ಬದುಕಿನಲ್ಲಿ ಎದುರಾಗುವ ನಾನಾ ಅರ್ಥದಿಂದ ಲೇಖಕರಿಗೆ ಉಂಟಾದ ಫಜೀತಿಗಳನ್ನು ಸಣ್ಣ ಹಾಸ್ಯಕತೆಯಾಗಿಸಿ ಓದುಗರ ಮುಂದಿಟ್ಟಿದ್ದಾರೆ ಡಾ.ಎಚ್.ಎಸ್ ಸತ್ಯನಾರಾಯಣ ಅವರು,ಒಂದು ಹಾಸ್ಯವನ್ನು ಬರವಣಿಗೆಯಲ್ಲಿ ತರುವುದು ಕಷ್ಟ ಆದರೆ ಲೇಖಕರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ, ಇದನ್ನು ಓದುವಾಗ ಓದುಗರು ಹೊಟ್ಟೆ ತುಂಬಾ ನಗುತ್ತಾರೆ ಅದಂತೂ ನಿಜ, ಮುಂದೆ ಓದಿ…
ನಾನಿಲ್ಲಿ ವ್ಯಾಕರಣದಲ್ಲಿ ಭೋಧಿಸುವ ನಾನಾರ್ಥದ ಪಾಠವನ್ನು ನಿಮಗೆ ಹೇಳುತ್ತಿಲ್ಲ. ಬದುಕಿನಲ್ಲಿ ಎದುರಾದ ನಾನಾ ಅರ್ಥದ ಒಂದೆರಡು ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಾಗಿದೆಯಷ್ಟೇ. ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಫಜೀತಿಗೊಳಗಾಗಿರುತ್ತೇವೆ. ಅದನ್ನು ಹೇಳಿಕೊಳ್ಳುವುದು ಕೆಲವರಿಗೆ ಖುಷಿಯ ವಿಚಾರವಾದರೆ, ಮತ್ತೆ ಕೆಲವರಿಗೆ ಅದು ಮುಜುಗರ ತರುವ ವಿಷಯ. ಖುಷಿಪಡುವವರು ತಾವು ಅನುಭವಿಸಿದ ಫಜೀತಿಯ ಕ್ಷಣಗಳನ್ನು ಇತರರೊಂದಿಗೆ ಹಂಚಿಕೊಂಡು ಅವರಲ್ಲೂ ಸಂತಸವನ್ನು ಉಕ್ಕಿಸುತ್ತಾರೆ. ಮುಜುಗರ ಪಡುವವರು ಮಾತ್ರ ಗುಟ್ಟಾಗಿಟ್ಟುಕೊಂಡು ಇತರರಿಗೆ ಗೊತ್ತಾದರೆ ಎಲ್ಲಿ ತಮ್ಮ ಮರ್ಯಾದೆ ಹೋಗುತ್ತದೊ ಎಂದು ಹೆದರುತ್ತಾರೆ. ಮರ್ಯಾದೆ ಕಾಪಾಡಿಕೊಳ್ಳುವುದರಲ್ಲಿ ನಾನು ಸ್ವಲ್ಪ ಸೋಮಾರಿಯಾದ್ದರಿಂದ ನಿರ್ಲಜ್ಜೆಯಿಂದಲೇ ಇಂತಹ ಪ್ರಸಂಗಗಳನ್ನು ಹೇಳಿಕೊಂಡು ಗೆಳೆಯರನ್ನು ನಗಿಸಿ, ಅವರೊಂದಿಗೆ ನಾನೂ ನಗುತ್ತಿರುತ್ತೇನೆ. ಇದು ನನ್ನ ಜಾಯಮಾನ.
ಉಪನ್ಯಾಸನ್ಯಾಸಕನಾಗುವ ಮೊದಲು ನಾನೊಂದು ಪ್ರಕಾಶನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಅದರ ಮಾಲೀಕರು ವಿಪರೀತ ಬಿಗಿ. ಸದಾ ಧುಮುಗುಟ್ಟುವ ಕೋಪ. ಸಮಯಪ್ರಜ್ಞೆ, ಶಿಸ್ತು, ಬದ್ಧತೆ ಎಲ್ಲವನ್ನೂ ನಿರೀಕ್ಷಿಸುವವರಾದ್ದರಿಂದ ತುಸು ಹೆಚ್ಚೇ ಬಿಗಿಯಾಗಿರುತ್ತಿದ್ದರು. ನಾನೂ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೆನಾಗಿ ಅವರಿಗೆ ನನ್ನನ್ನು ಕಂಡರೆ ತುಂಬ ಪ್ರೀತಿ. ಆಗಾಗ ನಾನು ಕೆಲಸ ಮಾಡುವಲ್ಲಿಗೆ ಬಂದು ವಿಚಾರಿಸಿಕೊಳ್ಳುವುದು, ಪ್ರೂಫ್ ರೀಡಿಂಗ್ ಮಾಡಲು ಬಣ್ಣ ಬಣ್ಣದ ಪೆನ್ನುಗಳನ್ನು ತಂದುಕೊಡುವುದು ಮಾಡುತ್ತಿದ್ದರು. ಒಂದೊಂದು ಸಲದ ಪ್ರೂಫನ್ನು ಒಂದೊಂದು ಬಣ್ಣದಲ್ಲಿ ಗುರುತು ಮಾಡಿದರೆ ಮೊದಲ ಪ್ರೂಫ್ ಯಾವುದು, ಎರಡನೆಯದು ಯಾವುದು ಎಂಬುದನ್ನು ಪತ್ತೆ ಮಾಡಲು ಸುಲಭವೆಂದು ಬಣ್ಣ ಬಣ್ಣದ ಪೆನ್ನುಗಳ ಮೊರೆಹೋಗುತ್ತಿದ್ದೆವು. ಏನೇನೋ ತಂದುಕೊಡುತ್ತಿರುತ್ತಾರಲ್ಲ, ನಾನೂ ಏನಾದರೂ ಇವರಿಗೆ ಕೊಡಬೇಕೆಂಬ ಆಸೆ. ಆದರೆ ಭಯ. ಮಾಲೀಕರಿಗೆ ನಾವು ಪೆನ್ ಇತ್ಯಾದಿಗಳನ್ನು ಕೊಡ ಹೋದರೆ ಅಧಿಕ ಪ್ರಸಂಗವಾಗುವುದಿಲ್ಲವೇ? ಹೀಗೆಲ್ಲ ಯೋಚಿಸುವಷ್ಟರಲ್ಲಿ ಅವರು ಗಂಡುಮಗುವಿನ ತಂದೆಯಾದ ಸುದ್ದಿ ಬಂತು. ಸರಿ, ಅಭಿನಂದನೆ ತಿಳಿಸುವ ಒಂದು ಗ್ರೀಟಿಂಗ್ ಕಾರ್ಡಾದರೂ ತಂದು ಕೊಡೋಣವೆಂದು ಆರ್ಚಿಸ್ ಗ್ರೀಟಿಂಗ್ ಮಳಿಗೆಗೆ ಹೋದೆ. ಆಗೆಲ್ಲ ಎಷ್ಟು ಚೆಂದದ ಕಾರ್ಡುಗಳು ಬರುತ್ತಿದ್ದವು! ಅಂಗಡಿಯಲ್ಲಿ ನಾನಾ ಬಗೆಯ ಕಾರ್ಡುಗಳ ರಾಶಿಯೇ ಇತ್ತು. ಅದರಲ್ಲಿ ‘ಕಂಗ್ರಾಜುಲೇಷನ್ಸ್’ ಎಂದು ಇಂಗ್ಲೀಷಿನಲ್ಲಿ ಬರೆದಿದ್ದ ಸೊಗಸಾದ ವಿನ್ಯಾಸದ ಕಾರ್ಡೊಂದನ್ನು ಆಯ್ದು, ಅದಕ್ಕೊಂದು ಸುಂದರ ಹೊದಿಕೆಯ ಲಕೋಟೆಯನ್ನಾಯ್ದು ತೆಗೆದುಕೊಂಡು ಹೋಗಿ ಕೊಟ್ಟೆ. ಅವರು ನಸುನಗುತ್ತಾ ಪಡೆದುಕೊಂಡು, ಸೌಜನ್ಯದಿಂದ ಕೃತಜ್ಞತೆ ಹೇಳಿದರು.
ಅವರು ನನ್ನ ಕಾರ್ಡು ಪಡೆದುದಕ್ಕೆ ಬಹಳ ಖುಷಿಯಾಗಿತ್ತು. ಉಲ್ಲಾಸದಲ್ಲಿ ಬಂದು ನನ್ನ ಮೇಜಿನ ಮುಂದೆ ಕುಳಿತು ಪ್ರೂಫ್ ತಿದ್ದತೊಡಗಿದ್ದೆ. ಎರಡು ನಿಮಿಷದಲ್ಲಿ ಆ ಕಾರ್ಡನ್ನು ಕೈಯಲ್ಲಿ ಹಿಡಿದುಕೊಂಡು ಬಂದ ಅವರು ಕಾರ್ಡನ್ನು ನನ್ನ ಟೇಬಲ್ ಮೇಲೆ ಇಟ್ಟರು. ತಲೆಯೆತ್ತಿ ಅವರ ಮುಖ ನೋಡಿದಾಗ ಕೋಪವಿರಲಿಲ್ಲ, ಬದಲಿಗೆ ತುಂಟನಗುವಿತ್ತು. ನಾನು ಎದ್ದು ನಿಂತು ಭಯದಲ್ಲಿ ‘ಏನಾಯ್ತು ಸರ್?’ ಎಂದೆ. ಅವರು ” ಕಾರ್ಡಿನ ಒಳಗೆ ಏನಿದೆ ಅಂತ ನೋಡಿ ತರಬೇಕಲ್ಲವಾ?” ಅಂದರು. ನನಗೆ ಅವರ ಮಾತಿನ ತಲೆಬುಡ ಅರ್ಥವಾಗಲಿಲ್ಲ. ಕೊನೆಗೆ ಅವರೇ ಕಾರ್ಡನ್ನು ತೆಗೆದು ಅದರ ಒಳ ಮಡಿಕೆಯಲ್ಲಿ ಅಚ್ಚಾಗಿದ್ದ ಸಾಲುಗಳನ್ನು ತೋರಿಸಿದರು. “ಇಟ್ ಈಸ್ ನಾಟ್ ಸೋ ಈಸಿ, ಬಟ್ ಯು ಡಿಡ್ ಇಟ್” ಎಂದು ಅಚ್ಚಾಗಿತ್ತು! ವಾಸ್ತವವಾಗಿ ಅದನ್ನು ಹೆಚ್ಚಿನ ಸಾಧನೆ ಮಾಡಿದವರಿಗೊ, ಕಷ್ಟದ ಪರೀಕ್ಷೆಯಲ್ಲಿ ಅಂದರೆ ಐಎಎಸ್, ಐಪಿಎಸ್ ಪರೀಕ್ಷೆಗಳಲ್ಲಿ ಪಾಸಾದವರಿಗೋ ಅಥವಾ ವಿದೇಶದಲ್ಲಿ ಓದಲು ಶಿಷ್ಯವೇತನ ಪಡೆದವರಿಗೋ ಕೊಡಬೇಕಾದ ಕಾರ್ಡನ್ನು ಮಗು ಹುಟ್ಟಿಸಿದ ಅಪ್ಪನಿಗೆ ಕೊಟ್ಟುಬಿಟ್ಟಿದ್ದೆ! ನನಗೆ ಇಂಗ್ಲಿಷ್ ಬರುವುದಿಲ್ಲವೆಂಬುದನ್ನು ಚೆನ್ನಾಗಿ ಬಲ್ಲವರಾದ್ದರಿಂದ ಮಾಲೀಕರು ಕೋಪ ಮಾಡಿಕೊಳ್ಳಲಿಲ್ಲ. ಇದು ನಡೆದು ಇಪ್ಪತ್ತೈದು ವರ್ಷಗಳಾದರೂ ಈ ಘಟನೆಯನ್ನು ನೆನಪಿಸಿಕೊಂಡು ಇಬ್ಬರೂ ನಗುತ್ತಲೇ ಇರುತ್ತೇವೆ! ಈಗ ಅವರ ಮಗನಿಗೇ ಅಪ್ಪನಾಗುವ ವಯಸ್ಸು.
***
ನನ್ನ ಶಿಷ್ಯನೊಬ್ಬ ಕನ್ನಡ ಉಪನ್ಯಾಸಕ. “ಏನ್ರೀ ವಯಸ್ಸಾಗ್ತಿದೆ, ಮದುವೆಯಾಗಿ ಸಂಸಾರ ಗಿಂಸಾರ ಮಾಡೋ ಮನಸ್ಸಿಲ್ಲವಾ?” ಅಂತ ಆಗಾಗ ಸಲುಗೆಯಿಂದ ವಿಚಾರಿಸುತ್ತಿದ್ದೆ. ಅವರೂ ಹುಡುಗಿ ಹುಡುಕಿ ಹುಡುಕಿ ಸುಸ್ತಾಗಿದ್ದರು. ಒಮ್ಮೆ ನಮ್ಮ ಮನೆಗೆ ಬಂದವರು “ಸಾರ್ ಒಂದು ಹುಡುಗಿ ಮನೆಯವರ ನಂಬರ್ ಇದೆ. ಹುಡುಗಿ ಬಗ್ಗೆ ಸ್ವಲ್ಪ ವಿಚಾರಿಸುವಿರಾ? ” ಎಂದು ವಿನಂತಿಸಿದರು. “ಅಯ್ಯೋ ಅದಕ್ಕೇನಂತೆ, ನಾನು ಕೇಳ್ತೀನಿ ಕೊಡಿ ಇಲ್ಲಿ” ಎಂದವನೆ ಅವರು ಕೊಟ್ಟ ನಂಬರಿಗೆ ಫೋನಾಯಿಸಿದೆ. ಕರೆಯನ್ನು ಸ್ವೀಕರಿಸಿದವರು ಹುಡುಗಿಯ ತಾಯಿ. ನಾನು ಕರೆ ಮಾಡಿದ ಉದ್ದೇಶವನ್ನು ವಿವರಿಸಿ, ನನ್ನ ಶಿಷ್ಯನ ಗುಣಗಾನ ಮಾಡಿದೆ. ಸಾವಿರ ಸುಳ್ಳು ಹೇಳಿಯಾದರೂ ಮದುವೆ ಮಾಡಬೇಕಂತಲ್ಲ! ಆ ಪುಣ್ಯ ಸ್ವಲ್ಪ ನನ್ನ ಖಾತೆಗೂ ಬರಲೆಂದು ಹುಡುಗಿಯ ತಾಯಿಯೊಂದಿಗೆ ಒಳ್ಳೆಯ ಮಾತುಗಳನ್ನಾಡಿದೆ.

ಮಾತಿನ ಮಧ್ಯೆ ಆಕೆ “ನಾವು ಸೋಮವಾರದೋರು ಶನಿವಾರ ಮಾಡೋರಿಗೆ ಹುಡುಗಿ ಕೊಡಲ್ಲ” ಎಂದರು. ನನಗೆ ಅವರ ಮಾತಿನ ತಳಬುಡ ತಿಳಿಯಲಿಲ್ಲ. “ನಾನು ಇದೇನಮ್ಮ ಶನಿವಾರ ಮಾಡೋರಿಗೆ ಹುಡುಗಿ ಕೊಡಲ್ಲ ಅಂತೀರಲ್ಲ. ಅವರು ಯಾವತ್ತು ಮಾಡಿದರೆ ನಿಮಗೇನು? ಮದುವೆ ಮಾಡ್ತಿರೋದೆ ಮಾಡಕ್ಕಲ್ಲವ?” ಎಂದುಬಿಟ್ಟೆ. ತಕ್ಷಣ ಆಕೆ “ಥೂ….ಇದೇನಪ್ಪ ಹಿಂಗ್ ಮಾತಾಡ್ತೀರ! ಸ್ವಲ್ಪನಾದ್ರೂ ನಾಚಿಕೆ ಬೇಡ್ವ? ಲೆಚ್ಚರ್ರು ಅಂತೀರಾ!” ಎಂದು ಉಗಿದು ಫೋನ್ ಕಟ್ ಮಾಡಿದರು. ನನ್ನ ಶಿಷ್ಯನಿಗೆ ಈ ಸಂಭಾಷಣೆಯ ವಿವರ ತಿಳಿಸಿದಾಗ ಆತ “ಗುರುಗಳೇ ನೀವ್ ನನ್ ಮದ್ವೆ ಮಾಡ್ಸಲ್ಲ ಬಿಡಿ” ಎಂದ. ನಂತರ ತಿಳಿದ ಮಾಹಿತಿಯೆಂದರೆ, ಅವರ ಜಾತಿಯಲ್ಲಿ ಕೆಲವರು ಸೋಮವಾರದಂದು ‘ವಾರ’ ಎಂದು ಆಚರಿಸ್ತಾರೆ, ಇನ್ನು ಕೆಲವರು ಶನಿವಾರವನ್ನು ಆಚರಿಸುತ್ತಾರೆ. ನಂಟಸ್ಥಿಕೆ ಮಾಡೋವಾಗ ಬೀಗರ ಕಡೆಯವರು ಯಾವ ದಿನ ವಾರ ಮಾಡ್ತಾರೆ ಎಂಬುದನ್ನೂ ಗಣಿಸುತ್ತಾರಂತೆ. ಈ ಯಾವ ವಿವರವೂ ಅರಿಯದ ನನಗೆ ಆ ಹುಡುಗಿಯ ತಾಯಿ ‘ಶನಿವಾರ ಮಾಡೋರಿಗೆ ಹುಡುಗಿ ಕೊಡಲ್ಲ’ ಅಂದಿದ್ದು ತೀರ ವಿಚಿತ್ರವಾಗಿ ಕಂಡಿತು. ಅಂತೂ ಈಗವನಿಗೆ ಮದುವೆಯಾಗಿದೆ, ಅದು ಯಾವ ಯಾವ ವಾರ ಮಾಡಿದನೋ ಗೊತ್ತಿಲ್ಲ! ಎರಡು ಮಕ್ಕಳೂ ಆಗಿವೆ. ನಾನು ಮಾತ್ರ ಈಗ ಮಧ್ಯಸ್ಥಿಕೆ ಮಾಡುವ ಕೆಲಸ ಬಿಟ್ಟುಬಿಟ್ಟಿದ್ದೇನೆ.
***
ವರ್ತೂರಿನ ಕಾಲೇಜಿನಲ್ಲಿರುವಾಗ ನಡೆದೊಂದು ಘಟನೆಯನ್ನು ಇಲ್ಲಿ ಹಂಚಿಕೊಳ್ಳಬಹುದು. ಮಧ್ಯಾಹ್ನ ಮೂರುಗಂಟೆಗೆ ನನ್ನ ತರಗತಿಯನ್ನು ಮುಗಿಸಿಕೊಂಡು ಉಪನ್ಯಾಸಕರ ಕೊಠಡಿಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದೆ. ಎಲ್ಲ ಉಪನ್ಯಾಸಕರೂ ತಮ್ಮ ತಮ್ಮ ತರಗತಿಗಳನ್ನು ಮುಗಿಸಿಕೊಂಡು ಬಂದು ಕುಳಿತಿದ್ದರು. ಅಷ್ಟರಲ್ಲಿ ಕೋಪದಿಂದ ಒಳನುಗ್ಗಿದ ಯುವಕನೊಬ್ಬ “ಇಲ್ಲಿ ಕನ್ನಡ ಸರ್ ಯಾರು?” ಅಂತ ಜೋರಾಗಿ ಕೇಳಿದ. ಎಲ್ಲರೂ ನನ್ನ ಕಡೆ ಕೈ ತೋರಲು ಆತ ನನ್ನ ಮೇಜಿನ ಬಳಿ ಬಂದು “ಏನ್ರೀ ಕ್ಲಾಸಲ್ಲಿ ಬರೀ ಡಬಲ್ ಮೀನಿಂಗೇ ಮಾತಾಡ್ತೀರಂತೆ! ಹೆಣ್ಣುಮಕ್ಕಳಿರೋ ತರಗತಿಯಲ್ಲಿ ಹಿಂಗೆಲ್ಲಾ ಮಾತಾಡಕ್ಕೆ ನಾಚ್ಕೆ ಆಗಲ್ವಾ?” ಎಂದು ಕಿರುಚಾಡಿಬಿಟ್ಟ. ನನಗೋ ಏನಾಯ್ತು ಅಂತಾದ್ದು ಅಂತ ಹೊಳೆಯಲೊಲ್ಲದು. ಉಪನ್ಯಾಸಕರಲ್ಲಿ ಕೆಲವರಿಗೆ ಈ ಅನರೀಕ್ಷಿತ ಗಲಭೆಯಿಂದ ಗಾಬರಿಯಾಯಿತು. ಮತ್ತೆ ಕೆಲವರಿಗೆ “ಆಗಬೇಕು ಸರಿಯಾಗಿ ಇವನಿಗೆ” ಎಂಬ ಧೋರಣೆ ಇದ್ದಹಾಗಿತ್ತು. ಎಲ್ಲರೂ ಈ ನಾಟಕ ನೋಡುತ್ತ ನಿಂತರು. ನಾನು ಸಮಾಧಾನದಿಂದಲೇ “ಏನಾಯ್ತು? ಯಾರು ನೀವು?” ಎಂದು ಕೇಳಿದೆ. ಆತ ಸ್ಟಾಫ್ ರೂಮಿನ ಹೊರಗೆ ನಿಂತಿದ್ದ ಒಬ್ಬ ಹುಡುಗಿಯನ್ನು ಒಳಗೆ ಕರೆದು, ಆಕೆಯನ್ನು ನನಗೆ ತೋರಿಸುತ್ತಾ “ನೋಡಿ ಇವಳು ನನ್ನ ತಂಗಿ, ಸೆಕೆಂಡ್ ಪಿಯುಸಿ ಓದ್ತಿದಾಳೆ. ಇವರ ಕ್ಲಾಸಲ್ಲಿ ಇವತ್ತು ನೀವು ಬರೀ ಡಬಲ್ ಮೀನಿಂಗ್ ಮಾತಾಡಿದ್ರಂತಲ್ಲ” ಎಂದ. ನಾನು ಆ ಹುಡುಗಿಯ ಮುಖ ನೋಡಿದೆ, ಪಿಳಿ ಪಿಳಿ ಅಂತ ಕಣ್ಣು ಮಿಟುಕಿಸಿಕೊಂಡು ಅಮಾಯಕಳಂತೆ ನಿಂತಿದ್ದಳು.

ಫೋಟೋ ಕೃಪೆ : getmyuni
ಏನಾಗಿತ್ತೆಂದರೆ, ಪರೀಕ್ಷೆ ಸಮೀಪವಿದ್ದುದರಿಂದ ನಾನು ಅವಳಿದ್ದ ತರಗತಿಗೆ ಆ ದಿನ ಕೊನೆಯ ಪಿರಿಯಡ್ ಕನ್ನಡ ವ್ಯಾಕರಣ ಪಾಠ ಮಾಡಿ ಬಂದಿದ್ದೆ. ಸಿಲಬಸ್ಸಿನಲ್ಲಿರುವ ‘ನಾನಾರ್ಥಗಳು’ ಆ ದಿನದ ಅಭ್ಯಾಸ. ಅದರ ಅರ್ಥ ವಿವರಿಸಿ, ಪಠ್ಯದಲ್ಲಿ ಬರುವ ನಾನಾರ್ಥದ ಪದಗಳನ್ನೆಲ್ಲಾ ಬರೆಸಿ, ಹಳೆಯ ಪ್ರಶ್ನೆ ಪತ್ರಿಕೆಗಳಲ್ಲಿರುವುದನ್ನೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ತರಗತಿ ಮುಗಿಸಿದ್ದೆ. ಪದವೊಂದಕ್ಕಿರುವ ಬೇರೆ ಬೇರೆ ಅರ್ಥಗಳನ್ನು ಕಲಿಯುವ ಮೂಲಕ ಪದಸಂಪತ್ತನ್ನು ವೃದ್ಧಿಸಿಕೊಳ್ಳುವ ಕುರಿತು, ಭಾಷೆಯ ಶಕ್ತಿಯನ್ನು ಅರಿಯುವ ಕುರಿತು ಮಾತಾಡಿ, ನಗಾಡಿ ತರಗತಿಯನ್ನು ಮುಗಿಸಿ ಬಂದು ಕೂತರೆ, ಇದ್ದಕ್ಕಿದ್ದಂತೆ ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾದರೆ ಹೇಗನ್ನಿಸಬಹುದು?.
ಆಗಿದಿಷ್ಟೇ. ನನ್ನ ವಿದ್ಯಾರ್ಥಿನಿ ಕ್ಲಾಸ್ ಮುಗಿಸಿಕೊಂಡು ಕಾಲೇಜಿನಿಂದ ಹೊರಬಿದ್ದೊಡನೆ ರಸ್ತೆಯಲ್ಲಿ ಅವರಣ್ಣ ಸಿಕ್ಕಿದ್ದಾನೆ. ಕ್ಲಾಸ್ ಮುಗೀತಾ, ಯಾವ ಕ್ಲಾಸಿತ್ತು? ಎಂದೆಲ್ಲಾ ಆತ ವಿಚಾರಿಸಿದಾಗ ಈ ಹುಡುಗಿ ”ಕನ್ನಡ ಕ್ಲಾಸಿತ್ತು, ನಮ್ ಸರ್ ಇವತ್ತೆಲ್ಲಾ ಫುಲ್ ಡಬಲ್ ಮೀನಿಂಗ್ ಹೇಳಿದ್ರು” ಎಂದಿದ್ದಾಳೆ. ತಂಗಿಗೆ ಪಾಠ ಹೇಳುವ ಮೇಷ್ಟ್ರು ಡಬಲ್ ಮೀನಿಂಗ್ ಮಾತಾಡಿದರೆ ಅಣ್ಣನಾದವನಿಗೆ ಹೇಗಾಗಿರಬೇಡ! ಸರಿಯಾಗಿ ದಬಾಯಿಸಿ, ಸಾಧ್ಯವಾದರೆ ನಾಲ್ಕು ಮೂತಿಗೆ ಇಕ್ಕುವ ರೋಷದಿಂದ ಆತ ನೇರವಾಗಿ ಸ್ಟಾಫ್ ರೂಮಿಗೆ ಬಂದಿದ್ದ. ನಾನು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದೆಂದು ನನ್ನ ಸಹೋದ್ಯೋಗಿಗಳು ನನ್ನತ್ತಲೇ ಕಣ್ಣುನೆಟ್ಟು ನಿಂತಿದ್ದರು. ನಾನು ನೇರವಾಗಿ ವಿದ್ಯಾರ್ಥಿಯನ್ನು “ಅಣ್ಣನಿಗೆ ಏನು ಹೇಳಿದ್ರಿ?” ಅಂತ ಕೇಳಿದೆ. “ಅದೇ ಸರ್ ನೀವು ಇವತ್ತು ಕ್ಲಾಸಲ್ಲಿ ಡಬಲ್ ಡಬಲ್ ಮೀನಿಂಗ್ ಇರುತ್ತೆ ಅಂತ ಹೇಳ್ಕೊಟ್ರಲ್ಲ, ಅದುನ್ನೆ ಹೇಳ್ದೆ” ಎಂದಳು. ಅವಳು ಬರೆದುಕೊಂಡಿದ್ದ ನೋಟ್ಸ್ ತೆಗೆದುಕೊಂಡು ಅವಳ ಅಣ್ಣನಿಗೆ ತೋರಿಸಿ, “ಅದುನ್ನ ನಾನಾರ್ಥ ಅಂತಾರೆ, ಅದುನ್ನ ನಿಮ್ಮ ಹುಡುಗಿ ಡಬಲ್ ಮೀನಿಂಗ್ ಅಂತಿದಾಳೆ. ಅದು ನೀವು ತಿಳ್ಕಂಡಿರೋ ಡಬಲ್ ಮೀನಿಂಗಲ್ಲ” ಅಂತ ವಿವರಿಸಿದ ಮೇಲಷ್ಟೇ ಆ ಮಹಾರಾಯನಿಗೆ ಅರ್ಥವಾಗಿದ್ದು. ಹುಡುಗಿ ಬಳಸಿದ ತಪ್ಪು ಪದ ಪ್ರಯೋಗದಿಂದ ನಾನು ಹೊಡೆತ ತಿನ್ನುವ ಪರಿಸ್ಥಿತಿಯೊದಗಿತ್ತು. ಈಗಲೂ ‘ನಾನಾರ್ಥ’ ಅಂದೊಡನೆ ಈ ಘಟನೆ ನೆನಪಿಗೆ ಬಾರದಿರುವುದಿಲ್ಲ.
***
ಕೆಲಸಕ್ಕೆ ಸೇರಿದ ಹೊಸತರಲ್ಲಿ ಪ್ರವೇಶಾತಿಗೆ ಸಂಬಂಧಿಸಿದ ಫಜೀತಿಯೊಂದು ನೆನಪಾಗುತ್ತಿದೆ. ಸೇರಿ ಎರಡೋ ಮೂರೋ ವರ್ಷಗಳಾಗಿದ್ದವು. ಪ್ರಥಮ ಪಿಯುಸಿ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡುವ ಕಮಿಟಿ ಬೇರೆ ಇತ್ತು. ದ್ವಿತೀಯ ವರ್ಷದವರನ್ನು ಆಯಾ ತರಗತಿಗಳ ಮೇಲುಸ್ತುವಾರಿ ನೋಡಿಕೊಳ್ಳುವ ಉಪನ್ಯಾಸಕರೇ ಬಿಡುವಿನಲ್ಲಿ ಮಾಡಿಕೊಳ್ಳಬೇಕಿತ್ತು. ದಿನಕ್ಕೆ ಐದು ಜನರೋ, ಹೆಚ್ಚೆಂದರೆ ಏಳು ಜನರೋ ದಾಖಲಾಗುತ್ತಿದ್ದರು. ಉಳಿದವರು ಮನೇಲಿ ಫೀಸು ಕೊಟ್ಟಿಲ್ಲವೆಂದೋ, ಆದಾಯ ಪ್ರಮಾಣಪತ್ರ ಸಿಕ್ಕಿಲ್ಲವೆಂದೋ, ಜಾತಿ ಪ್ರಮಾಣ ಪತ್ರ ಕೊಟ್ಟಿಲ್ಲವೆಂದೋ ತಮ್ಮ ತಮ್ಮ ಕಾರಣಗಳನ್ನು ಮುಂದುಮಾಡಿ ದಾಖಲಾಗುವುದನ್ನು ಮುಂದು ಮಾಡುತ್ತಿದ್ದರು. ಸ್ವಲ್ಪ ಜನ ಮಾತ್ರ ಸೇರಿರುತ್ತಿದ್ದುದರಿಂದ ನಮ್ಮ ಕಾಲೇಜಿನ ಗುಮಾಸ್ತರು “ಇನ್ನೂ ಟೈಮಿದೆಯಲ್ಲ ಒಟ್ಟಿಗೇ ಕೊಡಿ ಸಾರ್, ನಾಲ್ಕು ನಾಲ್ಕು ಜನರದ್ದನ್ನೇ ಬ್ಯಾಂಕಿಗೆ ಕಟ್ಟಕ್ಕೆ ಟೈಮಿಲ್ಲ” ಎಂದಿದ್ದರಿಂದ ಉಪನ್ಯಾಸಕರ ಬಳಿಯೇ ಫೀಸಿನ ಉಳಿಯುತ್ತಿತ್ತು. ಹಣ ಕೈಲಿದ್ದರೆ ಸ್ವಂತಕ್ಕೆ ಖರ್ಚಾಗಬಹುದೆಂಬ ಭಯ ನಮಗೆ, ಹಾಗಾಗಿ ಇಪ್ಪತ್ತಿಪ್ಪತ್ತು ಜನರ ಹಣವನ್ನು ಗುಮಾಸ್ತರಿಗೊಪ್ಪಿಸಿ ಕೈ ತೊಳೆದುಕೊಳ್ಳುತ್ತಿದ್ದೆವು.
ಅಷ್ಟರಲ್ಲಿ ಕಾಲೇಜಿನ ಪ್ರಿನ್ಸಿಪಾಲರಿಗೆ ವರ್ಗಾವಣೆಯಾಯ್ತು. ತುಂಬ ಜನಪ್ರೀತಿ ಮತ್ತು ಕರ್ತವ್ಯಪರತೆಗೆ ಹೆಸರಾಗಿದ್ದ ಅವರನ್ನು ಕೆಲವು ರಾಜಕಾರಣಿಗಳು ವೈಯಕ್ತಿಕ ದ್ವೇಷದ ಕಾರಣಕ್ಕೆ ವರ್ಗ ಮಾಡಿಸಿದ್ದರು. ಈ ವರ್ಗಾವಣೆಯ ಪ್ರಕರಣವು ಕಾಲೇಜಿನಲ್ಲಿ ದೊಡ್ಡ ಗಲಾಟೆಯನ್ನೇ ಸೃಷ್ಟಿಮಾಡಿತು. ಅವರನ್ನು ಈ ಕಾಲೇಜಿನಿಂದ ಕಳಿಸಕೂಡದೆಂದು ಹಳೆಯ ವಿದ್ಯಾರ್ಥಿಗಳು, ಹಾಲಿ ವಿದ್ಯಾರ್ಥಿಗಳು ಸೇರಿ ವಾರಗಟ್ಟಲೆ ಮುಷ್ಕರ ಮಾಡಿದರು. ಅವರ ಸ್ಟ್ರೈಕು ಅದೆಷ್ಟು ತೀವ್ರ ಸ್ವರೂಪದ್ದಾಗಿತ್ತೆಂದರೆ ಹೆಚ್ಚೂ ಕಡಿಮೆ ಹತ್ತು ದಿನಗಳ ಕಾಲ ನಮ್ಮನ್ನೆಲ್ಲಾ ಕಾಲೇಜಿನ ಕಾಂಪೋಂಡಿನೊಳಗೂ ಬಿಡಲಿಲ್ಲ. ಒಮ್ಮೆಯಂತೂ ಒಳಗಿದ್ದ ನಮ್ಮನ್ನು ಕೂಡಿ ಹಾಕಿಬಿಟ್ಟರು. ಈ ಗಲಾಟೆಯ ನಡುವೆ ಒಬ್ಬ ಹುಡುಗಿ ಮತ್ತು ಆಕೆಯ ತಂದೆ ರಸ್ತೆಯಲ್ಲಿ ಸಿಕ್ಕಿ ಅಡ್ಮೀಷನ್ ಆಗಬೇಕು ಸರ್, ಜಾತಿ ಪ್ರಮಾಣ ಪತ್ರ ಸಿಕ್ಕೋದು ತಡವಾಯ್ತು ಎಂದರು. ನಾನು “ಪರವಾಗಿಲ್ಲ ಕೊಡಿ, ಕಾಲೇಜಲ್ಲಿ ಗಲಾಟೆ ಇದೆ, ನಾನು ಸೇರುಸ್ಕೋತೀನಿ” ಅಂತ ನೂರಿಪ್ಪತ್ತು ರೂ. ಪಡೆದು, ದಾಖಲೆಗಳ ಪ್ರತಿ, ಫೋಟೋ ಪಡೆದು ಅವರನ್ನು ಕಳಿಸಿಕೊಟ್ಟೆ. ಮೂರ್ನಾಲ್ಕು ದಿನದ ಬಳಿಕ ಕೊನೆಯ ಕಂತಲ್ಲಿ ದಾಖಲಾದವರ ಫೀ ಕಟ್ಟಲು ಹೋದರೆ ನಮ್ಮ ಗುಮಾಸ್ತರು “ಲಾಸ್ಟ್ ಡೇಟ್ ಆಗೋಯ್ತು ಸರ್, ಈಗ ಫೀಸ್ ಕಟ್ಟಕ್ಕಾಗಲ್ಲ” ಅಂದರು. ಈಗಿನಂತೆ ದಂಡಶುಲ್ಕದೊಂದಿಗೆ ಕಟ್ಟಿ ಅಂತ ಕೊನೆಯ ದಿನಾಂಕವನ್ನು ಪದೇ ಪದೇ ಮುಂದೂಡುತ್ತಿರಲಿಲ್ಲ.

ಫೋಟೋ ಕೃಪೆ : google
ನೂರಿಪ್ಪತ್ತು ರೂಪಾಯಿ ಪೀಸಿಗೆ ಐನೂರೋ ಸಾವಿರವೋ ಕೈಯಿಂದ ದಂಡ ಕಟ್ಟಲೂ ನಾನು ತಯಾರಿದ್ದೆ. ಯಾಕೆಂದರೆ ರಸ್ತೆಯಲ್ಲಿ ಫೀ ಪಡೆದ ನಾನೇ ಆ ಹುಡುಗಿಯ ವಿದ್ಯಾಭ್ಯಾಸಕ್ಕೆ ನೈತಿಕ ಹೊಣೆಗಾರ. ಹೊಸದಾಗಿ ಕಾಲೇಜಿಗೆ ಬಂದಿದ್ದ ಪ್ರಿನ್ಸಿಪಾಲರೂ ಸಲಹೆಯ ನೆರವು ನೀಡುವಷ್ಟು ಚುರುಕಾಗಿರಲಿಲ್ಲ. ಸರಿ ಎಂದು ಬೆಂಗಳೂರಿಗೆ ಹೋಗಿ ಜಂಟಿ ನಿರ್ದೇಶಕರನ್ನು ಕಂಡು ಎಲ್ಲವನ್ನೂ ವಿವರಿಸಿ, ಆ ಹುಡುಗಿಯ ಪ್ರವೇಶಾತಿಗೆ ಅನುವು ಮಾಡಿಕೊಡಿರೆಂದು ವಿನಂತಿಸಿದೆ. ಅಲ್ಲಾಗಲೇ ಯಾವಯಾವುದೋ ಕಾರಣಕ್ಕೆ ಲೇಟ್ ಅಡ್ಮೀಷನ್ ಅನುಮತಿಗಾಗಿ ಏಳೆಂಟು ಜನ ನಿಂತಿದ್ದರು. ಜಂಟಿ ನಿರ್ದೇಶಕರು ಅದ್ಯಾವ ಕೆಟ್ಟ ಮೂಡಲ್ಲಿದ್ದರೊ ಎಲ್ಲರನ್ನೂ ಉಗಿದು ಉಪ್ಪಾಕಿ ಅಲ್ಲಿಂದ ಓಡಿಸಿಬಿಟ್ಟರು.
ಏನು ಮಾಡವುದೆಂದು ತೋಚದೆ ಒದ್ದಾಡುತ್ತಿರುವಾಗ ಮತ್ತೊಂದು ತರಗತಿಯ ಉಪನ್ಯಾಸಕರು ಒಂದು ಐಡಿಯಾ ಕೊಟ್ಟರು. ಅವರ ತರಗತಿಯ ಹುಡುಗಿಯೊಬ್ಬಳು ಫೀಸ್ ಕಟ್ಟಿದ್ದರೂ ಒಂದು ತಿಂಗಳಿಂದ ಕಾಲೇಜಿಗೆ ಬಂದಿರಲಿಲ್ಲ. ವಿಚಾರಿಸಲು, ಆಕೆ ಕಾಲೇಜು ಬಿಟ್ಟು ಕೆಲಸಕ್ಕೆ ಸೇರಿದ್ದಾಳೆಂದು ತಿಳಿಯಿತು. ಅವಳು ಕಾಲೇಜನ್ನು ಬಿಟ್ಟಿದ್ದರೆ ಅವಳ ಫೀಸಿನ ರಸೀದಿಯನ್ನು ಹಿಂದಕ್ಕೆ ಪಡೆದುತಂದು, ಅದರಲ್ಲಿ ಈ ಹುಡುಗಿಯ ಹೆಸರು ಬರೆದರಾಯ್ತು, ಹೇಗೂ ಸರ್ಕಾರಕ್ಕೆ ಫೀಸು ಸಂದಾಯವಾಗಿರುತ್ತದಾದ್ದರಿಂದ ಏನೂ ತೊಂದರೆಯಾಗುವುದಿಲ್ಲ ಎಂಬ ಐಡಿಯಾ ಅದು. ಆದರೆ ಕಾಲೇಜು ಬಿಟ್ಟಳೆಂದು ಹೇಳಲಾದ ಆ ಹುಡುಗಿ ಮರಳಿ ಬಂದರೇನು ಮಾಡುವುದು? ಎಂಬ ಪ್ರಶ್ನೆ ಎದುರಾಯ್ತು. ಮೇಡಂ ಒಬ್ಬರು ನನ್ನ ಗೋಳು ನೋಡಲಾರದೆ “ಬನ್ರಿ ಆ ಹುಡುಗಿ ಕಾಲೇಜಿಗೆ ಬರ್ತಾಳೋ ಇಲ್ಲವೋ ಖಾತರಿಪಡಿಸಿಕೊಂಡು ಬರೋಣ, ನಾನು ವಿಚಾರುಸ್ತೀನಿ” ಅಂತ ಆ ಹುಡುಗಿ ಕೆಲಸ ಮಾಡುತ್ತಿದ್ದ ಇಡ್ಟಿಗೆ ಫ್ಯಾಕ್ಟರಿ ಹತ್ತಿರ ಕರೆದೊಯ್ದರು.
ಅಲ್ಲಿ ತಾಯಿಯ ಜೊತೆ ಕೆಲಸ ಮಾಡುತ್ತಿದ್ದ ಹುಡುಗಿಯನ್ನ ಹೇಗೆ “ಕಾಲೇಜಿಗೆ ಬರಲ್ಲತಾನೇ, ರಸೀದಿ ಕೊಡು” ಎಂದು ಕೇಳುವುದು? ಮೇಡಂ ನಿಧಾನವಾಗಿ ವಿಚಾರಣೆ ಆರಂಭಿಸಿ, “ಯಾಕೆ ಕಾಲೇಜಿಗೆ ಬರಕ್ಕೆ ಇಷ್ಟವಿಲ್ಲವಾ?” ಎಂದರು. ಪಾಪ, ನಾವು ಬಂದಿರುವ ಸ್ವಾರ್ಥಸಾಧನೆಯ ಮರ್ಮವನ್ನರಿಯದ ಮುಗ್ಧ ಜನರವರು. ಕಾಲೇಜಿನ ಉಪನ್ಯಾಸಕರೆಲ್ಲ ಮಗಳನ್ನು ಹುಡುಕಿಕೊಂಡು ಬಂದು ಕಾಲೇಜಿಗೆ ಬರಲು ಕರೆಯುತ್ತಿದ್ದಾರೆಂದು ಭಾವಿಸಿದ ಆ ಹುಡುಗಿಯ ತಾಯಿ ನಮಗೆ ಕೈಮುಗಿದು “ತಪ್ಪಾಯ್ತು ಸ್ವಾಮಿ, ನಾಳೆಯಿಂದ ಕಳುಸ್ತೀನಿ” ಎಂದು ಹೇಳಿ, ಟೀ, ಬಿಸ್ಕತ್ತು ಎಲ್ಲ ತರಿಸಿಕೊಟ್ಟು ಕಳಿಸಿಕೊಟ್ಟಿದಲ್ಲದೆ, ಮರುದಿನದಿಂದ ಮಗಳನ್ನು ಕಳಿಸಿಕೊಟ್ಟರು ಕೂಡ. ಕಾಲೇಜಿಗೆ ಬರುವುದಿಲ್ಲ ಎಂಬ ತನ್ನ ಖಾತ್ರಿ ಪಡಿಸಿಕೊಳ್ಳಲು ಹೋದ ನಮ್ಮ ಭೇಟಿಯಿಂದ ಹುಡುಗಿಯೊಬ್ಬಳನ್ನ ಮರಳಿ ಕಾಲೇಜಿಗೆ ಕರೆತಂದ ಪುಣ್ಯ ಸಿಕ್ಕಿತು! ಈಗ ಆ ಹುಡುಗಿ ಟೀಚರ್ ಆಗಿದ್ದಾಳೆ.
ಪಾಪ ಈ ಹುಡುಗಿ ಬಂದು ” ಸಾರ್ ನನ್ನ ರಸೀದಿಕೊಡಿ, ಬಸ್ ಪಾಸ್ ಮಾಡಿಸಬೇಕು. ದಿನಾ ದುಡ್ಡು ಕೊಡಕ್ಕಾಗಲ್ಲ ಅಂತ” ಕೇಳುತ್ತಿದ್ದಳು. ಏನು ಮಾಡುವುದೀಗ ಎಂದು ಪರದಾಡುತ್ತಿರುವಾಗ ಇಷ್ಟೆಲ್ಲಾ ಒದ್ದಾಡಿಸಿದ ಕಾಲೇಜಿನ ಗುಮಾಸ್ತ ಮರುದಿನ ನನ್ನನ್ನು ಟೀ ಕುಡಿಯಲು ಬನ್ನಿ ಅಂತ ಕರೆದ. ಹೋದಾಗ “ಆ ಹುಡುಗಿಯ ಫೀಸು ಮತ್ತು ಒಂದೈನೂರು ರೂಪಾಯಿ ಕೊಡಿ ಇಲ್ಲಿ, ನಾನು ಸರಿಮಾಡ್ತೀನಿ” ಅಂದ. “ಅಲ್ಲಾ ಇದುನ್ನ ನಾನು ಪಿಯು ಬೋರ್ಡಿಗೆ ಅಲೆಯೋ ಮೊದಲೇ ಕೇಳದಲ್ಲವಾ?” ಅಂತ ಅವನು ಕೇಳಿದ್ದನ್ನೂ ಹುಡುಗಿಯ ದಾಖಲಾತಿಗಳನ್ನೂ ಆತನ ಕೈಗಿತ್ತೆ. ಅರ್ಧ ಗಂಟೆಯೊಳಗೆ ಹುಡುಗಿಯ ಕೈಯಲ್ಲಿ ರಸೀದಿ ಇತ್ತು. “ಅದೇನು ಮ್ಯಾಜಿಕ್ ಮಾಡಿದ್ರಿ” ಅಂದರೆ ಹೇಳದ ಅವನು “ಒಂದು ಕಾಲೇಜಿನ ಕ್ಲರ್ಕ್ ಅಂದ್ರೆ ಏನ್ ತಿಳ್ಕಂಡಿದೀರಾ ಸರ್? ಸುಮ್ನೆ ಪಾಠ ಹೇಳ್ಕಂಡ್ ತಿರುಗ್ದಂಗಲ್ಲ” ಎಂದು ನಗಾಡಿದನೇ ಹೊರತು ತನ್ನ ಕಾರ್ಯವೈಖರಿಯ ಗುಟ್ಟನ್ನು ಬಿಟ್ಟುಕೊಡಲಿಲ್ಲ. “ಇನ್ನೂ ಪ್ರೊಬೇಷ್ನರೀನೆ ಡಿಕ್ಲೆರಾಗಿಲ್ಲ, ಜೋಪಾನ ಅಂತ ಉಪದೇಶವನ್ನೂ ಉಚಿತವಾಗಿ ನೀಡಿದ. ಸುಮ್ಮನೆ ನನ್ನನ್ನು ಅಲೆದಾಡಿಸಿದವನೂ ಅವನೇ, ಸಮಸ್ಯೆಯನ್ನು ಪರಿಹರಿಸಿದವನೂ ಅವನೇ. ಅಷ್ಟಿಲ್ಲದೆ ನಮ್ಮ ಕುಮಾರವ್ಯಾಸ ” ಗುಮಾಸ್ತ ಗುದ್ದಿದ ಗೂಟಾನ ಬ್ರಹ್ಮ ಬಂದ್ರೂ ಕೀಳಕ್ಕಾಗಲ್ಲ” ಎಂದಿದ್ದಾನೆಯೇ?
- ಡಾ. ಎಚ್. ಎಸ್ . ಸತ್ಯನಾರಾಯಣ (ಉಪನ್ಯಾಸಕರು, ಲೇಖಕರು, ಕತೆಗಾರರು)ಚಿಕ್ಕಮಂಗಳೂರು
