ಟಿ. ಆರ್‌. ಶಾಮಭಟ್ಟರ ‘ನೆನಪಿನ ಹಳ್ಳಿ’ ಪುಸ್ತಕ ಪರಿಚಯ

ಪ್ರೊ.ಎಂ.ಎನ್.ಶ್ರೀನಿವಾಸ್  ಅವರ The Remembered Village ಇಂಗ್ಲಿಷ್ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಟಿ. ಆರ್‌. ಶಾಮಭಟ್ಟ ಅವರು, ಆ ಪುಸ್ತಕದ ಹೆಸರೇ ‘ನೆನಪಿನ ಹಳ್ಳಿ’ . ಆ ಪುಸ್ತಕದ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ಬರೆದ ಪರಿಚಯ, ಮುಂದೆ ಓದಿ…

ಪುಸ್ತಕ : ನೆನಪಿನ ಹಳ್ಳಿ
ಮೂಲ ಲೇಖಕರು: ಪ್ರೊ.ಎಂ.ಎನ್.ಶ್ರೀನಿವಾಸ್
ಕನ್ನಡಕ್ಕೆ ಅನುವಾದ : ಟಿ. ಆರ್‌. ಶಾಮಭಟ್ಟ
ಪ್ರಕಾಶಕರು : ಐ ಬಿ ಎಚ್ ಪ್ರಕಾಶನ
ಬೆಲೆ : 450/-

ಅಸಮಾನತೆ ಸ್ಥಾಯಿಯಾಗಿ ಹಾಸುಹೊಕ್ಕಾಗಿರುವ ಕರ್ನಾಟಕದ ಗ್ರಾಮೀಣ ಪ್ರದೇಶದ ಪಲ್ಲಟಗಳ ಅನಾವರಣ.

ಈ ಶತಮಾನದ ಶ್ರೇಷ್ಠ ಸಮಾಜ ವಿಜ್ಞಾನದ ಪ್ರಾಧ್ಯಾಪಕರಾದ ಎಂ.ಎನ್ . ಶ್ರೀನಿವಾಸ್ ಅವರು ತಮ್ಮ ಸಂಶೋಧನಾ ಯೋಜನೆಯ ಭಾಗವಾಗಿ ಇಂಗ್ಲಿಷ್ ನಲ್ಲಿ ಸಿದ್ದಪಡಿಸಿದ ಮಹಾಪ್ರಬಂಧ ಸುಟ್ಟು ಹೋದಾಗ, ಬಹುತೇಕ ನೆನಪನ್ನು ಆಧರಿಸಿ ಪುನಾರಚಿಸಿದರು. ೧೯೭೬ ರಲ್ಲಿ ಮೊದಲು ಇಂಗ್ಲಿಷ್ ನಲ್ಲಿ ಪ್ರಕಟವಾದ ಇದನ್ನು ಇನ್ನೊಬ್ಬ ಸಮಾಜ ವಿಜ್ಞಾನಿ ಪ್ರಾಧ್ಯಾಪಕರಾದ ಶಾಮಭಟ್ಟರು, ಅದರ ಮಹತ್ವವನ್ನು ಮನಗಂಡು ಇಂಗ್ಲಿಷ್ ಬಾರದ ಕನ್ನಡಿಗರಿಗೆ ಅವರ ಅಧ್ಯಯನದ ಲಾಭ ದೊರೆಯಲಿ ಎಂದು ಅನನ್ಯವಾಗಿ ಕನ್ನಡಕ್ಕೆ ಅನುವಾದ ಮಾಡಿ ಕನ್ನಡಿಗರ ಜ್ಞಾನದ ಪರಿಧಿಯನ್ನು ವಿಸ್ತರಿಸಲು ಸಹಕರಿಸಿದ್ದಾರೆ.ಆದ್ದರಿಂದ ಅವರಿಗೆ ಮೊದಲು ಅಭಿನಂದನೆ.

ಶಾಮಭಟ್ ಅವರು ಈ ಪುಸ್ತಕವನ್ನು ಕಳುಹಿಸ ಇದರ ಬಗ್ಗೆ ನನ್ನ ಪ್ರತಿಕ್ರಿಯೆಯನ್ನು ಕೇಳಿದರು. ನನಗೆ ಸಮಾಜ ವಿಜ್ಞಾನದ ಗಂಧಗಾಳಿಯೆ ಇಲ್ಲ. ಆದ್ದರಿಂದ ಅದನ್ನು ಕುರಿತು ಏನು ‌ಮಾಡಬೇಕೆಂದು ತಿಳಿಯದೆ ಅವರ ಅಪೇಕ್ಷೆಯಂತೆ ಓದಲು ಕೈಗೆತ್ತಿಕೊಂಡೆ. ಪ್ರಾರಂಭದಲ್ಲಿ ಅದು ಸೈದ್ಧಾಂತಿಕ ಪರಿಕಲ್ಪನೆಗಳನ್ನು ಒಳಗೊಂಡಿದ್ದರಿಂದ ಅದೇನೆಂದು ತಿಳಿಯದೆ ಕಣ್ಣು ಕಣ್ಣು ಬಿಟ್ಟೆ. ಆಗ ಅದರ ವ್ಯಾಖ್ಯಾನ ಮತ್ತು ವಿವರಣೆಗೆ ಅವರ ಮೊರೆಹೊಕ್ಕೆ. ಅವರು ಬೇಸರ ಮಾಡಿಕೊಳ್ಳದೆ ನನಗೆ ಸ್ಪಷ್ಟೀಕರಣ ನೀಡಿ ನನ್ನ ದಾರಿಯನ್ನು ಸುಗಮಗೊಳಿಸಿದರು.
ನನಗೆ ತಿಳಿದ ಮಟ್ಟಿಗೆ ಸಮಾಜ ವಿಜ್ಞಾನದ ಅಧ್ಯಯನ ಪ್ರಾರಂಭವಾಗಿದ್ದು ಕಳೆದ ಶತಮಾನದ ಆರಂಭದಲ್ಲಿ. ಅದೂ ಪಾಶ್ಚಾತ್ಯರಿಂದ. ಅವರನ್ನು ಅನುಸರಿಸಿ ಭಾರತೀಯರು ಅದರಲ್ಲಿ ತೊಡಗಿದರು. ಪಾಶ್ಚಾತ್ಯರು ಭಾರತೀಯ ಸಮಾಜ ವನ್ನು ಅಧ್ಯಯನ ಮಾಡುವಾಗ, ಹೊರಗಿನ ಕಣ್ಣುಗಳಿಂದ ತಮ್ಮದೆ ಪೂರ್ವ ಕಲ್ಪನೆಯನ್ನು ಹೇರಿ ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ‌ಎಡವಿದರು. ಅಂತಹ ಸಂದರ್ಭದಲ್ಲಿ ಅದಕ್ಕೆ ನ್ಯಾಯ ಸಲ್ಲಿಸಲು ಭಾರತೀಯರಿಂದ ಮಾತ್ರ ಸಾಧ್ಯ. ಅಧ್ಯಯನಕ್ಕೆ ತೊಡಗಿದ ಕೂಡಲೇ ಅವರಿಗೆ ತಾವು ಕಲಿತ ಸಮಾಜ ವಿಜ್ಞಾನ ಸಂಶೋಧನಾ ವಿಧಿ ವಿಧಾನಗಳನ್ನು ತದ್ವತ್ತಾಗಿ ಬಳಸಲು ಸಾಧ್ಯವಿಲ್ಲ ಎಂದು ಮನವರಿಕೆಯಾಯಿತು. ಅದರಿಂದ ಹೊಸ ಅಧ್ಯಯನ ವಿಧಾನವನ್ನು ರೂಪಿಸಿಕೊಳ್ಳಬೇಕಾಯಿತು. ಹಾಗೆ ರೂಪಿಸಿಕೊಂಡವರಲ್ಲಿ ಎಂ.ಎನ್.ಶ್ರೀನಿವಾಸ್ ಮೊದಲಿಗರು. ಅವರು ಭಾರತದ ಸಮಾಜದಲ್ಲಿ ಉಂಟಾದ ಪಲ್ಲಟಗಳನ್ನು ಅಧ್ಯಯನ ಮಾಡಲು ‌ಎರಡು ಪರಿಕಲ್ಪನೆಗಳನ್ನು ಮಂಡಿಸಿದರು.

ಅವು: ಸಂಸ್ಕೃತಾನುಸರಣ ಮತ್ತು ಪಾಶ್ಚಾತ್ಯೀಕರಣ.ಇವನ್ನು ಅನುವಾದಕರು ಮೂಲದ Sanskritisation ಮತ್ತು westernnisation ಗೆ ಸಂವಾದಿಯಾಗಿ ಬಳಸಿದ್ದಾರೆ . ಅದರಲ್ಲಿ ಮೊದಲನೆಯದು ವೈದಿಕ ವಿಧಿ ವಿಧಾನಗಳ ಅನುಸರಣೆಗೆ ಸಂಬಂಧಿಸಿದ್ದರೆ (ಅನುವಾದಕರ ವ್ಯಾಖ್ಯಾನದಂತೆ) ಎರಡನೆಯದು ಪಶ್ಚಿಮದ ಅನುಸರಣೆಯಾಗಿದೆ. ಇವುಗಳ ಅನುಸರಣೆಯ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಇರಬಹುದು. ಆದರೆ ಇದೊಂದು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಈ ಎರಡು ಪ್ರಕ್ರಿಯೆಗಳನ್ನು ಅರಿಯುವುದು ಭಾರತೀಯ ಸಮಾಜದ ( ನಗರ ಮತ್ತು ಗ್ರಾಮದ) ಗ್ರಹಿಕೆಗೆ ಅನಿವಾರ್ಯವಾಗಿದೆ.

ಪ್ರಸ್ತುತ ಈ ಕೃತಿ, ಮೇಲಿನ ಪರಿಕಲ್ಪನೆಗಳು ಕರ್ನಾಟಕ ರಾಜ್ಯದ ಗ್ರಾಮೀಣ ಸಮಾಜದಲ್ಲಿ ಸಂಭವಿಸಿದ ಬಗೆಯನ್ನು ವಸ್ತುನಿಷ್ಠವಾಗಿ ಅಭ್ಯಾಸಕ್ಕೆ ಒಳಪಡಿಸಿದೆ. ಹೀಗೆ ಮಾಡುವುದರಿಂದ ಅಲ್ಲಿನ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಇದಕ್ಕಾಗಿ ಅವರು ಮೈಸೂರಿನ ಸಮೀಪದ ರಾಮಪುರ ಎಂಬ ‌ಹಳ್ಳಿಯನ್ನು ಆರಿಸಿಕೊಂಡರು. ಅದಕ್ಕಾಗಿ ಅವರು ಅಲ್ಲಿ ಒಂದು ವರ್ಷ ತಂಗಿದ್ದರು. ವಾಸ್ತವ್ಯಕ್ಕೆ ಅವರು ಆ ಊರಿನ ಅತ್ಯಂತ ಶ್ರೀಮಂತರಾದ ಪಟೇಲರ ಮನೆಯನ್ನು ಆರಿಸಿಕೊಂಡಾಗ ಒಂದು ಬಗೆಯ ಇಕ್ಕಟ್ಟಾದ ಸಂನಿವೇಶದಲ್ಲಿ ಸಿಲುಕಿದರು. ಅದನ್ನು ಲೇಖಕರೇ ಒಪ್ಪಿಕೊಂಡಿದ್ದಾರೆ.‌ ನಾವು ಇರುವ ಪರಿಸರ ತಾನೇ ನಮ್ಮ ಪ್ರಜ್ಞೆಯನ್ನು ನಿರ್ಧರಿಸುವುದು. ಅದರಿಂದ ಪಟೇಲರರ ಜೊತೆಯಲ್ಲಿ ಸೌಹಾರ್ದಯುತ ಸಂಬಂಧ ಇಟ್ಟು ಕೊಳ್ಳುವುದು ಅವರಿಗೆ ಅನಿವಾರ್ಯವಾಗಿತ್ತು ಮತ್ತು ಇದು ಅವರ ವಿರೋಧಿಗಳ ಜತೆಗೆ ಮುಕ್ತವಾಗಿ ಬೆರೆಯುವದನ್ನು ತಡೆಯಿತು. ಇವರು ಯಾರ ಜತೆಗೆ ವ್ಯವಹರಿಸಿದರೂ ,ಅದರ ಮಾಹಿತಿ ಕೂಡಲೇ ಅದು ಪಟೇಲರ ಕಿವಿಯನ್ನು ತಲುಪುತ್ತಿತ್ತು. ಉದಾಹರಣೆಗೆ ನಾಡುಗೌಡರು ಪಟೇಲರ ಗೆಳೆಯರಾದರೂ, ಅವರ ಮಕ್ಕಳು ಇವರ ವಿರುದ್ಧ ಚುನಾವಣೆಗೆ ನಿಲ್ಲಲು ಪ್ರಯತ್ನ ಮಾಡಿದರು. ಆಗಿನಿಂದ ಪಟೇಲರಿಗೆ ಅವರ ವಿರೋಧಿಗಳಾಗಿ ಮಾರ್ಪಟ್ಟರು. ಇಂತಹ ಇಕ್ಕಟ್ಟಾದ ಸಂನಿವೇಶದಲ್ಲಿ ಸಿಲುಕಿದ ಅವರು ಬಹಳ ನಾಜೂಕಾದ ರೀತಿಯಲ್ಲಿ ಹಳ್ಳಿಯಲ್ಲಿ ತಮಗೆ ಬೇಕಾದ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನ ಮಾಡಿದರು. ಅದಕ್ಕಾಗಿ ಅವರು ಪಟೇಲ ಮತ್ತು ನಾಡುಗೌಡರನ್ನು ಬಿಟ್ಟು ಅವರಿಗಿಂತ ಕೆಳಗಿನವನಾದ ಕುಳ್ಳೇಗೌಡನನ್ನು ಮಾಹಿತಿ ಸಂಗ್ರಹಕ್ಕೆ ಆಶ್ರಯಿಸಬೇಕಾಯಿತು. ತಕ್ಕ ಮಟ್ಟಿಗೆ ದಲಿತ ರನ್ನು ಹೊರತು ಪಡಿಸಿ ಉಳಿದ ಜಾತಿಯ ಜನರ ಕುರಿತು ಮಾಹಿತಿಯನ್ನು ‌ಪಡೆಯುವಲ್ಲಿ‌ ಅವರು ಯಶಸ್ವಿಯಾದರು ಎನ್ನಬಹುದು. ‌

ಶೀರ್ಷಿಕೆಯನ್ನು ಸಮರ್ಥವಾಗಿ ಮಂಡಿಸಲು ಇದನ್ನು ಎರಡು ಭಾಗದಲ್ಲಿ ಅಭ್ಯಾಸ ಮಾಡಬಹುದು .

ಭಾಗ ೧:

ಅಸಮಾನತೆಯು ಹಲವು ಸ್ತರಗಳಲ್ಲಿ ಭಾರತೀಯ ಗ್ರಾಮೀಣ ಸಮಾಜವನ್ನು ಆವರಿಸಿದೆ.ಅವುಗಳನ್ನು ಸಾಮಾಜಿಕ, ಆರ್ಥಿಕ, ಧಾರ್ಮಿಕ ,ಲೈಂಗಿಕ ಎಂದು ಪುನರ್ ವಿಂಗಡಿಸಬಹುದು . ಸಾಮಾಜಿಕ ಅಸಮಾನತೆಗೆ ನಿದರ್ಶನವಾಗಿ ಲೇಖಕರು ವಾಸಿಸುವ ಮನೆಯಲ್ಲಿ ಪಟೇಲರು ತಮ್ಮ ಆಳುಗಳ ಜತೆಗೆ ವ್ಯವಹರಿಸುವುದಕ್ಕೂ ಮತ್ತು ಹೊರಗಿನ ಜನರ ಜತೆಗೆ ವ್ಯವಹರಿಸುವುಕ್ಕೆ ಇರುವ ಅಂತರವನ್ನು ಪರಿಗಣಿಸಬಹುದು. ಅವರ ಆಳುಗಳ ಜತೆಗೆ ಅವರು ಒರಟಾದ ಮತ್ತು ಅಶ್ಲೀಲ ಭಾಷೆಯನ್ನು ಬಳಸಲು ಹಿಂಜರಿಯುವುದಿಲ್ಲ. ಅದೇ ಅವರು ಹೊರಗಿನವರ ಜತೆಗೆ ವ್ಯವಹಾರ ಮಾಡುವಾಗ ನಯನಾಜೂಕಿನ ಭಾಷೆಯನ್ನು- ಅದು ತಮ್ಮ ಕೆಲಸ ಆಗಬೇಕಾದಾಗ ಬಳಸುತ್ತಾರೆ. ಇದು ಪಟೇಲರ ವ್ಯಕ್ತಿತ್ವದ ಎರಡು ಮುಖಗಳನ್ನು ಬಯಲಿಗೆಳೆಯುತ್ತದೆ. ಅದೇ ರೀತಿಯಲ್ಲಿ, ಅವರು ಆಧುನಿಕ ತಾಂತ್ರಿಕತೆಯನ್ನು ಸ್ವಾಗತಿಸಿದರೂ , ಕೆಳವರ್ಗದ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಶಾಲೆಯನ್ನು ತೆರೆಯುವುದನ್ನು ವಿರೋಧಿಸುತ್ತಾರೆ. ಅದಕ್ಕೆ ಅವರು ಕೊಡುವ ಕಾರಣವೆಂದರೆ ‘ಅವರು ಶಿಕ್ಷಣ ಪಡೆದರೆ ಸೊಕ್ಕಿಬಿಡುತ್ತಾರೆ’. ತಾವು ಮತ್ತು ನಾಡುಗೌಡರು ಮಾತ್ರ ಶಿಕ್ಷಣದ ಸೌಲಭ್ಯವನ್ನು ಪಡೆಯುವರು. ಇದೂ ಕೂಡ ಅವರಲ್ಲಿನ ಸಾಮಾಜಿಕ ಅಸಮಾನತೆಗೆ ನಿದರ್ಶನವಾಗಿದೆ. ಹಾಗಾಗಿ ಆ ಹಳ್ಳಿಯಲ್ಲಿ ಶಿಕ್ಷಣ ಕೇವಲ ಪ್ರಾಥಮಿಕ ಶಾಲೆಗೆ ಸೀಮಿತ ವಾಗಿತ್ತು.
‌‌‌‌
ಅದರಂತೆ ಆರ್ಥಿಕ ಅಸಮಾನತೆ ಕೂಡ ಅಲ್ಲಿ ದಟ್ಟವಾಗಿತ್ತು. ಪಟೇಲರು ಮತ್ತು ನಾಡುಗೌಡರನ್ನು ಹೊರತುಪಡಿಸಿ ಉಳಿದೆಲ್ಲಾ ಬಹುತೇಕ ಜನ ಆರ್ಥಿಕವಾಗಿ ದುರ್ಬಲ ಸ್ಥಿತಿಯಲ್ಲಿ ಇದ್ದುದನ್ನು ಅವರು ಸಂಗ್ರಹಿಸಿದ ಮಾಹಿತಿ ಸಿದ್ದಪಡಿಸುತ್ತದೆ. ಇದಕ್ಕೆ ಕಾರಣವೆಂದರೆ ಅವರ ಬಳಿ ಸಾಲಕ್ಕೆ ಬಂದವರಿಗೆ ಮೀಟರ್ ಬಡ್ಡಿ ವಿಧಿಸಿ ,ಅವರಿಗೆ ಮರಳಿಸಲು ಸಾಧ್ಯವಾಗದಾಗ , ಅವರ ಜಮೀನನ್ನು ಕಬಳಿಸಿ ಅವರನ್ನು ಜೀತದಾಳುಗಳನ್ನಾಗಿ ಮಾರ್ಪಡಿಸುತ್ತಿದ್ದರು.. ಇದೇ ಅವರ ಶ್ರೀಮಂತಿಕೆಯ ಮೂಲ ಎಂದು ಬಟಾಬಯಲುಗೊಳಿಸುತ್ತಾರೆ. ಅದನ್ನು ಮುಚ್ಚಿಕೊಳ್ಳಲು ಪಟೇಲರು ಸಂಸ್ಕೃತಾನುಸರಣದ ಮೊರೆಹೊಕ್ಕರೆ, ನಾಡುಗೌಡರು ವರ್ಷಕ್ಕೊಂದು ಸಲ ಬಡವರಿಗೆ ದಾನ ಮಾಡಿ ಪಾಪಪರಿಮಾರ್ಜನೆ ಮಾಡಿಕೊಳ್ಳುವರು – ಎಂಬ ಧ್ವನಿ ಹೊರಡುತ್ತದೆ.

ಲೈಂಗಿಕ ಅಸಮಾನತೆಗೆ ನಿದರ್ಶನವಾಗಿ ಸ್ತ್ರೀಯರಿಗೆ ಇದ್ದ ಹೀನ ಸ್ಥಾನವನ್ನು ನೋಡಬಹುದು. ಅಲ್ಲದೇ ಕೃಷಿಯ (ಬತ್ತದ ನಾಟಿ) ಸಂದರ್ಭದಲ್ಲಿ ಗಂಡಾಳುಗಳಿಗೆ ಕೊಡುವ ಅರ್ಧದಷ್ಟು ಕೂಲಿಯನ್ನು ಹೆಣ್ಣಾಳುಗಳಿಗೆ ಕೊಡುತ್ತಿದ್ದುದು ಇದನ್ನು ಸಾಬೀತು ಪಡಿಸುತ್ತದೆ.

ಧಾರ್ಮಿಕ ಅಸಮಾನತೆಯ ದ್ಯೋತಕವಾಗಿ ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶದ ನಿರ್ಬಂಧ ಇದ್ದುದನ್ನು ನೋಡಬಹುದು.

ಪ್ರೊ.ಎಂ.ಎನ್.ಶ್ರೀನಿವಾಸ್

ಭಾಗ ೨:

ಈ ಸ್ಥಾಯೀ ಸ್ಥಿತಿ ಬದಲಾಗುವುದನ್ನು ಎರಡನೇ ಭಾಗದಲ್ಲಿ ಲೇಖಕರು ದಾಖಲಿಸಿದ್ದಾರೆ. ಅವುಗಳನ್ನು ಆರ್ಥಿಕ, ಸಾಮಾಜಿಕ, ಧಾರ್ಮಿಕ ,ಆಧುನಿಕ ಎಂದು ಗುರುತಿಸಿದ್ದಾರೆ. ಇದಕ್ಕೆ ಮೂಲ ಕಾರಣ ಸ್ವಾತಂತ್ರ್ಯದ ಪರಿಣಾಮ ಎಂದು ನಿರ್ದೇಶಿಸಿದ್ದಾರೆ. ಆರ್ಥಿಕ ವ್ಯವಸ್ಥೆಯಲ್ಲಿ ಹೊಸದಾಗಿ ಪ್ರಾರಂಭವಾದ ಸಂಚಾರ ಸಂಪರ್ಕ, ವಸ್ತು ವಿನಿಮಯ ಪದ್ದತಿ ನಗದು ವ್ಯವಹಾರಕ್ಕೆ ಬದಲಾದುದು,. ಊರ ಹೊರಗೆ ಪ್ರಾರಂಭವಾದ ಕ್ಷೌರಿಕನ ಅಂಗಡಿ ಇದಕ್ಕೆ ನಿದರ್ಶನ. ಅಲ್ಲಿ ನಗದು ರೂಪದಲ್ಲಿ ಅವನಿಗೆ ಕೊಡಬೇಕಾಗಿತ್ತು. ಸಾಮಾಜಿಕ ನೆಲೆಯಲ್ಲಿ ಹಳ್ಳಿಯ ಯುವಕರು ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಹೆಚ್ಚು ತೆರೆದುಕೊಂಡರು. ದಲಿತ ಪಿಜ್ಜನಿಗೆ ದೊರೆತ ಸರ್ಕಾರದ ನೌಕರಿ ಅವನಲ್ಲಿ ಆತ್ಮ ವಿಶ್ವಾಸವನ್ನು ಕುದುರಿಸಿತು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವ ಛಾತಿಯನ್ನು ಒದಗಿಸಿತು.

ಧಾರ್ಮಿಕವಾಗಿ ದಲಿತರಿಗೆ ದೇವಾಲಯದ ಪ್ರವೇಶ ದೊರೆಯಲು ಕಾರಣವಾಯಿತು. ತಂತ್ರಜ್ಞಾನದ ಸೌಲಭ್ಯಗಳ ಸ್ತ್ರೀಯರಿಗೆ ಅವರ ದೈಹಿಕ ದುಡಿಮೆಯಿಂದ ಬಿಡುಗಡೆ ಮಾಡಿತು .ಅದೆ ವೇಳೆಗೆ ಆಗ ಅವರು ಹಾಡುತ್ತಿದ್ದ ಜನಪದ ಹಾಡುಗಳು ಮಾಯವಾದುದನ್ನು ವಿಷಾದದಿಂದ ದಾಖಲಿಸಿದ್ದಾರೆ.

ಧರ್ಮ ಮತ್ತು ದೇವರು, ದೇಗುಲಗಳು ಅವರ ಬದುಕಿನ ಆವಶ್ಯಕತೆಯ ಭಾಗವಾಗಿದ್ದುದನ್ನು ಲೇಖಕರು ಧರ್ಮ ಎನ್ನುವ ಅಧ್ಯಾಯದಲ್ಲಿ ಸಂಕ್ಷೇಪವಾಗಿ ಪರಿಶೀಲಿಸಿದ್ದಾರೆ.
ಬಸವ ಮತ್ತು ಮಾದೇಶ್ವರ ಮಳೆ ಬೆಳೆಗಳ ರಕ್ಷಣೆಗೆ, ರೋಗ ರುಜಿನಗಳಿಂದ ರಕ್ಷಿಸಲು ಮಾರಿ ,ಶ್ರೀರಾಮ ಎಲ್ಲದಕ್ಕೂ. ಎಲ್ಲರ ಜತೆಗೆ ಇರುವ ಆಪ್ತ ಸಂಬಂಧ ಅವರಿಗೆ ವಿಶಿಷ್ಟ.
ಮಳೆಯನ್ನೇ ಅವಲಂಬಿಸಿದ ಅವರು ತಾಯಹದದ ಮಳೆಗಾಗಿ ಕಾತುರದಿಂದ ಕಾಯುವ ಚಿತ್ರ ಕಣ್ಣಿಗೆ ಕಟ್ಟುವಂತೆ ದಾಖಲಿಸಿದ್ದಾರೆ. ಅಂತಹ ಮಳೆ ಬಂದರೂ ಎಲ್ಲರಿಗೂ ಕೊಟ್ಟ ಮೇಲೆ ಉಳಿಯುವುದು ಕಡಿಮೆ. ಹೆಚ್ಚು ಬೆಳೆ ಬೆಳೆಯುವುದು ಕಾಳಸಂತೆಯಲ್ಲಿ ಅದನ್ನು ಮಾರುವುದು ಶ್ರೀಮಂತ ರೈತರಿಗೆ ಮಾತ್ರ ಸಾಧ್ಯ ಎಂಬುದನ್ನು ದಾಖಲಿಸಲು ಅವರು ಮರೆತಿಲ್ಲ.

ಟಿ. ಆರ್‌. ಶಾಮಭಟ್ಟ

ಮೇಲಿನ ಸ್ಥೂಲ ಸಮೀಕ್ಷೆಯ ಹಿನ್ನೆಲೆಯಲ್ಲಿ ಅವರ ಸಾಧನೆ ಗಳನ್ನು ಹೀಗೆ ಪಟ್ಟಿ ಮಾಡಬಹುದು:

೧. ವರ್ಣವ್ಯವಸ್ತೆ ಸ್ಥಾಯಿ ಆದರೆ ಜಾತಿ ವ್ಯವಸ್ಥೆ ಚಲನಶೀಲ. ವಿಶ್ವಕರ್ಮರು ತಾವು ಬ್ರಾಹ್ಮಣರು ಎಂದು ಗುರುತಿಸಿಕೊಳ್ಳಲು ಮಾಡುವ ಪ್ರಯತ್ನ ಇದಕ್ಕೆ ನಿದರ್ಶನ.

೨. ಖಾಸಗಿ ಮತ್ತು ಸಾರ್ವಜನಿಕ ಎನ್ನುವ ಭೇದದ ನಿರಾಕರಣೆ ಇಲ್ಲಿ ಎದ್ದು ಕಾಣುತ್ತದೆ. ಲೇಖಕರು ಇದಕ್ಕೆ ಹೊಂದಿಕೊಳ್ಳುವಾಗ ಎದುರಿಸುವ ಇರಿಸುಮುರಿಸು ಇದಕ್ಕೆ ಉದಾಹರಣೆ.

೩. ಸಂಬಂಧಗಳು ಏಕಮುಖಿಯಲ್ಲ ಬಹುಮುಖಿ ಎಂದು ಹಲವಾರು ಉದಾಹರಣೆಗಳ ಮೂಲಕ ಸ್ಥಾಪಿಸಿರುವುದು. ದಲಿತರ ಮತ್ತು ಮುಸ್ಲಿಂರ, ಒಕ್ಕಲಿಗರು ನಡುವಿನ ಸಂಬಂಧ ಇದಕ್ಕೆ ನಿದರ್ಶನ.

೪. ಹಿರಿಯರು ಸಂಸ್ಕೃತಾನುಸರಣೆಯ ಕಡೆಗೆ ಒಲಿದರೆ ಕಿರಿಯರು ಪಾಶ್ಚಾತ್ಯಾನುಸರಣೆಗೆ ಒಲಿಯುವರು. ಅವರ ಶಿಕ್ಷಣ, ಉಡುಗೆ, ಆಧುನೀಕರಣ,ದಲಿತರ ದೇವಾಲಯದ ಪ್ರವೇಶಕ್ಕೆ ಪ್ರೇರಣೆ ಇತ್ಯಾದಿ.

೫:ಅನುವಾದಕರು ಮೂಲಕ್ಕೆ ನಿಷ್ಠರಾದರೂ ತಮ್ಮ ಸೃಜನಶೀಲ ಅಭಿವ್ಯಕ್ತಿಯ ಮೂಲಕ ಅದನ್ನೊಂದು ಪುನರ್ ಸೃಷ್ಟಿಯ ಹಂತಕ್ಕೆ ಏರಿಸಿರುವುದು. ಕರ್ನಾಟಕದ ವೈವಿಧ್ಯಮಯ ಭಾಷಾ ಬಳಕೆಯ‌ ಮೂಲಕ ಇದನ್ನು ಸಾಧಿಸಿದ್ದಾರೆ.

ಮಿತಿಗಳು ಎಂದು ಕರೆಯಬಹುದಾದರೆ :

೧. ಒಂದು ಶಾಸ್ತ್ರೀಯ ಪರಿಕಲ್ಪನೆಯನ್ನು ಯಥಾವತ್ತಾಗಿ ಬಳಸಿರುವುದು: ಸಂರಚನಾ ಪ್ರಾಕಾರ್ಯ( ರಾಚನಿಕ ಕಾರ್ಯ ?)

೨. ಧರ್ಮಗಳ ಕುರಿತು ಬರೆಯುವಾಗ ಶಂಕರ ಮತ್ತು ರಾಮಾನುಜರ ನಡುವೆ ಕೇವಲ ಎರಡು ಶತಮಾನದ ಅಂತರ ಇದೆ ಎಂದು ತಪ್ಪಾಗಿ ನಮೂದಿಸಿರುವುದು.

೩. ನಾಲ್ಕಾರು ಲಿಪಿ ಸ್ಖಾಲಿತ್ಯಗಳು ಉಳಿದು ಬಂದಿವೆ. ಅವರ ಮೇಲೆ ಮಂಡಿಸಿದ ಸಾಧನೆಗಳ ಎದುರು ಇವು ಗೌಣ.

ಸಮಾಜ ವಿಜ್ಞಾನದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿದ ಕೃತಿಯನ್ನು ಅನನ್ಯವಾಗಿ ಕನ್ನಡಕ್ಕೆ ತಂದ ಶ್ರೇಯಸ್ಸು ಪ್ರೊ.ಟಿ.ಆರ್.ಶಾಮಭಟ್ಟರಿಗೆ ಸಲ್ಲಬೇಕು. ‌ಅವರು ಮತ್ತು ಕೆ.ಸತ್ಯನಾರಾಯಣ ಮುನ್ನುಡಿಯ ಮೂಲಕ ಕೃತಿ ಪ್ರವೇಶಕ್ಕೆ ಬೇಕಾದ ವೇದಿಕೆಯನ್ನು ಕಲ್ಪಿಸಿದ್ದಾರೆ. ಇದನ್ನು ನಮಗೆ ಕಳುಹಿಸಿ, ಓದಲು ಅವಕಾಶ ಮಾಡಿಕೊಡುವ ಮೂಲಕ, ನಮ್ಮ ಅರಿವನ್ನು ವಿಸ್ತರಿಸಿದ ಅವರಿಗೆ ಅನಂತ ವಂದನೆ


  • ರಘುನಾಥ್ ಕೃಷ್ಣಮಾಚಾರ್  (ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW