ನುಡಿಯಬ್ಬೆಗೊಂದಿಸುತಕಬ್ಬಿಗಳ ಮನದಾಳದ ನುಡಿಗಳು

ಮೂಲೆ ಸೇರಿದ್ದ ಹಳೆಯ ಛಂದಸ್ಸನ್ನು ಮನಮುಟ್ಟುವಂತೆ, ಸರಳ ಛಂದಸ್ಸಿನ ಪಾಠ ಮಾಡುವುದರ ಮೂಲಕ ಸಾವಿರಾರು ಮಂದಿ, ಹಲವು ಬಳಗಗಳಲ್ಲಿ ಇಂದು ಹಲವು ವಿಧದ ಛಂದಸ್ಸಿನಲ್ಲಿ ಸರಾಗವಾಗಿ ಬರೆಯುತ್ತಿರುವುದು ಮನಸ್ಸಿಗೆ ತೃಪ್ತಿ ನೀಡಿದೆ. ಆ ಛಂದಸ್ಸಿನ ಸ್ವಾದ ಮತ್ತಷ್ಟು ಕವಿಗಳಿಗೆ ಕಲಿಯಲು ಪ್ರೇರಣೆಯಾಗಲಿ ಎಂಬುದೇ ಈ “ಛಂದಸ್ಸಿನ ಮಡಿಲು” ಪುಸ್ತಕ ಹೊರತರುವ ಸದುದ್ದೇಶವಾಗಿದೆ – ಬಿಟ್ಟೀರ ಚೋಂದಮ್ಮ (ಲಲಿತ), ಶಂಭು, ತಪ್ಪದೆ ಮುಂದೆ ಓದಿ…

ಪುಸ್ತಕ : ಛಂದಸ್ಸಿನ ಮಡಿಲು
ಲೇಖಕರು : ಬಿಟ್ಟೀರ ಚೋಂದಮ್ಮ (ಲಲಿತ), ಶಂಭು
ಪ್ರಕಾಶಕರು :ಎಚ್.ಎಸ್.ಆರ್.ಎ.ಪ್ರಕಾಶನ
ಬೆಲೆ : ೩೦೦.೦೦

ಪೆತ್ತಬ್ಬೆ ಕೈಪಿಡಿದು ತಿದ್ದಿಸಿದಳಕ್ಕರವ
ವಂದಿಸುವೆ ಮೊದಲಗುರು ಚರಣ ಕಮಲ
ಮರೆತಿಲ್ಲ ಮನದೊಳಗೆ ನೆಲೆಸಿಹುದು ಬೇರೂರಿ
ಕೈಪಿಡಿದು ನಡೆಸಿದೆನ್ನಪ್ಪ
ಗುರುವ

ಹೆಜ್ಜೆ ಹೆಜ್ಜೆಗೆ ತಿದ್ದಿ ಸಲಹಿರುವ ಗುರುಗಳಿಗೆ
ಶಿರಬಾಗಿ ನಮಿಸುವೆನು ಶುಭಕೋರುತ

ಮೂಲತಃ ಕೊಡಗಿನವಳಾದ ನಾನು, ಬೇಂಗುನಾಡಿನ ಬೇಂಗೂರು ಗ್ರಾಮದ, ಕಾವೇರಿಯ ತಟದಲ್ಲಿ ನೆಲೆಸಿದ ದಿವಂಗತ ಕೂಡಕಂಡಿ ಪೂವಯ್ಯ, ಅಕ್ಕಮ್ಮ ದಂಪತಿಯ ದ್ವಿತೀಯ ಪುತ್ರಿಯಾಗಿ 1956ನೇ ಇಸವಿಯಲ್ಲಿ ಜನಿಸಿದೆ. ಯಾವ ಜನ್ಮದ ಸುಕೃತವೋ ನನಗೆ ಇಂತಹ ತಂದೆ ತಾಯಿಯರು ಸಿಕ್ಕಿದರು. ನನ್ನ ಒಡಹುಟ್ಟಿದ ಅಕ್ಕ, ತಂಗಿಯರು ನಾವು ಎಂಟು ಮಂದಿ. ದೇಹ ಎಂಟಾದರು ಆತ್ಮ ಒಂದೇ ಎನ್ನುವಂತೆ ಇರುವೆವು. ದುರಾದೃಷ್ಟವಶಾತ್ ಅಕ್ಕ ನಮ್ಮೊಂದಿಗಿಲ್ಲ. ನಮಗೆಲ್ಲರಿಗೂ ಪ್ರೀತಿಯ ಒಬ್ಬನೇ ತಮ್ಮ. ತವರಿನ ಬಾಂಧವ್ಯಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವನು. ನಾನು ಹುಟ್ಟಿ ಬೆಳೆದಿದ್ದು ಸಂಸ್ಕಾರವಂತ, ವಿದ್ಯಾವಂತ ಹಾಗು ತಕ್ಕಮಟ್ಟಿಗೆ ಸಿರಿವಂತ ಕೂಡು ಕುಟುಂಬದಲ್ಲಿ. ನಾನು ಬೆಳೆದು ದೊಡ್ಡವಳಾಗುವ ಹೊತ್ತಿಗೆ ಕೆಲಸದ ನಿಮಿತ್ತ ಎಲ್ಲರೂ ಬೇರೆ ಬೇರೆಯಾದರು.

ನನ್ನ ವಿದ್ಯಾಭ್ಯಾಸ ಬಿ. ಬಾಡಗ ಸರಕಾರಿ ಪ್ರಾಥಮಿಕ ಶಾಲೆ ಹಾಗು ಅರುಣ ಪ್ರೌಢಶಾಲೆ ಮತ್ತು ಅರುಣ ಜೂನಿಯರ್ ಕಾಲೇಜ್ ಚೇರಂಬಾಣೆಯಲ್ಲಿ ಆಯಿತು. ಅತ್ಯುತ್ತಮ ಗುರುಗಳ ಸಮೂಹವೇ ಇದ್ದುದರಿಂದ ಒಳ್ಳೆಯ ವಿದ್ಯಾಭ್ಯಾಸ ಮತ್ತು ಸಂಸ್ಕಾರ ಸಿಕ್ಕಿತ್ತು. ಚಿಕ್ಕಂದಿನಿಂದಲೂ ನಾಯಕತ್ವದ ಗುಣ ಹೊಂದಿದ ನಾನು ಗುರುಗಳ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದೆ. ಕಲಿಕೆಯಲ್ಲಿ ಆಸಕ್ತಿ ಇದ್ದ ನಾನು ಯಾವಾಗಲೂ ತರಗತಿಯಲ್ಲಿ ಮೊದಲಿಗಳಾಗಿರುತಿದ್ದೆ.

ಏಳನೇ ತರಗತಿಯಲ್ಲಿದ್ದಾಗ ನಾನು ಮೊತ್ತ ಮೊದಲು ಭಾಮಿನಿ ಷಟ್ಪದಿಯನ್ನು ಬರೆದು ಕನ್ನಡ ಗುರುಗಳಾದ ಪದ್ಮನಾಭರ ಮೆಚ್ಚುಗೆಗೆ ಪಾತ್ರಳಾಗಿದ್ದೆ. ಅಲ್ಲಿಂದ ಪ್ರಾರಂಭವಾದ ನನ್ನ ಬರವಣಿಗೆ ಸತತವಾಗಿ ಸಾಗಿದ್ದರೂ ಪ್ರಕಟಣೆಗೆ ಕಳುಹಿಸಲಿಲ್ಲ. ಪ್ರೌಢ ಶಾಲೆಯಲ್ಲಿ ವಾಸುದೇವ ಶಾಸ್ತ್ರಿಗಳು ಕನ್ನಡ ಪಂಡಿತರಾಗಿ ದೊರೆತಿದ್ದು ನನ್ನ ಭಾಗ್ಯ. ಅವರಿಂದ ಕಲಿತ ವ್ಯಾಕರಣ, ಗಮಕ ವಾಚನ ಇಂದಿಗೂ ನನ್ನಲ್ಲಿ ಸಚೇತನವಾಗಿದೆ. ಶಾಲೆಯ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸುತಿದ್ದೆ. ಭಾಷಣ, ಹಾಡುಗಾರಿಕೆ, ಡಿಬೇಟ್ ಮುಂತಾದವುಗಳಲ್ಲಿ ಬಹುಮಾನಗಳು ಬರುತಿದ್ದವು. ಆಟೋಟದಲ್ಲಿ ಮಾತ್ರ ನಾನು ಹಿಂದೆಯೆ. ಪದವಿ ಕಾಲೇಜು ಆಚಾರ್ಯ ಪಾಠಶಾಲೆ ಬೆಂಗಳೂರಿನಲ್ಲಾಯಿತು. ಅಂದಿನಿಂದ ನನ್ನ ವಾಸ ಸ್ಥಳ ಬೆಂಗಳೂರಾಯಿತು. ಬಿ.ಎ ಪದವಿ ಮುಗಿದ ನಂತರ ವೈವಾಹಿಕ ಜೀವನ. ಜೊತೆಗೆ ಸ್ವಂತ ಉದ್ಯೋಗ. ನನಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬಳು ಮೊಮ್ಮಗಳು ಇದ್ದಾಳೆ. ಈ ಕಾಲಘಟ್ಟದಲ್ಲಿ “ಕೊಡಗು ಸಂಗಾತಿ” ಎಂಬ ಪಾಕ್ಷಿಕ ಪತ್ರಿಕೆಯಲ್ಲಿ ನನ್ನ ಬರವಣಿಗೆ ಕಥೆ, ಕವನ, ಲೇಖನಗಳು ಹಾಗು ಮಕ್ಕಳ ಅಂಕಣ ಬರಹದಲ್ಲಿ ಕಥೆ ಮತ್ತು ಪ್ರಾಚೀನ ಋಷಿ ಮುನಿಗಳ ಸಾಧನೆಗಳ ಬಗ್ಗೆ, ನಮ್ಮ ಸನಾತನ ಧರ್ಮ, ಸಂಸ್ಕೃತಿ ಹಾಗು ಋಷಿ ಮುನಿಗಳಿಂದ ವಿಜ್ಞಾನ ಗಣಿತಕ್ಕೆ ಸಿಕ್ಕ ಕೊಡುಗೆಗಳ ಬಗ್ಗೆ ಅರಿವು ಮೂಡಿಸುತಿದ್ದೆ. ಕಾರಣಾಂತರದಿಂದ ಕೊಡಗು ಸಂಗಾತಿ ಪತ್ರಿಕೆ ನಿಂತು ಹೋಯಿತು. ನಂತರ ನನ್ನ ಬರವಣಿಗೆಯೂ ನಿಂತಿತು. ಈ ಮಧ್ಯೆ ಬೆಂಗಳೂರಿನ ಅಕ್ಷರಂ ಸಂಸ್ಥೆಯಲ್ಲಿ ಸಂಸ್ಕೃತದಲ್ಲಿ ಕೋವಿದ ಪದವಿ ಪಡೆದುಕೊಂಡೆ.

ಜೊತೆಜೊತೆಗೆ ಶ್ರೀಮತಿ ಸಾವಿತ್ರಿ ರಂಗನಾಥನ್, ಶ್ರೀಮತಿ ರಾಜಿ ರಾಮಚಂದ್ರನ್, ಮತ್ತು ಲೇಟ್ ಶ್ರೀಮತಿ ಶಾರದಾಂಬ ರಾಮಚಂದ್ರ ಎಂಬ ತ್ರಯಂಬಿಕೆಯರು ಆಧ್ಯಾತ್ಮ ಮತ್ತು ಮನೋಧರ್ಮ ಸಂಗೀತ ಗುರುಗಳಾಗಿ ದೊರೆತದ್ದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ. ಶ್ರೀಯುತ ಶ್ರೀಕಂಠ ಭಟ್ ನನ್ನ ಶಾಸ್ತ್ರೀಯ ಸಂಗೀತ ಗುರುಗಳು. ಈ ಸಂದರ್ಭದಲ್ಲಿ ಸಾಕಷ್ಟು ದೇವರ ನಾಮಗಳನ್ನು ಬರೆದೆ.

 

ಕೋವಿಡ್ ಕಾಲವು ಮತ್ತೆ ನನ್ನ ಪಾಲಿಗೆ ವರದಾನವಾಯ್ತು. ಆಗ ನನ್ನ ಸಹಪಾಠಿ ಹಾಗು ಒಂದು ರೀತಿಯ ಬಂಡಾಯ ಕವಿಗಳು ಎನ್ನಬಹುದಾದ ಶ್ರೀಯುತ ಪೊಡನೋಳನ ಈಶ್ವರ ತಮ್ಮಯ್ಯನವರ ಒತ್ತಾಯದ ಮೇರೆಗೆ ವಾಟ್ಸಾಪ್ ಬಳಗ ಸೇರಿ ಬರವಣಿಗೆಗೆ ಮತ್ತೆ ಚಾಲನೆ ನೀಡಿದೆ. ಮೂರು ವರ್ಷಗಳಿಂದ ಮರೆತ ವಿವಿಧ ಛಂದಸ್ಸಿನ ಪ್ರಕಾರಗಳಲ್ಲಿ ಬರವಣಿಗೆ, ಅಧ್ಯಯನ ಪ್ರಾರಂಭಿಸಿದೆ. ಈ ಹಂತದಲ್ಲಿ ನಾನು ಮಾಡುವ ಸಣ್ಣಪುಟ್ಟ ತಪ್ಪು ತಿದ್ದಿ ಸರಿಯಾದ ಮಾರ್ಗದರ್ಶನ ನೀಡಿದವರು ದೇವರು ಕೊಟ್ಟ ಮಕ್ಕಳಾದ ಶ್ರೀಯುತ ಶಮಂತ್ ಕುಮಾರ್ ಅವರು ಮತ್ತು ಕು. ಲತಾ ಬನಾರಿ ಪ್ರಸ್ತುತ ಶ್ರೀಮತಿ ಧನು ಸೀತಂಗೋಳಿಯವರು. (ಇವರೀರ್ವರು ಸರ್ವೋತ್ತಮ ಆಚಾರ್ಯ ವಿಧ್ಯಾವಾಚಸ್ಪತಿ, ಡಾ. ಕವಿತಾ ಕೃಷ್ಣರ ಗರಡಿಯಲ್ಲಿ ಪಳಗಿದ ಸಾಹಿತಿಗಳು.) ಹಾಗು ಬರವಣಿಗೆಯಲ್ಲಿ ಕಣ್ತಪ್ಪಿನಿಂದ ಟೈಪಿಸುವಾಗ ಆದ ಅಕ್ಷರ ದೋಷಗಳನ್ನು ತಕ್ಷಣ ಗಮನಿಸಿ ನನ್ನ ಗಮನಕ್ಕೆ ತರುತಿದ್ದವನು ನನ್ನ ಅಚ್ಚುಮೆಚ್ಚಿನ ಮಗ ಲತೀಶ್ ಎಂ ಸಂಕೋಳಿಗೆ ಎಂಬ ಚತುರ ಕವಿ. ನನಗೆ ಅರ್ಥ ಗೊಂದಲವಾದಾಗಲೆಲ್ಲ ಕೇಳಿದ ತಕ್ಷಣ ಉತ್ತರ ಕಳಿಸುತಿದ್ದ ಶ್ರೀಯುತ ಗಿರೀಶ್ ಕಿಗ್ಗಾಲ್, ಕೊಡಗು (ನಿವೃತ್ತ ಸೇನಾಧಿಕಾರಿ, ಕವಿಗಳು, ಕಥೆಗಾರರು, ಲೇಖಕರು). ಶ್ರೀಯುತ ಅಶ್ವತ್ಥ ನಾರಾಯಣ ಗುರುಗಳು, ಮೈಸೂರು, ಇವರು ಬಹಳಷ್ಟು ಗೊಂದಲಗಳನ್ನು ಸಾಕ್ಷಿ ಸಮೇತ ಒದಗಿಸಿದವರು. ನಾನು ಕೇಳಿದ ತಕ್ಷಣವೇ ಆಶಯ ನುಡಿ ಬರೆದ ಮಹಾನುಭಾವರು. (ನಿವೃತ್ತ ಅಧ್ಯಾಪಕರು, ಕವಿಗಳು ಮೈಸೂರು). ಡಾ. ಶ್ರೀವತ್ಸ ಜೋಶಿಯವರು ದೂರದ ಅಮೇರಿಕಾದ ವಾಶಿಂಗ್ಟನ್ (ಅಗಸನ ಕಟ್ಟೆಯವ ಎಂದು ಕರೆದುಕೊಳ್ಳುವವರು) ನಿವಾಸಿ, “ತಿಳಿರು ತೋರಣ” ಅಂಕಣ ಬರೆಹಗಾರರು, ಸ್ವಚ್ಛ ಕನ್ನಡ ಅಭಿಯಾನ ಹಮ್ಮಿಕೊಂಡು ವಿಶ್ವದಾದ್ಯಂತ ಆಸಕ್ತರಿಗೆ ಉಣಬಡಿಸುತ್ತಿರುವ ಕನ್ನಡದ ಕುವರ, ಪದಬಳಕೆಯ ಅನುಮಾನ ಬಂದಾಗ ಮೆಸೇಜ್ ಹಾಕಿದ ತಕ್ಷಣ ಉತ್ತರಿಸುವ ಸಹೃದಯಿಗಳು. ನಿಘಂಟು ನೋಡಿ ಹೇಳು ಮಗಳೆ ಎಂದಾಗ ತನ್ನ ವಯಸ್ಸನ್ನೂ ಲೆಕ್ಕಿಸದೆ ಚಿಗರೆ ಮರಿಯಂತೆ ಓಡೋಡಿ ಹೋಗಿ ಹುಡುಕಿ ಹೇಳುತಿದ್ದವಳು ಲತಾ ಮೇಟಿಕುರ್ಕೆಯವರು (ವೃತ್ತಿಯಲ್ಲಿ ಉಪಾಧ್ಯಾಯಿನಿ.) ಹಾಗು ಅವರ ಮಗಳು ಸಹನಾ. ಹೇಳಿದ ತಕ್ಷಣ ಅರ್ಥಮಾಡಿಕೊಂಡು ಛಂದಸ್ಸಿನ ಪಾಠ ಕಲಿತ ಜಾಣೆಯರು. ಇವರು ನನಗೆ ನಡೆದಾಡುವ ನಿಘಂಟು ಎಂದು ಪ್ರೀತಿಯಿಂದ ಕರೆಯುತ್ತಾರೆ. ಬಹಳಷ್ಟು ಬಳಗದ ಕಲಿಕಾರ್ಥಿ ಮಕ್ಕಳು ಛಂದಸ್ಸಿನ ಕಲಿಕೆಯೊಂದಿಗೆ ಅಮ್ಮ ಮಕ್ಕಳ ಸಂಬಂಧ ಬೆಸೆದುಕೊಂಡರು. ಅವರಲ್ಲಿ ಬಳಗದ ಹೆಮ್ಮೆಯ ಅತ್ತಿಮಬ್ಬೆ ಎಂದು ಕರೆಯುವ ಮೃದುಲಾ ತಿಂಗಳಾಯ (ವೃತ್ತಿಯಲ್ಲಿ ಉಪಾಧ್ಯಾಯಿನಿ) ನನ್ನ ಹಲವು ರಚನೆಗಳನ್ನು ಸುಶ್ರಾವ್ಯವಾಗಿ ಹಾಡುವವರು. ಹಾಗೆ ಶ್ರೀಯುತ ಗೋಪಾಲಕೃಷ್ಣ ಭಟ್ ಕೊಚ್ಚಿಯವರು ನನ್ನ ರಚನೆಗೆ ಶಾಸ್ತ್ರೀಯ ಸಂಗೀತ ಅಳವಡಿಸಿ ಹಾಡುವವರು. ಮೆಲೋಡಿ ಅಳವಡಿಸಿ ಹಾಡುವ ಪ್ರಮಿಳಾ ರಾಜ್. ತಿಂಗಳಿಗೊಮ್ಮೆಯಾದರೂ ಕರೆಮಾಡಿ ಹಲವು ವಿಷಯಗಳನ್ನು ತಿಳಿದುಕೊಳ್ಳುವ ಶಿವಕುಮಾರ್ ಹಾನಗಲ್. ಅಲ್ಲದೆ ವಿಜು, ರಾಜೇಶ್ವರಿ ಚಿತ್ರದುರ್ಗ, ಗೀತಾ, ಚಂದ್ರಶೇಖರ (ಉಪಾಧ್ಯಯರು) ಹನುಮಂತಪ್ಪ (ಉಪಾಧ್ಯಾಯರು). ನರಸಿಂಹಮೂರ್ತಿ, (ಉದ್ಯಮಿಗಳು, ರೈತರು). ಅಮ್ಮ ಅಂದರೆ ಪ್ರಾಣಬಿಡುವ ಚಕ್ರವರ್ತಿ ಸಿ. ಲಕ್ಕವಳ್ಳಿಯವರು (ಸ್ವ ಉದ್ಯೋಗಿ) ಗುರುಕುಲ ಚಿಕ್ಕಮಗಳೂರು ಹಾಗು ಎಲ್ಲಾ ಗುರುಕುಲದ ಕಲಿಕಾರ್ಥಿಗಳು ಮತ್ತು ಅಧ್ಯಕ್ಷರುಗಳು, ರಾಜ್ಯಾಧ್ಯಕ್ಷರು ಹುಲಿಯುರುದುರ್ಗ ಲಕ್ಷ್ಮೀ ನಾರಾಯಣರವರು ರಾಜ್ಯ ಕಾರ್ಯದರ್ಶಿಗಳಾದ ಡಾ. ಶಿವರಾಜ ಗೌಡರು. ಓಂ ಬಳಗದ ರೂವಾರಿ ಜಯಕುಮಾರ್ ರವರು ಆಗಿಂದಾಗ್ಗೆ ಸ್ಪರ್ಧೆ ನಡೆಸಿಕೊಡಿ ಎಂದು ಪ್ರೀತಿಯಿಂದ ಒತ್ತಾಯಪೂರ್ವಕ ಕೇಳುವ ಆತ್ಮೀಯರು. ಇನ್ನೂ ಸಹೃದಯಿ ಬಳಗ ಸೇರಿದಂತೆ ಅನೇಕ ಬಳಗದ ಕಲಿಕಾರ್ಥಿಗಳು.

