ಪಾಂಡುರಂಗನ ಭಕ್ತರು, ಏಕಾದಶಿ ಮಹಿಮೆ ಕುರಿತು ಭಕ್ತರು ಕೇಳಿದಾಗ ಪತ್ರಕರ್ತರಾದ ರಾಘವೇಂದ್ರ ಪಿ ಅಪರಂಜಿ ಅವರು ಹೇಳಿದ ಏಕಾದಶಿ ಕತೆಯನ್ನು ತಪ್ಪದೆ ಓದಿ..
ಕಾಲಚಕ್ರ ನಾವು ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಹಿಂದಿನ ಕಾಲದ ಸ್ಮರಣೆ ಅದ್ಭುತ ಅನುಭವ. ನಾನು ಮೊನ್ನೆ ಏಕಾದಶಿ ದಿನ ಅಮರಗೋಳದ ಪಾಂಡುರಂಗ ದೇಗುಲಕ್ಕೆ ಹೋಗಿದ್ದೆ. ಆ ದೇಗುಲ ನೋಡಿಕೊಳ್ಳುವ ಶಿವಲಿಂಗ ಎನ್ನುವರು, ನೀವು ಬರೆದ ಕರ್ಣನ ಕಥೆ ಓದಿದೆ. ತುಂಬಾ ಖುಷಿ ಆಯಿತು. ನಾವು ಪಾಂಡುರಂಗನ ಭಕ್ತರು, ಏಕಾದಶಿ ಮಹಿಮೆ ಹೇಳಿ ಅಂದರು. ನಾನಂದೆ ನಾನೇನು ಪುರಾಣ, ಕಥೆಗಳನ್ನು ಓದಿದವನಲ್ಲ, ಆದರೆ ನನ್ನ ತಾಯಿಯ ತಾಯಿ ಸುಂದರಾಬಾಯಿ ಅಂದರೆ ಅಜ್ಜಿ ಮೂಲತಃ ಪುಣಾದವರು. ಅವರು ನನಗೊಂದು ಏಕಾದಶಿ ಮಹಿಮೆ ಕುರಿತು ಕಥೆಯೊಂದನ್ನು ಹೇಳಿದ್ದರು. ನಿಮಗಾಗಿ ಆ ಕಥೆ ಮತ್ತೊಮ್ಮೆ ಹೇಳತಿದಿನಿ ಓದಿ.
ಸಂತ ನಾಮದೇವ ವಿಠ್ಠಲನ ಮಹಾನ್ ಭಕ್ತರು. ಅವರು ಏಕಾದಶಿ ಪಾಲನೆ ಮಾಡತ್ತಿದ್ದರು. ಹಾಗೆ ಮಾಡುವಾಗ ಯಾರಾದರೂ ಕಂಡರೆ ಅವರಿಗೂ ಏಕಾದಶಿ ಪಾಲಿಸುವಂತೆ ಪ್ರೇರೇಪಣೆ ಮಾಡತ್ತಿದ್ದರು. ಅವರಿಗೂ ಕೂಡಾ ಅನ್ನ ಸೇವನೆ ಮಾಡಲು ಬಿಡುತ್ತಿರಲಿಲ್ಲ. ನಾಮದೇವನ ಏಕಾದಶಿಯನ್ನು ಪರೀಕ್ಷೆ ಮಾಡಬೇಕು ಅಂತ ವಿಠ್ಠಲನಿಗೆ ಅನಸ್ತು. ವಿಠ್ಠಲ ಬ್ರಾಹ್ಮಣ ವೇಷಧಾರಿಯಾಗಿ ಏಕಾದಶಿ ದಿವಸವೇ ನಾಮದೇವನ ಮನೆಗೆ ಬಂದ. ನಾಮದೇವ ನಾನು ನಾಲ್ಕು ದಿನದಿಂದ ಊಟಾ ಮಾಡಿಲ್ಲ. ನನಗೆ ಅನ್ನ ಕೊಡು, ಇಲ್ಲಾಂದ್ರೆ ಪ್ರಾಣ ಹೋಗುತ್ತೆ ಅಂದ.
ನಾಮದೇವರು ಹೇಳಿದ್ರು ಹಾಲು, ಹಣ್ಣು ಕೊಡ್ತೇನೆ. ಅನ್ನ ಇವತ್ತೊಂದು ದಿನ ಬೇಡ ಅಂತ. ಇಲ್ಲ ನಾ ಅನ್ನ ತಿನ್ನಲಿಲ್ಲ ಅಂದರೆ ಪ್ರಾಣ ಹೋಗುತ್ತೆ ಅಂದ ಬ್ರಾಹ್ಮಣ. ನಾಮದೇವರು ಅಂದ್ರು ಪ್ರಾಣ ಹೋದರೆ ಹೋಗಲಿ, ಇವತ್ತು ವೈಕುಂಠದ ಬಾಗಿಲು ತೆರೆದಿರುತ್ತೆ. ಒಳ್ಳೆಯದೇ ಆಗುತ್ತೆ ಅಂದರು.
ಅಕ್ಕಪಕ್ಕದ ಜನ ನಾಮದೇವ, ನೀನು ಏಕಾದಶಿ ಮಾಡು, ಆ ಬ್ರಾಹ್ಮಣನಿಗೆ ಯಾಕೆ ಗಂಟುಬಿದ್ದಿ. ನಾವು ಅವನಿಗೆ ಅನ್ನ ನೀಡತಿವಿ ಅಂದ್ರು. ನಾಮದೇವರು ಅಂದ್ರು, ನನ್ನ ಸಂಪರ್ಕಕ್ಕೆ ಯಾರು ಬರ್ತಾರೋ ಅವರಿಗೆ ನಾ ಏಕಾದಶಿ ದಿನ ಅನ್ನ ತಿನ್ನಲು ಬಿಡೋದಿಲ್ಲ ಅಂದ್ರು.
ಈ ಎಲ್ಲ ಪ್ರಸಂಗದ ನಡುವೆ ಆ ಬ್ರಾಹ್ಮಣ ತನ್ನ ಪ್ರಾಣವನ್ನೇ ಬಿಟ್ಟುಬಿಟ್ಟ. ಇದರಿಂದ ಅಕ್ಕಪಕ್ಕದ ಜನರೆಲ್ಲ ನಾಮದೇವರಿಗೆ ಬ್ರಾಹ್ಮಣನ ಸಾವಿಗೆ ನೀನೆ ಕಾರಣ ಅಂತ ಹಿಯಾಳಿಸಿದರು.
ಮನನೊಂದ ನಾಮದೇವರು ಆ ಬ್ರಾಹ್ಮಣನ ಚಿತೆಯಲ್ಲೆ ಕುಟುಂಬ ಸಮೇತ ಹಾರಲು ನಿರ್ಧರಿಸಿದರು. ಬ್ರಾಹ್ಮಣನ ಶವವನ್ನು ಚಟ್ಟದ ಮೇಲೆ ಮಲಗಿಸಲಾಯಿತು. ಬೆಂಕಿಯನ್ನು ಹಚ್ಚಲಾಯಿತು. ಅದರಲ್ಲಿ ನಾಮದೇವರು ಕುಟುಂಬ ಸಮೇತ ಅಗ್ನಿ ಪ್ರವೇಶಿಸಲು ಹೊರಟರು.
ತಕ್ಷಣವೆ ಬೆಳಕೊಂದು ಪ್ರಜ್ವಲಿಸಿತು. ಶಂಖ, ಚಕ್ರ, ಗದಾಧಾರಿಯಾದ ಶ್ರೀಮನ್ನಾರಾಯಣನು ಬ್ರಾಹ್ಮಣನ ವೇಷದಿಂದ ಹೊರಬಂದು ನಿಂತನು. ನಾಮದೇವ ನಿನ್ನ ಏಕಾದಶಿ ವ್ರತದ ಮಹಿಮೆಯನ್ನು ಎಲ್ಲರೂ ಅರಿಯಲಿ ಎಂದು ದರ್ಶನ ನೀಡಿ ಅದೃಶ್ಯನಾದನು. ಇತ್ತ ಶವ ಸಂಸ್ಕಾರಕ್ಕೆ ಬಂದಿದ್ದ ಬ್ರಾಹ್ಮಣ ಕುಲೋತ್ತಮರೆಲ್ಲ ಎಚ್ಚರ ತಪ್ಪಿದ್ದರು. ಅವರೆಲ್ಲ ನಿದ್ದೆಯಿಂದ ಎದ್ದವರಂತೆ ಎದ್ದರು. ಅವರೆದುರು ಬ್ರಾಹ್ಮಣ ರೂಪಿ ಭಗವಂತನು ಎದ್ದು ನಿಂತನು. ನೆರೆದವರೆಲ್ಲ ನಾಮದೇನಿಗೆ ಜಯಕಾರ ಹಾಕಿದರು. ಕೇಳಿದ್ರಲ್ಲಾ ಏಕಾದಶಿ ಮಹಿಮೆ ಕಥೆ. ಅಜ್ಜಿ ನಮ್ಮನ್ನಗಲಿ 28 ವರ್ಷಗಳ ಮೇಲೆ ಆದವು. ಆದರೆ ಕಥೆ ಸದಾ ನೆನಪಿದೆ. ಓದ್ರಿ…
- ರಾಘವೇಂದ್ರ ಪಿ ಅಪರಂಜಿ
