ನೋಡಲು ಕಪ್ಪಗಿದ್ದ ಕಾರಣ ಜನ ‘ಕರ್ಗಿ’ ಎಂದು ಹೀಯಾಳಿಸುತ್ತಿದ್ದರು, ಅದೇ ಕರ್ಗಿ ಮುಂದೆ ತನ್ನ ಸಾಧನೆಯ ಮೂಲಕ ಜನರ ಬಾಯಿ ಮುಚ್ಚಿಸಿದಳು, ಅವರು ಮತ್ಯಾರು ಅಲ್ಲ ಡಾ.ಸತ್ಯವತಿ ಮೂರ್ತಿ. ಅವರೊಬ್ಬ ಖ್ಯಾತ ಶಿಕ್ಷಕಿ, ಸಂಸ್ಕೃತ ಪಂಡಿತೆ, ಬರಹಗಾರ್ತಿ, ಪುರೋಹಿತೆ ಅವರ ಸಾಧನೆಯ ಕುರಿತು ಲೇಖಕ ರಘುರಾಂ ಅವರು ಬರೆದಿರುವ ಪರಿಚಯವನ್ನು ತಪ್ಪದೆ ಓದಿ…
ಇತ್ತೀಚೆಗೆ ಸಮನ್ವಯ ಸಮಿತಿ ಕನ್ನಡವೇ ಸತ್ಯವೆಂಬ ವ್ಯಾಟ್ಸಪ್ ವೇದಿಕೆಯ ಮೂಲಕ ಡಾ.ಸತ್ಯವತಿ ಮೂರ್ತಿಯವರ ಪರಿಚಯವಾಯಿತು. ಅವರ ಬಗ್ಗೆ ತಿಳಿದುಕೊಳ್ಳಲು ನಾನು ಅಪೇಕ್ಷೆ ವ್ಯಕ್ತಪಡಿಸಿದಾಗ ಅವರೇ ಕರೆ ಮಾಡಿ ಮಾತನಾಡಿಸಿ ನಿಧಾನವಾಗಿ ಅವರು ನಡೆದು ಬಂದ ಹಾದಿಯನ್ನು ಸ್ವಲ್ಪ ಸಂಕೋಚದಿಂದಲೇ ಹಂಚಿಕೊಂಡರು. ಅಂತರಜಾಲದಲ್ಲಿ ಅವರ ಬಗ್ಗೆ ಒಂದಿಷ್ಟು ಮಾಹಿತಿ ಸಿಕ್ಕಿತು. ಆ ವಿಷಯಗಳನ್ನು ನನ್ನ ಅಲ್ಪಮತಿಗೆ ತಿಳಿದಷ್ಟು ಕ್ರೋಢೀಕರಿಸಿದ ಒಂದು ಪರಿಚಯದ ಬರಹವಿದು.
‘ಇರುವೆಯೋ?…ಆನೆಯೋ…’
ವೇದ ಬ್ರಹ್ಮರ ಪುತ್ರಿ ವೇದ ರತ್ನರ ಶಿಷ್ಯೆ, ಮೂರ್ತಿಯ ಮನೆಮನಗಳೊಡತಿ ಈ ಸತ್ಯವತಿ.

‘ನಿನ್ನ ಹೆಸರೇನು?’ ಜಿ.ವಿ.ಯವರು (ಡಾ.ಜಿ.ವೆಂಕಟಸುಬ್ಬಯ್ಯ) ಸುಂದರವಾಗಿ ಕವಿತಾವಾಚನ ಮಾಡಿದ ಹುಡುಗಿಯೊಬ್ಬಳನ್ನು ಒಮ್ಮೆ ಕೇಳುತ್ತಾರೆ. ಮುಂದೆ ಒಂದು ದಿನ ಅದೇ ಪ್ರಶ್ನೆಯನ್ನು ಜಿ.ವಿ ಕುಲಕರ್ಣಿಯವರು( ಬೇಂದ್ರೆಯವರ ಶಿಷ್ಯರು) ಕೇಳಿದಾಗ ‘ನಿನ್ನ ಹೆಸರೇನು’ ಶೀರ್ಷಿಕೆಯೊಂದಿಗೆ ಕವನವೊಂದನ್ನು ಬರೆಯುತ್ತಾರೆ. ಆ ಕವನದ ಕೆಲವು ಸಾಲುಗಳಿವು. ಆ ಕವನ ಬರೆದವರೇ ಇತ್ತೀಚಿಗೆ ಈ ವೇದಿಕೆ ಸೇರಿದ ಡಾ.ಸತ್ಯವತಿ ಮೂರ್ತಿ.
ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಆಧ್ಯಾಪಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಆಗಿ ಭಾರತದಲ್ಲಿ ಕೆಲಸ ಮಾಡಿ ಈಗ ಇಂಗ್ಲೆಂಡಿನಲ್ಲಿ ವಾಸವಾಗಿರುವ ಇವರು ನಡೆದು ಬಂದ ಹಾದಿ ಕುತೂಹಲಕರವಾಗಿದೆ. ನೋಡಲು ಕಪ್ಪಾಗಿದ್ದ ಕಾರಣ ಎಲ್ಲರೂ ‘ಕರ್ಗಿ’ ಎಂದು ಅಣಕಿಸುತ್ತಿದ್ದಾಗ ಚಿಕ್ಕ ಹುಡುಗಿ ಸತ್ಯ ಬೇಸರದಿಂದ ಮೂಲೆ ಸೇರಿಕೊಂಡಿದ್ದನ್ನು ನೋಡಿದ ತಂದೆ ಇವರಿಗೆ ಕೇಳಿದ ಪ್ರಶ್ನೆ ‘ಕೃಷ್ಣ ಹೆಚ್ಚು ಬುದ್ಧಿವಂತನೋ? ಅಥವ ಬಲರಾಮ ಬುದ್ಧಿವಂತನೋ?’. ‘ಕೃಷ್ಣ ಬುದ್ಧಿವಂತ’ ಎಂದಾಗ ತಂದೆ ಹೇಳುತ್ತಾರೆ ‘ಕಪ್ಪು ಬಣ್ಣದ ಕೃಷ್ಣನನ್ನೆ ಎಲ್ಲರೂ ಮೊದಲು ನೆನೆವುದು, ಬಿಳಿ ಬಣ್ಣದ ಬಲರಾಮನನ್ನಲ್ಲ! ಮಾಡುವ ಕೆಲಸ ಮುಖ್ಯವೇ ಹೊರತು ಬಣ್ಣವಲ್ಲ’ ವೆಂದು ತಿಳಿಹೇಳುತ್ತಾರೆ. ಅಂದಿನಿಂದ ಬಣ್ಣದ ಬಗ್ಗೆ ಕೀಳರಿಮೆ ಬಿಟ್ಟು ಜೀವನದಲ್ಲಿ ಮುನ್ನಡೆಯುತ್ತಾರೆ.
ಅವರ ತಂದೆಯವರದು ಕೂಡ ಬಹುಮುಖ ವ್ಯಕ್ತಿತ್ವ. ತಂದೆ ಚನ್ನಕೇಶವ ಅವಧಾನಿಗಳು. ಒಬ್ಬ ಮಾದರಿ ರೈತ, ನುರಿತ ವ್ಯಾಪಾರಿ, ಬಿ.ಡಿ ಜತ್ತಿಯವರಿಂದ ತನ್ನ ರಾವಣನ ಪಾತ್ರಕ್ಕೆ ನಟನೆಗೆ ಚಿನ್ನದ ಪದಕವನ್ನೂ, ‘ಬೇಡರ ಕಣ್ಣಪ್ಪ’ ನಾಟಕದಲ್ಲಿ ಕಣ್ಣಪ್ಪನ ಪಾತ್ರಕ್ಕೆ ಒಂದು ದೊಡ್ಡ ನಿಲುವುಗನ್ನಡಿಯನ್ನೂ ಗಳಿಸಿದ, ಆಗಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರಿಂದ ಅತ್ಯಂತ ಗೌರವಕ್ಕೆ ಪಾತ್ರರಾಗಿದ್ದ ‘ರಂಗ ನಂದಿನಿ ನಾಟಕ ಸಭಾ’ ಎಂಬ ಸಂಸ್ಥೆಯೊಂದನ್ನು ಹುಟ್ಟು ಹಾಕಿದ ರಂಗನಟ. ಎಲ್ಲದಕ್ಕಿಂತ ಹೆಚ್ಚಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ( ಕ್ವಿಟ್ ಇಂಡಿಯಾ ಚಳುವಳಿ) ಭಾಗವಹಿಸಿ ಜೈಲುವಾಸ ಅನುಭವಿಸಿದ್ದವರು, ಜೊತೆಗೆ ವೇದರತ್ನ ಬಿರುದುಗಳಿಸಿದ ವೇದಬ್ರಹ್ಮ. ಅಪ್ಪಂದಿರ ದಿನದಲ್ಲಿ ಇವರು ತನ್ನ ತಂದೆಯ ಬಗ್ಗೆ ಬರೆದ ಕವನವೊಂದರಲ್ಲಿ ತನ್ನ ತಂದೆಯ ಬಗ್ಗೆ ತೆರೆದಿಟ್ಟ ಮಾಹಿತಿಯಿದು.

