“ಇವು ಹೋರಾಟದ ಆಟ-ಮಾಟಗಳ ಬಿಚ್ಚಿಡುವ ನಾಲ್ಕು ಹನಿಗವಿತೆಗಳು. ಹೋರಾಟದೊಳಗಣ ನೆಳಲು-ಬೆಳಕಿನಾಟ ಬಿಂಬಿಸುವ ಭಾವಪ್ರಣತೆಗಳು. ಇಂದು ದುರುದ್ದೇಶ, ಹಿತಾಸಕ್ತಿಗಳ ಮೇಲಾಟಗಳಿಂದ ಹೋರಾಟಗಳು ಬರೀ ದೊಂಬರಾಟಗಳಂತಾಗಿವೆ. ಸ್ವಾರ್ಥಿ, ಕಪಟಿಗಳ ಬೃಹನ್ನಾಟಕಗಳಲ್ಲಿ ಹೋರಾಟಗಾರರು ವಿದೂಷಕರಾಗಿ ಕಂಗೊಳಿಸುತ್ತಿದ್ದಾರೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
- ತತ್ವ-ಸತ್ವ.!
ಹೋರಾಟಗಳ ಯಶಸ್ಸಿಗೆ
ಪಕ್ಷ, ವ್ಯಕ್ತಿ, ನಿಷ್ಟೆಗಿಂತಲೂ
ವಸ್ತುನಿಷ್ಟತೆಯೇ ಮುಖ್ಯ.!
ವೈಯಕ್ತಿಕ ಘರ್ಷಣೆಗಿಂತ
ಸಿದ್ದಾಂತ ಸಂಘರ್ಷ ವೇದ್ಯ.!
********
- ಅನಾವರಣ.!
ಸತ್ಯದ ಹೋರಾಟಗಳಲ್ಲಿ
ಪ್ರಾಮಾಣಿಕತೆಯ ದರ್ಶನ.!
ಸ್ವಾರ್ಥದ ಹೋರಾಟಗಳಲ್ಲಿ
ಸುಳ್ಳುವಂಚನೆಯ ನರ್ತನ.!
********
- ದುರಂತ.!
ಮುಂದೆ ನಿಂತವನಿಗೆ
ಸ್ಪಷ್ಟ ಗುರಿಯಿಲ್ಲ.!
ಹಿಂದೆ ನಿಂತವರಿಗೆ
ಕನಿಷ್ಟ ಅರಿವಿಲ್ಲ.!
******
- ಭೂಮಿಕೆ..!
ನಾಯಕ, ಹೋರಾಟಗಾರ
ಬೀದಿಯ ಮಧ್ಯದಿಂದ
ಅವತರಿಸಬೇಕೆ ವಿನಹ..
ನಾಲ್ಕುಗೋಡೆ ನಡುವಿಂದಲ್ಲ.!
ಚಳುವಳಿಗಳ ಮೂಲಕ
ಜನಿಸಬೇಕೆ ಹೊರತು..
ಗಣಕಯಂತ್ರ ಪರದೆಯಿಂದಲ್ಲ.!
********
- ನಿಶ್ಫಲ.!
ಸಂಧಾನ ಸೂತ್ರವಿಟ್ಟುಕೊಂಡೇ
ರಣಾಂಗಣಕ್ಕಿಳಿದವನಿಗೆ ಎಂದಿಗೂ
ಗೆಲುವೆಂಬುದು ಮಾಯಾಜಿಂಕೆ.!
ಶರಣಾಗತಿಯ ಬಾವುಟ ಹಿಡಿದೇ
ಹೋರಾಡುವವನಿಗೆ ಎಂದೆಂದಿಗೂ
ಯಶಸ್ಸೆಂಬುದು ಸದಾ ಮರೀಚಿಕೆ.!
- ಎ.ಎನ್.ರಮೇಶ್. ಗುಬ್ಬಿ (ಲೇಖಕರು, ಕವಿಗಳು), ಕೈಗಾ.
