‘ಚಪ್ಪಲಿ’ ಕತೆ – ಕೇಶವ ರೆಡ್ಡಿ ಹಂದ್ರಾಳ



ಇಂದಿನಂತೆ ರಿಬಾಕ್, ಬಾಟಾ ಬ್ರಾಂಡ್ ಕಾಲವಲ್ಲ, ಹವಾಯಿ ಚಪ್ಪಲಿ ಹಾಕಿದರೂ ಅಲ್ಲೊಬ್ಬ-ಇಲ್ಲೊಬ್ಬ ಅಷ್ಟೇ. ಬರಿಗಾಲಿನಲ್ಲಿ ನಡೆದವರೇ ಹೆಚ್ಚು, ಮುಳ್ಳು ಹೊಕ್ಕು ಆಗುತ್ತಿದ್ದ ಆಣಿ, ಅದನ್ನು ತಗೆಯುತ್ತಿದ್ದ ಹರಸಾಹಸವ ತನ್ನ ಅನುಭವದ ಬುತ್ತಿಯನ್ನು ಖ್ಯಾತ ಕತೆಗಾರ ಕೇಶವ ರೆಡ್ಡಿ ಹಂದ್ರಾಳ ಅವರು ಓದುಗರ ಮುಂದೆ ಬಿಚ್ಚಿಟ್ಟಿದ್ದಾರೆ.ಮುಂದೆ ಓದಿ…

ನಾನು ಕಾಲಿಗೆ ಚಪ್ಪಲಿ ಹಾಕಿದ್ದೇ ಬೆಂಗಳೂರಿಗೆ ಹೈಸ್ಕೂಲು ಓದಲು ಬಂದ ಮೇಲೆ. ಆಗ ಊರಿನಲ್ಲೆಲ್ಲಾ ಹುಡುಕಿದರೂ ಚಪ್ಪಲಿ ಹಾಕುತ್ತಿದ್ದವರು ಅಮ್ಮಮ್ಮ ಎಂದರೆ ಒಂದಿಪ್ಪತ್ತು ಜನ ಸಿಗುತ್ತಿದ್ದರೇನೋ. ಸುಮಾರಾದ ಕುಳಗಳು ಚಪ್ಪಲಿಗಳನ್ನು ಮೆಟ್ಟಿಕೊಂಡು ಓಡಾಡುತ್ತಿದ್ದರು. ಹೆಂಗಸರು, ಮಕ್ಕಳಂತೂ ಚಪ್ಪಲಿಯ ಸಹವಾಸಕ್ಕೇ ಹೋಗುತ್ತಿರಲಿಲ್ಲ. ಹೊಲ ಗದ್ದೆ ತೋಟ ರಸ್ತೆಗಳಲ್ಲಿ ಚಪ್ಪಲಿಗಳಿಲ್ಲದೆ ಸಲೀಸಾಗಿ ಓಡಾಡುತ್ತಿದ್ದೆವು. ನಮ್ಮಪ್ಪನ ಕಾಲಿನಲ್ಲಿ ಆಣಿ ಇದ್ದುದ್ದರಿಂದ ಅವರೂ ಕೂಡಾ ಚಪ್ಪಲಿ ಮೆಟ್ಟುತ್ತಿರಲಿಲ್ಲ. ಬೇಲಿ ಹಾಕುವಾಗ, ಮುಳ್ಳುಗಿಡ ಇದ್ದ ಕಡೆ ಓಡಾಡುವಾಗ ಯಾರು ಯಾರದೋ ಚಪ್ಪಲಿಗಳನ್ನು ಹಾಕಿಕೊಂಡು ಹೋಗಿ ನಂತರ ತಂದು ಬಿಡುತ್ತಿದ್ದರು. ಹಾಗಾಗಿ ಮುಳ್ಳುಗಳನ್ನು ತುಳಿಯುವುದು ಸಾಮಾನ್ಯವಾಗಿತ್ತು. ತುಳಿದ ತಕ್ಷಣ ಮುಳ್ಳುಗಳನ್ನು ತುಳಿದವರೇ ಮುಳ್ಳಿನಿಂದಲೋ ಅಥವಾ ಪಿನ್ನದಿಂದಲೋ ಪಾದವನ್ನು ಮೆಲ್ಲನೆ ಕೆದಕಿ ತೆಗೆದು ಹಾಕಿಕೊಳ್ಳುತ್ತಿದ್ದರು. ಮುಳ್ಳೇನಾದರೂ ಪಾದದ ಆಳಕ್ಕೆ ಇಳಿದಿದ್ದರೆ, ನೋವಿನಿಂದ ‘ ಅಮ್ಮಮ್ಮ’ ‘ ಅಯ್ಯಯ್ಯಪ್ಪ ‘ ಎನ್ನುತ್ತಾ ನಂಜಕ್ಕಜ್ಜಿಯ ಹಟ್ಟಿ ಮುಂದೆಯೋ ಇಲ್ಲ ಕಂಬಕ್ಕನ ಹಟ್ಟಿ ಮುಂದೆಯೋ ಕೈಗಳನ್ನು ನೆಲಕ್ಕೂರಿಕೊಂಡು ಕುಳಿತುಬಿಡುತ್ತಿದ್ದರು. ಏಕೆಂದರೆ ನಮ್ಮ ಬಾಲ್ಯದ ಟೈಮಿನಲ್ಲಿ ಅವರಿಬ್ಬರೂ ಮುಳ್ಳು ತೆಗೆಯುವುದರಲ್ಲಿ ಸಖತ್ ಫೇಮಸ್ ಆಗಿದ್ದರು. ಎಂಥ ಘನವಾದ ಮುಳ್ಳು ತುಳಿದಿದ್ದರು, ಮುಳ್ಳು ಪಾದದ ಪಾತಾಳ ಲೋಕ ಸೇರಿದ್ದರೂ ಒಂದಿಷ್ಟೂ ನೋವಿಲ್ಲದೆ ಪಿನ್ನ ಮತ್ತು ಚಿಮುಟದ ಸಹಾಯದಿಂದ ತೆಗೆದುಬಿಡುತ್ತಿದ್ದರು.

ಫೋಟೋ ಕೃಪೆ : The Indian express

ಹೆಂಗಸರು ಮತ್ತು ಚಿಕ್ಕಮಕ್ಕಳು #ಮುಳ್ಳು ತುಳಿದರೆ ನಂಜಕ್ಕಜ್ಜಿಯ ಹತ್ತಿರ ಹೋಗುತ್ತಿದ್ದರು. ನಂಜಕ್ಕಜ್ಜಿ ಅಡಿಕೆಲೆ ಮತ್ತು ಕಡ್ಡಿಪುಡಿಯ ರಸವನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ ” ಯಾವ್ ಘನಂದಾರಿ ಬೇಲಿ ಹಾರೋಕೋಗಿದ್ರಪ್ಪ ” ಎಂದು ನಗುತ್ತಾ ಮುಳ್ಳು ತುಳಿದ ಕಾಲಿನ ಪಾದವನ್ನು ತನ್ನ ಎಡ ಮೊಣಕಾಲಿನ ಮೇಲಿಟ್ಟುಕೊಂಡು ಮುಳ್ಳು ತೆಗೆಯುವ ಕಾರ್ಯದಲ್ಲಿ ತೊಡಗುತ್ತಿದ್ದಳು. ಕೇರಿಯಲ್ಲಿ ಇದ್ದವರೆಲ್ಲ ಬಂದು ಮುಸುರಿಕೊಂಡು ನಂಜಕ್ಕಜ್ಜಿಯ ಮುಳ್ಳು ತೆಗೆಯುವ ಕಾರ್ಯ ವೈಖರಿಯನ್ನು ಕಣ್ಣು ತುಂಬಿಸಿಕೊಳ್ಳುತ್ತಿದ್ದರು. ಅಂಥ ಟೈಮಿನಲ್ಲಿ ಒಮ್ಮೊಮ್ಮೆ ಕೈಗಳನ್ನು ಹಿಂದೆ ನೆಲದ ಮೇಲೆ ಇಟ್ಟುಕೊಂಡು ಮುಳ್ಳು ತೆಗೆಸಿಕೊಳ್ಳುತ್ತಿದ್ದವರ ನಿಕ್ಕರ್ರುಗಳ ತೋಳುಗಳು ಮೇಲಕ್ಕೆ ಸರಿದು ಗಳಗಂಟೆ ಹೊರಕ್ಕೆ ವಾಲಿಕೊಳ್ಳುತ್ತಿತ್ತು. ನಂಜಕ್ಕಜ್ಜಿ ನಗುತ್ತಾ ” ಪರ್ವಾಗಿಲ್ಲ ಹಿಟ್ಟಿನ ಕೋಲು ಘನ್ವಾಗಿ ಒಳ್ಳೆ ಗಡಾರಿ ಇದ್ದಂಗೈತೆ. ದೊಡ್ಡೋನಾದ್ಮೇಲೆ ಹಿಟ್ಟು ಚನ್ನಾಗಿ ತೊಳಿಸ್ತಿಯೇಳು ” ಎಂದಾಗ ಮುಳ್ಳು ತೆಗೆಯುವುದನ್ನು ನೋಡುತ್ತಿದ್ದವರೆಲ್ಲ ಪಾದದ ಕಡೆ ನೋಡುವ ಬದಲು ಅಗಲಿಕೊಂಡ ನಿಕ್ಕರ್ ತೋಳುಗಳಲ್ಲಿ ವಾಲಿಕೊಂಡ ಗಳಗಂಟೆಯ ಕಡೆ ದೃಷ್ಟಿ ನೆಡುತ್ತಿದ್ದರು. ಮುಳ್ಳು ತೆಗೆಸಿಕೊಳ್ಳುತ್ತಿದ್ದವರು ಎರಡೂ ಕೈಗಳನ್ನು ಹಿಂದೆ ನೆಲಕ್ಕೆ ಊರಿಕೊಂಡಿರುತ್ತಿದ್ದರಿಂದ ” ಲಮ್ಡಿಕೆ ನೋಡಿದ್ರೆ ನೋಡ್ಕಳ್ಳೇಳು ನನ್ ಗಂಟೇನೋಗ್ತೈತೆ” ಎಂದು ಆಕಾಶದ ಕಡೆ ನೋಡಿಕೊಂಡು ಮುಳ್ಳು ತೆಗೆಯುವ ನೋವನ್ನು ಕಣ್ಣು ಮುಚ್ಚಿಕೊಂಡು ಅನುಭವಿಸುತ್ತಿದ್ದರು. ನಂಜಕ್ಕಜ್ಜಿಯಂತೂ ” ಮುಳ್ಳು ತುಳಿದ್ರೇನು ಪ್ರಾಣ ಹೋಗಲ್ಲ ತಗಳ್ರಿ. ಯಾವಾಗ್ಲೂ ಪಾದ ಮಣ್ಣಿನ ಮೇಲೆ ಊರ್ತಿರ್ಬೇಕು. ಮಣ್ಣಲ್ಲಿ ಎಂಥ ಶಕ್ತಿ ಐತೆ ಗೊತ್ತೇನು. ಅಂಥ ಶಕ್ತೀನೆಲ್ಲ ಭೂಮ್ತಾಯಿ ಪಾದದ ಮೂಲ್ಕ ನಮ್ಮ ಶರೀರಕ್ಕೆ ರವಾನೆ ಮಾಡ್ತಾಳೆ. ಇಲ್ಲದಿದ್ರ ನಮ್ಮ ಹಳ್ಳಿಗ್ಳಾಗಿನ ಗಂಡಸ್ರು ಪುತಪುತ ಅಂಥ ಎರಡೊರ್ಷಕ್ಕೊಂದ್ ಮಗುನ ಇನ್ನೆಂಗೆ ಉದ್ರುಸ್ತಾರೆ ಅಂಥ ತಿಳ್ಕಂಡ್ರಿ. ಆ ಶಕ್ತಿ ಮರ್ಮ ಮಣ್ಣಿಂದೆ ತಿಳ್ಕಳ್ರಿ ” ಎಂದು ವಿಜ್ಞಾನಿಯಂತೆ ಪಟಪಟ ಮಾತುದುರಿಸುತ್ತಿದ್ದಳು.

ಇನ್ನು ಗಂಡಸರು ಮುಳ್ಳು ತುಳಿದರೆ ಸಿಕ್ಕಮ್ಮಜ್ಜಿಯ ಸೊಸೆ ಕಂಬಕ್ಕನ ಹತ್ತಿರ ಹೋಗುತ್ತಿದ್ದರು. ಕಂಬಕ್ಕ ಒಳ್ಳೆ ಕಂಬದಂತೆ ಉದ್ದಕ್ಕೆ ಇದ್ದರೂ ಸಣ್ಣಗೇನೂ ಇರಲಿಲ್ಲ. ಮದುವೆಯಾಗಿ ಸುಮಾರು ವರ್ಷಗಾದರೂ ಕಂಬಕ್ಕನಿಗೆ ಮಕ್ಕಳಾಗಿರಲಿಲ್ಲ. ಅವಮ್ಮ ಬೇಸಾಯದ ಕೆಲಸಗಳಿಗೆ ಹೆಚ್ಚಾಗಿ ಒಗ್ಗಿಕೊಂಡಿರಲಿಲ್ಲ. ಗಂಡ ಕೋಟೆಕಲ್ಲಪ್ಪ ನಾಯಿಯಂತೆ ಕವಕವ ಅನ್ನುತ್ತಿದ್ದರೂ ಕಂಬಕ್ಕ ಕೇರ್ ಮಾಡುತ್ತಿರಲಿಲ್ಲ. ಸ್ಕೂಲಿಗೆ ಹೋಗಿ ಬರುತ್ತಿದ್ದ ಟೈಮುಗಳಲ್ಲಿ ಅವರಿಬ್ಬರು ಹಟ್ಟಿ ಮುಂದೆ ನಿಂತುಕೊಂಡು ಕಿತ್ತಾಡುತ್ತಿದ್ದುದನ್ನು ನಿಂತು ನೋಡುತ್ತಿದ್ದೆವು. ಆಗ ಕೋಟೆಕಲ್ಲಪ್ಪ ” ಹೋಗ್ರಿ…ಇಲ್ಲೇನು ಕೋತಿ ಕುಣಿತವೆ ಅಂಬ್ತ ನಿಂತ್ಕಂಡು ನೋಡ್ತಿದ್ದಿರೇನು ” ಎಂದು ರೇಗುತ್ತಿದ್ದ. ಕೇರಿಯ ಹೆಂಗಸರು ” ಅಯ್ಯಯ್ಯಮ್ಮ ಅವುಳ್ ಪಿರ್ರೆ ನೋಡ್ರಿ ಮಧುಗಿರಿ ಬೆಟ್ಟದ ಗಾತ್ರ ಅವ್ವೆ, ಅದೆಂಗೊತ್ಕಂಡ್ ತಿರ್ಗ್ತಾಳೋನಮ್ಮ ” ” ಆ ದೊಣ್ಣೆ ಪಿರ್ರೊಳ್ಗೆ ಇನ್ನೇನ್ ಮಕ್ಳಾದಾವು ” ಮುಂತಾಗಿ ಮಾತನಾಡಿಕೊಳ್ಳುತ್ತಿದ್ದರು. ಕಂಬಕ್ಕ ಮುಳ್ಳು ತೆಗೆಯುವುದರಲ್ಲಿ ನಂಜಕ್ಕಜ್ಜಿಗಿಂತಲೂ ಎಕ್ಸ್ಪರ್ಟ್ ಆಗಿದ್ದಳು. ” ಯಾಕಣ್ಣಿಯ ಅಲ್ಲೆ ಮನೆ ಹತ್ರಾನೆ ನಂಜಕ್ಕಜ್ಜಿ ಇದ್ಲು, ಅಲ್ಲೇ ಮುಳ್ಳು ತೆಗೆಸ್ಕಂಬೋದ್ ಬಿಟ್ಟು ಇಲ್ಲಿಗಂಟ ಕುಂಟ್ಕಂಡ್ ಬರ್ಬೇಕ ” ಎಂದು ನಂಜಕ್ಕಜ್ಜಿಯ ಕೇರಿಯಿಂದ ಯಾರಾದರೂ ಗಂಡಸರು ಮುಳ್ಳು ತೆಗೆಸಿಕೊಳ್ಳಲು ಬಂದರೆ ಎದುರು ಮನೆಯ ಓಬಮ್ಮ ಮಾತಿಗಿಳಿಯುತ್ತಿದ್ದಳು. ಆಗ ಮುಳ್ಳು ತೆಗೆಸಿಕೊಳ್ಳಲು ಬಂದ ಗಂಡಸರು ” ಓಬಮ್ಮ ಆಗ್ಲೆ ನಂಜಕ್ಕಜ್ಜಿ ಕೈಗ್ಳು ಅಲ್ಲಾಡ್ತಾವಮ್ಮಯ್ಯ ” ಎಂದು ಹೆಗಲ ಮೇಲಿನ ಟವಲ್ ತೆಗೆದು ತಿಕದಡಿಕ್ಕಾಕಿಕೊಂಡು ಕಂಬಕ್ಕನ ಹಟ್ಟಿಮುಂದೆ ಕೈಯ್ಯೂರಿ ಕುಳಿತುಕೊಳ್ಳುತ್ತಿದ್ದರು.



