ಒಂದೂವರೆ ವರ್ಷ ಪ್ರಾಯದ ಜರ್ಸಿ ಅಮ್ಮನಿಗೆ ಹುಟ್ಟಿದ ಗಂಡು ಕರುವಿನ ಹೆಸರು ಗುಂಡ, ಹಾಲಿನ ಉತ್ಪಾದಕರಿಗೆ ಗಂಡು ಕರವಾದರೆ ಲಾಸು ಎನ್ನುವ ತೀರ್ಮಾನ. ಆದರೆ ನಮಗೆ ಗಂಡು ಕರ ಆಗಲಿ, ಹೆಣ್ಣು ಕರ ಆಗಲಿ ಒಂದೇ, ಅವುಗಳು ಹಾಕುವ ಸೆಗಣಿಯೇ ನಮಗೆ ಮುಖ್ಯ.ನಾಗೇಂದ್ರ ಸಾಗರ್ ಅವರು ಬರೆದಿರುವ ಗುಂಡನ ಕತೆ ತಪ್ಪದೆ ಮುಂದೆ ಓದಿ…
ನಮ್ಮ ಕೊಟ್ಟಿಗೆಯಲ್ಲಿ ಒಂದೂವರೆ ವರ್ಷ ಪ್ರಾಯದ ಜರ್ಸಿ ಅಮ್ಮನಿಗೆ ಹುಟ್ಟಿದ ಗಂಡು ಕರುವಿದೆ. ಎಲ್ಲಾ ಗಂಡು ಕರುಗಳಿಗೂ ನಾವು ‘ಗುಂಡ’ ಎಂದೇ ಕರೆಯುವುದು, ಇವನು ಮುದ್ದು ಗುಂಡ.
ಕೊಟ್ಟಿಗೆಗೆ ಬಂದವರೆಲ್ಲ ಸಾಮಾನ್ಯ ಕೇಳುವುದುಂಟು, ಇದೇನು ಗಂಡು ಕರು ಇಟ್ಟು ಕೊಂಡಿದ್ದೀರಿ ಮತ್ತು ಚೆನ್ನಾಗಿಯೇ ಸಾಕಿದ್ದೀರಿ. ಅದಕ್ಕೆ ನಾವು ಸವಿವರ ಕೊಡುವ ಮೊದಲೇ ಏನೇ ಆದರೂ ಗಂಡು ಕರು ಆಗಿಬಿಟ್ಟರೆ ಲಾಸೇ ಅಲ್ಲವೇ…? ತೆಗೆದ ಮಾತಿಗೆ ವಾಣಿ ಹೇಳಿ ಬಿಡುತ್ತಾಳೆ. ನಾವು ಬೇಧ- ಭಾವ ಮಾಡುವುದಿಲ್ಲ… ಎಲ್ಲರನ್ನೂ ಒಂದೇ ತರ ಸಾಕುತ್ತೇವೆ.
ಹಾಲಿನ ಉತ್ಪಾದನೆಯೇ ಪಶು ಸಾಕಣೆಯ ಮುಖ್ಯ ಉದ್ದೇಶ ಆಗಿದ್ದಾಗ ಕೊಟ್ಟಿಗೆಯಲ್ಲಿ ಗಂಡು ಕರ ಆದರೆ ಲಾಸು ಎನ್ನುವ ತೀರ್ಮಾನ ಸರಿ. ಆದರೆ ನಮ್ಮ ಲೆಕ್ಕಾಚಾರ ಹಾಗಲ್ಲ.. ನಮ್ಮ ಜಾನುವಾರು ಸಾಕಾಣಿಕೆಯಲ್ಲಿ ಹಾಲಿನ ಉತ್ಪಾದನೆ ಸೆಕಂಡರಿ. ಅವುಗಳು ಹಾಕುವ ಸೆಗಣಿಯೇ ನಮಗೆ ಮುಖ್ಯ.. ಅದು ನಮ್ಮ ಕೃಷಿ ತ್ಯಾಜ್ಯ, ಸೊಪ್ಪು ಸೆದೆಯೊಟ್ಟಿಗೆ ಬೆರೆತು ಗೊಬ್ಬರವಾಗಿ ನಂತರ ಉತ್ಕೃಷ್ಟ ಎರೆಗೊಬ್ಬರವಾಗಿ ನಮಗೆ ದೊಡ್ಡ ಆದಾಯ ತಂದುಕೊಡುತ್ತದೆ.
ಹಾಗೆ ನೋಡಿದರೆ ಈ ಆದಾಯ, ಗಳಿಕೆ ಇವನ್ನು ಮೀರಿದ ಒಂದು ಅನುಭೂತಿ ಖುಷಿ ಪಶು ಸಾಕಾಣಿಕೆಯಲ್ಲಿ ಇದೆ. ನಮ್ಮ ಕೊಟ್ಟಿಗೆಯ ಪ್ರತಿಯೊಂದು ನಡೆಯೂ ನಮ್ಮಲ್ಲಿಯೆ ಹುಟ್ಟಿ ಬೆಳೆದ ಕಾರಣಕ್ಕೆ ಮೊದಲಿಂದಲೂ ಒಂದು ಅಟ್ಯಾಚ್ಮೆಂಟ್ ಇದ್ದೇ ಇರುತ್ತದೆ.. ಈ ಮುದ್ದು ಗುಂಡನ ಕತೆಯೂ ಹಾಗೆ.. ಗಂಡು ಎಂದು ಉದಾಸೀನದ ರಾಗ ಎಳೀತಿದ್ದವರ ಎದುರು ಇವನು ನಮ್ಮ ಹೆಮ್ಮೆ ಎಂದು ನಾವು ಆತನ ಬೆನ್ನು ಚಪ್ಪರಿಸುತ್ತಾ ಇರುತ್ತೇವೆ.
ಆದರೂ ಗಂಡು ಕರುಗಳು ಒಂದು ಹಂತದವರೆಗೆ ಓಕೆ. ಪ್ರಾಯಕ್ಕೆ ಬರುತ್ತಾ ಇದ್ದಂತೆ ನಿಭಾವಣೆ ಸ್ವಲ್ಪ ಕಷ್ಟ.. ಆಗ ಚೆನ್ನಾಗಿ ಸಾಕುವವರನ್ನು ಹುಡುಕಿ ಕೊಟ್ಟು ಬಿಡುತ್ತೇವೆ..
ಈಗ ಗಂಡು ಕರುಗಳನ್ನು ಒಯ್ಯುವವರೇ ಇಲ್ಲ. ಮೊದಲೇ ಗದ್ದೆ ಬೇಸಾಯವೇ ಯಾರಿಗೂ ಬೇಡ. ಇದ್ದರೂ ಗದ್ದೆ ಹೂಟಿ ಕೆಲಸ ಯಾಂತ್ರೀಕರಣಗೊಂಡ ಕಾರಣಕ್ಕೆ ಗಂಡು ಕರುವಿನ ವಿಲೇವಾರಿ ಕಷ್ಟವೇ ಸರಿ.. ನಮ್ಮ ಸಾಗರದಲ್ಲಿ ತಾಳಗುಪ್ಪ ಗದ್ದೆ ಬಯಲಿನ ಸುತ್ತ ಮುತ್ತ ಇರುವ ಗ್ರಾಮಗಳಲ್ಲಿ ಇನ್ನೂ ಗದ್ದೆ ಬೇಸಾಯ ಮತ್ತು ಗದ್ದೆ ಬೇಸಾಯದಲ್ಲಿ ಎತ್ತುಗಳ ಬಳಕೆ ಇನ್ನೂ ಉಳಿದುಕೊಂಡಿರುವ ಕಾರಣಕ್ಕೆ ಸಾಧಾರಣ ಗಾತ್ರದ ಹೋರಿಗಳನ್ನು ಅಲ್ಲಿಯ ಜನ ಇಷ್ಟ ಪಡುತ್ತಾರೆ…
ತುರ್ತು ಕೆಲಸ ಇರುವ ಕಾರಣಕ್ಕೆ ಈಗ್ಗೆ ಕೆಲವು ದಿನಗಳಿಂದ ನಾವೀಗ ಆ ಕಡೆಯ ಕೆಲಸಗಾರರನ್ನು ಕರೆಸಿಕೊಳ್ಳುತ್ತಿದ್ದೇವೆ. ಹೀಗೆ ಬಂದವರ ಪೈಕಿ ಹುಣಸೂರಿನ ಮಂಜಪ್ಪ ಬಂದ ಮೊದಲನೇ ದಿನವೇ ಈ ಮುದ್ದು ಗುಂಡನ ಮೇಲೆ ಕಣ್ಣು ಹಾಕಿದ್ದ. ಚೆನ್ನಾಗಿ ಸಾಕುತ್ತೇನೆ ಎಂದು ಭರವಸೆ ಕೊಟ್ಟು ನಾಕು ದಿನಗಳ ಹಿಂದೆ ಲಗೇಜು ಆಟೋದಲ್ಲಿ ಹರಸಾಹಸ ಪಟ್ಟು ಒಯ್ದಿದ್ದ.
ಮಂಜಪ್ಪ ಗುಂಡನನ್ನು ಒಯ್ದು ಕೇವಲ ಮೂರು ದಿನ ಆಗಿತ್ತಷ್ಟೇ.. ಬೆಳಿಗ್ಗೆ ನಾವು ಕೆಲಸದಲ್ಲಿ ಗ್ರಸ್ತಾರಾದ ಸಂದರ್ಭದಲ್ಲಿ ದಮ್ಮಯ್ಯ ಇದರ ಸಹವಾಸ ಅಲ್ಲ ಮಾರಾಯರೆ ಅಂತ ಇದೇ ಗುಂಡನನ್ನು ಅದೇ ಲಗೇಜು ಆಟೋದಲ್ಲಿ ವಾಪಾಸು ತಂದ. ಒಂದು ಪುಡಪೋಸಿ ಗಂಡು ಕರುವನ್ನು ಸಾಕಲಾಗದ ನೀನು ಅದ್ಯಾವ ಸೀಮೆ ಗಂಡಸು ಮಾರಾಯ ಎಂದು ನಮ್ಮ ಉದಯನಾದಿಯಾಗಿ ಎಲ್ಲಾ ಕೆಲಸಗಾರರು ಮಂಜಪ್ಪನ ಮೇಲೆ ಮುಗಿಬಿದ್ದರು. ಎಲ್ಲರ ಮೂದಲಿಕೆ, ಭರ್ತ್ಸನೆ, ಟೀಕೆ ಟಿಪ್ಪಣಿಗಳನ್ನು ಅಸಹಾಯಕನಾಗಿ ಎದುರಿಸುತ್ತಾ ಗುಂಡನನ್ನು ಮೊದಲು ಇಳಿಸಿ ಹೋದರೆ ಸಾಕು ಎಂಬ ಹವಣಿಕೆಯಲ್ಲಿ ಮಂಜಪ್ಪ ಇದ್ದರೆ ಯಾವಾಗ ಗಾಡಿ ಇಳಿದೇನು ಎಂಬ ತರಾತುರಿಯಲ್ಲಿ ಗುಂಡ ಇದ್ದ.
ಮಂಜಪ್ಪನೊಂದಿಗೆ ಗಾಡಿ ಏರಿಸಿ ಕಳಿಸುವಾಗ ನಾಲ್ಕು ಜನ ಹರಸಾಹಸ ಪಟ್ಟಿದ್ದರೆ ಈಗ ಗಾಡಿ ಇಳಿದವನೇ ಯಾರ ಹಂಗೂ ಇಲ್ಲದೆ ಗುಂಡ ಸರಸರನೆ ಕೊಟ್ಟಿಗೆಗೆ ಹೋಗಿ ಖಾಲಿ ಇದ್ದ ಜಾಗದಲ್ಲಿ ವಿರಾಜಮಾನನಾದ.
ಮೂರು ದಿನ ಮೂರು ಯುಗ ಕಳೆದ ಹಾಗೆ ಆಯ್ತು ಮಾರಾಯರೆ ಎಂದು ಮಂಜಪ್ಪ ಈ ಗುಂಡನ ಸಕಲ ಗುಣಗಾನ ಸುರು ಮಾಡಿದ. ಇಲ್ಲಿಂದ ಹೋದ ಗುಂಡ ಬರೀ ಕೂಗುವುದನ್ನು ಬಿಟ್ಟು ಬೇರೆಯ ಕೆಲಸ ಮಾಡಲೇ ಇಲ್ಲವಂತೆ. ನೀರು, ಹುಲ್ಲು, ಮೇವು ತಿಂದು ಕುಡಿಯುವುದು ಬಿಟ್ಟು ಒಂದೇ ಸಮನೆ ಕೂಗುವುದನ್ನು ಬಿಡಲೇ ಇಲ್ಲವಂತೆ.. ಇವನ ಕೂಗಿಗೆ ಮನೆ ಮಂದಿ ಮಾತ್ರವಲ್ಲ. ಆಚೆ ಈಚೆ ಮನೆಯವರೆಲ್ಲ ಚೆನ್ನಾಗಿ ಕ್ಲಾಸು ತೆಗೆದುಕೊಂಡರಂತೆ.. ನನ್ನ ಹಿಸ್ಟರಿಯಲ್ಲೇ ಇಂತಹ ಹೋರಿ ಕರುವನ್ನು ಕಂಡಿರಲಿಲ್ಲ ಮಾರಾಯರೆ ಎನ್ನುತ್ತಾ ಮಂಜಪ್ಪ ಹೊರಟು ಹೋದ..
ಬಹುಶಃ ಈ ಮಂಜಪ್ಪ ಹೋಗಿ ತನ್ನ ಮನೆ ಮುಟ್ಟಿದ್ದರೂ ಮಿಕ್ಕವರು ಮಂಜಪ್ಪನ ಅಸಾಮರ್ಥ್ಯವನ್ನು ವ್ಯಾಖ್ಯಾನಿಸುವುದನ್ನು ಬಿಡುವಂತೆ ತೋರಲಿಲ್ಲ.. ಇದ್ಯಾವುದೂ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಗುಂಡ ಒಡ್ಡಿಯೊಳಗಿನ ಹುಲ್ಲನ್ನು ಗಬಗಬನೆ ತಿಂದು ಮೂರು ಬಕೇಟು ನೀರು ಕುಡಿದು ನಿಶ್ಚಿಂತೆಯಿಂದ ಮಲಗಿ ಅರಾಮಾಗಿ ಮೆಲುಕು ಹಾಕಲಾರಂಭಿಸಿದ…
ಛೇ.. ನೋಡಿ ಮೂರೇ ದಿನಕ್ಕೆ ಎಷ್ಟು ಇಳಿದು ಹೋಗಿದ್ದಾನೆ ಎಂದು ಹೆಂಡತಿ ಅದೆಷ್ಟು ಸಾರಿ ಹೇಳಿದಳೇನೋ… ಹೀಗೇನೋ ಮಾಡೋದು ಕತ್ತೆ ಭಡವ ಎಂಬ ಆಕೆಯ ಗದರಿಕೆಯ ಹಿಂದೆ ಮನೆ ಮಗನ ಕುರಿತಂತೆ ಇರುವ ಮಮತೆ ವಾತ್ಸಲ್ಯ ಇತ್ತು.. ಇಷ್ಟು ದನ ಸಾಕಿದ್ದೇವೆ.. ಇವನೊಬ್ಬ ನಮಗೆ ಹೊರೆ ಅಲ್ಲ ತಗಾ ಎಂದು ಉದಯನಲ್ಲಿ ಇನ್ನೊಮ್ಮೆ ಹೇಳಿದಳು.
ಗುಂಡನನ್ನು ಇಳಿಸಿ ಹೋದ ಮಂಜಪ್ಪ ಮಾರನೇ ದಿನದಿಂದ ಕೆಲಸಕ್ಕೆ ಬರುತ್ತೇನೆ ಎಂದು ಹೇಳಿ ಹೋಗಿದ್ದೇನೋ ಸರಿ.. ಆದರೆ ನಾಲ್ಕು ಜನರೆದುರು ತನ್ನ ಮಾನ ಮರ್ಯಾದೆಯನ್ನು ಬಟಾ ಬಯಲು ಮಾಡಿದ ಗುಂಡನ ಮನೆಗೆ ಮರಳಿ ಕೆಲಸಕ್ಕೆ ಬರಲು ಮಂಜಪ್ಪ ಮಾತ್ರ ಮನಸ್ಸು ಮಾಡಿಲ್ಲ….
- ನಾಗೇಂದ್ರ ಸಾಗರ್