ಸ್ವಾಭಿಮಾನಕ್ಕೆ ಎಂಭತ್ತಾದರೇನು ?? – ಹಿರಿಯೂರು ಪ್ರಕಾಶ್

ಎಂಭತ್ತನೇ ವಯಸ್ಸಿನಲ್ಲೂ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿರುವ ಹಿಮಾಚಲ ಪ್ರದೇಶದ ವೃದ್ಧನ ಬಗ್ಗೆ ಹಿರಿಯೂರು ಪ್ರಕಾಶ್ ಅವರು ಬರೆದಿರುವ ಲೇಖನ ಬೇರೆಯವರಿಗೆ ಸ್ಪೂರ್ತಿಯನ್ನು ನೀಡುತ್ತದೆ , ತಪ್ಪದೆ ಓದಿ…

ಹಿಮಾಚಲ ಪ್ರದೇಶದ ಕಸೌಲಿ ಎಂಬಲ್ಲಿಗೆ ಎರಡು ದಿನಗಳ ಕಾಲ ಕೆಲಸದ ಕಾರಣ‌ ಹೋಗಬೇಕಾಗಿ ಬಂತು. ಚಂಡೀಘಡದಿಂದ ಸುಮಾರು ಎರಡು ಘಂಟೆ ಪ್ರಯಾಣ. ಎತ್ತರದ ಬೆಟ್ಟ ಗುಡ್ಡಗಳ ಮೇಲೆ ಹರಡಿಕೊಂಡಿರುವ ಈ ಪುಟ್ಟ ಊರನ್ನು‌ ನೋಡಿದರೆ ಪಕ್ಕಾ ನಮ್ಮ ಮಡಿಕೇರಿಯನ್ನು‌ ನೋಡಿದಂತಾಗುತ್ತದೆ. ಎತ್ತರದ, ಕಡಿದಾದ ರಸ್ತೆಗಳು, ಸುತ್ತಲೂ ಅಚ್ಚ ಹಸಿರಿನ ಹೊದಿಕೆ, ಬೆಳಿಗ್ಗೆ ಮತ್ತು ಸಂಜೆವೇಳೆ ಸುರಿಯುವ ಮಂಜು, ದಿನವಿಡೀ ಫ಼ಾಗ್ …ಈ‌ ಊರಿನ ಪ್ರಕೃತಿ ಲಕ್ಷಣಗಳು. ಕೊಡಗಿನಲ್ಲಿ ಆರೂವರೆ ವರ್ಷ ಬದುಕು ಸವೆಸಿದ ನನಗೆ ಈ ವಾತಾವರಣಕ್ಕೆ ಹೊಂದಿಕೊಳ್ಳುವುದು ಅಂತಹಾ ಕಷ್ಟವಾಗಲಿಲ್ಲ. ಹೀಗಾಗಿ ಎಲ್ಲೋ ನಮ್ಮ ಸೋಮವಾರ ಪೇಟೆಗೋ ಮಡಿಕೇರಿಗೋ ಹೋದಂತಹ ಅನುಭವ ಅಷ್ಟೇ.

ಇಂದು ಮುಂಜಾನೆ ಬೆಳಿಗ್ಗೆ ಹಾಗೇ ಸುಮ್ಮನೆ ನಾನಿಳಿದುಕೊಂಡಿದ್ದ ಡೇಲ್ ಸೈಡ್ ಹೋಟೆಲ್ ಪಕ್ಕದ ರೋಡಿನಲ್ಲಿಯೇ ಎರಡು ಹೆಜ್ಜೆ ಹೊರಟಿದ್ದೆ. ಚುಮು ಚುಮು‌ ಚಳಿ, ಸೂರ್ಯೋದಯದ ‌ಹಿತವಾದ ಎಳೆ ಬಿಸಿಲು, ತಾಜಾ ಗಾಳಿಯಿಂದ ಕೂಡಿದ ಪ್ರಕೃತಿಯ ರಮ್ಯತೆಯನ್ನು ಆಸ್ವಾದಿಸುತ್ತಾ ಹಾಗೇ ಹೆಜ್ಜೆ ಹಾಕುತ್ತ ಇರುವಾಗ ಅಲ್ಲೇ ಸ್ವಲ್ಪ ದೂರದಲ್ಲಿ ತುಂಬಾ ವಯಸ್ಸಾದ ಒಬ್ಬ ವ್ಯಕ್ತಿಯೊಬ್ಬರು ಕಣ್ಣಿಗೆ ಬಿದ್ದರು. ನೋಡಲು ಪೀಚಾಗಿದ್ದರೂ ಮುಖದಲ್ಲಿ ಏನೋ ಒಂಥರಾ ಕಳೆ ಇತ್ತು. ಕುತೂಹಲದಿಂದ ಹತ್ತಿರ ಹೋಗಿ ನೋಡಲಾಗಿ ಈ ಮುದುಕಪ್ಪ ರಸ್ತೆ ಬದಿಯ ಕಟ್ಟೆಯ ಮೇಲೆ ಕೂತು ಹಲವು ದಿನಪತ್ರಿಕೆಗಳನ್ನು‌ ಹರವಿಕೊಂಡು ಸಂತೋಷದಿಂದ ತನ್ನ ತುಟಿಗಳ ಮಧ್ಯೆ ಬೀಡಿಯೊಂದನ್ನು ಆಪ್ತತೆಯಿಂದ ಸಿಕ್ಕಿಸಿಕೊಂಡು ಧಂ ಎಳೆಯುತ್ತಾ ಖುಷಿಯಿಂದ ಮೈ‌ಮರೆತಿದ್ದ. ಆತನ ಧೂಮಪಾನ ರಸನಿಮಿಷಗಳಿಗೆ ಭಂಗವಾಗುವಂತೆ ಅದೇ ಸಮಯಕ್ಕೆ ಎಂಟ್ರಿ ಕೊಟ್ಟ ನನ್ನನ್ನು‌ ನೋಡಿದ ಕೂಡಲೇ ‌” ಪೇಪರ್ ಚಾಹಿಯೇ ಕ್ಯಾ ” ಎಂದು ಸಲಿಗೆಯಿಂದಲೇ ಕೇಳಿದರು.

ನನಗೆ ಇಲ್ಲವೆನ್ನಲು‌ ಮನಸಿಲ್ಲದೇ ಒಂದು ಪತ್ರಿಕೆ ಕೊಂಡೆ. ಹಾಗೆಯೇ ಪಕ್ಕದಲ್ಲಿ ಕುಳಿತು ಅವರ ಬಗೆಗೆ ವಿಚಾರಿಸುತ್ತಾ ಹೋದೆ. ಅವರಿಗೆ ಹೆಂಡತಿ ಮಕ್ಕಳು, ಮನೆ- ಮಠ ಅಂತ ಯಾವುದೂ- ಯಾರೂ ಸಧ್ಯಕ್ಕೆ ಇಲ್ಲವಂತೆ. ಎಲ್ಲವನ್ನೂ ತೊರೆದು ಇಪ್ಪತ್ತು ವರ್ಷವಾಯಿತಂತೆ. ಇಲ್ಲಿಯೇ ನಿತ್ಯವೂ ಕುಳಿತು ಪತ್ರಿಕೆ ಜೊತೆಗೆ ಅದೂ ಇದೂ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಗಳಿಸುವ ಅಲ್ಪ ಆದಾಯದಲ್ಲೇ ಜೀವನ. ಅಕ್ಕ ಪಕ್ಕದ ತೋಟದವರು- ಹೋಟೆಲಿನವರು ಅಗಾಗ್ಗೆ ಊಟ ತಿಂಡಿ ಅಂತ ಕೊಟ್ಟರೂ ಸುಮ್ಮನೆ ಕುಳಿತು ತಿನ್ನಬಾರದೆಂಬ ಸ್ವಾಭಿಮಾನದಿಂದ ತನ್ನ ಎಂಭತ್ತನೇ ವಯಸ್ಸಿನಲ್ಲೂ ಚಿಕ್ಕ ಚಿಕ್ಕ ಕೆಲಸ ಮಾಡುತ್ತ ತಾನೂ ಸ್ವಲ್ಪ ಗಳಿಸಿ – ಉಳಿಸಿ ಜೀವನ ರಥ ಸಾಗಿಸುತ್ತಿದ್ದಾರೆ.

ಕೈಕಾಲು ದೇಹ ಎಲ್ಲವೂ ಗಟ್ಟಿ‌ಇದ್ದು ಎಲ್ಲರೂ ಇದ್ದು ದುಡಿದು ತಿನ್ನದೇ ಮತ್ತೊಬ್ಬರ ತಲೆ‌ ತಗೆದೋ, ಹೊಟ್ಟೆ ಮೇಲೆ ಹೊಡೆದೋ ಇಲ್ಲವೇ ವಂಚಿಸಿಯೋ ಬದುಕನ್ನು ಅನುಭವಿಸುತ್ತಿರುವ ಅನೇಕಾನೇಕ ಅಯೋಗ್ಯರ ನಡುವೆ ಎಂಭತ್ತನೇ ಇಳಿ ವಯಸ್ಸಿನಲ್ಲೂ ಕಾಡಿನ ರಸ್ತೆಗಳ ಮಧ್ಯೆ ನಿತ್ಯವೂ ಪೇಪರ್‌ ಮಾರಿ ಸ್ವಾಭಿಮಾನದಿಂದ ಅಂದಿನ ಅನ್ನವನ್ನು ಅಂದೇ ಸಂಪಾದಿಸಿ ಬದುಕು ಕಟ್ಟಿಕೊಂಡು ಜೀವನದ ಸವಾಲುಗಳಿಗೆ ಎದೆಯೊಡ್ಡಿರುವ ಈ ಅಜ್ಜನಿಂದಲೂ ಒಂದು ಜೀವನಪಾಠ ಕಲಿಯುವುದಿದೆ.

ತನ್ನವರು ಅಂತ ಯಾರೂ ಇಲ್ಲದಿದ್ದರೂ ಜೀವನೋತ್ಸಾಹ ಕಳೆದುಕೊಳ್ಳದೇ ಚುಮು‌ ಚುಮು ಚಳಿಯಲ್ಲಿ ಧಂ ಎಳೆಯುತ್ತಾ ಹಲ್ಲಿಲ್ಲದ ಬಾಯಿಂದ ನಗೆಯ ಮಳೆಯನ್ನೇ‌ ಸುರಿಸುತ್ತಾ ಕೂತಿದ್ದ ಈ ತಾತಪ್ಪನ ಸ್ವಾಭಿಮಾನ‌ಕ್ಕೆ ಒಂದು ಸಲಾಂ‌ ಹೇಳಿ ಕೊನೆಗೆ ಒಂದು ಸೆಲ್ ಫ಼ೀ ಎಂದಾಗ ಸೊಫ಼ಿಸ್ಟಿಕೇಟೆಡ್ ಕಳೆಯನ್ನು ಮುಖದ ಮೇಲೆ ತಂದುಕಿಂಡು ಖುಷಿಯಿಂದಲೇ ಪೋಸು ಕೊಟ್ಟರು.

ಬದುಕಲ್ಲಿ ತನ್ನವರಾರೂ ತನಗಿಲ್ಲ, ತನಗಾಗಿ ಏನೂ ಇಲ್ಲ, ತಾನು ಒಂಟಿ….. ಎಂದು ಖಿನ್ನತೆಗೆ ಜಾರುವವರಿಗೆ, ವಯಸ್ಸಿದ್ದೂ, ದೇಹದಲ್ಲಿ ಶಕ್ತಿಯಿದ್ದೂ , ದುಡಿದು‌ ತಿನ್ನದ ಸ್ವಾಭಿಮಾನವಿಲ್ಲದ ಸೋಂಬೇರಿಗಳಿಗೆ ನಮ್ಮ ಈ ಅಜ್ಜಪ್ಪನ‌ ಜೀವನ‌ ನೋಡಿ ಕಲಿಯುವುದು ತುಂಬಾ ಇದೆಯೆನಿಸುವುದಲ್ಲವೇ ???


  • ಹಿರಿಯೂರು ಪ್ರಕಾಶ್ (ಚಿಂತಕರು, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW