‘ಈ ಚಳಿಯಲ್ಲಿ ನಿನ್ನದೇನು ಲೀಲೆಯೋ…ನಿನ್ನ ಬಿಟ್ಟಿರಲಾರೆ ಯಾವ ಮಾಯಾಜಾಲವೋ’… ಸುಮ ಉಮೇಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಓದಿ…
ಮುಂಜಾವಿನ ಸವಿ ನಿದ್ರೆಯಲೂ
ನಿನ್ನನ್ನು ನನ್ನಲ್ಲಿ ಒಂದಾಗಿಸಿಕೊಳ್ಳುವ ತವಕ
ಕಾಯಲಾರೆ ತುಂಬಾ ಹೊತ್ತಿನ ತನಕ
ಬಾರಿ ಬಾರಿಗೂ ಅದೇನು ಮೋಹವೋ
ಈ ಚಳಿಯಲ್ಲಿ ನಿನ್ನದೇನು ಲೀಲೆಯೋ
ನಿನ್ನ ಬಿಟ್ಟಿರಲಾರೆ ಯಾವ ಮಾಯಾಜಾಲವೋ
ಮುಸ್ಸಂಜೆಗೆ ರವಿ ಹೊರಡುವ ಮುನ್ನವೇ
ಮತ್ತೆ ನಿನ್ನನಪ್ಪುವ ಪುಳಕ
ಆಹಾ ನಿನ್ನ ನೆನೆದರೆ ರೋಮಾಂಚನ
ಹೇಳಲಿ ಸುಳ್ಯಾಕ
ಘಮಘಮಿಪ ಪುಡಿಗೆ ಬೆರೆಸಿ ಬಿಸಿನೀರ
ಬೇಕೇ ಬೇಕು ಗಟ್ಟಿ ಕೆನೆಭರಿತ ಕ್ಷೀರ
ಹೆಚ್ಚೇನೂ ಬೇಡ, ಸಾಕು ತುಸುವೇ ಶರ್ಕರ
ನಿನ್ನ ಹೀರಿದೊಡನೆ ಕಳೆವುದು ಮನಸ್ಸಿನ ಭಾರ
ಒಮ್ಮೆ ಸವಿದರೆ ಮತ್ತೆ ಬೇಕೆನ್ನುವ ಚಪಲ
ಹೇ.. ಪ್ರಿಯ ಕಾಫಿಯೇ, ನೀನಿದ್ದರೆ ಸಾಕು
ಹಿಡಿದ ಕೆಲಸಗಳೆಲ್ಲ ಸಫಲ
- ಸುಮ ಉಮೇಶ್
