ಆಧುನಿಕ ಸೋಪು, ಡಿಟರ್ಜೆಂಟ್ ಪೌಡರ್, ಶಾಂಪೂ ಮಾರುಕಟ್ಟೆಗೆ ಬರದಿದ್ದ ಕಾಲದಲ್ಲಿ ಕೊಳೆ ತೊಳೆಯುತ್ತಿದ್ದ ಸವುಳು ಮಣ್ಣು ಆಧಾರ ವಸ್ತುವಾಗಿತ್ತು. ಹಳೆಯ ನೆನಪಿನ ಬುತ್ತಿಯನ್ನು ಡಾ.ವಡ್ಡಗೆರೆ ನಾಗರಾಜಯ್ಯ ಅವರು ಲೇಖನದ ಮೂಲಕ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ…
ನಮ್ಮೂರಿನ ನೆಲದೇವತೆ ಬೆಟ್ಟದಮದ್ದೆಮ್ಮನ ಬಯಲಿನಲ್ಲಿರುವ ನಮ್ಮ ಹೊಲದಲ್ಲಿ #ಅವರೆಕಾಯಿ_ಹಲಸಂದೆ_ಹೆಸರುಕಾಯಿ_ತೊಗರಿಕಾಯಿ ಮುಂತಾದ ಕಾಯಿಕಸುರುಗಳನ್ನು ತರಿದು ಬಿಡಿಸುವಾಗ ಅವುಗಳ ಸೊಗಡು ನಮ್ಮ ಕೈಗಳಿಗೆ ಗಚ್ಚೆಣ್ಣೆಯನ್ನೋ ಕೀಲೆಣ್ಣೆಯನ್ನೋ ಸವರಿದಂತೆ ಜಿಡ್ಡೇರುತ್ತಿತ್ತು. ಹಸಿಕಾಯಿ ತರಿದ ಉಗುರುಗಳ ಮೇಲೆ ಹೊಲದ ಸೊಗಡಿನ ತಿಗಡು ಅಂಟಿಕೊಂಡು, ನಮ್ಮ ಮುಖ ಮೈಕೈ ನವೆ ಕೆರಕೊಳ್ಳಲು ಆಗದಂತೆ ಕೈಗಳು ಅಂಟರಿಸುತ್ತಿದ್ದವು. ಜೇನುಗೂಡಿನ ಮೇಣವನ್ನು ಮೆತ್ತಿದಂತೆ ನಮ್ಮ ಉಗುರುಕಣ್ಣುಗಳ ತುಂಬಾ ನುಣ್ಣನೆಯ ಕಪ್ಪು ತಿಗಡು ತುಂಬಿರುತ್ತಿತ್ತು. ಆಗೆಲ್ಲಾ ನಮ್ಮ ಕೈಕಾಲುಗಳಿಗೆ ಅಂಟಿದ ಸೊಗಡು ಜಿಡ್ಡು ತಿಗಡು ತೊಳೆದುಕೊಳ್ಳಲು ಸವುಳು ಮಣ್ಣನ್ನು ಬಳಸುತ್ತಿದ್ದೆವು. ಬಾಡಿಟ್ಟು ಉಂಡಾಗ ನಮ್ಮ ಕೈಗೆ ಮೆತ್ತಿಕೊಳ್ಳುತ್ತಿದ್ದ ‘ಬೆಸಣೆ’ಯನ್ನು ಇದೇ ಸವುಳು ಮಣ್ಣಿನಿಂದ ತೊಳೆದುಕೊಳ್ಳುತ್ತಿದ್ದೆವು. ನಮ್ಮ ಹೊಲದ ಹತ್ತಿರದ ತಗ್ಗಿನಲ್ಲಿಯೋ ಹಳ್ಳದಲ್ಲಿಯೋ ಜೌಗು ಬಯಲಿನಲ್ಲಿಯೋ ಬಿಳಿ ಪಾವುಡ ಹಾಸಿದಂತೆ ಕಾಣುತ್ತಿದ್ದ ಸವುಳು ಮಣ್ಣು ಈಗಿನ ಸೋಪು ಡಿಟರ್ಜೆಂಟುಗಳ ಕೆಲಸವನ್ನು ನಿರ್ವಹಿಸುತ್ತಿತ್ತು.

