‘ಅವಳು’ –  ದಿಗಂತ್ ಬಿಂಬೈಲ್

ಈಗೀಗ ಠಣ್ಣನೆ ಬರುವ ಮೆಸೇಜಿನ ಸದ್ದಿಗಾಗಿ ಎದೆ ಬಡಿತ ಜೊತೆ ಸೇರಿಸಿ ಕಾದು ಕುಳಿತು ಬಿಡುತ್ತೇನೆ. ನನ್ನಿಂದ ತೀರಾ ನಿರ್ಲಕ್ಷ್ಯಕ್ಕೊಳಗಾಗಿದ್ದ ಮೆಸೇಜ್ ರಿಂಗ್ ಟೋನ್ ಈಗ ಸಂಭ್ರಮದ ಗುಳಿಗೆಗಳ ಒಳಗಿಳಿಸಲು ಶುರುವಿಟ್ಟಿದೆ, ಮುಂದೆ ಓದಿ ಕತೆಗಾರ ದಿಗಂತ್ ಬಿಂಬೈಲ್ ಅವರ ಮಿನಿಕತೆ …

ಅದೆಂತದ್ದೇ ತುರ್ತು ಕೆಲಸದಲ್ಲಿ ಮುಳುಗಿ ಕುಳಿತಿದ್ದರೂ “ಟಿಂಗ್” ಎಂದು ಹೊರಹೊಮ್ಮುವ ಒಂದೇ ಶಬ್ದ ಹರೆಯದ ಮನದ ಮೂಲೆಯಲ್ಲೆಲ್ಲ, ನವಿರು ತೋರಣಗಳ ಕಟ್ಟಿ, ಎದೆ ಕದವ ಮುದವಾಗಿ ತಟ್ಟಿ ಬಿಡುತ್ತದೆ. ಈಗ್ಗೆ ಒಂದಿಷ್ಟು ದಿನಗಳಿಂದ “ಉಂಡಾತ, ತಿಂದಾತ, ತ್ವಾಟ ಉಂಟ, ಗದ್ದೆ ಉಂಟ, ನಟ್ಟಿ ಬತ್ತದ, ಸೊಪ್ಪು ಕಡಿಕ್ ಬತ್ತದ…” ಎನ್ನುವಷ್ಟೇ ಮಾತುಕತೆಗಳಾಗಿದ್ದರೂ, ಈ ಹರೆಯದ ಹೃದಯವೊಂದಿದೆ ನೋಡಿ “ಮದುವೆ ಮಾಧವ ಮಂಗಲದಲ್ಲಿ ಆಗುವುದೋ, ಒಕ್ಕಲಿಗರ ಸಭಾಭವನದಲ್ಲಿ ಆಗುವುದೋ, ಮಂತ್ರ ಮಾಂಗಲ್ಯ ಆಗಿ ಬಿಡುವುದೋ” ಎಂದೆಲ್ಲ ಕನಸು ಹೆಣೆಯುತ್ತ ಕುಳಿತು ಬಿಟ್ಟಿದೆ. ಪರಿಚಯವಾದ ಮರುಕ್ಷಣವೇ ಪ್ರೊಫೈಲ್ ಒಳಗೆ ನೆಗೆದು, ಮೊಗೆದು ಸುರಿದ ಮುತ್ತು ರತ್ನಗಳಂತ ಪಟಗಳನ್ನೆಲ್ಲ ಕಣ್ತುಂಬಿಕೊಂಡು ಮನದ ಗೋಡೆಗಳಿಗೆಲ್ಲ ಅಚ್ಚೊತ್ತಿಕೊಂಡಾಗಿದೆ. ಅದೆಂತಹ ಚೆಲುವಂತೀರಿ, ಅವಳ ಮೊಗ ಮೂಗು ಗಲ್ಲ ಕೆನ್ನೆ ನೋಡುವಾಗೆಲ್ಲ, ಇಷ್ಟು ಚೆಂದಾಗಿ ತಿದ್ದಿ ತೀಡಿದ ಅವಳಜ್ಜಿಯ ಕೈಗೊಂದು ಮುತ್ತಿಡಬೇಕೆನುಸುತ್ತದೆ. ನನ್ನಜ್ಜಿಯೋ ಅಮ್ಮನ ಮೇಲೆ ಸಿಟ್ಟಿಗೆ ಒಂದು ಬದಿ ತಟ್ಟಿ, ಅಮ್ಮ ಅಜ್ಜಿಯ ಮೇಲೆ ಸಿಟ್ಟಿಗೆ ಮತ್ತೊಂದು ಬದಿ ತಟ್ಟಿ ನನ್ನ ತಲೆಯೋ ಡ್ವಾಂಟ್ರು ಕಪ್ಪೆಯಂತಾಗಿಬಿಟ್ಟಿದೆ. ಒಟ್ಟಿನಲ್ಲಿ ಅವಳು ಅಂದದ ಅನನ್ಯ ಸಂತೆ, ನನಗೋ ನಿದ್ದೆಗಣ್ಣಿನಲ್ಲೂ ಅವಳದೇ ಚಿಂತೆ.

ಫೋಟೋ ಕೃಪೆ : commons.wikimedia

ಈಗೀಗ ಅವಳು ತುಸು ಹೆಚ್ಚೇ ನೆನಪಾಗುತ್ತಿರುವುದು ಈ ಊರಿನ ಹೋಟೆಲು ಊಟದ ದೆಸೆಯಿಂದ. ಇಲ್ಲಿನ ಹೋಟೆಲುಗಳೇ ವಿಶೇಷ ವಿಶಿಷ್ಟ ವಿಚಿತ್ರ ಒಟ್ರಾಶಿ. ಹತ್ತಡಿ ಅಗಲ ನೆಟ್ಟಗೆ ಬಿದ್ದುಕೊಂಡಿರುವ ರಸ್ತೆಗೆ ತಗುಲಿಕೊಂಡೇ ನಿಂತಿರುವ ಹೋಟೆಲಿಗೆ ಹೋದರೆ, ಹೋಟೆಲ್ ಓನರಿನ ಸಣ್ಣ ಬಾಲೆ ಅಲ್ಲೇ ಮದ್ಯದಲ್ಲಿ ಕುಳಿತು ಒಂದೋ ಉಚ್ಚೆ ಹುಯ್ದುಕೊಂಡೊ ಇಲ್ಲಾ ಮುರಿದ ಜೆಸಿಬಿಯ ಸೊಂಡಿಲನ್ನ ಹಿಡಿದು ರಚ್ಚೆ ಹಿಡಿದು ಕೂಗುತ್ತಿರುತ್ತದೆ. ಅದರಮ್ಮ “ನೋಡು ಪಾಪು ಮಾಮ ಬಂದ್ರು ಮಾತಾಡ್ಸು..” ಸಮಾಧಾನಿಸುತ್ತಲೇ “ಎಂತ ಮೀನೂಟ್ವ ಅಣ..” ಎಂದಾಗ ಹ್ಹೂ ಗುಟ್ಟಿ, ಬಾಳೆಲೆ ಒರೆಸುತ್ತ “ಈ ಬಾಲೆಗೆ ನಾನು ಮಾವ, ಇವಕ್ಕ ಅಣ್ಣ ಅಂತದೆ. ಹೋಟ್ಲು ಓನರ್ ‘ಬಾವ ದುಡ್ಡೆಂತ ಬ್ಯಾಡ’ ಅಂದ್ಬುಟ್ರೆ, ಊಟದ್ ದುಡ್ಡೇ ಉಳಿತಿತ್ತಲ್ಲ..” ಎಂದೆಲ್ಲ ಯೋಚಿಸುತ್ತೆಲ್ಲ ಉಂಡೆದ್ದು ಬಾಲೆಗೆ ಬಾಯ್ ಮಾಡಿ ಎದ್ದು ಬರುವಂತಹ ಫೈವ್ ಸ್ಟಾರ್ ಹೋಟೇಲು.

ನೆಟ್ಟಗೆ ಬಿದ್ದು ಕೊಂಡಿರುವ ರಸ್ತೆಯಲ್ಲೇ ಚೂರು ಮುಂದೆ ಹೋಗಿ ತಿರ್ಕಾಸಿನಲ್ಲಿ ಸಿಗುವ ಹೋಟೇಲೋ ಪರಮಾದ್ಭುತ. ಇದ್ದ ನಾನು ಮತ್ತು ನಾನೊಬ್ಬನೇ ಮುಟ್ಟಾಳ ಗಿರಾಕಿ ಇಡ್ಲಿ ಕೇಳಿ ಕುಳಿತರೆ, ಗಂಡ ಹೆಂಡತಿಗೆ ನೀ ಕೊಡು ಎಂದು ಹೆಂಡತಿ ಗಂಡನಿಗೆ ನೀವು ಕೊಡಿ ಎಂದು ಯಾರು ಇಡ್ಲಿ ಕೊಡಬೇಕೆಂದು ನಿರ್ಧಾರ ಮಾಡುತ್ತಿರುವಾಗ, ಅಲ್ಲೇ ಎರಡು ಟೇಬಲ್ಲಿನ ಆಚೆ ಹೊಗೆ ಬಡಿದು ಕೊಂಡು ಸತ್ತು ನಿಗುರಿ ನಿಂತ ಕಪಾಟೊಂದನ್ನ ತನ್ನೊಳಗೆ ಕಾಪಿಟ್ಟುಕೊಂಡಿರುವ ಅಡುಗೆ ಮನೆಯೆಂಬುದರೊಳಗೆ, ಅವರ ಹದಿನಾಲ್ಕೋ ಹದಿನೈದು ವರ್ಷದ ಮಗನೊಬ್ಬ ಇಬರಿಬ್ಬರ ಜಗಳ ಆಲೈಸುತ್ತ ಚಡ್ಡಿ ಹಾಕಿಕೊಳ್ಳುವುದ ಬರಿಗಣ್ಣಲ್ಲಿ ನೋಡಲಾಗದೆ ಎದ್ದು ಹೊರಡಬೇಕೆನ್ನುವಷ್ಟರಲ್ಲಿ ಅವಕ್ಕ ತಂದಿಟ್ಟ ಇಡ್ಲಿ ಸೆಳೆದಿತ್ತಾದರೂ, ಅವಯ್ಯ ಒಂದು ಕೈ ಮೇಲೆತ್ತಿ ಮತ್ತೊಂದು ಕೈ ಟಿ ಶರ್ಟಿನ ಒಳ ತೂರಿಸಿಕೊಂಡು ಬಗಲು ತುರಿಸುತ್ತ ಅಡುಗೆ ಮನೆಯಿಂದ ಹೊರಬರುತ್ತಿರುವ ರೋಮಾಂಚಕ ದೃಶ್ಯ ವೈಭವ ಕಂಡು, ಅಕಸ್ಮಾತ್ ಇವಯ್ಯನೇ ಬೆಳಿಗ್ಗೆ ಇಡ್ಲಿ ಹಿಟ್ಟು ಕಲಿಸಿದ್ದರೆ? ಎಂಬೊಂದು ಹಾಳು ಯೋಚನೆ ತಲೆನುಗ್ಗಿ ಇಡ್ಲಿ ತಿನ್ನುವುದೋ ಬಿಡುವಿದೋ ಎಂದೆಲ್ಲ ಯೋಚಿಸುತ್ತ ಕೂರುವಂತಹ ವೈಭವೋ’ಪೇತ’ ಹೊಟೇಲು.

ಫೋಟೋ ಕೃಪೆ : travelbagtales

ಇದ್ದಿದ್ದರಲ್ಲಿ ಆ ಶೆಟ್ಟರ ಹೋಟೆಲ್ಲೇ ಅಡ್ಡಿಯಿಲ್ಲ. ಅಂದಾಜು ನೂರ ಮೂರು ಕೆಜಿ ಐನೂರು ಗ್ರಾಮು ತೂಕವಿರುವ ಅವರ ಮಗಳು, ಒಂದು ಪ್ಲೇಟ್ ಬನ್ಸ್ ಹಿಡಿದುಕೊಂಡು ಥೇಟು ಬನ್ಸೇ ಜೀವ ತಳೆದು ನಡೆದು ಬರುತ್ತಿದೆಯೇನೋ ಎನಿಸುವಂತೆ ಬಂದು “ಮತ್ತೆಂತ ಬೇಕು..” ಎನ್ನುವಾಗ “ಅಕಯ ನಿಮ್ ದಮ್ಮಯ್ಯ ಅಂತೀನಿ ಒಂಚೂರು ನಿಧಾನ ನಡ್ಕುಬನ್ನಿ. ನಿಮ್ ಹೋಟ್ಲು ಪಕಾಸಿಯಲ್ಲ ವರ್ಲೆ ಹಿಡ್ದು ಲಡ್ಡಾಗವೆ. ಮುರ್ಕುಂಡ್ ತಲೆ ಮೇಲೆ ಬಿದ್ರೆ ಕಷ್ಟ. ನಂಗಿನ್ನು ಮದಿ ಆಗ್ಲ. ಮನ್ನೆಯಿಂದಷ್ಟೇ ಒಂದ್ ಹುಡ್ಗಿ ಮೆಸೇಜ್ ಮಾಡ್ತಾ ಅದೆ..” ಎಂದೆಲ್ಲ ಮನದಲ್ಲೇ ಹೇಳಿ “ಒಂದ್ ಹಾಫ್ ಟಿ..” ಎನ್ನುವಾಗೆಲ್ಲ ಅವಳು ಇನ್ನಷ್ಟು ನೆನಪಾಗಿ ಕಾಡಿ ಬಿಡುತ್ತಾಳೆ. ಅವಳು ಬದುಕಿಗೆ ಜೊತೆಯಾದರೆ, ದಿನವೂ ಕಡುಬು ಮಾಡಿದರೂ ಅಡ್ಡಿಯಿಲ್ಲ ಗುಳುಕ್ಕನೆ ನುಂಗಿ ಸುಮ್ಮನಿದ್ದು ಬಿಡುತ್ತೇನೆ, ಈ ಹೋಟೆಲು ಊಟ ಸಾಕಪ್ಪ ಸಾಕು ಎನಿಸಿ ಬಿಡುತ್ತದೆ.

ಅಷ್ಟಕ್ಕೂ “ಅಡ್ಗಿ ಮಾಡಕ್ ಬತ್ತದ..” ಎಂದು ಕೇಳೇ ಇಲ್ಲ ನೋಡಿ. ಕೇಳಿ ಹೇಳುತ್ತೇನೆ ನಿಮಗೆಲ್ಲ. ಈವರೆಗೂ ನಿಮಗೆ ಹೇಳಿದ ವಿಷಯಗಳೆಲ್ಲ ಗುಟ್ಟಾಗಿರಲಿ ಅಕಸ್ಮಾತ್ ಹೋಟೆಲಿನವರಿಗೆ ವಿಷಯ ತಿಳಿದರೆ ಹೊಟ್ಟೆಗೆ ಕೊಳೆತ ಬಾಳೆಹಣ್ಣೆ ಗತಿ. ಅದರಲ್ಲೂ ಅವಳಿಗೆ ಮನದ ಯೋಚನೆಗಳೆಲ್ಲ ತಿಳಿದು ಮೆಸೇಜು ಮಾಡುವುದೇ ಬಿಟ್ಟರೆ ಮತ್ತೆ ಬರೆಯಬೇಕಾಗ್ತದೆ “ಮನದ ಹುಣ್ಣಿನ ಕತಿ”. ಹಾಗಾಗಿ ಲೈಕ್ ಕಾಮೆಂಟ್ ಶೇರುಗಳನ್ನೆಲ್ಲ ಮಾಡಿ ವೈರಲ್ ಮಾಡಬೇಡಿ ಆಯ್ತಾ!.


  •  ದಿಗಂತ್ ಬಿಂಬೈಲ್ (ಲೇಖಕ, ಕತೆಗಾರ), ಕೊಪ್ಪ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW