ಕಿವಿಯು ‘ಹೆಂಗಸರಂತೂ ಇಂಚಿಂಚು ನನ್ನನ್ನು ಚುಚ್ಚಿ, ಶಿಲುಬೆಗೆ ಏಸುವನ್ನು ನೇತಾಕಿದಂತೆ ರಂಗುರಂಗಿನ ಆಭರಣ ಇಳಿಬಿಟ್ಟು ಚಿತ್ರಹಿಂಸೆ ನೀಡಿದರು. ಈಗ ಮಾಸ್ಕ ಹಾಕಿ ಗಂಡಸರು-ಹೆಂಗಸರು-ಮಕ್ಕಳೆಲ್ಲ ನನ್ನನ್ನು ಹಿಂಸಿಸುತ್ತಿದ್ದಾರೆ ಎಂದು ತನ್ನ ಅಳಲನ್ನು ಹೇಳುಕೊಳ್ಳುತ್ತಿದೆ. ಕಿವಿಯ ಕಷ್ಟವನ್ನು ಹಾಸ್ಯದ ರೂಪದಲ್ಲಿ ಲೇಖಕರಾದ ಡಾ. ಪ್ರಕಾಶ ಬಾರ್ಕಿ ಅವರು ಸುಂದರವಾಗಿ ಚಿತ್ರಿಸಿದ್ದಾರೆ.
ನಿಮಗೆ ಅಂಟಿಕೊಂಡು ಹುಟ್ಟಿ ಕೆಲ ತಿಂಗಳು ಚಂದಗೆ ಚಿಗಿತು ಬೆಳೆದೆ. ಅದ್ಯಾವ ಮಾರಿ ಕಣ್ಣು ಬಿತ್ತೋ..!! ನಾ ಕಾಣೆ. ನನ್ನ ಕಷ್ಟ- ಕೋಟಲೆ ದಿನಗಳು ಶುರುವಾದವು. ಮೊದಲು ನನ್ನ ತಳವನ್ನೆ ಚುಚ್ಚಿ ಬಂಗಾರದ ಮುಳ್ಳು ಪೋಣಿಸಿದಿರಿ. ಬಾಲ್ಯದಲ್ಲಿಯೇ ಅಯೋಮಯ ನೋವು. “ಕರ್ಣ ವೇಧ” ಸಂಸ್ಕಾರದ ಹೆಸರಿನಲ್ಲಿ ನರಳಾಡಿಸಿ, ಬಗ್ಗು ಬಡಿದುಬಿಟ್ಟಿರಿ.
ಹೆಂಗಸರಂತೂ ಇಂಚಿಂಚಿಗೆ ಚುಚ್ಚಿ, ಶಿಲುಬೆಗೆ ಏಸುವನ್ನು ನೇತಾಕಿದಂತೆ ರಂಗುರಂಗಿನ ಆಭರಣ ಇಳಿಬಿಟ್ಟು ಚಿತ್ರಹಿಂಸೆ ನೀಡಿದಿರಿ. ಅವುಡುಗಚ್ಚಿ ನನ್ನಂತರಾಳದ ಪ್ರಾಣಸಂಕಟ ಅನುಭವಿಸಿದೆ. ನಾನೇನು ಅಬ್ಬರಿಸಿ ಬೊಬ್ಬಿರಿಯಿಲೆ?.
ಚಿಕ್ಕವನಿದ್ದಾಗ ತಪ್ಪು ನನ್ನಲ್ಲದಿದ್ದರೂ “ನನ್ನನ್ನೆ ಹಿಂಡಿದಿರಿ”. ಶಾಲೆಯ ಮಾಸ್ತರಿಗೆ ನನ್ನ ಮೇಲೆ ಅದು ಯಾವ ಜನುಮದ ಕೋಪವೋ..!! “ಹೋಂ ವರ್ಕ್ ಮಾಡದವನ” ಇಡೀ ದೇಹ ಕೋಳಿಯಂತೆ ಬಗ್ಗಿ ನಿಲ್ಲಿಸಿ, ಬೆರಳ ತುದಿಯಿಂದ ನನ್ನ ಕಚ್ಚಿ ಎಳೆದಾಗ ಅನುಭವಿಸಿದ್ದು ಜೀವಹಿಂಡುವ ನೋವು.

ಕೊನೆಗೆ ನನ್ನ ಹಿಡಿದೆಳೆದು, ಮೊಣಕಾಲು ಬಗ್ಗಿಸಿ ಕೂರುವ ಶಿಕ್ಷೆಗೆ, ಜಾಗತಿಕವಾಗಿ “Super brain Yoga” ಅಂತ ಹೆಸರಿಟ್ಟು, ಅಧಿಕೃತ ಮಾಡಿಟ್ಟೀರಿ. ನನ್ನ ನೋವು ದೇವರಿಗೆ ಪ್ರೀತಿ.
ನನ್ನ ಕಷ್ಟ- ಕಾರ್ಪಣ್ಯಗಳಿಗೆ ಮುಂದೊಮ್ಮೆ ಪರಿಹಾರ ಸಿಗಬಹುದು ಎಂದೆಣಿಸಿದ್ದೆ ತಪ್ಪಾಯಿತು.!!
ಇಷ್ಟೆಲ್ಲ ನೋವುಂಡವನಿಗೆ, ಕಣ್ಣಿನ ತೊಂದರೆ ಬಂದಾಗಲೂ ನನಗೆ ಶಿಕ್ಷೆಯೆ?? ಅಕಟಕಟಾ.
ಕಣ್ಣಿಗೆ ಮುದಿ ಅಪ್ಪಿದಾಗ ಮಂದಾಯಿತು. ಹಾಗಂತ ಕಣ್ಣಿಗೆ ಯೌವ್ವನ ತುಂಬಿ, ದೃಷ್ಟಿ ನಿಚ್ಚಳ ಮಾಡುವ ಕನ್ನಡಕ ಹಾಕಿ ಅದರ ಕಡ್ಡಿಯನ್ನೂ ಸಿಕ್ಕಿಸಿದ್ಧು ನನ್ನ ಬೆನ್ನಿಗೆ.
ಅದ್ಯಾವ ಜನ್ಮದ ಪಾಪವೋ… !! ನಿಮ್ಮ ಕುರೂಪತನ ಮರೆ ಮಾಚಲು ನನ್ನ ಛಿದ್ರಿಸಿದಿರಿ. ಮೇಲಾಗಿ ಎತ್ತಿಗೆ ನೊಗ ಹಾಕಿದಂತೆ, ಚಾಳೀಸಿನ ಕಡ್ಡಿ ಹೊರಿಸಿದಿರಿ. ನನ್ನ ಪ್ರಾರಬ್ಧ ಕರ್ಮ. ನನಗಂತೂ ಜನ್ಮ ರೋಸಿಹೋಗಿ ಸಾಕುಸಾಕಾಗಿದೆ.
ಯಾವನಾದ್ರೂ ಸುಳ್ಳು ಮಾತನಾಡಿದರೂ.. ನಾನೇ ಬಲಿಪಶು. “ಕಿವಿ ಮೇಲೆ ಲಾಲ್ ಬಾಗ್ ಇಡ್ತೀಯಾ”!!? ಅನ್ನೋ ಕುಹಕವಾಡುವಿರಿ.
ನಾಲಿಗೆ ಆಡಿದ ಸುಳ್ಳಿಗೆ ನನ್ನ ಮೇಲೆ ಹೂ.. ತಪ್ಪಿದರೆ ಲಾಲ್ಬಾಗ್ ಇಡುವ ನಿಮ್ಮ ಯೋಚನೆ ನೆನೆದು ಅದೇಷ್ಟೋ ರಾತ್ರಿ ನಾನು ನಿದ್ದೆಯಿಲ್ಲದೆ ಕುದ್ದು ಕನಲಿ ಒದ್ದಾಡಿದ್ದೆನೆ.
ದೇವರಿಗೆ ಬಣ್ಣದ ಬಣ್ಣದ ಹೂವಿಟ್ಟು ಪೂಜಿಸಿ, ಹಣೆಗೆ ಕುಂಕುಮ, ಗಂಧ, ವಿಭೂತಿ ಹಚ್ಚುವಿರಿ. ನನ್ನ ಮೇಲೆ ಹೂವಿಟ್ಟು ಅಣುಕಿಸಿ, ಕೆರಳಿಸುವಿರಿ.
ಮನೆ ಕಟ್ಟುವ ಗಾರೆ ಕೆಲಸದ ಆಳಿಗೂ ನನ್ನ ಕಂಡರೆ ಅಸಡ್ಡೆ. ತಾನು ಅರ್ಧ ಸೇದಿದ ಮೊಂಡು ಬೀಡಿಯನ್ನು, ಗೋಡೆಗೆ ತಿಕ್ಕಿ ಆರಿಸಿ ಮತ್ತೇ ಸೇದಲು “ನನ್ನ ಮೇಲೆ ಹೊರಿಸು”ವವಾ.
ನಾನು ಬೀಡಿ ಸೇದದ್ದಿದರೂ.. ಧೂಮಪಾನಿಗೆ ಸಹಕರಿಸಿದ ಪಾಪ ಬರುವುದಿಲ್ಲವೆ?…!!
ಬಟ್ಟೆ ಹೊಲೆಯುವ ದರ್ಜಿ, ಅಳತೆಗೆ ತಕ್ಕಂತೆ ಬಟ್ಟೆಗೆ ಬಣ್ಣ ಬಣ್ಣದ “ಚಾಕ್ ಪೀಸ್”ನಿಂದ ಗೆರೆ ಹಾಕಿ. ಉಳಿದರ್ಧ ಸಿಕ್ಕಿಸುವುದು ನನ್ನ ಬೆನ್ನಿಗೆ. ಇವನಂತೂ ಪ್ರತಿದಿನ “ಹೋಳಿ” ಆಚರಿಸುತ್ತಿದ್ದಾನೆ ನನ್ನ ಸಂಗಡ.

ಫೋಟೋ ಕೃಪೆ : stringking
ಅವರವರ ಕೆಲಸಕ್ಕೆ ತಕ್ಕಂತೆ, ಇಷ್ಟಕ್ಕನುಸಾರ, ಚಾಕ್ ಪೀಸ್, ಸೀಸ್ ಪೆನ್ಸಿಲ್, ಬೀಡಿ, ಹೂವು, ಚಾಳೀಸಿನ ಕಡ್ಡಿ, ನನ್ನ ಬೆನ್ನಿಗೆ ಹಾಕಿ “ಕುಹಕವಾಡು”ತ್ತಿದ್ದಾರೆ. “ಬಡವನ ಕೋಪ ದವಡೆಗೆ ಮೂಲ” ಎನ್ನುವಂತೆ ಸುಮ್ಮನಿದ್ದೇನೆ.
ನನ್ನ ಮೈ ಎಮ್ಮೆಯ ಚರ್ಮದಂತೆ ದಡ್ಡು ಬಿದ್ದು. ನರಳಾಟ ಇವಾಗಿವಾಗ ಹಿಡಿತಕ್ಕೆ ಬಂದಿದೆ. ಇಷ್ಟು ಅನುಭವಿಸಿ ತುಟಿ ಪಿಟಿಕೆನ್ನದೆ ಬದುಕುತ್ತಿದ್ದೆನೆ.
ಹೆಂಗಸರ “ಮಾತು…” ನನ್ನ ಹೈರಾಣಾಗಿಸಿದೆ. ಇಷ್ಟವಿಲ್ಲದಿದ್ದರೂ ಕೇಳಿಸಿಕೊಂಡು ಮೆದುಳಿನ ಮೂಲೆಗೆ ಸೇರಿಸಿದ್ದೆನೆ.
“ಕಿವಿ ಕಚ್ಚು”ವವರ ಮೇಲೆ ನನಗೆ ಒಂದಿಂಚೂ ಕೋಪವಿಲ್ಲ. ಸಮಾಜದೆದುರು ಅವರೆ ಬೆತ್ತಲಾಗುವುದು.
ಪ್ರೇಮಿಗಳ, ಮದುವೆಯಾದ ನವದಂಪತಿಗಳ ಮಾತಿಗೆ “ರೋಮಾಂಚಿತ”ನಾಗಿ ಪುಳಕಿತನಾಗಿದ್ದೇನೆ. ಅದು ಕ್ಷಣಿಕ ಮಾತ್ರ. ಆಮೇಲೆ ಬಡೆದಾಟದ ಬೈಗುಳ.
ಛಾಡಿ ಮಾತು, ಬುದ್ದಿ ಮಾತು, ಕುಹಕ, ನಗು, ಸಂತೋಷದ ನುಡಿಗಳು ನಾನೆ ಕೇಳಿಸಿಕೊಂಡೆ ಒಮ್ಮೊಮ್ಮೆ ಖುಷಿ ಪಟ್ಟರೆ ಮಗದೊಮ್ಮೆ ವಿಷಾದದ ಹಳವಂಡಕ್ಕೆ ಬಿದ್ದು ನರಳಿದ್ದೇನೆ.
ಆದರೆ ನನ್ನ ನೈಜ ಸಮಸ್ಯೆ ಶುರುವಾಗಿದ್ಧು ಕಳೆದ ವರುಷದಿಂದ!!
ಚೀನಾದ ಮಾರಕ ವೈರಸ್ಸು ದಾಂಗುಡಿಯಿಟ್ಟಿದ್ದು ಎಲ್ಲರ ದೇಹಕ್ಕೆ ಅದೂ ಮೂಗು, ಕಣ್ಣು, ಬಾಯಿಯ ಮೂಲಕ.
“#ಮಾಸ್ಕ್” ನ್ನು ಮೂಗು, ಬಾಯಿ ಮುಚ್ಚಿ ಅದರ ದಾರವನ್ನು ನನ್ನ ಸೊಂಟದ ಸುತ್ತ ಹಾಕಿ, ಜೀವನವನ್ನೆ ನರಕವಾಗಿಸಿದ್ದಾರೆ.
ಕಣ್ಣಿನ ತಪ್ಪಿಗೂ ನನಗೆ ಶಿಕ್ಷೆ. ಇವಾಗ ಮೂಗು, ಬಾಯಿಯ ಸಮಸ್ಯೆಗೂ “ನನಗೆ ಶಿಕ್ಷೆ”. ಅಯ್ಯೋ ದೇವಾ!!!.
ಈ ಸಂಕಟವಂತೂ ತಾಳಲಾರೆ ದಿನದ ಅಷ್ಟು ಗಂಟೆ ಮಾಸ್ಕ್ ರಬ್ಬರೂ, ದಾರವನ್ನ ನೇತಾಕಿಕೊಳ್ಳೋದೆ ಆಯ್ತು.
ಕರೋನಾ ಕಾಯಿಲೆ ಬಗೆಗಿನ ಕಟ್ಟು ಕಥೆ, ನ್ಯೂಸ್ ಚಾನೆಲ್ಗಳ ಅತೀರಂಜಿತ ಮಾತು ಕೇಳಿ ವಿಲಿವಿಲಿ ಒದ್ದಾಡುತ್ತಿದ್ದೆನೆ. ಅವರಿಗೆ ಚೆಲ್ಲಾಟ, ನನಗೆ ಪ್ರಾಣಸಂಕಟ. ಕೈ ಕಾಲು ಇದ್ದಿದ್ದರೆ ಕಪಾಳಕ್ಕೆರಡು ಬಾರಿಸುವಷ್ಟು ಕೋಪ ನನ್ನೋಳಗೆ ಕುದಿಯುತ್ತಿದೆ.
ನನ್ನ ಮೈ ಹುಣ್ಣು ಹಣ್ಣಾಗುತ್ತಿದೆ. ಮೈ ನೋವು ಬಂದು ರಾತ್ರಿ ಸಂಕಟದಿಂದ ನರಳುತ್ತಿದ್ದೆನೆ. ಈ ಬದುಕು ಬೆಂಗಾಡಾಗಿ ಹೋಗಿದೆ. ನಿಮಗೆಲ್ಲ ಕೈ ಮುಗಿದು ಕೇಳುವೆ. ಲಾಕ್ ಡೌನ್ ಇದ್ದಾಗ ಮುಚ್ಕೊಂಡು ಮನೇಲಿರಿ. ಹೊರಗೋಗುವಾಗ ಮಾಸ್ಕ್ ಹಾಕಿ ನನ್ನ ಹೆಣವನ್ನೆ ಎತ್ತಬೇಡಿ.
ಮಹಾಭಾರತದಲ್ಲಿ ನನ್ನ ಹೆಸರಿನ ವ್ಯಕ್ತಿ “ದಾನಶೂರ” ನಾಗಿದ್ದ, ಆವಾಗಿನಿಂದ ನನ್ನನ್ನೂ ಹಾಗೆ ಎಣಿಸಿ ಭಾರ ಹೊರಿಸಿ, ಹಿಂಡಿ, ಜಗ್ಗಿ ಹಿಪ್ಪೆಯಾಗಿಸಿದ್ದಿರಿ. ಅಂತರಾಳದಲ್ಲಿ ಕಣ್ಣಿರಾಗಿದ್ದೆನೆ.
ನನಗೆ ಮಾತನಾಡಲು ಬಾಯಿ ಇದ್ದಿದ್ದರೆ ವಾಚಾಮಗೋಚರ ಬೈದು ಸಮಾಧಾನ ಪಡುತ್ತಿದ್ದೆ. ಮಲತಾಯಿ ಮಗನಂತೆ ನಡೆಸಿಕೊಳ್ಳಬೇಡಿ.ಮುಂದೊಮ್ಮೆ ನನ್ನ ಕೆಲಸ ನಿಲ್ಲಿಸಿದರೆ ನೀವು ಕಿವುಡಾಗುವುದು ಖಂಡಿತ. ಎಚ್ಚರ!!!!!
ಇಂತಿ ನಿಮ್ಮ ನಿರ್ಲಕ್ಷಿತ ಅಂಗ.
ಕಿವಿ.
- ಡಾ.ಪ್ರಕಾಶ ಬಾರ್ಕಿ (ವೈದ್ಯರು, ವೈದ್ಯಕೀಯ ಬರಹಗಾರರು), ಕಾಗಿನೆಲೆ.
