ಬರೆಯುವುದನ್ನು ನೀವು ಒಂದು ತಪಸ್ಸು ಎನ್ನುವುದಾದರೆ ನನ್ನ ಪ್ರಕಾರ ಓದುವುದೂ ಸಹಾ ಒಂದು ತಪಸ್ಸು ಇದ್ದಂತೆ ! ಏಕೆಂದರೆ ಬರೆಯುವಾಗ ಪ್ರಶಾಂತವಾದ ವಾತಾವರಣವನ್ನು ಬೇಡುವ ಮನಸು ಓದುವಾಗಲೂ ನಿಶ್ಯಬ್ಧವಾದ , ಯಾವ ಕಿರಿಕಿರಿಯಿಲ್ಲದ ವಾತಾವರಣವನ್ನೇ ಬಯಸುತ್ತದೆ. ಮುಖ್ಯವಾಗಿ ನಾವು ಬರೆದಿದ್ದನ್ನು ಓದುವವರಿದ್ದರೆ ತಾನೇ ಬರೆದಿದ್ದೂ ಸಾರ್ಥಕ ಆಗೋದು ! – ಡಾ. ಬಿ.ಎಲ್.ವೇಣು. ಲೇಖಕರಾದ ಹಿರಿಯೂರು ಪ್ರಕಾಶ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಇತ್ತೀಚೆಗಷ್ಟೇ ಬೆಂಗಳೂರಿನ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ತಕ್ಕಮಟ್ಟಿಗೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿ ಚಿತ್ರದುರ್ಗಕ್ಕೆ ಬಂದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ, ನಮ್ಮ ಕೋಟೆನಾಡಿನ ಒಂಟಿ ಸಲಗ ಎಂದೇ ಖ್ಯಾತರಾದ ಕಾದಂಬರಿಕಾರ ಡಾ. ಬಿ.ಎಲ್.ವೇಣುರವರ ಆರೋಗ್ಯ ವಿಚಾರಿಸಲೆಂದು ಮೊನ್ನೆ ಕರೆ ಮಾಡಿದ್ದೆ. ಕರೆ ಮಾಡುವಾಗ ವಿಶ್ರಾಂತಿಯಲ್ಲಿರುವ ಅವರಿಗೆಲ್ಲಿ ತೊಂದರೆಯಾದೀತೋ ಎಂಬ ಆತಂಕವಿತ್ತು. ಆದರೆ ಏನಾದರಾಗಲಿ, ಒಂದೆರಡು ನಿಮಿಷ ಮಾತನಾಡಿಸಿ ಬಿಡೋಣವೆಂದು ಕಾಲ್ ಮಾಡಿದೆ. ಅವರು ನನ್ನ ಕರೆಯನ್ನು ಸ್ವೀಕರಿಸಿ ಎಂದಿನಂತೆ ಸರಾಗವಾಗಿ,
” ಹೇಳ್ರೀ ಪ್ರಕಾಶ್ , ಹೇಗಿದ್ದೀರಾ….? ರಿಟೈರ್ ಆದ್ರಂತೆ…ಎನ್ನುತ್ತಾ ನನಗಿಂತ ಮೊದಲೇ ಅವರೇ ಮಾತಿಗೆ ಶುರುವಚ್ಚಿಕೊಂಡಿದ್ದನ್ನು ಕೇಳಿ ಅಚ್ಚರಿ, ಖುಷಿ ಒಟ್ಟೊಟ್ಟಿಗೆ ಆಯ್ತು.
ಸಾರ್ ತಾವು ಹೇಗಿದ್ದೀರಿ..? ಅನಾರೋಗ್ಯದಿಂದ ತಾವು ಆಸ್ಪತ್ರೆ ಸೇರಿದ್ದು ಗೊತ್ತಾಯ್ತು. ಈಗ ಆರೋಗ್ಯ ಹೇಗಿದೆ…ಎಂದೆಲ್ಲಾ ಒಂದೇ ಸಮನೆ ಕೇಳಿದೆ.
ಏನಿಲ್ಲಪ್ಪಾ…. ಬಾತ್ ರೂಂನಲ್ಲಿ ಬಿದ್ದು ಕೈ ಮೂಳೆ ಮುರಿದಿದೆ . ಇದು ಎರಡನೇ ಬಾರಿ ಹೀಗಾಗಿರೋದು. ಹಾಗಂತ ಸುಮ್ಮನಿರಲಾಗೋಲ್ಲ ಅಲ್ವೇ…ಬೆಂಗಳೂರಿಗೆ ಹೋಗಿ ಸೂಪರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದೆ. ಈ ಆಸ್ಪತ್ರೆಗಳಿಗೆ ಹೋಗೋದು ಅಂದ್ರೇನೇ ಒಂಥರಾ ಅಲರ್ಜಿ. ಏನೇನೊ ಟೆಸ್ಟುಗಳು ಅದೂ ಇದೂ ಅಂತ ಮಾಡಿ ಲಕ್ಷಾಂತರ ಬಿಲ್ ಮಾಡ್ತಾರೆ. ಹಾಗಂತ ನೆಗ್ಲೆಕ್ಟ್ ಮಾಡೋಹಂಗೂ ಇಲ್ಲಪ್ಪ…..
ಅವರ ಮಾತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಕಾರ್ಯ ವೈಖರಿ, ಟ್ರೀಟ್ ಮೆಂಟು, ಸಿಕ್ಕಾಪಟ್ಟೆ ದುಡ್ಡು….ಇತ್ಯಾದಿಗಳ ಬಗೆಗೆ ಸ್ವಲ್ಪಕಾಲ ಹೊರಳಾಡಿ ಆನಂತರ ಅವರ ಬರವಣಿಗೆ ಬಗೆಗೆ ವಾಲಿತ್ತು.

“ಸಾರ್, ಈಗ ಕೈಮೂಳೆ ಮುರಿದಿದೆ ಅಂತೀರಾ. ಹಾಗಾದ್ರೆ ಬರವಣಿಗೆ ಗತಿ ? ಎಂದು ಹೇಳಿದವನೇ ,
“ಯೋಚಿಸಬೇಡಿ ಸರ್, ಈಗೆಲ್ಲಾ ವಾಯ್ಸ್ ಟೈಪಿಂಗ್ ಅಂತ ಆಪ್ ಗಳಿವೆ. ನಾವು ಹೇಳಿದ್ದನ್ನು ಅದು ತಾನಾಗಿಯೇ ಬರೆದುಕೊಂಡು ಹೋಗುತ್ತಂತೆ ” ಎಂದೆ . In fact , ನಾನೂ ಸಹ ಅದನ್ನು ಯಾವತ್ತೂ ಉಪಯೋಗಿಸಿರಲಿಲ್ಲವಾದ್ದರಿಂದ ಆ ಬಗ್ಗೆ ಹೆಚ್ಚಿಗೆ ಹೇಳಲು ಹೋಗಲಿಲ್ಕ
ಅದಕ್ಕೆ ವೇಣು ಸರ್ …
ಅಲ್ಲಾ ಪ್ರಕಾಶ್, ನೀನೇನೇ ಹೇಳಪ್ಪಾ.. ಪೆನ್ನು ಹಾಳೆ ಹಿಡಿದು ಬರೆಯುವಾಗ ಇರುವ ಒಂದು ಸ್ಮೂತ್ ಫ಼್ಲೋ , ವಾಯ್ಸ್ ಟೈಪಿಂಗ್ ನಲ್ಲಿ ಸಿಗೋಲ್ಲಾರೀ…. ನಮಗೆಲ್ಲಾ ಕೈಯಲ್ಲಿ ಪೆನ್ನು ಹಿಡಿದು ಬರೆದರೇನೇ ಬರವಣಿಗೆಯ ತೃಪ್ತಿ ಸಿಗೋದು. ಬರೆಯುವಾಗ ಸಿಗುವ ಮಾನಸಿಕ ತೃಪ್ತಿ, ಟೈಪ್ ಮಾಡುವಾಗ ಅಥವಾ ವಾಯ್ಸ್ ಟೈಪಿಂಗಿನಲ್ಲಿರಲು ಸಾಧ್ಯವೇ..?
ಅವರು ಹೇಳಿದ್ದು ನೂರಕ್ಕೆ ನೂರು ನಿಜ ಅನಿಸಿತ್ತು. ನಮ್ಮ ಮಾತುಕತೆ ಯಾವಾಗ ಬರಹ, ಓದು ಸಾಹಿತ್ಯದ ಬಗೆಗೆ ತಿರುಗಿತ್ತೋ ಆಗ ಅವರ ಮಾತಲ್ಲಿ ಅತೀವ ಹುಮ್ಮಸ್ಸು, ಲವಲವಿಕೆ, ಉತ್ಸಾಹ ತಾನೇ ತಾನಾಗಿ ತುಂಬಿತ್ತು.

ಫೋಟೋ ಕೃಪೆ : wikipedia
ಹಾಗೆಯೇ ಮುಂದುವರೆದು ಅವರೆಂದರು….
” ಏನಾದರೊಂದು ಬರೆಯಲಿಕ್ಕೆ ಮನಸ್ಸು ಹೇಗೆ ಏಕಾಂತ ಬಯಸುತ್ತದೆಯೋ ಹಾಗೆಯೇ ಬರೆದಿದ್ದನ್ನು ಓದಲಿಕ್ಕೂ ಏಕಾಂತ ಬೇಕಲ್ಲವೇ ? ಹಾಗೆ ನೋಡಿದರೆ ಬರೆಯೋದು ಸುಲಭ. ಆದರೆ ಬರೆದಿದ್ದನ್ನು ಏಕಾಗ್ರತೆಯಿಂದ ಓದುವುದಿದೆಯಲ್ಲಾ… ಅದೇ ಸ್ವಲ್ಪ ಕಷ್ಟ.
ಬರೆಯುವುದನ್ನು ನೀವು ಒಂದು ತಪಸ್ಸು ಎನ್ನುವುದಾದರೆ ನನ್ನ ಪ್ರಕಾರ ಓದುವುದೂ ಸಹಾ ಒಂದು ತಪಸ್ಸು ಇದ್ದಂತೆ ! ಏಕೆಂದರೆ ಬರೆಯುವಾಗ ಪ್ರಶಾಂತವಾದ ವಾತಾವರಣವನ್ನು ಬೇಡುವ ಮನಸು ಓದುವಾಗಲೂ ನಿಶ್ಯಬ್ಧವಾದ , ಯಾವ ಕಿರಿಕಿರಿಯಿಲ್ಲದ ವಾತಾವರಣವನ್ನೇ ಬಯಸುತ್ತದೆ. ಮುಖ್ಯವಾಗಿ ನಾವು ಬರೆದಿದ್ದನ್ನು ಓದುವವರಿದ್ದರೆ ತಾನೇ ಬರೆದಿದ್ದೂ ಸಾರ್ಥಕ ಆಗೋದು !

ಎಂದು ಹೇಳುತ್ತಲೇ. ಓದಿನ ಹವ್ಯಾಸದ ಬಗ್ಗೆ ವಿಷಾದದಿಂದ….
” ಆದ್ರೆ ಪ್ರಕಾಶ್, ಇಂದಿನ ದಿನಗಳಲ್ಲಿ ನಮ್ಮಲ್ಲಿ ಸಾಹಿತ್ಯ ಓದುವ ಆಸಕ್ತಿ, ಹವ್ಯಾಸ ಕಡಿಮೆಯಾಗಿದೆ, ಜೊತೆಗೆ ಓದುವ ತಾಳ್ಮೆಯೂ ಕಡಿಮೆಯಾಗಿದೆ. ಬಹುಶಃ ಅದಕ್ಕೆ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕಾರಣವೋ ಅಥವಾ ಮುಖ್ಯವಾಗಿ ಮೊಬೈಲ್ ಹಾಗೂ ಅಂತರ್ಜಾಲದ ಪ್ರಭಾವ ಕಾರಣವೋ ಅಂತೂ ಇವೆಲ್ಲಾ ಬಂದು ಓದುವ ಹವ್ಯಾಸದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇ-ಪುಸ್ತಕಗಳು, ಇ- ಲೈಬ್ರರಿ ಅಂತೆಲ್ಲಾ ಬಂದು ಓದುಗರ ಅಭಿರುಚಿಯೇ ಬದಲಾಗಿದೆ “…… ಮಾತುಕತೆ ಈ ನಿಟ್ಟಿನಲ್ಲಿ ಸಾಗುತ್ತಲೇ ಇತ್ತು.
ವೇಣುರವರೇ ಹಾಗೆ ! ಒಮ್ಮೆ ತಮ್ಮ ಪ್ರೀತಿಯ ಟಾಪಿಕ್ಕಿನ ಬಗೆಗೆ ಮಾತನಾಡಲು ಆರಂಭಿಸಿದರೆ ಅವರ ಬಾಯಿ ಹಾಗೂ ಹೃದಯದ ನಡುವೆ ಫ಼ಿಲ್ಟರ್ ಇರೋಲ್ಲ. ಸಾಹಿತ್ಯದ ಬಗೆಗೆ ನೇರವಾದ ಮಾತುಗಳು ಅಸ್ಖಲಿತವಾಗಿ ಧ್ವನಿಸಿ, ಲಯಬದ್ಧವಾಗಿ ಲಾಸ್ಯವಾಡುತ್ತಲಿರುತ್ತವೆ. ಅದನ್ನು ಕೇಳುವುದೇ ಒಂದು ಚಂದ. ಅಷ್ಟೇ ಅಲ್ಲ, ಅವೆಲ್ಲವೂ ಹಿರಿಯ ಕಾದಂಬರಿಕಾರನ ಅನುಭವಾಮೃತವಿದ್ದಂತೆ.

ಫೋಟೋ ಕೃಪೆ : wikipedia
ಹೀಗೆ ಓತಪ್ರೋತ ವಾಗಿ ಹರಿಯುತ್ತಿದ ಅವರ ಮಾತುಗಳಲ್ಲಿ ಅದೇ ಹುಮ್ಮಸ್ಸು, ಉತ್ಸಾಹ ಹಾಗೂ ಅದೇ ಜೋಷ್ ತುಳುಕುತ್ತಿತ್ತು.! ಅಲ್ಲಿಯವರೆಗೂ ಅವರಿಗಾಗಿದ್ದ ಅನಾರೋಗ್ಯವನ್ನೆಲ್ಲಾ ಮರೆತು ಉತ್ಸಾಹದಿಂದ ಪುಟಿಯುವಂತೆ ಮಾತನಾಡುತ್ತಲೇ ಇದ್ದರು.
ಕೊನೆಗೆ ಅವರಿಗೆ ಹೆಚ್ಚು ತೊಂದರೆ ಕೊಡಬಾರದೆಂದು ನಾನೇ ” ಆಯ್ತು ಸರ್, ಆದಷ್ಟು ಬೇಗನೇ ಪೂರ್ತಿ ಹುಷಾರಾಗಿ ಮೊದಲಿನಂತೆಯೇ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಿ. ಇಷ್ಟರಲ್ಲೇ ದುರ್ಗಕ್ಕೆ ಬಂದು ಭೇರಿಯಾಗುವೆ ಎಂದು ಹೇಳಿ ನಮಸ್ಕರಿಸಿದೆ.
ಕೊನೆಗೆ ….” ಸಾರ್ ಸಧ್ಯಕ್ಕೆ ಕೈ ಮೂಳೆ ಮುರಿದಿದೆ. ಹಾಗಾದರೆ ಅದು ಸರಿಯಾಗುವವರೆಗೂ ನಿಮ್ಮ ಬರವಣಿಗೆ ಗತಿ ಏನು ಸಾರ್ “ಎಂದಾಗ….
” ಮುರಿದಿರುವುದು ನನ್ನ ಕೈ ಮಾತ್ರ ಪ್ರಕಾಶ್….., ಆದರೆ ಮನಸಲ್ಲ !
ಎನ್ನುವ ಉತ್ತರ ಬಾಣದಂತೆ ಬಂದಿತ್ತು.!

ಫೋಟೋ ಕೃಪೆ : wikipedia
* ಮರೆಯುವ ಮುನ್ನ *
ಡಾ. ಬಿ.ಎಲ್. ವೇಣುರವರೊಂದಿಗಿನ ಹತ್ತುನಿಮಿಷಗಳ ಆ ಫೋನ್ ಕಾಲ್ ಸಂಭಾಷಣೆಯಲ್ಲಿ ಎಷ್ಟೆಲ್ಲಾ ವಿಚಾರಗಳು, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಉಪಯುಕ್ತ ಮಾಹಿತಿಗಳು ಅನಾವರಣವಾದವೆಂದರೆ, ಅವು ಕೇವಲ ಬರವಣಿಗೆಯನ್ನು ತಪಸ್ಸೆಂದು ಧ್ಯಾನಿಸುವವರಿಂದ ಮಾತ್ರವೇ ಬರಲು ಸಾಧ್ಯ. ಹಿಂದೊಮ್ಮೆ ಬಲಗೈ ಮೂಳೆ ಮುರಿದು ಕೈ ಎತ್ತಲು ಆಗದಿರುವಂತಹ ಸ್ಥಿತಿಯಲ್ಲೂ ಧೃತಿಗೆಡದೇ ಯಾರ ಮೇಲೂ ಅವಲಂಬಿಸದೇ ತಮ್ಮ ಎಡಗೈನಲ್ಲಿಯೆ ಬರೆಯುವ ಅಭ್ಯಾಸ ಮಾಡಿಕೊಂಡು ಕೆಲವೊಂದು ಮಹತ್ತರ ಕೃತಿಗಳನ್ನು ಮುಗಿಸಿದ ಛಲದಂಕ ಮಲ್ಲ ಇವರು.
ವೇಣುರವರ ದೇಹಕ್ಕೆ ವಯಸ್ಸಾಗಿರಬಹುದೇನೋ… ಆದರೆ ಅವರಲ್ಲಿನ ಬತ್ತದ ಉತ್ಸಾಹಕ್ಕೆ, ಬರವಣಿಗೆಯ ತಪಸ್ಸಿನ ಹುಮ್ಮಸ್ಸಿಗೆ ಎಂದಿಗೂ ವಯಸ್ಸಾಗಲು ಸಾಧ್ಯವೇ ಇಲ್ಲ…..ವಯಸ್ಸಾಗಲು ಅವರ ಕ್ರಿಯಾಶೀಲತೆ ಬಿಡೋದೇ ಇಲ್ಲ. ಏಕೆಂದರೆ ಈ ಕೋಟೆ ನಾಡಿನ ಒಂಟಿ ಸಲಗ ಇರೋದೇ ಹಾಗೆ… ನೇರ- ದಿಟ್ಟ- ನಿರಂತರ….!
ಆದಷ್ಟು ಬೇಗ ಪೂರ್ತಿ ಗುಣಮುಖರಾಗಿ ಕನ್ನಡ ಕಾದಂಬರಿ ಲೋಕವನ್ನು ಮತ್ತಷ್ಟು ಶ್ರೀಮಂತವಾಗಿಸುವಂತಾಗಲಿ ಸರ್…
- ಹಿರಿಯೂರು ಪ್ರಕಾಶ್
