ಹಿರಿಯ ಲೇಖಕಿ ಚಿತ್ರಲೇಖ ಅವರು ಹುಟ್ಟಿದ್ದು ಪೂನಾದಲ್ಲಿ. ಅವರ ಮಾತೃಭಾಷೆ ತಮಿಳು. ನಾಗಪುರ್ ನ ಪುಲ್ಗಾವ್ ನ ಮಿಲ್ಟ್ರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಹಾಗಿದ್ದಾಗ ಚಿತ್ರಲೇಖ ಅವರಿಗೆ ಕನ್ನಡದ ನಂಟು ಹೇಗೆ ಬೆಳೆಯಿತು ಮತ್ತು ಅವರು ಪುಸ್ತಕ ಬರೆಯಲು ಪ್ರೇರಣೆ ಸಿಕ್ಕಿದ್ದು ಎಲ್ಲಿ?. ತಮ್ಮ ಮನದ ಮಾತನ್ನು ಲೇಖಕಿ ವಸಂತ ಗಣೇಶ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ, ತಪ್ಪದೆ ಲೇಖಕರ ಪರಿಚಯ ಓದಿ.
- ನಿಮ್ಮ ಬಾಲ್ಯ ಹಾಗೂ ತಂದೆ-ತಾಯಿ, ವಿದ್ಯಾಭ್ಯಾಸದ ಬಗ್ಗೆ ಹೇಳಿ?
ನನ್ನ ತಂದೆ ಎ.ಆರ್.ಕೃಷ್ಣಸ್ವಾಮಿ ಅಯ್ಯಂಗಾರ್ ಅವರು ಮಿಲ್ಟ್ರಿಯಲ್ಲಿದ್ದವರು. ನಂತರದಲ್ಲಿ ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ನಲ್ಲಿ (K.E.B.) ಸೂಪರಿಂಟೆಂಡೆಂಟ್ ಅಗಿ ಕಾರ್ಯ ನಿರ್ವಹಿಸಿದರು. ತಾಯಿ ಜಾನಕಿ ಅಮ್ಮಾಳ್ ಗೃಹಿಣಿ. ತಾಯಿಯ ಮಾತೃಭಾಷೆ ತಮಿಳು. ಅವರಿಂದ ತಮಿಳು ಓದಲು ಬರೆಯಲು ಮಾತನಾಡಲು ಕಲಿತದ್ದು.
ಒಬ್ಬ ಅಣ್ಣ ಹಾಗೂ ಐದು ಜನ ಅಕ್ಕಂದಿರ ನಂತರ ಕಿರಿಯ ಮಗಳಾಗಿ ಹುಟ್ಟಿದವಳು ನಾನು. ಹುಟ್ಟಿದ್ದು 1945 ರ ಮೇ 6 ರಂದು. ಪೂನಾದಲ್ಲಿ. ನಾನು 15 ದಿನಗಳ ಮಗು ಆಗಿರುವಾಗ ಅಪ್ಪ ಮಿಲ್ಟ್ರಿಯ ಕೆಲಸಕ್ಕೆ ಹೊರಡಬೇಕಾದ್ದರಿಂದ ತಾಯಿಯ ಜೊತೆಗೆ ನಮ್ಮನ್ನೆಲ್ಲ ಟ್ರೈನ್ ಹತ್ತಿಸಿ ಬೆಂಗಳೂರಿಗೆ ಕಳುಹಿಸಿ ತಾವು ಕರ್ತವ್ಯದ ಕರೆಗೆ ಓಗೊಟ್ಟು ಹೊರಟಿದ್ದರು.
ಅಪ್ಪನ ಕೆಲಸದ ವರ್ಗಾವಣೆಯ ಕಾರಣ ಒಂದೆಡೆಯಿಂದ ಮತ್ತೊಂದೆಡೆಗೆ ಓಡಾಟ ಸಾಮಾನ್ಯವಾಗಿತ್ತು. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಾಗಪುರ್ ನ ಪುಲ್ಗಾವ್ ನ ಮಿಲ್ಟ್ರಿ ಶಾಲೆಯಲ್ಲಿ ಹಿಂದಿ ಮೀಡಿಯಂನಲ್ಲಿ ಆಯಿತು.
ಅಂದು ಶಾಲೆಗೆ ಸೇರಿಸಲು ಹೋದಾಗ ಅಲ್ಲಿನ ಮುಖ್ಯೋಪಾಧ್ಯಾಯರು ನನ್ನ ನಾಟ್ಯವನ್ನು ನೋಡಿ ಈಕೆ ಒಬ್ಬ ಉತ್ತಮ ನೃತ್ಯ ಕಲಾವಿದೆ ಆಗುತ್ತಾಳೆ ಎಂದು ಹೇಳಿ ನನ್ನ ಹೆಸರನ್ನು ಚಿತ್ರಲೇಖ ಎಂದು ಬದಲಾಯಿಸಿದರು. ಆಗೆಲ್ಲ ನೃತ್ಯ ಮಾಡುವುದು ತುಂಬಾ ಇಷ್ಟವಿತ್ತು. ಜೊತೆಗೆ ಹಿಂದಿಯ ಸಿನಿಮಾ ಚಿತ್ರಗೀತೆಗಳನ್ನು ಸೊಗಸಾಗಿ ಹಾಡುತ್ತಿದ್ದೆ. ಮುಂದೆ ನಾನು ಪಾಲಿಟೆಕ್ನಿಕ್ ನಲ್ಲಿ ಉಪನ್ಯಾಸಕಿಯಾಗಿ, ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಸಮಯದಲ್ಲೂ ನನ್ನ ಹಾಡುಗಾರಿಕೆಯನ್ನು ಸಹೋದ್ಯೋಗಿಗಳು ಬಹಳವಾಗಿ ಮೆಚ್ಚುತ್ತಿದ್ದರು.
ನಂತರದ ದಿನಗಳಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸ. ಹೈಸ್ಕೂಲ್ ವಿದ್ಯಾಬ್ಯಾಸ ಇಂಗ್ಲಿಷ್ ಮಾಧ್ಯಮದಲ್ಲಿ ಆಯಿತು.

ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್ ನ ಮೊದಲ ಬ್ಯಾಚ್ ನ ಡಿಪ್ಲಾಮೋ (ಫ್ಯಾಷನ್ ಡಿಸೈನಿಂಗ್) ವಿದ್ಯಾರ್ಥಿ ಅನ್ನುವ ಹೆಮ್ಮೆ ನನ್ನದು. ಅಲ್ಲಿಂದ ಆರಂಭವಾದ ಆರು ಜನ ಗೆಳತಿಯರ ಗುಂಪು ನಮ್ಮದು ಇಂದಿಗೂ ಆಗಾಗ ಭೇಟಿ, ದೂರವಾಣಿ ಮೂಲಕ ಮಾತುಕತೆಯಿಂದ ಚಾಲ್ತಿಯಲ್ಲಿದೆ ಮತ್ತು ಅದು ನಮ್ಮೆಲ್ಲರಿಗೂ ಈ ವಯಸ್ಸಿನಲ್ಲೂ ಹುರುಪು ಉತ್ಸಾಹ ಚೈತನ್ಯವನ್ನು ನೀಡುತ್ತಿದೆ. ಈಗಲೂ ಗೆಳತಿಯರಾದ ಶುಭ, ನವರತ್ನ , ಶಕುಂತಲಾ ಅವರೊಂದಿಗೆ ಸಮಯವಾದಾಗಲೆಲ್ಲ ಮಾತನಾಡುವುದಿದೆ. ( ಇತ್ತೀಚೆಗೆ ಇನ್ನಿಬ್ಬರು ಕಾಲವಾದರು).
ಪಾಲಿಟೆಕ್ನಿಕ್ ಓದುವಾಗ ಸಿನೆಮಾ ನಟ ಶ್ರೀನಾಥ್ ಅವರು ಸಹಪಾಠಿ ಆಗಿದ್ದರು. ಅವರು ತುಂಬಾ ಬೆಳ್ಳಗೆ ಅಷ್ಟೇ ಲಕ್ಷಣವಾಗಿ ಕೂಡ ಇದ್ದರು. ಅವರನ್ನು ಆಗೆಲ್ಲ
ರೇಗಿಸುತ್ತ ಇದ್ದೆವು, ನೀನು ಹುಡುಗ ನಿನಗ್ಯಾಕೆ ಇಷ್ಟೊಂದು ಬಣ್ಣ ರೂಪ ಕೊಟ್ಟಿದ್ದಾನೋ ದೇವರು. ಯಾರಾದರೂ ಹೆಣ್ಣು ಮಕ್ಕಳಿಗೆ ಕೊಡಬಾರದಿತ್ತಾ ಎಂದು. (ಇದೆಲ್ಲ ಹೇಳುತ್ತಾ ಮತ್ತೊಮ್ಮೆ ಕಾಲೇಜಿನ ದಿನಗಳಿಗೆ ಹಿಂದಿರುಗಿದ್ದರು)
19ನೇ ವಯಸ್ಸಿಗೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದೆ. ಕೆಲಸಕ್ಕೆ ಸೇರಿದ ನಂತರ ಸಂಜೆ ಕಾಲೇಜಿನಲ್ಲಿ B.A. ಪದವಿಯನ್ನು ಪಡೆದೆ. ಕೆಲಸದ ಕಾರಣಕ್ಕೆ ಬೇರೆ ಬೇರೆ ಊರುಗಳಿಗೆ ವರ್ಗಾವಣೆ ಆಗುವಾಗ ಸಂಸಾರ ಬೆಂಗಳೂರಿನಲ್ಲಿ ಇದ್ದ ಕಾರಣ ಆ ಕೆಲಸಕ್ಕೆ ರಾಜೀನಾಮೆ ನೀಡಿ ಹೊಂಬೇಗೌಡ ಬಾಲಕಿಯರ ಪ್ರಢಶಾಲೆಯಲ್ಲಿ 26 ವರ್ಷಗಳ ಕಾಲ ಅಧ್ಯಾಪಕಿಯಾಗಿ ಕೆಲಸ ನಿರ್ವಹಿಸಿದ್ದೆ. ನಿವೃತ್ತಿಯ ನಂತರ 2 ವರ್ಷ M.S. ರಾಮಯ್ಯ ದಲ್ಲಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸಿದೆ.

- ಸಾಹಿತ್ಯದಲ್ಲಿ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಹುಟ್ಟಿದ್ದು ಯಾವಾಗ ಮತ್ತು ಹೇಗೆ? ಲೇಖಕಿಯಾಗಬೇಕೆನಿಸಿದ್ದು ಹೇಗೆ?
ಓದುವ ಆಸಕ್ತಿ ಚಿಕ್ಕಂದಿನಿಂದ ಇತ್ತು. ಚಂದಮಾಮ ಆಗಿನ ನನ್ನ ಅಚ್ಚಮೆಚ್ಚಿನ ಪುಸ್ತಕ. ಜೊತೆಗೆ ಲೈಬ್ರರಿಯಿಂದ ತರುತ್ತಿದ್ದ ಪುಸ್ತಕಗಳನ್ನು ಓದುತ್ತಿದ್ದೆ.
ಐದು ಆರನೇ ತರಗತಿಯಲ್ಲಿ ಇದ್ದಾಗಲೇ ಬರೆಯುವ ಹಂಬಲ ಮೂಡಿತ್ತು. ಲೇಖಕಿ ಆಗಬೇಕು ಎನ್ನುವುದರ ಜೊತೆಗೆ ನೃತ್ಯತಾರೆ ಆಗಬೇಕು, ಸಿನಿಮಾ ಹಿನ್ನೆಲೆ ಗಾಯಕಿ ಆಗಬೇಕು ಎನ್ನುವ ಹಂಬಲವೂ ನನ್ನಲ್ಲಿತ್ತು. ಆದರೆ ಆ ಕಾಲದಲ್ಲಿ ಹೆಚ್ಚಾಗಿ ಎಲ್ಲರ ಮನೆಯಲ್ಲಿ ಹೇಳುತ್ತಿದ್ದಂತೆ ನೃತ್ಯವಾಗಲೀ, ಸಂಗಿತವಾಗಲೀ ನಿನ್ನ ಸಮಾಧಾನಕ್ಕೆ ಕಲಿಯಬೇಕೇ ಹೊರತು ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶವಿಲ್ಲ ಎಂದು ಮನೆಯಲ್ಲಿ ಹೇಳಿದ ನಂತರ ಅವೆರಡರೆಡೆಗಿನ ಆಕರ್ಷಣೆ ಕಡಿಮೆಯಾಗಿ ಬರವಣಿಗೆಯ ಕಡೆಗೆ ಮನಸ್ಸು ಎಳೆದಿತ್ತು.
- ಓದಿದ್ದು ಇಂಗ್ಲಿಷ್ ಹಾಗೂ ಹಿಂದಿ ಮಾಧ್ಯಮ ವಾದರೂ ಕನ್ನಡದಲ್ಲಿ ಅಷ್ಟೊಂದು ಕಾದಂಬರಿಗಳನ್ನು ಬರೆಯಲು ಹೇಗೆ ಸಾಧ್ಯವಾಯಿತು?
ಓದಿದ್ದು ಇಂಗ್ಲಿಷ್ ಹಾಗೂ ಹಿಂದಿ ಮಾಧ್ಯಮದಲ್ಲಿಯಾದರೂ ಕನ್ನಡದ ಬಗ್ಗೆ ಒಲವು, ಅಭಿಮಾನ ಪ್ರೀತಿ ಹೆಚ್ಚೇ ಇತ್ತು. ಜೊತೆಗೆ ನಾನು ಓದಿದ್ದು, ವಾಸ ಇದ್ದದ್ದು ಎಲ್ಲವೂ ಕನ್ನಡ ನಾಡಿನಲ್ಲೇ ಆದ್ದರಿಂದ ಬರೆಯಲು ಕನ್ನಡವನ್ನೇ ಆರಿಸಿಕೊಂಡೆ. ನಾನು ಕನ್ನಡ ಕಲಿತದ್ದು ನನ್ನ ತಂದೆಯವರಿಂದ. ಹಾಗಾಗಿ ಯಾವ ಭಾಷೆಯಲ್ಲಿ ಬರೆಯಬೇಕು ಎನ್ನುವ ಗೊಂದಲ ಮೊದಲಿದ್ದರೂ ಕನ್ನಡದ ಮೇಲಿನ ಅಭಿಮಾನ , ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಶಿವರಾಮ ಕಾರಂತರು ಮುಂತಾದ ಮಹನೀಯರ ಪುಸ್ತಕಗಳನ್ನು ಓದುತ್ತ ಓದುತ್ತ ನನ್ನ ಗೊಂದಲ ಮಾಯವಾಗಿ, ಕನ್ನಡದಲ್ಲಿಯೇ ಬರೆಯಲು ಆರಂಭಿಸಿದೆ.
ಮುಂದೆ ಹೈಸ್ಕೂಲ್ ನಲ್ಲಿ ಇದ್ದಾಗಲೇ “ನಿರ್ಮಲಾ” ಎನ್ನುವ ದೊಡ್ಡ ಕಾದಂಬರಿ ಬರೆದಿದ್ದೆ. ಪಕ್ಕದ ಮನೆಯಲ್ಲಿದ್ದವರು ಓದಿ, ಚೆನ್ನಾಗಿ ಬರೆದಿದ್ದೀಯಾ, ಸಾಹಿತ್ಯ ಕೃಷಿ ಮುಂದುವರೆಸು ಎಂದಿದ್ದರು. ಆದರೂ ಅದೇಕೋ ಚೆನ್ನಾಗಿಲ್ಲ ಎನ್ನಿಸಿ ಹರಿದು ಹಾಕಿದ್ದೆ. ನನ್ನ ಗೆಳತಿಯರು ಮತ್ತು ನಮ್ಮ ಶಿಕ್ಷಕಿ ಅನಂತಲಕ್ಷ್ಮಿ ಅವರು ನನಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಹಾಗೆಯೇ ಮಂಗಳಾ ಪತ್ರಿಕೆಯ ಸಂಪಾದಕರಗಿದ್ದ ಬಾಬು ಕೃಷ್ಣ ಮೂರ್ತಿ ತುಂಬಾ ಪ್ರೊತ್ಸಾಹ ನೀಡುತ್ತಿದ್ದರು.

- ನಿಮ್ಮ ಮೊದಲ ಬರಹ ಯಾವುದು? ಬರೆದದ್ದು ಯಾವಾಗ?
ಬರೆದದ್ದು ನಿರ್ಮಲಾ ಆದರೂ ಪ್ರಕಟವಾದ ಮೊದಲ ಕಾದಂಬರಿ “ಮುದುಡಿದ ತಾವರೆ ಅರಳಿತು” ಆದ್ದರಿಂದ ಅದೇ ನನ್ನ ಮೊದಲ ಬರಹ . ಇದನ್ನು ಬರೆದದ್ದು 1962 ಆಗಿನ್ನೂ ನನಗೆ 16 ವರ್ಷ ವಯಸ್ಸು. ನಂತರ ಬರೆದದ್ದು ಚಂದ್ರಿಕಾ. ಆಮೇಲಿನ ದಿನಗಳಲ್ಲಿ ಸತತವಾಗಿ ಬರೆಯುತ್ತಲೇ ಇದ್ದೆ.
ನಂತರ ಬರೆದ ಹಲವಾರು ಸಣ್ಣ ಕಥೆ ಲೇಖನಗಳು ಸುಧಾ, ಮಂಗಳಾ, ವನಿತಾ, ವಾರ ಪತ್ರಿಕೆ, ಹಂಸರಾಗ ಮತ್ತು ರಾಗ ಸಂಗಮ ದಲ್ಲಿ ಪ್ರಕಟವಾಗುತ್ತಿದ್ದವು.
- ಕಾದಂಬರಿ ಮಾಧ್ಯಮವನ್ನೇ ಆಯ್ದುಕೊಂಡದ್ದು ಏಕೆ?
ಕಾದಂಬರಿ ಮಾಧ್ಯಮವನ್ನೇ ಆರಿಸಿಕೊಂಡಿದ್ದಕ್ಕೆ ಅಂತಹ ದೊಡ್ಡ ಕಾರಣ ಏನಿಲ್ಲ. ಆದರೆ ಕಾದಂಬರಿ ಬರೆಯಬೇಕು ಎನ್ನುವ ಹಂಬಲ ಮೊದಲಿನಿಂದ ಇತ್ತು. ಇದರ ಮೂಲಕ ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿನ ಓರೆ ಕೋರೆಗಳೆಡೆಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದ್ದೆ.

- ಜನಪ್ರಿಯ ಸಾಹಿತ್ಯ, ವಿಮರ್ಶಕರಿಂದ ಕಡೆಗಣಿಸಲ್ಪಟ್ಟಿದೆ ಎನ್ನುವ ಮಾತು ಸಾಹಿತ್ಯ ವಲಯದಲ್ಲಿ ಇದೆ. ಒಬ್ಬ ಬರಹಗಾರ್ತಿಯಾಗಿ ಈ ಕುರಿತು ನೀವು ಏನು ಹೇಳುತ್ತೀರಿ?
ವಿಮರ್ಶಕರಿಂದ ಕಡೆಗಣಿಸಲ್ಪಟ್ಟಿರಬಹುದಾದರೂ ಜನಪ್ರಿಯ ಸಾಹಿತ್ಯಕ್ಕೆ ಓದುಗರು ಹೆಚ್ಚು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಜನಪ್ರಿಯ ಸಾಹಿತ್ಯ ಒಂದು ರೀತಿ ಚಲನ ಚಿತ್ರ ಗೀತೆಗಳು ಇದ್ದಂತೆ, ಸುಲಭವಾಗಿ ಅರ್ಥವಾಗುತ್ತದೆ ಮತ್ತು ಜನರಿಗೆ ಶೀಘ್ರವಾಗಿ ತಲುಪುತ್ತವೆ. ಅಷ್ಟೇ ಚೆನ್ನಾಗಿ ಕೂಡ ಇರುತ್ತವೆ. ಇದನ್ನು ಬರೆಯುವುದು ಸುಲಭ ಓದುಗರನ್ನೂ ಅಷ್ಟೇ ಸುಲಭವಾಗಿ ತಲಪಬಹುದಾಗಿದೆ. ಜನಪ್ರಿಯ ಸಾಹಿತ್ಯ ಹೆಚ್ಚಿನದು ಏನನ್ನೂ ಬೇಡುವುದಿಲ್ಲ, ಸಿಕ್ಕ ಅಲ್ಪ ಸ್ವಲ್ಪ ಸಮಯದಲ್ಲಿ ಓದಿ ಅರ್ಥ ಮಾಡಿಕೊಳ್ಳಬಹುದು.
ಅದೇ ಗಂಭೀರ ಸಾಹಿತ್ಯವಾದರೆ ಬರೆಯಲು ಹೆಚ್ಚಿನ ಮಾಹಿತಿ ಸಂಗ್ರಹಬೇಕು, ಅದರ ಭಾಷೆ ಉತ್ಕೃಷ್ಟವಾಗಿರಬೇಕು, ಸಮಯವೂ ಬೇಕು, ವಿಷಯದ ಆಳ ಅಗಲ ತಿಳಿಯಲು ಅಧ್ಯಯನ ಮಾಡಿ ಪೂರ್ಣವಾಗಿ ಬರೆಯುವ ವೇಳೆಗೆ ಪುಸ್ತಕದ ಗಾತ್ರ ಕೂಡ ದೊಡ್ಡದಾಗುತ್ತದೆ. ಇದು ಒಂದು ರೀತಿಯ ಶಾಸ್ತ್ರೀಯ ಸಂಗೀತ ಇದ್ದಂತೆ. ತಾಳ, ಶೃತಿ, ರಾಗ, ಭಾವ ಎಲ್ಲವೂ ಸರಿಯಿದ್ದರೆ ಮಾತ್ರ ಶಾಸ್ತ್ರೀಯ ಸಂಗೀತ ಕರ್ಣಾನಂದ, ಇಲ್ಲವಾದರೆ ಕೇಳುವ ಉತ್ಸಾಹ ಉಳಿಯುವುದಿಲ್ಲ. ಹಾಗೆಯೇ ಅದನ್ನು ಕೇಳುವವರಿಗೂ ಅದರ ಕುರಿತು ಸ್ವಲ್ಪವಾದರೂ ಜ್ಞಾನ ಇದ್ದಾಗ ಮಾತ್ರ ಅದರ ರಸಾಸ್ವಾಧನೆ ಮಾಡಲು ಸಾಧ್ಯ. ಹಾಗೆಯೇ ಗಂಭೀರ ಸಾಹಿತ್ಯ ಕೂಡ ಎಲ್ಲರನ್ನೂ ತಲುಪಲು ಸಾಧ್ಯವಿಲ್ಲ. ಒಂದು ವರ್ಗದ ಜನರನ್ನು ಮಾತ್ರ ತಲುಪುತ್ತದೆ ಎನ್ನುವುದು ನನ್ನ ಅಭಿಪ್ರಾಯ.
