ತೀರ್ಥಹಳ್ಳಿಯಲ್ಲಿ ಆಗ ಸಾವಿರ ರೂಪಾಯಿಗಳಿಗೆ ಬಹುಶಃ 60×90ರ ಸೈಟ್ ಬರುತ್ತಿತ್ತು, ಅಂದಿನ ಸಂದರ್ಭದಲ್ಲಿ ಅದೇ ಸಾವಿರಾರು ರೂಪಾಯಿಗಳನ್ನು ಕೊಟ್ಟು ಪುಸ್ತಕ ಸಂಗ್ರಹಾಲಯ ಮಾಡಿದ್ವಿ,ಅದಕ್ಕೆ ‘ಶ್ರೀ ಶೈಲ ಪುಸ್ತಕ ಭಂಡಾರ’ ಅಂತ ಹೆಸರು ಇಡಲಾಯಿತು ಎನ್ನುತ್ತಾರೆ ರಘುರಾಂ ಅವರು, ಅವರ ಒಂದು ಲೈಬ್ರರಿ ಕತೆ ಓದುಗರ ಮುಂದೆ ಹಂಚಿಕೊಂಡಿದ್ದಾರೆ,ತಪ್ಪದೆ ಓದಿ…
ನಮ್ಮ ಮನೆಯಲ್ಲಿ ವರಾಂಡದ ಬಲಗಡೆ ಇರುವ ಕೊಠಡಿಯ ಬಾಗಿಲಲ್ಲಿ ನಿಂತರೆ ಕಾಣುವುದೇ ಸಣ್ಣದೊಂದು ಶಿರಡಿ ಶ್ರೀ ಸಾಯಿಬಾಬ ಫೋಟೋ. ಅದನ್ನು ಗೋಡೆಯ ಬಲಗಡೆ ಮೂಲೆಯಲ್ಲಿ ಫಿಕ್ಸ್ ಮಾಡಿರುವ ಸಣ್ಣ ಮರದ ಸ್ಟಾಂಡ್ ಮೇಲೆ ಇಡಲಾಗಿದೆ. ಅಣ್ಣ ರಮೇಶ್ ತಂದು ಇಟ್ಟಿರ ಬೇಕು ಎಂದು ನನ್ನ ಅನಿಸಿಕೆ. ಅವನು ಅಲ್ಲಿ ಅದಕ್ಕೆ ನಮಸ್ಕಾರ ಮಾಡುತ್ತಿದ್ದ. ಒಂದು ಗೋಡೆ ಬೀರು. ಅದರ ತುಂಬ ಪುಸ್ತಕಗಳು. ಒಂದು ಬೆತ್ತದ ಕುರ್ಚಿ, ಟೇಬಲ್, ಈ ಕಡೆಗೆ ಒಂದು ಸ್ಟೀಲ್ ಕುರ್ಚಿ. ರಮೇಶ್ ಎಂ.ಎಡ್. ಪದವಿ ಮುಗಿಸಿ ಬಂದು ಆರಗದ ಹೈಸ್ಕೂಲ್ಗೆ ಕೆಲಸಕ್ಕೆ ಹೋಗಲು ಪ್ರಾರಂಭ ಮಾಡಿದ ಮೇಲೆ ಅದರ ಜೊತೆಗೆ ಇನ್ನೂ ಏನಾದರೂ ಮಾಡಬೇಕೆಂದು ಅನಿಸಿದಾಗ ಅರವತ್ತನೇ ದಶಕದ ಕೊನೆಯ ಭಾಗದಲ್ಲಿ ಶ್ರೀ ಶೈಲ ಪುಸ್ತಕ ಭಂಡಾರ ಪ್ರಾರಂಭವಾಯಿತು. ಬೆಂಗಳೂರಿನ ಮಲ್ಲೇಶ್ವರದಲ್ಲಿ ಇದ್ದ ಗುಪ್ತಾ ಲೈಬ್ರರಿ ಬಹಳ ಚೆನ್ನಾಗಿ ನಡೆಯುತ್ತಿದೆ, ನಾವು ಲೈಬ್ರರಿ ಮಾಡೋಣ ಎಂದು ರಮೇಶ್ ಅಪ್ಪನಿಗೆ ಹೇಳಿದ. ಪುಸ್ತಕನ ಬಾಡಿಗೆಗೆ ತೆಗೆದುಕೊಂಡು ಹೋಗುವ ಒಂದು ಐಡಿಯಾ ಈ ಸಣ್ಣ ಪಟ್ಟಣದಲ್ಲಿ ನಡೆಯುತ್ತದೆ ಎಂದು ಅಪ್ಪನಿಗೆ ನಂಬಿಕೆ ಬಂದಿರಲಿಲ್ಲ ಎಂದು ನನ್ನ ಅನಿಸಿಕೆ. ಆದರೆ ಯಾವುದಕ್ಕೂ ಅವರು ಅಡ್ಡ ಬಂದಿದ್ದಿಲ್ಲ. ಆಗ ಬಹುಶಃ 150ರೂಪಾಯಿ ಬಂಡವಾಳದಲ್ಲಿ ಶ್ರೀ ಶೈಲ ಪುಸ್ತಕ ಭಂಡಾರ ಪ್ರಾರಂಭ ಆಯಿತು.
ಓ, ಎನೇಲ್ಲಾ ಪುಸ್ತಕಗಳು ಬಂದವು ಮನೆಗೆ. ಗಿರಿಮಾಜಿ ವರ್ಕಷಾಪ್ ನಲ್ಲಿ Angle iron ನಿಂದ ಮಾಡಿರುವ ಸ್ಟಾಂಡ್ ಮನೆಗೆ ಬಂತು. ಎಲ್ಲ ಪುಸ್ತಕಗಳನ್ನು ಬೈಂಡ್ ಹಾಕಿ ಜೋಡಿಸಲಾಯಿತು. ಮೇಲುಗಡೆ ಕುವೆಂಪು, ಆಮೇಲೆ ಶಿವರಾಮ ಕಾರಂತ್, ಕಾಕೋಳು ಸರೋಜರಾವ್, ತ್ರಿವೇಣಿ, ಅನುಪಮ ನಿರಂಜನ, ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ಯು.ಆರ್.ಅನಂತಮೂರ್ತಿ, ಎಂ.ಕೆ.ಇಂದಿರಾ, ಎಂ.ಕೆ.ಜಯಲಕ್ಷ್ಮೀ, ಎನ್.ನರಸಿಂಹಯ್ಯ ನೀವು ಯಾವುದು ಬೇಕು ಹೇಳಿ, ಕಾನೂರು ಸುಬ್ಬಮ್ಮ ಹೆಗ್ಗಡತಿಯಿಂದ ಹಿಡಿದು ಪತ್ತೇದಾರಿ ಪುರುಷೋತ್ತಮನ ಸಹಾಸದವರೆಗೆ ಎಲ್ಲವೂ ಇತ್ತು. ಬಹುಶಃ ಒಂದು ಐನೂರು ಪುಸ್ತಕದ ಮೇಲೆ ಇತ್ತು. ಪಕ್ಕದ ಸ್ಟಾಂಡ್ ನಲ್ಲಿ Perry Masion, James Headly Chase, tin series, R.K.Narayan, Kushuvant Singh, Leon Uris, Mills and Boon ಅದರ ಮೇಲುಗಡೆ ಈ ಮೊದಲೇ ಇದ್ದ ನರಸಿಂಹ ಶಾಸ್ತ್ರಿಗಳ ಭಾಗವತದ 18 ಸಂಪುಟಗಳು, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಯ ಸಂಪುಟಗಳು, ದೇವುಡು, ಬಂಕಿಮ ಚಂದ್ರ ಚಟರ್ಜಿ, ಕ್ರಮೇಣ ಪುಸ್ತಕಗಳ ಸಂಖ್ಯೆ ಸುಮಾರು 1000 ದಾಟಿತು. ಇದರ ಜೊತೆಗೆ ಸುಧಾ, ಕಸ್ತೂರಿ, ಮಯೂರ, Illustrated Weekly of India, Readers Digest, ಎಲ್ಲವೂ ಬರಲು ಪ್ರಾರಂಭ ಆಯಿತು.
ಧಾರವಾಡದ ಮನೋಹರ ಗ್ರಂಥಮಾಲಗೆ ಚಂದದಾರರಾಗಿ, ಆ ಪ್ರಕಾಶನದಿಂದ ನೇರವಾಗಿ ಮನೆಗೆ ಅಂಚೆಯಲ್ಲಿ ಪ್ರತಿ ತಿಂಗಳು ಪುಸ್ತಕ ಬರುವ ಹಾಗೆ ಏರ್ಪಾಡಾಗಿತ್ತು. ಅದರ ಜೊತೆಗೆ ರಾಷ್ಟೋತ್ತಾನ ಸಾಹಿತ್ಯ ಪರಿಷತ್ತು, ಗೀತಾ ಬುಕ್ ಹೌಸ್ ಇವುಗಳಿಂದ ತಿಂಗಳಿಗೆ ಒಮ್ಮೆ ಆ ಪ್ರಕಾಶನದಲ್ಲಿ ಪ್ರಕಟವಾದ ಪುಸ್ತಕಗಳ ಪಟ್ಟಿ ಮನೆಗೆ ಬರುತ್ತಿತ್ತು. ಅದರಲ್ಲಿರುವ ಕಾದಂಬರಿಗಳು ಮುಂದಿನ ತಿಂಗಳು ಮನೆ ಸೇರುತ್ತಿತ್ತು. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಬಿಡುಗಡೆಯಾದ ಪಾಕೆಟ್ ನಲ್ಲಿ ಇಟ್ಟುಕೊಂಡು ಹೋಗುವಂತ ಪುಸ್ತಕಗಳು ಕೂಡ ಇದ್ದವು. ಅದರ ಜೊತೆಗೆ ನಾಲ್ಕು ಅಥವ ಐದು ಚಂದಮಾಮಗಳನ್ನು ಒಟ್ಟಿಗೆ ಸೇರಿಸಿ ಹೊಲಿದು ಇಡಲಾಯಿತು. ಈ ಮೊದಲೂ ನಮ್ಮ ಮನೆಯಲ್ಲಿ ಸುಮಾರು ಪುಸ್ತಕಗಳು ಇದ್ದವು. ಯಾರಾದ್ರು ಓದಲು ತೆಗೆದುಕೊಂಡು ಹೋದರೆ ಅವುಗಳು ಅವು ವಾಪಾಸು ಬಂದರೆ ಬಂತು, ಇಲ್ಲದಿದ್ದರೆ ಇಲ್ಲ! ಈಗ ಪುಸ್ತಕ ಹೊರಗೆ ಹೋಗುವುದು ನಿಂತಿತು!.
ಮೊದಲ ದಿನ ಒಬ್ಬರು ಮಾತ್ರ ಬಂದು ಸದಸ್ಯರಾದರು. ನಂತರ ಯಾರಾದ್ರು ಬರತ್ತಾರ ಎಂದು ಕಾಯುವುದು! ಕರಪತ್ರ ಮಾಡಿ ಊರಿನಲ್ಲಿ ದಿನ ಪತ್ರಿಕೆಯ ಜೊತೆ ಹಂಚಲಾಯಿತು. ಒಂದು ವಾರದ ಹೊತ್ತಿಗೆ ಈ ತರಹ ಲೈಬ್ರರಿ ಇದೆ ಎಂದು ಎಲ್ಲರಿಗೂ ತಿಳಿಯಿತು. ಒಬ್ಬೊಬ್ಬರೇ ಬರಲು ಪ್ರಾರಂಭ ಮಾಡಿದರು. ದಿನಾ ಸಾಯಂಕಾಲ 6 ರಿಂದ 8 ಗಂಟೆಯವರೆಗೆ ಮಾತ್ರ. ಆದರೆ ನಿಜವಾದ ಸಮಸ್ಯೆ ಇದ್ದಿದ್ದು ಪುಸ್ತಕ ತೆಗೆದುಕೊಂಡು ಹೋಗಿ ಓದಲು ಇಟ್ಟ ಶುಲ್ಕದ ರೀತಿ. ಮೊದಲ ಮೂರು ದಿನಕ್ಕೆ 20 ಪೈಸೆ, ನಂತರ ಎರಡು ದಿನಕ್ಕೆ 15 ಪೈಸೆ, ನಂತರ ಎರಡು ದಿನಕ್ಕೆ 10ಪೈಸೆ! ಆದರೆ ದಿನ ಎಂದರೆ ಕ್ಯಾಲೆಂಡರ್ ದಿನ! ಗೊತ್ತಾಗಲಿಲ್ಲ ಅಲ್ಲವೇ? ಮೂರು ದಿನ ಅಂದರೆ ಇವತ್ತು, ನಾಳೆ, ನಾಡಿದ್ದು. ಇವತ್ತು ಸಂಜೆ ತೆಗೆದುಕೊಂಡರೆ ನಾಡಿದ್ದು ಸಂಜೆಗೆ ಎರಡು ದಿನ ಎಂದು ಅವರುಗಳು, ಇಲ್ಲಾ ಮೂರು ಕ್ಯಾಲೆಂಡರ್ ದಿನ ಆಯಿತು ಎಂದು ನಾವು! ಅಂತೂ ಈ ತರಹದ ಲೆಕ್ಕಾಚಾರ ನಿಧಾನಕ್ಕೆ ಎಲ್ಲರೂ ಒಪ್ಪಿಕೊಂಡರು. ಮನೆಯಲ್ಲಿ ಯಾರು ಫ್ರೀ ಇದ್ದಾರೋ ಅವರು ಪುಸ್ತಕ ಕೊಡುತ್ತಿದ್ದರು. ಅಣ್ಣ ರಮೇಶ್ ಬಿಟ್ಟರೆ ನನ್ನ ಅಕ್ಕ ಮಂಜುಳ ನೇ ಲೈಬ್ರರಿಯನ್ ಆಗಿ ಕೆಲಸ ಮಾಡಿದ್ದು ಹೆಚ್ಚು!
ನನಗಂತೂ ಲೈಬ್ರರಿ ಬಂದಿದ್ದು ಒಳ್ಳೆಯದಾಯಿತು. ನನಗೆ ಆಗ ಸುಮಾರು ಹನ್ನೆರಡು ವರ್ಷ. ಅರ್ಥ ಆಗಲಿ ಬಿಡಲಿ ಅಲ್ಲಿರುವ ಎಲ್ಲಾ ಪುಸ್ತಕಗಳನ್ನು ನಾನು ಒದಲು ಪ್ರಾರಂಭ ಮಾಡಿದೆ. ಆದರೆ ಆ ಭಾಗವತ, ಪರಮಹಂಸರ ಜೀವನ ಚರಿತ್ರೆ ಮಾತ್ರ ಕೆಲವು ಪುಟಗಳಿಗೆ ನಿಂತು ಹೋಯಿತು!. ಇನ್ನೊಂದು ಅರ್ಥವೇ ಆಗದೆ, ಅರ್ಧ ಪೇಜ್ ಗೆ ನಿಲ್ಲಿಸಿದ ಪುಸ್ತಕ ಅಂದರೆ Mark Twain ರ Essays. ಅದಕ್ಕಿಂತ ಕಠಿಣ ಅಂದರೆ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕ! ರಾಮಾ, ರಾಮ ಅದೇನು ಇಂಗ್ಲಿಷ್! ದೇವರಿಗೇ ಪ್ರೀತಿ ಎಂದುಕೊಂಡಿದ್ದುಂಟು.
ದಿನ ಕಳೆದಂತೆ ಸಾಕಷ್ಟು ಜನ ಬಂದು ಸದಸ್ಯರಾದರು. ಚೆನ್ನಾಗಿಯೇ ನಡೆಯಿತು. ವಿಧ್ಯಾಭ್ಯಾಸ, ಕೆಲಸ ಎಂದು ನಂತರ ನಾನು ಊರು ಬಿಟ್ಟಿದ್ದು ಆಯಿತು. ಈಗ ಅದೆಲ್ಲ ನೆನಪು ಮಾತ್ರ.
ತೀರ್ಥಹಳ್ಳಿಯಲ್ಲಿ ಆಗ ಸಾವಿರ ರೂಪಾಯಿಗಳಿಗೆ ಬಹುಶಃ 60×90ರ ಸೈಟ್ ಬರುತ್ತಿತ್ತು ಎಂದು ಮನೆಯಲ್ಲಿ ದೊಡ್ಡವರು ಮಾತನಾಡಿಕೊಳ್ಳುತ್ತಿದ್ದರು. ಆ ಮಾತುಗಳನ್ನು ಕೇಳಿಸಿಕೊಂಡ ನೆನಪಿದೆ. ಆ ದಿನಗಳಲ್ಲಿ ಬಹುಶಃ ಸಾವಿರಾರು ರೂಪಾಯಿಗಳ ಪುಸ್ತಕಗಳ ಸಂಗ್ರಹ ನಮ್ಮ ಮನೆಯಲ್ಲಿ ಇತ್ತು ಎಂಬ ಹೆಮ್ಮೆಯಿದೆ. ಇದು ಅಪ್ಪನ ಮತ್ತು ಅಣ್ಣನ ಪುಸ್ತಕ ಪ್ರೀತಿ ತೋರಿಸುತ್ತದೆ. ಇದರಿಂದ ನಂತರ ಕಲಿತ ಪಾಠ ‘ಪುಸ್ತಕ ಕೊಂಡು ಓದಲು ಸಾಹುಕಾರರಾಗಿರ ಬೇಕಿಲ್ಲ. ಓದಲು ಮನವಿದ್ದರೆ ಸಾಕು’.
- ರಘುರಾಂ – ನಿವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ, ಬೆಂಗಳೂರು.