ಬೆಳಗು ಮಹಾತ್ಮ ಗಾಂಧಿ ಬಾಳಿ ಬದುಕಿದ ಕುಟೀರದಲ್ಲಿ ನಾನು ಕುಳಿತಿದ್ದೆ.ಈ ಕುಟೀರ ಸಾಮಾನ್ಯ ಮನುಷ್ಯನ ಘನತೆಯನ್ನು ಲೋಕದೆದುರು ತೆರೆದಿಡುತ್ತದೆ ಮತ್ತು ಸರಳತೆ, ಸೇವೆ ಸತ್ಯಸಂಧತೆಗಳನ್ನು ಆಚರಿಸುತ್ತ ಹೇಗೆ ಸಂತಸವನು ಪಡೆಯಬಹುದು ಎಂಬುದರ ಸಂಕೇತವೂ ಆಗಿದೆ. – ಇವಾನ್ ಇಲ್ಯಿಚ್. ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕರಾದ ಕೇಶವ ಮಳಗಿ ಅವರು,ಮುಂದೆ ಓದಿ…
ಬಹುಮುಖಿ ಸಂವಾದಿ ಸಂಸ್ಕೃತಿ ಸಂಕಥನದ (Plural Cultural Discourse) ಕುರಿತು ಯೋಚಿಸುವವರಿಗೆಲ್ಲ ಇವಾನ್ ಇಲ್ಯಿಚ್ (Ivan Illich) ಮತ್ತು ಎರ್ನೆಸ್ಟ್ ಫ್ರೆಡೆರಿಶ್ ಶ್ಯೂಮೇಕರ್ (E. F. Schumacher) ಚಿರಪರಿಚಿತ ಹೆಸರುಗಳು. ಇಬ್ಬರೂ ಮೋಹನದಾಸ ಕರಮಚಂದ ಗಾಂಧಿಯ ವಿಚಾರಧಾರೆಯಿಂದ ಪ್ರಭಾವಿತರಾದವರು. ಮಾತ್ರವಲ್ಲ, ತಮ್ಮದೇ ಅರ್ಥದಲ್ಲಿ ಲೋಕದ ಬದಲಾವಣೆಗೆ ಕಾರಣಕರ್ತರು. ರೋಮನ್ ಕ್ಯಾಥೋಲಿಕ್ ಚರ್ಚಿನ ಪಾದ್ರಿಯಾಗಿದ್ದ ವಿಯೆನ್ನದ ಇವಾನ್ ಇಲ್ಯಿಚ್ (೧೯೨೬-೨೦೦೨) ತಮ್ಮ ಡಿಸ್ಕೂಲಿಂಗ್ ಸೊಸೈಟಿ (ಗ್ರಾಹಕ ಸಂಸ್ಕೃತಿಯನ್ನು ಪೋಷಿಸುವ ಪ್ರಸ್ತುತ ಶಾಲೆ ಮತ್ತು ಶಿಕ್ಷಣ ವ್ಯವಸ್ಥೆಯ ಕುರಿತಂತೆ ಇರುವ ರೂಢಿಗತ ನಂಬಿಕೆಯನ್ನು ಬುಡಮೇಲು ಮಾಡುವುದು) ಮತ್ತು ಮೆಡಿಕಲ್ ನೆಮಿಸಿಸ್: ಎಕ್ಸ್‌ಪ್ಲೋರೇಶನ್ ಆಫ್ ಹೆಲ್ತ್ (ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ವಾಣಿಜ್ಯ-ವ್ಯಾಪಾರಿಕರಣದ ಹುನ್ನಾರದ ತಂತ್ರಗಳ ಅನಾವರಣ) ಜಗತ್ತಿನ ನೋಟವನ್ನು ಬದಲಿಸಿದ ಕೃತಿಗಳು. ೧೯೭೮ ಜನೆವರಿಯಲ್ಲಿ ಸಮಾವೇಶವೊಂದನ್ನು ಉದ್ಘಾಟಿಸಲು ಇವಾನ್ ಇಲ್ಯಿಚ್ ಸೇವಾಗ್ರಾಮದ ‘ಬಾಪು ಕುಟಿ’ಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಮಾಡಿದ ಪುಟ್ಟ ಆಶಯ ಭಾಷಣವನ್ನು ಹತ್ತಾರು ಸಲ ಓದಿ ಅದರ ಕಡು ಚೆಲುವಿಗೆ ನಾನು ಶರಣಾಗಿದ್ದೇನೆ. ಈ ಪುಟ್ಟ ಭಾಷಣ ಅತ್ಯಂತ ಸರಳವಾಗಿ ಬದುಕಿನ ಅರ್ಥವನ್ನು ತೆರೆದಿಡುವ ಬಗೆ ವಿಸ್ಮಯಕಾರಿ. ಅಂದಹಾಗೆ, ಶೂಮೇಕರ್ ಅವರ ‘ಸ್ಮಾಲ್ ಇಸ್ ಬ್ಯೂಟಿಫುಲ್’ ಪುಸ್ತಕ, ಫುಕುವೋಕರ ‘ಒಂದು ಹುಲ್ಲಿನ ಕ್ರಾಂತಿ’ಯಷ್ಟೇ ಜನೋಪಯೋಗಿ. ಬದಲಾವಣೆಯ ದಿಕ್ಸೂಚಿ.
ಇಂದು ನಮಗೆ ಬೇಕಾಗಿರುವುದು ‘ಭವವತ್ಪಾದ’ರು, ’ಮಿಸಾಯ’ರು, ಪ್ರವಾದಿಗಳು, ಜಗದ್ಗುರುಗಳು ಅಲ್ಲ. ಬದಲಿಗೆ, ಜನರೊಂದಿಗೆ ಕೆಲಸ ಮಾಡುತ್ತ, ವೈಫಲ್ಯಗಳನ್ನು ಅನುಭವಿಸಿ ಹತಾಶರಾದರೂ ಧೃತಿಗೆಡದೆ ಮತ್ತೆ ಮತ್ತೆ ಹೊಸ ದಾರಿಗಳನ್ನು ಹುಡುಕುವ ಮೃಣ್ಮಯ ಜೀವಂತ ವ್ಯಕ್ತಿಗಳು. ಇವಾನ್ ಇಲ್ಯಿಚ್ ಅಂಥ ಮಣ್ಣಿನಗೊಂಬೆ.
ಬಾಪು ಕುಟೀರ ನೀಡುವ ಸಂದೇಶ
(ದೈವಿಕ ನೆಮ್ಮದಿ ನೀಡುವ ಸಂಗತಿ ಯಾವುದು?)
– ಇವಾನ್ ಇಲ್ಯಿಚ್

ಫೋಟೋ ಕೃಪೆ : ilgiornale
ಗೆಳೆಯರೆ,
ಇಂದು ಬೆಳಗು ಮಹಾತ್ಮ ಗಾಂಧಿ ಬಾಳಿ ಬದುಕಿದ ಕುಟೀರದಲ್ಲಿ ನಾನು ಕುಳಿತಿದ್ದೆ. ಅಲ್ಲಿನ ಚೈತನ್ಯವನ್ನು ಆವಾಹಿಸಿಕೊಳ್ಳುತ್ತ ಅದು ನೀಡುವ ಸಂದೇಶವನ್ನು ನನ್ನೊಳಗೆ ತುಂಬಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಕುಟೀರದ ಎರಡು ಅಂಶಗಳು ನನ್ನನ್ನು ಬಹುವಾಗಿ ಸೆಳೆದವು: ಅದರ ದೈವಿಕತೆ ಮತ್ತು ಅಲ್ಲಿನ ಸೌಲಭ್ಯಗಳು. ಈ ಕುಟೀರ ಕಟ್ಟುವಾಗ ಗಾಂಧಿಯ ನೋಟವೇನಾಗಿರಬಹುದು ಎಂದು ಯೋಚಿಸಿದೆ. ಅದರ ಸರಳತೆ, ಚೆಲುವು ಮತ್ತು ಮಟ್ಟಸತನಕ್ಕೆ ನಾನು ಮರುಳಾದೆ. ಎಲ್ಲರಿಗೂ ಪ್ರೀತಿ ಮತ್ತು ಸಮಾನತೆಯನ್ನು ಹಂಚುವುದು ಕುಟೀರದ ಧ್ಯೇಯವಾಗಿತ್ತು. ಮೆಕ್ಸಿಕೊದಲ್ಲಿ ನನಗೆ ನೀಡಿರುವ ಕುಟೀರವೂ ಹೀಗೆಯೇ ಇದ್ದು ಅಲ್ಲಿ ಅಡಗಿರುವ ಚೈತನ್ಯವನ್ನು ನಾನು ಅರಿತಿರುವೆ.