ಉದಾಹರಣೆಗೆ ಕಾರಂತರು, ಬೈರಪ್ಪನವರು ಇವರೆಲ್ಲರ ಕಾದಂಬರಿಗಳ ವಸ್ತು ವಿಷಯ ಅಳವಾದದ್ದು. ಹಾಗೆಂದು ಎಲ್ಲರೂ ಹಾಗೆ ಬರೆಯಲು ಸಾಧ್ಯವೂ ಇಲ್ಲ. ಅದನ್ನು ಓದುಗರು ಓದಿ ಅರ್ಥ ಮಾಡಿಕೊಳ್ಳುವುದು ಅಷ್ಟೇನೂ ಸುಲಭದ ಮಾತಲ್ಲ.

ಪ್ರೇಮಿಗಳು ಎಂದ ಕೂಡಲೇ ಈಗಲೂ ಜನ ನೆನಪು ಮಾಡಿಕೊಳ್ಳುವುದು ಪಾರ್ವತಿ ದೇವದಾಸ್, ಲೈಲಾ ಮಜ್ನು, ಶಕುಂತಲಾ ದುಷ್ಯಂತ, ಹೀರ್ ರಾಂಜಾ ಅವರ ಕಥೆಗಳು. ಇವೆಲ್ಲ ಎಂದೋ ಅಗಿ ಹೋದ ಕಥೆಗಳು. ಈ ಕ್ಷಣಕ್ಕೂ ನಮ್ಮ ಜನ ಸಾಮಾನ್ಯರಲ್ಲಿ ಇಂತಹ ಕಥೆಗಳು ನಡೆಯುತ್ತಲೇ ಇರುತ್ತವೆ. ಅವನ್ನೆಲ್ಲ ನಮ್ಮ ಲೇಖಕಿಯರು (ಕೆಲವು ಲೇಖಕರೂ) ಅದೆಷ್ಟು ಸುಂದರವಾಗಿ ತಮ್ಮ ಕಾದಂಬರಿಗಳಲ್ಲಿ ಚಿತ್ರಿಸುತ್ತಾರೆ. ಹಾಗೆಯೇ ಅದೆಷ್ಟೋ ನೊಂದ ಹೆಣ್ಣುಗಳ ಕಥೆ ಬರೆದು ಅದಕ್ಕೊಂದು ಪರಿಹಾರ ಸೂಚಿಸುತ್ತಾರೆ. ಹೀಗೆ ಬರೆದ ಕೆಲವು ಕಥೆಗಳ ಪಾತ್ರಗಳ ರೀತಿಯ ವ್ಯಕ್ತಿಗಳು ತಮ್ಮ ಜೀವನಕ್ಕೆ ಸಮೀಕರಿಸಿಕೊಂಡು ಸಂತಸ ಪಟ್ಟವರೂ ಇದ್ದಾರೆ. ಹಾಗೆಯೇ ನೊಂದು ಬೆಂದವರು ಕಥೆಗಳಲ್ಲಿ ಬರುವ ಪರಿಹಾರ ಓದಿ ನಿಮ್ಮ ಕಥೆ ಓದಿ ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈ ಬಿಟ್ಟೆ ಎಂದು ಪತ್ರಗಳಲ್ಲಿ ತಿಳಿಸಿದವರು ಇದ್ದಾರೆ. ಇವೆಲ್ಲ ವಿಮರ್ಶೆಗೂ ಮೀರಿದ್ದು. ಲೇಖಕಿಯರ ಬರವಣಿಗೆಗೆ ಸಾರ್ಥಕತೆ ನೀಡಿದ್ದು. ಓದುಗರ ಜೀವನವನ್ನು ಬದಲಿಸುವಂತಹವು.
ಈ ವಿಷಯದ ಕುರಿತು ಮಾತನಾಡುತ್ತಾ ಶ್ರೀಮತಿ ಚಿತ್ರಲೇಖ ಅವರು ಹಂಚಿಕೊಂಡ ಒಂದು ವಿಷಯವನ್ನು ಇಲ್ಲಿ ಬರೆಯಬೇಕು ಅನಿಸುತ್ತಿದೆ. ಅದೇನೆಂದರೆ ಒಂದು ಸಾಹಿತ್ಯ ಸಮ್ಮೇಳನದಲ್ಲಿ ಗೌರವಾನ್ವಿತ ಲೇಖಕರು ಒಬ್ಬರು, ನಾವು ಒಂದು ಕಾದಂಬರಿ ಬರೆಯಲು ವಿಷಯ ವಸ್ತುವಿನ ಹುಡುಕಾಟ ಅದರ ಕುರಿತು ಅಧ್ಯಯನ ಮಾಡಿ ಪುಸ್ತಕ ಬರೆಯುವ ವೇಳೆಗೆ ವರ್ಷಗಳೇ ಕಳೆದಿರುತ್ತವೆ. ಆದರೆ ಈ ಲೇಖಕಿಯರು ಬರೀ ಇಪ್ಪತ್ತು ದಿನಗಳಲ್ಲಿ ಒಂದು ಕಾದಂಬರಿ ಬರೆದು ಮುಗಿಸಿ ಬಿಡುತ್ತಾರೆ ಎಂದರಂತೆ.
ಆಗ ಅಲ್ಲಿ ಕುಳಿತಿದ್ದ ಹಿರಿಯ ಲೇಖಕಿ ಗೀತಾ ನಾಗಭೂಷಣ್ ಅವರು ಎದ್ದು ನಿಂತು ತಮ್ಮ ಕಂಚಿನ ಕಂಠದಲ್ಲಿ “ಸ್ವಾಮಿ, ನಮ್ಮ ಲೇಖಕಿಯರನ್ನು ಮೊದಲು ಬರೆಯಲು ಬಿಡಿ. ನೀವು “ಮನು” ವಿನ ಕಾಲದಿಂದಲೂ ಬರೆಯುತ್ತಲೇ ಬಂದಿದ್ದೀರ. ಹೆಂಗಸರು ಶಾಲೆಗೆ ಹೋಗಲು ಆರಂಭಿಸಿದ್ದು, ಓದಲು ಬರೆಯಲು ಆರಂಭಿಸಿದ್ದು ತೀರಾ ಇತ್ತೀಚೆಗೆ. ಮೊದಲು ಅವರಿಗೆ ಬರೆಯಲು ಬಿಡಿ. ಅದು ಚಿಕ್ಕದೋ, ದೊಡ್ಡದೋ, ಸರಿಯೋ, ತಪ್ಪೊ ಏನೇ ಆಗಿರಲಿ ಮೊದಲು ಬರೆಯಲು ಬಿಡಿ. ನಂತರ ನೋಡಿ ಅವರಿಂದಲೂ ಒಳ್ಳೆಯ ಗ್ರಂಥ ರಚನೆ ಆಗಿಯೇ ಆಗುತ್ತದೆ “ಎಂದಿದ್ದರಂತೆ. ಈಗ ಅಂದು “ಶ್ರೀಮತಿ ಗೀತಾ ನಾಗಭೂಷಣ್” ಹೇಳಿದಂತೆ ಸಾಕಷ್ಟು ಮಹಿಳಾ ಲೇಖಕಿಯರು ಮುಂಚೂಣಿಯಲ್ಲಿ ಇದ್ದಾರೆ.

- ಓದುಗರಿಂದ ಅತಿ ಹೆಚ್ಚು ಪ್ರಶಂಸೆಗೆ ಒಳಪಟ್ಟ ನಿಮ್ಮ ಕೃತಿ (ಅತಿ ಹೆಚ್ಚು ಮಾರಾಟವಾದದ್ದು, ಮುದ್ರಣ ಕಂಡಿದ್ದು) ಯಾವುದು? ಅದಕ್ಕೆ ಸ್ಫೂರ್ತಿ ಎಲ್ಲಿಂದ ಬಂತು?
ಓದುಗರಿಂದ ಅತೀ ಹೆಚ್ಚು ಪ್ರಶಂಶೆಗೆ ಒಳಪಟ್ಟ ಕೃತಿ ಎಂದರೆ “ಮುದುಡಿದ ತಾವರೆ ಅರಳಿತು” “ಚಂದ್ರಿಕಾ” ಎನ್ನಬಹುದು. ಬೇರೆ ಎಲ್ಲ ಕಾದಂಬರಿಗಳಿಗೂ ಓದುಗರ ಸಾಕಷ್ಟು ಪತ್ರಗಳು ಬರುತ್ತಿದ್ದರೂ ಇವೆರಡು ತುಂಬಾ ಪ್ರಶಂಸೆಗೆ ಪಾತ್ರವಾಗಿವೆ. ಚಂದ್ರಿಕಾ ನಾಲ್ಕು ಬಾರಿ ಮುದ್ರಣವಾಗಿದೆ. ಮುದುಡಿದ ತಾವರೆ ಅರಳಿತು ಕುರಿತು ಹೇಳುವುದಾದರೆ ನಾನು ಬರೆದ ಹತ್ತು ವರ್ಷಗಳ ನಂತರ ಇದು ಮುದ್ರಣವಾಯಿತು, ಅದಾಗಿ ಹತ್ತು ವರ್ಷಗಳ ನಂತರ ಚಲನ ಚಿತ್ರ ಆಯಿತು. ಚಿತ್ರ ಪ್ರೇಮಿ ಗಳಿಂದ ಹಾಗೂ ಓದುಗರಿಂದ ಮೆಚ್ಚುಗೆ ಪಡೆಯಿತು.
ಇವುಗಳನ್ನು ಬರೆಯಲು ಸ್ಪೂರ್ತಿ ಸಿಕ್ಕಿದ್ದು ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳಿಂದಲೇ.
(ಈ ಕಾದಂಬರಿ ಮುದ್ರಣವಾಗಿ ಗ್ರಂಥಾಲಯದಲ್ಲಿ ಸಿಗುವಂತೆ ಆದಾಗ ಬಸ್ಸಿನಲ್ಲಿ ನನ್ನ ಪಕ್ಕ ಕುಳಿತಿದ್ದ ಒಬ್ಬಾಕೆ “ಮುದುಡಿದ ತಾವರೆ ಅರಳಿತು” ಕಾದಂಬರಿ ಓದುತ್ತಿದ್ದರು. ನಾನು ಕುತೂಹಲದಿಂದ ಯಾವ ಕಾದಂಬರಿ ಎಂದಾಗ ಆಕೆ ಇದು “ಮುದುಡಿದ ತಾವರೆ ಅರಳಿತು”ಅಂತ, ಚಿತ್ರಲೇಖ ಎನ್ನುವ ಲೇಖಕಿಯದು. ತುಂಬಾ ಚೆನ್ನಾಗಿ ಬರೆದಿದ್ದಾರೆ. ಗ್ರಂಥಾಲಯದಲ್ಲಿ ದೊರೆಯುತ್ತದೆ , ನೀವೂ ಓದಿ ಎಂದಿದ್ದರು. ಆಕೆಗೆ ಓದಿನ ಖುಷಿ ಸಿಕ್ಕಿತ್ತು. ನನಗೆ ನಾನು ಬರೆದದ್ದು ಸಾರ್ಥಕ ಎನಿಸಿತ್ತು. ಆಕೆಗೆ ನಾನೇ ಚಿತ್ರಲೇಖ ಎಂದು ಹೇಳದೇ ಬಸ್ಸಿಳಿದು ಬಂದಿದ್ದೆ. ಶಾಲೆಯಲ್ಲಿ ಈ ಪ್ರಕರಣ ಹೇಳಿ ಸಹೋದ್ಯೋಗಿಗಳಿಂದ ಬೈಸಿಕೊಂಡಿದ್ದೆ. ಇಳಿಯುವಾಗ ನಾನೇ ಚಿತ್ರಲೇಖ ಎಂದು ಹೇಳಿ ಬರಬಾರದಿತ್ತೆ ಎನ್ನುತ್ತಾ ಮತ್ತೊಮ್ಮೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.( ಇದು ಅವರ ಸರಳತೆಗೆ ಮತ್ತೊಂದು ಸಾಕ್ಷಿ ಎನಿಸಿತು ನನಗೆ.)
- ಒಟ್ಟು ನೀವು ರಚಿಸಿರುವ ಕಾದಂಬರಿಗಳು ಎಷ್ಟು?
ಸುಮಾರು 160 ಕಾದಂಬರಿಗಳು. ಕೆಲವು ರಾಗಸಂಗಮ ಹಂಸರಾಗ ಮಾಸ ಪತ್ರಿಕೆಗಳಲ್ಲಿ ಪ್ರಸಾರವಾಗಿವೆ.
ಸೋಮರ್ ಸೆಟ್ ಮಾಮ್ ಇವರ ಕಾದಂಬರಿ ಆಧರಿಸಿ ಬರೆದದ್ದು ಅಳಿವು ಉಳಿವು. ತಮಿಳಿನಿಂದ ಮೂರು ಕಾದಂಬರಿ ಕನ್ನಡಕ್ಕೆ ಅನುವಾದ ಮಾಡಿದ್ದೇನೆ. “ಕರುಣಾ ಹತ್ಯೆ” 47 ದಿನಗಳು ಹಾಗೂ ಮತ್ತೊಂದು.
- ಪ್ರತಿ ಕಾದಂಬರಿಗಳಿಗೆ ವೈವಿಧ್ಯಮಯ ವಸ್ತು ವಿಷಯಗಳನ್ನು ಎಲ್ಲಿಂದ ಸಂಗ್ರಹಿಸುತ್ತಿದ್ದಿರಿ?
ನಾನು ಕೆಲಸ ಮಾಡುತ್ತಿದ್ದುದು ಶಾಲೆಯಲ್ಲಿ ಅಲ್ಲಿನ ಮಕ್ಕಳು, ಸಹೋದ್ಯೋಗಿಗಳ ಜೀವನದಲ್ಲಿ ನಡೆಯುವ ಘಟನೆಗಳನ್ನು ಹತ್ತಿರದಿಂದ ನೋಡುತ್ತಿದ್ದೆ, ಕೇಳುತ್ತಿದ್ದೆ. ಅವುಗಳನ್ನೇ ಆಧರಿಸಿ ಕಾದಂಬರಿ ಬರೆಯುತ್ತಿದ್ದೆ.
ಶಾಲೆಯಲ್ಲಿ ಓದುತ್ತಿದ್ದ ಒಂದು ಹಿಂದೂ ಹುಡುಗಿಯನ್ನು ಚಿಕ್ಕವಳಿದ್ದಾಗಲೇ ಆಕೆಯ ಪೋಷಕರು ಯಾವುದೋ ಕಾರಣಕ್ಕೆ ಕ್ರೈಸ್ತ ಸನ್ಯಾಸಿನಿ ಮಾಡುತ್ತೇವೆ ಎಂದು ಹರಕೆ ಮಾಡಿಕೊಂಡಿದ್ದರು. ಆದರೆ ಆ ಹುಡುಗಿ ಬೆಳೆದಂತೆ ಆಕೆಗೆ ಇದು ಇಷ್ಟವಾಗದೆ ಮದುವೆ ಮಾಡಿಕೊಂಡು ಸಂಸಾರಿ ಆದಳು. ಇಲ್ಲಿ ಆಕೆಯ ಮನಸ್ಸಿನ ಮೇಲೆ ಆಗಿರಬಹುದಾದ ಪರಿಣಾಮಗಳ ಕುರಿತು ಬರೆದದ್ದು “ನಂಜಾದ ನೆನಪು”.
ಹಾಗೆಯೇ ತುಂಬಾ ಚೂಟಿಯಾದ ಮಗುವೊಂದು ಮಹಡಿಯಿಂದ ಬಿದ್ದು ತಲೆಗೆ ಪೆಟ್ಟಾಗಿ ನಿಮ್ಯಾನ್ಸ್ ನಲ್ಲಿ ನಿರ್ಜೀವ ಕೊರಡಿನಂತೆ ಮಲಗಿದ್ದನ್ನು ನೋಡಿದ್ದೆ. ಈ ವಿಷಯದ ಕುರಿತು ಬರೆದದ್ದು “ಕರುಳಿನ ಕೂಗು”. ಹೀಗೆ ನನ್ನ ಸುತ್ತ ಮುತ್ತ ನಡೆಯುವ ಘಟನೆಗಳನ್ನು ಆಧರಿಸಿ ಆ ಪಾತ್ರಗಳನ್ನು ಪರಕಾಯ ಪ್ರವೇಶ ಮಾಡಿ ಬರೆಯುತ್ತಿದ್ದೆ.

- ನಿಮಗೆ ಸಿಕ್ಕ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಹೇಳಿ?
ಅಭಿಮಾನಿಗಳ ಮೆಚ್ಚುಗೆ ಮತ್ತು ಅವರಿಂದ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಿದ್ದ ಪತ್ರಗಳೇ ನನಗೆ ಸಿಕ್ಕ ಪ್ರಶಸ್ತಿ ಪುರಸ್ಕಾರಗಳು.
ನಾನು ಬರೆದ ಕಥೆ ಕಾದಂಬರಿಗಳನ್ನು ಯಾವುದೇ ಸ್ಪರ್ಧೆಗಳಿಗೆ ನಾನು ಕಳುಹಿಸುತ್ತಿರಲಿಲ್ಲ. ಇದಕ್ಕ ಕಾರಣ ಭಾಷೆಯ ಮೇಲೆ ಹಿಡಿತ ಇರಬೇಕು ಎಂದರೆ ಆ ಭಾಷೆ ನಮ್ಮ ಮಾತೃ ಭಾಷೆ ಆಗಿರಬೇಕು ಇಲ್ಲವೇ ಆ ಭಾಷೆಯನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡು ಕನಿಷ್ಠ M.A, ಯನ್ನಾದರೂ ಮಾಡಿರಬೇಕು ಎನ್ನುವ ನಿಲುವು ನನ್ನದು. ಈ ಎರಡೂ ಇಲ್ಲದ ನನ್ನ ಬರವಣಿಗೆ ಪ್ರಶಸ್ತಿ ಪುರಸ್ಕಾರಕ್ಕೆ ಯೋಗ್ಯವೋ ಅಲ್ಲವೋ ಅನ್ನುವ ಅಂಜಿಕೆ ನನ್ನಲ್ಲಿತ್ತು. ಹಾಗಾಗಿ ಈ ಕುರಿತು ಯೋಚಿಸಲೂ ಇಲ್ಲ ಪ್ರಯತ್ನ ಕೂಡ ಮಾಡಲಿಲ್ಲ. ಹಾಗೆಂದು ನನ್ನಲ್ಲಿ ಕೀಳರಿಮೆಯೇನೂ ಇರಲಿಲ್ಲ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರಾಲೀ, ತಿರುಮಲಾಂಬ ಅವರಾಗಲಿ, ಅಯ್ಯರ್ ಅವರಾಗಲೀ ಇವರ್ಯಾರ ಮನೆ ಮಾತೂ ಕನ್ನಡ ಆಗಿರಲಿಲ್ಲ ಆದರೂ ಅವರೆಲ್ಲ ಕನ್ನಡದಲ್ಲಿ ಸೊಗಸಾಗಿಯೇ ಬರೆಯುತ್ತಿದ್ದರು ಎನ್ನುವುದೂ ತಿಳಿದಿತ್ತು. ಇವುಗಳ ಜೊತೆಗೆ ಸಂಸಾರ, ಕೆಲಸ, ಬರವಣಿಗೆ ಇವುಗಳಲ್ಲಿಯೆ ನನ್ನ ಸಮಯ ಸರಿಹೋಗುತ್ತಿತ್ತು. ಲೇಖಕಿಯರ ಯಾವುದೇ ಸಭೆ ಸಮಾರಂಭಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು ಸಮಯದ ಅಭಾವವೂ ಇತ್ತು. ಸಮಕಾಲೀನ ಬರಹಗಾರರು, ಬರಹಗಾರ್ತಿರ ಜೊತೆಯಲ್ಲಿ ಹೆಚ್ಚು ಬೆರೆಯಲೂ ಸಾಧ್ಯವಾಗಲಿಲ್ಲ ನನ್ನ ಒತ್ತಡದ ಬದುಕಿನಲ್ಲಿ. ಇಷ್ಟೆಲ್ಲ ಕೆಲಸಗಳ ನಡುವೆಯೂ ಪ್ರೀತಿಯ ಓದುಗರು ಬರೆದ ಪತ್ರಗಳಿಗೆ ಮರುತ್ತರ ಬರೆಯುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ.
ಇವೆಲ್ಲದರ ಜೊತೆಗೆ ನನ್ನದು ಮೊದಲಿನಿಂದಲೂ ಸ್ವಲ್ಪ ಸಂಕೋಚದ ಸ್ವಭಾವ. ನನಗಾಗಿ ಬೇರೆಯವರು ಚಪ್ಪಾಳೆ ತಟ್ಟುವ ಸದ್ದಿನಲ್ಲಿ ಸಿಗುವ ಅನಂದಕ್ಕಿಂತ, ನಾನು ಬೇರೆಯವರ ಬಗೆಗೆ ಮೆಚ್ಚುಗೆ ಸೂಚಿಸಿ, ಬೆನ್ನು ತಟ್ಟಿ ಪ್ರೋತ್ಸಾಹ ನೀಡುವುದರಲ್ಲಿಯೇ ಹೆಚ್ಚಿನ ಖುಷಿ. ನನ್ನ ಶಾಲೆಯ ಎಷ್ಟೋ ಮಕ್ಕಳ ಪ್ರತಿಭೆ ಗುರುತಿಸಿ ನೀರೆರೆದಿದ್ದೇನೆ.
ಬಸ್ಸಿನಲ್ಲಿ ಪ್ರಯಾಣ ಮಾಡುವಾಗ, ಶಾಲೆಯ ರಜಾ ದಿನಗಳಲ್ಲಿ ಸಿಕ್ಕ ಸಮಯದಲ್ಲಿ ಎಲ್ಲರ ಕಾದಂಬರಿಗಳನ್ನು ಓದುತ್ತಿದ್ದೆ, ಮೆಚ್ಚುತ್ತಿದ್ದೆ.
ನನ್ನ ಬರವಣಿಗೆಯನ್ನು ಗುರುತಿಸಿ ಕರ್ನಾಟಕದಾದ್ಯಂತ ಸಭೆ ಸಮಾರಂಭಗಳಿಗೆ ಅತಿಥಿಯಾಗಿ ಕರೆಯುತ್ತಿದ್ದರು. ಸಾಧ್ಯವಾದಾಗಲೆಲ್ಲ ಭಾಗವಹಿಸಿದ್ದೆ. ಅವೆಲ್ಲ ಅತೀ ಸುಂದರ ನೆನಪುಗಳು.
- ನಿಮ್ಮ ಯಾವ ಯಾವ ಕೃತಿಗಳು ಚಲನ ಚಿತ್ರಗಳು ಆಗಿವೆ?
ಮೊದಲ ಕಾದಂಬರಿ ಮುದುಡಿದ ತಾವರೆ ಅರಳಿತು ಹಾಗೂ ರಾಜ್ ಕುಮಾರ್ ಅಭಿನಯದಲ್ಲಿ “ಸಮಯದ ಗೊಂಬೆ” ಇವೆರಡೂ ಚಲನ ಚಿತ್ರಗಳು ಆಗಿವೆ. ಚಂದ್ರಿಕಾ ಕಾದಂಬರಿಯನ್ನು ಕೂಡ ಚಲನ ಚಿತ್ರಕ್ಕಾಗಿ ಕೇಳಿ ಪಡೆದಿದ್ದರು. ಆದರೆ ಯಾವುದೋ ಕಾರಣದಿಂದ ಅದು ಚಲನಚಿತ್ರ ಆಗಲಿಲ್ಲ.
- ಪ್ರಸ್ತುತ ದಿನಗಳಲ್ಲಿ ನಮ್ಮ ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ಏನು ಮಾಡಬಹುದು? ಈ ವಿಷಯದಲ್ಲಿ ನಿಮ್ಮ ಸಲಹೆ ಏನು?
ಮೊಬೈಲ್ ಮತ್ತು ಲ್ಯಾಬ್ ಟಾಪ್ ಹಿಡಿದು ವಿಡಿಯೋ ಗೇಮ್ಸ್ ಆಡುವುದು ಇಂದಿನ ಮಕ್ಕಳ ಹವ್ಯಾಸವಗಿರುವುದು ನಿಜಕ್ಕೂ ದುರಂತ. ಪೋಷಕರು ಹಾಗೂ ಶಿಕ್ಷಕರು ಕೂಡಿ ಈ ಸಮಸ್ಯೆಗೆ ಪರಿಹಾರವನ್ನು ಕಾಣಬೇಕು. ಆಕರ್ಷಕ ಪುಸ್ತಕಗಳನ್ನು ತೋರಿಸಿ ಓದಲು ಹುರಿದುಂಬಿಸಬೇಕು. ನಾನು ಶಿಕ್ಷಕಿ ಆಗಿದ್ದಾಗ ಮಕ್ಕಳಿಗೆ ಕಥೆ ಹೇಳಿ ಆ ಪುಸ್ತಕವನ್ನು ಓದಲು ಹುರಿದುಂಬಿಸುತ್ತಿದ್ದೆ. ನಂತರ ಅದರ ಬಗ್ಗೆ ಪ್ರಬಂಧ ಬರೆಯಲು ಹೇಳುತ್ತಿದ್ದೆ.ಈಗ ಇನ್ನೂ ಅನೇಕ ವಿಧಾನಗಳಿವೆ. ಮೊದಲು ಮನೆಯಲ್ಲಿ ಹಿರಿಯರು ಓದುವ ಅಭ್ಯಾಸ ಮಾಡಿಕೊಂಡರೆ ಮಕ್ಕಳಲ್ಲೂ ಓದುವ ಅಭ್ಯಾಸ ತಂತಾನೇ ಮೂಡುತ್ತದೆ.
- ನಿಮ್ಮ ಇಷ್ಟದ ಲೇಖಕರು ಯಾರು, ನೀವು ಮತ್ತೆ ಮತ್ತೆ ಓದಿದ ಕೃತಿಗಳ ಬಗ್ಗೆ ಹೇಳಿ. ಹಾಗೆ ನೀವು ಆಸೆಪಟ್ಟು ನಿಮ್ಮ ಇಷ್ಟದ ಲೇಖಕರನ್ನು ಭೇಟಿಯಾಗಿ ಮಾತನಾಡಿಸಿದ ಕ್ಷಣದ ನೆನಪುಗಳನ್ನು ಹಂಚಿಕೊಳ್ಳಿ.
ತ್ರಿವೇಣಿ ಅಚ್ಚು ಮೆಚ್ಚಿನ ಲೇಖಕಿ. ವಾಣಿ, ಅರ್ಯಾಂಬ ಪಟ್ಟಾಭಿ , ಎಂ.ಕೆ.ಇಂದಿರಾ ಅವರ ಕಾದಂಬರಿಗಳನ್ನು ಹೆಚ್ಚು ಓದುತ್ತಿದ್ದೆ. ಕೆ. ವಿ ಅಯ್ಯರ್, ತ.ರಾ.ಸು, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಶಿವರಾಮ ಕಾರಂತರ ಕಾದಂಬರಿಗಳನ್ನು ಇಷ್ಟಪಟ್ಟು ಓದುತ್ತಿದ್ದೆ. ಇದರೊಂದಿಗೆ ಸಮಕಾಲೀನ ಲೇಖಕ ಲೇಖಕಿಯರು ಎಲ್ಲರ ಕಾದಂಬರಿಗಳನ್ನು ಓದಿ ಮೆಚ್ಚುತ್ತಿದ್ದೆ.
ಹಿಂದಿ, ಇಂಗ್ಲೀಷ್, ತಮಿಳಿನಲ್ಲೂ ಅತ್ಯುತ್ತಮ ಕಾದಂಬರಿ ಗಳನ್ನು ಓದುತ್ತಿದ್ದೆ ಶರತ್ಚಂದ್ರ, ರವೀಂದ್ರ ನಾಥ ಟ್ಯಾಗೂರ್, ಮುಂಶಿ ಪ್ರೇಮ್ ಚಂದ್. ತಮಿಳಿನಲ್ಲಿ ಕಲ್ಕಿ, ಶಿವಶಂಕರಿ, ಸುಜಾತ ಇವರೆಲ್ಲರ ಕಾದಂಬರಿಗಳನ್ನು ಓದುತ್ತಿದ್ದೆ. ಇಂಗ್ಲಿಷ್ ನಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಪರ್ಲ್ ಬಕ್ ರ ಕಾದಂಬರಿ, ಇನ್ನೂ ಹಲವಾರು ಉತ್ತಮ ಪುಸ್ತಕಗಳನ್ನು ಓದುತ್ತಿದ್ದೆ.
ನಾನು ಆಗಾಗ ಭೇಟಿಯಾಗುತ್ತಿದ್ದ ಲೇಖಕಿ ಎಂದರೆ ಶ್ರೀಮತಿ ಎಂ.ಕೆ. ಇಂದಿರಾ ಅವರು. ನಾನು ಕೆಲಸ ಮಾಡುತ್ತಿದ್ದ ಶಾಲೆಯ ಹತ್ತಿರ ಇದ್ದ ಅವರ ಮನೆಗೆ ಆಗಾಗ ಭೇಟಿ ಕೊಡುತ್ತಿದ್ದೆ. ಅವರ ಕಾದಂಬರಿಗಳ ಕುರಿತು ನಾನು ಮೆಚ್ಚುಗೆ ವ್ಯಕ್ತಪಡಿಸಿದಾಗ ಅವರು ನಾವೆಲ್ಲ ಹಳೆಯ ಕಾಲದವರು, ನೀವು ಈಗಿನವರು ಹೆಚ್ಚು ಓದಿದವವರು ತುಂಬಾ ಚೆನ್ನಾಗಿ ಬರೆಯುತ್ತಿರ ಎನ್ನುತ್ತಿದ್ದರು.

- ನೀವು ಉದ್ಯೋಗಸ್ಥೆ ಕೂಡಾ ಆಗಿದ್ದಿರಿ ಅಲ್ಲವೇ? ವೃತ್ತಿಜೀವನ, ಗೃಹಿಣಿಯ ಜವಾಬ್ದಾರಿಗಳ ನಡುವೆ ಬರವಣಿಗೆಗೆ ಹೇಗೆ ಸಮಯ ಹೊಂದಿಸಿಕೊಳ್ಳುತ್ತಿದ್ದಿರಿ.
ಬೆಳಗಿನ ಹೊತ್ತು ಮನೆ ಕೆಲಸ, ಅಡಿಗೆ ತಿಂಡಿ ಶಾಲೆಯ ಕೆಲಸ ಮತ್ತೆ ಸಂಜೆ ಮನೆಗೆ ಬಂದು ಉಳಿದ ಕೆಲಸ ಕಾರ್ಯಗಳನ್ನು ಮುಗಿಸಿ ರಾತ್ರಿ 12 ರಿಂದ 23 ಘಂಟೆಯ ವರೆಗೂ ಬರೆಯುತ್ತಿದ್ದೆ. ಮತ್ತೆ ಬೆಳಗಿನ ಜಾವದಲ್ಲೆ ಎದ್ದು ಬರವಣಿಗೆಯನ್ನು ಮುಂದುವರೆಸುತ್ತಿದ್ದೆ. ಶಾಲೆಯ ರಜಾ ದಿನಗಳಲ್ಲಿ ಬರವಣಿಗೆಗೆ ಹೆಚ್ಚಿನ ಸಮಯ ಸಿಗುತ್ತಿತ್ತು. ಎಷ್ಟೇ ಕೆಲಸದ ಒತ್ತಡ ಇದ್ದರೂ ಒಂದು ದಿನವೂ ಬರವಣಿಗೆಯನ್ನು ತಪ್ಪುತ್ತಿರಲಿಲ್ಲ. ಬೆಳಗಿನ ಹೊತ್ತು ಬೇರೆ ಕೆಲಸ ಮಾಡುವಾಗ ಕಾದಂಬರಿಯ ಪಾತ್ರಗಳ ರೂಪು ರೇಷೆಗಳನ್ನು ಮನದಲ್ಲೇ ತಯಾರಿಸಿ ಇಟ್ಟುಕೊಳ್ಳುತ್ತಿದ್ದೆ. ಹಾಗಾಗಿ ಬರೆಯಲು ಕುಳಿತಾಗ ಸಲೀಸಾಗಿ ಸಾಗುತ್ತಿತ್ತು ನನ್ನ ಬರವಣಿಗೆ
- ಹೊಸ ಲೇಖಕರಿಗೆ ನಿಮ್ಮ ಸಂದೇಶವೇನು?
ಹಿಂದೆಲ್ಲ ಯಾವುದಾದರೂ ವಿಷಯವನ್ನು ಕುರಿತು ಕಾದಂಬರಿ ಬರೆಯಬೇಕು ಎಂದರೆ ಅದರ ಬಗ್ಗೆ ತಿಳಿಯಲು ಓದು ಒಂದೇ ಸಾಧನವಾಗಿತ್ತು. ಗ್ರಂಥಾಲಯಗಳಲ್ಲಿ ಹುಡುಕಿ ನಮಗೆ ಬೇಕಾದ ಮಾಹಿತಿ ಸಂಗ್ರಹಿಸಿ ನಂತರ ಬರೆಯಬೇಕಿತ್ತು. ಆದರೆ ಈಗ ಪ್ರಪಂಚ ಮುಂದುವರೆದಿದೆ ಹಾಗೆಯೇ ಸಮಸ್ಯೆಗಳೂ ಹೆಚ್ಚಾಗಿವೆ. ಸಮಾಜ ಘಾತುಕ ವಿಷಯಗಳು, ಸ್ತ್ರೀಯರ ಸಮಸ್ಯೆಗಳು ಎಲ್ಲವೂ ಹೆಚ್ಚಾಗಿವೆ. ವಸ್ತು ವಿಷಯಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿ ಅಂಗೈನಲ್ಲಿ ಸಿಗುತ್ತದೆ, ಬರವಣಿಗೆ ಸುಲಭವಾಗಿದೆ. ಈಗಿನ ಯುವ ಲೇಖಕರು ಈ ಸಮಸ್ಯೆಗಳ ಕುರಿತು ಹಾಗೇ ಅದರಿಂದ ಹೊರ ಬರುವ ದಾರಿಗಳ ಕುರಿತು ಬರೆಯಬೇಕು. ಹೆಚ್ಚು ಹೆಚ್ಚು ಸಮಾಜಮುಖಿಯಾಗಿ ಚಿಂತಿಸಿ ಬರೆದರೆ ಉತ್ತಮ.
ಕಥೆ ಕಾದಂಬರಿ ಯಾವುದೇ ಆಗಿರಲಿ ಪಾತ್ರದ ಪರಕಾಯ ಪ್ರವೇಶ ಮಾಡಿ, ಅಂದರೆ ಆ ಪಾತ್ರವೇ ನಾವಾಗಿ ಅನುಭವಿಸಿ ಬರೆದಾಗ ಅದು ಅತ್ಯುತ್ತಮವಾಗಿ ಮೂಡಿ ಬರುತ್ತದೆ.
ಕೃಪೆ : ಪುಸ್ತಕ ಅವಲೋಕನ
- ಸಂದರ್ಶನ : ವಸಂತ ಗಣೇಶ
