ರೋಗಿ ಹಾಗು ವೈದ್ಯನ ನಡುವಿನ ಒಂದು ಹಾಸ್ಯ ಪ್ರಸಂಗ

ಉತ್ತರ ಕರ್ನಾಟಕದ ಹಿರಿ ಜೀವಗಳು ಉಪಮೇಯ, ಉಪಮಾನ, ಅಲಂಕಾರಿಕ ಪದಗಳನ್ನ ಸಮೃದ್ಧವಾಗಿ ತಮ್ಮ ಆಡು ಭಾಷೆಯಲ್ಲಿ ಬಳಸುತ್ತಾರೆ ಮತ್ತು ಮಾತಿನ ಮಲ್ಲರು‌. ಒಂದು ಹಾಸ್ಯ ಘಟನೆಯನ್ನು ಡಾ ಪ್ರಕಾಶ ಬಾರ್ಕಿಯವರು ಅಕ್ಷರರೂಪ ನೀಡಿ, ಓದುಗರನ್ನು ಹಾಸ್ಯದ ಹೊನಲಿನಲ್ಲಿ ತೇಲಿಬಿಟ್ಟಿದ್ದಾರೆ, ತಪ್ಪದೆ ಓದಿ…

ಮುಂಜಾನೆ 10 ಕ್ಕೆ ರೊಟ್ಟಿ, ಮೊಸರು, ಶೇಂಗಾ ಚಟ್ನಿ ತಿಂದು.. ಕ್ಲಿನಿಕ್’ಗೆ ಬಂದೆ. ರೊಟ್ಟಿ ತಿಂದರೆ ಮಟ ಮಟ ಮಧ್ಯಾಹ್ನದವರೆಗೆ ಹಸಿವು ಸುಳಿಯಲ್ಲ. ಪೇಷೆಂಟ್’ಗಳು ಕಾಯುತ್ತಾ ಸಾಲುಗಟ್ಟಿದ್ದರು. ಕಾಯುತ್ತಾ ಕುಳಿತ್ತಿದ್ದರಲ್ಲಿ ಮೊದಲಾಗಿ ಒಬ್ಬ ಒಳ ಬಂದ.

ಬಿಳಿ ಕಚ್ಚೆ ಪಂಜೆ, ಮೇಲೊಂದು ನಿಲುವಂಗಿ, ಹೆಗಲೆರಿದ್ದ ಟವೆಲ್, ಮುಖದ ತುಂಬಾ ಸುಸ್ತು. ಕುರುಚಲು ಗಡ್ಡ, ಕೆದರಿದ ತಲೆಗೂದಲು, ಇಳಿಬಿದ್ದ ನೆರೆ ಮೀಸೆ.. 60 ರ ಆಸುಪಾಸಿನ ನೀಳ ಕಾಯದ ವ್ಯಕ್ತಿ, ಮೈ ತುಂಬಾ ನಿಶ್ಯಕ್ತಿ ಹೊದ್ದಿದ್ದ. ನೋಡಿದಾಕ್ಷಣವೆ “ಸುಸ್ತಾಗಿದ್ದಾನೆ” ಅನಿಸೋ ಭಾವ.

ಫೋಟೋ ಕೃಪೆ : pinterest

ರೋಗಿ: ನಮಸ್ಕಾರ್ ಸಾಹೇಬ್ರ.

ನಾನು : ನಮಸ್ಕಾರ ಅಜ್ಜಾ.. ಯಾಕಪಾ..? ಭಾಳ‌ ಸುಸ್ತ ಕಾಣಾಕತ್ತಿ.

ರೋಗಿ: ಸರ್ರ್… ಹೊಟ್ಟ್ಯಾಗ ಭಾಳ‌ ತ್ರಾಸ ಆಗಾಕತ್ತೆತ್ರಿ.

ನಾನು : ಯ್ಯಾಕ..?? ಹೊಟ್ಟಿ ಜಾಡಸಾಕ್ಕತ್ತೆತನ?

ರೋಗಿ: ಹ್ಞೊಂ…ರ್ರಿ.‌

ನಾನು : ಯಾವಾಗಿಂದ? ವಾಂತಿ ಏನರ್ ಐತಿ?

ರೋಗಿ: ನಿನ್ರಾತಿಯಿಂದ ಐತ್ರಿ. ವಾಂತಿಲ್ರಿ..! ಬಾಯಾಗ ಜುಳು..ಜುಳು ನೀರೊಡ್ಯಾಕತ್ತತ್ತಿ. ಕೈ..ಕಾಲ ಬಳ ಬಳ ಅನಾಕತ್ತಾವ. ನಡದ್ರ ತಲಿ ಚಕ್ರ ರಿ. ಕಣ್ಣಾಗ ಕತ್ಲ ಬಂದಂಗಾಕ್ಕತಿ.

ನಾನು : ಎಷ್ಟ ಸಲ ಚರಗಿ ತಗೊಂಡೋಗಿ.? ಈ ಪರಿ ಸುಸ್ತ.. ಬಿ.ಪಿ ನೂ ಕಡಮಿ ಐತಿ. (ಬಿ.ಪಿ ಚೆಕ್ ಮಾಡುತ್ತಾ ಕೇಳಿದೆ)

ರೋಗಿ: ಲೆಕ್ಕಿಲ್ರಿ… ಕಚ್ಚಿ ಕಟ್ಕೇಳಾಕ ಪುರುಸೊತ್ತಿಲ್ಲ…!! ನಲ್ಲ್ಯಾಗ ನೀರ ಬಿಟ್ಟಂಗ ಹೊಕ್ಕತಿ…! ಕಸುವ ಸತ್ತತ್ರಿ..ಮೈಯಾಗಿಂದ.

ನಾನು : ಹ್ಮ್..!! ಹೌದು ಮತ್ತ ಆಕ್ಕತಿ.. ಭೇದಿ ಭಾಳಾದ್ರ. ಸಿಂಬಳದಂಗ ಏನ್ ಹೋಗಿಲಲ್ಲ? ಹೊಟ್ಟ್ಯಾಗ ನುವ್ವು ಐತ್ಯಾ?? (ಎಲ್ಲಾ ಪ್ರಶ್ನೆಗಳನ್ನು ಎಸೆದು ಕೂತೆ)

ರೋಗಿ: ಹೊಟ್ಟ್ಯಾಗ ನುವ್ವೇನಿಲ್ಡ್ರಿ…ಒಳಗ ಕೈ ಹಾಕಿ ಕಿವುಚಿ.. ಮಸರ ಕಟದಂಗ ಆಗಿ ಪಕ್ಕಿ ಬಿಗ್ಯಾಕತ್ತಾವ ಅಷ್ಟ್ ರೀ.. ಹೊಟ್ಟ್ಯಾಗರ ಕಳ್ಳ ಕಳ್ಳ ಅಂತಾ ಅನ್ನ ಕುದ್ದಂಗ ಆಕ್ಕತ್ರೀ. ಏನರ ತಿಂದ್ರ ಆದ ಕರಗದಂಗ ಹೊಂಟತಿ.. ಏನೂ ದಕ್ಕವಲ್ದ್. ಕುಂಡಿ ಮ್ಯಾಗ ಗುರ್ರ್ ಅಂತ ಸೌಂಡು ಬರಾಕತ್ತತ್ತಿ. (ಅಜ್ಜನ ಮಾತು ಹಾಗೆ ಮುಂದವರ್ದಿತ್ತು).

ವತ್ತಿ ಬಂದ ಕಚ್ಚ್ಯಾಗ ಉಚ್ಚಕೆಂಡಿದ್ದೆ ನಿನ್ರಾತಿ, ವಡಕ ವಡಕ ಮಸರ ಹೊದಂಗಾಗಿ, ಆಮ್ಯಾಗ ನೀರನ್ಯಾಂಗ ಕಿತ್ತ ಹೊಡ್ಯಕತ್ತತಿ… ದವಾಖಾನಿಗಿ ಬರ ಮುಂಚೆ.. ಲಾಸ್ಟ್ಗ್ ಅಂಬಲಿಹಂಗ… ಸಿಂಬ್ಳ ಅಂಟಂಟ ಹೊತ್ರಿ, ಮತ್ತೆಲ್ಲಿ ಕೀವ ಮಲುವು ಸುರುವಾತೇನ ಅಂತ ಒಡಿ ಬಂದೆ. ಬಾಯಿ ಆರಿ ಗಂಟಲದಾಗ ಅಂಟಂಟ ಕಟ್ಟದಂಗ ಆಗಾಕ್ಕತ್ತಿತ್ರಿ.

(ಮೊಸರನ್ನ, ಕೆನೆ ಮೊಸರು, ಅನ್ನ, ಅಂಬಲಿ, ನೀರು.. ಎಲ್ಲಾ ನೆನಪಾಗಿ ನನ್ನ ಹೊಕ್ಕಳದೊಳಗಿಂದ ವಾಕರಿಕೆ ಕಿತ್ತು ಬಂತು.. ಕಲ್ಪನೆಗೆ ತುಂಡು ಹಾಕಿದೆ‌)
(ಅಜ್ಜನ ಮಾತಿಗೆ ಬ್ರೇಕ್ ಹಾಕಿ…..ನನ್ನ ಕಲ್ಪನಾ ಲೋಕ ಕಳಚಲು……. ಮಾತಿಗೆ ಬಿದ್ದೆ)

ನಾನು : ಏನಾರ ತಿಂದು ಬಂದಿಯಾ?

ರೋಗಿ: ಇಲ್ರಿಪಾ.. ಏನಂದ್ರ ಏನೂ ದಕ್ಕಂಗಿಲ್ಲ. ಮುಂಜೆಲ್ಲೆ ಚಾ ಕುಡ್ದಿದ್ದ ಸಿವಾ. ಏನರ ಬಾಯಾಗ ಇಟ್ರ ” ಬೇನೆಲಿ (ಬೇವಿನ ಎಲೆ) ತಿಂದಂಗ” ಇಕ್ಕಟ್ಟೆ ಇಸಾ.

ಕುತ್ತಿಗೆ ಕೆಳ ಹಾಕಿ ಔಷಧಿ ಬರೆಯತೊಡಗಿದೆ.

ನಮ್ಮ ಉತ್ತರ ಕರ್ನಾಟಕದ ಜನರೆ ಹೀಗೆ, ಅದೂ ಹಿರಿ ಜೀವಗಳು ನೇರವಾಗಿ ಹೇಳದೆ ಉಪಮೇಯ, ಉಪಮಾನ, ಅಲಂಕಾರಿಕ ಪದಗಳನ್ನ ಸಮೃದ್ಧವಾಗಿ ಭಾಷೆಯಲ್ಲಿ ಬಳಸುತ್ತಾರೆ. ಮಾತಿನ ಮಲ್ಲರು‌. (ಈಗಿನವರಿಗೆ ಅಷ್ಟು ಸಮೃದ್ಧವಾಗಿ ಮಾತನಾಡಲು ಬರುವುದಿಲ್ಲ).

ಈ ಆಸ್ಪತ್ರೆ, ಕಾಯಿಲೆ ವಿಷಯದಲ್ಲಿ “ತಿನ್ನುವ ಪದಾರ್ಥಗಳನ್ನು” ರೂಪಕಾಲಂಕಾರವಾಗಿ ವಿವರಿಸಿದಾಗ.. ಜಾಸ್ತಿ ಕಲ್ಪನೆಗಿಳಿಯದೆ… ಸಂದರ್ಭಕ್ಕೆ ಅನುಸಾರ ಅರ್ಥೈಸಿಕೊಂಡು ಮುಂದುವರಿಯಬೇಕು ಇಲ್ಲವಾದರೆ ವೈದ್ಯರು ಊಟ ಮಾಡುವುದು ಕಷ್ಟ..ಕಷ್ಟ..


  • ಡಾ.ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW