ರಾಮಾನುಜರಿಗೊಂದು ಕನ್ನಡಿ

ನನ್ನ ನಾಲ್ಕು ದಶಕಗಳಿಗೂ ಮಿಕ್ಕಿದ ಗೆಳೆಯರಾದ ಡಾ.ನಾ ಗೀತಾಚಾರ್ಯ ಅವರು ಈಚೆಗೆ ಸಂಪಾದಿಸಿದ ” ದಾಸರು ಕವಿಗಳು ಕಂಡ ರಾಮಾನುಜರು” ಎಂಬ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ದಾಸರು ಕವಿಗಳು ಕಂಡ ರಾಮಾನುಜರು
ಸಂಪಾದಕರು : ಡಾ.ನಾ ಗೀತಾಚಾರ್ಯ

ತಮಿಳುನಾಡಿನ ರಾಮಾನುಜರು ಅಲ್ಲಿ ಶೈವನಾದ ಚೋಳ ರಾಜನ ಕಿರುಕುಳ ತಡೆಯಲಾರದೆ ಕರ್ನಾಟಕಕ್ಕೆ ಬಂದ ನಂತರ ,ಇಲ್ಲಿ ತಮ್ಮ ವಿಶಿಷ್ಟಾದ್ವೈತದ ಪ್ರಚಾರ ಮಾಡಿದರು, ಮತ್ತು ದಲಿತರಿಗೆ ದೀಕ್ಷೆ ನೀಡಿ ಅವರನ್ನು ತಿರುಕುಲದವರು ಎಂದು ಕರೆದು ಗೌರವಿಸಿದರು. ಆಗ ರಾಜನಾಗಿದ್ದ ಜೈನ ಬಿಟ್ಟಿದೇವನನ್ನು ಶ್ರೀ ವೈಷ್ಣವ ನನ್ನಾಗಿಸಿ ವಿಷ್ಣುವರ್ಧನ ಎಂದು ಕರೆಯುತ್ತಾರೆ. ದೆಹಲಿಗೆ ಹೋಗಿ ಅಲ್ಲಿ ಸುಲ್ತಾನ್ ಕೊಂಡುಹೋಗಿದ್ದ ರಾಮನನ್ನು ಶೆಲ್ಲಪಿಳ್ಳೈ ಎಂದು ಕರೆದು ಯದುಗಿರಿಯ ಮೇಲುಕೋಟೆಗೆ ಕರೆತಂದು, ದೇವಾಲಯದಲ್ಲಿ ಪ್ರತಿಷ್ಠಾಪಿಸಿ ತಿರಕುಲದವರಿಂದ ಪ್ರತಿ ವರ್ಷ ವೈರಮುಡಿ ಉತ್ಸವವನ್ನು ಏರ್ಪಡಿಸುತ್ತಾರೆ. ಅಲ್ಲದೆ ರಾಮನನ್ನು ಬಿಟ್ಟು ಇರಲಾರದ ಸುಲ್ತಾನರ ಮಗಳು ಜತೆಗೆ ಬಂದಾಗ ಅವಳನ್ನು ‘ ಬೀಬಿ ನಾಚ್ಚಿಯಾರ್” ಎಂದು ಕರೆದು ಅವಳ ವಿಗ್ರಹವನ್ನು ಅದೆ ದೇವಾಲಯದಲ್ಲಿ ಪ್ರತಿಷ್ಠಿಸುತ್ತಾರೆ. ಇದೊಂದು ಅಪೂರ್ವ ಸಂಗತಿಯೆ ಸರಿ .ಅವರು ಮಾಡಿದ ಹಲವಾರು ಜನಪರ ಕಾರ್ಯಗಳನ್ನು ನಿರೂಪಿಸಿದ್ದಾರೆ. ವಿಶಿಷ್ಟಾದ್ವೈತ ದರ್ಶನದ ಪರಿಕಲ್ಪನೆಗಳನ್ನು‌ (ಪ್ರಪತ್ತಿ, ಹರಿಸರ್ವೋತ್ತಮ ಇತ್ಯಾದಿ) ಸಾರವತ್ತಾಗಿ ತಮ್ಮ ಸಂಪಾದಕೀಯದಲ್ಲಿ ಮಂಡಿಸಿದ್ದಾರೆ. ಅವರ ನಂತರ ಸುಮಾರು ನಾಲ್ಕು ನೂರು ವರ್ಷಗಳ ಕಾಲ ಲುಪ್ತವಾಗಿದ್ದ ಅವರ ತತ್ವ ಪ್ರಚಾರ ದಾಸಯುಗದಲ್ಲಿ ಲಭ್ಯವಾಗಿ ಬೇಲೂರು ವೈಕುಂಠ ದಾಸರು, ಕನಕದಾಸರ ಮತ್ತೆ ತಮ್ಮ ಕೀರ್ತನೆಗಳ ಮೂಲಕ ಪ್ರಚಾರಕ್ಕೆ ತಂದುದನ್ನು ಉಲ್ಲೇಖ ಮಾಡಿದ್ದಾರೆ. ಅಲ್ಲದೆ ಅವರು ರಾಮಾನುಜರ ಕುರಿತು ರಚಿಸಿದ ಕೀರ್ತನೆಗಳನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ.

ಎರಡನೇ ಹಂತದಲ್ಲಿ ಹದಿನೇಳನೆಯ ಶತಮಾನದಲ್ಲಿ ಮತ್ತೆ ತಿರುಮಲಾರ್ಯರಿಂದ ಪ್ರಾರಂಭವಾಯಿತು. ಅದು ಹತ್ತೊಂಬತ್ತನೆಯ ಶತಮಾನದಲ್ಲಿ ತುಳಸಿ ರಾಮದಾಸ್ ರಿಂದ ಪುನರ್ ಜೀವನ ಪಡೆದು ಕರ್ನಾಟಕದ ಮೂಲೆಮೂಲೆಗಳಲ್ಲಿ ಹರಿದಾಸ ಸಾಹಿತ್ಯ ರೂಪುಗೊಂಡ ಬಗೆಯನ್ನು ಇಲ್ಲಿ ದಾಖಲಿಸಿದ್ದಾರೆ.

ಕೇವಲ ಹರಿಸರ್ವೋತ್ತಮ ತತ್ವ ಪ್ರಚಾರಕ್ಕೆ ಮೀಸಲಾಗಿದ್ದ, ಇದು ಈಗ ಉಳಿದ ದೇವತೆಗಳ ಸ್ತುತಿಗಳನ್ನೂ ಒಳಗೊಳ್ಳುವುದರ ಮೂಲಕ( ಬಹುಶ: ಕನಕದಾಸರ ಮಾದರಿಯ) ವಿಸ್ತಾರಗೊಂಡ ಬಗೆಯನ್ನು ನಮೂದಿಸಿದ್ದಾರೆ.

ಆಧುನಿಕ ಕಾಲದಲ್ಲಿ ನಮ್ಮ ಕವಿಗಳಾದ ಪು.ತಿ.ನ.ಮಾಸ್ತಿ, ಎಚ್.ಎಸ್ ವಿ ಮುಂತಾದವರು ರಾಮಾನುಜರನ್ನು ಕುರಿತು ಬರೆದ ಕವಿತೆಗಳು ಇಲ್ಲಿ ಸೇರ್ಪಡೆಗೊಂಡಿವೆ.ಅಲ್ಲದೆ ಅಜ್ಞಾತ ಜನಪದ ಕವಿಯೊಬ್ಬ ರಾಮಾನುಜರನ್ನು ಬರೆದ ದೀರ್ಘ ಕಾವ್ಯವನ್ನು ಪತ್ತೆ ಹಚ್ಚಿ ಇಲ್ಲಿ ಪ್ರಕಟಿಸಿರುವುದು ಸಂಪಾದಕರಾಗಿ ಗೀತಾಚಾರ್ಯರ ಪರಿಶ್ರಮಕ್ಕೆ ಸಾಕ್ಷಿ ಯಾಗಿದೆ.

ಅನುಬಂಧದಲ್ಲಿ ರಾಮಾನುಜರ ಜೀವನದ ಘಟನೆಗಳನ್ನು , ಲೇಖಕರ ಕುರಿತು ಟಿಪ್ಪಣಿ, ರಾಮಾನುಜರ ಕುರಿತು ಇಲ್ಲಿಯವರೆಗೆ ಪ್ರಕಟವಾದ ಗ್ರಂಥಗಳ ಪಟ್ಟಿಯನ್ನು ಕೊಟ್ಟಿರುವುದು, ಅವರನ್ನು ಕುರಿತು ಹೆಚ್ಚು ತಿಳಿದುಕೊಳ್ಳಲು ಬಯಸುವವರಿಗೆ ಬಹಳ ಉಪಯುಕ್ತ ಮಾಹಿತಿಯಾಗಿದೆ.