ಕಂಬಕ್ಕನದು ದೊಡ್ಡ ಪರ್ಸನಾಲಿಟಿ ಆಗಿದ್ದರಿಂದ ಆವಮ್ಮನ ಬುಡ್ಡೊಕ್ಳು ದೊಡ್ಡದಾಗಿತ್ತು. ಊರಿನ ಹೆಂಗಸರು ” ಕಂಬಕ್ಕನ ಬುಡ್ಡೊಕ್ಳು ನೋಡಿದ್ದೀರಾ ಊರಗ್ಲ ಐತೆ” ” ಮಕ್ಳೆತ್ತಿದ್ರೆ ತಾನೆ ಬುಡ್ಡೊಕ್ಳು ಮಡ್ಚ್ಕಂಡಿರೋದು. ಮಕ್ಳಾಗ್ದಿದ್ದೋರ್ ಬುಡ್ಡೊಕ್ಳುಗಳೆಲ್ಲ ಅರಳ್ಕಂಡೆ ಕುಂತಿರ್ತಾವೆ. ಆಯಮ್ಮುಂದೇನು ಪೆಷಲ್ಲು ” ಎಂದು ಮಾತನಾಡಿಕೊಳ್ಳುತ್ತಿದ್ದದ್ದು ಸ್ಕೂಲಿಗೆ ಹೋಗುತ್ತಿದ್ದ ನಮ್ಮ ಕಿವಿಗಳಿಗೂ ಬಿದ್ದು ನಾವೂ ಅಂಗಿ ಬಟ್ಟೆಗಳನ್ನು ಮೇಲಕ್ಕೆತ್ತಿಕೊಂಡು ನಮ್ಮ ಬುಡ್ಡೊಕ್ಳುಗಳನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿದ್ದೆವು. ಊರಿನಲ್ಲಿ ವಯಸ್ಸಿಗೆ ಬಂದ ಹುಡುಗರಿಂದಿಡಿದು ವಯಸ್ಸಾದ ಮುದುಕರಾದಿಯಾಗಿ ಮುಳ್ಳು ತೆಗೆಸಿಕೊಳ್ಳುವ ನೆಪದಲ್ಲಿ ಕ್ಷಣಹೊತ್ತಾದರೂ ಕಂಬಕ್ಕನ ಬುಡ್ಡೊಕ್ಳನ್ನು ಕಣ್ತುಂಬಿಕೊಂಡು ಹೋಗುತ್ತಿದ್ದರು. ಒಂದು ಸಾರಿ ದೊಡ್ಡಸಳ್ಳಿಯ ಚೇರ್ಮನ್ ಪಾಪೇಗೌಡ ಕೂಡ ಮುಳ್ಳು ತುಳಿದು ದೊಡ್ಡಸಳ್ಳಿಯಿಂದ ಗಾಡಿ ಕಟ್ಟಿಸಿಕೊಂಡು ಬಂದು ಕಂಬಕ್ಕನ ಹತ್ತಿರ ತೆಗೆಸಿಕೊಂಡಿದ್ದರು. ತಳವಾರ ಓಬಮ್ಮನಂತೂ. ” ಏನಣ್ಣಯ್ಯ ಮುಳ್ ತೆಗಿಸ್ಕಂಬಾಕೆ ದೊಡ್ಡಸಳ್ಳಿಯಿಂದ ಇಲ್ಲಿಗಂಟ ಬರ್ಬೇಕಿತ್ತಾ ” ಎಂದು ನಗುತ್ತಾ ಕೇಳಿದ್ದಳಂತೆ. ಅದಕ್ಕೆ ಪಾಪೇಗೌಡ ” ಕಂಬಕ್ಕ ಬಲು ಸುಲುಕ್ನಾಗಿ ಮುಳ್ಳು ತೆಗಿತಾಳೆ ಅಂತ ಕಿವಿಗೆ ಬಿತ್ತಮ್ಮಯ್ಯ. ತೆಗಿಸ್ಕಂಡೋಗಾನ ಅಂತ ಬಂದೆ. ಯಂಗೂ ನಿಮ್ಮುನ್ನು ನೋಡ್ದಂಗಾಯ್ತು ಬಿಡು ಅತ್ತ ” ಎಂದು ಉತ್ತರಿಸಿದ್ದರು. ಸಾಕ್ಷಾತ್ ಚೇರ್ಮನರೇ ತನ್ನ ಹೆಂಡತಿಯ ಹತ್ತಿರ ಮುಳ್ಳು ತೆಗೆಸಿಕೊಳ್ಳಲು ಅಷ್ಟು ದೂರದಿಂದ ಬಂದಿದ್ದಾರೆಂದು ಖುಷಿಗೊಂಡ ಕೋಟೆಕಲ್ಲಪ್ಪ ತಾನೇ ಖುದ್ದಾಗಿ ಒಲೆ ಹಚ್ಚಿ ಕಾಫಿ ಮಾಡಿಕೊಟ್ಟಿದ್ದನಂತೆ ಕಳೆದ ಶುಕ್ರವಾರ ಕಿಡ್ನಿ ಸಮಸ್ಯೆಯಿಂದ ಆರೇಳು ತಿಂಗಳಿಂದ ನರಳುತ್ತಿದ್ದ ಅರವತ್ತು ವರ್ಷದ ನನ್ನ ತಂಗಿ ಅಂಜಿನಮ್ಮ ಮರಣ ಹೊಂದಿದ್ದರಿಂದ ಅವೊತ್ತು ಊರಿಗೆ ಬಂದವನು ಇಲ್ಲೇ ಇರಬೇಕಾಯಿತು. ಹವಾಯ್ ಚಪ್ಪಲಿ ಹಾಕಿಕೊಂಡು ತೋಟದಲ್ಲಿ ಓಡಾಡುತ್ತಿರುವಾಗ ಚಪ್ಪಲಿಯ ತಳವನ್ನು ತೂರಿಕೊಂಡು ಬಂದ ಮುಳ್ಳೊಂದು ಚುಚ್ಚಿಕೊಂಡು ಕಾಲಿಗೆ ಸ್ವಲ್ಪ ಹೊಕ್ಕಿತ್ತು. ಜೊತೆಗೆ ಊರಲ್ಲಿ ಓಡಾಡುತ್ತಿದ್ದರಿಂದ ಹಳೆಯ ಸಂಗತಿಗಳು ನೆನಪಿಗೆ ಬಂದಿದ್ದವು. ಈಗ ಕೋಟೆಕಲ್ಲಪ್ಪನ ವಂಶದವರು ಊರಲ್ಲಿ ಉಳಿದಿಲ್ಲ. ಅವರಿದ್ದ ಮನೆ ಪಾಳು ಬಿದ್ದಿದೆ. ಚಳಿಯ ವಾತಾವರಣದಲ್ಲಿ ನೆನಪುಗಳ ಬೆಚ್ಚನೆಯ ಕೌದಿಯಲ್ಲಿ ತೂರಿಕೊಳ್ಳುವುದು ಎಂಥಾ ಮಜಾ !


  • ಕೇಶವ ರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)

2.5 2 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW