ಯಾವ ಕೆಲಸವೂ ಸುಲಭವಲ್ಲ. ಎಲ್ಲಾ ಕೆಲಸಗಳನ್ನು ಶ್ರಮವಹಿಸಿ ಕಾರ್ಯಯೋಜನೆ ರೂಪಿಸಿ ಮಾಡಬೇಕು. ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ಸುಲಭವೇನೇ ಗೆಳತಿ, ತಪ್ಪದೆ ಮುಂದೆ ಓದಿ…
ಯಾವುದೇ ಒಂದು ಕೆಲಸವಾಗಲಿ, ಕಾರ್ಯವಾಗಲಿ ಹೇಳಿದಷ್ಟು ಸುಲಭವಲ್ಲ ಮಾಡುವುದು. ಯಾವುದೇ ಒಂದು ಕಾರ್ಯ ಕೈಗೊಂಡರೆ ಅದರ ಹಿಂದೆ ಕಾರ್ಯತಂತ್ರ, ಯೋಜನೆ,ಸಿದ್ಧತೆ ಮುಂತಾದ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಂದುವರಿಯಬೇಕಾಗುತ್ತದೆ.ಆ ಕಾರ್ಯದ ಯಶಸ್ಸು, ವಿಫಲತೆ, ಕಾರಣಗಳು, ಪರಿಣಾಮಗಳು ಮುಂತಾದ ಪ್ರಕ್ರಿಯೆಗಳನ್ನು ಗಮನಿಸಬೇಕಾಗುತ್ತದೆ. ಹಾಗೆಯೇ ಪ್ರತಿಯೊಂದು ಕಾರ್ಯಕ್ಕೂ ಪೂರ್ವ ಸಿದ್ಧತೆ ಅಥವಾ ಪೂರ್ವ ತಯಾರಿ ಇರಲೇಬೇಕಾಗುತ್ತದೆ. ಯಾಕೆಂದರೆ ಯಾವುದೇ ಕಾರ್ಯವನ್ನು ಪ್ರಿಪರೇಷನ್ ಇಲ್ಲದೆ ಮಾಡಲು ಹೋದರೆ ಆ ಕಾರ್ಯ ಅಷ್ಟೊಂದು ಪರಿಣಾಮಕಾರಿಯಾಗುವುದಿಲ್ಲ ಹಾಗೂ ಸಫಲವಾಗುವುದಿಲ್ಲ ಎಂಬುದು ನನ್ನ ಅನಿಸಿಕೆ.

ಉದಾಹರಣೆಗೆ ಶಿಕ್ಷಕರಾದರೆ ಬೋಧನಾ ಪ್ರಕ್ರಿಯೆಯಲ್ಲಿ ತೊಡಗಿದಾಗ ನಾವು ಬೋಧನೆಗೆ ಆಯ್ದುಕೊಂಡ ವಿಷಯದ ಮೇಲೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಆ ವಿಷಯವನ್ನು ಭೋದಿಸುವ ಅವಧಿ, ಅವಧಿಗನುಗುಣವಾಗಿ ನಾವು ತೆಗೆದುಕೊಳ್ಳಬೇಕಾದ ವಿಷಯ, ಆ ವಿಷಯಕ್ಕೆ ಸಂಬಂಧಿಸಿದ ಹಾಗೂ ಸೂಕ್ತವಾದ ಬೋಧನೋಪಕರಣಗಳು, ಪೀಠಿಕೆಯಲ್ಲಿ ಕೇಳಬಹುದಾದ ಸಮಂಜಸವಾದ ಪ್ರಶ್ನೆಗಳು, ಪಾಠದ ಬೆಳವಣಿಗೆಯಲ್ಲಿ ವಿವರಿಸಬಹುದಾದ ಅಂಶಗಳು, ಕೊಡಬಹುದಾದ ಉದಾಹರಣೆಗಳು, ಕೊನೆಯಲ್ಲಿ ಅಂತಿಮವಾಗಿ ಮೌಲ್ಯಮಾಪನದಲ್ಲಿ ಕೇಳಬಹುದಾದ ಪ್ರಶ್ನೆಗಳು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ನಿಗಧಿತಾವಧಿಯವರೆಗೂ ಮಕ್ಕಳ ಅವಧಾನವನ್ನು ಹಿಡಿದಿಡುವಂತಹ ಚಟುವಟಿಕೆಗಳು. ಗೃಹ ಕಾರ್ಯದಲ್ಲಿ ನೀಡಬಹುದಾದ ಪ್ರಶ್ನೆಗಳು. ಹೀಗೆ ಒಂದು ದಿನದ ಒಂದು ಅವಧಿಯ ಪಾಠ ಬೋಧನೆಗೆ ಇಷ್ಟೆಲ್ಲ ಪೂರ್ವ ತಯಾರಿ ಇರಬೇಕಾಗುತ್ತದೆ. ಏನೂ ತಯಾರಿ ಇಲ್ಲದೆ ಹೋದರೆ ಮಕ್ಕಳ ಮುಂದೆ ಅಭಾಸವಾಗುತ್ತದೆ. ಅಂದರೆ ಪಾಠ ಬೋಧನಾ ಕಾರ್ಯವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ.
ಹಾಗೆಯೇ ಗೃಹಿಣಿಯಾದರೆ ನಾಳೆ ಮಾಡಬೇಕಾದ ತಿಂಡಿ, ಅಡುಗೆಯ ಬಗ್ಗೆ ಹಿಂದಿನ ದಿನವೇ ಯೋಚಿಸಿರಬೇಕಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಲಭ್ಯವಿರುವ ತರಕಾರಿಗಳನ್ನು ನೋಡಿಕೊಳ್ಳಬೇಕಾಗುತ್ತದೆ. ನಂತರ ಅದಕ್ಕೆ ಬೇಕಾದ ಅಡುಗೆ ಸಾಮಾಗ್ರಿಗಳನ್ನು ಪರಿಶೀಲಿಸಿಕೊಳ್ಳಬೇಕಾಗುತ್ತದೆ.ಕೆಲಸಕ್ಕೆ ಹೋಗುವವರಾದರೆ ಬೆಳಗ್ಗೆ ಎದ್ದು ತರಕಾರಿ ಹಚ್ಚಿಕೊಳ್ಳಲು ತಡವಾಗುತ್ತದೆ ಎಂದು ರಾತ್ರಿಯೇ ಹಚ್ಚಿಟ್ಟು ಫ್ರಿಡ್ಜ್ ನಲ್ಲಿ ತುಂಬಬೇಕಾಗುತ್ತದೆ. ಬೆಳ್ಳುಳ್ಳಿ ಶುಂಠಿ ಸ್ವಚ್ಛ ಮಾಡಿ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿ ಅದನ್ನು ಫ್ರಿಜ್ನಲ್ಲಿ ಇಡಬೇಕು. ಅಡುಗೆ ಮಾಡುವಾಗ ತಡವಾಗಬಾರದೆಂದು ಮೊದಲೇ ಕಾಯಿತುರಿದು ಬಾಕ್ಸ್ ನಲ್ಲಿ ಹಾಕಿ ಎತ್ತಿಡಬೇಕು. ಇನ್ನು ಕೆಲವರು ರಾತ್ರಿಯೇ ಚಪಾತಿ ಮಾಡಿ ಅರೆಬರೆ( ಹಾಫ್ ಬಾಯ್ಲ್ಡ್) ಸುಟ್ಟು ಎತ್ತಿಟ್ಟು ಬೆಳಿಗ್ಗೆ ಮತ್ತೆ ಬಿಸಿ ಮಾಡಿಕೊಂಡು ಟಿಫನ್ ಗೆ ಬಳಸುತ್ತಾರೆ. ಇನ್ನು ಕೆಲವರು ಹುಣಸೆ ಹಣ್ಣು ತೊಳೆದು ನೆನೆಸಿ ರಸ ಹಿಂಡುವುದು ತಡವಾಗುತ್ತದೆ ಎಂದು ಮೊದಲೇ ಹುಣಿಸೆ ರಸ ಸಿದ್ಧಪಡಿಸಿ ಒಂದು ಬಾಕ್ಸ್ ನಲ್ಲಿ ಶೇಕರಿಸಿ ಇಟ್ಟುಕೊಳ್ಳುತ್ತಾರೆ. ನಿಂಬೆ ರಸವನ್ನು ಹೀಗೆಯೇ ಸಂಗ್ರಹಿಸಿಕೊಳ್ಳುತ್ತಾರೆ. ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಕೂಡ ಮೊದಲೇ ತಯಾರಿಸಿ ಇಟ್ಟುಕೊಂಡು ಅವಶ್ಯಕತೆ ಇದ್ದಾಗ ಬಳಸುತ್ತಾರೆ. ಇಷ್ಟೆಲ್ಲ ತಯಾರಿ ಮಾಡಿಕೊಂಡು ರಾತ್ರಿ ಮಲಗಿ ಬೆಳಗ್ಗೆ ಎದ್ದು ಹಚ್ಚಿಟ್ಟ ತರಕಾರಿ ಹಾಗೂ ಮೊದಲೇ ಹೊಂದಿಸಿಕೊಂಡ ಸಾಮಗ್ರಿಗಳನ್ನು ಸೇರಿಸಿ ಕುಕ್ಕರ್ ಜೋಡಿಸಿ ಫಟಾಫಟ್ ಅಡಿಗೆ ಮಾಡಿ ಬಿಡುತ್ತಾರೆ. ಅದೇ ಬೆಳಗ್ಗೆ ಎದ್ದು ತರಕಾರಿ ಹೆಚ್ಚಿಕೊಂಡು ಅದಕ್ಕೆ ತಕ್ಕ ಸಾಮಗ್ರಿ ಹೊಂದಿಸಿಕೊಂಡು ಅಡಿಗೆ ಮಾಡಬೇಕೆಂದರೆ ತುಂಬಾ ತ್ರಾಸದಾಯಕ. ಅದು ಅಲ್ಲದೆ ಸಮಯ ಇಲ್ಲದಿದ್ದಾಗ ಗಡಿಬಿಡಿಯಲ್ಲಿ ಏನೋ ಮಾಡಲು ಹೋಗಿ ಏನೋ ಎಡವಟ್ಟು ಮಾಡಿಬಿಡುತ್ತೇವೆ. ಆದ್ದರಿಂದ ಪ್ರತಿಯೊಂದು ಕಾರ್ಯಕ್ಕೂ ಪೂರ್ವ ತಯಾರಿ ಅತ್ಯವಶ್ಯಕ.

ಯಾವುದೂ ಸುಲಭವಲ್ಲ. ಆದರೆ ಹಿಂದಿನ ಕಾಲಕ್ಕೆ ಹೋಲಿಸಿಕೊಂಡರೆ ಈಗಿನ ಕಾಲದ ಅಡುಗೆ ತಯಾರಿ ಅಷ್ಟೇನೂ ಕಷ್ಟ ಎನಿಸುವುದಿಲ್ಲ. ಮೊದಲೇ ಹೆಚ್ಚಿದ ತರಕಾರಿಗಳು ಕೊಳೆಯದಂತೆ ಉಳಿಸಿಕೊಳ್ಳಲು,ಶೇಖರಿಸಿಕೊಳ್ಳಲು ಈಗ ನಮಗೆ ಫ್ರಿಡ್ಜ್ ಇದೆ. ಸುಲಭವಾಗಿ ಅಡುಗೆ ಮಾಡಲು ಗ್ಯಾಸ್ ಇದೆ ಕುಕ್ಕರ್ ಇದೆ. ನೀರಿನ ಸೌಲಭ್ಯವವಂತೂ ಮನೆಯ ತುಂಬಾ ಇರುತ್ತದೆ. ಎಲ್ಲಿ ಕೈ ಇಟ್ಟರೆ ಅಲ್ಲೇ ನಲ್ಲಿ ಇರುತ್ತದೆ. ಒರಳು ಕಲ್ಲಿನಲ್ಲಿ ರಬ್ಬುವ ಮಾತೇ ಇಲ್ಲ. ಗ್ರೈಂಡರ್, ಮಿಕ್ಸಿ ಗಳು ಹೊರಳು ಕಲ್ಲಿಗೆ ಪರ್ಯಾಯವಾಗಿ ಬಂದು ಹಲವಾರು ದಶಕಗಳೇ ಕಳೆದಿವೆ, ಪಾತ್ರೆ ತೊಳೆಯಲು ಡಿಶ್ ವಾಷರ್ಗಳು ಕೂಡ ಬಂದಿವೆ.
ಅದೇ ಹಿಂದಿನ ಕಾಲದಲ್ಲಾದರೆ ಗೃಹಿಣಿಯರ ಗೋಳು ಹೇಳತೀರದು . ಕನಿಷ್ಠ ಎಂಟು, ಗರಿಷ್ಠ ಇಪ್ಪತ್ತು ಮೂವತ್ತು ಜನರಿದ್ದ ಅವಿಭಕ್ತ ಕುಟುಂಬದಲ್ಲಿ ಅಷ್ಟು ಜನಕ್ಕೆ ಸ್ನಾನಕ್ಕೆ, ಬಟ್ಟೆ ಹೊಗೆಯಲು, ಪಾತ್ರೆ ತೊಳೆಯಲು, ಅಡುಗೆಗೆ ಬಳಸಲು ಬೇಕಾಗುವಷ್ಟು ನೀರನ್ನು ಕೇವಲ ಬಾವಿಯಿಂದಲೇ ಸೇರಿ ತರಲಾಗುತ್ತಿತ್ತಂತೆ. ಅದು ಊರಿಗೆಲ್ಲ ಒಂದೇ ಬಾವಿ ಇರುತ್ತಿತ್ತು.
ಅಂದಿನ ಊಟಕ್ಕೆ ಬೇಕಾಗುವಷ್ಟು ರಾಗಿ ಅಂದೇ ಬೀಸಬೇಕು. ಅಂದೇ ಭತ್ತ ಕುಟ್ಟ ಬೇಕು, ಕೇರಬೇಕು, ಹಸನು ಮಾಡಬೇಕು, ಕಾಡಿನಿಂದ ಸೌದೆ ತರಬೇಕು, ಅಡುಗೆ ಮಾಡಬೇಕು, ಜೊತೆಗೆ ಮನೆಯ ಪಾತ್ರೆ ಪಡಗಗಳ ಸ್ವಚ್ಛತೆ, ಹಸು ಹೆಮ್ಮೆಗಳಿಗೆ ಹುಲ್ಲು ತರುವುದು, ಹಾಲು ಕರೆಯುವುದು, ಮಜ್ಜಿಗೆ ಮಾಡಿ ಬೆಣ್ಣೆ ತೆಗೆಯುವುದು ,ಹೊಲದ ಕೆಲಸದಲ್ಲಿ ಗಂಡಸರೊಂದಿಗೆ ಕೈಜೋಡಿಸುವುದು ಮುಂತಾದವು ಹೆಂಗಸರ ಕೆಲಸಗಳಾಗಿದ್ದವು. ಹೀಗೆ ಅಂದು ಇಂದು ಮುಂದು ಹೆಂಗಸರ ಕೆಲಸ ಕಾರ್ಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಆದರೆ ವಿಭಿನ್ನ ಕಾಲಘಟ್ಟದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳು ಆಗಿವೆ.

ಹಾಗೆಯೇ ಸರಳವಾಗಿ ಒಂದು ಮನೆ ಕಟ್ಟಬೇಕೆಂದರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೆಲ್ಲಾ ಕಾರ್ಯ ಯೋಜನೆಯನ್ನು ರೂಪಿಸಬೇಕಾಗುತ್ತದೆ. ಮೊದಲು ಒಂದು ನಿವೇಶನಕ್ಕೆ ಹಣ ಹೊಂದಿಸುವುದರಿಂದ ಹಿಡಿದು ಆ ನಿವೇಶನವು ಆಯಕಟ್ಟಿನ ಸ್ಥಳದಲ್ಲಿ ಇರುವುದೇ, ಮೂಲ ದಾಖಲೆಗಳು ಅಸಲಿಯಾಗಿವೆಯೇ , ಆ ನಿವೇಶನವು ನಗರ ವ್ಯಾಪ್ತಿಯಲ್ಲಿ ಬರುವುದೇ ಅಥವಾ ಹಳ್ಳಿಯ ವ್ಯಾಪ್ತಿಯಲ್ಲಿ ಬರುವುದೋ, ಮನೆ ಕಟ್ಟುವಾಗ ಅಧಿಕೃತ ಬ್ಯಾಂಕುಗಳಿಂದ ಸಾಲ ಸೌಲಭ್ಯ ದೊರೆಯುತ್ತದೆಯೇ … ಮನೆ ಕಟ್ಟಲು ಬೇಕಾಗುವ ಅಂದಾಜು ಮೊತ್ತ ಎಷ್ಟು ಮುಂತಾದ ವಿವರಗಳನ್ನು ಪರಿಶೀಲಿಸಬೇಕು ನಂತರ ವಾಸ್ತುತಜ್ಞರಿಂದ ಮನೆಯ ಯೋಜನೆಯನ್ನು ರೂಪಿಸಬೇಕು. ಮನೆಗೆ ಭದ್ರವಾದ ಅಡಿಪಾಯ ಹಾಕಬೇಕು. ಮನೆ ಕಟ್ಟಲು ಬರುವ ಆಳುಗಳನ್ನು ನಿಶ್ಚಿತ ಅವಧಿಯವರೆಗೂ ಬರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಕೆಲಸಗಾರರು ಕೈಕೊಟ್ಟರೆ ಯಾವ ಕೆಲಸವು ಮುಂದುವರಿಯುವುದಿಲ್ಲ. ಅದಕ್ಕೆಂದೆ ಹಿರಿಯರು ಹೇಳಿರುವುದು ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು . ಒಟ್ಟಿನಲ್ಲಿ ಯಾವ ಕೆಲಸವೂ ಸುಲಭವಲ್ಲ. ಎಲ್ಲಾ ಕೆಲಸಗಳನ್ನು ಶ್ರಮವಹಿಸಿ ಕಾರ್ಯಯೋಜನೆ ರೂಪಿಸಿ ಮಾಡಬೇಕು.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೮) – ಬಸ್ ಪಾಸ್ ಪ್ರಸಂಗ.
- ಸರ್ವಮಂಗಳ ಜಯರಾಮ್
