ಬೀದಿ ನಾಯಿಗಳಿಗೆ ಆಹಾರ ನೀಡುವ ಮುನ್ನ ಎಚ್ಚರ !

ಬೀದಿ ನಾಯಿಗಳಿಗೆ ಆಹಾರ ನೀಡುವುದು ಇಷ್ಟವೇ ? ಹಾಗಿದ್ದರೆ ನಿಯಮಗಳಿವೆ, ಸರ್ವೋಚ್ಚ ನ್ಯಾಯಾಲಯದ ತೀರ್ಪಿದೆ, ಎಚ್ಚರ. ಪಶುವೈದ್ಯರಾದ  ಡಾ. ಎನ್.ಬಿ.ಶ್ರೀಧರ ಅವರು ಓದುಗರೊಂದಿಗೆ ಮಹತ್ವದ ಮಾಹಿತಿಯನ್ನು  ಓದುಗರೊಂದಿಗೆ ಹಂಚಿಕೊಂಡಿದ್ದಾರೆ,ಓದಿ ಜಾಗೃತರಾಗಿರಿ ….

ಇತ್ತೀಚೆಗಷ್ಟೇ ಭಾರತದ ಸರ್ವೋಚ್ಚ ನ್ಯಾಯಾಲಯವು ಬೀದಿ ಶ್ವಾನಗಳಿಗೆ ಯಾರು ಆಹಾರ ನೀಡಿ ಸಲಹುತ್ತಾರೆಯೋ ಅವರೇ ಅವುಗಳ ಆರೋಗ್ಯ ರಕ್ಷಣೆ ಮತ್ತು ಎಲ್ಲಾ ಪುಂಡಾಟಿಕೆ (?)ಗಳಿಗೂ ಸಹ ಜವಾಬ್ದಾರರೆಂಬರ್ಥದ ತೀರ್ಪಿತ್ತಿದೆ. ಬೀದಿ ನಾಯಿಗಳಿಗೆ ಅಹಾರ ನೀಡಿ ಪ್ರಾಣಿ ಪ್ರೇಮ ತೋರಿಸುವುದು ಅನೇಕರ ಅಭ್ಯಾಸ. ಆದರೆ ಇದಕ್ಕೆ ಭಾರತ ಸರ್ಕಾರದ ಪ್ರಾಣಿ ಕಲ್ಯಾಣ ಮಂಡಳಿಯ ಅನೇಕ ನೀತಿ ನಿಯಮಗಳಿವೆ. ಅವೂ ಒಂದು ಪ್ರಾಣಿಗಳಾಗಿರುವುದರಿಂದ ಅವುಗಳಿಂದ ಅನೇಕ ಅಪಾಯ ಒದಗಬಹುದಾಗಿದೆ. ಇದಕ್ಕೆಲ್ಲಾ ಆಹಾರ ಹಾಕಿದವರೇ ಜವಾಬ್ದಾರರಾಗುತ್ತಾರೆ. ಅವುಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ ಲಸಿಕೆ ಹಾಕುವುದೂ ಸಹ ಆಹಾರ ಹಾಕುವವರ ಜವಾಬ್ದಾರಿ. ಅಲ್ಲದೇ ಹಾಕಿದ ಅಹಾರದಿಂದ ತೊಂದರೆಯಾದರೆ ಜೈಲು ಸೇರಬೇಕಾದೀತು. ಈ ಎಲ್ಲಾ ವಿಷಯಗಳನ್ನು ಹೊಂದಿದ ಕಥಾ ಲೇಖನ ಇದು. ಮುಕ್ತ ಮನಸ್ಸಿನಿಂದ ಓದಿ. ಆರೋಗ್ಯಕರ ಚರ್ಚೆಯಲ್ಲಿ ತೊಡಗಿ.

ಫೋಟೋ ಕೃಪೆ : hindustantimes

ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣ. ಸಂಜೆ ಒಂದು ದಿನ ಗ್ರಂಥಾಲಯಕ್ಕೆ ಹೋಗಿ ಸಂಶೋಧನಾ ಕಾರ್ಯಕ್ಕಾಗಿ ಯಾವುದೋ ಪುಸ್ತಕ ಹುಡುಕಬೇಕಾಗಿತ್ತು. ದಾರಿಯ ಮೇಲೆ ವೃದ್ಧರೊಬ್ಬರು ಕೈಯಲ್ಲಿ ಪ್ಲಾಸ್ಟಿಕ್ ಚೀಲ ಹಿಡಿದು ಬಂದರು. ಅವರನ್ನು ಕಂಡ ಕೂಡಲೇ ಎಲ್ಲಿದ್ದವೋ ಶ್ವಾನಗಳು. ಓಡೋಡಿ ಬಂದವು. ಅವುಗಳ ಸಂಖ್ಯೆ ೧೦-೧೨ ಇರಬಹುದೇನೋ? ಎಲ್ಲವೂ ತಿಂದುಂಡು ದಷ್ಟಪುಷ್ಟವಾಗಿದ್ದವು. ವೃದ್ದರು ತಮ್ಮ ಕೈಚೀಲದಿಂದ ಒಂದೊಂದೇ ತಿಂಡಿ ತಿನಿಸು ತೆಗೆದು ಅವುಗಳಿಗೆ ಉಣಬಡಿಸಿದರು. ಬಹುಷ: ತಿಂಡಿಗಳಲ್ಲಿ ಚಿಕನ್, ಮಟನ್ ಐಟಂ ಸಹಾ ಇದ್ದವೇನೋ?. ಶ್ವಾನಗಳು ಒಬ್ಬರ ಮೇಲೊಬ್ಬರು ಬಿದ್ದು ತಿಂಡಿಯನ್ನು ಮುಗಿಸಿದವು. ತಿಂಡಿ ಸಿಗದ ಒಂದೆರಡು ಶ್ವಾನ ಮಹಾಶಯರು ಬಾಲ ಅಲ್ಲಾಡಿಸುತ್ತಾ ವೃದ್ದರ ಮುಖವನ್ನೇ ಧೈನ್ಯತೆಯಿಂದ ನೋಡುತ್ತಾ ಕರುಣೆಯ ರಸವನ್ನೇ ಉಕ್ಕಿಸುವಂತೆ ಪೋಸು ನೀಡಿದವು. ವೃದ್ದರು ಇನ್ನೂ ಕರಗಿ ಹೋಗಿ “ಪುಟ್ಟಾ… ಬೇಜಾರು ಮಾಡಿಕೊಳ್ಬೇಡ. ಆ ಕರಿ ದಡಿಯ ಇದಾನಲ್ಲಾ.. ಅವನು ಕಸಿದುಕೊಂಡ್ನಾ.. ಬೇಜಾರು ಬೇಡ.. ನಾಳೆ ತರ್ತೀನಿ ಕಣೋ..ಚಿಕನ್ನೇ ಬೇಕಾ? ತಂದ್ ಕೊಡ್ತೀನಿ.. ಎಂದು ಅಪ್ಯಾಯತೆಯಿಂದ ಅವುಗಳ ಜೊತೆ ಸಂಭಾಷಣೆ ನಡೆಸಿದ್ದರು. ವೃದ್ದರ ಮುಖದಲ್ಲಿ ಅಸಾಮಾನ್ಯವಾದ ತೃಪ್ತಿಯ ಕಳೆ ನಲಿದಾಡುತ್ತಿತ್ತು. ಜಗತ್ತಿಗೆ ಮಹದುಪಕಾರ ಮಾಡಿದ ಭಾವನೆಯೂ ನಲಿದಾಡುತ್ತಿತ್ತು. ನಾನು ಮೆಲ್ಲನೇ ವೃದ್ದರನ್ನು ಸಮೀಪಿಸಿ “ಸಾರ್.. ಇಷ್ಟೆಲ್ಲಾ ಪ್ರೀತಿ ಈ ನಾಯಿಗಳಿಗೆ ನಿಮ್ಮ ಮೇಲೆ” ಅಂದೆ. ವೃದ್ದರು “ರೀ.. ನಾಯಿ ಅಂತೆಲ್ಲಾ ಹೇಳಿ ಅವುಗಳಿಗೆ ಅವಮಾನ ಮಾಡ್ಬೇಡ್ರಿ.. ಅವುಗಳಿಗೂ ಜೀವ ಇದೆ. ನೋಡಿ ನಾನು ಎಲ್ಲರಿಗೂ ಹೆಸರು ಇಟ್ಟಿದ್ದೀನಿ.. ಏಯ್..ಟೋನಿ, ಜಾನಿ, ಜಾಕ್, ರಾಗಿಣಿ, ರಮಾ.. ಇತ್ಯಾದಿ ತರಹೆವಾರಿ ಹೆಸರು ಹೇಳಿ ಕೂಗಿದ್ದಷ್ಟೇ ತಡ, ನಾಯಿ.. ಅಲ್ಲಲ್ಲ.. ಶ್ವಾನ ಮಹಾಶಯರು ವೃದ್ದರ ಸುತ್ತ ನಿಂತು ನನ್ನನ್ನೇ ಕೆಕ್ಕರಿಸಿ ನೋಡುತ್ತಾ ಎರಡೂ ತುಟಿಗಳನ್ನು ಸಾಧ್ಯವಾದಷ್ಟು ಮೇಲೆತ್ತಿ ಒಳ್ಳೆ ಹೊಳಪು ಕೊಟ್ಟ ಗರಗಸದಂತಿದ್ದ ಅವುಗಳ ಸ್ವಾಭಾವಿಕ ಆಯುಧವಾದ ಎರಡೂ ದಂತ ಪಂಕ್ತಿಗಳ ಸಂಪೂರ್ಣ ಪ್ರದರ್ಶನ ಮಾಡಿದವು. ತಮ್ಮ ಆಯುದ ಖಜಾನೆಗಳಲ್ಲಿ ಇರುವ ವಿವಿಧ ತರಹೇವಾರಿ ಆಯುಧೋಪಕರಣಗಳ ವಿವರಗಳನ್ನು ಅವುಗಳ ಉಪಯೋಗದಿಂದ ಮುಂದೊದಗುವ ದುಷ್ಪರಿಣಾಮಗಳನ್ನೂ ನನಗೆ ಮನದಟ್ಟಾಗುವಂತೆ ಎಷ್ಟು ಸಾಧ್ಯವೋ ಅಷ್ಟು ಅಕರಾಳ ವಿಕರಾಳತೆಯಿಂದ ತೋರಿಸಿದವು.