ಈ ಮಹತ್ವದ ಕಾರ್ಯಕ್ಕಾಗಿ ಗೆಳೆಯರಾದ ಗೀತಾಚಾರ್ಯ ಅವರನ್ನು ಅಭಿನಂದಿಸುವೆ. ಈ ಕೃತಿಯ ಕುರಿತು ಕೆಲವು ಸಲಹೆಗಳನ್ನು ಇಲ್ಲಿ ಪ್ರಸ್ತಾಪಿಸುವುದು ಅಗತ್ಯವಾಗಿದೆ.

  • ತಮಿಳುನಾಡಿನಲ್ಲಿ ವೈಷ್ಣವ ಸಾಹಿತ್ಯ ಮೂಡಿ ಬಂದಂತೆ ಕರ್ನಾಟಕದಲ್ಲಿ ರಾಮಾನುಜರು ಬಂದು ಹೋದ ನಾನೂರು ವರ್ಷಗಳ ಅಂತರದಲ್ಲಿ ವಿಶಿಷ್ಟಾದ್ವೈತ ಯಾಕೆ ಪ್ರಚಾರಕ್ಕೆ ಬರಲಿಲ್ಲ ಎಂಬುದರ ಕಡೆಗೆ ಗಮನ ಹರಿಸುವುದು ಅಗತ್ಯವಾಗಿರುತ್ತದೆ ( ಅದರ ಉಲ್ಲೇಖವಿದೆ). ಅದಕ್ಕೆ ಅವರು ಸ್ಥಳೀಯ ಭಾಷೆಯಾದ ಕನ್ನಡವನ್ನು ಬಳಸದೆ ಇರುವುದು ಒಂದು ಕಾರಣವೆ ? ಈ ದಿಸೆಯಲ್ಲಿ ಸಂಶೋಧನೆ ನಡೆಸಲು ಇದನ್ನು ಒಂದು ಚಿಮ್ಮುಹಲಗೆಯಾಗಿ ಬಳಸಬಹುದು.
  • ಇಲ್ಲಿ ಉಕ್ತವಾಗಿರುವ ಒಬ್ಬ ದಾಸರ ಕೀರ್ತನೆಗಳಲ್ಲಿ ರಾಮಾನುಜರು ಭೇದವಾದಿಗಳನ್ನು ವಾದದಲ್ಲಿ ಸೋಲಿಸಿದರು ಎಂಬ ಉಲ್ಲೇಖವಿದೆ. ಭೇದವಾದಿಗಳು ಬಂದದ್ದೆ ಹದಿಮೂರನೇ ಶತಮಾನದಲ್ಲಿ. ಅಂದಮೇಲೆ ಹನ್ನೊಂದನೆಯ ಶತಮಾನದ ರಾಮಾನುಜರು ಅವರನ್ನು ವಾದದಲ್ಲಿ ಸೋಲಿಸಿದರು ಎನ್ನುವುದರ ಔಚಿತ್ಯ? ಆದ್ದರಿಂದ ಆ ಪಠ್ಯದ ಕಡೆಗೆ ಇನ್ನೊಂದು ಸಲ ಗಮನ ಹರಿಸಬಹುದು.
  • ಹಲವಾರು ಲಿಪಿ ಸ್ಖಾಲಿತ್ಯಗಳು ಉಳಿದು ಕೊಂಡಿವೆ. ಮುಂದಿನ ಮುದ್ರಣದಲ್ಲಿ ಅವನ್ನು ಸರಿಪಡಿಸುವುದು ಅಗತ್ಯ.
  • ವೇಲಾಪುರಿಯಲ್ಲಿ ರಾಮಾನುಜರು ಬರೆಯಿಸಿದ ಶಾಸನದ ಪಾಠ ಮತ್ತು ಅದರ ಸಾರವನ್ನು ಕೊಡಬಹುದು. ಪುಸಕ್ತವನ್ನು ಕಳಿಸಿಕೊಟ್ಟ ಗೆಳೆಯರಾದ ಗೀತಾಚಾರ್ಯ ಅವರಿಗೆ ವಂದನೆ ಅಭಿನಂದನೆ.

  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW