ಹಿರಿಯರ ಮಾರ್ಗದರ್ಶನವಿದ್ದರೆ, ಆಲದ ಮರದ ನೆರಳಿದ್ದಂತೆ. ಅವರ ಮಾತುಗಳು ನಮ್ಮ ಜೀವನಕ್ಕೆ ದಾರಿ ದೀಪವಾಗಿರುತ್ತದೆ.ಒಂದು ವೇಳೆ ಅವರ ಮಾತನ್ನು ಉಡಾಫೆ ಮಾಡಿ, ಹಲ್ಲು ಗಿಂಜಿದರೆ ಮುಂದೊಂದು ದಿನ ಆಪತ್ತು ಕಟ್ಟಿಟ್ಟ ಬುತ್ತಿ. ಪ್ರೊ.ರೂಪೇಶ ಅವರ ಈ ಕತೆಯನ್ನೊಮ್ಮೆ ಓದಿ…
ಅಂದು ಮಾರಯ್ಯ ತನ್ನ ಮಗ ದೊಡ್ಡ ವಿದ್ವಾಂಸನಾಗಬೇಕೆಂದು, ವಿದೇಶಕ್ಕೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲು ನಿಶ್ಚಯಿಸಿದ. ಆಗಿನ ಕಾಲದಲ್ಲಿ ವಿದೇಶಕ್ಕೆ ಹಡಗಿನಲ್ಲೇ ಹೋಗಬೇಕಾಗಿತ್ತು. ಮನೆಯ ಮುಂದೆ ಮೀನು ಮಾರಲು ಬರುವ ಅಹಮ್ಮದ್ ನಲ್ಲಿ, ತನ್ನ ಮಗ ಸೀನಪ್ಪನನ್ನು ವಿದೇಶದಲ್ಲಿ ಓದಿಸಬೇಕು,ಅದಕ್ಕೆ “ವಿದೇಶಕ್ಕೆ ಹೋಗುವ ಹಡಗೇನಾದರೂ ಇದೆಯಾ?”ಎಂದು ವಿಚಾರಿಸಿದಾಗ, ನ್ಯೂಜಿಲ್ಯಾಂಡಿಗೆ ಹೋಗುವ ಹಡಗಿದೆ ಎಂದು ಗೊತ್ತಾಯಿತು.
ಆ ಹಡಗಿನ ಕ್ಯಾಪ್ಟನನ್ನು , ಊರಿನ ಇಂಗ್ಲಿಷ್ ಮಾಸ್ತರ ಜೊತೆ ಹೋಗಿ ಬೇಟಿಯಾಗಿ , ಮಗನಿಗೆ ಕಲಿಯಲು ಆಗುವ ಒಟ್ಟು ಖರ್ಚು ವೆಚ್ಚವನ್ನು ತಿಳಿದ.ತನ್ನ ತೋಟದ ಕೆಲವು ತೇಗ ಮರ,ಮೂರು ಗಂಧದ ಮರ ವನ್ನು ಮಾರಿ ಹಣ ಕ್ರೂಢೀಕರಿಸಿದ.
ಆದರೆ,
ಮೊದ ಮೊದಲು ಮಗ ಸೀನಪ್ಪ ಹೇಗೂ ವಿದೇಶಕ್ಕೆ ಹೋಗಲು ನಿರಾಕರಿಸಿದರೂ, ಕೊನೆಗೆ ಒಪ್ಪಿಕೊಂಡ. ಅವನಿಗೆ ಕೃಷಿ ಮಾಡುತ್ತಾ , ಊರಲ್ಲಿ ನ್ಯಾಯಕಟ್ಟೆಯಲ್ಲಿ ನ್ಯಾಯ ಹೇಳೋದರಲ್ಲಿ ಭಾಗವಹಿಸುವ ಇಚ್ಚೆ. “ಅದೆಲ್ಲಾ ಕಲಿತು ಮರಳಿದ ಮೇಲೆ ನೋಡು” ಎಂದು ಮಾರಯ್ಯ.
ಮಾರಯ್ಯ ಮಗ ಮರಳುವ ಮೊದಲೇ ವಿಧಿವಶನಾದ.
ಮರಳಿ ಬಂದ ಸೀನಪ್ಪ, ಕುಟುಂಬವನ್ನು ಚೆನ್ನಾಗಿ ನೋಡಿ ಕೊಳ್ಳುವುದರ ಜೊತೆ, ಊರಿನ ಅತ್ಯಂತ ಬುದ್ಧಿವಂತ ನ್ಯಾಯದರ್ಶಿಯಾದ, ಚರ್ಚೆಗಳಲ್ಲಿ ಮೇಲುಗೈ, ವಿಮರ್ಶೆಗಳಲ್ಲಿ ಅತಿರಥ, ಊರಿನ ಮಕ್ಕಳ ಯಾವುದೇ ಸಂಶಯಕ್ಕೂ ಸೀನಪ್ಪನಲ್ಲಿ ವೈಜ್ಞಾನಿಕ ಉತ್ತರ ಅದಕ್ಕೆ ತಕ್ಕುದಾದ ವಿವರಣೆ ಸಿಗುತ್ತಿತ್ತು.
ಸೀನಪ್ಪನ ಮರಣ ಊರಿನ ಯುವಕರಿಗೆ ಮಕ್ಕಳಿಗೆ ತುಂಬಲಾರದ ನಷ್ಟವಾಗಿತ್ತು. ಸೀನಪ್ಪ ತೀರಿ ಹೋದ ಕೆಲ ವರುಷಗಳು ಕಳೆದು ಹೋದ ಮೇಲೆ, ಅವರಿಂದ ಚರ್ಚೆಯಲ್ಲಿ ಸೋಲುಂಡವರು ಅವರ ಮರಣಾನಂತರ ” ಸೀನಪ್ಪ ನನ್ನ ಮುಂದೆ ಗುಪ್ ಚುಪ್ ಆಗಿದ್ದ”.
“ಏಯ್ ಸೀನಪ್ಪನಾ… ನನ್ನಿಂದ ಎಲ್ಲಾ ಕೇಳಿ, ಚರ್ಚೆಗೆ ಹೋಗುತ್ತಿದ್ದ” ಎಂದು ಯದ್ವಾ ತದ್ವಾ ಪ್ರಚಾರ ಮಾಡತೊಡಗಿದರು.
ಹೀಗೆ ೧೯೪೦ ರಲ್ಲಿ ನ್ಯೂಜಿಲ್ಯಾಂಡಿನ ವಿಲ್ಲಿಂಗ್ಟನ್ ನಲ್ಲಿ ಬಿಎ ಆನರ್ಸ್ ಪಡೆದು ಊರಲ್ಲಿ ಕೃಷಿ ಕೆಲಸದಲ್ಲಿ ತೊಡಗಿರುವಾಗ , ರೇಡಿಯೋ ನೇತಾಡಿಸಿ ವಾರ್ತೆ ಕೇಳುತ್ತಾ, ಕನ್ನಡ, ಇಂಗ್ಲೀಷ್ ವಾರ್ತಾ ಪತ್ರಿಕೆ ಓದುತ್ತಿದ್ದ ಕಾಲಜ್ಞಾನವನ್ನು ತನ್ನಲ್ಲಿರಿಸಿದ ಸೀನಪ್ಪ ನ ಬಗ್ಗೆ ಇಂದು ….
“ಸೀನಪ್ಪೇ…. ಆಯೆಗ್ ದಾದಾಲಾ ಗುತ್ತಿತ್ತಿಜ್ಜಿ.,….ಮಲೆಮಂಗೆ..(ಸೀನಪ್ಪನಾ ಅವನಿಗೆ ಏನೂ ಗೊತ್ತಿರಲಿಲ್ಲ, ಕಾಡು ಮಂಗ)” ….. ಇಲ್ಲಿಗೆ ಬಂದು ನಿಂತಿದೆ ಸೀನಪ್ಪಣ್ಣನ ಚರಿತ್ರೆ. ವಿದ್ಯೆ – ಬುದ್ದಿ – ಜ್ಞಾನ ಇದ್ದ ಹಿರಿಯ ಮಾರ್ಗದರ್ಶಕರನ್ನು , ಇಂದು … ವಿದ್ಯೆ ಇದ್ದವರೂ, ವಿದ್ಯೆ ಇಲ್ಲದವರೂ ಅಪಹಾಸ್ಯ ಮಾಡುವುದು ತುಂಬಾ ದುಃಖದಾಯಕ ಅಪಾಯ. ಇನ್ನೆಷ್ಟು ಸೀನಪ್ಪಣ್ಣನಂತವರು ಹೀಗೆ ಚರಿತ್ರಹೀನರಾಗುತ್ತಾರೋ….. ಇಂತಹದು ಆಗಬಾರದು…… ಎಂಬ ಆಶಯದೊಂದಿಗೆ
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)
