‘ಚೌಚೌ ಬಾತ್’ ಅಂಕಣ (ಭಾಗ – ೨೩)

ಅಪ್ಪ ಸತ್ತು ಹೋದ …. ಇನ್ನು ನಮಗೆ ಯಾರು ದಿಕ್ಕು? ನಾವೇನು ಮಾಡಬೇಕು ? ಎಂದು ತಲೆ ಮೇಲೆ ಕೈಹೊತ್ತು ಕೂರಲಿಲ್ಲ. ಬದುಕು ಬಂದಂತೆ ಬರಲಿ ಎಲ್ಲವನ್ನು ಸ್ವೀಕರಿಸೋಣ ಎಂಬ ದೃಢ ನಿರ್ಧಾರದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕ ಗಳಿಸಿದಳು. ಇದು ನಮ್ಮ ಶಾಲೆಯಲ್ಲಿ ನಡೆದ ನೈಜ ಘಟನೆ. ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಸೋಲೇ ಗೆಲುವಿನ ಸೋಪಾನ’, ತಪ್ಪದೆ ಮುಂದೆ ಓದಿ … 

ತೀರಾ ಇತ್ತೀಚೆಗೆ ನಮ್ಮ ಶಾಲೆಯಲ್ಲಿ ನಡೆದ ಘಟನೆಯೊಂದು ನೆನಪಾಗುತ್ತಿದೆ. ನಮ್ಮ ಶಾಲೆಯಲ್ಲಿ ನಾಲ್ಕು ತಿಂಗಳ ಹಿಂದೆಯಷ್ಟೇ ಎಸ್‌. ಎಸ್. ಎಲ್‌. ಸಿ ಮಕ್ಕಳಿಗೆ ಜಿಲ್ಲಾ ಹಂತದ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿದೆವು. ಸೌಮ್ಯ (ಹೆಸರು ಬದಲಿಸಲಾಗಿದೆ) ಎಂಬ ಪ್ರತಿಭಾವಂತ ವಿದ್ಯಾರ್ಥಿನಿ ಮೊದಲ ಎರಡು ಪರೀಕ್ಷೆಗೆ ಹಾಜರಾಗಿದ್ದಳು. ಎರಡನೇ ಮತ್ತು ಮೂರನೇ ದಿನ ಅವಳು ಗೈರುಹಾಜರಾದಳು. ಏಕಿರಬಹುದು ಎಂದು ಪರೀಕ್ಷೆಯ ನಂತರ ಅವಳನ್ನು ಕರೆದು ವಿಚಾರಿಸಿದಾಗ ಅವಳ ಕಥೆ ಕೇಳಿ ಕಣ್ಣಂಚು ತೇವವಾಯಿತು.

ಅವಳ ತಂದೆ ಗೋಪಾಲಪ್ಪ ಬಡ ರೈತನಾಗಿದ್ದು, ಜವಾಬ್ದಾರಿ ಇಲ್ಲದ ಬಹಳ ಸೋಮಾರಿಯಾದ ವ್ಯಕ್ತಿಯಾಗಿರುತ್ತಾನೆ. ಹೆಂಡತಿಯನ್ನು ಹೊಡೆದು ಬಡಿದು ಮಾಡುತ್ತಾ ಕಾಲ ಕಳೆಯುತ್ತಿದ್ದ. ಅಷ್ಟೇ ಅಲ್ಲದೆ ಮೈತುಂಬಾ ಸಾಲ ಮಾಡಿಕೊಂಡು ಇಸ್ಪೀಟ್ ಆಟ ಆಡಿಕೊಂಡು ಕಾಲ ಕಳೆಯುತ್ತಿದ್ದ. ಸಾಲ ಕೊಟ್ಟವರು ಬಂದು ಕೇಳಿದಾಗ ಒಂದು ತಿಂಗಳ ಮಟ್ಟಿಗೆ ತಲೆಮರೆಸಿಕೊಂಡು ಎಲ್ಲೋ ಓಡಿಹೋಗಿ ನಂತರ ಮನೆಗೆ ಬಂದು ಇದ್ದಕ್ಕಿದ್ದಂತೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಯಸ್ಸಿಗೆ ಬಂದ ಇಬ್ಬರು ಹೆಣ್ಣು ಮಕ್ಕಳನ್ನೂ, ಚಿಕ್ಕ ಮಗನನ್ನು ಸಾಕಿ ಸಲಹುವ ಅವರ ಜೀವನ ರೂಪಿಸುವ ಮಹತ್ವದ ಜವಾಬ್ದಾರಿ ಆಕೆಯ ತಾಯಿಯದ್ದಾಗುತ್ತದೆ. ಇಂತಹ ಬೇಜಾವಾಬ್ದಾರಿ ವ್ಯಕ್ತಿಯಿಂದ ಆ ಕುಟುಂಬ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ ? ಹೇಗೂ ಕುಟುಂಬದ ಜವಾಬ್ದಾರಿಯನ್ನು ಮೊದಲಿನಿಂದಲೂ ಹೊತ್ತಿದ್ದ ಆಕೆಯ ತಾಯಿಗೆ ಇದೇನು ಹೊಸದಾಗಿರಲಿಲ್ಲ. ಆತನ ಸಾವಿನಿಂದ ತಾಳಿ ಕಳೆದುಕೊಂಡಿದ್ದಳಷ್ಟೇ. ಪ್ರತಿನಿತ್ಯ ಸಂಜೆಗೆ ಆತನ ಕುಡಿತಕ್ಕೆ ಆಕೆಯೇ ಹಣ ಹೊಂದಿಸಿ ಕೊಡಬೇಕಿತ್ತು. ಇಂತಹ ಗಂಡ ಇರೋದಕ್ಕಿಂತ ಸಾಯುವುದೇ ಮೇಲು ಎಂದು ಆಕೆ ದಿನನಿತ್ಯ ಅದೆಷ್ಟು ಹಿಡಿ ಶಾಪ ಹಾಕಿದ್ದಳೋ ಏನೋ. ರಾತ್ರಿ ಕುಡಿದು ಬರುವುದಲ್ಲದೆ ಅವಳನ್ನು ಹೊಡೆದು ಬಡಿದು ಪ್ರತಿನಿತ್ಯ ಹಿಂಸಿಸುತ್ತಿದ್ದ. ಇದು ಸೌಮ್ಯಳ ಮನೆಯಲ್ಲಿ ದಿನವೂ ನಡೆಯುತ್ತಿದ್ದ ಸಾಮಾನ್ಯ ಸಂಗತಿಯಾಗಿತ್ತು.

ಫೋಟೋ ಕೃಪೆ :google (ಸಾಂದರ್ಭಿಕ ಚಿತ್ರ)

ಸೌಮ್ಯಳ ತಾಯಿ ಕೂಲಿ ಮಾಡದೆ ವಿಧಿ ಇರಲಿಲ್ಲ. ತನ್ನ ತಂದೆಯ ಅನಿರೀಕ್ಷಿತ ಸಾವಿನಿಂದ ಧೃತಿಗೆಡದ ಸೌಮ್ಯ ಯಾವುದೇ ಕಾರಣಕ್ಕೂ ವಿಚಲಿತಳಾಗಲಿಲ್ಲ. ಏಕಾಗ್ರತೆಯಿಂದ ಚೆನ್ನಾಗಿ ಅಭ್ಯಾಸ ಮಾಡಿ ಎಸ್. ಎಸ್. ಎಲ್. ಸಿ. ಮುಖ್ಯ ಪರೀಕ್ಷೆಯಲ್ಲಿ ಇಡೀ ಶಾಲೆಗೆ ಎರಡನೆಯವಳಾಗಿ 90 ಪರ್ಸೆಂಟ್ ಅಂಕ ಗಳಿಸಿದಳು. ತನ್ನ ತಂದೆಯ ಸಾವಿನಲ್ಲೂ ಕಂಗಾಲಾಗದೆ ದೃಢ ನಿಶ್ಚಯದಿಂದ ಜೀವನದಲ್ಲಿ ಎದುರಾದ ಸಮಸ್ಯೆ ಎಂಬ ಸೋಲನ್ನು ಹಿಮ್ಮೆಟ್ಟಿ ಗೆಲುವಿನ ಸೋಪಾನ ಏರಿದಳು. ಇವಳ ಸ್ಥಾನದಲ್ಲಿ ಬೇರೆ ಯಾರೇ ಇದ್ದಿದ್ದರೂ ತಂದೆಯ ಸಾವಿನ ನೆಪ ಮಾಡಿಕೊಂಡು ಶಾಲೆಗೆ ಸರಿಯಾಗಿ ಹೋಗದೆ ಬದ್ಧತೆಯಿಂದ ಓದದೆ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದರು. ಜೊತೆಗೆ ನೆಂಟರಿಷ್ಟರ, ಅಕ್ಕಪಕ್ಕದ ಮನೆಯವರ ಅನುಕಂಪ ಗಿಟ್ಟಿಸುತ್ತಾ ಕಾಲ ಕಳೆಯುತ್ತಿದ್ದರು. ಆದರೆ ಹಾಗಾಗದೆ ಸೌಮ್ಯ ಮನೆಯ ಹಿರಿಮಗಳಾಗಿ ಜವಾಬ್ದಾರಿ ಹೊತ್ತು ತನ್ನ ತಂಗಿ ಹಾಗೂ ತಮ್ಮನಿಗೆ ಮಾದರಿಯಾಗಿದ್ದಾಳೆ. ಮುಂದೆ ಐಎಎಸ್ ಮಾಡಿ ಉನ್ನತ ಅಧಿಕಾರಿಯಾಗಬೇಕೆಂಬ ಆಶಯದಲ್ಲಿದ್ದಾಳೆ. ನಮ್ಮ ಶಾಲೆಗೆ ಕೀರ್ತಿ ತಂದ ಸೌಮ್ಯಳಿಗೆ ಶುಭ ಕೋರಿ ಬೀಳ್ಕೊಟ್ಟೆವು.

ಹೀಗೆ ಸೌಮ್ಯ ತನ್ನ ಬದುಕಿನಲ್ಲಿ ಎದುರಾದ ದೊಡ್ಡ ಸಮಸ್ಯೆಗೂ ಸಹ ಎದೆಗುಂದದೆ ದಿಟ್ಟ ಹೆಜ್ಜೆ ಇಟ್ಟು ಮುಂದೆ ಸಾಗಿದಳು. ಜೀವನದಲ್ಲಿ ಎದುರಾದ ಸೋಲನ್ನೇ ಗೆಲುವಿನ ಸೋಪಾನವಾಗಿಸಿಕೊಂಡಳು. ಅಪ್ಪ ಸತ್ತು ಹೋದ …. ಇನ್ನು ನಮಗೆ ಯಾರು ದಿಕ್ಕು? ನಾವೇನು ಮಾಡಬೇಕು ? ಎಂದು ತಲೆ ಮೇಲೆ ಕೈಹೊತ್ತು ಕೂರಲಿಲ್ಲ. ಬದುಕು ಬಂದಂತೆ ಬರಲಿ ಎಲ್ಲವನ್ನು ಸ್ವೀಕರಿಸೋಣ ಎಂಬ ದೃಢ ನಿರ್ಧಾರದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕ ಗಳಿಸಿದಳು. ಇದು ನಮ್ಮ ಶಾಲೆಯಲ್ಲಿ ನಡೆದ ನೈಜ ಘಟನೆ. ಬದುಕಿನಲ್ಲಿ ಏನೆಲ್ಲಾ ಕಷ್ಟ ನಷ್ಟಗಳು ಉಂಟಾದರೂ ಸಮಚಿತ್ತದಿಂದ, ಸಮಭಾವದಿಂದ ಎಲ್ಲವನ್ನೂ ಸ್ವೀಕರಿಸುವ ಮನಸ್ಸು ನಮ್ಮದಾಗಬೇಕು ಎಂಬುದಕ್ಕೆ ಇದೊಂದು ನೈಜ ಉದಾಹರಣೆಯಾಗಿದೆ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವಮಂಗಳ ಜಯರಾಮ್ – ಶಿಕ್ಷಕಿ. ಗೌರಿಬಿದನೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW