ಸೋದರಮಾವನ ಮಗನನ್ನು ಮದುವೆಯಾಗಿರುವ ನಾನು ಮದುವೆಗೆ ಮುಂಚೆ ಉಮೇಶ ಹೋಗು ಬಾ ಅಂತಿದ್ದವಳು ವರಪೂಜೆ ದಿನದಿಂದಲೇ ಸಂಬೋಧಿಸುವ ರೀತಿಯನ್ನು “ಬನ್ನಿ ಹೋಗಿ” ಎಂದು ಬದಲಾಯಿಸಿಕೊಂಡೆ. ಆದರೆ ಈಗ ಹೆಂಡತಿಯನ್ನು ಲೇ, ಹೋಗೇ, ಬಾರೇ ಎನ್ನುವಂತಿಲ್ಲವಂತೆ, ಹೀಗೊಂದು ಕಾನೂನು 2005 ರಿಂದಲೂ ಜಾರಿಯಲ್ಲಿದೆಯಂತೆ.ಸುಮ ಉಮೇಶ್ ಅವರ ಲೇಖನಿಯಲ್ಲಿ ಹೀಗೂ ಉಂಟೆ, ತಪ್ಪದೆ ಮುಂದೆ ಓದಿ…
ಅಲ್ಲಾ.. ಹೆಂಡತಿಯನ್ನಲ್ಲದೇ ಪಕ್ಕದ ಮನೆ ಮಹಿಳೆಯನ್ನು ಹೀಗೆ ಕರೆಯಲು ಸಾಧ್ಯವೇ.. ಪತಿ ಪತ್ನಿಯ ನಡುವೆ ಒಂದು ಸುಂದರ ಬಾಂಧವ್ಯ ಏರ್ಪಡಲು ಏಕವಚನ ಪ್ರಯೋಗ ತಪ್ಪೇನಿಲ್ಲ ಎಂದು ನನ್ನ ಅನಿಸಿಕೆ. “ಲೇ” ಅಂದೋರೆಲ್ಲಾ ಪತ್ನಿ ಪೀಡಕರಲ್ಲ.. ಹೆಂಡತಿಯನ್ನು ಹೋಗಿ ಬನ್ನಿ ಅಂದೋರೆಲ್ಲ ಆಕೆಯನ್ನು ಪೂಜನೀಯ ಸ್ಥಾನದಲ್ಲಿ ಇಟ್ಟಿದ್ದಾರೆ ಎಂದು ಹೇಳಲಾಗದು. ಹತ್ತು ಜನರ ಎದುರು ಹೋಗ್ರಿ ಬನ್ರೀ ಎನ್ನುತ್ತಾ ಇಬ್ಬರೇ ಇದ್ದಾಗ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ನಿಂದಿಸೋರಿಗಿಂತ ಯಾವಾಗಲೂ ಒಂದೇ ರೀತಿಯ ಪ್ರೀತಿ ತೋರುತ್ತಾ “ಹೋಗೇ, ಬಾರೆ” ಎಂದು ಸಂಭೋಧಿಸುವುದು ಎಷ್ಟೋ ಉತ್ತಮ. ಹೆಂಡತಿಯರೇ ಗಂಡನನ್ನು ಅವನು, ಇವನು ಅಥವಾ ಹೆಸರನ್ನು ಮೊಟಕುಗೊಳಿಸಿ ಕರೆಯುವ ಈ ಕಾಲದಲ್ಲಿ ಗಂಡ ಕರೆದರೆ ಮಾತ್ರ ತಪ್ಪೆ?? ಹೀಗೆ ಏಕವಚನದಲ್ಲಿ ಕರೆಯೋದು ಅಷ್ಟು ಸುಲಭ ಕೂಡ ಅಲ್ಲ.. ಮನಸ್ಸಿಗೆ ಹತ್ತಿರವಾದವರನ್ನು ಮಾತ್ರ ಹೀಗೆಲ್ಲ ಕರೆಯಲು ಸಾಧ್ಯ.. ಇದೆಲ್ಲ ಕೋರ್ಟ್ಗೆ ಹೇಗೆ ಅರ್ಥವಾಗುತ್ತೆ. ಗೊರಕೆ ಹೊಡೆಯುವ ಗಂಡನ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದು ಕೇಳಿದ್ದೇನೆ. ಒಲ್ಲದ ಹೆಂಡತಿಗೆ ಮೊಸರಲ್ಲಿ ಕಲ್ಲು ಎನ್ನುವ ಹಾಗೆ ಈಗ ಗಂಡ ತನ್ನನ್ನು ಏಕವಚನದಲ್ಲಿ ಕರೆಯುತ್ತಾನೆ ಎನ್ನುವುದನ್ನೇ ಅಸ್ತ್ರವಾಗಿಸಿ ಕೊಳ್ಳಲು ಈ ಕೋರ್ಟ್ ಆದೇಶ ಉಪಯೋಗಕಾರಿ (ಅಪಾಯಕಾರಿ) ಎನಿಸುತ್ತದೆ.
ಇನ್ನು ಕೆಲವರು baby, ಜಾನು, sweet heart, ಹನಿ..ಎಂದೆಲ್ಲಾ ಕರೆಯುತ್ತಾರಂತೆ. ನನ್ ಸ್ನೇಹಿತೆ ಒಬ್ಬಳು ಗಂಡನನ್ನು ಎಲ್ಲರೆದುರು ಇವತ್ತಿಗೂ “ರಾಜ (pet name) . ಹೋಗು ಬಾ” ಅಂತನೇ ಕರೆಯುವುದು. ಕೆಲವೊಮ್ಮೆ “ರಾಜೇಶ ಬಂದ ಹೋದ” “ಅವನು ಹೀಗಂದ ಹಾಗಂದ” ಎನ್ನುವುದನ್ನು ಕೇಳಿದ್ದೇನೆ. ಎಷ್ಟೋ ಸಾರಿ… ಏ ಹೋಗೋ.. ಅಂದಿದ್ದೂ ಇದೆ.. ಹಾಗಾದರೆ ಗಂಡನ ಮೇಲೆ ಪ್ರೀತಿ ಗೌರವ ಇಲ್ಲದೆ ಹೀಗೆ ಕರೆಯುತ್ತಾರೆ ಅಂತ ಅರ್ಥವೇ.?? ಅವಳ ಗಂಡ ಕೂಡ ಕೋರ್ಟ್ ಮೆಟ್ಟಿಲು ಹತ್ತಬಹುದೇ..?? ಅವರಿಬ್ಬರೂ family friends ಆದ್ರಿಂದ, ಚಿಕ್ಕ ವಯಸ್ಸಿನಿಂದಲೂ ಜೊತೆಯಲ್ಲಿ ಆಡಿ ಬೆಳೆದವರು. ಆಗ ಹೇಗೆ ಕರೀತಿದ್ಲೋ ಅದೇ ಮದುವೆಯಾದ ಮೇಲೂ ಮುಂದುವರಿದಿದೆ. ಹೀಗೆ ಕರೆಯಲು ಅವರ ಮನೆಯಲ್ಲಿ ಹಿರಿಯ ಆಕ್ಷೇಪಣೆ ಕೂಡ ಇರಲಿಲ್ಲ.
ಸೋದರಮಾವನ ಮಗನನ್ನು ಮದುವೆಯಾಗಿರುವ ನಾನು ಮದುವೆಗೆ ಮುಂಚೆ ಉಮೇಶ ಹೋಗು ಬಾ ಅಂತಿದ್ದವಳು ವರಪೂಜೆ ದಿನದಿಂದಲೇ ಸಂಬೋಧಿಸುವ ರೀತಿಯನ್ನು “ಬನ್ನಿ ಹೋಗಿ” ಎಂದು ಬದಲಾಯಿಸಿಕೊಂಡೆ. ಇದು ಯಾರ ಸಲಹೆ ಅಥವಾ ಒತ್ತಡದಿಂದ ಆದ ಬದಲಾವಣೆ ಅಲ್ಲ.. ಇದು ನನ್ನ ಸ್ವಂತ ಇಚ್ಛೆಯಾಗಿತ್ತು. ಇದರಿಂದ ಉಮೇಶ್ ರವರಿಗೆ ಬಹಳ ಖುಷಿ ಅಗಿತ್ತು ಎಂದು ನೆನಪಿದೆ.. ಹಾಗಂತ ಇವರು ಸುಮ ಬನ್ನಿ ಎಂದು ಕರೆಯಲಿ ಎಂದು ಯಾವತ್ತು ನಾನು expect ಮಾಡಲಿಲ್ಲ.. ಹಾಗೆಲ್ಲ ಕರೆಯುವುದು ನಂಗೆ ಇಷ್ಟ ಕೂಡ ಇಲ್ಲ.

ಫೋಟೋ ಕೃಪೆ : google
ಎಲ್ಲರೂ ಪತ್ನಿಯ ಹೆಸರು ಹಿಡಿದು ಕರೆಯುತ್ತಾರೆ…. ಆಹಾ.. ಕರ್ಣಾನಂದ. ಕೇಳಲು ಆಪ್ಯಾಯಮಾನವಾಗಿರುತ್ತೆ. ಅಥವಾ ಹೆಸರು ಮೊಟಕುಗೊಳಿಸಿ ಕರೆಯುವುದು ಕೂಡ ಪತಿ ಪತ್ನಿ ಸಂಬಂಧವನ್ನು ಇನ್ನೂ ಹತ್ತಿರವಾಗಿಸುತ್ತೆ. “ನನ್ನವಳು” ಎನ್ನುವ ಭಾವ ಎದ್ದು ಕಾಣುತ್ತದೆ.. ಹೆಸರು ಹಿಡಿದು ಕರೆಯುವುದರಲ್ಲಿ ಇರುವ ಆನಂದ, ಆಪ್ಯಾಯತೆ ಹೋಗಿ ಬನ್ನಿ ಅಂತ ಕರೆಯುವುದರಲ್ಲಿ ಇರುವುದಿಲ್ಲ. ಪರಸ್ಪರ ಗೌರವ, ಹೊಂದಾಣಿಕೆ, ಪ್ರೀತಿ ಇದ್ದರೆ ಹೇಗೆ ಕರೆದರೇನು ಅಲ್ಲವೇ.
ಪಾಶ್ಚಾತ್ಯರು ಅಥವಾ ಅಲ್ಲೇ ಹುಟ್ಟಿದ ನಮ್ಮ ಭಾರತದ ಕಂದಮ್ಮಗಳು ದೊಡ್ಡಮ್ಮ ದೊಡ್ಡಪ್ಪ ಚಿಕ್ಕಪ್ಪ ಎಲ್ಲರನ್ನೂ ಮಿಸ್ಟರ್ ಮಿಸ್ ಸೇರಿಸಿ ಕರೆದು ಬಿಡುತ್ತಾರೆ. ಇಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ. ಇನ್ನು ಗಂಡ ಹೆಂಡತಿಯನ್ನು ಹೋಗಿ ಬನ್ನಿ ಎಂದು ಕರೆಯಲು ಶುರುವಿಟ್ಟುಕೊಂಡರೆ ಮಕ್ಕಳು ಹೆತ್ತ ತಾಯಿಯನ್ನು “ಅಮ್ಮ” ಎನ್ನುವ ಭಾವನಾತ್ಮಕ ಕರೆ ಬಿಟ್ಟು Mrs Umesh, Mrs Prasad, ಅಥವಾ ಮೇಡಂ ಅಂತ ಕರೆದರೆ ಹೇಗಿರ ಬಹುದು ಅಂತ ಕಲ್ಪನೆ ಮಾಡಿ ಕೊಳ್ಳುತ್ತಿದ್ದೇನೆ.
ಹೆಂಡತಿಯನ್ನು ಹೋಗೆ ಬಾರೆ ಎಂದು ಕರೆಯುವ ಎಷ್ಟೋ ಜನ ಹಿರಿಯರು ಹೊರಗಡೆ ಮಾತನಾಡುವಾಗ ನಮ್ ಮನೆಯಾಕೆ ಹೀಗೆ ಹೇಳಿದರು , ನಮ್ ಮನೆಯವರು ಬರಲಿಲ್ಲ, ನನ್ನ ಶ್ರೀಮತಿಗೆ ಹುಷಾರ್ ಇಲ್ಲ..ಎಂದು ಗೌರವದಿಂದ ಹೇಳುವುದನ್ನು ಕೇಳಿದ್ದೇನೆ. ನಾನು ನನ್ನ ಶಾಲೆ ಮತ್ತು ಸ್ನೇಹ ಬಳಗದಲ್ಲಿ “ನಮ್ ಮನೆಯವರು” ಎಂದಾಗ ನನ್ನ close friends ಕಿಸಕ್ ಅಂತ ನಗುತ್ತಾರೆ.. ಏನೇ.. ನೀನು.. ಪಕ್ಕಾ traditional ಹೆಂಡತಿ ಅಂತ ನನ್ನ ಕಾಲೆಳೆಯುತ್ತಾರೆ. ಹಾಗಾಗಿ ಸ್ನೇಹಿತೆಯರ ಬಳಗದಲ್ಲಿ “ಉಮೇಶ್” ಎನ್ನುತ್ತೇನೆ. ಯಾರಿಗೆ ಹೇಗೆ ಅನುಕೂಲ (comfortable) ಅನ್ನಿಸುತ್ತೋ ಹಾಗೆ ಕರೆಯುತ್ತಾ ಸಂಬಂಧಗಳ ಗಟ್ಟಿ ಗೊಳಿಸಿಕೊಂಡರೆ ಸಾಕಲ್ವಾ.

ಫೋಟೋ ಕೃಪೆ : google
ಅಂದ ಹಾಗೆ ನಿಮ್ಮ ಪತಿರಾಯರು/ಪತ್ನಿ ನಿಮ್ಮನ್ನು ಪ್ರೀತಿಯಿಂದ ಹೇಗೆ ಕರೆಯುತ್ತಾರೆ ಅಂತ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ.. ಮತ್ತು ಈ ಬರಹದ ಬಗ್ಗೆ ನಿಮ್ ಅಭಿಪ್ರಾಯ ತಿಳಿಸಿ ಎಂದು ಹೇಳುತ್ತಾ ಹೊರಡುತ್ತೇನೆ. ಉಮೇಶ್ ಕರೀತಿದ್ದಾರೆ… Coffee ಕೊಡು ಅಂತ..ಅಷ್ಟೇ.. (ಅವರು ನನ್ನ ಹೆಸರು ಮರೆತಿದ್ದಾರೆ)ಆಗಾಗ ನನ್ ಹೆಸರು ಏನ್ಹೇಳಿ ಅಂತ ದುಂಬಾಲು ಬೀಳ್ತೀನಿ. ನಾಚುತ್ತಾ ಹೇಳುತ್ತಾರೆ.. ಕಾಟಮ್ಮ.. ಕುಳ್ಳಿ..ಇನ್ನು ಏನೇನೋ. ಮಗನ ಹತ್ರ ಹೇಳುವಾಗ “ನಿಮ್ ಅಮ್ಮ”.
ಎಲ್ಲೋ ಓದಿದ ಒಂದು ಜೋಕ್ ನೆನಪಾಯಿತು. ಒಬ್ಬಳು ಪಕ್ಕದ ಮನೆಯ ಅಜ್ಜಿಯೊಡನೆ ಮಾತನಾಡುವಾಗ “ನನ್ ಗಂಡ ಬೆಳಿಗ್ಗೆ 7 ಕ್ಕೆ ಕೆಲಸಕ್ಕೆ ಹೋಗುತ್ತಾನೆ. ಸಂಜೆ 7 ಕ್ಕೆ ಬರ್ತಾನೆ ಅಜ್ಜಿ” ಅಂದಳಂತೆ. ಹಳೆಯ ಕಾಲದ ಅಜ್ಜಿಗೆ ಏನೋ ಒಂಥರಾ ಇರುಸು ಮುರುಸಾಗಿ ಲೋಕಾರೂಢಿಯಂತೆ ಉಪದೇಶ ಮಾಡಿದರು. “ಹಾಗೆಲ್ಲ ಗಂಡನಿಗೆ ಏಕವಚನ ಬಳಸಬಾರದಮ್ಮ, ನಮ್ ಕಾಲದಲ್ಲಿ ಹಾಗೆ ಹೀಗೇ” ಅಂತ. ಚೂರು ಬೇಸರವಿಲ್ಲದೆ ಹುಡುಗಿ ಉತ್ತರಿಸಿದಳಂತೆ. “”ಸರಿ ಅಜ್ಜಿ…ನನ್ ಗಂಡಂದಿರು ಬೆಳಿಗ್ಗೆ ಏಳಕ್ಕೆ ಮನೆ ಬಿಡುತ್ತಾರೆ. ರಾತ್ರಿ ಏಳಕ್ಕೆ ನನ್ ಗಂಡಂದಿರು ಮನೆಗೆ ಬರುತ್ತಾರೆ” ಅಂತ. ತಬ್ಬಿಬ್ಬಾದ ಅಜ್ಜಿ “ಬೇಡಮ್ಮಾ..ನೀನು ಮುಂಚೆ ಹೇಗೆ ಹೇಳುತಿದ್ಯೋ ಹಾಗೇ ಹೇಳು ” ಎನ್ನುತ್ತಾ ಅಲ್ಲಿಂದ ಜಾಗ ಖಾಲಿ ಮಾಡಿದರಂತೆ.
ಹಾ.. ಇನ್ನೊಂದು ವಿಷಯ ನೆನಪಾಯಿತು.. ಹಿಂದಿಯ ಕೆಲ ಧಾರಾವಾಹಿಯಲ್ಲಿ ನಾನು ಗಮನಿಸಿದ ಅಂಶ.. ಗಂಡ ಹೆಂಡತಿಯನ್ನು “ಚುಟ್ಕಿ ಕಿ ಮಾ.. ಇಧರ್ ಆವೋ” ಎಂದರೆ ಹೆಂಡತಿ ತನ್ನ ಗಂಡನನ್ನು “ಪ್ರಕಾಶ್ ಕಿ ಬಾಪೂ.. ಜರಾ ಸುನಿಯೇ ತೋ” ಎನ್ನುತ್ತಾಳೆ.. ಇದು ಕೂಡ ಒಂಥರಾ ಮಜಾ ಅಲ್ವಾ.
- ಸುಮ ಉಮೇಶ್