ಬಾಪು ಕುಟೀರದಲ್ಲಿ ಏಳು ಬಗೆಯ ‘ತಾವು’ಗಳಿರುವುದನ್ನು ಕಂಡುಕೊಂಡಿರುವೆ. ಒಳಗೆ ಅಡಿಯಿಟ್ಟೊಡನೆ ನಿಮ್ಮ ಚಪ್ಪಲಿಗಳನು ಬಿಟ್ಟು ದೈಹಿಕವಾಗಿ, ಮಾನಸಿಕವಾಗಿ ಒಳ ಹೋಗಲು ಸಿದ್ಧರಾಗುವ ಪ್ರವೇಶಿಕೆ. ಮಧ್ಯದ ಕೋಣೆ ಒಂದು ದೊಡ್ಡ ಕುಟುಂಬ ಉಳಿದುಕೊಳ್ಳಬಲ್ಲಷ್ಟು ವಿಶಾಲವಾಗಿದೆ. ಇಂದು ಬೆಳಗಿನ ಜಾವ ನಾಲ್ಕುಗಂಟೆಗೆ ಪ್ರಾರ್ಥನೆಗಾಗಿ ಅಲ್ಲಿದ್ದೆ. ನನ್ನೊಡನಿದ್ದ ನಾಲ್ವರು ಗೋಡೆಗೆ ಆತುಕೊಂಡು ಕುಳಿತಿದ್ದರು. ಅನೇಕರು ಒಟ್ಟಿಗೆ ಕೂರುವಷ್ಟು ಜಾಗ ಅಲ್ಲಿತ್ತು. ಯಾರು ಬೇಕಾದರೂ ಬಂದು ಸೇರಿಕೊಳ್ಳುವ ಹಾಗೆ ಆ ಕೋಣೆಯ ವಿನ್ಯಾಸ. ಇನ್ನೊಂದು ಸ್ಥಳ: ಗಾಂಧಿಜಿ ಕುಳಿತು ಕೆಲಸ ಮಾಡುತ್ತಿದ್ದಂಥದು. ಅಲ್ಲಿ ಇನ್ನೂ ಎರಡು ಕೊಠಡಿಗಳಿವೆ. ಒಂದು ಅತಿಥಿಗಳಿಗೆ, ಇನ್ನೊಂದು ಕಾಯಿಲೆ ಪೀಡಿತರಿಗೆ. ಕುಟೀರದಲೊಂದು ತೆರೆದ ಕೈಸಾಲೆ ಮತ್ತು ವಿಶಾಲವಾದ ಬಚ್ಚಲುಮನೆಯೂ ಇದೆ. ಈ ಎಲ್ಲವೂ ಒಟ್ಟಂದದಲಿ ಸಾವಯವ ಸಂಬಂಧವನ್ನು ಹೊಂದಿವೆ.
