‘ದೇಹದಿಂದುಸಿರು ಹೊರನಡೆದ ಬಳಿಕ ಹೆಸರೂ ಇರದು, ಎರಚಿದ ಕೆಸರಂತೂ ಹೋಗದು’…ಕವಿ ಸುಗಟೂರು ತಿರುಮಲೇಶ್ ಅವರ ಈ ಕವಿತೆಯ ಸುಂದರ ಸಾಲನ್ನು ತಪ್ಪದೆ ಮುಂದೆ ಓದಿ…
ಒಂದು ನಿರ್ಧಾರ,
ಒಂದೇ ಒಂದು ಗಟ್ಟಿ ನಿರ್ಧಾರ ಬೇಕಿದೆ,
ಭರತ ಮಾತೆಯ ಮಕ್ಕಳಿಗೆ…
ಸಿಂಧೂ ನಾಗರೀಕತೆಯ ಭವ್ಯ ಪರಂಪರೆಯುಳ್ಳ,
ಬುದ್ದ ಮಹಾರಾಜರಂಥವರ ಶಾಂತಿ ಸಂದೇಶವುಳ್ಳ,
ಸ್ವಾಮಿ ವಿವೇಕಾನಂದರಂಥ
ವಿಶ್ವ ಮಾನವ ವಾಣಿಯುಳ್ಳ,
ಅನೇಕಾನೇಕ ದಾಸ, ಸಂತ, ಶರಣ ಮಹನೀಯರ
ಮಾನವೀಯ ತತ್ವಗಳುಳ್ಳ,
ಪ್ರಚಂಚವೇ ಬೆರಗಾಗುವಂಥ
ಪ್ರಾಕೃತಿಕ ಸಂಪತ್ತುಳ್ಳ,
ಭವ್ಯ ಭಾರತವು ಪರಕೀಯರ
ಕಪಿ ಮುಷ್ಠಿಯಿಂದೊರ ಬಂದು ದಶಕಗಳೇ ಕಳೆದಿದ್ದರೂ,
ಆಂತರಿಕ ಗೊಂದಲ ಗೋಜಲುಗಳಿಂದ
ನಿತ್ಯವೂ ನಲುಗುತಿದೆ.
ಗೊಂದಲುಗಳ ಅಳಿಸಿ, ಗೋಜಲುಗಳ ಕಳಚಿ,
ಏಕತೆಯನ್ನು ಬೆಳೆಸಿ
ಸ್ಪಷ್ಟತೆಯೆಡೆಗೆ ನಡೆಯಬೇಕೆನ್ನುವ
ಒಂದೇ ಒಂದು ದೃಢ ನಿಲುವು
ಎಲ್ಲರಿಗೂ ಬೇಕಿದೆ…
ಎಲ್ಲರಿಗೂ… ಎಂದರೆ, ಎಲ್ಲರಿಗೂ, ಪ್ರತಿಯೊಬ್ಬರಿಗೂ.
ದೂರವುದರಲಿ ಅರ್ಥವಿಲ್ಲ
ದೂರವಿಡುವುದರಲಿ ಸಮತೆ ಇಲ್ಲ,
ಭ್ರಾತೃತ್ವ ಆವರಿಸಿದರೆ ಭಾಗಕ್ಕೆ ಅವಕಾಶವಿಲ್ಲ,
ಮೇಲು – ಕೀಳುಗಳ ಬೇಧ ಮರೆತರೆ,
ಅಸಮಾಧಾನಕ್ಕೆ ಜಾಗವಿಲ್ಲ
ನಿಶ್ಚಯಿಸು, ನಿಧಾನಿಸು,
ಮನಸನ್ನು ಸ್ಥಿರಗೊಳಿಸು
ತಿಳಿ ನೀರ ಕೊಳದಂಥ
ಭರತ ಮಾತೆಯ ಮಡಿಲನ್ನು
ಮಲಿನಗೊಳಿಸುವುದಿಲ್ಲೆಂದು ಪಣತೊಡು..
ದೇಹದಿಂದುಸಿರು ಹೊರನಡೆದ ಬಳಿಕ
ಹೆಸರೂ ಇರದು, ಎರಚಿದ ಕೆಸರಂತೂ ಹೋಗದು.
ಹೆಸರಿನ ಜೊತೆ ಕೆಸರಂಟದಿರಲೆಂಬ ದೀಕ್ಷೆಗಾಗಿ ನಿರ್ಧರಿಸು,
ಭವ್ಯ ಭಾರತದ ಮಡಿಲು
ನಿತ್ಯ ನಿರ್ಮಲವಾಗಿರಲೆಂದು ಹಾರೈಸು…
ಇದೇ ಅಮ್ಮನ ಬೇಡಿಕೆ,
ಇದೇ ಭರತ ಮಾತೆಯ ಕೋರಿಕೆ.
- ಸುಗಟೂರು ತಿರುಮಲೇಶ್