ಫೋಟೋ ಕೃಪೆ : kannananimalwelfare

ನಾನು ಹೆದರದೇ ಇರುವುದನ್ನು ನೋಡಿ ಬೇಸರವಾಯಿತೋ ಏನೋ.. ಹೂ0.. ಹು0.. ಅಂತ ರಾಗ ಎಳೆದು ತಿಂಡಿ ಇನ್ನು ಸಿಗಲ್ಲ ಎಂದಾದ ಮೇಲೆ ತಮಗೇನು ಕೆಲಸ ಎಂಬಂತೆ ತಮ್ಮ ತಮ್ಮ ಕಾರುಬಾರಿಗೆ ತೊಡಗಿದ ನಂತರ ನಾನು ಮಾತು ಮುಂದುವರೆಸಿದೆ. ಅಲ್ಲ ಸಾರ್.. ಈ ನಾಯಿಗಳನ್ನೆಲ್ಲಾ ಕ್ಯೂಪಾದ ಹತ್ತಿರ ಯಾರೋ ಬಿಟ್ಟು ಹೋಗಿ ಬಿಡ್ತಾರೆ. ಇವಕ್ಕೆ ಏನೂ ತಿಂಡಿ ತೀರ್ಥದ ಕೊರತೆ ಇಲ್ಲ. ನೋಡಿ ಒಳ್ಳೆ ರೌಡಿ ತರ ಬೆಳ್ದಿದಾವೆ. ನಿಮ್ಮಾಂಗೇ ಅವಕ್ಕೆ ಅನೇಕ ರಕ್ಷಕರಿದ್ದಾರೆ. ಅವು ಒಳ್ಳೆ ರೌಡಿಗಳ ಹಾಗೇ ಅಲ್ಲಿ ಮುಂದೆ ಹೋಗುವ ಕ್ಯಾಂಪಸ್ ಸ್ಕೂಲಿನ ಮಕ್ಕಳನ್ನೆಲ್ಲಾ ಕಚ್ಚುತ್ತವೆ ಗೊತ್ತಾ ನಿಮಗೆ” ಅಂದೆ. ವೃದ್ದರು ಸ್ವಲ್ಪ ಅಸಮಾಧಾನಗೊಂಡು “ಯಾರ್ರೀ ನೀವು.. ನನ್ನ ಖರ್ಚು ನನ್ನ ಸಂತೋಷ.. ಅಂದರು. ಸಾರ್.. ನಾನು ಈ ವೆಟರ್ನರಿ ಕಾಲೇಜಿನಲ್ಲಿ ಪ್ರಾಧ್ಯಾಪಕ. ಇವು ಕೊಡುವ ಕಾಟ ನೋಡಿ ಸಾಕಾಗಿದೆ. ಅದ್ರಲ್ಲಿ ಬೇರೆ ನೀವು ಒಳ್ಳೊಳ್ಳೇ ಅಹಾರ ಕೊಡ್ತೀರಿ. ಈ “ನಾಯಿ” ಅಲ್ಲಲ್ಲ “ಶ್ವಾನ” ಗಳನ್ನೆಲ್ಲಾ ನಿಮ್ಮ ಮನೆಗೇ ಕರೆದುಕೊಂಡು ಹೋಗಿ ತಿಂಡಿ ಕೊಡಬಹುದಲ್ಲ. ಅಲ್ಲೇ ಸಣ್ಣ ನಾಯಿ ಮನೆ ಸ್ಥಾಪನೆ ಮಾಡಿ ಇನ್ನೂ ತ್ರಪ್ತಿ ಪಡಬಹುದಲ್ಲ. ೨೪ ಗಂಟೇನೂ ಅವುಗಳ ಜೊತೆನೇ ಇರಬಹುದು ಅಂದೆ. ವೃದ್ಧರಿಗೆ ನಖಶಿಕಾಂತ ಉರಿದು ಹೋಯ್ತು ಅನಿಸುತ್ತದೆ.

ಮುಖವನ್ನೆಲ್ಲಾ ಕೆಂಪಾಗಿಸಿಕೊಂಡು “ಏನ್ರೀ ವೆಟರ್ನರಿ ಡಾಕ್ಟರು ಅಂತೀರಾ.. ಒಂದು ವೃತ್ತಿ ಗೌರವನೇ ಇಲ್ವಾ ನಿಮಗೆ? ಅದೇನ್ರಿ ಪಾಠ ಮಾಡ್ತೀರಿ ಹುಡುಗರಿಗೆ? ಪ್ರಾಣಿಗಳ ಮೇಲೆ ಪ್ರೀತಿ ಇರಬೇಕು ಕಣ್ರೀ..ಆಗಲೇ ಸರಿಯಾಗಿ ಪಾಠ ಮಾಡಲಿಕ್ಕೆ ಆಗೋದು. ಅನುಭವಿಸಿ ಪಾಠ ಮಾಡ್ಬೇಕು ಕಣ್ರೀ.. ನಿಜ ಹೇಳ್ಬೇಕಂದ್ರೆ ಇವಕ್ಕೆಲ್ಲಾ ನೀವೇ ಅನ್ನಾ ಹಾಕಿ ನೋಡಿಕೊಳ್ಳಬೇಕು ಕಣ್ರೀ.. ರಿಟೈರಾದ ನಾನು ಜಯನಗರದಿಂದ ಬಂದು ಈ ವಯಸ್ಸಿನಲ್ಲಿ ಇಷ್ಟೆಲ್ಲಾ ಪ್ರಾಣಿಗಳಿಗೆ ಅನ್ನಾ ಹಾಕ್ತಿನಿ. ಯುಜಿಸಿ ಸ್ಯಾಲರಿ ತೆಗೆದುಕೊಂಡು ಮಜಾ ಮಾಡೋ ನಿಮಗೇನ್ರಿ ದಾಡಿ !! ಅಂತ ಕ್ಯಾಂಪಸ್ಸಿನಲ್ಲಿರುವ ಶ್ವಾನ ಮಹಾಶಯರ ಜವಾಬ್ದಾರಿಯೆಲ್ಲಾ ಇಲ್ಲಿಯ ಪ್ರಾಧ್ಯಾಪಕರುಗಳದೇ ಎಂಬ ರೀತಿ ದಬಾಯಿಸಿದರು. ಅಷ್ಟರೆಲ್ಲೇ ಅವರ ಏರು ಧ್ವನಿ ಕೇಳಿ ಕ್ಯಾಂಪಸ್ಸಿನಲ್ಲಿ ವಾಕಿಂಗ್ ಹೋಗುತ್ತಿರುವ ಜನರೆಲ್ಲಾ ಒಬ್ಬೊಬ್ಬರೇ ಬಂದು ಸೇರತೊಡಗಿದರು. ಒಂದಿಬ್ಬರು ಹಿರಿಯ ನಾಗರೀಕರು “ ಅಲ್ಲ.. ನಾಯಿಗಳಿಗೆ ತಿಂಡಿ ಹಾಕಿದ್ರೆ ನಿಮ್ಮ ಗಂಟೇನು ಹೋಗುತ್ತೆ?. ಪಾಪ.. ಅವರಿಗೆ ೭೦ ವರ್ಷ.. ಮೇಷ್ಟ್ರಾಗಿ ರಿಟೈರಾಗಿದ್ದಾರೆ. ಆರೋಗ್ಯಾನೂ ಸರಿ ಇಲ್ಲ. ಬಿಪಿ, ಶುಗರ್ ಇದೆ.ಪಾಪ.. ಅವರಿಗೇನೋ ತೃಪ್ತಿ.. ಮನೆಯವರು ಇಲ್ಲ. ಮಕ್ಕಳಿಬ್ಬರೂ ಇವ್ರಿಂದ ದೂರ ಇದ್ದಾರೆ. ಅವರ ಪ್ರೀತಿ ಸಿಗ್ತಿಲ್ಲ. ಅಳಿಯಂದ್ರು ಹತ್ರ ಸೇರ್ಸಲ್ಲ. ಅವರು ನಾಯಿಗಳಿಗೆ ಅವರ ಕಾಸು ಖರ್ಚು ಮಾಡಿ ಆಹಾರ ನೀಡಿದರೆ ನಿಮ್ಮದೇನು ಗಂಟು ಹೋಗುತ್ತೆ ? ನಿಮ್ಗೇನ್ರಿ ತೊಂದ್ರೆ ? ಎನ್ನುವ ಸ್ವರದಲ್ಲಿ ಮಾತನಾಡಿದರು.

ಫೋಟೋ ಕೃಪೆ : news.abplive

ನಾನು “ಅದೆಲ್ಲ ಸರಿ. ಅವರು ಆಹಾರ ಹಾಕುವುದರ ಬದಲು ಈ ಎಲ್ಲಾ ನಾಯಿ ಅಲ್ಲಲ್ಲ.. ಶ್ವಾನಗಳನ್ನು ಅವರ ಮನೆಗೇ ಕರೆದು ಕೊಂಡು ಹೋಗ್ಲಿ ಬಿಡಿ. ಅಲ್ಲೇ ಸಾಕಿಕೊಳ್ಳಲಿ. ಒಂದು “ಶ್ವಾನಾಶ್ರಮ” ತೆಗೆದು ಇನ್ನೂ ಇದೇ ತರಹದ ಶ್ವಾನಗಳಿಗೆ ಆಶ್ರಯ ಕೊಡ್ಲಿ. ಡಾಕ್ಟರುಗಳನ್ನು ಕರೆದು ಲಸಿಕೆ ಹಾಕ್ಸ್ಲಿ. ಹೇಗಿದ್ರು ಅವರು ಒಬ್ಬರೇ ತಾನೆ? ಅವರ ಮನೆಯಲ್ಲೇ ನಡೆಯಲಿ ಈ ಉಪಚಾರ.. ಅಂದೆ. ಹೋಗ್ಲಿ, ಭಾರತ ಸರ್ಕಾರದ ಅಧೀನದ ಪ್ರಾಣಿ ಕಲ್ಯಾಣ ಮಂಡಳಿಯು ಈ ಕುರಿತು ಮಾಡಿದ ನಿಯಮಗಳೇನಾದರೂ ಇವರಿಗೆ ಗೊತ್ತಾ?” ಅಂದೆ. ೨೦೧೪ ರಲ್ಲಿ ರಚಿಸಿದ ಆ ನಿಯಮಾವಳಿಯ ಪ್ರಕಾರ ನಾಯಿಗಳಿಗೆ ಅಹಾರ ನೀಡುವಾಗ ಅವರಿಗೆ ಸಂಬಂಧಿಸಿದ ಪ್ರದೇಶಗಳ ನಾಯಿಗಳಿಗೆ ಹೊರತು ಪಡಿಸಿ ಇತರ ನಾಯಿಗಳಿಗೆ ಅಹಾರ ನೀಡುವಂತಿಲ್ಲ. ಆದರೆ ಯಜಮಾನ್ರು ಜಯನಗರದವರು ಹೆಬ್ಬಾಳಕ್ಕೆ ಹೇಗೆ ಬರ್ತಾರೆ? ಅವರಿಗೆ ಅಲ್ಲಿ ನಾಯಿ ಸಿಗಲ್ವೇ ? ಅಂದೆ.

ಮಕ್ಕಳು ಆಟವಾಡುವ, ಸಾರ್ವಜನಿಕರು ಮುಂಜಾನೆ ವಾಕಿಂಗ್ ಹೋಗುವ,ಜನಭರಿತ ಪ್ರದೇಶದಲ್ಲಿರುವ ನಾಯಿಗಳಿಗೆ ಆಹಾರ ಹಾಕುವಂತೆಯೆ ಇಲ್ಲ. ಕೇವಲ ಅವರ ಮನೆಯ ಹತ್ತಿರದ ಸಣ್ಣ ಸಂಖ್ಯೆಯ ನಾಯಿಗಳಿಗೆ ಮಾತ್ರ ಆಹಾರ ನೀಡಬಹುದು ಅಂತಿದೆ. ನಿಮಗೆ ಇದು ಗೊತ್ತಾ? ಅಂದೆ. ಇದು ಸಾರ್ವಜನಿಕರು ವಾಕಿಂಗ್ ಮಾಡಲೆಂದು ಮತ್ತು ಮಕ್ಕಳು ಆಟವಾದಲೆಂದೇ ಇರುವ ಸ್ಥಳ ಇಲ್ಲಿ ಯಾವುದೇ ಕಾರಣಕ್ಕೂ ಅವುಗಳಿಗೆ ಆಹಾರ ಹಾಕುವಂತಿಲ್ಲ ಅಂದೆ. ಯಜಮಾನರ ಸ್ನೇಹಿತರಿಗೆ ಈ ನಿಯಮಗಳೆಲ್ಲಾ ಏಕೋ ಅಪಥ್ಯವಾದವುಗಳಂತೆ ಕಂಡವು.

ಅಲ್ರೀ.. ಇವುಗಳಿಗೆ ಆಹಾರ ನೀಡಲು ಇಷ್ಟೆಲ್ಲಾ ಕಾನೂನು ಮಾಡಿದಾರಾ? ನಮಗ್ಯಾಕೆ ಇದರ ಸಹವಾಸ ಎನ್ನುತ್ತಾ ಜಾಗ ಖಾಲಿ ಮಾಡಿದರು.

ಫೋಟೋ ಕೃಪೆ : nationalgeographic

ಯಜಮಾನರು ದುರುಗುಟ್ಟುತ್ತಾ ಅವರ ಸಂತಸಕ್ಕೆ ಅಡ್ಡ ಬಂದ ನನ್ನನ್ನು ನುಂಗುವಂತೆ ನೀಡಿದರು. ನಾನು ಮಾತು ಮುಂದುವರೆಸಿದೆ. ನೋಡಿ ಮೇಷ್ಟ್ರೇ.. ನಾಯಿಗಳಿಗೆ ಅಹಾರ ಹಾಕ್ತಿರಲ್ಲಾ ಆ ಸ್ಥಳವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಅಹಾರ ತಿಂದು ಯಾವುದೇ ಶ್ವಾನಗಳಿಗೆ ತೊಂದರೆಯಾದರೆ ನೀವೇ ಜವಾಬ್ದಾರಿಯಾಗ್ತೀರಿ. ನಿಮಗೆ ಸಂಬಂಧಿಸಿದ ನಿಯಮಾವಳಿ ಪ್ರಕಾರ ಶಿಕ್ಷೆ ನೀಡಬಹುದು. ಮತ್ತು ನಿಮ್ಮನ್ನು ನಾಯಿಗಳು ಪ್ರೀತಿಸುವುದರಿಂದ ಈ ಎಲ್ಲಾ ಶ್ವಾನಗಳ ಸಂತಾನಹರಣ ಕ್ರಿಯೆ ಹತ್ತಿರದ ಪ್ರಾಣಿ ದಯಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಮಾಡಿಸಿರಿ ಮತ್ತು ಪ್ರತಿ ವರ್ಷ ಲಸಿಕೆ ಹಾಕುವುದಕ್ಕೆ ಮತ್ತು ಅದರ ದಾಖಲೆಗಳ ನಿರ್ವಹಣೆಗೆ ನೀವೇ ಜವಾಬ್ದಾರರಾರು. ಇಲ್ಲಿ ಸಿಸಿ ಕ್ಯಾಮರಾ ಇದೆ. ನಾಳೆಯೇ ಇದನ್ನೆಲ್ಲಾ ಮಾಡಿ ಅಂದೆ.
ವೃದ್ಧರು “ಅಯ್ಯಯ್ಯೋ.. ಒಂದಿಷ್ಟು ಪ್ರಾಣಿಗಳ ಹಸಿವು ನೀಗಿಸಲು ನನಗೆ ಸ್ವಾತಂತ್ರ್ಯವಿಲ್ವೇ? ಹಾಳಾಗಿ ಹೋಗಿ ಎಂದು ಶಪಿಸುತ್ತಾ ದುರ್ದಾನ ಪಡೆದವರಂತೆ ಅಲ್ಲಿಂದ ಕಾಲ್ತೆಗೆದರು.
ಹಿರಿಯ ನಾಗರಿಕರಿಗೆ, ಮಕ್ಕಳಿಗೆ ಮತ್ತು ಕೆಲವು ಹೆಣ್ಣುಮಕ್ಕಳಿಗೆ ಬೀದಿ ನಾಯಿಗಳಿಗೆ ಆಹಾರ ನೀಡುಯ ಅಭ್ಯಾಸ ಜಾಸ್ತಿ. ಮನೆಯಲ್ಲಿನ ಜನ ಸರಿಯಾಗಿ ನೋಡಿಕೊಳ್ಳದಿದ್ದರೆ ಇವರ ನಾಯಿಗಳ ಸ್ನೇಹಪರ ನಡುವಳಿಕೆ ಸಿಕ್ಕಾಪಟ್ಟೆ ಇಷ್ಟವಾಗಿ ಬಿಡುತ್ತದೆ. ಮನೆಯಲ್ಲಾದರೋ ಮಕ್ಕಳು ಹೇಳಿದಂತೆ ಕೇಳಲ್ಲ. ಇವರ ಕಡೆ ಒಂದು “ಪ್ರೀತಿಭರಿತ” ನೋಟ ಬೀರಲ್ಲ. ಹೊಟ್ಟೆಗೆ ಹಿಟ್ಟು ನೀಡಿದವರನ್ನು ವಿಶ್ವಾಸದಿಂದ ನೋಡುವುದು ನಾಯಿಯ ಹುಟ್ಟು ಗುಣ. ಅದರಲ್ಲೂ ಕೆಲವರು ಚಿಕನ್, ಮಟನ್ ತಂದು ಬೀದಿಯ ನಾಯಿಗಳಿಗೆ ಹಾಕಿ ಜಗತ್ತನ್ನೇ ಗೆದ್ದವರಂತೇ ಸಂತಸ ಪಡುತ್ತಾರೆ. ಇವರನ್ನು ಈ ಶ್ವಾನಗಳು ಇನ್ನೂ ಜಾಸ್ತಿ ಹಚ್ಚಿಕೊಳ್ಳುತ್ತವೆ. ಅವರು ಬರುವುದನ್ನೇ ಚಾತಕ ಪಕ್ಷಿಯಂತೇ ಕಾದು ಅವರು ಹಾಕುವ ಪೀಸುಗಳನ್ನು ಹೊಂದಿದ ಕೈಚೀಲವನ್ನೇ ಆಸೆ ಕಂಗಳಿಂದ ದಿಟ್ಟಿಸಿ ನೋಡುತ್ತಿರುತ್ತವೆ.

ನಾಯಿಗಳಿಗೆ ಅಹಾರ ಹಾಕಿ ಜೀವನ “ಸಾರ್ಥಕ” ಮಾಡಿಕೊಳ್ಳುವುದು ಹಲವರ ಸ್ವಾಭಾವಿಕ ದಿನಚರಿಯಾಗಿದೆ. ಇವರಿಗೆ ಯಾವುದೇ “ಉತ್ತರದಾಯಿತ್ವ” ಇಲ್ಲ. ನಾಯಿ ಸಾಕಿ ಅದರಿಂದ ಬರುವ ತೊಂದರೆ ತಾಪತ್ರಯಗಳನ್ನು ಎದುರಿಸುವ ಅವಶ್ಯಕತೆಯೂ ಇಲ್ಲ. ಬೆಳಗಿನ “ನಿತ್ಯಕರ್ಮ” ಕ್ಕೆ ಕರೆದುಕೊಂದು ಹೋಗುವ ತಾಪತ್ರಯವಂತೂ ಇಲ್ಲವೇ ಇಲ್ಲ. ಅಕಸ್ಮಾತ್ತು ಆರೋಗ್ಯ ಹದಗೆಟ್ಟರೆ ಪಶುವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಕ್ಯೂ ನಿಂತು ಪರೀಕ್ಷೆ ಮಾಡಿಸಿಕೊಂಡು ಔಷಧಿಗೆ ಖರ್ಚು ಮಾಡುವ ತಾಪತ್ರಯವಂತೂ ಇಲ್ಲವೇ ಇಲ್ಲ. ಅಕಸ್ಮಾತ್ತು ಮರಣ ಹೊಂದಿದರೆ ದು:ಖ ಪಡುವ ಪ್ರಮೇಯವೇ ಇಲ್ಲ. ಅವುಗಳ ನೈಸರ್ಗಿಕ ವಾಂಚೆಗಳನ್ನು ತೀರಿಸುವ ದರ್ದೂ ಇಲ್ಲ.

ಫೋಟೋ ಕೃಪೆ : Times of India

ಕ್ಯಾಂಪಸ್ಸಿನಲ್ಲಿನ ವಿದ್ಯಾರ್ಥಿಗಳು ಬೈಕನ್ನು ಏರಿ ಸವಾರಿ ಹೊರಟಾಗ ಇದ್ದಕ್ಕಿದ್ದಂತೆ ಪರಸ್ಪರ ಜಗಳವಾಡುತ್ತಾ ವೇಗದಿಂದ ನುಸುಳಿ ಬಂದು ಟೈರುಗಳ ಮಧ್ಯೆ ಚಂಡುಗಳಂತೆ ಪುಟಿದಿದ್ದರಿಂದ ಎಷ್ಟೋ ಜನ ಬೈಕಿಂದ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಿದೆ. ಕ್ಯಾಂಪಸ್ಸಿಗೆ ಬರುವ ಎಲ್ಲಾ ವಾಹನಗಳನ್ನು ಬಿಡದೇ ಬೆನ್ನಟ್ಟುವ ಇವುಗಳ ಅಟಾಟೋಪಕ್ಕೆ ಹೆದರಿ ಸಂಜೆಯ ಸಮಯದಲ್ಲಿ ನನ್ನ ಮಿತ್ರರು “ನಿಮ್ ಕ್ಯಾಂಪಸ್ಸಿನಲ್ಲಿ ನಾಯಿಗಳ ಕಾಟ ಜಾಸ್ತಿ ಕಣಯ್ಯ.. ಸಂಜೆ ಬರಲ್ಲ” ಎಂದಿದ್ದಿದೆ. ಕ್ಯಾಂಪಸ್ಸಿನ ಶಾಲೆ ಮಕ್ಕಳು ಊಟದ ಬ್ಯಾಗನ್ನು ತೆಗೆದು ಕೊಂಡು ಹೋಗುವಾಗ ಅವರನ್ನು ಬೆನ್ನಟ್ಟಿ ಬ್ಯಾಗನ್ನು ಕಸಿದು ಬೆದರಿಸಿದರೆ ಅವರಿಗೂ ಕಚ್ಚಿದ ಅನೇಕ ಘಟನೆಗಳಿವೆ. ಇದಕ್ಕೆಲ್ಲಾ ಈ ಶ್ವಾನ ಪ್ರೇಮಿಗಳು ಅಗಾಗ ತಂದು ತಿನ್ನಿಸುವ ಆಹಾರವೇ ಕಾರಣ.

ಹೀಗೆ ಜವಾಬ್ದಾರಿ ರಹಿತ “ಪ್ರಾಣಿ ಪ್ರೇಮ” ಬೇಕೇ? ಈ ಶ್ವಾನಗಳೇನೂ ಅಬ್ಬೇಪಾರಿಗಾಳಲ್ಲ. ಅವು ಅನೇಕರಿಂದ ಇದೆ ರೀತಿ ಅಹಾರ ಪಡೆದು ದಷ್ಟಪುಷ್ಟವಾಗಿ ಸಿಕ್ಕ ಸಿಕ್ಕವರನ್ನೆಲ್ಲಾ ಕಚ್ಚುತ್ತಾ, ರಾತ್ರಿಯೆಲ್ಲಾ ಕ್ಯಾಂಪಸ್ಸಿನಲ್ಲಿ ಊಳಿಡುತ್ತಾ ಗಾಬರಿ ಹುಟ್ಟಿಸುತ್ತವೆ. ಎಲ್ಲರೂ ಸವಿನಿದ್ರೆ ಸವಿಯುವ ಹೊತ್ತಿನಲ್ಲಿ ಎಚ್ಚರವಾಗಿ ಬೊಗಳುವ ಇವುಗಳು ರಾತ್ರಿ ಪಾಳಿಯಲ್ಲೇ ಬದುಕುವವರಿಗೂ ಅಸಹನೀಯವೆನ್ನಿಸುತ್ತವೆ. ರಾತ್ರಿ ಕಳ್ಳರನ್ನು ಕಾಯುತ್ತವೆ ಇವು ಅಂದರೂ ಸಹ, ಅವರೂ ಸಹ ಒಂದೆರಡು ಚಿಕನ್ ಪೀಸ್ ನೀಡಿದರೆ ಗಪ್ ಚುಪ್ ಆಗಿ ಚಿಕನ್ ಮೆಲ್ಲುತ್ತಾ ಕಳ್ಳತನ ಮಾಡಲು ರಹದಾರಿ ಕೊಟ್ಟು ಬಿಡುತ್ತವೆ. ಮನುಷ್ಯರಿಗೆ ಇವನ್ನು ಕಂಡರೆ ಹೆದರಿಕೆಯೇ ಸರಿ. ಏಕೆಂದರೆ ಜಾಗತಿಕವಾಗಿ ಪ್ರತಿವರ್ಷ ರೇಬೀಸ್ ಖಾಯಿಲೆಯಿಂದ ಸಾಯುವ ಜನರಲ್ಲಿ ಶೇಕಡ ೯೯ ರಷ್ಟು ಜನ ಬೀದಿನಾಯಿ ಕಡಿತದಿಂದಲೇ ಸಾಯುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ. ಅದೂ ಈ ಬೀದಿನಾಯಿಗಳನ್ನು ನಿಯಂತ್ರಿಸದ ಅಭಿವೃದ್ಧಶೀಲ ರಾಷ್ಟ್ರಗಳಲ್ಲಿ ಇದು ಹೆಚ್ಚು. ಭಾರತ ಎಷ್ಟೇ ಅಭಿವೃದ್ಧಿಯಾಗಿದೆ ಎಂದುಕೊಂಡರೂ, ಬೀದಿನಾಯಿಗಳ ಸಂಖ್ಯೆ ಹೆಚ್ಚಿರುವುದೂ ಸತ್ಯವೇ! ಹೀಗಿದ್ದಾಗ ಇವುಗಳಿಗೆ ಆಹಾರ ಹಾಕಿ ಬೆಳೆಸುವುದು ಎಷ್ಟು ಸರಿ? ಇದರ ಬಗ್ಗೆ ಆರೋಗ್ಯಕರ ವಿಮರ್ಶೆಯಾಗಲಿ.


  • ಡಾ. ಎನ್.ಬಿ.ಶ್ರೀಧರ
    ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
    ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
    (ಕರ್ನಾಟಕ ಪಶುವೈದ್ಯಕೀಯ ಪಶು, ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಬೀದರ)
    ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-೫೭೭೨೦೪

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW