ಅಮೇಜಾನ್ ಪ್ರೈಮ್ ನಲ್ಲಿರುವ ‘ಕೇಸ್ ಆಫ್ ಕೊಂಡಾಣ’ ಕುರಿತು ಲೇಖಕ ವಿನಾಯಕ ಅರಳಸುರಳಿ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬದುಕೆಂದರೆ ಅದು ಉಳಿವಿನ ಹೋರಾಟ. ಇಲ್ಲಿ ನನಗೇ ಹೀಗೇಕಾಯಿತು? ಎಂದು ಪ್ರಶ್ನಿಸುವಂತಿಲ್ಲ. ಆಗೋದು ಆಗಿಹೋಯಿತು. ಈಗ ಮುಂದೇನು ಮಾಡುವುದು ಎಂದು ಯೋಚಿಸುವುದೇ ಬದುಕು. ಯುದ್ಧ ಸಾಗಿದಂತೆ ವ್ಯೂಹ ರಚಿಸುವುದೇ ಜೀವನ.
ಅಂದಷ್ಟೇ ಎಎಸೈ ಆಗಿ ಕೆಲಸಕ್ಕೆ ಸೇರಿದ ವಿಲ್ಸನ್ (ವಿಜಯ್ ರಾಘವೇಂದ್ರ) ತನ್ನ ಪೋಸ್ಟಿಂಗಿಗೆ ಪ್ರತಿಯಾಗಿ ಲಂಚ ಸಲ್ಲಿಸಲು ಹಣ ಹೊಂದಿಸಿಕೊಂಡು ಹೊರಡುತ್ತಾನೆ. ಹಾಗೆ ಹೊರಟವನ ಬದುಕು ಒಂದೇ ಒಂದು ಕ್ಷಣದಲ್ಲಿ ಅತ್ಯಂತ ವಿಚಿತ್ರ ತಿರುವಿಗೆ ಹೊರಳಿಕೊಂಡುಬಿಡುತ್ತದೆ. ಅತ್ತ ಬೆಂಗಳೂರಿನ ಸರಣಿ ಕೊಲೆಗಳ ಹಿಂದಿರುವ ಖಳನನ್ನು ಆಗಷ್ಟೇ ಎನ್ಕೌಂಟರ್ ಮಾಡಿ ಬಂದ ಎಸಿಪಿ ಲಕ್ಷ್ಮಿ (ಭಾವನಾ)ಳನ್ನು ಆಕೆಯ ತಂದೆಯ ಭಯಾನಕ ಸಾವು ಸ್ವಾಗತಿಸುತ್ತದೆ. ನಡುರಾತ್ರೆಯಲ್ಲಿ ಅನುಮಾನಾಸ್ಪದವಾಗಿ ಹೊರಟ ಕಾರೊಂದನ್ನು ಹಿಂಬಾಲಿಸಿ ಹೊರಟ ಆಕೆಯ ತಂದೆ ಎಎಸೈ ತ್ಯಾಗರಾಜ (ರಂಗಾಯಣ ರಘು), ಗೆಳೆಯನಿಂದಾದ ಅಚಾತುರ್ಯಕ್ಕೆ ನೆರವಾಗಲು ಹೊರಟ ಎಎಸೈ ಸುಭಾಷ್ (ಪೆಟ್ರೋಲ್ ಪ್ರಸನ್ನ) ಇಬ್ಬರೂ ದುರಂತ ಅಂತ್ಯದ ಬಯಲೊಂದನ್ನು ತಲುಪುತ್ತಾರೆ. ಹೀಗೆ ಮಹಾನಗರಿಯನ್ನು ಕವಿದ ಒಂದೇ ಒಂದು ರಾತ್ರಿ ಹಲವರ ಬದುಕನ್ನು ಯಾವ್ಯಾವುದೋ ಗಲ್ಲಿಗಳಲ್ಲಿ ಅಲೆದಾಡಿಸಿ ಮತ್ತೆಲ್ಲೋ ತಲುಪಿಸುತ್ತದೆ. ನಿಶಿದ್ಧವೆಂದು ಗೊತ್ತಿದ್ದರೂ ಕೆಲವನ್ನು ಮಾಡಲೇಬೇಕಾದ ಅನಿವಾರ್ಯತೆಗೆ ವಿಲ್ಸನ್ ಬೀಳುತ್ತಾನೆ. ಇದೆಲ್ಲದರ ನಡುವೆ ಬಡಪಾಯಿ ಪಾನೀಪುರಿವಾಲಾನೊಬ್ಬ ಅತ್ಯಂತ ಅಸಹಾಯಕವಾದ, ಆದರೆ ಅಷ್ಟೇ ಪ್ರಮುಖವಾದ ಪಾತ್ರವನ್ನು ವಹಿಸಿಹೋಗುತ್ತಾನೆ. ದುರಂತದ ಸರಣಿಯೊಂದರ ಮೊದಲ ಕೊಂಡಿಯನ್ನು ಎಳೆದುಹೋಗುತ್ತಾನೆ.

ಇದೊಂದು ರೀತಿ ಉಳಿವಿನ ಹೋರಾಟ. ಸಂಭಾವಿತನೊಬ್ಬನ ಕೈಗೆ ಇದ್ದಕ್ಕಿದ್ದಂತೆ ರಕ್ತ ತಾಕಿಸಿದ ವಿಧಿ ಅದರ ಅಪವಾದವನ್ನು ಹಾಗೂ ಅದನ್ನು ಒರೆಸಿಕೊಳ್ಳುವ ಭಾದ್ಯತೆಯನ್ನು ಮಾತ್ರ ಅವನಿಗೇ ಬಿಟ್ಟು ಮಜಾತೆಗೆದುಕೊಳ್ಳುತ್ತದೆ. ವಯಕ್ತಿಕವಾಗಿ ನನಗೆ ಎಲ್ಲರ ನಟನೆ, ಕ್ಯಾಮರಾ ವರ್ಕ್, ಮೇಲ್ನೋಟಕ್ಕೆ ಬಿಡಿಸಿಕೊಳ್ಳುವಂತೆ ಕಂಡರೂ ಒಳಗೊಳಗೇ ಮತ್ತಷ್ಟು ಕಗ್ಗಂಟಾಗುವ ಕಥೆ ಎಲ್ಲವೂ ಇಷ್ಟವಾಯಿತು. ಕ್ಲೈಮ್ಯಾಕ್ಸು ಹಾಗಿರಬಾರದಿತ್ತು ಅಂತ ಕ್ಲಾಸ್ ಮನಸ್ಸು ಹೇಳಿದರೆ ಮಾಸ್ ಮನಸ್ಸು ‘ಓಕೆ’ ಅಂದಿದೆ.
ಅರಾಮದಲ್ಲಿ ನೋಡಬಹುದಾದ ಸಿನಿಮಾ. ಅಮೇಜಾನ್ ಪ್ರೈಮ್ ನಲ್ಲಿದೆ.
- ವಿನಾಯಕ ಅರಳಸುರಳಿ
