ಅಂದು ನಮಗೆ ಸಂಭ್ರಮದ ದಿನ. ನಾನು, ನನ್ನ ಹೆಂಡತಿ , ಮಗಾ, ನನ್ನ ಎರಡನೇ ಮಗಳು ಮತ್ತು ಅವಳ ಆರು ತಿಂಗಳ ಮಗುವಿನ ಜೊತೆ ಲಂಡನ್ನಿಗೆ ಹೋಗುವ ತಯಾರಿಯಲ್ಲಿದ್ದೆವು. ಲೇಖಕ ದೇವರಾಜಚಾರ್ ಅವರು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ ಅನುಭವವನ್ನುಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮೊದಲ ಅನುಭವ ಸುಂದರ, ಮಧುರವಲ್ಲವೇ?…
ಮಗಳಿಂದ, ಯಾವ್ಯಾವ ವಸ್ತುಗಳು ಕ್ಯಾಬಿನ್ನಿಗೆ ತೆಗೆದುಕೊಂಡು ಹೋಗುವಂತಿಲ್ಲ. ವಿಮಾನದ ಲಗೇಜ್ ಬಿನ್ನಿಗೆ ಯಾವುದು ಕೊಡಬೇಕು ಎಂದು ತಿಳಿದುಕೊಂಡು ವಿಂಗಡಿಸಿದೆವು. ರಾತ್ರಿ ೩ ಗಂಟೆಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆವು. ವಿಮಾನವು ಮರುದಿನ ಮಾರನೆಯ ದಿನ ಬೆಳಿಗ್ಗೆ ೭ ಗಂಟೆಗೆ ಹೊರಡುವುದಿತ್ತು. ನಮ್ಮನ್ನು ಗೇಟ್ ನಲ್ಲಿ ಪಾಸ್ ಪೋರ್ಟ್, ವೀಸಾ, ಏರ್ ಟಿಕೆಟ್ ಇತ್ಯಾದಿ ಪರಿಶೀಲಿಸಿ ಒಳಗೆ ಬಿಡುತ್ತಿದ್ದರು. ಒಳಗಡೆ ಎರಡು ವಿಭಾಗಗಳಿರುತ್ತವೆ. ಒಂದು ದೇಶದ ಒಳಗಿನ ಸ್ಥಳಗಳಿಗೆ ಹೋಗುವಂತದ್ದು, ಮತ್ತೊಂದು ವಿದೇಶ ಪ್ರಯಾಣ ಬೆಳೆಸುವಂಥದ್ದು. ವಿದೇಶಕ್ಕೆ ಹೋಗುವ ಪ್ರಯಾಣದ ಕೌಂಟರ್ ಗೆ ಹೋಗಿ ನೋಡಿದೆವು.

ಫೋಟೋ ಕೃಪೆ : cntraveler
ಅಲ್ಲಿ ಜನಸಂದಣಿ ಬಹಳವಿತ್ತು. ಅಲ್ಲೂ ಸಹ ಎರಡು ರೀತಿಯ ಸಾಲುಗಳಿದ್ದವು. ವಿಚಾರಿಸಿದಾಗ ಮೊದಲೇ, ಜಾಲ ತಾಣದಲ್ಲಿ ಸೀಟು ಗುರುತಿಸಿ ಕೇವಲ ಲಗೇಜ್ ಡ್ರಾಪ್ ಮಾಡುವುದು ಆಗಿತ್ತು.ಲಗೇಜ್ ಡ್ರಾಪ್ ಮಾಡಿದ ಮೇಲೆ ವಿಮಾನದ ಬೋರ್ಡಿಂಗ್ ಪಾಸ್ ತೆಗೆದುಕೊಂಡು ಹೋಗುತ್ತಾರೆ. ನಾವು ಜಾಲತಾಣದಲ್ಲಿ ಸೀಟ್ ಗುರುತಿಸಿಲ್ಲವಾದ್ದರಿಂದ, ಎರಡನೇ ಜಾಗದ ಸರತಿಯ ಸಾಲಿನಲ್ಲಿ ನಿಂತಿದ್ದೆವು.
ಅಲ್ಲೂ ಸಹ ಜನರು ಇದ್ದರು. ಹೀಗಾಗಿ ನಮ್ಮ ಹತ್ತಿರ ಒಂದು ಸಣ್ಣ ಮಗುವಿದೆ ಎಂದು ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ಅವರು ಸ್ಪಂದಿಸಿ ಸರತಿ ಸಾಲಿನಿಂದ ಹೊರಗೆ ಕರೆದುಕೊಂಡು ಹೋದರು. ನೇರವಾಗಿ ಒಂದು ಕೌಂಟರ್ ಮುಂದೆ ನಿಲ್ಲಿಸಿದರು. ಅಲ್ಲಿ ಲಗೇಜ್ ಪರಿಶೀಲಿಸಿ ತೆಗೆದುಕೊಂಡು ಸೀಟ್ ಅಲಾಟ್ ಮಾಡಿದರು. ನಾವು ಸಣ್ಣ ಪುಟ್ಟ ಲಗೇಜ್, ಲ್ಯಾಪ್ ಟಾಪ್ ಇತ್ಯಾದಿಯನ್ನು ತೆಗೆದುಕೊಂಡು ಸೆಕ್ಯೂರಿಟಿ ಚೆಕ್ಕಿಂಗ್ ಗೆ ಹೋದೆವು. ಅಲ್ಲಿನ ಭದ್ರತಾ ಸಿಬ್ಬಂದಿ ಪರಿಶೀಲಿಸಿ, ನಮ್ಮಲ್ಲಿದ್ದ ಮೊಬೈಲ್ಸ, ಲ್ಯಾಪ್ ಟಾಪ್ ಇತ್ಯಾದಿಯನ್ನು ಕನ್ವೇಯರ್ ಬೆಲ್ಟ್ ನಲ್ಲಿಟ್ಟು ಪರಿಶೀಲಿಸಿದರು.
ಈ ಪ್ರಕ್ರಿಯೆ ಮುಗಿದ ನಂತರ ನೇರವಾಗಿ ವಿಮಾನದ ಗೇಟ್ ಹತ್ತಿರ ಹೋದೆವು. ಅಲ್ಲಿ ವಿದೇಶಕ್ಕೆ ಹೋಗುವ ವಿಮಾನ ಹತ್ತಿರದಲ್ಲೇ ಇತ್ತು. ನಾವು ವಿಮಾನದ ಒಳಗೆ ಪ್ರವೇಶಿಸಿದಾಗ, ಪರಿಚಾರಕಿಯರು ನಮ್ಮನ್ನು ಸ್ವಾಗತಿಸಿದರು. ನಮಗೆ ದೇಶದ ಒಳಗಡೆ ವಿಮಾನದಲ್ಲಿ ಹೋಗಿ ಅನುಭವವಿತ್ತು. ವಿದೇಶಕ್ಕೆ ಹೋಗುವ ಅನುಭವ ಇದದ್ದು ಮಗಳು ಒಬ್ಬಳಿಗೆ ಮಾತ್ರ. ವಿಮಾನದ ಸಿಬ್ಬಂದಿ ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳಲ್ಲಿ ನಮಗೆ ತಿಳಿ ಹೇಳಿ, ಲಂಡನ್ನಿನ ಬಗ್ಗೆ ಒಂದೆರಡು ಮಾತು ಹೇಳುತ್ತಿದ್ದರು. ಸರಿಯಾಗಿ ಬೆಳಿಗ್ಗೆ ೭ ಗಂಟೆಗೆ ವಿಮಾನ ಹೊರಟಿತು.
ಇನ್ನೂರ ಎಪ್ಪತ್ತು ಸೀಟುಗಳು ಭರ್ತಿಯಾಗಿದ್ದವು. ಮಗುವಿನ ವಯಸ್ಸು ಎರಡು ವರ್ಷ ತುಂಬದಿದ್ದುದರಿಂದ ಸ್ವಲ್ಪವೇ ಹಣ ತೆಗೆದುಕೊಂಡು ಒಂದೇ ಸೀಟ್ ಕೊಟ್ಟಿದ್ದರು. ಅದು ತೊಟ್ಟಿಲಿನ ರೀತಿಯಿತ್ತು. ನಮಗೆ ಭಯಇತ್ತು. ಮಗುವಿನ ವಿಷಯದಲ್ಲಿ, ಕಾರಣ ಅದು ಆರು ತಿಂಗಳ ಮಗು ಎಲ್ಲಿ ಗಲಾಟೆ ಮಾಡುತ್ತದೋ, ಹೇಗೆ ಸುಧಾರಿಸುವುದು ಎಂದು ಯೋಚನೆ ಇತ್ತು. ಸುಮಾರು ೮.೩೦ ಕ್ಕೆ ತಿಂಡಿ ಕೊಟ್ಟರು. ಜತೆಗೆ ಕಾಫಿ ಕೊಟ್ಟರು. ವಿಮಾನ ಒಂದೇ ಎತ್ತರದಲ್ಲಿ ಗಂಟೆಗೆ ಒಂದು ಸಾವಿರ ಕಿಲೋ ಮೀಟರ್ ವೇಗದಲ್ಲಿ ಓಡುತ್ತಿತ್ತು.

ಮಾಮೂಲಿನಂತೆ ಪ್ರಯಾಣಿಕರು ಅತ್ತಿಂದಿತ್ತ- ಇತ್ತಿಂದತ್ತ ಓಡಾಡುತ್ತಿದ್ದರು. ಸುಮಾರು ಹನ್ನೊಂದು ಗಂಟೆಗೆ ವಿವಿಧ ರೀತಿಯ ಪಾನೀಯಗಳನ್ನು (ಶರಬತ್ತು) ಕೊಟ್ಟರು. ಹೆಚ್ಚಿನ ಪ್ರಯಾಣಿಕರು ಇಂಡಿಯಾದವರೇ ಅಗಿದ್ದರು. ಹೆಚ್ಚಿನ ಪ್ರಯಾಣಿಕರಿಗೆ ವಿದೇಶ ಪ್ರಯಾಣದ ಅರಿವು ಇತ್ತು. ಎರಡು ಗಂಟೆಗೆ ಸ್ನ್ಯಾಕ್ಸ್ ಕೊಟ್ಟರು. ಅದಾದ ನಂತರ ಊಟ ಬಂತು. ಎರಡೂ ರೀತಿಯ ಅಂದರೆ ಮಾಂಸಾಹಾರಿ- ಸಸ್ಯಾಹಾರಿ ಊಟವೂ ಇತ್ತು. ಆಯ್ಕೆ ಪ್ರಯಾಣಿಕರಾದಾಗಿತ್ತು .
ಲಂಡನ್ ಹತ್ತಿರವಾಗುತ್ತಿದ್ದಂತೆ, ಅಲ್ಲಿನ ಹವಾಮಾನ ಇತ್ಯಾದಿ ವಿವರಗಳನ್ನು ಪ್ರಚಾರ ಮಾಡಿದರು. ಸರಿಯಾಗಿ ೬ ಗಂಟೆಗೆ ವಿಮಾನ ಲ್ಯಾಂಡ್ ಆಯಿತು. ಕೆಳಗೆ ಇಳಿದೆವು. ಬ್ರಿಟಿಷ್ ಪ್ರಜೆಗಳು ಅಲ್ಲದವರು ಇಮಿಗ್ರೇಷನ್ ಸೆಂಟರ್ ಗೆ ಹೋಗಬೇಕೆಂದು ಮಗಳು ತಿಳಿಸಿದಳು. ಅಲ್ಲಿಂದ ಟ್ರೈನ್ ನಲ್ಲಿ ಸೆಂಟರ್ ಗೆ ಹೋಗಿ, -೨ ನೆಲಮಹಡಿಗೆ ತಲುಪಿದೆವು. ಮೊದಲು ಫ್ರೆಶ್ ಆದೆವು. ನಾವು ತಲುಪಿದ ವಿಷಯವನ್ನು ಅಲ್ಲಿ ಕಾಯುತ್ತಿದ್ದ ಅಳಿಯಂದಿರಿಗೆ ತಿಳಿಸಲಾಗಲಿಲ್ಲ.

ಫೋಟೋ ಕೃಪೆ : Times of India
ಕಚೇರಿಗೆ ಹೋಗಿ ಸಾಲಿನಲ್ಲಿ ನಿಂತೆವು. ಅಲ್ಲೂ ಸಹ ಸುಮಾರು ಜನರು ಇದ್ದರು. ಅಲ್ಲಿನ ಸಿಬ್ಬಂದಿಯೊಬ್ಬರು ಮಗುವನ್ನು ನೋಡಿ, ಮಗುವಿನ ಜತೆ ಒಂದಿಬ್ಬರನ್ನು ಬೇರೆ ಕಡೆ ಕರೆದುಕೊಂಡು ಹೋದರು. ನೇರವಾಗಿ ಅವರಿಗೆ ಪರ್ಮಿಷನ್ ಕೊಡಿಸಿದರು. ನಾನು ಮತ್ತು ಮಗನು ಸರದಿಯಲ್ಲಿ ನಿಂತೆವು. ನನ್ನ ಪಾಸ್ ಪೋರ್ಟ್, ವೀಸಾ ಪರಿಶೀಲಿಸಿ ನೀವು ಏಕೆ ಎರಡು ತಿಂಗಳು ಉಳಿಯಬೇಕು ಎಂದರು. ನಾನು ಹೇಳಿದೆ, ಮಗಳಿಗೆ ಸಣ್ಣ ಮಗು ಇರುವುದರಿಂದ,ಸಹಾಯ ಮಾಡುವ ಸಲುವಾಗಿ. ಅವರೆಲ್ಲಿ? ಎಂದು ಕೇಳಿದರು. ನಾನು ವಿಷಯ ತಿಳಿಸಿದಾಗ, ಒಬ್ಬ ಸಿಬ್ಬಂದಿಯನ್ನು ಒಳಕಳುಹಿಸಿ ಪರಿಶೀಲಿಸಿದರು. ಅಂತೂ ಕೊನೆಗೆ ಮೊಹರು ಬಿತ್ತು.
ನಂತರ ಎಲ್ಲರೂ ಲಗೇಜ್ ಸ್ಥಳಕ್ಕೆ ಹೋದೆವು. ಸಮಯ ನೋಡಿದಾಗ ರಾತ್ರಿ ೮ ಮೂವತ್ತು ಆಗಿತ್ತು. ಲಗೇಜ್ ತೆಗೆದುಕೊಂಡು ನಿಲ್ದಾಣದ ಹೊರಗಡೆ ಹೋದೆವು. ಅಲ್ಲಿ ನಮ್ಮ ಅಳಿಯ ನಮಗಾಗಿ ಕಾಯುತ್ತಿದ್ದರು. ಹೂಗುಚ್ಛ ನೀಡಿ ಬರಮಾಡಿಕೊಂಡರು. ಹೊರಗಡೆ ನೋಡಿದಾಗ ಹಗಲು ರೀತಿ ಇತ್ತು. ಅಲ್ಲಿ ಲಂಡನ್ ವೇಳೆ ಮೂರು ಗಂಟೆ ಅಂತ ತಿಳಿಯಿತು. -2ಅಂತಸ್ತಿನಿಂದ ಭೂಮಟ್ಟದ ರಸ್ತೆಗೆ ತಲುಪಿದೆವು.
ಅಲ್ಲಿಗೆ ಗೊತ್ತು ಮಾಡಿದ್ದ ಟ್ಯಾಕ್ಸಿ ಬಂತು. ಟ್ಯಾಕ್ಸಿಯಲ್ಲಿ ಎಲ್ಲರೂ ಆಸೀನರಾದೆವು. ಮಗುವಿಗಾಗಿ ಒಂದು ಬೇರೆಯದೇ ಆದ ಸೀಟ್ ಇತ್ತು. ಒಂದೂವರೆ ಗಂಟೆ ಪ್ರಯಾಣದ ಬಳಿಕ ಮನೆ ಸಿಕ್ಕಿತು. ಹೊರಗಡೆ ಇಳಿದಾಗ ಚಳಿಯ ಪ್ರಮಾಣ ಗೊತ್ತಾಯಿತು. ಮನೆ ತಲುಪಿ ತಿಂಡಿ ಮಾಡಿ ತಿಂದು ವಿಶ್ರಮಿಸಿದೆವು. ಹೀಗಿತ್ತು… ನಮ್ಮ ಪ್ರಯಾಣದ ಅನುಭವ.
- ದೇವರಾಜಚಾರ್, ಮೈಸೂರು.