ಸಿರಿವಂತರೇನಾದರೂ ಈ ಕುಟೀರಕ್ಕೆ ಬಂದರೆ ಗೇಲಿಯನ್ನೇ ಮಾಡಿಯಾರು. ಆದರೆ, ಒಬ್ಬ ಸರಳ ಭಾರತೀಯನ ದೃಷ್ಟಿಯಿಂದ ನೋಡಿದಾಗ ಬದುಕಲು ಇದಕ್ಕಿಂತ ದೊಡ್ಡ ಸ್ಥಳದ ಅಗತ್ಯವಾದರೂ ಎಲ್ಲಿದೆ? ಅನ್ನಿಸುವುದು. ಈ ಮನೆಯನ್ನು ಮರ ಮತ್ತು ಮಣ್ಣಿನಿಂದ ಕಟ್ಟೋಣವಾಗಿದೆ. ಇದನ್ನು ನಿರ್ಮಿಸಿರುವುದು ಮನುಷ್ಯರು, ಯಂತ್ರಗಳಲ್ಲ. ಇದನ್ನು ಕುಟೀರವೆನ್ನದೆ ’ಮನೆ’ ಎಂದೇ ಕರೆಯುವೆ. ಮನೆಗೂ ಭವ್ಯನಿವಾಸಕ್ಕೂ ವ್ಯತ್ಯಾಸವಿದೆ. ಭವ್ಯನಿವಾಸಗಳಲ್ಲಿ ಮನುಷ್ಯ ತನ್ನ ಗಂಟುಮೂಟೆಗಳನ್ನು, ಪೀಠೋಪಕರಣಗಳನ್ನು ಪೇರಿಸಿರುತ್ತಾನೆ. ಅನುಕೂಲತೆ, ಸುರಕ್ಷೆ ಒದಗಿಸುತ್ತವೆ ಎಂದು ಭಾವಿಸಲಾಗುವ ಇವುಗಳಿಗೆ ಮನುಷ್ಯನಿಗಿರುವುದಕ್ಕಿಂತಲೂ ಹೆಚ್ಚಿನ ಬೆಲೆ. ನಾವು ಬದುಕಿಡೀ ಪೇರಿಸುತ್ತ ಹೋಗುವ ವಸ್ತುವಾಹನಗಳು ನಮಗೆ ಒಳಗಿನ ಕಸುವನ್ನು ಹೆಚ್ಚಿಸಲಾರವು ಎಂದು ನಾವು ತಿಳಿಯಬೇಕು. ಇವೆಲ್ಲ ಹೆಳವನಿಗೆ ಊರುಗೋಲಿನಂತೆ. ಇಂಥವು ಹೆಚ್ಚಿದಂತೆಲ್ಲ ನಮ್ಮ ಅವಲಂಬನೆ ಹೆಚ್ಚಾಗಿ ಬಂದಿಗಳಾಗುತ್ತೇವೆ.

ಫೋಟೋ ಕೃಪೆ : consciousjourneys
ಗಾಂಧೀಜಿಯ ಕುಟೀರದಲ್ಲಿ ಇದಕ್ಕೆ ತದ್ವಿರುದ್ಧವಾದ, ಅತಿ ಕಡಿಮೆ ಅವಲಂಬನೆ ಸಾಧ್ಯವಾಗಿಸುವ ಪೀಠೋಪಕರಣಗಳನ್ನು ಕಂಡೆ. ಎಲ್ಲ ಸವಲತ್ತುಗಳನ್ನು ಹೊಂದಿದ ಮನೆಯೊಂದು ನಾವು ದುರ್ಬಲರಾಗಿದ್ದೇವೆ ಎಂಬುದನ್ನೇ ಎತ್ತಿ ತೋರಿಸುತ್ತಿರುತ್ತದೆ. ನಾವು ಬದುಕುವ ಸಾಮರ್ಥ್ಯವನ್ನು ಕಳೆದುಕೊಂಡಂತೆಲ್ಲ, ನಾವು ಮತ್ತಷ್ಟು ಮತ್ತಷ್ಟು ಪೇರಿಸಿಕೊಳ್ಳುವ ಪರಿಕರಗಳ ಆಸರೆ ಬಯಸುತ್ತೇವೆ. ಇದು ಜನ ತಮ್ಮ ಆರೋಗ್ಯಕ್ಕಾಗಿ ಆಸ್ಪತ್ರೆಗಳನ್ನು; ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ಅವಲಂಬಿಸಿದಂತೆ. ದುರದೃಷ್ಟವೆಂದರೆ, ಆಸ್ಪತ್ರೆಗಳು ಮತ್ತು ಶಾಲೆಗಳು ದೇಶದ ಆರೋಗ್ಯ ಹಾಗೂ ಬುದ್ಧಿವಂತಿಕೆಗಳ ಸೂಚಕಗಳಲ್ಲ. ಆಸ್ಪತ್ರೆಗಳು ಹೆಚ್ಚಾದಷ್ಟು ಅವು ಜನರ ಅನಾರೋಗ್ಯವನ್ನು, ಶಾಲೆಗಳು ಹೆಚ್ಚಾದಷ್ಟೂ ಅವು ನಮ್ಮ ಮೂಢತೆಯನ್ನು ಸಂಕೇತಿಸುತ್ತವೆ, ಅಷ್ಟೇ. ಇದೇ ರೀತಿ, ಸವಲತ್ತು ಹೆಚ್ಚಾದಷ್ಟೂ ನಮ್ಮ ಬದುಕಿನ ಕ್ರಿಯಾಶೀಲತೆ ಮುರುಟುತ್ತದೆ. ವಿರೋಧಾಭಾಸವೆಂದರೆ ಅಧಿಕ ಸೌಲಭ್ಯ ಪಡೆದವರನ್ನು ವಿಶೇಷ ಜೀವಿಗಳು ಎಂಬಂತೆ ಕಾಣಲಾಗುತ್ತದೆ.
ಗಾಂಧಿ ಕುಟೀರದಲ್ಲಿ ಕುಳಿತು ಈ ವಿಕೃತಿಯ ಕುರಿತು ಯೋಚಿಸುತ್ತ ನನ್ನಲ್ಲಿ ದುಃಖ ತುಂಬಿ ಬಂತು. ರಸ್ತೆಗಳನ್ನು ನಿರ್ಮಿಸುವುದೇ ಅಭಿವೃದ್ಧಿ ಎಂದು ತಿಳಿದಿರುವುದು ಸಂಪೂರ್ಣ ತಪ್ಪು ಎಂಬ ನಿಲುವಿಗೆ ನಾನು ಬಂದಿರುವೆ. ನಮ್ಮ ಆರ್ಥಿಕ ಪುರೋಭಿವೃದ್ಧಿಗೆ ಅಸಂಖ್ಯಾತ ಬೃಹತ್‌ಯಂತ್ರಗಳು, ಲಕ್ಷಗಟ್ಟಲೆ ಇಂಜಿನಿಯರುಗಳು, ವೈದ್ಯರು ಮತ್ತು ವಿದ್ವಾಂಸರು ಅಗತ್ಯವಿಲ್ಲವೆಂದು ಈಗಾಗಲೇ ನಿರೂಪಿತವಾಗಿವೆ. ಗಾಂಧಿ ಬದುಕಿದ್ದ ಈ ಕುಟೀರಕ್ಕಿಂತ ದೊಡ್ಡ ಸ್ಥಳವನ್ನು ಬಯಸುವವರು ತಮ್ಮ ವಿಚಾರಗಳಲ್ಲಿ, ಜೀವನಶೈಲಿ ಮತ್ತು ದೇಹಗಳಲ್ಲಿ ಊನವಾದವರು ಆಗಿರುತ್ತಾರೆ ಎಂದು ನನಗೆ ಮನವರಿಕೆಯಾಗಿದೆ. ಅಂಥವರ ಕುರಿತು ನನಗೆ ಮರುಕವಿದೆ. ಅವರೆಲ್ಲ ನಿರ್ಜೀವ ನಿರ್ಮಿತ ವಸ್ತುಗಳಿಗೆ ತಮ್ಮ ಜೀವವನು ಒಪ್ಪಿಸಿದವರು. ಈ ಪ್ರಕ್ರಿಯೆಯಲ್ಲಿ ತಮ್ಮ ದೇಹದ ಚಲನವಲನ,
ಬದುಕಿನಲ್ಲಿನ ಕಸುವು ಕಳೆದುಕೊಂಡವರು. ಅಂಥವರಿಗೆ ನಿಸರ್ಗದೊಂದಿಗೆ, ತಮ್ಮ ಸುತ್ತಮುತ್ತ ಬದುಕುವ ಜೀವಿಗಳೊಂದಿಗೆ ಸಂಬಂಧ ತಪ್ಪಿ ಹೋಗಿರುತ್ತದೆ.

ಸಾಬರ್ಮತಿ ಆಶ್ರಮ ಫೋಟೋ ಕೃಪೆ : clatgyan
ಗಾಂಧೀಜಿಯ ಈ ಸರಳ ದಾರಿಯನ್ನು ನೀವೇಕೆ ಅರಿತುಕೊಳ್ಳುತ್ತಿಲ್ಲ? ಎಂದು ಯೋಜನೆಗಳನ್ನು ಸಿದ್ಧಪಡಿಸುವವರಲ್ಲಿ ಇಂದು ವಿಚಾರಿಸಿದಾಗ, ಅದು ಬಹಳ ದುಸ್ತರ, ಜನ ಅದನ್ನು ಅನುಸರಿಸೋದು ಕಷ್ಟ ಎಂದು ಉತ್ತರ ನೀಡಿದರು. ವಾಸ್ತವವೆಂದರೆ ಗಾಂಧಿ ವಿಚಾರಧಾರೆಗಳು ಕೇಂದ್ರೀಕೃತ ವ್ಯವಸ್ಥೆಯನ್ನು, ಮಧ್ಯವರ್ತಿಗಳನ್ನು ಸಹಿಸುವುದಿಲ್ಲವಾದ್ದರಿಂದ ರಾಜಕಾರಣಿಗಳಿಗೆ ಅದು ಅಪಥ್ಯವಷ್ಟೇ. ಗಾಂಧಿ ವಿಚಾರಗಳು ಏಕಾಗಿ ಅರ್ಥವಾಗುತ್ತಿಲ್ಲ? ಅಸತ್ಯ ಮತ್ತು ಹಿಂಸೆಗಳು ತಮ್ಮನ್ನು ಗುರಿಗೆ ತಲುಪಿಸಲಿವೆ ಎಂದು ಜನ ತಿಳಿದಿದ್ದಾರೆಯೇ? ಹಾಗೇನಿಲ್ಲ. ಏಕೆಂದರೆ, ಸರಿಯಾದ ದಾರಿಯಷ್ಟೇ, ಸರಿಯಾದ ಗುರಿಯನ್ನು ತಲುಪಿಸುವುದು ಎಂದು ಜನಸಾಮಾನ್ಯರು ಚೆನ್ನಾಗಿಯೇ ತಿಳಿದಿದ್ದಾರೆ. ವೈಯಕ್ತಿಕ ಹಿತಾಸಕ್ತಿಯಲ್ಲಿ ಮುಳುಗಿರುವವರು ಅರಿಯಲು ಬಯಸುತ್ತಿಲ್ಲವಷ್ಟೇ. ಸಾಮಾನ್ಯರಿಗೆ ಕೈಗೆಟುಕದ ಎಲ್ಲ ಬಗೆಯ ಸವಲತ್ತುಗಳನು ಹೊಂದಿದವರನ್ನು ನಾನು ಸಿರಿವಂತರೆಂದು ಕರೆಯುತ್ತಿರುವೆ. ಇವರೆಲ್ಲ ಬದುಕುವುದು, ಉಣ್ಣುವುದು, ಹೇಗೋ ಕಾಲ ತಳ್ಳುವುದು ಎಂಬಂತಿದ್ದು, ಇವರ ಸ್ವಾಹಾಕಾರದ ಪ್ರಮಾಣವು ದಿಟವನು ಅರಿಯುವ ಶಕ್ತಿಯನು ಮಾಯವಾಗಿಸಿದೆ. ಇಂಥವರಿಗೆ ಗಾಂಧಿಯನ್ನು ಅರಗಿಸಿಕೊಳ್ಳಲು ಕಷ್ಟ. ಇವರ ಬದುಕು ಈ ಜಟಿಲ ಗೋಜಲಿನ ಬಲೆಯಿಂದ ಹೊರಬರಲಾರದು. ಸುದೈವದಿಂದ ಬಹುಪಾಲು ಜನರಲ್ಲಿ ಸರಳತೆಯ ಸತ್ಯವನು ಅರಿತುಕೊಳ್ಳದಷ್ಟು ಸಿರಿತನವಾಗಲಿ; ಅರ್ಥವೇ ಮಾಡಿಕೊಳ್ಳದಷ್ಟು ದರಿದ್ರತನವಾಗಲಿ ಇನ್ನೂ ಬಂದಿಲ್ಲ.
ಸ್ವಯಂ-ಸಂತೃಪ್ತ ಸಮಾಜಗಳಲ್ಲಿ ಮಾತ್ರ ಮನುಷ್ಯನ ಘನತೆ ಅಡಗಿದೆ ಮತ್ತು ಬೃಹತ್‌ಉದ್ಯಮಗಳಿಂದ ಅದು ತನ್ನ ಇರುವಿಕೆಯನ್ನು ಕಳೆದುಕೊಳ್ಳುತ್ತದೆ ಎನ್ನುವುದು ನಮಗೆ ಸ್ಪಷ್ಟವಾಗಿ ತಿಳಿದಿರಬೇಕು. ಸಮಾಜಕ್ಕೆ ಸಮಸಮವಾಗಿ ಇರುವುದರೊಂದಿಗೆ ನೆಮ್ಮದಿಯನು ಪಡೆಯಬಹುದು ಎಂಬುದನ್ನು ಈ ಕುಟೀರವು ಅರಹುತ್ತದೆ. ಸ್ವಾವಲಂಬನೆ ಇಲ್ಲಿನ ಮಂತ್ರ. ಅನಗತ್ಯ ವಸ್ತು-ಪರಿಕರಗಳ ಶೇಖರಣೆಯಿಂದ ಮನುಷ್ಯ ಸುತ್ತಮುತ್ತಲಿನಿಂದ ಪಡೆವ ಸಹಜ ಸುಖದಿಂದ ವಂಚಿತನಾಗುತ್ತಾನೆಂದು ನಾವು ಅರಿತುಕೊಳ್ಳಲೇಬೇಕು. ಈ ಕಾರಣವಾಗಿಯೇ, ನಮ್ಮ ಉತ್ಪಾದನೆಯು ನಮ್ಮ ಅಗತ್ಯಗಳ ಮಿತಿಯೊಳಗಿರಬೇಕೆಂದು ಗಾಂಧಿ ಹೇಳಿದ್ದು. ಆದರೆ, ಇಂದಿನ ಉತ್ಪಾದನೆಯ ಸ್ಥಿತಿ ಅದಕ್ಕೆ ವ್ಯತಿರಿಕ್ತ. ಯಂತ್ರಗಳು ನಮ್ಮನ್ನು ಆತ್ಮಹತ್ಯೆಯ ಕಡೆಗೆ ಮಾತ್ರ ನಡೆಸಬಲ್ಲವು.
ಜನ ತಮಗೆ ತಕ್ಷಣಕ್ಕೆ ಅಗತ್ಯವಿರುವಷ್ಟನ್ನು ಮಾತ್ರ ಪಡೆದುಕೊಳ್ಳಬೇಕು. ಅದು ವ್ಯಕ್ತಿ ಮತ್ತು ಸಮಾಜಕ್ಕೆ ಒಳಿತು ಮಾಡಬಲ್ಲುದು. ಇಂದಿನ ಲೋಕದ ಮೌಲ್ಯವನು ಬದಲಾಯಿಸುವ ಈ ವಿಚಾರಗಳನ್ನು ಆಚರಣೆಗೆ ತರುವ ವಿಧಾನಗಳನ್ನು ನಾವು ಕಂಡು ಹಿಡಿಯಬೇಕು. ಈ ಬದಲಾವಣೆ ಸರ್ಕಾರದ ಒತ್ತಡದಿಂದಾಗಲಿ, ಕೇಂದ್ರೀಕೃತ ಸಾಂಸ್ಥಿಕ ಪ್ರಯತ್ನಗಳಿಂದ ಸಾಧ್ಯವಿಲ್ಲ. ಜನ ಒಪ್ಪಿಕೊಳ್ಳುವಂತಹ ಸಾರ್ವಜನಿಕ ಅಭಿಪ್ರಾಯ ರೂಪಿಸುವ ವಾತಾವರಣ ನಿರ್ಮಿಸಬೇಕು. ಇಂದು ಕಾರು ಹೊಂದಿರುವ ವ್ಯಕ್ತಿ, ಸೈಕಲ್ ತುಳಿಯುವವನನ್ನು ಕಂಡು ತಾನು ಮೇಲು ಎಂದುಕೊಳ್ಳುತ್ತಾನೆ. ನಿಜವೆಂದರೆ, ಬೈಸಿಕಲ್ ಸಾಮಾನ್ಯರ ವಾಹನವಾಗಿದೆ. ಸೈಕಲ್‌ಗೆ ಮೊದಲ ಆದ್ಯತೆ ಕೊಟ್ಟು ರಸ್ತೆ, ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು. ಕಾರು ಎರಡನೆಯ ಸ್ಥಾನದಲ್ಲಿರಬೇಕು. ಆದರೆ, ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಉಳ್ಳವರ ಮುಂದೆ ಸಾಮಾನ್ಯರ ಆದ್ಯತೆಗಳನ್ನು ಮೂಲೆಗುಂಪಾಗಿಸಲಾಗಿದೆ.
ಗಾಂಧೀಜಿಯ ಈ ಕುಟೀರವು ಸಾಮಾನ್ಯ ಮನುಷ್ಯನ ಘನತೆಯನು ಲೋಕದೆದುರು ತೆರೆದಿಡುತ್ತದೆ. ಮಾತ್ರವಲ್ಲ, ಸರಳತೆ, ಸೇವೆ ಮತ್ತು ಸತ್ಯಸಂಧತೆಗಳನ್ನು ಆಚರಿಸುತ್ತ ಹೇಗೆ ಸಂತಸವನು ಪಡೆಯಬಹುದು ಎಂಬುದರ ಸಂಕೇತವೂ ಆಗಿದೆ. ಮೂರನೆಯ ಜಗತ್ತಿನ ಬಡವರಿಗೆ ಅಗತ್ಯ ತಂತ್ರಜ್ಞಾನದ ಸಮಾವೇಶವನು ನಡೆಸಲಿರುವ ನೀವು ಈ ಸಂದೇಶವನ್ನು ನಿಮ್ಮ ಕಣ್ಣೆದುರು ಇರಿಸಿಕೊಳ್ಳಲು ಪ್ರಯತ್ನಿಸಿ.
- ಕನ್ನಡಕ್ಕೆ ಅನುವಾದ – ಕೇಶವ ಮಳಗಿ (ಖ್ಯಾತ ಅನುವಾದಕರು, ಚಿಂತಕರು, ಸಾಹಿತಿಗಳು )
