ಮಕ್ಕಳಿಗೆ ಅವರೇ ಬಗೆಹರಿಸಿಕೊಳ್ಳಲಾಗದ ಸಮಸ್ಯೆಗಳು ಅಥವಾ ಕಷ್ಟಗಳು ಬಂದಾಗ ಆಸರೆಯಾಗುವುದು ಓ.ಕೆ. ಆದರೆ ಏನೂ ಸಮಸ್ಯೆಗಳಿಲ್ಲದೆ ಅನ್ಯೋನ್ಯವಾಗಿರುವ ಸಂಸಾರಗಳು ಇವತ್ತು ಒಡೆದು ಹೋಗಲು ಮುಖ್ಯ ಕಾರಣವಾಗುತ್ತಿರುವುದು ಅಮ್ಮಂದಿರ ಅನಗತ್ಯ ಹಸ್ತಕ್ಷೇಪ .

ಇವತ್ತಿನ ಅನೇಕ ತಾಯಂದಿರು, ತಮ್ಮ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ, ಹಲವಾರು ದುರ್ಬೋಧನೆಗಳನ್ನು ಮಾಡಿ ಕಳುಹಿಸುತ್ತಾರೆ. ಅಲ್ಲದೆ ಈಗ ಮೊಬೈಲ್ ಬೇರೆ ಇರುವುದರಿಂದ ಪ್ರತಿ ದಿನ ಮಗಳ ಜೊತೆ ಅನೇಕ ಗಂಟೆಗಳ ಕಾಲ ಸಂಪರ್ಕದಲ್ಲಿದ್ದು ತಾನು ರಿಮೋಟ್ ಆಗಿ ಮಗಳ ಸಂಸಾರವನ್ನು ತನ್ನಿಷ್ಟಕ್ಕೆ ತಕ್ಕಂತೆ ಆಡಿಸಲು ಹೋಗುತ್ತಾರೆ. ಮಗಳು ತನ್ನ ಗಂಡನ ಮನೆಯಲ್ಲಿ ನಡೆದ ಪ್ರತಿಯೊಂದು ಚಿಕ್ಕ ವಿಷಯವನ್ನು (ಅತ್ತೆ ಇಂದು ಯಾವ ಹೊಸ ಸೀರೆ ಉಟ್ಟರು, ಯಾವ ಒಡವೆ ಮಾಡಿಸಿದರು ಇತ್ಯಾದಿ) ತಾಯಿಗೆ update ,ಮಾಡುತ್ತಾಳೆ. ಅಮ್ಮ ತನ್ನ ಮಗಳಿಗೆ ತನ್ನ ಗಂಡ ಹಾಗೂ ಅತ್ತೆ ಮಾವಂದಿರನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ಅವರನ್ನು ಹೇಗೆ ಆಟವಾಡಿಸಬೇಕೆಂದು ಚಿಕ್ಕ ಚಿಕ್ಕ ವಿಷಯಗಳಿಗೂ ನಿರಂತರವಾಗಿ ಸಲಹೆಗಳನ್ನು ಕೊಡುತ್ತಾ ಹೋಗುತ್ತಾರೆ.
ಉದಾಹರಣೆಗೆ ಕೆಲವು ಸ್ಯಾಂಪಲ್ ಗಳು :
- ನಿನ್ನ ನಾದಿನಿಯರು ನಿಮ್ಮ ಮನೆಯ ಹೊಸ್ತಿಲು ತುಳಿಯದಂತೆ ನೋಡಿಕೊ.
- ನಿನ್ನ ಗಂಡನ ಸಂಬಳ ಎಷ್ಟು ಬರುತ್ತೆ ನೋಡಿಕೊಂಡು ಅವನು ಅದನ್ನು ಹೇಗೆ ಖರ್ಚು ಮಾಡಬೇಕೆಂಬುದನ್ನು ನೀನೇ ಉಸ್ತುವಾರಿ ವಹಿಸಿಕೊ. ನಿನ್ನ ಕೇಳದೆ ಆತ ಒಂದು ರೂ. ಕೂಡ ಖರ್ಚು ಮಾಡಬಾರದು.
- ನಿನ್ನ ಗಂಡ ತನ್ನ ಸಂಬಳದಲ್ಲಿ ಅವನ ಅಮ್ಮನಿಗಾಗಲೀ, ಅವನ ತಂಗಿಯರಿಗಾಗಲೀ ಸೀರೆ, ಒಡವೆ ಅಥವಾ ಯಾವುದೇ ವಸ್ತು ಕೊಡಿಸದೆ ಇರೋ ಹಾಗೆ ನೋಡಿಕೊ.
( ಹೆಂಡತಿಯ ಕಾರಣದಿಂದ ಅನೇಕ ಗಂಡು ಮಕ್ಕಳು ತಮ್ಮ ತಾಯಿಗೆ ಒಂದು ಸೀರೆ, ಚಪ್ಪಲಿ ಇತ್ಯಾದಿ ಕೊಡಿಸಲು ಇಷ್ಟವಿದ್ದರೂ ಸಾಧ್ಯವಾಗುವುದಿಲ್ಲ) ಅವನ ಸಂಬಂಧಿಕರಿಗೆ ನಿನ್ನ ಅನುಮತಿ ಇಲ್ಲದೆ ಒಂದು ರೂಪಾಯಿ ಕೂಡ ಕೊಡಲು ಬಿಡಬೇಡ.
- ನಿನ್ನ ಅತ್ತೆ ಮಾವನಿಗೆ ನೀನು ಊಟ, ತಿಂಡಿ, ಕಾಫಿ ಅಂತೆಲ್ಲಾ ಮಾಡಿಕೊಟ್ಟು ಸೇವೆ ಮಾಡಲು ಹೋಗಬೇಡ. ಅವರಿಗೇನು ಕೈ ಕಾಲು ಇಲ್ಲವಾ? ಅವರೇ ಮಾಡಿಕೊಳ್ಳಲಿ. ಇವತ್ತಿನ ತಿಂಡಿ ಊಟಕ್ಕೆ ಏನು ಅಡುಗೆ ಮಾಡಬೇಕೆಂಬ ನಿರ್ಧಾರ ನಿಂದೇ ಅಗಿರಲಿ. ಅತ್ತೆಗೆ ಆ ಅಧಿಕಾರ ಕೊಡಲು ಹೋಗಬೇಡ.
- ಗಂಡ ಯಾವುದೇ ಊರಿಗಾಗಲಿ, ಎಲ್ಲಿಗೆ ಆಗಲೀ ಹೋಗಬೇಕೆಂದರೆ ನಿನ್ನನ್ನು ಕೇಳಿ ಹೋಗಬೇಕು. ಹಾಗೆ ಅವನನ್ನು ನಿನ್ನ ಸೆರಗಿಗೆ ಗಂಟು ಹಾಕಿಕೊ.
- ನಿನ್ನ ಗಂಡ ಆದಷ್ಟು ಅವನ ತಂದೆ ತಾಯಿ ಜೊತೆ ಮಾತನಾಡದಂತೆ ನೋಡಿಕೊ. ಅವನ ಅಪ್ಪ ಅಮ್ಮ ಏನಾದರೂ ಕೊಡಿಸು ಅಂಥ ಹೇಳಿದರೆ, ಯಾವುದೇ ಸಲಹೆಗಳನ್ನು ಕೊಟ್ಟರೆ ನಿನ್ನ ಅನುಮತಿಯಿಲ್ಲದೆ ಅವನ್ನು ಈಡೇರಿಸದಂತೆ ನೋಡಿಕೊ.
- ನಿನ್ನ ಗಂಡ, ಅವನ ಸಂಬಂಧಿಕರ ಜೊತೆ, ಅಥವಾ ಸ್ನೇಹಿತರ ಜೊತೆ ಟ್ರಿಪ್ ಹೋಗಲು, ಪಾರ್ಟಿಗೆ ಹೋಗಲು ಅವಕಾಶ ಕೊಡಲೇ ಬೇಡ.
- ಮನೆಯ ಬೀರಿನ ಬೀಗದ ಕೈ ನಿನ್ನ ಸುಪರ್ದಿಗೆ ಬರುವಂತೆ ನೋಡಿಕೋ.
- ನಿನ್ನ ಗಂಡ ಅವನ ಅಪ್ಪನ ಹತ್ತಿರ ತನ್ನ ಪಾಲಿನ ಆಸ್ತಿ ಕೇಳುವಂತೆ ಮಾಡು.
- ನಿನ್ನ ಗಂಡ ಮತ್ತು ನೀನು ಬೇರೆ ಮನೆ ಮಾಡಿರಿ. ನಿನ್ನ ಅತ್ತೆ, ಮಾವ, ಮೈದುನ, ನಾದಿನಿ ಇವರ್ಯಾರಿಗೂ ನಿನ್ನ ಮನೆಗೆ ಬರಲು ಆದಷ್ಟು ಅವಕಾಶ ಕೊಡಬೇಡ. ಕೇವಲ ನಿನ್ನ ತವರಿನವರು ಮಾತ್ರ ನಿನ್ನ ಮನೆಗೆ ಬರುವಂತಿರಬೇಕು.
ಗಂಡನ ಮನೆಗೆ ಹೊಂದಿಕೊಂಡು ಸುಖವಾಗಿ ಜೀವನ ಮಾಡಲು ಹೊರಟ ಮಗಳಿಗೆ ಆಕೆಯ ಅಮ್ಮ, ಹೀಗೆ ತರಹೇವಾರಿ ಸಂಸಾರ ಒಡೆಯುವ ಸಲಹೆಗಳನ್ನು ಕೊಡುತ್ತಾ, ಅವಳಿಗೆ ಗಂಡ, ಅತ್ತೆ, ಮಾವ, ನಾದಿನಿ, ಮೈದುನ ಎಲ್ಲರ ಮೇಲೂ ದ್ವೇಷ ಬರುವಂತೆ ಮಾಡುತ್ತಾಳೆ. ಗಂಡನಿಗೂ ಹಾಗೂ ಅವನ ಅಪ್ಪ ಅಮ್ಮ ಸಹೋದರ ಸಹೋದರಿಯರಿಗೂ ನಡುವೆ ದೊಡ್ಡ ಕಂದಕ ನಿರ್ಮಾಣವಾಗುವಂತೆ ಮಾಡುತ್ತಾಳೆ. ಸಂಸಾರದ ನೆಮ್ಮದಿ ಹಾಳಾಗಲೂ ಕಾರಣವಾಗುತ್ತಾಳೆ.

ಫೋಟೋ ಕೃಪೆ : indianexpress
ಇವತ್ತು ಅನೇಕ ಹೆಣ್ಣು ಮಕ್ಕಳು ಮದುವೆಯಾದ ಒಂದೆರಡು ವರ್ಷಗಳಲ್ಲೇ ಗಂಡನಿಂದ ದೂರವಾಗಿ ತವರನ್ನು ಸೇರಿ ಒಂಟಿ ಗೂಬೆಯಂತೆ ಬದುಕಲು ಕಾರಣವಾಗುತ್ತಿರುವುದು ಮುಖ್ಯವಾಗಿ ಅವರವರ ಅಮ್ಮಂದಿರೆ. ಈಗಿನ ಸಮಾಜದಲ್ಲಿ ಹೆಣ್ಣು ಮಕ್ಕಳು ಕೆಲಸಕ್ಕೆ ಸೇರಿ, ಒಂಟಿಯಾಗಿ ಇದ್ದು ಜೀವನ ಮಾಡಬಹುದು ಎಂಬುದು ಬೇರೆ ಮಾತು. ಆದರೆ ಮಗಳ ಚೆಂದದ ಸಂಸಾರದ ಸುಖ, ನೆಮ್ಮದಿ, ಭದ್ರತೆ ಹಾಳಾಗಿರುತ್ತದಲ್ಲ? ಅಲ್ಲದೆ ಅಪ್ಪ ಅಮ್ಮ ತೀರಿ ಹೋದ ಮೇಲೆ ಆ ಹೆಣ್ಣು ಮಕ್ಕಳು ಮತ್ತಷ್ಟು ಅನಾಥರಾಗುತ್ತಾರೆ.
ನಿಜವಾಗಿ ಇಲ್ಲಿ ಗಂಡ ಮತ್ತು ಹೆಂಡತಿ, ಅವರವರ ಅಮ್ಮಂದಿರ ಗೀತೋಪದೇಶ (?)ಕ್ಕೆ ಕಿವಿಗೊಟ್ಟು, ಅವರ ನಡುವೆ ಸಿಕ್ಕಿ ಸ್ಯಾಂಡ್ ವಿಚ್ ಆಗುತ್ತಾರೆ. ಅಮ್ಮಂದಿರ ಬೋಧನೆ ಇಲ್ಲದಿದ್ದರೆ ಎಷ್ಟೋ ಸೊಸೆಯಂದಿರು ಗಂಡನ ಮನೆಗೆ ಹೊಂದಿಕೊಂಡು ಸುಖವಾಗಿ ಸಂಸಾರ ಮಾಡುತ್ತಿದ್ದರು.
ಗಂಡ ಮತ್ತು ಹೆಂಡತಿಯ ಅಪ್ಪಂದಿರು ಸಾಮಾನ್ಯವಾಗಿ ಮಕ್ಕಳ ಜೀವನದಲ್ಲಿ ಮೂಗು ತೂರಿಸುವುದಿಲ್ಲ. ಕೆಲವು ಅಪ್ಪಂದಿರು ಇದಕ್ಕೆ ಅಪವಾದ ಇರಬಹುದು. ಆದರೆ ಅವರ ಸಂಖ್ಯೆ ಕಡಿಮೆ. ಹೆಂಡತಿ ಮತ್ತು ಗಂಡನ ಅಮ್ಮಂದಿರೆ, ನಿಮ್ಮ ಮಕ್ಕಳ ಸಂಸಾರದಲ್ಲಿ ಅನವಶ್ಯಕವಾಗಿ ಹಸ್ತಕ್ಷೇಪ ಮಾಡಿ ಅವರ ಸಂಸಾರ ನೀವೇ ಹಾಳು ಮಾಡಬೇಡಿ. ಅವರನ್ನು ನೆಮ್ಮದಿಯಾಗಿ ಬದುಕಲು ಬಿಡಿ.
ವಿ.ಸೂ. ಈ ಪೋಸ್ಟ್ ಒಳ್ಳೆಯ ಅಮ್ಮಂದಿರಿಗೆ, ಒಳ್ಳೆಯ ಅತ್ತೆಯರಿಗೆ ಅನ್ವಯಿಸುವುದಿಲ್ಲ.
( ಸಂಸಾರಗಳು ಹಾಳಾಗಲು ಅನೇಕ ಕಾರಣಗಳಿವೆ. ನಾನು ಇಲ್ಲಿ ಒಂದು ಕಾರಣದ ಬಗ್ಗೆ ಮಾತ್ರ ಬರೆದಿದ್ದೇನೆ)
- ನಟರಾಜು ಮೈದನಹಳ್ಳಿ (ಲೇಖಕರು, ಚಿಂತಕರು )