ಚಿಟ್ಟೆ ಹಾರಿದ ದಿಕ್ಕಿಗೆ ಗಾಳಿ ಗಂಧದ ಪರಿಮಳ ಮಣ್ಣು ಹರಡಿಹ ನೆಲದಿ ಸಗ್ಗ ತುಂಬುವ ಕನಸು… ಕವಿ ನಾಗರಾಜ ಬಿ.ನಾಯ್ಕ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕದವಿರದ
ಬಾಗಿಲನು ತೆರೆದಿಡು
ಓ ಮನವೇ
ಜಗದಗಲ
ಸುತ್ತಿ ಬರಲಿ
ಚೆಂದ ಮನಸು
ಒಂದು ಹೊನಲಿನ
ಬೆಳಗಿಗೆ
ಚಿಟ್ಟೆಯಾಗಲಿ
ಮನಸು ತುಂಬಲಿ
ಒಲವ ಹಣತೆ
ಬೆಳಕು ಹರಡಿ
ಬೆಳಗಲಿ ನಗುವ
ನಲಿವ ಮನವ
ಅರಳಿಸಿ
ಮಗುವ ಮಾತಿನ
ದನಿಯಲಿ
ಚಿಟ್ಟೆ ಹಾರಿದ ದಿಕ್ಕಿಗೆ
ಗಾಳಿ ಗಂಧದ ಪರಿಮಳ
ಮಣ್ಣು ಹರಡಿಹ
ನೆಲದಿ ಸಗ್ಗ
ತುಂಬುವ ಕನಸು
ಬದುಕು ಹಾಡಿನ
ಪಥದಿ ಸಾಗಿ
ಬಳ್ಳಿ ಚಿಗುರಲಿ ಮೇಲಕೆ
ನಗುವ ಹರಡಿ
ಮಾತು ತೇಲಲಿ
ಹಕ್ಕಿ ಹಾಡಿನ ಗಾನಕೆ
- ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ.
