ನವ ಮದುಮಗ ತನಗೆ ಇಂತಹದ್ದೇ ವಾಚ್ ವರದಕ್ಷಿಣೆಯಾಗಿ ಬೇಕೆನ್ನುವ ಕಾಲವಿತ್ತು.ಆದರೆ ಈಗ ಸೆಲ್ ಪೋನ್ ಇರುವಾಗ ವಾಚ್ ಬೇಕಾಗಿಲ್ಲ.ಯಾಕೆಂದರೆ ಸೆಲ್ ಪೋನ್ ಇರುವಾಗ ವಾಚ್ ಬೇಕಾಗಿಲ್ಲ. – ಅರುಣ್ ಪ್ರಸಾದ್, ತಪ್ಪದೆ ಮುಂದೆ ಓದಿ…
ನನಗೂ ಡಿಪ್ಲೋಮಾ ಸೇರಿದಾಗ ಕೈಗಡಿಯಾರ, ಬೂಟ್ಸ್ ಇಂತಹ ಕ್ರೇಜ್ ಇತ್ತು, ನಮ್ಮ ಊರಿಂದ ಭಟ್ಕಳಕ್ಕೆ (ಆಗ ಭಟ್ಕಳ ವಿದೇಶಿ ವಸ್ತು ಸಿಗುವ ಜಾಗ, ಕೇರಳದ ಕಾಸರಗೋಡು ಇದ್ದ ಹಾಗೆ) ಹೋಗಿ ಗೋಲ್ಡ್ ಕಲರ್ ಸಿಟಿಜನ್ ವಾಚ್ ಖರೀದಿಸಿದ್ದೆ ಅದನ್ನು ಗೆಳೆಯ ತಗೊಂಡು ಹೋದವನು ಕೊಡಲೇ ಇಲ್ಲ, ನಂತರ ವಾಚ್ ಧರಿಸಲು ಇಷ್ಟವಾಗಲ್ಲಿವಾದ್ದರಿಂದ ಈವರೆಗೆ ಅಂದರೆ 1990 ರಿಂದ ವಾಚ್ ಧರಿಸದೇ ಇರುವುದು.
ಆ ಕಾಲದಲ್ಲಿ ನಿರ್ದಿಷ್ಟವಾದ ವಾಚ್ ನ ಬೇಡಿಕೆ ಇಡುತ್ತಿದ್ದ ಮದುಮಗನಿಗೆ ಆ ವಾಚ್ ವರದಕ್ಷಿಣೆ ಆಗಿ ನೀಡಲೇ ಬೇಕಿತ್ತು ಅದೆಲ್ಲ ಈ ಕಾಲದಲ್ಲಿ ಹಾಸ್ಯಾಸ್ಪದ ಅನ್ನಿಸಿದರೂ ಅದು ವಾಸ್ತವ.
ಈಗೆಲ್ಲ ಅನುದಿನ ನಿತ್ಯ ಸಂಗಾತಿ ಆಗಿರುವ ಸೆಲ್ ಫೋನ್ ಇರುವಾಗ ವಾಚ್ ಗಳ ಅವಶ್ಯಕತೆಯೂ ಇಲ್ಲವಾಗಿದೆ. ಆದರೆ ಈಗ ಸ್ಮಾರ್ಟ್ ವಾಚ್ / ಪಿಟ್ ನೆಸ್ ವಾಚ್ ಗಳ ಕಾಲ.
ಹೃದಯ ಬಡಿತ, ರಕ್ತ ಪರಿಚಲನೆಯಲ್ಲಿ ಆಮ್ಲಜನಕದ ಪ್ರಮಾಣ, ರಕ್ತದ ಒತ್ತಡ, ನಮ್ಮ ದಿನದ ಒಟ್ಟು ನಡಿಗೆಯ ಹೆಜ್ಜೆ ದಾಖಲೆ, ಶಕ್ತಿಯ ಬಳಸಿದ ಕ್ಯಾಲರಿಗಳ ಮಾಹಿತಿ, ದಿನದ ನಿದ್ದೆ ಅವಧಿ ಮತ್ತು ಅದರಲ್ಲಿ ದೀರ್ಘ ನಿದ್ದೆ/ ಎಚ್ಚರಗಳ ಒಟ್ಟು ಸಮಯ ಮುಂತಾದ ಫಿಟ್ ನೆಸ್ ಟ್ರಾಕಿಂಗ್ ಮಾಡುತ್ತಾ ಸಮಯ ಮತ್ತು ದಿನಾಂಕಗಳನ್ನು ತೋರಿಸುತ್ತಾ ಕೈಯ ಮುಂಗೈನಲ್ಲಿ ದರಿಸುವ ಸ್ಮಾಟ್೯ ವಾಚ್ ಗಳು ಹೊಸ ಜಮಾನದ ಉಪಯುಕ್ತ ವಾಚ್ ಗಳಾಗಿದೆ.

ಈ ವಾಚ್ ಗಳು ನಮ್ಮ ಸೆಲ್ ಫೋನ್ ಗೆ, ಕಂಪ್ಯೂಟರ್ ಗೂ ಲಿಂಕ್ ಮಾಡುವ ಮೂಲಕ ನಮ್ಮ ದೇಹದ ಆರೋಗ್ಯದ ಮಾನಿಟರಿಂಗ್ ಮಾಡ ಬಹುದಾಗಿದೆ. ಸುಮಾರು 40 ವರ್ಷ ವಾಚ್ ಧರಿಸದ ನಾನು ಮೊನ್ನೆಯಿಂದ ಅಳಿಯ ಮಗಳು ತಂದು ಕೊಟ್ಟ ಈ ಸ್ಮಾರ್ಟ್ ವಾಚ್ ಧರಿಸಿ ಅದರಲ್ಲಿನ ಎಲ್ಲಾ ಸಾಧ್ಯವಿರುವ ತಪಾಸಣೆಗಳನ್ನು ನೋಡುತ್ತಿದ್ದೇನೆ.
ಪ್ರತಿ ಬೆಳಿಗ್ಗೆ ನಾನು ಒಂದು ಗಂಟೆ ಮಾಡುವ ವಾಕಿಂಗ್ ಕನಿಷ್ಟ 5 ಕಿ.ಮಿ. ಆಗುತ್ತದೆ ಮತ್ತು 7,000 ಹೆಜ್ಜೆ ನಡೆಯುತ್ತೇನೆ. ಆದರೆ ಈ ವಾಚ್ ನಲ್ಲಿ ನನ್ನ ನಡಿಗೆ 3,750 ತೋರಿಸಿತು ಮತ್ತು ಕ್ರಮಿಸಿದ ದೂರ 2.5 ಕಿ.ಮಿ. ತೋರಿಸಿದೆ. ಇದಕ್ಕೆ ಕಾರಣ ನನ್ನ ಎತ್ತರ ಮತ್ತು ಹೆಜ್ಜೆಯ ದೂರ ನಿಖರವಾಗಿ ದಾಖಲಿಸಲು ಮಿಥ್ಯ ನೈಜತೆಯ (vertual reality) ಈ ಫಿಟ್ನೆಸ್ ವಾಚ್ ತಪ್ಪು ದಾಖಲಿಸಿರ ಬಹುದಾದರೂ ಇದು ಸ್ಥೂಲ ಕಾಯ ನಿವಾರಣೆಗೆ ಪ್ರಯತ್ನ ಮಾಡುವವರಿಗೆ ಉಪಯುಕ್ತವಾದ ವಾಚ್ ಆಗಿದೆ.

ಅಮೇಜಾನ್ / ಪ್ಲಿಪ್ ಕಾರ್ಟ್ ನಲ್ಲಿ ತರಹೇವಾರಿ ಮತ್ತು ಕನಿಷ್ಟ ಬೆಲೆಯಿಂದ ಗರಿಷ್ಟ ಬೆಲೆಯ ಪಿಟ್ ನೆಸ್ ವಾಚ್ ಗಳು ಲಭ್ಯವಿದೆ, ಸಿಟಿಜನ್ – ಪಾಸ್ಟ್ ಟ್ರಾಕ್ – ಸ್ಯಾಮ್ಸಂಗ್ ಗ್ಯಾಲಕ್ಸಿ ಮುಂತಾದ ಪ್ರಸಿದ್ಧ ಸಂಸ್ಥೆಗಳು ಈ ವಾಚ್ ತಯಾರಿಸಿ ಮಾರಾಟ ಮಾಡುತ್ತಿದೆ.
ನಮ್ಮ ಮನೆಗಳಲ್ಲೇ ನಮ್ಮ ಆರೋಗ್ಯ ಮಾನಿಟರಿಂಗ್ ಮಾಡುವ ಈ ಬಹುಪಯೋಗಿ ಸ್ಮಾಟ್೯ ವಾಚ್ ಆಕಷ೯ಕವಾಗಿದೆ. ಕುಟುಂಬದ ಉಳಿದ ಸದಸ್ಯರಿಗಾಗಿ ಹೆಚ್ಚುವರಿ ಆಗಿ 4 ಸ್ಮಾರ್ಟ್ ವಾಚ್ ಗೆ ಆರ್ಡರ್ ಮಾಡಿದ್ದೇನೆ.

ನಾನ್ಯಾಕೆ ವಾಕಿಂಗ್ ಮಾಡಬೇಕು… ನಿತ್ಯ ನನ್ನ ಮನೆ ಕೆಲಸದಲ್ಲೇ ಅಷ್ಟು ವಾಕಿಂಗ್ ಆಗುತ್ತೆ ಅಂತ ವಾದ ಮಾಡುವವರು ಈ ವಾಚ್ ಧರಿಸಿದರೆ ಅವರಿಗೆ ಗೊತ್ತಾಗುತ್ತದೆ ಅವರ ವಾಕಿಂಗ್ ಎಷ್ಟು ಅಂತ !
- ಅರುಣ್ ಪ್ರಸಾದ್