ನಾನು ಬಳಗಕ್ಕೆ ಬಂದ ಕೆಲವೇ ದಿನಗಳಲ್ಲಿ ಮಾತೃಶ್ರೀ ಎಂಬ ಕಾವ್ಯ ನಾಮ ಮತ್ತು ಶಾರದಾ ಪುತ್ರಿ ಎಂಬ ಬಿರುದು ದಯಪಾಲಿಸಿದ “ಗುರು ಸಾಹಿತ್ಯ ಪರಿಷತ್ ಶೃಂಗೇರಿ” ಬಳಗದ ರೂವಾರಿಗಳು, ಅಧ್ಯಕ್ಷರು ಡಾ. ರಾಧಾಕೃಷ್ಣ ಜೋಯಿಸರು, (ಅಧ್ಯಾಪಕರು) ಚಾತುರ್ಯ ಲೆಕ್ಕದಲ್ಲಿ ಮಹಾ ಪಂಡಿತರು, ಇಮೋಜಿ ಮೂಲಕ ಸಮಸ್ಯೆ ಬಿಡಿಸಲು ಕಲಿಸುವವರು. ಬಳಗದಲ್ಲಿ ಇಂಗ್ಲಿಷ್ ಪದ ಬಳಕೆ ಮಾಡಿದರೆ ಕಾ ಗುಣಿತ ಬರೆಸುವವರು. ಜ್ಯೋತಿಸಿಗಳು,ಶೃಂಗೇರಿ. ಇನ್ನೊಬ್ಬರು, ಹಳೆಗನ್ನಡದಲ್ಲಿ ವಿಶೇಷ ಆಸಕ್ತಿ ಹೊಂದಿ ಆಗಾಗ ಸಮಸ್ಯಾ ಪೂರಣ ಪದ್ಯ ಕಳುಹಿಸಿ ಮೆದುಳಿಗೆ ಕಸರತ್ತು ಮಾಡಿಸುವ ಪ್ರಜ್ವಲ್ ಕೌಡನ ಹಳ್ಳಿಯವರು.

ಕುಂಬ್ಲೆಯ ವಿ ಬಿ ಕುಳಮರ್ವ ಸರ್ ರವರು ನಾನು ಕೇಳಿದ ತಕ್ಷಣ ಬೆನ್ನುಡಿ ಬರೆಯಲು ಸಂತೋಷದಿಂದ ಒಪ್ಪಿಗೆ ನೀಡೀದ ಸಹೃದಯಿಗಳು. ಛಂದಸ್ಸಿನ ಮಡಿಲಿಗೆ ಇನ್ನೊಂದು ಆಶಯ ನುಡಿ ಬರೆಯಲು ಮುಂದೆ ಬಂದ ಸಹೃದಯಿ ಹಾ. ಮಾ. ಶತೀಶ್ ರವರು.

ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ನಾನು ಕೇಳಿದಾಗ ಅತ್ಯಂತ ಪ್ರೀತಿಯಿಂದ ಆಶಿರ್ವಾದದ ನುಡಿಗಳನ್ನು ಬರೆಯಲು ಒಪ್ಪಿದ ಸರ್ವೋತ್ತಮ ಆಚಾರ್ಯ, ವಿದ್ಯಾವಾಚಸ್ಪತಿ ಡಾ. ಕವಿತಾ ಕೃಷ್ಣ ಗುರುಗಳು, ಛಂದಸ್ಸಿನಲ್ಲಿ ಮಹಾ ಮೇರು. ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುವ ವಾಕ್ಚತುರರು. ತರುಣರನ್ನೂ ನಾಚಿಸುವ ಉತ್ಸಾಹದ ಚಿಲುಮೆ, ಸದಾ ಹಸನ್ಮುಖಿ. ಸುದೀರ್ಘವಾದ ಮುನ್ನುಡಿಯೊಂದಿಗೆ ಬೆನ್ನುತಟ್ಟುವ ಮೂಲಕ ಕೃತಿಯ ಮೌಲ್ಯವನ್ನು ಹೆಚ್ಚಿಸಿದ ಶ್ರೀಮತಿ ವಿಜಯ ಪದ್ಮಶಾಲಿ(ಕಾವ್ಯಕಲ್ಪವಲ್ಲಿ)ಯವರಿಗೆ ಋಣಿಯಾಗಿರುವೆ.

ಈ ಎಲ್ಲಾ ಸಾಧನೆಯ ಹಿಂದೆ ಹೆಜ್ಜೆ ಹೆಜ್ಜೆಗೆ ಸಹಕರಿಸಿ ಪುಸ್ತಕ ಹೊರತಲು ಶ್ರಮಿಸುತ್ತ ಸಂಪೂರ್ಣ ಜವಾಬ್ದಾರಿ ಹೊತ್ತ ಉತ್ಸಾಹಿ ತರುಣ ಶ್ರೀಯುತ ಚನ್ನಕೇಶವ ಜಿ ಲಾಳನಕಟ್ಟೆಯವರು. ಪ್ರೀತಿಯಲ್ಲಿ ಬೆಟ್ಟದಷ್ಟು ಎತ್ತರ, ಸಾಗರದಷ್ಟು ಆಳ ವೈಶಾಲ್ಯತೆಯನ್ನು ಹೊಂದಿ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತಲೂ ಹೆಚ್ಚಾಗಿ ಸದಾ ಅಮ್ಮ ಅಮ್ಮ ಎಂದು ಅಮ್ಮನ ವಾಕ್ಯವೇ ವೇದವಾಕ್ಯವೆಂದು ಭಾವಿಸುವವ. ನನ್ನನ್ನು ಅತ್ತಿಮಬ್ಬೆ ಎಂದು ಕರೆಯುವ ಎರಡನೆ ವ್ಯಕ್ತಿ, ನನ್ನ ರನ್ನ. (ಸಪ್ತಗಿರಿ ವೈದ್ಯಕೀಯ ಸಂಸ್ಥೆಯಲ್ಲಿ ವೃತ್ತಿ. ) ಕವಿಗಳು. ಸದಾ ಪರೋಪಕಾರನಿರತ. ಈತನ ಕವನ ರಚನಾ ಸಾಮರ್ಥ್ಯ ನೋಡಿದಾಗ, ರತ್ನನೇ ಈತನ ರೂಪದಲ್ಲಿ ಹುಟ್ಟಿ ಬಂದನೇನೋ ಅನಿಸುತ್ತದೆ. ನನ್ನ ಮಗ ಎಂದುಕೊಳ್ಳಲು ತುಂಬಾ ಹೆಮ್ಮೆಯೆನಿಸುತ್ತದೆ.

