ಕವಿಯತ್ರಿ ಶೈಲಜಾ ಹಾಸನ್ ಅವರ ‘ಬೊಗಸೆಯೊಳಗಿನ ಬಿಂದು’ ಕವನ ಸಂಕಲನಕ್ಕೆ ಕವಿ ಜರಗನಹಳ್ಳಿ ಶಿವಶಂಕರ್ ಅವರು ಬರೆದ ಬೆನ್ನುಡಿಯನ್ನು ತಪ್ಪದೆ ಮುಂದೆ ಓದಿ….
ತಾವರೆಯ ಎಸಳಿನ ಮೇಲೆ ಮುತ್ತಾಗಿ ಕುಳಿತು ಮಿಂಚುವ ಒಂದು ಬಿಂದು ಶೈಲಜಾ ಹಾಸನ್ ಎಂಬ ಕವಯಿತ್ರಿಯ ಬೊಗಸೆಯೊಳಗಡೆ ಹೇಗೆ ಬಂತು? ಈ ಕೌತುಕ ಪ್ರಶ್ನೆ ನನ್ನ ಕಾವ್ಯ ಪ್ರೀತಿಯ ಕುತೂಹಲವನ್ನು ಕೆರಳಿಸಿತು. ನಿಜ, ಒಬ್ಬ ಕವಯಿತ್ರಿಯ ಮಡಿಲಿಗೆ ಒಂದು ಮುದ್ದಾದ ಕವಿತೆಯ ಹಸುಗೂಸು ಬಂದಿರುವಂತೆ ನಾನು ತಿಳಿದುಕೊಂಡೆ.
ಇಲ್ಲಿಯ ‘ಬಿಂದು’ ಒಂದು ಕಾವ್ಯ ಪ್ರತಿಮೆಯಾಗಿ ಅನೇಕ ಅರ್ಥಗಳನ್ನು ನೀಡುವ ಸಹಜ ಸಾಧ್ಯತೆಗಳು ಈ ಸಂಕಲನದಲ್ಲಿನ ಕವಿತೆಗಳಲ್ಲಿ ವಿಶೇಷವಾಗಿ ಕಾಣುತ್ತವೆ. ಅಲ್ಲದೆ, ಬದುಕಿನ ಕೊರತೆ, ನಿರಾಶೆಗಳಿಗೆ ಅರ್ಥಗಳನ್ನು ಬಗೆಯುವ ಪ್ರಾಮಾಣಿಕ ಪ್ರಯತ್ನವೂ ಇಲ್ಲಿ ನಡೆದಿದೆ. ಅದಕ್ಕೆ ಉದಾಹರಣೆಯಾಗಿ ‘ಮಡಿಲು ಬರಿದೆ’ ಕವನವನ್ನು ನೋಡಬಹುದು, ಸಾಂತ್ವನದ ಒಂದು ಪ್ರಬಲ ಧ್ವನಿ ಇಲ್ಲಿದೆ.

‘ದೂರ’ ಕವಿತೆಯಲ್ಲೂ ಬರುವ ‘ಬಿಂಬ’ ಎಂಬ ಪದವೂ ಒಂದು ಪ್ರತಿಮೆಯಾಗಿ ಪರಿವರ್ತನೆಗೊಂಡು ಅಂತರಗಳ ಅನೇಕ ಆಂತರ್ಯಗಳನ್ನು ಅಳೆದು ಹೇಳುತ್ತದೆ.
“ಹಿಂದೊಮ್ಮೆ ಹೊರಟಿದ್ದಳು ಅಕ್ಕಗೆ ದೂರಾಗಿಸಲು ಮನದೊಳಗಿನ ದುಃಖ” ಇದು ‘ಅಭಿಸಾರಿಕೆ’ ಕವನದ ಸಾಲುಗಳು. ಕನ್ನಡದ ಮೂಲ ಕವಯಿತ್ರಿ ಅಕ್ಕನನ್ನು ಅರಿತುಕೊಳ್ಳುವ ಅಗತ್ಯದ ಅರಿವು ಕವಯಿತ್ರಿಯಲ್ಲಿ ಕಾಣುವುದು. ಒಂದು ಹೆಣ್ಣು ಧ್ವನಿಯ ಹಿಂದೆ ಇರಬೇಕಾದ ಗುಣಾವಗುಣಗಳ ಪ್ರಜ್ಞೆಯನ್ನು ತೋರಿಸುತ್ತದೆ.

ಅರ್ಥವಾಗದವಳು, ಸ್ವಾಗತ, ಭವದ ಹೊರೆ, ಬಿರುಕು, ಕುಂಟಾಪಿಲ್ಲಿಯಾಟ ನನಗೆ ಪ್ರಿಯವಾದ ಕವಿತೆಗಳು.
ಶೈಲಜಾಹಾಸನ್ ಅವರು ತಮ್ಮ ಸುತ್ತಲಿನ ಸಾಮಾನ್ಯ ಸಂಗತಿಗಳನ್ನು ಪ್ರತಿಮೆಗಳಾಗಿ ಪರಿವರ್ತಿಸಿ ಹತ್ತು ಹಲವು ದಿಕ್ಕುಗಳಿಗೆ ಕಾವ್ಯಾರ್ಥವನ್ನು ವಿಸ್ತರಿಸುವ ಕಲಾತ್ಮಕತೆಯನ್ನು ರೂಢಿಸಿಕೊಂಡಿದ್ದಾರೆ. ಈ ಮಾರ್ಗ ಅವರ ಕಾವ್ಯ ಬದುಕಿಗೆ ಹೆದ್ದಾರಿಯಾಗುತ್ತದೆಂದು ನಾನು ನಂಬಿದ್ದೇನೆ.
- ಜರಗನಹಳ್ಳಿ ಶಿವಶಂಕರ್
