ನಮ್ ಕಮಿಟ್ ಮೆಂಟು ಹೆಂಗಿರಬೇಕೆಂದ್ರೆ…..!

ಈ ನವರಂಗೀ ದುನಿಯಾದಲ್ಲಿ ನಾವು ಅತಿಯಾಗಿ ಪ್ರೀತಿಸುವವರು ನಮ್ಮಿಂದ ಧುತ್ತನೇ ದೂರವಾದಾಗ , ಬಯಸಿದಾಗ ಸಿಗದೇ ಹೋದಾಗ ಅಥವಾ ನಮ್ಮನ್ನು ಬಿಟ್ಟು ಅಗಲಿದಾಗ ನಮಗಾಗುವ ನೋವು, ನಿರಾಶೆ, ಹತಾಶೆ, ದುಃಖ, ಸಂಕಟ, ಕಳವಳ- ತಳಮಳ, ವೇದನೆ… ಮುಂತಾದ ಎಮೋಷನಲ್ ಗಳನ್ನು ಹೀಗೇ ಎಂದು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವೇ ? – ಹಿರಿಯೂರು ಪ್ರಕಾಶ್, ತಪ್ಪದೆ ಮುಂದೆ ಓದಿ… 

ಅಂತಹಾ ಸಂಧರ್ಭಗಳಲ್ಲಿ ಯಾರು ಏನೇ ಸಮಾಧಾನದ ಮಾತುಗಳನ್ನು ಹೇಳಿದರೂ ಅದಕ್ಕೆ ಬದಲಾಗಿ ಬೇರೇನೇ ಸಿಕ್ಕರೂ ನಮ್ಮ‌ ಮನದಾಳದಲ್ಲಿ ಮಡುಗಟ್ಟಿದ ಆ ಅವ್ಯಕ್ತ ನೋವನ್ನು ಅದು ಶಮನಗೊಳಿಸಬಲ್ಲದೇ ? ಪ್ರೀತಿಸಲ್ಪಟ್ಟ ವ್ಯಕ್ತಿ , ಗಂಡ, ಹೆಂಡತಿ, ಮಕ್ಕಳು , ಬಂಧು ಬಳಗ, ಸ್ನೇಹಿತರು ಅಥವಾ ಪ್ರೇಮಿಗಳು ಹೀಗೆ ಯಾರೇ ಆಗಿದ್ದರೂ , ಈ ಬಗೆಯ ಎಲ್ಲಾ ಭಾವನಾತ್ಮಕ ಸಂಬಂಧಗಳು ಬದುಕಿನಲ್ಲಿ ಅತ್ಯಂತ ಮೌಲ್ಯಯುತವಾದವು. ಈ ಸಂಬಂಧಗಳ ಪರಿಧಿಯಲ್ಲಿ ಪರಿಭ್ರಮಿಸುವ ಒಂದೊಂದು ಸಂಬಂಧಕ್ಕೂ ಪ್ರೀತಿ, ಪ್ರೇಮ‌, ಮಮತೆ, ಮಮಕಾರ ಹಾಗೂ ಕಕ್ಕುಲತಿಗಳ ಶಕ್ತ ಚೌಕಟ್ಟಿನ ಗಟ್ಟಿತನವಿರುತ್ತದೆ. ಒಬ್ಬರು ಮತ್ತೊಬ್ಬರ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರುತ್ತಾರೆ. ಅದು ರಕ್ತ ಹಂಚಿಕೊಂಡು ಜನಿಸಿದವರಾಗಿರಬಹುದು, ಸಪ್ತಪದಿ ತುಳಿದವರಲ್ಲಾಗಿರಬಹುದು ಇಲ್ಲವೇ ಮನಸಾರೆ ಪ್ರೇಮಿಸಿದವರಲ್ಲಾಗಿರಬಹುದು ಇಲ್ಲವೇ ಜೀವಕ್ಕೆ ಜೀವ ಕೊಡುವ ಪವಿತ್ರ ಸ್ನೇಹದಲ್ಲಾದರೂ ಇದ್ದಿರಬಹುದು.

ಈ ಸಂಬಂಧಗಳ ಅಟ್ಯಾಚ್ ಮೆಂಟ್ ಹೇಗಿರುತ್ತದೆಯೆಂದರೆ ಇವುಗಳಲ್ಲಿ ಎಂದಾದರೂ ಒಂದು ದಿನ ಅಗಲಿಕೆ ಅನಿವಾರ್ಯ ಎಂಬ ಸರಳ ಸತ್ಯ ತಿಳಿದಿದ್ದರೂ ಮನುಷ್ಯನ ಮನಸ್ಸು ಅದನ್ನು ಅರಗಿಸಿಕೊಳ್ಳಲು ಆಗುವುದಿಲ್ಲ. ನಾವು ಜನ್ಮ ಕೊಟ್ಟ ಮಕ್ಕಳನ್ನು ಜನಿಸಿದಂದಿನಿಂದ ಹೇಗೆ ಅಕ್ಕರೆಯಿಂದ ಸಾಕಿ ಬಾಲ್ಯದಿಂದ ಅವರ ಭವಿಷ್ಯ ರೂಪಿಸುವವರೆಗೂ ಜತನದಿಂದ ಕಾಪಾಡಿಕೊಂಡು ಬರುತ್ತೇವೆಯೆಂದರೆ… ನಮ್ಮ ಮಕ್ಕಳು ಶಾಶ್ವತವಾಗಿ ನಮ್ಮಲ್ಲೇ ಇದ್ದು ಅದೇ ರೀತಿಯ ಗಟ್ಟಿ ಬಾಂಧವ್ಯವನ್ನು ಕೊನೇ ಉಸಿರಿನತನಕ ಉಳಿಸಿಕೊಂಡು ಮುಂದುವರೆಸಿಕೊಂಡು ಬರುತ್ತಾರೆಂಬ ಅಮಾಯಕತನದ ಆಸೆಯಿಂದ; ಬಲವಾದ ನಂಬಿಕೆಯಿಂದ ಹಾಗೂ ಅದಮ್ಯ ಭರವಸೆಯಿಂದ ಇಲ್ಲವೇ ಅಲುಗಾಡದ ಧೃಡ ಸಂಕಲ್ಪದಿಂದ !

ಈ ಅಟ್ಯಾಚ್ ಮೆಂಟ್ ಯಾವ ಹಂತದಲ್ಲೂ ಡಿಟ್ಯಾಚ್ ಮೆಂಟ್ ಆಗಲಾರದು ಎಂಬ ಸಹಜತೆಯ ಅಮಾಯಕತೆಯಿಂದ ಎಲ್ಲರ‌ ಬದುಕಿನ ಬಂಡಿಗಳೂ ಸರಾಗವಾಗಿ ಮುಂದುವರೆ ಯುತ್ತಲೇ ಇವೆ. ಈ ಬಂಧನ ಕೇವಲ ತಂದೆ ತಾಯಿ- ಮಕ್ಕಳ ಬಾಂಧವ್ಯಕ್ಕೆ ಮಾತ್ರ ಅಲ್ಲ, ಗಂಡ- ಹೆಂಡತಿ, ಪ್ರೇಮಿಗಳ ವಿಷಯದಲ್ಲೂ ಅಷ್ಟೇ ಪ್ರಸ್ತುತ. ( ಸಂಬಂಧಗಳು ಬಿಡಿ ! ಪ್ರತೀ ವ್ಯಕ್ತಿಯೂ ಈ ನೆಲದ ಮೇಲೆ ತಾನು ಪರ್ಮನೆಂಟ್ ಅಲ್ಲ ಎಂಬ ಸತ್ಯ ಗೊತ್ತಿದ್ದರೂ ಏನೆಲ್ಲಾ ಆಟಗಳನ್ನು ಆಡುತ್ತಾನೆಂಬುದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.)

ಫೋಟೋ ಕೃಪೆ : google

ಹೀಗಿರುವ ನಮ್ಮ ಸಂಬಂಧಗಳಲ್ಲಿ ಯಾರಾದರೊಬ್ಬರ ಅಗಲಿಕೆಯೆನ್ನುವುದು ಯಾವ ರೂಪದಲ್ಲಾದರೂ ಅನಿವಾರ್ಯವಾದಾಗ‌ ಅಥವಾ ಅವರ ಪ್ರೀತಿಯ ಪ್ರಮಾಣದಲ್ಲಿ ಕೊಂಚ ಏರುಪೇರಾಗಿದೆ ಅಂತ ತಿಳಿದಾಗ ಬೇರ್ಪಡೆ ಯಾದವರಿಗೆ ಇದು ಸಿಡಿಲೆರಗಿದಂತಾಗಿ ದಿಕ್ಕೇ ತೋಚದಂತಾಗುತ್ತದೆ. ಇದಕ್ಕೆ‌ ಬಹುಮುಖ್ಯ ಕಾರಣವೆಂದರೆ ಈ‌ ಅನಿವಾರ್ಯದ ಅಗಲಿಕೆಗೆ ಹಾಗೂ ಅದರಿಂದ ಉಂಟಾಗಬಹುದಾದ ಪರಿಣಾಮಗಳ ಅಂದಾಜಿಗೆ ಸ್ಪಂದಿಸಲು ನಮ್ಮ‌‌ ಬದುಕಿನ‌ ಭಾವನೆಗಳಿಗಾಗಿ, ನಿರೀಕ್ಷಿತ ದುಃಖದ ವೇದನೆಗಳಿಗಾಗಿ ನಾವು ಈ ಮೊದಲೇ ಮಾನಸಿಕ ವಾಗಿ ಸಿದ್ದತೆಯನ್ನು ಮಾಡಿಟ್ಟುಕೊಳ್ಳದೇ ಇರುವುದು !

ಅಂದರೆ ಕೇವಲ ಇವರೊಂದಿಗಿನ ಅಟ್ಯಾಚ್ ಮೆಂಟ್ ಮಾತ್ರವೇ ಅನಿವಾರ್ಯ ಎಂಬಂತೆ ಜೀವನ‌ ಸವೆಸುತ್ತಾ ಬಂದಿರುವುದು. ಇನ್ನೂ ಸರಳವಾಗಿ ಹೇಳುವುದಾದರೆ ನಮ್ಮ ಬದುಕಿನ ಭವಿಷ್ಯದಲ್ಲಿ ಬರಲಿರುವ ಇಂತಹಾ ಅಗಲಿಕೆಯ ಆಘಾತಗಳನ್ನು ನಾವು ಮುಂಚೆಯೇ ನಿರೀಕ್ಷೆ ಮಾಡದೇ‌ ಅದಕ್ಕಾಗಿ ಬೇಕಾದ ಮಾನಸಿಕ ಸಿದ್ದತೆಗಳನ್ನು , ಭಾವನೆಗಳನ್ನು ನಿಯಂತ್ರಣ ದಲ್ಲಿಡಲು ಬೇಕಾದ ಸರಿಯಾದ ನಿಯಂತ್ರಕ ಟ್ಯೂನ್ ಗಳನ್ನು ಸಿದ್ದತೆ ಮಾಡಿಕೊಳ್ಳದೇ ಇರುವುದು.

ಹೀಗಾಗಿಯೇ …

ಮುದ್ದಿನಿಂದ ಸಾಕಿ ಸಲಹಿದ ಮಗಳು ಮದುವೆಯಾಗಿ ಗಂಡನ‌ ಮನೆಗೆ ಹೋದಾಗ ಅವಳಲ್ಲಿನ ಸಹಜ ಬದಲಾವಣೆ ಕಂಡು “ಇವಳಿಗೆ‌ ನಮ್ಮ‌ ಮೇಲಿದ್ದ‌ ಮೊದಲಿನ ಪ್ರೀತಿ ಗಂಡನ ಮನೆಗೆ ಹೋದಾಗ ಇಲ್ಲವಾಯಿತೇ… ” ಎಂಬ ಹೆತ್ತ ತಾಯಿಯ ಕಕ್ಕುಲತಿ ಕಳಚಿಕೊಂಡ ಕಳವಳ……..

” ತನ್ನನ್ನು ಮಾತ್ರವೇ ಅಮ್ಮ ಎನ್ನುತ್ತಿದ್ದ ಮಗಳು ತನ್ನೆದುರೇ ಅವಳ ಅತ್ತೆಯನ್ನು ಅಮ್ಮ ಎನ್ನುವ ಮೂಲಕ ಆ ಪ್ರೀತಿಯ ಸೆಲೆ ತನ್ನಿಂದ ಸರಿದು ಹೋಗುತ್ತಿರುವ ತಲ್ಲಣ……..

” ತನ್ನ ಮಗ ಮದುವೆಗೆ ಮೊದಲು ತನ್ನ ಮೇಲೆ ತೋರುತ್ತಿದ್ದ ಪ್ರೀತಿಯೆಲ್ಲಾ ಈಗ ಹೆಂಡತಿ ಕಡೆ ಡೈವರ್ಟ್ ಮಾಡಿ ತನ್ನನ್ನು ಅಸಡ್ಡೆ ಮಾಡುತ್ತಿದ್ದಾನೆ ಹಾಗೂ ಮಗನಲ್ಲಿನ ಈ ಬದಲಾವಣೆಗೆ ಸೊಸೆಯೇ ಕಾರಣ ಎಂದು ಶುರುವಾಗುವ ಅಮ್ಮನ ಮಾನಸಿಕ ಮೂಕ ವೇದನೆ……

” ವಯಸ್ಸಾದ ತಮ್ಮನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದೇ ನಿರ್ಲ್ಯಕ್ಷ ಮಾಡುತ್ತಿದ್ದಾರೆಂಬ ತಂದೆ ತಾಯಂದಿರ ನೋವು…

” ಇಷ್ಟು ಮಂದಿ‌ ಬಂಧು ಬಳಗವಿದ್ದರೂ ಇಡೀ ಕುಟುಂಬದವರೊಂದಿಗೆ ಎಲ್ಲರನ್ನೂ ಸಲಹಿದ ತಮಗೆ ಕಡೆಗಾಲದಲ್ಲಿ ಎಲ್ಲರೂ ಕೈ ಬಿಟ್ಟರು ಎಂಬ ಅನ್ ಸೆಕ್ಯೂರ್ಡ್ ಹತಾಶೆ…!

” ತನ್ನ ಗಂಡನ ಪ್ರೀತಿ ಹಾಗೂ ಸಂಪಾದನೆ ತನ್ನ ಹಾಗೂ ತನ್ನ‌ ಮಕ್ಕಳ ಮೇಲೆಯೇ ಇರಬೇಕೇ ಹೊರತು ಅದು ಮತ್ತಾರಿಗಾದರೂ ಹರಿದು ಹೋದಲ್ಲಿ ಹೆಂಡತಿಯಾದವಳ ಹೃದಯಾಗ್ನಿಯಲ್ಲಿ ಸ್ಫೋಟ ಗೊಳ್ಳುವ ಜ್ವಾಲಾಮುಖಿ……..!

ಇತ್ಯಾದಿ ಸಂಸಾರದ ಸಂಕೀರ್ಣ ಸೀನ್ ಗಳು‌ ಬಹುತೇಕರ ನಿತ್ಯ ಬದುಕಲ್ಲಿ ಉಧ್ಭವಿಸುತ್ತಲೇ ಹೋಗುತ್ತಲಿವೆ. ಹಾಗಾದರೆ ಈ ಸಹಜ ಅಥವಾ ನಕಾರಾತ್ಮಕ ಭಾವಗಳಿಗೆ ಮೂಲ ಕಾರಣಗಳ ಬೇರನ್ನು ಹುಡುಕುತ್ತಾ ಹೋದಲ್ಲಿ ನನ್ನ ದೃಷ್ಟಿಗೆ ಮೊದಲು ಕಾಣುವುದೇ … ಸಂಬಂಧಗಳ ಅಗಲಿಕೆಯ ಅನಿವಾರ್ಯವನ್ನು ನೈಜತೆಯಿಂದ ಅರಿಯದೇ, ಅದರ ಸಹಜ ವಾಸ್ತವವನ್ನು ಸ್ವೀಕರಿಸದೇ , ಭಾವನಾತ್ಮಕ ಬೆಸುಗೆಗಳ ರಿಯಾಲಿಟಿಯಂತೆ ತೋರುವ ಭ್ರಮಾಲೋಕದಲ್ಲೇ ಬದುಕು ಸವೆಸುತ್ತಾ ಬಂದಿರುವುದು….!

ನಾವು ಎಷ್ಟೇ ಪ್ರೀತಿಸುವ ವ್ಯಕ್ತಿಯಾಗಲೀ ವಸ್ತುವಾಗಲೀ ಒಂದಲ್ಲಾ ಒಂದು ಹಂತದಲ್ಲಿ ನಮ್ಮಿಂದ ಅನಿವಾರ್ಯವಾಗಿ ದೂರವಾಗಲೇಬೇಕು ಎಂಬ ಸರಳ ಸತ್ಯವನ್ನು ನಾವು ಕಷ್ಟವಾದರೂ ಇಷ್ಟಪಟ್ಟು ಅರಗಿಸಿಕೊಂಡು ಮುನ್ನಡೆಯುವ ಕಲೆ ಕರಗತವಾದಲ್ಲಿ ಯಾವುದೇ ಅಗಲಿಕೆ ಮನಸಿಗೆ ಘಾಸಿಯಾಗುವಂತಹ ನಿರಾಶೆಯನ್ನುಂಟು ಮಾಡದು. ಅಗಲಿಕೆ ಎಂದ ಮಾತ್ರಕ್ಕೇ ಪ್ರೀತಿ ಪಾತ್ರರ ಪ್ರೀತಿ,ಪ್ರೇಮ ಹಾಗೂ ವಾತ್ಸಲ್ಯಗಳಿಂದ ಶಾಶ್ವತವಾಗಿ ದೂರವಾಗುವುದು ಎಂದರ್ಥವಲ್ಲ. ಬದಲಿಗೆ ಅಗಲಿಕೆಯ ಆ ವೇದನೆಯಲ್ಲೂ ಅದೇ ಪ್ರೀತಿಯನ್ನು ಹೃದಯದಲ್ಲಿ ಉಳಿಸಿ ಕೊಂಡು ಬದುಕನ್ನು ಬಂದಹಾಗೆ ಸ್ವೀಕರಿಸಲು ಮಾನಸಿಕವಾಗಿ ಸಿದ್ದವಾಗುವುದು.

ಫೋಟೋ ಕೃಪೆ : google

ಉದಾಹರಣೆಗೆ ಮಕ್ಕಳನ್ನು‌ ಮುದ್ದಾಗಿ ಸಾಕಿ‌ ಬೆಳೆಸಿ ವಿದ್ಯಾಭ್ಯಾಸ ಕೊಡಿಸಿ ನಂತರ ಮದುವೆ ಮಾಡಿಕೊಡುವುದು ತಂದೆ ತಾಯಿಗಳದ್ದು ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ಆನಂತರ ಆ ಮಕ್ಕಳಿಂದ ಯಾವ ಕಾರಣಕ್ಕೂ ಏನನ್ನೂ‌ ನಿರೀಕ್ಷೆ ಮಾಡದೆ ಕೇವಲ ಅವರ ಒಳಿತನ್ನು‌ ಬಯಸಿ ತಮ್ಮ ಕಾಲ‌ ಮೇಲೆ‌ ತಾವು‌ ನಿಲ್ಲುವ ನಿಲುವು ತಾಳುವುದು ತಂದೆ ತಾಯಂದಿರ ಜಾಣತನ. ಮುಂದಾಗ ಬಹುದಾದ ಅನಿರೀಕ್ಷಿತ ತೊಂದರೆಗಳನ್ನು ಎದುರಿಸಲು ಬೇಕಾದ ಸಿದ್ದತೆಗಳನ್ನು ಆರಂಭದಿಂದಲೇ ಮಾಡಿಕೊಳ್ಳುವುದು ಪ್ರಸ್ತುತ ಕಾಲಘಟ್ಟದಲ್ಲಿ ಅನಿವಾರ್ಯ.

ಇದು ಒಂದು ರೀತಿಯಲ್ಲಿ ” ಅಟ್ಯಾಚ್ ಮೆಂಟ್ ಉಳಿಸಿಕೊಂಡೇ ಡಿಟ್ಯಾಚ್ ಮೆಂಟ್ ಆಗುವ ವಿಲಕ್ಷಣ ಪ್ರಕ್ರಿಯೆ” . ಅಲ್ಲದೇ , ಮಕ್ಕಳು ಎಲ್ಲಾ ಹಂತದಲ್ಲೂ ನಮ್ಮ ನಿರೀಕ್ಷೆಗೆ ತಕ್ಕಂತೆಯೇ ನಡೆಯಬೇಕು ಎನ್ನುವ ಧೋರಣೆ ಸಹಾ ಮುಂದೆ ವೇದನೆಗೆ ಕಾರಣವಾಗಬಹುದು. ಹೀಗಾಗಿ ಅವರವರ ಸಂಸಾರ , ಅವರವರ ಬದುಕು, ಅವರವರ ಇಷ್ಟಾನುಸಾರವೇ‌ ಅವರನ್ನು ಬದುಕಲು‌ ಬಿಟ್ಟಲ್ಲಿ ಹಾಗೂ ವಯಸ್ಸಾದ ಕಾಲದಲ್ಲಿ ಯಾರ ಹಂಗೂ ಇಲ್ಲದೇ ತಮಗೇ ಅಂತ ಒಂದು‌ ಸೆಕ್ಯೂರ್ಡ್ ಬದುಕನ್ನು ರೂಪಿಸಿಕೊಳ್ಳುವ ಮುಂಜಾಗ್ರತೆ ವಹಿಸಿದಲ್ಲಿ ಯಾರಿಗೂ ಅಸಮಾಧಾನವಿರದೇನೋ !

ಮರೆಯುವ ಮುನ್ನ : 

ಈ ಭೂಮಿಯಲ್ಲಿ ಹುಟ್ಟಿದ ಮೇಲೆ ಯಾರೂ ಯಾರಿಗೂ ಶಾಶ್ವತವೂ ಅಲ್ಲ ಅನಿವಾರ್ಯವೂ ಅಲ್ಲ ಮತ್ತು ಅವಲಂಬಿತರೂ ಅಲ್ಲ. ಜೀವನದ ಆಯಾ ಕಾಲಘಟ್ಟದಲ್ಲಿ ಸೃಷ್ಟಿಯಾದ ಪಾತ್ರಗಳನ್ನು ಮಾತ್ರ ನಿರ್ವಹಿಸಬೇಕಾಗುತ್ತದೆ. ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳ ಪ್ರೀತಿಯನ್ನು ಅನುಭವಿಸುತ್ತಲೇ , ಆ ಪ್ರೀತಿ ಮುಂದೆ ಕಡಿಮೆಯಾದಾಗ ಅಥವಾ ಮರೆಯಾದಾಗ ಆಗುವ ವೇದನೆಯನ್ನು ಅನುಭವಿಸಲು ಮಾನಸಿಕವಾಗಿ ಸಜ್ಜಾಗುವುದರಲ್ಲಿ ಬದುಕಿನ ಅರ್ಥವಿದೆ. ಇದನ್ನು ಅರಿತಲ್ಲಿ ಯಾರಲ್ಲೂ ಅಸಮಾಧಾನದ ಹೊಗೆ ಎಂದೂ ಏಳದು. ಮಕ್ಕಳು , ಬಂಧುಗಳು, ಸಂಬಂಧಿಕರು ದೂರ ಇದ್ದ ಮಾತ್ರಕ್ಕೇ ಪ್ರೀತಿಯೇ ದೂರವಾಯಿತೆಂದು ತಿಳಿಯುವುದು ಸರಿಯಲ್ಲ. ಆ ಅಟ್ಯಾಚ್ ಮೆಂಟ್ ಮನಸ್ಥಿತಿಯಿಂದ ಹೊರಬಂದು ಸಂಬಂಧಗಳನ್ನು ಅಷ್ಟೇ ಆಪ್ಯಾಯತೆಯಿಂದ ಉಳಿಸಿಕೊಳ್ಳುವ ಪ್ರಾಕ್ಟಿಕಲ್ ಕಮಿಟ್ ಮೆಂಟು ಬೆಳೆಸಿಕೊಳ್ಳುವುದು ಇಂದಿನ ಅನಿವಾರ್ಯ.

ಪ್ರೀತಿ ಪಾತ್ರರ ಅಗಲಿಕೆಯಲ್ಲೂ ಅವರ ಮೇಲಿನ ಅದೇ ಪರಿಶುದ್ಧವಾದ ಪ್ರೀತಿಯನ್ನು ಉಳಿಸಿಕೊಳ್ಳುವ ಮನಸ್ಥಿತಿಯನ್ನು ಸಂಪಾದಿಸುವತ್ತ ಚಿತ್ತ ಹರಿಸೋದು ಬದುಕಿನ ಅನೇಕ ವೇದನೆಗಳಿಗೆ ಸ್ವಲ್ಪಮಟ್ಟಿಗಾದರೂ ಪರಿಹಾರವಾದೀತು…!

ಲಾಸ್ಟ್ ಪಂಚ್ :

” ಅಂಟಿಕೊಳ್ಳುವುದರಲ್ಲೂ ಇರುವ ನೋವನ್ನು ಮರೆತು, ಅಗಲಿಕೆಯಲ್ಲೂ ಇರುವ ಪ್ರೀತಿಯನ್ನು ಉಳಿಸಿಕೊಳ್ಳುವುದೇ ಬದುಕಿನ ಬಹುದೊಡ್ಡ ಒಲಿಂಪಿಕ್ಸ್ “!

ನಿಮ್ಮ ಹೃದಯದ ಕಣ್ಣುಗಳಿಂದ ಮಾತ್ರ ಇದನ್ನು ಪ್ರಾಕ್ಟೀಸ್ ಮಾಡಲು ಸಾಧ್ಯ. !


  • ಹಿರಿಯೂರು ಪ್ರಕಾಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading