ಪ್ರತಿ ಬಾರಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಸರ್ಕಾರಿ ನೌಕರರು ಅದರಲ್ಲಿಯೂ ಶಿಕ್ಷಕರು ಪಡುವ ಪಾಡುಗಳ ಬಗ್ಗೆ ಶಿಕ್ಷಕಿ ಮತ್ತು ಈ ಬಾರಿ ಚುನಾವಣಾ ಕರ್ತವ್ಯದಲ್ಲಿದ್ದ ಸರ್ವಮಂಗಳ ಜಯರಾಮ್ ಅವರು ತಮ್ಮ ಅನುಭವದ ಕೆಲವು ಘಟನೆಗಳನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಸಂಜೆ 6:00, 8 ನಿಮಿಷ 37 ಸೆಕೆಂಡ್ ಗೆ ಕಂಟ್ರೋಲ್ ಯೂನಿಟ್ ನ ಕ್ಲೋಸ್ ಬಟನ್ ಒತ್ತಿ ಸ್ವಿಚ್ ಆಫ್ ಮಾಡಿ ಅದರ ಬಾಕ್ಸ್ ನಲ್ಲಿ ಇಟ್ಟು ಸೀಲ್ ಮಾಡ್ತಾ ಇದ್ದೆವು. ಆಗ ಎಲ್ಲಿಂದಲೋ ಇಬ್ಬರು ಮೂವರು ವ್ಯಕ್ತಿಗಳು ಕುಡಿದು ತೂರಾಡುತ್ತ ಒಳಬಂದವರೇ “ಇನ್ನೂ ಒಬ್ರು ವೋಟ್ ಹಾಕಿಲ್ಲ ಅದೆಂಗೆ ಕ್ಲೋಸ್ ಮಾಡಿದ್ರಿ…ಒಬ್ಬರ ವೋಟ್ ವೇಸ್ಟ್ ಆಯ್ತು, ಇನ್ನೂ ಒಂದು ಗಂಟೆ ಟೈಮ್ ಐತಲ್ಲ, ಬೆಳಿಗ್ಗೆ ಏಳು ಗಂಟೆಯಿಂದ ಸಾಯಂಕಾಲ ಏಳು ಗಂಟೆಯವರೆಗೂ ಐತಲ್ಲ. ಏಳು ಗಂಟೆಯವರೆಗೂ ಕಾಯಬೇಕಿತ್ತು. ನಾನೂ ನೋಡ್ತೀನಿ ಅದೆಂಗ್ ಹೋಗ್ತೀರಾ ಅಂತ ಬಸ್ ಬರಲಿ, ನಮ್ಮೂರಿಂದ ಮುಂದಕ್ಕೆ ಬಿಡಲ್ಲ ಬ್ಯಾರೆ ಊರಾಗೆಲ್ಲ 8:00 ಗಂಟೆವರ್ಗು ಕ್ಲೋಸ್ ಮಾಡಲ್ಲ…. ಎನ್ನುತ್ತಾ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ನಮಗೆಲ್ಲ ಒಂದು ಕ್ಷಣ ಆತಂಕ ಶುರುವಾಯಿತು.ಬೆಳಗ್ಗೆಯಿಂದ ಹೆಚ್ಚು ಕಡಿಮೆ ಶಾಂತಯುತವಾಗಿಯೇ ಮತದಾನ ನಡೆದಿತ್ತು. ಇನ್ನೇನು ಕೊನೆಯ ಹಂತ ಕ್ಲೈಮ್ಯಾಕ್ಸ್ ಗೆ ಬಂದು ತಲುಪಿದ್ದೆವು.

ಸಂಜೆ ಆರು ಗಂಟೆಗೆ ಸರಿಯಾಗಿ ಮತದಾನ ಮಾಡುವವರು ಇನ್ನು ಯಾರು ಇಲ್ಲ ನೀವು ಕ್ಲೋಸ್ ಮಾಡಬಹುದು ಎಂದು ಏಜೆಂಟರಗಳು ಹೇಳಿದರು. ಆದರೂ ಏಳೆಂಟು ನಿಮಿಷದವರೆಗೂ ಕಾದು ಅದೇ ಆಗ ತಾನೇ ಕ್ಲೋಸ್ ಬಟನ್ ಒತ್ತಿ ಸ್ವಿಚ್ ಆಫ್ ಮಾಡಿದ್ದೆವು. ಸಂಜೆ 7:00 ಗಂಟೆ ಸುಮಾರಿಗೆ ಬಸ್ ಬರುತ್ತದೆ ಎಂದು ಹೇಳಿದ್ದರಿಂದ ಧಾವಂತದಲ್ಲಿ ಎಲ್ಲವನ್ನು ಸೀಲ್ ಮಾಡಿ ದಾಖಲೆಗಳನ್ನೆಲ್ಲ ಜೋಡಿಸಿಕೊಳ್ಳುತ್ತಿದ್ದೆವು. ಬೆಳಿಗ್ಗೆ ಏಳರಿಂದ ಸಂಜೆ 6:00 ರವರೆಗೆ ಮಾತ್ರ ಮತದಾನದ ಸಮಯ ಎಂದು ನಿಗಧಿಯಾಗಿತ್ತು. ಆರು ಗಂಟೆ ನಂತರವೂ ಸರತಿ ಸಾಲು ಇದ್ದರೆ ಆಗ ಮಾತ್ರ ಅವರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಿ ಕೊಡಿ ಎಂದು ಅಧಿಕಾರಿಗಳು ನಮಗೆ ಹೇಳಿದ್ದರು.ಆದರೆ ಸುಮಾರು ಐದು ಗಂಟೆಯಷ್ಟರಲ್ಲಿ ಸರತಿ ಸಾಲು ಇರಲಿಲ್ಲ. ಆಗೊಬ್ಬರು ಈಗೊಬ್ಬರು ಬಂದು ಮತದಾನ ಮಾಡುತ್ತಿದ್ದರು. ಐದೂವರೆಯಷ್ಟು ಹೊತ್ತಿಗೆ ಇನ್ನು ಯಾರೂ ಇಲ್ಲ ಎಂದು ಏಜೆಂಟರುಗಳು ಹೇಳಿದರು. ನಾವು ಬೆಳಗ್ಗೆ 4:30ಕ್ಕೆ ಎದ್ದು ಫ್ರೆಶ್ಅಪ್ ಆಗಿ ಐದು ಗಂಟೆಯ ಸುಮಾರಿಗೆ ವಿವಿಪ್ಯಾಟ್, ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಜೋಡಿಸಿಕೊಂಡು ಐದು ಮೂವತ್ತರ ಸುಮಾರಿನಲ್ಲಿ ಏಜೆಂಟರುಗಳ ಸಮ್ಮುಖದಲ್ಲಿ ಮಾಕ್ ಪೋಲ್ ಪ್ರಾರಂಭ ಮಾಡಿದೆವು. ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ 29 ಅಭ್ಯರ್ಥಿಗಳು ಕಣದಲ್ಲಿದ್ದು ಒಂದು ನೋಟಾ ಸೇರಿ 30 ಜನ ಸ್ಪರ್ಧೆಯಲ್ಲಿದ್ದಂತೆ ಆ 30ರಲ್ಲಿ ಜನರು ಒಬ್ಬರನ್ನೂ ಆಯ್ಕೆ ಮಾಡಬೇಕಿತ್ತು.ಅಣಕು ಮತದಾನದಲ್ಲಿ 60 ವೋಟುಗಳನ್ನು ಹಾಕಿಸಬೇಕಿತ್ತು. ಒಬ್ಬ ಅಭ್ಯರ್ಥಿಗೆ ಎರಡು ವೋಟುಗಳಂತೆ ಏಜೆಂಟರಗಳಿಂದ ವೋಟ್ ಹಾಕಿಸಿದೆವು. ಆ ಮೂಲಕ ಎಲ್ಲಾ ಯಂತ್ರಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆವು. ನಂತರ ಕ್ಲೋಸ್ ಬಟನ್ ಒತ್ತಿ ರಿಸಲ್ಟ್ ನೋಡಿ ವಿವಿಪ್ಯಾಟ್ ನಲ್ಲಿದ್ದ ಅಷ್ಟೂ ಮಾಕ್ ಪೋಲ್ಡ್ ಸ್ಲಿಪ್‌ಗಳನ್ನು ಹೊರ ತೆಗೆದು, ಖಾಲಿ ವಿವಿಪ್ಯಾಟ್ ತೋರಿಸಿ ಮತ್ತೆ ಕ್ಲೋಸ್ ಮಾಡಿ ನೈಜ ಮತದಾನಕ್ಕೆ ಅಣಿ ಮಾಡಿಕೊಂಡೆವು. ಅಷ್ಟೊತ್ತಿಗೆ ಸಮಯ ಸರಿಯಾಗಿ ಬೆಳಿಗ್ಗೆ ಏಳು ಗಂಟೆ ಆಗಿತ್ತು.
ಈ ಬಾರಿ ಗೌರಿಬಿದನೂರು ತಾಲೂಕಿನ ಕುಗ್ರಾಮ ಒಂದರಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕಾಗಿ ಬಂತು. ತಾಲೂಕು ಕೇಂದ್ರದಿಂದ 25 – 30 ಕಿಲೋಮೀಟರ್ ದೂರದಲ್ಲಿದ್ದ ಆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿತ್ತು. ಗ್ರಾಮಸ್ಥರಲ್ಲಿ ತೆಲುಗು ಪ್ರಧಾನ ಭಾಷೆಯಾಗಿತ್ತು. ಕೆಲವರಿಗೆ ಕನ್ನಡವೇ ಅರ್ಥ ಆಗುತ್ತಿರಲಿಲ್ಲ. ಪ್ರತಿ ಬಾರಿ ಚುನಾವಣಾ ಕರ್ತವ್ಯಕ್ಕೆ ಹೋದಾಗಲೂ ಒಂದೊಂದು ರೀತಿಯ ಅನುಭವಕ್ಕೆ ನಾವು ಸಿದ್ದರಾಗಬೇಕಾಗುತ್ತದೆ. ಸರ್ಕಾರಿ ನೌಕರರಿಗೆ ಅದರಲ್ಲೂ ಶಿಕ್ಷಕರಿಗೆ ಇದು ಅನಿವಾರ್ಯವೂ ಕೂಡ. ಏನೇ ಬರಲಿ ಧೈರ್ಯ ಇರಲಿ ಎಂಬಂತೆ ನಾವು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಹೋದ ಕಡೆಯಲ್ಲೆಲ್ಲ ಫ್ಯಾನ್ ಇರಬೇಕು, ಪ್ರತ್ಯೇಕ ಶೌಚಾಲಯ ಬೇಕು, ಫ್ರಿಡ್ಜ್ ವಾಟರ್ ಬೇಕು, ಒಳ್ಳೆ ಶುಚಿ-ರುಚಿಯಾದ ಊಟ ತಿಂಡಿ ಬೇಕು ಎನ್ನುವಂತಿಲ್ಲ. ಸಮಯಕ್ಕೆ ಯಾವುದು ಸಿಕ್ಕರೆ ಅದು ಅಷ್ಟೇ. ಎಲ್ಲೋ ಅಂಗನವಾಡಿ ಕೇಂದ್ರದಲ್ಲೋ, ಶಾಲೆಯ ಪಕ್ಕದ ಇನ್ನೊಂದು ಕೊಠಡಿಯಲ್ಲೋ ಕಿವಿಯ ಬಳಿ ಬಂದು ಗುಂಯ್ ಎಂದು ರಾಗ ಹಾಡಿದಾಗ ಹೊಡೆಯಲು ಕೈ ಎತ್ತಿದರೆ ತಕ್ಷಣವೇ ಕೆಳಕ್ಕೆ ಬಂದು ಇಂಜೆಕ್ಷನ್ ಚುಚ್ಚಿ ರಿವೇಂಜ್ ತೀರಿಸಿಕೊಳ್ಳುವ ಸೊಳ್ಳೆಗಳೊಂದಿಗೆ ರಾತ್ರಿ ಕಳೆಯಬೇಕು.

ಸುಮಾರು 200-250 ಮನೆಗಳಿದ್ದ ಆ ಊರಿನಲ್ಲಿ ಸುಮಾರು 300 ಜನ ಮತದಾರರಿದ್ದರು. ಪಕ್ಕದ ಎರಡು ಹಳ್ಳಿಗಳನ್ನು ಟ್ಯಾಗ್ ಮಾಡಿದ್ದರಿಂದ ಒಟ್ಟು 950 ಜನ ವೋಟರ್ಸ್ ಇದ್ದರು. ಸುಮಾರು 85 ಪರ್ಸೆಂಟ್ ಮತದಾನವೂ ಆಯ್ತು. ಆಗೊಮ್ಮೆ ಈಗೊಮ್ಮೆ ನಡೆದ ಕೆಲವು ಘಟನೆಗಳು ನಗೆ ತರಿಸುತ್ತಿದ್ದವಾದರೂ ಇನ್ನೂ ಕೆಲವು ಘಟನೆಗಳು ಕ್ಷಣಾರ್ಧದಲ್ಲಿ ಆತಂಕವನ್ನು ಸೃಷ್ಟಿಸುತ್ತಿದ್ದವು. ಅಷ್ಟೊಂದು ವಿದ್ಯಾವಂತರಲ್ಲದ ಅಲ್ಲಿನ ಜನರು ಬಹುತೇಕ ಹೆಬ್ಬೆಟ್ಟು ಗಿರಾಕಿಗಳಾಗಿದ್ದರು. ಅವರ ವೇಷ ಭೂಷಣಗಳೇ ಹೇಳುತ್ತಿದ್ದವು ಅವರ ಆರ್ಥಿಕ ಸ್ಥಿತಿಯನ್ನು.
ಒಳಗಿದ್ದ ನಾಲ್ಕೈದು ಜನರನ್ನು ತಳ್ಳಿಕೊಂಡು ಒಬ್ಬನು ಸೀದಾ ಒಳ ಬಂದವನೇ ಎಪಿಆರ್ ಓ ಬಳಿ ಹೋಗಿ ಗಲಾಟೆ ಮಾಡುತ್ತಿದ್ದ. ಏನೆಂದು ವಿಚಾರಿಸಿದಾಗ ಅವರಿಗೆ ವೋಟರ್ ಐಡಿ ಕೊಟ್ಟಿದ್ದೇನೆಂದು ಹೇಳಿ ಗಲಾಟೆ ಮಾಡುತ್ತಿದ್ದ. ಕುಡಿದ ಅಮಲಿನಲ್ಲಿ ಅವನು ಮನೆಯಲ್ಲಿದ್ದ ಇನ್ನಾರದೋ ವೋಟರ್ ಸ್ಲಿಪ್ ತಂದಿದ್ದ. ನನ್ನ ಐಡಿ ಕೊಟ್ರೆ ಸರಿ ಇಲ್ಲದಿದ್ದರೆ ಟೇಬಲ್ ಎತ್ತಿ ಬಿಸಾಕ್ತಿನಿ. ಬಾಕ್ಸ್ ಗಳನ್ನೆಲ್ಲ ಎತ್ತಿ ಹೊಡೆದು ಹಾಕ್ತೀನಿ ಎಂದು ಧಮ್ಕಿ ಹಾಕೋಕೆ ಶುರು ಮಾಡಿದ. ತಕ್ಷಣವೇ ಪೊಲೀಸರ ನೆರವಿನಿಂದ ಅವನನ್ನು ಉಪಾಯವಾಗಿ ಹೊರ ಹಾಕಿದೆವು .
ಸ್ವಲ್ಪ ನಿರಾಳವಾಗಿ ಉಸಿರಾಡಿದೆವು. ಮತದಾನ ಶಾಂತಯುತವಾಗಿ ನಡೆಯುತ್ತಿತ್ತು. ಆಗ ಬಂದ ನೋಡಿ ಒಬ್ಬ ಪೆಕ್ಯುಲಿಯರ್ ಕ್ಯಾರೆಕ್ಟರ್. ಮತದಾನದ ಮುನ್ನ ನಡೆಯುವ ಎಲ್ಲಾ ಪ್ರಕ್ರಿಯೆಗಳು ಮುಗಿದ ಮೇಲೆ ಇಂಕ್ ಮಾರ್ಕ್ ಕೂಡ ಹಾಕಿಸಿಕೊಂಡು ತೀರ ಬ್ಯಾಲೆಟ್ ಕೊಟ್ಟಾಗ ಬಿ.ಯು. ಹತ್ತಿರ ಹೋಗಿ ಇಷ್ಟೊಂದು ಜನ ಇದ್ದಾರೆ ಯಾರಿಗೆ ವೋಟ್ ಹಾಕುವುದು ನಾನು ಯಾರಿಗೂ ವೋಟ್ ಹಾಕಲ್ಲ ಅಂತ ಹೇಳಿಕೊಂಡು ಹೊರಗಡೆ ಹೋಗುತ್ತಿದ್ದಾನೆ. ಆಗ ತಕ್ಷಣವೇ ಅವನನ್ನು ಬಲವಂತವಾಗಿ ಒಳ ಕರೆತಂದು ಏಜೆಂಟರಿಂದ ಮನವೊಲಿಸಿ ಓಟ್ ಹಾಕಿಸಲಾಯಿತು.

ಉಸ್ಸಪ್ಪಾ ಎಂದುಕೊಂಡು ಕುಳಿತುಕೊಂಡರೆ ಅಷ್ಟರಲ್ಲಿ ಒಬ್ಬ ಮುದುಕ ಬಂದ. ನೋಡಲು ವಿಚಿತ್ರವಾಗಿದ್ದ ಮೆಳ್ಳಗಣ್ಣು, ಸೊಟ್ಟ ಮೂತಿ, ಸಾರಾಯಿ ವಾಸನೆಯಿಂದ ಗಬ್ಬು ನಾತ ಹೊಡೆಯುತ್ತಿದ್ದ. ಬೆಳಿಗ್ಗೆ ಸುಮಾರು 10 – 11 ಗಂಟೆಗೇ ಪರಮಾತ್ಮ ಅವನ ಒಳ ಸೇರಿದ್ದ. ಹಾಗಾಗಿ ವಿಚಿತ್ರ ಹಾವಭಾವ. ಸರಿಯಾಗಿ ನಡೆಯಲೂ ಆಗದೆ ತಟ್ಟಾಡುತ್ತಿದ್ದ. ಎಲ್ಲಿ ಯಾರ ಮೇಲೆ ಬೀಳುತ್ತಾನೋ ಎಂಬಂತೆ. ಸದ್ಯಕ್ಕೆ ಈತ ವೋಟ್ ಮಾಡಿ ಹೊರಗಡೆ ಹೋದರೆ ಸಾಕು ಎಂಬಂತೆ ಆಗಿತ್ತು. ಅಷ್ಟರಲ್ಲಿ ಬಿ. ಯು.( ಬ್ಯಾಲೆಟ್ ಯುನಿಟ್) ಬಳಿ ಹೋದವನೇ “ನಂಗೆ ವೋಟ್ ಹಾಕೋಕೆ ಬರಲ್ಲ ಗೊತ್ತಾಗ್ತಾ ಇಲ್ಲ ಯಾವುದು ಒತ್ತಬೇಕು ಅಂತ” ಎಂದುಕೊಂಡು ಸುಮ್ಮನೆ ನಿಂತುಕೊಂಡೇ ಇದ್ದ. ಆಗ ಅಲ್ಲಿದ್ದ ಏಜೆಂಟರಗಳು ಮೇಡಂ ಸ್ವಲ್ಪ ಹೇಳಿ ಹೋಗಿ ಮೇಡಂ ಮುದುಕನಿಗೆ ಗೊತ್ತಾಗ್ತಾ ಇಲ್ಲ ಅಂದ್ರು. ಸರಿ ನಾನು ಹೋಗಿ ಇದರಲ್ಲಿ ಯಾವುದಾದರೂ ಬಟನ್ ಒತ್ತು ಎಂದೆ. “ಇಲ್ಲ ನಂಗವೆಲ್ಲ ಗೊತ್ತಾಗಕ್ಕಿಲ್ಲ ನೀನೇ ಒತ್ಸು ಅಂತಾನೆ , ಏಜೆಂಟರುಗಳು “ಒತ್ತಿಸಿ ಮೇಡಂ ಪಾಪ ಮುದುಕ” ಅಂತಿದ್ದಾರೆ .ಏನ್ ಮಾಡ್ಲಿ …..ನನ್ ಕರ್ಮ ಅಂದ್ಕೊಂಡು ಆ ಮುದುಕನ ಕೈ ಹಿಡಿದು ಅವನು ಹೇಳಿದ ಸಿಂಬಲ್ ಗೆ ಒತ್ತಿಸಿದೆ. ಆಗ ಮುದುಕ ಈಚೆ ಬರ್ತಾ ತೆಲುಗಿನಲ್ಲಿ ” ಎಟ್ಲ ಮೇಮು, ಮೇಡಮ್ಮು ಚೇಯಿ ಪಟ್ಟುಕೋನಿ ಏಪಿಚ್ಚೆ ” ( ಹೆಂಗೆ ನಾವು…. ಮೇಡಮ್ಮು ಕೈ ಹಿಡಿದುಕೊಂಡು ಒತ್ತಿಸಿದ್ರು ) ಎನ್ನುತ್ತಾ ವಿಚಿತ್ರ ನಗೆ ಬೀರುತ್ತಾ ಹೊರ ಹೋದ. ನನಗಂತೂ ಅಳಬೇಕೋ ನಗಬೇಕೋ ಒಂದೂ ಗೊತ್ತಾಗಲಿಲ್ಲ.
ಮತ್ತೊಬ್ಬ ಮೊಬೈಲ್ ಕೈಯಲ್ಲಿ ಹಿಡಿದು ಒಳ ಬಂದು ” ನಾನು ವೋಟ್ ಹಾಕುತ್ತಿರುವಾಗ ಫೋಟೋ ತೆಗಿ” ಎಂದು ಪಕ್ಕದಲ್ಲಿದ್ದವನಿಗೆ ಫೋನ್ ಕೊಟ್ಟು ಹೇಳುತ್ತಿದ್ದ. ಮೊಬೈಲ್ ಫೋನ್ ಒಳಗಡೆ ಪ್ರವೇಶ ಇಲ್ಲ ಎಂದು ಆಚೆ ಬೋರ್ಡ್ ಹಾಕಿದ್ದರೂ ಫೋನ್ ತಂದು ತಲೆ ಹರಟೆ ಮಾಡುತ್ತಿದ್ದ.” ಯಾಕ್ ತರಬಾರದು ಫೋನ್ , ಏನಾಗುತ್ತೆ ನಾವೂ ನೋಡ್ತೀವಿ ನಮ್ ಫೋನ್ ನಮ್ಮಿಷ್ಟ, ನಿಮ್ ಹತ್ರ ಫೋನ್ ಇಲ್ವಾ ಈಗ, ನಿಮ್ಗೊಂದ್ ನ್ಯಾಯ, ನಮ್ಗೊಂದ್ ನ್ಯಾಯಾನ, ಅವೆಲ್ಲಾ ಆಗಾಕಿಲ್ಲ, ನಾವೂ ತರದೇ… ಏನ್ಮಾಡ್ತೀರಿ ನಾವೂ ನೋಡ್ತೀವಿ” ಎಂದು ಜೋರಾಗಿ ಕೂಗಾಡಿದ. ಅಷ್ಟರಲ್ಲಿಯೇ ವಿಸಿಟ್ ಕೊಟ್ಟ ನಮ್ಮ ರೂಟ್ ಆಫೀಸರ್ ನಿಂದ ನಾವು ಬಚಾವಾದೆವು.” ಮೊಬೈಲ್ ಒಳ ತಂದು ವೋಟು ಹಾಕುವಾಗ ಫೋಟೋ ಸೆರೆ ಹಿಡಿದರೆ ಜೈಲು ಶಿಕ್ಷೆಯಾಗುತ್ತದೆ” ಎಂದು ಎಚ್ಚರಿಕೆ ನೀಡಿದಾಗ ಅಲ್ಲಿಂದ ಅವನು ಜಾಗ ಖಾಲಿ ಮಾಡಿದ. ಇನ್ನೊಬ್ಬ ಬಂದು ನಾನು ಹಾಕಿರುವುದಕ್ಕೆ ವೋಟ್ ಬಿದ್ದಿಲ್ಲ , ಚೀಟೀನೆ ಬೀಳಲಿಲ್ಲ, ನನಗೆ ವೋಟ್ ಹಾಕಿರೋದಕ್ಕೆ ರಿಪೋರ್ಟ್ ಕೊಡ್ರಿ ಎಂದು ಗಲಾಟೆ ಮಾಡತೊಡಗಿದ. ಓಟ್ ಹಾಕಿದ 8 ಸೆಕೆಂಡ್ಗಳಲ್ಲಿ ಸ್ಲಿಪ್ ಬೀಳುತ್ತದೆ. ಆಗ ನೀನು ನೋಡಿಕೊಳ್ಳಬೇಕಿತ್ತು, ನೀನು ನೋಡಿಕೊಂಡಿಲ್ಲ ಅಂದ್ರೆ ನಾವೇನು ಮಾಡಕ್ಕಾಗಲ್ಲ, ಎಂದು ಹೇಳಿ ಸಮಾಧಾನ ಮಾಡಿ ಕಳಿಸಿಕೊಟ್ಟಿದ್ದಾಯ್ತು . ಹೀಗೆ ಒಬ್ಬರ ನಂತರ ಒಬ್ಬರು ವಿಚಿತ್ರ ಪಾತ್ರಧಾರಿಗಳು ಬಂದು ಈ ಸಲದ ಚುನಾವಣೆ ಒಂದು ಪ್ರಹಸನವಾಗಿತ್ತು. ಒಟ್ಟಿನಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಒಂದಷ್ಟು ಅಡೆತಡೆಗಳೊಂದಿಗೆ, ಕೆಲವು ಕ್ಷಣ ಹಾಸ್ಯ ಕೆಲವು ಕ್ಷಣ ಆತಂಕದೊಂದಿಗೆ ನಿರ್ವಿಘ್ನವಾಗಿ ನೆರವೇರಿತು.
- ಸರ್ವಮಂಗಳ ಜಯರಾಮ್ – ಶಿಕ್ಷಕಿ, ಗೌರಿಬಿದನೂರು.