ವೇದ ಕಾಲದಿಂದಲೂ ಭಾರತೀಯರಲ್ಲಿ ಹಾಸುಹೊಕ್ಕಾಗಿರುವ ಛಂದಸ್ಸಿನ ವಿವಿಧ ಪ್ರಕಾರಗಳು ಕಷ್ಟಕರವೆಂದು, ನಮ್ಮ ಈಗಿನ ಕವಿಗಳು ನವ್ಯ, ನವೊದಯದ ಕವನಗಳತ್ತ ಮುಖಮಾಡಿದ್ದಾರೆ. ಹೇಗಾದರೂ ಮಾಡಿ ಕಾವ್ಯ ರಚನೆಗೆ ನಮ್ಮ ಪ್ರಾಚೀನ ಸಂಸ್ಕಾರದ ಹೊಳಪು ನೀಡಲು ನಿರ್ಧರಿಸಿದೆ.

ಮೂಲೆ ಸೇರಿದ್ದ ಹಳೆಯ ಛಂದಸ್ಸಿನಲ್ಲಿ ನಾನು ಕೊಡುತಿದ್ದ ಮನಮುಟ್ಟುವ ಸರಳ ಛಂದಸ್ಸಿನ ಪಾಠದಿಂದ ಸಾವಿರಾರು ಮಂದಿ, ಹಲವು ಬಳಗಗಳಲ್ಲಿ ಇಂದು ಹಲವು ವಿಧದ ಛಂದಸ್ಸಿನಲ್ಲಿ ಸರಾಗವಾಗಿ ಬರೆಯುತ್ತಿರುವುದು ಮನಸ್ಸಿಗೆ ತೃಪ್ತಿ ನೀಡಿದೆ. ಆ ಛಂದಸ್ಸಿನ ಸ್ವಾದ ಮತ್ತಷ್ಟು ಕವಿಗಳಿಗೆ ಕಲಿಯಲು ಪ್ರೇರಣೆಯಾಗಲಿ ಎಂಬುದೇ ಈ “ಛಂದಸ್ಸಿನ ಮಡಿಲು” ಪುಸ್ತಕ ಹೊರತರುವ ಸದುದ್ದೇಶ. ಇಂದಿನ ಮತ್ತು ಮುಂದಿನ ಪೀಳಿಗೆಗೆ ಸುಲಭವಾಗಿ ಬರೆಯಲು ಸಹಾಯವಾಗುವ ಕೈಪಿಡಿಯಂತೆ ಉಪಯೋಗವಾದರೆ ನನ್ನ ಈ ಶ್ರಮ ಸಾರ್ಥಕವಾಗುತ್ತದೆ. ಟೈಪಿಸಿದಾಗ ಉಂಟಾಗುವ ಅಕ್ಷರ ದೋಷಗಳಾಗಲಿ, ಡಿಟಿಪಿಯಲ್ಲಿ ತಿಳಿಯದೆ ಸಾಲುಗಳು ಸೇರಿಹೋಗಿದ್ದಲ್ಲಿ, ಮುದ್ರಣ ದೋಷವಾಗಲಿ ಕಂಡು ಬಂದರೆ ಸಹೃದಯಿಗಳು ಕ್ಷಮಿಸಿ, ತಿದ್ದಿಕೊಂಡು ಓದಬೇಕಾಗಿ ವಿನಂತಿಸುತ್ತೇನೆ. ಗೊಂದಲಗಳುಂಟಾದರೆ ನನ್ನನ್ನಾಗಲಿ, ಶ್ರೀಯುತ ಚನ್ನಕೇಶವರವರನ್ನಾಗಲಿ, ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದು.

ವಯೋಸಹಜವಾಗಿ ನಾನು ಯಾರನ್ನಾದರೂ ಮರೆತಿದ್ದರೆ ದಯವಿಟ್ಟು ಕ್ಷಮೆಯಿರಲಿ…


  • ಬಿಟ್ಟೀರ ಚೋಂದಮ್ಮ (ಲಲಿತ), ಶಂಭು –  ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading