ಸಾಮಾನ್ಯವಾಗಿ ಶ್ವಾನಗಳು ಬೇಸಿಗೆಯಲ್ಲಿ, ಮಧ್ಯಾಹ್ನದ ಬಿಸಿಲಿನಲ್ಲಿ ಅಥವಾ ವೇಗವಾಗಿ ಓಡಿದಾಗ ಬಾಯಿಯನ್ನು ಅಗಲವಾಗಿ ತೆರೆದು, ನಾಲಿಗೆಯನ್ನು ಹೊರಹಾಕಿ ಜೋರಾಗಿ ಉಸಿರಾಡುತ್ತವೆ. ಇದನ್ನು “ಪ್ಯಾಂಟಿಂಗ್” ( panting) ಎನ್ನುತ್ತಾರೆ. ಶ್ವಾನದ “ಪ್ಯಾಂಟಿಂಗ್” ಕುರಿತು ಡಾ. ಯುವರಾಜ ಹೆಗಡೆ ಅವರು ಓದುಗರೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ವಾತಾವರಣ ಬಿಸಿಯಾದಾಗ, ಜೋರಾಗಿ ಓಡಿದಾಗ ಅವು ನಾಲಿಗೆ ಹೊರಹಾಕಿ ಉಸಿರಾಡುವ ಕಾರಣ ತಿಳಿಯುವ ಕುತೂಹಲ ನಿಮ್ಮಲ್ಲಿ ಇರುತ್ತದೆ.
ಮನುಷ್ಯರಲ್ಲಿ ಹೆಚ್ಚು ಕೆಲಸವನ್ನು ಮಾಡಿದಾಗ, ಬಿಸಿಲಿನಲ್ಲಿ ಓಡಾಡಿದಾಗ ಅಥವಾ ತಾಪಮಾನ ಏರಿದಾಗ ದೇಹದ ಉಷ್ಣಾಂಶ ಹೆಚ್ಚುತ್ತದೆ. ಆಗ ಬೆವರಿನ ಗ್ರಂಥಿಗಳ ಮೂಲಕ ಬೆವರು ಹೊರಬಂದು ದೇಹದ ಉಷ್ಣಾಂಶ ತಗ್ಗಲು ಸಹಾಯಕಾರಿಯಾಗುತ್ತದೆ.
ಆದರೆ ನಾಯಿಗಳಲ್ಲಿ ಬೆವರಿನ ಗ್ರಂಥಿಗಳು ತೀರಾ ವಿರಳ. ಅವುಗಳ ಪಾದದಲ್ಲಿ ಹಾಗೂ ಮೂಗಿನ ತುದಿ ಸ್ವಲ್ಪ ಮಟ್ಟಿನ ಬೆವರಿನ ಗ್ರಂಥಿಗಳಿದ್ದು ದೇಹದಲ್ಲಿ ಬೇರೆ ಯಾವ ಭಾಗದ ಮುಖಾಂತರವೂ ನಾಯಿಗಳು ಬೆವರುವುದಿಲ್ಲ. ಇದರಿಂದ ದೇಹದ ಉಷ್ಣಾಂಶವನ್ನು ನಿಯಂತ್ರಿಸಿಕೊಳ್ಳುವುದು ಅವುಗಳಿಗೆ ಸವಾಲು. ನೀವು ಕೂಡ ನಾಯಿಗಳು ಬೆವರುವುದನ್ನು ನೋಡಿರುವುದಿಲ್ಲ. ದೇಹದ ಉಷ್ಣಾಂಶವನ್ನು ತಗ್ಗಿಸಲು ನಾಯಿಗಳು ಬಾಯಿಯನ್ನು ಕಳೆದು, ನಾಲಿಗೆಯನ್ನು ಹೊರತೆಗೆದು ಜೋರಾಗಿ ಉಸಿರಾಡುತ್ತವೆ. ಅವುಗಳಲ್ಲಿ ನಾಲಿಗೆಯು ದೇಹದ ಉಷ್ಣಾಂಶವನ್ನು ತಗ್ಗಿಸಲು ಪ್ರಮುಖ ಪಾತ್ರವನ್ನು ವಹಿಸುತ್ತವೆ.

* ತೆಳುವಾದ ಹಾಗೂ ಉದ್ದನೆಯ ನಾಲಿಗೆಯನ್ನು ಹೊರಹಾಕಿ ಜೋರಾಗಿ ಉಸಿರಾಡುವುದರಿಂದ, ದೇಹದ ಉಷ್ಣಾಂಶವು ವಾತಾವರಣದೊಂದಿಗೆ ಪರಸ್ಪರ ವಿನಿಮಯವಾಗುತ್ತದೆ.ಆ ವೇಳೆ ತಣ್ಣನೆಯ ಗಾಳಿಯು ಶ್ವಾಸಕೋಶ ಸೇರುವುದರಿಂದಲೂ ದೇಹದ ಶಾಖ ತಗ್ಗಲು ಸಹಾಯವಾಗುತ್ತದೆ.
* ಶ್ವಾಸವನ್ನು ಒಳ ತೆಗೆದುಕೊಳ್ಳುವಾಗ, ಗಾಳಿಯು ತೇವವಾದ ನಾಲಿಗೆಯ ಮೇಲ್ಪದರವನ್ನು ಹಾಗೂ ಬಾಯಿಯ ಒಳಭಾಗವನ್ನು ಸ್ಪರ್ಶಿಸುತ್ತಾ ತಂಪಾಗಿ ಒಳ ಸೇರುತ್ತದೆ.
* ನಾಲಿಗೆಯಲ್ಲಿ ರಕ್ತ ನಾಳಗಳ ಜಾಲ ಅಧಿಕವಾಗಿದ್ದು, ದೇಹದ ಉಷ್ಣಾಂಶವನ್ನು ಆವಿಯ (evaporation ) ಮುಖಾಂತರ ಹೊರಹಾಕಿ ಮೖ ಶಾಖವನ್ನು ನಿಯಂತ್ರಿಸಲು ಸಹಾಯಕಾರಿಯಾಗಿದೆ.
ಹೀಗೆ ನಾಲಿಗೆಯು ಆಹಾರ ಮತ್ತು ನೀರನ್ನು ನುಂಗಲು, ಅಗಿಯುವಾಗ ಆಹಾರವನ್ನು ದವಡೆಯೆಡೆಗೆ ತಳ್ಳಲು, ರುಚಿಯನ್ನು ಗ್ರಹಿಸಲು, ತಳ ಭಾಗದಲ್ಲಿರುವ ಜೊಲ್ಲಿನ ಗ್ರಂಥಿಯಿಂದ ಜೊಲ್ಲು ಸೃವಿಸಲು ಹಾಗೂ ಮನುಷ್ಯರಲ್ಲಿ ಶಬ್ಧವನ್ನು ಉಚ್ಛರಿಸಲು ಸಹಾಯವಾಗುವುದಲ್ಲದೆ, ಶ್ವಾನಗಳಲ್ಲಿ” ಪ್ಯಾಂಟಿಂಗ್ ” ಮಾಡುವ ಮೂಲಕ ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ.
- ಡಾ. ಯುವರಾಜ ಹೆಗಡೆ – ಪಶುವೈದ್ಯರು, ತೀರ್ಥಹಳ್ಳಿ