ಚಿಕ್ಕಂದಿನಿಂದಲೇ ಪಾಠ ಮಾಡಲು ಒಲವು. 16 ವರ್ಷ ಇರುವಾಗಲೇ ಸಣ್ಣ ಮಕ್ಕಳಿಗೆ ಪಾಠ ಮಾಡಲು ಪ್ರಾರಂಭ ಮಾಡಿದರು. ಗಣಿತದ ಮೇಲಿನ ಪ್ರೀತಿಯಿಂದ ಬಿ.ಎಸ್.ಸಿ. ಯಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡು ಪದವಿ ಪಡೆದುಕೊಂಡರು. ಕನ್ನಡದ ಮೇಲಿನ ಪ್ರೀತಿಯಿಂದ ಕನ್ನಡ, ಇತಿಹಾಸ ಮತ್ತು ಅರ್ಥಶಾಸ್ತ್ರಗಳನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡು ಬಿ.ಎ. ಪದವಿ, ನಂತರ ಕನ್ನಡದಲ್ಲಿ ಎಂ.ಎ. ಪದವಿ ಗಳಿಸಿದರು. ಇವರು ಎಂ.ಎ ಪದವಿಯನ್ನು ಗಳಿಸಿದ್ದೂ ಮನೆಯಿಂದಲೇ. ಮೂರುವರ್ಷದ ಮಗನನ್ನು ಸುಧಾರಿಸಿಕೊಂಡು ಜ್ಞಾನಭಾರತಿಗೆ ಎರಡು ಮೂರು ಬಸ್ಸುಗಳನ್ನು ಬದಲಾಯಿಸಿ ಹೋಗಿ ಲೈಬ್ರರಿಯಲ್ಲಿ ಕುಳಿತು, ಅಲ್ಲಿಯ ಬೋಧಕರನ್ನು ಭೇಟಿಮಾಡಿ ಅವರಿಂದ ಕಲಿತು,
ಕಾಲೇಜಿಗೆ ಹೋಗುತ್ತಿದ್ದವರ ಬಳಿ ಅಂಗಲಾಚಿ ಅವರ ನೋಟ್ಸನ್ನು ತಂದು ಓದಬೇಕಾದ ಸಂದರ್ಭ. ಆಗ ಇನ್ನೂ ಬೆಂಗಳೂರಿನ ಸಾರಿಗೆ ಸಂಸ್ಥೆ ಆಷ್ಟಾಗಿ ಬೆಳೆದಿರಲಿಲ್ಲ. ನಂತರ ಕನ್ನಡ ಟೀಚರ್ ಆಗಬೇಕೆಂಬ ಉದ್ದೇಶದಿಂದ ಬಿ.ಎಡ್. ಮಾಡಿದರು. ಬಿ.ಎಡ್ ನಲ್ಲಿ ಆ ವರ್ಷ ಇಡೀ ವಿಶ್ವವಿದ್ಯಾನಿಲಯಕ್ಕೆ ಅತಿ ಹೆಚ್ಚು ಅಂಕಗಳನ್ನು ಕನ್ನಡ ಬೋಧನೆಯಲ್ಲಿ ಪಡೆದ ಹೆಮ್ಮೆ ಇವರದು.
ಮೊದಲಿಗೆ ರಾಜಾಜಿನಗರದ ವಿದ್ಯಾವರ್ಧಕ ಸಂಘದಲ್ಲಿ ಒಂದು ವರ್ಷಕಾಲ ಕೆಲಸ ಮಾಡಿ, ಮನೆಯ ಬಳಿಯೇ ಇದ್ದ ಇಂಗ್ಲಿಷ್ ಮಾಧ್ಯಮದ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯಳಾಗಿ ಕಾರ್ಯ ನಿರ್ವಹಿಸಿ, ಬಿ.ಎಡ್ ಕಾಲೇಜಿನಲ್ಲಿ ಪಾಠ ಬೋಧಿಸುವ ಅವಕಾಶ ಸಿಕ್ಕಿದರೂ ಹೋಗಿ ಬರಲು ಅನುಕೂಲ ಸಾಲದೆ ತಾನಾಗಿಯೇ ಬಂದ ಹೈಸ್ಕೂಲಿನ ಕನ್ನಡ ಟೀಚರ್ ಆಗುವ ಅವಕಾಶವನ್ನು ಒಪ್ಪಿಕೊಂಡರು. ಬಿ.ಎಸ್ಸಿ.ಯಲ್ಲಿ ಓದಿದ್ದ ಭೌತಶಾಸ್ತ್ರ ಮತ್ತು ಗಣಿತ, ಬಿ.ಎ.ನಲ್ಲಿ ಓದಿದ್ದ ಇತಿಹಾಸ ಈಗ ಮನೆ ಪಾಠ ಮಾಡಲು ಬಹಳ ಸಹಾಯವಾಯಿತು. ಶಾಲೆಯಲ್ಲಿ ಕನ್ನಡ ಟೀಚರ್ ಆದರೂ ಮನೆಯಲ್ಲಿ ವಿಜ್ಞಾನ ಮತ್ತು ಗಣಿತಗಳನ್ನು ಬೋಧಿಸುತ್ತಿದ್ದರು. ಇವರ ಇತಿಹಾಸ ಬೋಧನೆ ವಿದ್ಯಾರ್ಥಿಗಳಲ್ಲಿ ಮೆಚ್ಚುಗೆ ಪಡೆದಿತ್ತು. ಅದರಲ್ಲೂ ಮೊದಲನೆ ಮತ್ತು ಎರಡನೆ ಮಹಾಯುದ್ಧದ ಬಗೆಗಿನ ಇವರ ಪಾಠವನ್ನು ಕೇಳಲು ಬೇರೆ ಬೇರೆ ಶಾಲೆಗಳ ಮಕ್ಕಳು ಅನುಮತಿ ತೆಗೆದುಕೊಂಡು ಬಂದು ಕುಳಿತುಕೊಳ್ಳುತ್ತಿದ್ದರು. ಆದರೂ ಇವರಿಗೆ ಗಣಿತದ ಕಡೆಗೆ ವಿಷೇಶ ಒಲವು. ಇವರ ಅನೇಕ ವಿದ್ಯಾರ್ಥಿಗಳು ಗಣಿತದಲ್ಲಿ ನೂರಕ್ಕೆ ನೂರು ಅಂಕಗಳನ್ನು ತೆಗೆದುಕೊಂಡಿರುವುದೂ, ಇವರ ಪುತ್ರನೂ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಮೊದಲ ೨೦ ರೇಂಕುಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದುದು ಇವರಿಗೆ ಹೆಮ್ಮೆಯ ವಿಷಯ. ಮನೆಯಲ್ಲಿ ಕನ್ನಡವನ್ನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದರು. ಇವರ ಮನೆಯ ಪಾಠಕ್ಕೆ ಬರಲು ಜಾಗ ಸಿಗಲೆಂದು ಹರಕೆ ಹೊತ್ತವರು ಕೆಲವರಾದರೆ ಮತ್ತೆ ಕೆಲವು ತಂದೆತಾಯಿಯರು, “ನೀವು ನಮ್ಮ ಮಗುವಿನ ಮುಂದೆ ಕುಳಿತುಕೊಳ್ಳಿ ಅವನು/ಳು ಪಾಸಾಗುತ್ತಾನೆ/ಳೆ ಎನ್ನುತ್ತಿದ್ದರು. ಆಶ್ಚರ್ಯವೆಂದರೆ ಇವರೊಡನೆ ಪಾಠ ಹೇಳಿಸಿಕೊಂಡ ಎಂತಹ ದಡ್ಡ ಮಕ್ಕಳೂ ಪರೀಕ್ಷೆಯಲ್ಲಿ ಪಾಸಾಗುತ್ತಿದ್ದರು. ಅದನ್ನು ಜನತೆ “ನಿಮ್ಮ ಕೈಗುಣ” ಎಂದು ಹೇಳುತ್ತಿದ್ದರು!

ಮತ್ತೊಂದೆಡೆ ಅಲ್ಪ ಸಂಖ್ಯಾತರ ಆಡಳಿತದ ಇಂಗ್ಲೀಷ್ ಮಾಧ್ಯಮದ ಶಾಲೆಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಜಾರಿಗೆ ತಂದ ಶ್ರೇಯಸ್ಸು ಇವರದು. ಇವರಿಂದ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಸಮಾಜದ ಸತ್ಪ್ರಜೆಗಳಾಗಿ ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ. ಉಪನ್ಯಾಸಕಿಯಾಗಿರುವ ದಿನಗಳಲ್ಲಿ ಡಾ.ಹಂಪನಾರವರನ್ನು ಭೇಟಿ ಮಾಡಿ ಪಂಪ ಅಥವ ರನ್ನರ ವಿಷಯವನ್ನಿಟ್ಟುಕೊಂಡು ಸಂಶೋಧನೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದರು. ಆಗ ಅವರು ಮೈಸೂರು ಅರಮನೆಯ ಅಸ್ಥಾನ ವಿದ್ವಾಂಸರಾಗಿದ್ದ ಶಾಂತಿರಾಜ ಶಾಸ್ತ್ರಿಗಳು ಹತ್ತು ಸಾವಿರ ಶ್ಲೋಕಗಳಿರುವ ಜೈನ ಮಹಾಪುರಾಣವನ್ನು ಕನ್ನಡಕ್ಕೆ ಅನುವಾದ ಮಾಡಿರುವುದಲ್ಲದೆ ೨೦ ಕ್ಕೂ ಮೀರಿ ಪುಸ್ತಕಗಳನ್ನು ಬರೆದಿರುವ ವಿಷಯ ತಿಳಿಸಿ ಸಂಸ್ಕೃತದ ಹಿನ್ನೆಲೆಯಿಂದ ಬಂದ ಇವರಿಗೆ ಅವರ ಜೀವನ, ಅನುವಾದ ಮತ್ತು ಕೃತಿಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಲು ಸಲಹೆ ಮಾಡಿದರು. ಅದರಂತೆ ೧೯೯೪ ರಲ್ಲಿ ಮುಗಿಸಿದ ಸಂಶೋಧನಾ ಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಯಲ್ಟಿಯೊಂದಿಗೆ ಇವರ ಪಿ.ಎಚ್.ಡಿ.ಪ್ರಬಂಧದ ಪ್ರಕಟಣೆ ಕೂಡ ಆಯಿತು. ಈಗ ಅದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ’ಉಲ್ಲೇಖ ವಿಭಾಗ’ ದಲ್ಲಿರುತ್ತದೆ. ಈ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ ಮೊಟ್ಟಮೊದಲ ಮಹಿಳೆ ಎಂದು ಪತ್ರಿಕೆಗಳು ಕೂಡ ಹೊಗಳಿದವು.
ಇದೆಲ್ಲದರ ಜೊತೆಗೆ ಕಂಪ್ಯೂಟರ್ ಡೇಟಬೇಸ್ ಡಿಪ್ಲೊಮ ಡಿಗ್ರಿಯನ್ನೂ ಪಡೆದ ಇವರು “ಮೈಕ್ರೊಸಾಫ಼್ಟ್ ಆಫ಼ೀಸ್ , ಪೇರೋಲ್, ಹಾಗೂ ಸೀಕ್ವೆಲ್ ಸರ್ವರ್ ೭ ” ಗಳಲ್ಲೂ ತರಬೇತಿಯನ್ನು ಪಡೆದಿದ್ದಾರೆ. ಹಿಂದಿಯ ವಿಶಾರದ ಇನ್ನೊಂದು ಗಳಿಕೆ.
ಪಾಂಡಿತ್ಯವಿಲ್ಲ: ಕನ್ನಡದ ಸೊಗಡಿಲ್ಲ; ಬರೆಯುವ ಹಂಬಲವು ಮೈಯೆಲ್ಲಾ!
ಏಕಪಾತ್ರಾಭಿನಯ ಇವರ ಹವ್ಯಾಸಗಳಲ್ಲೊಂದು. ಹಲವಾರು ಐತಿಹಾಸಿಕ , ಸಾಮಾಜಿಕ ಘಟನೆಗಳನ್ನು ನಾಟಕೀಕರಿಸಿ ಅಭಿನಯಿಸಿದ್ದಾರೆ. ಇವರ ಏಕಪಾತ್ರಾಭಿನಯಗಳು ನೂರಕ್ಕೂ ಹೆಚ್ಚು ಬಾರಿ ಅಭಿನಯಿಸಲ್ಪಟ್ಟಿವೆ. ಅಂತರ ಪ್ರೌಢಶಾಲಾ ಸ್ಪರ್ಧೆಗಳಲ್ಲಿ ಬರೆದು ನಿರ್ದೇಶಿಸಿದ ನಾಟಕಗಳಿಗೆ ಬಹುಮಾನ ಗಳನ್ನು ಗಳಿಸಿರುವ ಇವರು, ತಾನು ಕೆಲಸಮಾಡುತ್ತಿದ್ದ ಪ್ರೌಢಶಾಲೆಯ ಪರವಾಗಿ ಹಲವಾರು ಸಾರ್ವಜನಿಕ ಸಂಸ್ಥೆಗಳಿಗೆ ನೃತ್ಯನಾಟಕಗಳನ್ನು ರೂಪಿಸಿ ನಿರ್ದೇಶಿಸಿ ಹಲವಾರು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಈ ಸಂದರ್ಭಗಳಲ್ಲಿ ಬಾಲ್ಯದಲ್ಲಿ ಪಡೆದಿದ್ದ ನೃತ್ಯ , ಹಾಗೂ ನಂತರದ ಸಂಗೀತದ ಶಿಕ್ಷಣ ಕೆಲಸಕ್ಕೆ ಬಂದಿತೆಂದು ಸ್ಮರಿಸುತ್ತಾರೆ.
ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲೂ ಕೃಷಿ ಮಾಡಿರುವ ಇವರ ಬರವಣಿಗೆಗಳು ಸಪ್ತಗಿರಿ, ಮಲ್ಲಿಗೆ, ಮಯೂರ, ವನಿತಾ, ಪ್ರಜಾವಾಣಿ, ಸುಧಾ, ಉದಯವಾಣಿ, ಕಸ್ತೂರಿ, ಕರ್ಮವೀರ, ಅವಧಿ , ವಿಶ್ವಧ್ವನಿ, ಅನಿವಾಸಿ, ತುಷಾರ, ಶ್ರಾವಣ ಬ್ಲಾಗ್. ’ಕನ್ನಡಪ್ರಭ’, ’ಕೆಂಡ ಸಂಪಿಗೆ’ ಮೊದಲಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಜನಪರ ಸಾಹಿತ್ಯದ ಆಶ್ರಯದಲ್ಲಿ ನಗೆಬರಹಗಳು ಹಾಗೂ ನಗೆ ನಾಟಕಗಳನ್ನೊಳಗೊಂಡ ೩ ಪುಸ್ತಕಗಳ ಪ್ರಕಟಣೆಯಾಗಿದೆ. ಸಿಟಿಬಸ್ಸು , ತೆಳ್ಳಗಿರಬಾರದಯ್ಯ ಲೋಕದೊಳಗೆ (ನಗೆಬರಹಗಳು), ಗಿನ್ನೀಸ್ ರೆಕಾರ್ಡ್ ಹಾಗೂ ಇತರ ನಗೆ ನಾಟಕಗಳು. ‘ಸಿಟಿಬಸ್ಸು’ ವಾರ್ಷಿಕ ಚೊಚ್ಚಿಲ ಕೃತಿ ಪ್ರಶಸ್ತಿಯನ್ನು ವರ್ಷಕ್ಕಿಂತ ಕೆಲದಿನಗಳು ಹೆಚ್ಚಾದುವೆಂಬ ಕಾರಣದಿಂದ ಕಳೆದುಕೊಂಡಿತು ಎಂಬ ಖೇದವಿದೆ.
ಮಧುಗಿರಿ, ಕೋಲಾರ, ಬೆಂಗಳೂರು ಮೊದಲಾದ ಕಡೆಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಪ್ರಸ್ತುತ ಪಡಿಸಿದ್ದಾರೆ. ಬೆಂಗಳೂರು, ಮೈಸೂರುಗಳಲ್ಲಿ, ಕನ್ನಡ ಸಾಹಿತ್ಯ ಪರಿಷತ್, ನ್ಯಾಷನಲ್ ಕಾಲೇಜುಗಳಲ್ಲಿ ಡಾ. ಕಮಲ ಹಂಪನಾ ಮೊದಲಾದವರ ಅಧ್ಯಕ್ಷತೆಯಲ್ಲಿ ಹಲವಾರು ಕವಿ ಗೋಷ್ಟಿಗಳಲ್ಲಿ ಭಾಗವಹಿಸಿದ್ದಾರೆ. ’ಮಾಡುವವನದಲ್ಲ ಹಾಡು ಹಾಡುವವನದು’ ಎಂಬ ಮಾತನ್ನು ಪುಷ್ಠೀಕರಿಸುವ ಇವರು ತಮ್ಮದೇ ಕವನವನ್ನು ಸುಂದರವಾಗಿ ಪ್ರಸ್ತುತ ಪಡಿಸಿ ಗುಣದಲ್ಲಿ ತಮ್ಮದಕ್ಕಿಂತ ಹೆಚ್ಚು ಅಂಶಗಳನ್ನು ಹೊಂದಿದ್ದ ಕವನಗಳನ್ನು ಹಿಂದೆ ಹಾಕಿದ ಸಂದರ್ಭಗಳೂ ಇವೆ ಎನ್ನುತ್ತಾರೆ.

ಆಕಾಶವಾಣಿ ಪರಿಮಳ ವಿಭಾಗದಿಂದ ಹಲವಾರು ವರ್ಷಗಳು ಬೋಧನೀಯ ಕಾರ್ಯಕ್ರಮಗಳು, ಸ್ವಂತ ಕವನ ಹಾಗೂ ಸಣ್ಣ ಕತೆಗಳ ವಾಚನ, ರೇಡಿಯೋ ನಾಟಕಗಳಲ್ಲಿ ಅಭಿನಯ ಇವೆಲ್ಲ ಇವರ ಸಾಹಿತ್ಯಕ ಚಟುವಟಿಕೆಗಳಿಗೆ ಪೂರಕವಾಗಿವೆ. ಬೆಂಗಳೂರು ಆಕಾಶವಾಣಿಯವರು ಏರ್ಪಡಿಸಿದ್ದ ’ಪ್ರಕ್ರತಿಯ ಸಮತೋಲನ” ಗಾಯನ ಸ್ಪರ್ಧೆಯಲ್ಲಿ ಇವರು ಬರೆದು ಸಂಗೀತ ಸಂಯೋಜಿಸಿ ಹಾಡಿಸಿದ ಕವನಗಳಿಗೆ ವಿಜಯವಾಗಿದೆ. ಅಲ್ಲದೆ ಒಂದು ಕವನ ಕಾರ್ಯಕ್ರಮಕ್ಕೆ ಬಹಳ ಸೂಕ್ತವಾಗಿದ್ದದ್ದರಿಂದ ಆ ಕವನ ಇಡೀ ವರ್ಷ ಕಾರ್ಯಕ್ರಮದ ಮೊದಲಿಗೆ ಪ್ರಸಾರಮಾಡಿದ ಮನ್ನಣೆ. ಇತ್ತೀಚೆಗೆ ದೇಸೀಸ್ವರದಲ್ಲಿ ಪ್ರಕಟವಾಗಿದೆ. ( ಪ್ರಕೃತಿ ಮಾತೆಯು ತನ್ನ ಸಮತೋಲನ ವೈಭವ ಮತ್ತು ’ಬುದ್ಧಿಮಾತು ಹೇಳಿದರೆ ಕೇಳಬೇಕು’).
“ಮ್ಯಾಥಮ್ಯಾಟಿಕ್ಸ್ ಮಹಾಮೇಳ” ನಗೆಬರಹ ಕಾಲೇಜು ವಿದ್ಯಾರ್ಥಿಗಳಿಂದ ನಾಟಕವಾಗಿ ಆಕಾಶವಾಣಿಯಲ್ಲಿ ಅಭಿನಯಿಸಲ್ಪಟ್ಟಿದೆ. ಬೆಂಗಳೂರು ದೂರದರ್ಶನದಲ್ಲಿ ಹಲವಾರು ಬೋಧನೀಯ ಕಾರ್ಯಕ್ರಮಗಳ ತಯಾರಿಕೆ ಹಾಗೂ ಪ್ರಸ್ತುತಿಯ ಜೊತೆಗೆ ಹಲವಾರು ಖ್ಯಾತ ವ್ಯಕ್ತಿಗಳ ಸಂದರ್ಶನ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದಾರೆ. ಇವರು ತಯಾರಿಸಿ ಪ್ರಸ್ತುತಿ ಪಡಿಸಿದ ಟೆಲಿಫೋನಿನ ಆವಿಷ್ಕಾರ, ಅದರ ಬಳಕೆ, ಟೆಲಿಫೋನ್ ಎಕ್ಸ್ ಛೇಂಜ್ ಕಾರ್ಯ ಮಾಡುವ ರೀತಿಯನ್ನು ಒಳಗೊಂಡ ಕಾರ್ಯಕ್ರಮ ಭಾರತದ ಎಲ್ಲಾ ರಾಜ್ಯಗಳಿಂದಲೂ ಆಯಾ ಭಾಷೆಗಳಲ್ಲಿ ಪ್ರಸಾರವಾಗಿದೆ. ಮೈಸೂರಿನಲ್ಲಿ ನಡೆದ ದಸರಾ ಮೆರವಣಿಗೆಯ ದೂರದರ್ಶನದ ವರದಿಯನ್ನು ಪ್ರಸ್ತುತ ಪಡಿಸಿದ್ದಾರೆ.
ಅಂತರ ರಾಷ್ಟಿಯ ಉಳಿತಾಯ ದಿನಾಚರಣೆಯಲ್ಲಿ ಇವರೇ ಬರೆದು ಸಂಗೀತ ಸಂಯೋಜಿಸಿದ ‘ಉಳಿತಾಯ’ವನ್ನು ಕುರಿತ ಸಮೂಹಗಾನ ಆಗಿನ ಅಧಿಕಾರಿಗಳ, ಶಾಲಾ ಮುಖಂಡರ ಮೆಚ್ಚುಗೆ ಪಡೆದಿದೆ. ಶಿಕ್ಷಣ ಇಲಾಖೆಗಾಗಿ ತಯಾರಾದ ’ಶಬ್ದ ಮಾಲಿನ್ಯ’ ಸಾಕ್ಷ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ ಸಿನೆಮಾ ರಂಗದಲ್ಲಿ ಹೆಸರು ಮಾಡಿದ ನಿರ್ದೇಶಕ ಸಾಯಿಪ್ರಕಾಶ್ ಅವರ ನಿರ್ದೇಶನದಲ್ಲಿ ಶಿವರಾಜಕುಮಾರ್ ನಟಿಸಿದ ಚಲನಚಿತ್ರವೊಂದರ ಗೀತೆಗೆ ಸಾಹಿತ್ಯ ಬರೆಯುವ ಅವಕಾಶ. “ಬಹಳ ಹಳೆಯದಾಯಿತು.
ನೆನಪಿನಲ್ಲಿಲ್ಲ. ಆ ಚಿತ್ರಕ್ಕೆ ಮಹೂರ್ತದ ಪೂಜೆ ಮಾಡಿ ತೆಂಗಿನಕಾಯಿ ಒಡೆದು ಬಂದದ್ದೂ , ಹೆಸರಾಂತ ಗಾಯಕಿಯರ ಸಾಲಿನಲ್ಲಿರುವ ’ಅರ್ಚನ ಉಡುಪ’ ಅದರ ಟ್ರ್ಯಾಕಿಂಗ್ ಹಾಡಿದ್ದೂ ನೆನಪಿದೆ. ನಾನು ಬರೆದ ಸಾಹಿತ್ಯದ ಒಪ್ಪಿಗೆಯಾದರೂ ಅದರ ಸಂಗೀತ ಸಂಯೋಜನೆ ಇಷ್ಟವಾಗದೆ ಬದಲಾಯಿಸಿದುದೂ ನೆನಪಿದೆ. ಕ್ಷಮಿಸಿ…… ಆಗಿನ ನನ್ನ ಹಲವಾರು ಬರಹಗಳು ಇಂಗ್ಲೆಂಡಿಗೆ ಬರುವ ಮುನ್ನ ಇಟ್ಟ ಕಡೆಯಲ್ಲೇ ಕಳೆದುಹೋಗಿ ಬರೇ ನೆನಪಾಗಿ ಉಳಿದಿವೆ” ಎಂದು ವಿಷಾದದಿಂದ ನುಡಿಯುತ್ತಾರೆ.
“ಬುದ್ಧಿ ಭೂಮಿ ಆಳು ಎಂದರೆ ಅದೃಷ್ಟ ಕತ್ತೆ ಕಾಯಿ ಎನ್ನುತ್ತದಂತೆ’ ಹಾಗೆಯೇ ಇವರ ಜೀವನದಲ್ಲೂ ಬುದ್ಧಿ ಪ್ರತಿಭೆಗಳು ಇವರಿಗೆ ಒಲಿದು ಬಂದಿದ್ದರೂ ಅದೃಷ್ಟ ಒಲಿಯಲಿಲ್ಲ. ಜೀವನದಲ್ಲಿ ಯಾವ ಗಾಡ್ ಫ಼ಾದರ್ ಸಹ ಇಲ್ಲದೆ ತಮ್ಮ ಪ್ರತಿಭೆಯ , ಮನೋಬಲದ ಮೇಲೆ ಎಲ್ಲವನ್ನೂ ಸಾಧಿಸಿಕೊಂಡು ಬಂದಿದ್ದಾರೆ . ಯಾವುದೇ ಒಂದು ಹೊಸವಿಷಯ, ತಮಗೆ ಸರಿಯಾಗಿ ತಿಳಿದಿಲ್ಲ ಎಂದರೆ ಅದನ್ನು ತಕ್ಷಣವೇ ಕಲಿಯುವ ಹಂಬಲ, ಅದಕ್ಕಾಗಿ ಸಾಧನೆ. ಬಹಳಷ್ಟು ಮಹಿಳೆಯರು ಇವರ ಹಾದಿಯಲ್ಲಿ ನಡೆಯಬೇಕು, ಇವರಂತೆ ಸಾಧಿಸಬೇಕು ಎಂದು ಹಂಬಲಿಸಿದ್ದಾರೆ. ತಮ್ಮ ಪ್ರಯತ್ನಗಳಲ್ಲಿ ಜಯ ಗಳಿಸಿದ್ದಾರೆ.

ಇವಲ್ಲದೆ ಇವರು ರಂಗೋಲಿ ಬಿಡಿಸುವುದರಲ್ಲಿ, ಹತ್ತಿಯಿಂದ, ಕಾಗದದಿಂದ ಹೂಗಳನ್ನು ತಯಾರಿಸುವುದರಲ್ಲಿ, ಕೊಬ್ಬರಿಯ ಮೇಲೆ ಚಿತ್ತಾರ ಬಿಡಿಸುವುದರಲ್ಲಿ, ಕ್ರೋಶ, ಕ್ರಾಸ್ ಸ್ಟಿಚ್ ಮೊದಾಲಾದ ಕಸೂತಿ ಕೆಲಸಗಳಲ್ಲಿ , ಆಗೆಲ್ಲ ಬಹಳ ಚಾಲನೆಯಲ್ಲಿದ್ದ ’ವೈರ್ ಬುಟ್ಟಿಗಳನ್ನೂ, ಅದರಲ್ಲಿ ಚಿತ್ರ ವಿಚಿತ್ರ ವ್ಯಾನಿಟಿ ಬ್ಯಾಗ್, ವೇಸ್ ಮೊದಲಾದುವುಗಳನ್ನು ತಯಾರುಮಾಡುವುದರಲ್ಲಿ, ಬಟ್ಟೆಹೊಲಿದು ಮೆಷೀನ್ ಎಂಬ್ರಾಯ್ಡರಿ ಮಾಡುವುದರಲ್ಲಿ, ಹಣ್ಣು ತರಕಾರಿಗಳಿಂದ ಹೂಗಳನ್ನು ಬಿಡಿಸುವುದರಲ್ಲಿ ತಮ್ಮ ಕಲಿಯುವ ಹಂಬಲವನ್ನು ಪೂರೈಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಹವ್ಯಾಸಗಳು ಹಲವಷ್ಟು ಬಾರಿ ಅವು ಇವರಿಗೆ ಆರ್ಥಿಕನೆರವು ನೀಡಲೂ ಸಹಕಾರಿಯಾಗಿವೆ ಎಂದರೆ ತಪ್ಪಾಗಲಾರದು.
“ಭಾರತದಲ್ಲಿ ಉಳಿಯಬೇಕೆನ್ನುವುದಕ್ಕೆ ಹಲವಾರು ಕಾರಣಗಳನ್ನು ಕೊಟ್ಟರೂ ಮೂಲತಃ ಸಾವಿರಾರು ಮಕ್ಕಳಿಗೆ ಬೋಧಿಸುವ ಹಂಬಲ, ಕನ್ನಡ ಸಾಹಿತ್ಯಕ್ಷೇತ್ರ, ಬೆಂಗಳೂರು ದೂರದರ್ಶನ, ಬೆಂಗಳೂರು ಆಕಾಶವಾಣಿ ಅಲ್ಲದೆ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳು ಇವೆಲ್ಲ ಸೇರಿ ನನ್ನನ್ನು ಹಿಡಿದಿಟ್ಟಿದ್ದವು. ಬಲವಾದ ಕಾರಣ ಇದರೊಂದಿಗೆ ಸೇರುವುದು ಎಂದರೆ ನನ್ನ ವಯಸ್ಸಾದ ಮಾವನವರು ಹೊರದೇಶಕ್ಕೆ ಬರಲು ನಿರಾಕರಿಸಿದ್ದು, ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನನ್ನ ಮೇಲಿತ್ತು. ನನ್ನ ಪತಿ ತಮಗೆ ಸಿಗುವ ರಜೆಯನ್ನೆಲ್ಲ ನಮ್ಮನ್ನು ನೋಡಲೆಂದೇ ಉಪಯೋಗಿಸುತ್ತಿದ್ದರು. ಈ ಕಾಲವನ್ನು ಸದುಪಯೋಗಮಾಡಿಕೊಂಡೆ ನಾನು. ಮನೆಯಲ್ಲಿ ಮಕ್ಕಳಿಗೆ ಪಾಠ ಹೇಳಲು ಪ್ರಾರಂಭಿಸಿದೆ, ಅದು ಬಲುಬೇಗ ದೊಡ್ದ ರೀತಿಯಲ್ಲಿ ಬೆಳೆಯಿತು. ಇದಕ್ಕೆ ಕಾರಣ ನಾನು ಬರಿಯ ಹಣಕ್ಕಾಗಿ ಅಲ್ಲದೆ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದುದು. ಮಗನ ಓದು , ಮಾವನವರ ಉಸ್ತುವಾರಿ, ಶಾಲಾ ಕೆಲಸ, ಮನೆಯಲ್ಲಿ ಮಕ್ಕಳಿಗೆ ಪಾಠ ಇವೆಲ್ಲದರ ನಡುವೆ ನಾನು ನನ್ನ ಸಂಶೋಧನ ಗ್ರಂಥವನ್ನು ಸಿದ್ದಪಡಿಸಿದೆ. ಕಂಪ್ಯೂಟರ್ ಡಿಪ್ಲೊಮಾ ಮುಗಿಸಿದೆ. ಸಾಧಾರಣವಾಗಿ ಪ್ರಶ್ನೆ ಬಂದೇ ಬರುತ್ತದೆ ನೀವು ಊಟ ತಿಂಡಿಗಾಗಿ, ನಿದ್ದೆಗಾಗಿ ಸಮಯ ಇಟ್ಟುಕೊಂಡಿರಲಿಲ್ಲವೇ? ಎಂದು. ಪರವೂರಿನಲ್ಲಿ ಓದುತ್ತಿದ್ದ ನನ್ನ ಮಗನ ಜವಾಬ್ದಾರಿಯನ್ನು ನನ್ನ ತಂದೆ ತಾಯಿ ಹೊತ್ತುಕೊಂಡಿದ್ದರಿಂದ ನನಗೆ ಕೆಲಸವೊಂದನ್ನು ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ. ಪತ್ರಿಕೆಗಳಿಗೆ ಬರೆಯುವುದು, ದೂರದರ್ಶನ, ಆಕಾಶವಾಣಿಗಳಲ್ಲಿ ಕಾರ್ಯಕ್ರಮ ನಡೆಸಿಕೊಡುವುದು, ಮನೆಯಲ್ಲಿ ಮಕ್ಕಳಿಗೆ ಬೋಧಿಸುವುದು , ಸಾಹಿತ್ಯ ಸಮ್ಮೇಳನಗಳು, ಕವಿಗೋಷ್ಟಿಗಳಲ್ಲಿ ಭಾಗವಹಿಸುವುದು ಇವೇ ನನಗೆ ಸರ್ವಸ್ವವಾಗಿದ್ದವು. ನನ್ನ ದಿನಚರಿ ಬೆಳಗ್ಗೆ 4 ಗಂಟೆಗೆ ಆರಂಭವಾದರೆ ರಾತ್ರೆ 11 ಗಂಟೆಗೆ ಮುಗಿಯುತ್ತಿತ್ತು. ನಂತರ ಒಂದೆರಡು ಗಂಟೆಗಳ ಅಭ್ಯಾಸ. ನಿದ್ದೆ ಊಟಗಳ ಪರಿವೆ ಅಷ್ಟಾಗಿ ನನ್ನನು ಕಾಡುತ್ತಿರಲಿಲ್ಲ. ಮಗನ ವಿದ್ಯಾಭ್ಯಾಸ ಮುಗಿದು ಉನ್ನತವ್ಯಾಸಂಗಕ್ಕಾಗಿ ಪರದೇಶಕ್ಕೆ ಹೊರಡುವುದು ನಿಶ್ಚಯವಾದಾಗ, ಮಾವನವರು ಇಹಲೋಕದ ವ್ಯಾಪಾರವನ್ನು ಮುಗಿಸಿದಾಗ ಭಾರತದಲ್ಲಿ ಉಳಿದಿರಲು ಕಾರಣಗಳು ಮುಗಿದುಹೋದವು. ಹಾಗಾಗಿ ಒಲ್ಲದ ಮನಸ್ಸಿನಿಂದಲೇ ಇಂಗ್ಲೆಂಡಿಗೆ ತೆರಳಿದೆ. ಅದು ೧೯೯೬ ರಲ್ಲಿ . ಆಗಿನ ’ಡೆಪ್ಯೂಟಿ ಕಮೀಶನರ್ ’ ಶ್ರೀಮತಿ —- ಯವರು ನನ್ನ ಪಾಠ ಬೋಧನೆಯನ್ನು ಬಹಳ ಮೆಚ್ಚಿಕೊಂಡದ್ದರಿಂದ ಆತ್ಮೀಯವಾಗಿ ಪತ್ರವನ್ನು ಬರೆದುಕೊಟ್ಟರು”. ಎಂದು ಹೇಳುವಾಗ ಅವರ ಕಣ್ಣುಗಳು ಹೊಳೆಯುತ್ತಿದ್ದು , ತಮ್ಮ ಶ್ರಮ ಸಾರ್ಥಕವಾದ ಹೆಮ್ಮೆಯನ್ನು ತೋರಿಸುತ್ತಿತ್ತು. ಭಾರತ ಬಿಟ್ಟು ಇಂಗ್ಲೆಂಡಿಗೆ ನೆಲಸಲು ಬಂದಾಗ ನೀರಿನಿಂದ ಮೀನನ್ನು ಹೊರತೆಗೆದು ನೆಲದಮೇಲೆ ಬಿಟ್ಟ ಪರಿಸ್ಥಿತಿಯುಂಟಾಯಿತು ಎಂದು ಇವರು ಹೇಳಿಕೊಂಡಿದ್ದಾರೆ. . ಆದರೆ ಜೀವನದಲ್ಲಿ ಯಾವುದಕ್ಕೂ ಸೋಲೊಪ್ಪದ ಇವರ ಮನೋಬಲ ಇಲ್ಲಿಯೂ ಇವರನ್ನು ಕಾಪಾಡಿತು. ‘ಒಂದು ವ್ಯಕ್ತಿ ಪಡೆಯಬಹುದಾದ ತುತ್ತತುದಿಯ ಡಿಗ್ರಿಯನ್ನು ಕನ್ನಡದಲ್ಲಿ ಪಡೆದಿದ್ದರೂ, ಬಿ.ಎಸ್.ಸಿ., ಬಿ.ಎಡ್. ಗಳ ತುದಿಬಾಲವಿದ್ದರೂ, ಕಂಪ್ಯೂಟರ್ ಡೇಟಬೇಸ್ ಡಿಪ್ಲೊಮ ಇದ್ದರೂ ನನಗೆ ಕೆಲಸ ಸಿಗುವುದು ಸುಲಭವಾಗಲಿಲ್ಲ’ ವೆಂದು ಇವರು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೇಳುವಾಗ ಆಗ ಅವರು ಅನುಭವಿಸಿದ ನೋವಿನ ಛಾಯೆ ಕಾಣುತ್ತದೆ. . ಅದಕ್ಕಾಗಿ ಸುಮ್ಮನೆ ಕುಳಿತಿರದೆ ‘ಎ.ಎ.ಟಿ’ ಹಾಗೂ ‘ಸೀಮ’ಗಳನ್ನು (ಅಕೌಟಿಂಗ್ ಪರೀಕ್ಷೆಗಳು) ಅಭ್ಯಾಸ ಮಾಡಿ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಅಕೌಂಟೆಂಟ್ ಕೆಲಸ ದೊರಕಿಸಿಕೊಳ್ಳುತ್ತಾರೆ.

‘ಇಡೀ ಕಂಪೆನಿಗೆ ಒಬ್ಬಳೇ ಅನ್ಯದೇಶೀಯಳಾಗಿ ಕೆಲಸ ಗಿಟ್ಟಿಸಿಕೊಂಡುದೂ ಅಲ್ಲಿಯ ‘ಡೈರೆಕ್ಟರ್ ಟಿಂ ಬೇಕರ್’ ಇವರ ಸಾಧನೆಗಳನ್ನು ಮೆಚ್ಚಿಕೊಂಡದ್ದರಿಂದ’ ಎಂದು ಇವರೇ ಹೇಳಿಕೊಂಡಿದ್ದಾರೆ. ಅಲ್ಲಿಯೂ ನಮ್ಮದೇಶದ ಉಡುಪನ್ನೆ ಧರಿಸಿ ಅವರೆಲ್ಲರ ಪ್ರಶಂಸೆಗೆ ಪಾತ್ರರಾದ ಸಂತೋಷ ಇವರದು. ಆರು ವರ್ಷಗಳ ಸೇವೆಯ ನಂತರ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಅವರ ಮನೆಗೆ ಹತ್ತಿರದಲ್ಲೇ ಇದ್ದ ‘ಲಿಮೋ’ ಸಂಸ್ಥೆಯಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಕೆಲಸ ಮಾಡಿ ಕಂಪೆನಿಯ ’ಸೆಕ್ರೆಟರಿಯಾಗಿ’ ಇತ್ತೀಚೆಗೆ ನಿವೃತ್ತರಾಗಿದ್ದಾರೆ.
ಇವರು ತಂದೆಗೆ ಮಗಳು, ಹಾಗೆ ತಂದೆ ಇವರ ಗುರುಕೂಡ.”ವೇದರತ್ನ” ಬಿರುದು ಪಡೆದ ವೇದವಿದ್ವಾನ್ ಚನ್ನಕೇಶವ ಅವಧಾನಿಗಳಿಂದ ಕಲಿತ ವೇದದ ಜ್ಞಾನವನ್ನು ಯುವಪೀಳಿಗೆಗೆ ಪರಿಚಯ ಮಾಡಿಕೊಡಲು ಪ್ರಯತ್ನ ಮಾಡುತ್ತಿದ್ದಾರೆ. ವೇದ ಮತ್ತು ಅಧ್ಯಾತ್ಮಿಕ ವಿಷಯಗಳಲ್ಲಿ ಇವರಷ್ಟೇ ಅಸಕ್ತಿ ಇರುವ , ವೃತ್ತಿಯಲ್ಲಿ ಇಂಜನೀಯರ್ ಅದ ಪತಿ ಜೊತೆ ಸೇರಿ ಪುರೋಹಿತರಾಗಿ ಇಂಗ್ಲೆಂಡ್ ಮಾತ್ರವಲ್ಲದೆ, ಸ್ಪೇನ್, ಪೋರ್ಚುಗಲ್, ಅಮೆರಿಕಾಗಳಲ್ಲಿ ಮದುವೆ, ಉಪನಯನ, ಗೃಹಪ್ರವೇಶ ಇತ್ಯಾದಿಗಳನ್ನು ಮಾಡಿಸಿದ್ದಾರೆ. ಬರಿಯ ಮಂತ್ರಗಳನ್ನು ಮಾತ್ರ ಹೇಳದೆ ಓಂಕಾರದಿಂದ ಹಿಡಿದು ಎಲ್ಲದರ ಹಿನ್ನಲೆ, ಅರ್ಥವನ್ನು ಹೊಸ ಪೀಳಿಗೆಯ ಮಕ್ಕಳಿಗೆ ತಿಳಿಸಲು ಪ್ರಯತ್ನಿಸುತ್ತಿದ್ದಾರೆ. ವಿಷ್ಣುಹಾಗೂ ಲಲಿತ ಸಹಸ್ರನಾಮವೇ ಮೊದಲಾದುವುಗಳನ್ನು ‘ನೋಡಿಯೋ ‘ತರಗತಿಗಳಲ್ಲಿ ಹೇಳಿಕೊಡುತ್ತಾರೆ.
ಭಾಮಿನಿ ಷಟ್ಪದಿಯಲ್ಲಿ ಬರೆದಿರುವ ದತ್ತಾತ್ರೇಯ ಚರಿತ್ರೆ, ಭಜನೆ, ಹಾಡು, ಸುಪ್ರಭಾತ, ಅಷ್ಟೋತ್ತರಗಳು ತಿರುಪತಿಯಿಂದ ಪ್ರಕಟವಾಗುತ್ತಿರುವ ‘ಸಪ್ತಗಿರಿ’ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಜೊತೆಗೆ ಗಣಪತಿ ವ್ರತದ ಕಥೆಯುಳ್ಳ ಭಜನೆ ಮತ್ತು ಸತ್ಯನಾರಾಯಣ ಪೂಜೆಯ ಭಜನೆಗಳನ್ನು ಬರೆದಿದ್ದಾರೆ. ಇವರು ಬರೆದಿರುವ ದತ್ತಾತ್ರೇಯ ಅಷ್ಟೋತ್ತರ
“ಸ್ತೋತ್ರನಿಧಿ.ಕಾಮ್” ನಲ್ಲಿ ನಮೂದಿತವಾಗಿದೆ. ಹಾಗಾದರೆ ಇವರು ಆಧ್ಯಾತ್ಮಿಕದ ಬಗ್ಗೆ ಒಲವು ಇರುವವರೆ? ಎಂದುಕೊಂಡಾಗ ‘ನಾನೇಕೆ ಬುದ್ಧನಾಗಲಿಲ್ಲ’ ಎಂಬ ಆಧ್ಯಾತ್ಮಿಕ ಸೋಂಕಿರುವ ಕವನದಲ್ಲಿ ನಾವೆಲ್ಲರೂ ಸಂಸಾರದ ಜಂಜಾಟದಲ್ಲಿ ಬಂದಿಯಾಗಿರುವುದನ್ನು ಸರಳವಾಗಿ ತೆರೆದಿಟ್ಟಿದ್ದಾರೆ.

ಇಂಗ್ಲೆಂಡಿನಂತಹ ಅಪರಿಚಿತ ದೇಶದಲ್ಲೂ ಅನಿರೀಕ್ಷಿತವಾಗಿ “HER MAJESTY” ಸರ್ಕಾರದಿಂದ
” ಹಿಂದೂ ಪ್ರಿಸನ್ ಮಿನಿಸ್ಟರ್” ಆಗಿ ನೇಮಕಗೊಂಡರು. ಏನಿದರ ಅರ್ಥ ಎಂದು ಕೇಳಿದಾಗ ‘ತಪ್ಪು ಮಾಡಿ ಬಂದೀಖಾನೆ ಸೇರಿರುವ (ಹೆಂಗಸರು ಮಕ್ಕಳು )ಖೈದಿಗಳನ್ನ ಭೇಟಿ ಮಾಡಿ, ಅವರ ಜೀವನದ ದಾರಿ ತಪ್ಪಿರುವುದನ್ನು ಮನವರಿಕೆ ಮಾಡಿಕೊಟ್ಟು, ಅವರನ್ನು ಮತ್ತೆ ಸರಿ ದಾರಿಗೆ ತರುವ ಪ್ರಯತ್ನ ಮಾಡುವ ಕೆಲಸ’ ವೆಂದು ತಿಳಿಸಿದರು. ಇವರು ಬರೆದ ಯುಗಾದಿ ಗೀತೆಯೂ ಸೇರಿದಂತೆ ಹಲವಾರು ಗೀತೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಅನೇಕ ಸಂಘ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡದ ವಿಷಯಗಳ ಬಗ್ಗೆ ಪ್ರಬಂಧ ಮಂಡನೆ, ಅಧ್ಯಾತ್ಮಿಕ ವಿಷಯಗಳ ಬಗ್ಗೆ ಉಪನ್ಯಾಸ, ‘ಸಿದ್ಧರಾಮ ಚಾರಿತ್ರ್ಯ’ ‘ಕುಮಾರವ್ಯಾಸ ಭಾರತ ’ ಮೊದಲಾದ ಕೃತಿಗಳನ್ನು ಕುರಿತು ಉಪನ್ಯಾಸ, ಕಾರ್ಯಕ್ರಮಗಳ ನಿರೂಪಣೆ, ‘ಮ್ಯಾಂಚೆಸ್ಟರ್ ಯುನೈಟೆಡ್ ” ನ ಪಂದ್ಯದ ಸಮಯದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ, ಮ್ಯಾಂಚೆಸ್ಟರ್ ನಲ್ಲಿರುವ “ರಾಯಲ್ ಸ್ಕೂಲ್ ಆಫ಼್ ಮ್ಯೂಸಿಕ್ ” ನಲ್ಲಿ ಇಂಡಿಯನ್ ಹೈಕಮೀಷನರ್ ಸನ್ಮಾನ್ಯ ‘ಸಿಂಘವಿ’ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶ ಹೀಗೆ ಅನೇಕ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇಂಗ್ಲೆಂಡಿನ ಬಿ.ಎಚ್.ಎಫ಼್ ರೇಡಿಯೋದಿಂದ ಕವನಗಳ ಹಾಗೂ ಉಪಯುಕ್ತ ಮಾಹಿತಿಗಳನ್ನು ಕುರಿತ ಕಾರ್ಯಕ್ರಮಗಳ ಪ್ರಸ್ತುತಿ ಮಾಡಿ ಜನಮನ್ನಣೆ ಗಳಿಸಿದ್ದಾರೆ. ಇವರ ಸಾಧನೆಗಳನ್ನು ಕುರಿತಂತೆ ‘ನಮ್ ರೇಡಿಯೋ’ ದವರು ಸಂದರ್ಶನ ಮಾಡಿರುತ್ತಾರೆ. ಇವರು ಸುಧಾ ಸಾಪ್ತಾಹಿಕದಲ್ಲಿ ಬರೆದ ಸೆಟ್ಟರ ಕುರಿತ ಲೇಖನದಿಂದ ತಮ್ಮ ಜೀವನದಲ್ಲಿ ಬಹಳ ದೊಡ್ದ ಪರಿವರ್ತನೆಯೇ ಉಂಟಾಯಿತು ಎನ್ನುತ್ತಾರೆ ಎಂ.ಬಿ.ಇ. ಆಗಿ ಸೇವೆ ಸಲ್ಲಿಸುತ್ತಿರುವ ಡಾ.ಸೂರ್ಯನಾರಾಯಣ ಸೆಟ್ಟರು. ಸಂಕೇತಿ ಸಂಪದ ಮಾಸ ಪತ್ರಿಕೆಗೆ ಅನೇಕ ವರ್ಷಗಳಿಂದ ಬರೆಯುತ್ತಿದ್ದಾರೆ. ’ಕನ್ನಡ ಪ್ರಭ ಎನ್.ಆರ್.ಐ’ ಪಾಕ್ಷಿಕ ಪತ್ರಿಕೆಗೆ ’ಬಿಳಿಯರ ಜೀವನ’ ಅಂಕಣವನ್ನು ಬರೆಯುತ್ತಿದ್ದಾರೆ ಹಾಗೂ ‘ಶ್ರಾವಣ ಬ್ಲಾಗ್’ ಗೆ ತೆರೆಯ ಮರೆಗೆ ಸರಿದ ಸ್ವಾತಂತ್ರ ವೀರರನ್ನು ಕುರಿತು ಅಂಕಣ ಬರೆಯಲು ಪ್ರಾರಂಭಿಸಿದ್ದಾರೆ.
‘ಕನ್ನಡ ನಿಮಗಾಗಿ’ ವೆಬ್ಸೈಟ್, ೫೦೦ಕ್ಕೂ ಮಿಕ್ಕಿ ಗಾದೆಗಳನ್ನು ಅರ್ಥ ವಿವರಣೆಗಳೊಂದಿಗೆ ಹೊಂದಿರುವುದೇ ಅಲ್ಲದೆ ಎಲ್ಲ ರೀತಿಯ ಸಾಹಿತ್ಯ ಪ್ರಕಾರಗಳನ್ನೂ ಪ್ರತಿನಿಧಿಸುತ್ತದೆ. “ಕೆ. ವೈ ಮಂತ್ರಗಳು” ಮತ್ತು “ಸಾಹಿತ್ಯ ಸಂಗಮ” ವಿಡಿಯೋ ಚಾನೆಲ್ಗಳ ಮೂಲಕ ಅಧ್ಯಾತ್ಮ ಚಿಂತನೆಯೊಂದಿಗೇ, ದತ್ತಾತ್ರೇಯರನ್ನು ಕುರಿತ ಭಕ್ತಿಗೀತೆಗಳನ್ನು, ನುರಿತ ಗಾಯಕ ಗಾಯಕಿಯರಿಂದ ಹಾಡಿಸಿ, ಭಾಮಿನಿ ಷಟ್ಪದಿಯಲ್ಲಿ ಬರೆದ ದತ್ತಾತ್ರೇಯರ ಚರಿತ್ರೆಯನ್ನು ಗಮಕ ರೂಪದಲ್ಲಿ ವಿದ್ವಾಂಸರ ನೆರವಿನಿಂದ ಯೂ ಟ್ಯೂಬ್ ನಲ್ಲಿ ಪ್ರಸ್ತುತಿ ಪಡಿಸುತ್ತಿದ್ದಾರೆ. ಹೀಗೆ ಇವರ ಸಾಹಿತ್ಯದ ಹರಹಿನ ಪಟ್ಟಿ ಸಾಗುತ್ತದೆ.

ಇತ್ತೀಚಿನ ಬೆಳವಣಿಗೆಯಾಗಿ ” ಡಾ. ದ. ರಾ ಬೇಂದ್ರೆ ಕಾವ್ಯವಿಹಾರ” ಕಾರ್ಯಕ್ರಮವನ್ನು ‘ಮುಂಬೈ ವಿಶ್ವವಿದ್ಯಾನಿಲಯ’ ಹಾಗೂ ‘ವಿವಿಡ್ಲಿಪಿ’ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡು, ಬೇಂದ್ರೆಯವರ ಆಪ್ತ ಶಿಷ್ಯರಾದ ಡಾ .ಜಿ. ವಿ. ಕುಲಕರ್ಣಿಯವರೊಡನೆ ಸಂದರ್ಶನ ಕಾರ್ಯಕ್ರಮಗಳನ್ನು ನಡೆಸಿ ಅದನ್ನು ವಿಡಿಯೋ ಸರಣಿಯಾಗಿ ಪ್ರಸಾರಮಾಡುತ್ತಿದ್ದಾರೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಡಾ. ಗಿರೀಶ್ ಅಜ್ಜಕ್ಕಳ ಅವರ ಅಧ್ಯಕ್ಷತೆಯಲ್ಲಿ ನಡೆದ ಜಾಲಗೋಷ್ಟಿ ಸರಣಿಯಲ್ಲಿ ರಾಷ್ಟ್ರಕವಿ ಕುವೆಂಪುರವರನ್ನು ಕುರಿತು ಇಂಗ್ಲಿಷಿನಲ್ಲಿ ಉಪನ್ಯಾಸ ಹಾಗೂ ಬೆಂಗಳೂರಿನ ‘ಲಲಿತ ಸಾಹಿತ್ಯ ವೇದಿಕೆ’ ಯ ವತಿಯಿಂದ ಕುವೆಂಪುರವರ ’ರಾಮಾಯಣ ದರ್ಶನ’ ಹಾಗೂ ’ಕಥನ ಕವನ’ಗಳನ್ನು ಕುರಿತು ಕನ್ನಡದಲ್ಲಿ ಉಪನ್ಯಾಸ ಕೊಟ್ಟಿರುತ್ತಾರೆ.
ಕರ್ನಾಟಕದ ಹಲವಾರು ಸ್ವಾತಂತ್ರ ಹೋರಾಟಗಾರರನ್ನು ಕುರಿತ ಪುಸ್ತಕಗಳನ್ನು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿರುವುದರ ಜೊತೆಗೆ ‘ಕು.ಭಾ.ಭಾ.ಪ್ರಾ’ ದ ಚಾತುರ್ಮಾಸಿಕ’ ಪತ್ರಿಕೆಯಲ್ಲಿ ಅನುವಾದಿತ ಕವನಗಳನ್ನು ಪ್ರಕಟಿಸಿದ್ದಾರೆ. ಇದುವರೆವಿಗೆ ೬೦ಕ್ಕೂ ಮಿಕ್ಕಿದಂತೆ ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವ ಕವನಗಳು, ೭೦ಕ್ಕೂ ಮೀರಿದ ಸಂಖ್ಯೆಯ ಸ್ವರಚಿತ ಕವನಗಳೂ ಪುಸ್ತಕ ರೂಪದಲ್ಲಿ ಪ್ರಕಟಣೆಗೆ ಸಿದ್ಧವಾಗಿವೆ.
ಅನೇಕ ಕ್ಲಬ್ ಹೌಸ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ೪೦ ವರ್ಷಗಳಿಂದಲೂ ಸತತವಾಗಿ ಕನ್ನಡ ಸಾಹಿತ್ಯದ ಸೇವೆಯನ್ನು ಮಾಡಿಕೊಂಡು ಬಂದಿರುವ ಇವರು ವಿದೇಶದಲ್ಲಿ ಕನ್ನಡವಲ್ಲದ ಪರಿಸರದಲ್ಲೂ ಕನ್ನಡವನ್ನು , ಹಿಂದೂ ಸಂಸ್ಕೃತಿಯನ್ನೂ ಉಳಿಸಿ ಬೆಳೆಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇವರ ಸಾಹಿತ್ಯ ಕೃಷಿ ಉಸಿರಿರುವವರೆಗೂ ನಿಲ್ಲುವುದಿಲ್ಲ ಎಂಬುದು ಇವರ ನಿಲುವು . ಗಮಕ ಕಾವ್ಯಗಳ ವಾಚನವನ್ನೂ ಒಪ್ಪಿಕೊಂಡಿರುವ ಇವರು “ ನನಗೆ ಸಾಹಿತ್ಯ ಸೇವೆಗೆ ಸಿಗುವ ಎಲ್ಲ ಅವಕಾಶಗಳನ್ನೂ ಬರಮಾಡಿಕೊಳ್ಳುತ್ತೇನೆ’ ಎನ್ನುತ್ತಾರೆ. ಇವರನ್ನು ಬಲ್ಲವರು ಇವರನ್ನು ‘ಸಕಲ ಕಲಾ ಸರಸ್ವತಿ’ ಎಂದು ಕರೆಯುವುದು ಯಾವುದೇ ರೀತಿಯ ಅತಿಯೋಶಕ್ತಿಯಲ್ಲ. “ಹೂ ಈಸ್ ಹೂ” ’ಏಶಿಯಾದ ಮೆನ್ ಅಂಡ್ ವಿಮೆನ್ ಆಫ್ ಅಛೀವ್ ಮೆಂಟ್ಸ್’ ಡೈರೆಕ್ಟರಿಯಲ್ಲಿ ಇವರ ಹೆಸರಿನ ಉಲ್ಲೇಖ ಕೂಡ ಅದನ್ನೇ ಹೇಳುತ್ತಿದೆ.
ತಾವು ನಡೆದು ಬಂದ ದಾರಿ ಹಿಂತಿರುಗಿ ನೋಡಿದಾಗ ಏನನಿಸುತ್ತದೆ? ಎಂಬ ಪ್ರಶ್ನೆಗೆ ‘ಮನದ ಗುರಿಯೆಡೆಗೆ’ ಕವನದ ಕೊನೆಯ ಎರಡು ಸಾಲುಗಳನ್ನು ಉದ್ದರಿಸಿದರು. ‘… ಈ ರಸ್ತೆಯಲಿ ಬಂದು ನಾನು ಅದೃಷ್ಟದ ಬಾಗಿಲನು ತಟ್ಟಿ ತೆರೆದೆ, ಇಲ್ಲಿರುವೆನಿಂದು, ನಾ ಸೆಣಸುವ ಜೀವನದಲಿ ನನ್ನ ಆಯ್ಕೆಯ ವೇಷದಲಿ ಬಂದ ಅದೃಷ್ಟದಲಿ’ ಎಲ್ಲಿಯೇ ಇರಲಿ, ಏನೇ ಮಾಡುತಿರಲಿ, ಅವರ ಅಃತರಂಗದ ಮಾತನ್ನು ಅವರ ‘ನಿನ್ನಹೆಸರೇನು’ ಕವನದ ಕೊನೆಯ ಎರಡು ಸಾಲುಗಳ ಮೂಲಕ ಹೀಗೆ ತೆರೆದಿಟ್ಟಿದ್ದಾರೆ.
ನನ್ನಂತರಂಗದಾಣೆ ಕನ್ನಡವೇ ನನ್ನುಸಿರು ‘ಕನ್ನಡವೇ ನನ್ಜೀವ’.
ಅವರ ಪರಿಚಯವನ್ನು ಮಾಡಿಕೊಳ್ಳುವಾಗ ‘ನಾನೊಂದು ಸಣ್ಣ ಇರುವೆ’ ಎಂದು ಹೇಳಿಕೊಂಡಿದ್ದರು. ಈಗ ನೀವೇ ನಿರ್ಧರಿಸಿ ಇವರು ‘ಇರುವೆಯೋ? ಆನೆಯೋ?’ ಎಂದು.
- ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್), ಕ.ವಿ.ನಿ.ನಿ, ಲೇಖಕರು, ಬೆಂಗಳೂರು