ಫೋಟೋ ಕೃಪೆ : Planete Ranger
ಬೆಟ್ಟದಮದ್ದೆಮ್ಮನ ಹೊಲಮಾಳದ ಕರಲು ಭೂಮಿಯಲ್ಲಿ, ಬೆಟ್ಟದ ಜೋಪು ನೀರು ಹರಿಯುವ ತಗ್ಗು ಪ್ರದೇಶಗಳಲ್ಲಿ, ಮಾತಗಾನಹಳ್ಳಿ (ಬೇಚಿರಾಕ್ ಗ್ರಾಮ) ಕೆರೆಗೆ ಹರಿದು ಬರುವ ಹಳ್ಳಕೊಳ್ಳದ ಅಂಗಳದಲ್ಲಿ, ತಲಪರಿಗೆ, ಕೊರಕಲು, ಜೌಗು ಭೂಮಿಯಲ್ಲಿ ಬೆಳ್ಳಾನು ಬಿಳುಪಿನ ಪೊರೆಪೊರೆ ಸವುಳುಪ್ಪು ಮಣ್ಣು ಹಕ್ಕಳಿಕೆಯಾಗಿ ಹಾಸಿಬಿದ್ದಿರುತ್ತಿತ್ತು. ಇದೇ ಸವುಳು ಮಣ್ಣಿನಿಂದ ನನ್ನ ಅಮ್ಮ ಕೊಳೆಗಟ್ಟಿಕೊಂಡು ಕೊಳೆತು ಕ್ವಾಮಂಡಲವಾಗಿದ್ದ ನಮ್ಮೆಲ್ಲರ ಬಟ್ಟೆಗಳನ್ನು ಒಗೆದು ನೋಡನೋಡುತ್ತಲೇ ಬೆಳ್ಳಗಾಗಿಸುತ್ತಿದ್ದಳು.
ಆಗಿನ ಕಾಲದಲ್ಲಿ ನಮ್ಮ ಬಟ್ಟೆ ತುಂಬಾ ಕೂರೆಗಳು, ತಲೆ ತುಂಬಾ ಹೇನು-ಸೀರುಗಳು ಪಿತಿಗುಡುತ್ತಿದ್ದವು. ಹಸಿ ಬೆಳಗ್ಗೆ ಹೊಂಬಿಸಿಲಿನಲ್ಲಿ ಕುಳಿತು ನನ್ನ ತಲೆಯಿಂದ ಅಮ್ಮ ಹೇನು ಹಿಡಿಯುತ್ತಿದ್ದಾಗ, ನಾನು ಅಂಗಿ ಚಡ್ಡಿಯ ಮಡಿಕೆಗಳಲ್ಲಿ ಅಡಗಿದ್ದ ಕೂರೆಗಳನ್ನು ಕೂರೆಗಳ ಬಿಳಿಮೊಟ್ಟೆ ಸಾಲನ್ನು ಹೆಕ್ಕುತ್ತಾ ಎರಡೂ ಕೈಗಳ ಹೆಬ್ಬೆಟ್ಟಿನ ಉಗುರುಗಳ ನಡುವೆ ಕುಕ್ಕುತ್ತಿದ್ದೆ. ಹೀಗೆ ಕೂರೆಗಳನ್ನು ಸೀರುಗಳನ್ನು ಕುಕ್ಕುವ ಹಾಗೂ ತಲೆಯಿಂದ ಹೇನು ಹೆಕ್ಕುವ ಪ್ರಕ್ರಿಯೆಯನ್ನು ನಾವು “ಪ್ರಜಾವಾಣಿ ಓದುವುದು” ಎಂದು ಕರೆಯುತ್ತಿದ್ದೆವು. ಕೂರೆಗಳನ್ನು ಕುಕ್ಕಿದ ನನ್ನ ಉಗುರುಗಳು ರಕ್ತಗಟ್ಟುತ್ತಿದ್ದವು. ನನ್ನ ತಲೆಯಿಂದ ಹೇನುಗಳನ್ನು ಕುಕ್ಕಿ ಸಾಯಿಸಿದ ಅಮ್ಮನ ಉಗುರುಗಳು ಕೂಡಾ ನೆತ್ತರು ಮೆತ್ತಿಕೊಳ್ಳುವುದು ಸಾಮಾನ್ಯವಾಗಿತ್ತು. ಸೀರಣಿಗೆಯಿಂದ ಹೇನುಗಳನ್ನು ಮತ್ತು ಹೇನಿನ ಮೊಟ್ಟೆಗಳನ್ನು ಸೀರುತ್ತಾ, ಸೇರಣಿಗೆ ಹಲ್ಲುಗಳ ನಡುವೆ ನೆಗ್ಗಿಸುವಾಗ ಅರಳು (ಔಡಲ) ಬೀಜಗಳನ್ನು ರುಬ್ಬುವಂತೆ ಚಟಪಟ ನೊರಗುಡುವಂತಹ ಶಬ್ದ ಹೊರಡುತ್ತಿತ್ತು. ಭರ್ಜರಿ ಬೇಟೆ ಸಿಕ್ಕಿದ ಉಮ್ಮಸ್ಸಿನಿಂದ ಹೇನು ಸೀರು ಕುಕ್ಕುವಾಗ ಸೀರಣಿಗೆ ಹಿಡಿದ ನನ್ನ ಅಮ್ಮ ವೈರಿಗಳ ವಿರುದ್ಧ ಕಾದಾಡುವ ವೀರವನಿತೆ ಒನಕೆ ಓಬವ್ವನಂತೆ ನನಗೆ ಕಾಣಿಸುತ್ತಿದ್ದಳು. “ಮಕ್ಕಳ ಹೊಟ್ಟೆಗೆ ಹಾಕಿದ ಕೂಳನ್ನೆಲ್ಲಾ ಈ ಮನೆಯಾಳ ಕೂರೆ ಹೇನು ಸೀರುಗಳೇ ತಿಂದು ಹಾಕ್ತವೆ. ಇವಾಗ ಕುಡೀರಿ ನನ್ನ ರಕ್ತ… ಬೇವರ್ಸಿ ನನ್ನ ಗಡ್ಡೆವಾ…” ಎಂದು ಬೈದುಕೊಂಡು ಸಾಧ್ಯವಾದಷ್ಟು ವೈರಿಗಳ ಹುಟ್ಟಡಗಿಸುತ್ತಿದ್ದಳು. ಹೇನು ಕೂರೆಗಳ ಬೇಟೆ ಮುಗಿದ ಬಳಿಕ, ತೆಂಗಿನ ಕರಟದಲ್ಲಿ ಶೇಖರಿಸಿಟ್ಟಿದ್ದ ಸವುಳು ಮಣ್ಣಿನಿಂದ ನೆತ್ತರು ತುಂಬಿದ ನಮ್ಮ ಕೈ-ಉಗುರುಗಳನ್ನು ಚೆನ್ನಾಗಿ ತೊಳೆದುಕೊಳ್ಳುತ್ತಿದ್ದೆವು.

ಆಗೆಲ್ಲಾ ನಾವು ಧರಿಸುತ್ತಿದ್ದದ್ದು ಬಹುಪಾಲು ಕಾಟನ್ ಬಟ್ಟೆಗಳೇ ಆಗಿರುತ್ತಿದ್ದವು. ನಮ್ಮ ಬಟ್ಟೆಗಳನ್ನು ಒಗೆಯುವ ಮುನ್ನ ಆ ಬಟ್ಟೆಗಳನ್ನೆಲ್ಲಾ ಸವುಳು ನೀರಿನಲ್ಲಿ ನೆನೆಸಿ, ಸವುಳು ನೀರು ತುಂಬಿದ ದೊಡ್ಡ ಹರವಿಯೊಂದರಲ್ಲಿ ಬಟ್ಟೆಗಳನ್ನು ತುಂಬಿ ಒಲೆ ಮೇಲಿರಿಸಿ ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಬೇಯಿಸುತ್ತಿದ್ದಳು. ಈ ಪ್ರಕ್ರಿಯೆಯನ್ನು ನಾವು ‘ಉಬ್ಬೆಗೆ ಹಾಕುವುದು’ ಎಂದು ಕರೆಯುತ್ತಿದ್ದೆವು. ಇಡೀ ರಾತ್ರಿ ಬಿಸಿ ಸವುಳು ನೀರಿನಲ್ಲಿ ಚೆನ್ನಾಗಿ ಉಬ್ಬೆಗೆ ಹಾಕಿದ ಬಟ್ಟೆಗಳನ್ನು ಬೆಳಗ್ಗೆ ಮಂಕರಿಯಲ್ಲಿ ಹೊತ್ತೊಯ್ದು ಮಾತಗಾನಹಳ್ಳಿ ಕೆರೆ ಬಂಡೆಯ ಮೇಲೆ ಎತ್ತೆತ್ತಿ ಒಗೆದು, ಕೆರೆ ನೀರಿನಲ್ಲಿಯೇ ಜಾಲಿಸುತ್ತಿದ್ದಳು. ಅಲ್ಲಿಯೇ ಕೆರೆಯ ಅಂಚಿನ ಕಲ್ಗುಟ್ಟೆ ಬಂಡೆಯ ಮೇಲೆ ಗರಿಗರಿಯಾಗಿ ಒಣಗಿಸಿ ತಂದ ರಗ್ಗು ಕಂಬಳಿಗಳನ್ನು ರಾತ್ರಿ ಹೊದ್ದುಕೊಂಡು ಮಲಗುವುದು ನಮಗೆ ತುಂಬಾ ಹಿತಾನುಭವ ನೀಡುತ್ತಿತ್ತು. ಸವುಳು ಮಣ್ಣಿನಿಂದ ತೊಳೆದ ಬಟ್ಟೆಗಳು ಮೈಬೆವರು ವಾಸನೆ -ಸಗಣಿಬಗ್ಗಡ – ಕೊಳೆಕಸ- ನೀಸುನೀರು ಸಿಂಗ ಸಿಂಗು ನಾತವಿಲ್ಲದೆ ಸುವಾಸಿತವಾಗಿರುತ್ತಿದ್ದವು.
ಸವುಳು ಮಣ್ಣನ್ನು ಬಟ್ಟೆ ತೊಳೆಯಲು, ಕೈಕಾಲುಗಳಿಗೆ ಅಂಟಿದ ಕೊಳೆ ಎಣ್ಣೆಜಿಡ್ಡು ತಿಗಡು ಕಳೆಯಲು ಮಾತ್ರವಲ್ಲದೆ, ಸ್ನಾನ ಮಾಡುವಾಗ ತಲೆಗೂದಲು ತೊಳೆದುಕೊಳ್ಳಲು ಶಾಂಪೂ ರೀತಿಯಲ್ಲಿ ಒಳ್ಳೆಯ ಬಿಳಿ ಸವುಳು ಮಣ್ಣನ್ನು ಬಳಸಲಾಗುತ್ತಿತ್ತು. ಸೋಪು ಡಿಟರ್ಜೆಂಟು ಶಾಂಪುಗಳು ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಿದ ಬಳಿಕ ಇವುಗಳನ್ನು ಬಳಸುವುದೇ ಆಧುನಿಕ ನಾಗರಿಕತೆಯ ಲಕ್ಷಣವಾಗಿ ನಮ್ಮ ಬದುಕಿನಲ್ಲಿ ಅಳವಡಿಕೆಯಾಗತೊಡಗಿದವು. ಹಣಕಾಸು ವಹಿವಾಟಿನ ಅವಕಾಶಗಳು ತೀರಾ ಕಡಿಮೆಯಿದ್ದ ನಮ್ಮ ಮನೆಯಲ್ಲಿ ‘ಮಡಗಿ ಉಟ್ಟುಕೊಳ್ಳುವ’ ಒಳ್ಳೆಯ ಬಟ್ಟೆಗಳಿಗೆ ಮಾತ್ರ ಕರ್ನಾಟಕ ಬಾರ್ ಸೋಪ್ – #ಮೈಸೂರು_ಬಾರ್_ಸೋಪ್– ಅಶೋಕ ಬಾರ್ ಸೋಪ್ ಮುಂತಾದ ಗೀರು ಸೋಪನ್ನು ಅಥವಾ #501_ಡಿಟರ್ಜೆಂಟ್_ಸೋಪಿನ ಬಿಲ್ಲೆ – ನಿರ್ಮಾ ವಾಷಿಂಗ್ ಪೌಡರ್ ಗಳನ್ನು ಬಳಸುತ್ತಿದ್ದೆವು. ಉಳಿದಂತೆ ಒರೆಸಬಟ್ಟೆ, ಮಸಿಬಟ್ಟೆ, ಗುಡ್ಡ್ ಬಟ್ಟೆ, ಪುಡಿಬಟ್ಟೆ, ತೇಪೆಬಟ್ಟೆ, ತೊಟ್ಟಿಲು ಬಟ್ಟೆಗಳನ್ನು ತೊಳೆಯಲು ಮಾಮೂಲಿ ಸವುಳು ಮಣ್ಣಿನ ಪಾದವೇ ಗತಿಯಾಗುತ್ತಿತ್ತು.
ವಾರದ ಸಂತೆಯಿಂದ ಅಥವಾ ಅಂಗಡಿಯಿಂದ ದುಡ್ಡು ಕೊಟ್ಟು ತರುತ್ತಿದ್ದ ಸೋಪುಗಳಿಂದ ಅಪಾರ ಪ್ರಮಾಣದ ನೊರೆ ಏಳುತ್ತಿತ್ತು. ಬಟ್ಟೆ ಒಗೆಯುವ ಸ್ಥಳಗಳಲ್ಲಿ ಹಾಗೆ ಏಳುವ ನೊರೆಯನ್ನು ನೆರೆಹೊರೆಯವರಿಗೆ ಕಾಣುವಂತೆ ಗಾಳಿಯಲ್ಲಿ ತೇಲಿಬಿಟ್ಟು ದಬರು ದವಲತ್ತು ಜಂಭ ಹೆಚ್ಚುಗಾರಿಕೆ ಪ್ರದರ್ಶಿಸುವ ಹೆಣ್ಣಾಟಗಳೂ ನಡೆಯುತ್ತಿದ್ದವು. ಆಧುನಿಕ ಸೋಪು ಡಿಟರ್ಜೆಂಟ್ ಪೌಡರ್ ಶಾಂಪೂ ಮುಂತಾದವುಗಳನ್ನು ಹೆಂಡತಿಗೆ ಪ್ರೇಯಸಿಗೆ ತಂದುಕೊಟ್ಟು ಗಂಡಸ್ತನ ಮೆರೆಯುವ ಗಂಡಾಟಗಳೂ ನಡೆಯುತ್ತಿದ್ದವು. ನೈಸರ್ಗಿಕ ಮತ್ತು ಆರೋಗ್ಯದಾಯಕ ಬದುಕಿನ ನೆಲೆಗಳೆಲ್ಲವೂ ಕಳಕೊಂಡ ಈ ಹೊತ್ತಿನಲ್ಲಿ ಇಡೀ ಪ್ರಪಂಚ ಕೋವಿಡ್ -19 ಕೊರೋನಾ ವೈರಸ್ ಪೀಡಿತವಾಗಿದೆ. ನಿಸರ್ಗಸ್ನೇಹಿ ಬದುಕಿನ ಮರೆತ ದಾರಿಗಳನ್ನು ನಾವೀಗ ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದೇವೆ.
- ಡಾ.ವಡ್ಡಗೆರೆ ನಾಗರಾಜಯ್ಯ (ಲೇಖಕರು, ಚಿಂತನಾಕಾರರು, ಹೋರಾಟಗಾರರು, ಉಪನ್ಯಾಸಕರು), ಬೆಂಗಳೂರು.
