮವಯಸ್ಸಿನ ಗೆಳತಿ ನಂದಿ ಅಂಗಳದಲ್ಲಿ ಆಟ ಆಡುತ್ತಿದ್ದೆವು. “ಏ ಹುಡುಗುರ್ಯಾ, ದಾರಿಬಿಟ್ಟು ಸರೀರಿ..” ಎಂದು ಟ್ರ್ಯಾಕ್ಟರ್ ಹಾರ್ನಿನಂತಹ ದನಿ ಕೇಳಿ ತಲೆ ಎತ್ತಿ ನೋಡಿದರೆ, ಆ ಮುಖಾರವಿಂದದ ಬಾಯಿ ಅಮೀಬಾ ತನ್ನ ಆಕಾರ
ಬದಲಿಸುವಂತೆ ಅದ್ಹ್ಯಾಗೋ ಆಗಿ, ಮತ್ತೆ ಸರಿ ಹೋಯಿತು. ನನಗೋ ನಾನು ಕಾಯುತ್ತಿದ್ದ ಶುಭಗಳಿಗೆ ಇದೆ ಎಂದು ಗೊತ್ತಾಗಿ ಹೋಯಿತು.
ನಾನು ಆಟ ಬಿಟ್ಟು ಮನೆಯೊಳಗೆ ಓಡಿ ಹೋದೆ. ನಡುಮನೆಯಲ್ಲಿ ದೊಡ್ಡವರೆಲ್ಲ ಕುಳಿತು ಏನೋ ಆಢ್ಯತೆಯಿಂದ ಚರ್ಚಿಸುತ್ತಿದ್ದರು. ನಮ್ಮ ತಂದೆಯವರೂ ಅಲ್ಲಿ ಕುಳಿತದ್ದು ಕಾಣಿಸಿತು. ನಾನು ನನ್ನ ಹೈಫ್ರಿಕ್ವೆನ್ಸಿ ಚೀರಲು ದನಿಯಲ್ಲಿ “ಅಪ್ಪಾಜೀಈಈ , ನೀನು ಹರಕಬಾಯಿ ತಿರಕ ಅಂತಿದ್ದೆಲ್ಲಾ, ಅವರು ಬಂದಾರ.. ” ಎಂದು ಘೋಷಿಸಿದೆ. ಎಲ್ಲಾ ಜನರು ಸ್ತಬ್ಧರಾಗಿ ಹೋದರು.. ಒಂದೆರಡು ಕ್ಷಣಗಳು ಅಸಹನೀಯವಾಗಿ ಕಳೆದವು.. ನಾನೇನೋ ತಪ್ಪು ಮಾಡಿದ್ದೇನೆ ಎಂದು ತಿಳಿದರೂ, ಏನು ಎಂದು ಗೊತ್ತಾಗಲಿಲ್ಲ.. ನಮ್ಮ ತಂದೆ ಕೆಂಗಣ್ಣಿನಿಂದ ನನ್ನ ನೋಡುತ್ತ, ಎದ್ದು ಬಂದು, ಕೊಟ್ಟ ಮಾತಿನಂತೆ ಹಲ್ಲು ಉದುರಿಸುತ್ತಿದ್ದರೋ ಏನೋ, ಮತ್ತೊಬ್ಬರ್ಯಾರೋ “ ಏ ಹೋಗಲಿ ಬಿಡರಿ, ಹುಡುಗ್ಗ ಏನ್ ತಿಳಿತದ..” ಎಂದು ಹೇಳಿ ಸಮಾಧಾನ ಮಾಡುತ್ತಿದ್ದರು, ಅಷ್ಟರಲ್ಲಿ ತಿರಕಪ್ಪನ ಸವಾರಿ ಅಲ್ಲಿಗೆ ಬಂದಿತು. “ಹೇ.. ಎಲ್ಲಾ ಬಳಗ ಇಲ್ಲೇ ಕೂಡ್ಯದ ಅಲ್ಲ..” ಎಂದು ದೇಶಾವರಿ ನಗೆ ನಗುತ್ತ ಬಂದ ತಿರಕಪ್ಪನ ಮೇಲೆ ಸ್ಪಾಟ್‌ಲೈಟ್ ಬೀಳುತ್ತಲೆ, ನಾವು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಅಂಗಳಕ್ಕೆ ಓಡಿ ಹೋಗಿರದಿದ್ದರೆ, ಇವತ್ತು ಅಂದಿನ ಸುದ್ದಿ ನೆನೆಸಿಕೊಂಡು ಕಿಸಿಯಲು ಹಲ್ಲುಗಳು ಉಳಿದಿರುತ್ತಿರಲಿಲ್ಲ..!!
ವರ್ಷಗಳು ಉರುಳಿದವು..
ಪ್ರತಿದಿನ ಸಂಜೆ ಆಫೀಸಿನಿಂದ ಮನೆಗೆ ಬಂದೊಡನೆ ಅತ್ತೆ-ಸೊಸೆ ಜಗಳ, ಅಣ್ಣ-ತಮ್ಮರ ಜಗಳ ನೋಡಿ-ನೋಡಿ ರಕ್ತ ಕುದ್ದು ಹೋಗುತ್ತಿತ್ತು. “ನಿಮ್ಮ ಹೆಂಡತಿ-ತಾಯಿ ಅಷ್ಟು ಜಗಳಾಡುತ್ತಾರಾ ? ನೀವು ನಿಮ್ಮ ಅಣ್ಣ-ತಮ್ಮ ಇನ್ನೂ ಜಗಳಾಡುತ್ತೀರಾ?” ಎಂದಿರಾ ? ಶಾಂತಂ ಪಾಪಂ.. ಇಲ್ಲ ಸ್ವಾಮಿ.. ಅವು ನಮ್ಮ ಮನೆಯ ಜಗಳಲ್ಲ.. ಟೀವಿಯ ಧಾರವಾಹಿಗಳಲ್ಲಿ ಬರುವ ಜಗಳಗಳು.. ಹೊಂದಿಕೊಂಡು ಹೋಗುವ ತಾಯಿ-ಹೆಂಡತಿ, ಸಮಾಧಾನ ಸ್ವಭಾವದ ಅಣ್ಣ-ಅಕ್ಕರನ್ನು ಕೊಟ್ಟಿರುವ ದೇವರು ಒಂಚೂರು ಬ್ಯಾಲೆನ್ಸ್ ಮಾಡೋಣ ಎಂದು ಮನೆಯಲ್ಲಿ ಟೀವಿಯನ್ನು ಇಟ್ಟು, ಅದರಲ್ಲಿ ದರಿದ್ರ ಧಾರಾವಾಹಿಗಳನ್ನು ಬಿಟ್ಟಿದ್ದಾನೆ..
ಎಲ್ಲ ಮಧ್ಯಮ ವರ್ಗದ ಮನೆಗಳಂತೆ, ನಮ್ಮ ಮನೆಯಲ್ಲಿಯೂ ನಮ್ಮ ತಾಯಿಗೆ ಈ ಧಾರಾವಾಹಿಗಳನ್ನು ತಪ್ಪದೆ ನೋಡುವ ಹವ್ಯಾಸ. ವಯಸ್ಸಾದುದರಿಂದ ಅವಳಿಗೆ ಒಂಚೂರು ಕಿವಿ ಮಂದ.. ಹಿಂಗಾಗಿ ನಮ್ಮ ಮನೆಯಲ್ಲಿ ದೊಡ್ಡ ದನಿಯಲ್ಲಿ ಟೀವಿ ಕಿರಿಚುತ್ತಿರುತ್ತದೆ. ಸಾಯಂಕಾಲ ಆಫೀಸು ಮುಗಿಸಿ, ಟ್ರಾಫಿಕ್ಕಿನ ಸಮುದ್ರದಲ್ಲಿ ಈಸುತ್ತಾ ಮನೆಗೆ ಬಂದರೆ ಮನೆಯಲ್ಲಿ ಧಾರಾವಾಹಿಗಳ ಕುರುಕ್ಷೇತ್ರದ ರಣದುಂಧುಬಿಯ ದನಿಯಿಂದ ತುಂಬಿ ಹೋಗಿರುತ್ತದೆ.
ಫೋಟೋ ಕೃಪೆ : google
ನಾನು ಕುದಿಯುವ ರಕ್ತವನ್ನು ಸಾಧ್ಯವಾದಷ್ಟು ಸಮಾಧಾನಿಸಿ, ಶಾಲೆಯಲ್ಲಿದ್ದಾಗ ಟೀವಿ ಇನ್ನೂ ಇಷ್ಟು ʼಸತ್ಯʼ, ʼನೇರʼ, ʼನಿರಂತರʼವಾಗಿ ನಮ್ಮ ಮನೆಗಳಲ್ಲಿ ಬಂದಿರದ ದಿನಗಳಲ್ಲಿ, ನಾವು ʼದೂರದರ್ಶನದ ಜನೋಪಯೋಗಗಳುʼ ಎಂದು ಹುಚ್ಚುಹುಚ್ಚಾಗಿ ನಿಬಂಧ ಬರೆಯುತ್ತಿದ್ದೆವೆಲ್ಲ ಎಂದು ವಿಸ್ಮಯಿಸುತ್ತೇನೆ. ಒಂದು ಕಾಲದಲ್ಲಿ ಪತ್ರಿಕೆ, ಪುಸ್ತಕಗಳನ್ನು ತಾನೂ ಓದುತ್ತ-ನಮಗೂ ಓದಿಸುತ್ತಿದ್ದ ಅಮ್ಮ ಈ ದರಿದ್ರ ಧಾರಾವಾಹಿಗಳ ಕಪಿಮುಷ್ಠಿಯಲ್ಲಿ ಸಿಲಿಕಿರುವುದನ್ನು ನೋಡಿ ಬೇಜಾರು ಮಾಡಿಕೊಳ್ಳುತ್ತೇನೆ. ಅಮ್ಮನ ಟೀವಿ ಗೀಳು ಬಿಡುವುದಿಲ್ಲ ಎಂದುಕೊಂಡು, ಆ ಧಾರಾವಾಹಿಗಳ ನಿರ್ಮಾಪಕ-ನಿರ್ದೇಶಕರಿಗಾದರೂ ಒಳ್ಳೆಯ ಬುದ್ಧಿ ಬರಲಿ ಎಂದು ಬೇಡಿಕೊಳ್ಳುತ್ತಿರುತ್ತೇನೆ. ಅಷ್ಟಕ್ಕೂ ನಿಲ್ಲದೇ, ಒಮ್ಮೊಮ್ಮೆ ನಿರ್ಮಾಪಕ-ನಿರ್ದೇಶಕರಿಗೆ ವಾಚಾಮಗೋಚರವಾಗಿ ಬಯ್ಯುತ್ತಿರುತ್ತೇನೆ.
ಅದರಲ್ಲೂ ಇಂತಹ ಹಲವಾರು ದಟ್ಟದರಿದ್ರ ಧಾರಾವಾಹಿ ನಿರ್ಮಾಣ ಮಾಡುವ ಒಬ್ಬ ಅದ್ಯಾವುದೋ ಗೌಡ ಎಂಬ ನಿರ್ಮಾಪಕ ಎಂದರೆ ನನಗೆ ಬಹಳ ಸಿಟ್ಟು. ಮೂರೂ ಸಂಜೆಯ ಎರಡು-ಮೂರು ಧಾರಾವಾಹಿಗಳಿಗೆ ಅವನೊಬ್ಬನೆ ನಿರ್ಮಾಪಕನಾಗಿದ್ದ. ಟೀವಿಯ ಪರದೆಯ ಮೇಲೆ ಅವನ ಹೆಸರು ಬಂದ ಕೂಡಲೆ ನಾನು “ ಈ ಮಗ ಎಲ್ಲಾದರೂ ಕೈಗೆ ಸಿಗಬೇಕು.. ಸಣ್ಣಾಗಿ ಕಡಿದು ಕೊಪ್ಪರಿಗಿ ತುಂಬಿಸಿ ಬಿಡ್ತೇನಿ..” ಎಂದು ಆಕ್ರೋಷಿಸುತ್ತಿರುತ್ತೇನೆ. ಅಮ್ಮನೋ ಧಾರಾವಾಹಿಗಳಲ್ಲಿ ಮುಳುಗಿಹೋಗಿರುತ್ತಾಳೆ, ಹೆಂಡತಿಯೋ ಗಂಡನ ವಟವಟಗಳಿಗೆ ಕಿವುಡಾಗಿ ವರ್ಷಗಳಾಗಿವೆ, ಹಿಂಗಾಗಿ ನನ್ನ ಅಸಹಾಯಕತೆಯ ಬೈಗುಳಗಳನ್ನು ಯಾರೂ ಕೇಳಿಸಿಕೊಂಡಿರೋದಿಲ್ಲ ಎಂದುಕೊಂಡಿದ್ದೆ – ನನ್ನ ಮಗನವೂ ಎರಡು ಕಿವಿಗಳಿರೋದು ಮರೆತಿದ್ದೆ.
ಗಾಂಧಿಬಜಾರಿನ ಪುಸ್ತಕದ ಅಂಗಡಿ ನನ್ನ ಮೆಚ್ಚಿನ ತಾಣ. ಆಗಾಗ ಅಲ್ಲಿಗೆ ಹೋಗುವಾಗ ನನ್ನ ಮಗನನ್ನು ಕರೆದುಕೊಂಡು ಹೋಗುವುದು ಇದೆ. ನಾನು ಪುಸ್ತಕಗಳನ್ನು ನೋಡುತ್ತಿರುವಾಗ ಅಂಗಡಿಯ ಮಾಲಕರು ನನ್ನ ಮಗನನ್ನು ತಮ್ಮ ಹತ್ತಿರ ಕೂಡಿಸಿಕೊಂಡು ಅಡಿಸುತ್ತಿರುತ್ತಾರೆ. ಮೊನ್ನೆ ಪುಸ್ತಕದ ಅಂಗಡಿಗೆ ಹೋದಾಗಲೂ ವಾಡಿಕೆಯಂತೆ ಮಗನನ್ನು ಗಲ್ಲೆಯ ಮೇಲೆ ಕುಳಿತಿದ್ದ ಮಾಲಿಕರ ಸುಪರ್ದಿಗೆ ಬಿಟ್ಟು, ಅಂಗಡಿಯ ಒಳ ಭಾಗದಲ್ಲಿರುವ ಪುಸ್ತಕಗಳ ಕಪಾಟುಗಳ ಮಧ್ಯೆ ಕಳೆದುಹೋಗಿದ್ದೆ. ಕೆಲ ಸಮಯದ ನಂತರ ಕೆಲ ಪುಸ್ತಕಗಳನ್ನು ಆರಿಸಿಕೊಂಡು ಬಂದರೆ, ನನ್ನನ್ನು ನೋಡಿದ ನನ್ನ ಮಗ ಹೈಫ್ರಿಕ್ವೆನ್ಸಿಯ ಚೀರಲು ದನಿಯಲ್ಲಿ – “ಅಪ್ಪಾಜೀಈಈ , ನೀನು ಸಣ್ಣಾಗಿ ಕಡಿದು ಕೊಪ್ಪರಿಗಿ ತುಂಬಿಸತೇನಿ ಅಂತಿದ್ದೆಲ್ಲ, ಆ ಗೌಡರು ಇಲ್ಲೇ ಇದ್ದಾರ.. ಅಗಾ ಅಲ್ಲಿ..” ಎಂದು ಕಪಾಟುಗಳ ನಡುವೆ ಕೈ ತೋರಿಸುತ್ತಿದ್ದಂತೆ ನಾನು ಸೂಪರ್ ಕಂಪ್ಯೂಟರಿಗಿಂತ ವೇಗವಾಗಿ ವಿಚಾರ ಮಾಡಿ ನಡೆದದ್ದನ್ನು ಊಹಿಸಿದೆ. ದರಿದ್ರ ಧಾರಾವಾಹಿಗಳ ನಿರ್ಮಾಪಕ ಅದ್ಯಾವುದೋ ಗೌಡ ಪುಸ್ತಕದ ಅಂಗಡಿಗೆ ಬಂದು ಮಾಲಿಕರ ಹತ್ತಿರ ತನ್ನ ಪರಿಚಯ ಮಾಡಿಕೊಂಡಿದ್ದಾನೆ. ನನ್ನ ಮಗ ಅವರ ಮಾತುಗಳನ್ನು ಕೇಳಿಸಿಕೊಂಡು, ಅಪ್ಪನ ಕಡಿದು ಕೊಪ್ಪರಿಗಿ ತುಂಬಿಸುವ ಪ್ರತಿಜ್ಞೆ ಈಡೇರುವ ಸಮಯ ಬಂದಿದೆ ಎಂದು ಕೊಂಡಿದ್ದಾನೆ. ಹೀಗಾಗಿ ನನ್ನನ್ನು ಕಂಡೊಡನೆಯೇ ಕೂಗಿ ಹೇಳಿದ್ದಾನೆ.
ಅಂಗಡಿಯ ಮಾಲಿಕರಿಗೆ ಇಷ್ಟು ಹೊತ್ತಿನವರೆಗೆ ಒಳ್ಳೆಯ ಪಂಜರ ಗಿಳಿಯಂತೆ ಸವಿನುಡಿಯಾಡುತ್ತಿದ್ದ ಹುಡುಗ ಯಾಕ್ಹೀಗೆ ಹೊಡಿ-ಕಡಿ ಅನ್ನುತ್ತಿದ್ದಾನೆ ಎಂದು ದಿಗಿಲು. ಅವರು ನನ್ನ ಕಡೆಗೆ ನೋಡುತ್ತಲೆ ನನಗೆ ಭೂಮಿ ಬಾಯಿಬಿಟ್ಟು ನನ್ನ ನುಂಗಬಾರದೇ ಫೀಲಿಂಗು.. ಬಿಲ್ಲಿಂಗ್‌ಗೆ ಎಂದು ತಂದಿದ್ದ ಪುಸ್ತಕಗಳನ್ನು ಟೇಬಲ್ ಮೇಲೇಯೇ ಬಿಟ್ಟು, ಮಾಲಕರಿಗೆ “ಇನ್ನೊಮ್ಮೆ ಬಂದಾಗ ಮಾತನಾಡತೇನಿ.. ಆವಾಗಲೇ ಪುಸ್ತಕಗಳನ್ನು ಕೊಂಡುಕೋತಿನಿ” ಎಂದು ಒಂದೇ ಉಸಿರಿನಲ್ಲಿ ಹೇಳಿ, ಮಗನನ್ನು ಎತ್ತಿಕೊಂಡು ಹೊರಬಿದ್ದೆ.
- ಗುರು ಕುಲಕರ್ಣಿ – ಧಾರವಾಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿದ ಲೇಖಕರು, ಓದಿದ್ದು ಎಲೆಕ್ಟ್ರೋನಿಕ್ಸ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ . ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಜೊತೆಗೆ ಹವ್ಯಾಸಿ ಬರಹಗಾರರಾಗಿದ್ದು, ಪತ್ರಿಕೆಗಳಲ್ಲಿ ಲಲಿತ ಪ್ರಬಂಧಗಳು, ಸಣ್ಣ ಕಥೆಗಳು ಪ್ರಕಟವಾಗಿವೆ. “ದನಿಪಯಣ” ಎಂಬ ಊರು-ನಾಡುಗಳ ಇತಿಹಾಸ ತಿಳಿಸುವ ಪಾಡ್‌ಕಾಸ್ಟ್‌ನ ಕರ್ತೃ ಕೂಡಾ ಆಗಿದ್ದಾರೆ.