ವಿರಾಟ್ ದರ್ಶನ! – ರಘುರಾಂ

ಮಕ್ಕಳ ಮುಂದೆ ಪಾಲಕರು ನಿಯಮಗಳನ್ನು ಉಲ್ಲಂಘಿಸುವುದನ್ನು ನಿಲ್ಲಿಸಬೇಕು. ರಸ್ತೆಗಳಲ್ಲಿ ಸಿಂಗಲ್ ಜಂಪ್ ಮಾಡೋದು, ಹೆಲ್ಮೆಟ್ ಇಲ್ಲದೆ ಪೊಲೀಸ್ ರಿಂದ ತಪ್ಪಿಸಿಕೊಂಡು ಓಡಾಡೋದು ಮಕ್ಕಳು ಅದನ್ನೆಲ್ಲ ಗಮನಿಸುತ್ತಿರುತ್ತಾರೆ. ನಮ್ಮ ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿದೆ.  ಲೇಖಕ ರಘುರಾಂ ಅವರ ಒಂದು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

ಅದೊಂದು ಸುಂದರ ಕುಟುಂಬ. ಮದುವೆ ಆಗಿ ಹದಿನೇಳು ವರ್ಷವಾಗಿತ್ತು. ಮಕ್ಕಳಾಗಿಲ್ಲ ಎಂದು ಕೊರಗು ಉಂಟಾಗಿತ್ತು. ಡಾಕ್ಟರ್ ಯಾವ ತೊಂದರೆಗಳು ಇಲ್ಲ ಎಂದರು. ಈ ಮಧ್ಯೆ ಮೂರು ಬಾರಿ ಗರ್ಭಪಾತವಾಗಿತ್ತು. ಪ್ರಪಂಚದ ಎಲ್ಲಡೆ ಅವರ ನೆಂಟರು, ಇಷ್ಟರು ಇದ್ದರು. ಅವರೆಲ್ಲ ಇವರಿಗೆ ಸಮಾಧಾನ ಹೇಳುತ್ತಿದ್ದರು. ಈಗ ಮದುವೆ ಆಗಿ ಹದಿನೆಂಟನೇ ವರ್ಷ. ಮತ್ತೆ ಗರ್ಭ ನಿಂತಿತ್ತು. ನಿರೀಕ್ಷೆ ಹೆಚ್ಚಾಯಿತು. ವಯಸ್ಸಾಗಿದೆ, ಜೋಪಾನ ಎಂದು ಡಾಕ್ಟರ್ ಹೇಳಿದ್ದರು. ಸಧ್ಯ, ನಡೆಯುವಾಗ ಕೆಲವೊಮ್ಮೆ ಸ್ವಲ್ಪ ಎಡವಿದ ಹಾಗಾದರೂ, ಕೆಳಗೆ ಬಿದ್ದು ತೊಂದರೆ ಆಗಲಿಲ್ಲ. ಸುಸೂತ್ರವಾಗಿ ರಾತ್ರಿ ಹೆರಿಗೆ ಆಯಿತು. ‘ಗಂಡು ಮಗು’ ಎಂಬ ಸಂತೋಷದ ಸುದ್ದಿ ಮಧ್ಯರಾತ್ರಿಯಲ್ಲಿ ಎಲ್ಲರಿಗೂ ಮುಟ್ಟಿತು. “ದೈವಾಂಶ ಸಂಭೂತರು ಹುಟ್ಟಿದಾಗ, ದೇವತೆಗಳು ಆಕಾಶದಲ್ಲಿ ನಿಂತು ಹರಸುತ್ತಾರಂತೆ” ಎಂದು ಅಜ್ಜಿ ಹೇಳಿದ ಕಥೆ, ಆ ಮಧ್ಯರಾತ್ರಿಯಲ್ಲಿ ಆಕಾಶವನ್ನು ನೋಡಿದಾಗ ಎಲ್ಲರಿಗೂ ಅನಿಸಿತ್ತು. ಸಂತೋಷದ ಪಟಾಕಿಗಳು ಆಕಾಶವನ್ನೇ ಬೆಳಗಿಸಲು ಪ್ರಯತ್ನಪಟ್ಟು ಒಂದಿಷ್ಟು ಯಶಸ್ವಿಯಾದಂತೆ ಕೂಡ ಅನಿಸಿತು. ಅದನ್ನು ನೋಡಿ, ನಾಡಿಗೆ ನಾಡೇ ಸಂಭ್ರಮ ಪಟ್ಟಿತು.

ಮಾರನೇಯ ದಿನವೇ ಊರಿನ ರಾಜ ಆ ದೇವ ಮಗುವನ್ನು ಎತ್ತಿ, ಮುದ್ದಾಡಲು ಬಯಸಿ, ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರವನ್ನು ರಾಜ್ಯದ ಅರಮನೆಯಲ್ಲಿ ನಡೆಯಲಿದೆ ಎಂದು ಹೇಳಿದಾಗ ಎಲ್ಲರೂ ಸಂತೋಷಪಟ್ಟರು. ಅಲ್ಲಿಂದ ಮಗು ತೊಟ್ಟಿಲಿನಿಂದ ಎದ್ದು ನಡೆದುಕೊಂಡು ಮತ್ತೆ ತನ್ನ ಮನೆಗೇ ಹೋಗುತ್ತದೆ ಎಂದು ಕೆಲವರು ಹೇಳಿದರು. ತೆರೆದ ಪುಷ್ಪಕ ವಿಮಾನದಲ್ಲಿ ಹೋಗುವುದೆಂದು ಕೆಲವರು ಪ್ರಸಾರ ಮಾಡಿದರು. ಅಷ್ಟು ಹೊತ್ತಿಗೆ ಹುಟ್ಟಿದ ಮಗು ದೈವಾಂಶ ಸಂಭೂತ ಮಾತ್ರವಾಗಿರದೆ ದೇವರೇ ಹುಟ್ಟಿದ್ದಾನೆ ಎಂಬ ಭಾವನೆ ಎಲ್ಲರಿಗೂ ಧೃಢವಾಗಿತ್ತು. ಆ ದೇವರನ್ನು ನೋಡಲು ಎಲ್ಲರೂ ಹೋಗಿದ್ದರಲ್ಲಿ ಆಶ್ಚರ್ಯವೇನು?…… ನುಗ್ಗಿದ್ದರಲ್ಲಿ ಎನು ಆಶ್ಚರ್ಯ…… ಯಾರೋ ನುಗ್ಗಿದರು, ಯಾರೋ ಬಿದ್ದರು, ಏನಾಗುತ್ತಿದೆ ಎಂದು ಗೊತ್ತಾಗುವುದರ ಮೊದಲೇ ಇನ್ನು ಕೆಲವರು ಬಿದ್ದವರನ್ನು ತುಳಿದರು…..

ತೊಟ್ಟಿಲಿಗೆ ಅರಿಷಿಣ ಮತ್ತು ಕುಂಕುಮ ಹಚ್ಚಿ ಗೆಜ್ಜೆವಸ್ತ್ರ ಹಾಕಲು ಹೋದ ಕೆಲವರು ಬಿಳಿಯ ಬಟ್ಟೆಯ ಹಾರವನ್ನು ತಮ್ಮ ಕತ್ರುಗಳಿಗೆ ಹಾಕಿಸಿದರು. ಆಕ್ಷತೆ ಹಾಕಿ ಹರಸಲು ಹೋದ ಕೆಲವರು ತಮ್ಮ ಬಾಯಿಗೆ ಅಕ್ಕಿ ಕಾಳು ಹಾಕಿಸಿಕೊಂಡರು. ಆ ಮಗು ಈಗ ಅಳುತ್ತಿದೆ. ಅದು ದೇವರಲ್ಲ, ಎಲ್ಲರಂತೆ ಅದೂ ಒಂದು ಬೇರೆ ಕುಟುಂಬದ ಮಗು ಎಂದು ಈಗ ಕೆಲವರಲ್ಲಾದರೂ ಅನಿಸಲು ಪ್ರಾರಂಭವಾಗಿದೆ.

ಆಗ ಮೆಚ್ಚಿದವರೆಲ್ಲರೂ ಈಗ ಪ್ರಶ್ನೆಗಳ ಮೇಲೆ ಪ್ರಶ್ನೆ ಎತ್ತುತ್ತಿದ್ದಾರೆ. ಹುಟ್ಟಿನ ಪುರುಡು ಮರೆತು, ಹತ್ತು ದಿನ ಕಳೆಯದೇ ತೊಟ್ಟಿಲಿಗೆ ಹಾಕಲು ಹೊರಟರು ಎಂದು ಈಗ ಹೇಳುತ್ತಿದ್ದಾರೆ. ಅದೊಂದು ಕೇವಲ ವ್ಯಾಪಾರಿ ಕುಟುಂಬ. ಅವರನ್ನು ಅರಮನೆಗೆ ಕರೆದಿದ್ದು ತಪ್ಪು ಎನ್ನುವ ಗುಂಪು ಒಂದು ಕಡೆಯಾದರೆ, ಆ ವ್ಯಾಪಾರಿ ಕುಟಂಬದಲ್ಲಿ ‘ನಮ್ಮವರಿಗೆ ಮಣೆಯಿಲ್ಲ’ ಎನ್ನುವವರು ಇನ್ನೊಂದು ಕಡೆ. ಆಸ್ಟ್ರೇಲಿಯ, ವೆಸ್ಟ್ ಇಂಡೀಸ್‌, ದೆಹಲಿಯಿಂದ ಬಂದ ದೂರದ ನೆಂಟರು, ಇಷ್ಟರು ಆ ಆಸ್ಪತ್ರೆಯ ಅಂಗಳದಲ್ಲಿ ನಿಂತು “ಈ ಸಲ ಗಂಡು ಮಗು” ಎಂದು “ನಮ್ಮ” ಭಾಷೆಯಲ್ಲಿ ಹೇಳಿದಾಗ ಸಂತೋಷ ಪಟ್ಟಿದ್ದ, ಅವರ ಕಣ್ಣಂಚಿನಲ್ಲಿ ನೀರು ಬಂದಾಗ ಇವರ ಕಣ್ಣಲ್ಲೂ ಕಣ್ಣೀರಿನ ಧಾರೆಯೇ ಹರಿಸಿದ್ದ, ಅವರಲ್ಲೆ ಒಂದಾಗಿದ್ದ ಜನರ ಭಾವನೆಗಳಿಗೆ ಈಗ “ವಿಪರೀತ ಸ್ವಾತಂತ್ರ್ಯ, ಮೋಜು, ಮಸ್ತಿ” ಎಂದು ಶಬ್ದರೋಪ ಮಾಡುವುದು ಎಷ್ಟು ಸರಿ ಎಂದು ಕೇಳಿದವರು ಅಲ್ಲೊಬ್ಬರು, ಇಲ್ಲೊಬ್ಬರು ಅಷ್ಟೆ. ‘ಕ್ರೌಡ್ ಡೈನಾಮಿಕ್ಸ್’ನ ‘ಥಿಯರಿ’ಗಳು ಕರ್ಪೂರದಂತೆ ಆವಿಯಾಗಿ ಹೋಗಿ “ಕ್ಲೌಡ್”ನಲ್ಲಿ ಸೇರಿಕೊಂಡಿತು. ಆ ಕಪ್ಪು ಮೋಡ ಅಲ್ಲಿಯೇ ಅದರ ಭಾರ ಕಡಿಮೆ ಮಾಡಿಕೊಳ್ಳಲು ಎರಡು ನಿಮಿಷ ಮಳೆ ಸುರಿಸಿ ಮುಂದೆ ಹೋಯಿತು. ಮೋಡವೇನೋ ಹಗುರಾಯಿತು. ಆದರೆ ಆಕಾಶ ನೀಲಿಯಾಯಿತೇ? ಇನ್ನು ಮೇಲಾದರೂ ಮದುವೆ ಮನೆಯಲ್ಲಿ, ಮಕ್ಕಳ ಎದುರೇ ಓಡಿ ಹೋಗಿ ಊಟದ ಟೇಬಲಿನಲ್ಲಿ ‘ಸೀಟು’ ಹಿಡಿಯುವುದನ್ನು ಬಿಡುತ್ತಾರೆಯೇ? ಮಕ್ಕಳನ್ನು ಕೂರಿಸಿಕೊಂಡು, ಹೆಲ್ಮೆಟ್ ಹಾಕಿಕೊಳ್ಳದೇ ‘ಸಿಗ್ನಲ್’ ಜಂಪ್ ಮಾಡದೇ ಶಾಲೆಗೆ ಬಿಡುತ್ತಾರೆಯೇ?…. ಕೆಲವರಾದರೂ ಪಾಠ ಕಲಿತರೆ ಪ್ರಪಂಚ ಎಷ್ಟೋ ಸುಧಾರಿಸುತ್ತದೆ. ಅತಿ ದೊಡ್ಡದಾದ ವಿಷಯವನ್ನು ನೋಡಿದ್ದೇವೆ. ಆ ನೋಡುವ ಕ್ರಿಯೆ ಅರಿವು ಮೂಡಿಸಿದರೆ *’ವಿರಾಟ್ ದರ್ಶನ’* ವೇ ಆಗುತ್ತದೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ನೊಂದ ಮನಗಳ ಕಣ್ಣೋರೆಸುವ ಕೆಲಸ ಆಗಲಿ.


  •  ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್), ಕ.ವಿ.ನಿ.ನಿ ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading